ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟಿಪ್ಪು ಜಯಂತಿಗೆ ಹಟ ಹಿಡಿವ ಐತಿಹಾಸಿಕ ತಪ್ಪು

Last Updated 7 ನವೆಂಬರ್ 2016, 19:30 IST
ಅಕ್ಷರ ಗಾತ್ರ

ಇತಿಹಾಸ ಎನ್ನುವುದು ಜಗದಗಲ ಹರಡಿಕೊಂಡಿರುವ ಒಂದು ದೊಡ್ಡ ಸ್ಮಶಾನ; ಅದರಲ್ಲಿ ಮಲಗಿರುವ ಯಾವ ಕಾಲದ ಯಾವ ರಾಜನ ಗೋರಿ ಅಗೆದರೂ ಅವರವರ ಭಾವಕ್ಕೆ ತಕ್ಕಂತೆ ಬೇಕಾದ್ದು, ಬೇಡವಾದ್ದು ಸಿಗುತ್ತದೆ. ಅಗೆದಷ್ಟೂ ಸಿಗುವ ಆ ಮೂಳೆ ಚಕ್ಕಳಗಳನ್ನು ಹಿಡಿದುಕೊಂಡು ಈ ಕಾಲದಲ್ಲಿ ಬೇಕಾದ ಆಟ ಆಡಬಹುದು. ಈ ಆಟದಲ್ಲಿ ಗೆಲ್ಲುವ ಸತ್ಯ ಯಾವುದೂ ಇಲ್ಲ, ಸೋಲುವುದು ಮಾತ್ರ ಜನಗಳ ಹಿತ.

ಕರ್ನಾಟಕದಲ್ಲಿ ಟಿಪ್ಪು ಜಯಂತಿ ಆಚರಣೆ ಕುರಿತ ಸರ್ಕಾರದ ಅವಾಂತರವನ್ನು ಗಮನಿಸಿದರೆ ಹೀಗಲ್ಲದೆ ಬೇರೆ ರೀತಿ ಅನ್ನಿಸಲು ಸಾಧ್ಯವಿಲ್ಲ. ಹಳೆಯ ಗೋರಿಗಳನ್ನು ಅಗೆದು ಚುನಾವಣಾ ರಾಜಕೀಯ ಲಾಭ ಪಡೆಯುವ ದುರ್ಬುದ್ಧಿಯ ಕೆಲಸವನ್ನು ಕಾಂಗ್ರೆಸ್, ಬಿಜೆಪಿ ಸೇರಿ ಎಲ್ಲ ರಾಜಕೀಯ ಪಕ್ಷಗಳೂ ಆಗಾಗ ಮಾಡುತ್ತಿರುತ್ತವೆ. ಆದರೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಈಗ ಮಾಡುತ್ತಿರುವುದನ್ನು ಮಾತ್ರ, ಸ್ವತಃ ಇತಿಹಾಸವೂ ಕ್ಷಮಿಸಲಾರದು!

‘ಮಾಡೋ ಕೆಲಸ ಬಿಟ್ಟು ಹಾಡು ಬಾರೋ ದಾಸಯ್ಯ’ ಎಂಬ ಗಾದೆ ನಮ್ಮ ಜನರ ಮಾತಿನಲ್ಲಿ ಇನ್ನೂ ಉಳಿದುಕೊಂಡಿರುವುದು ಸುಮ್ಮನೆ ಅಲ್ಲ. ಹಲವು ಚಿಂತಕರು ಈಗಾಗಲೇ ಗುರುತಿಸಿರುವಂತೆ -ರಾಜ್ಯದ ನಾಳೆಗಳಿಗಾಗಿ ಮಾಡಬೇಕಾದ ಹತ್ತಾರು ಕೆಲಸಗಳು ಬಾಕಿ ಇವೆ, ಇಂದಿನ ತುರ್ತಿಗೆ ಮಾಡಬೇಕಾದ ನೂರಾರು ಕೆಲಸಗಳು ಕಾದು ಕೂಗುತ್ತಿವೆ. ಅವುಗಳ ಬಗ್ಗೆ ಗಮನ ಹರಿಸದ ಸರ್ಕಾರ, ಕೆಲಸಕ್ಕೆ ಬಾರದ ಬೇರೇನನ್ನೋ ಹುಡುಕಿ ಮುಂದಿಡುತ್ತಿದೆ. ಅಥವಾ ಹಾಗನ್ನುವಂತಿಲ್ಲ! ಏಕೆಂದರೆ ಬಹಳ ದೂರವೇನಿಲ್ಲದ ಮುಂದಿನ ಚುನಾವಣೆಯಲ್ಲಿ ಇದೆಲ್ಲ ಕೆಲಸಕ್ಕೆ ಬರುತ್ತದೆ ಎಂದು ಸರ್ಕಾರ ಬಲವಾಗಿ ನಂಬಿರಬಹುದು. ಇದೊಂದು ಕಾರಣ ಬಿಟ್ಟರೆ, ಟಿಪ್ಪು ಮಹಾಶಯನನ್ನು ಕರ್ನಾಟಕದ ಕಾಂಗ್ರೆಸ್ ಸರ್ಕಾರ ಇದ್ದಕ್ಕಿದ್ದಂತೆ ನೆನಪಿಸಿಕೊಳ್ಳಲು ಬೇರೆ ಏನು ಕಾರಣ ಎನ್ನುವುದು ದೊಡ್ಡ ಇತಿಹಾಸಕಾರರಿಗೂ ಅರ್ಥವಾಗುತ್ತಿಲ್ಲ. ನಾಳೆಯ ಯಾವುದೋ ಲಾಭ ನಂಬಿ, ನಿನ್ನೆಯನ್ನು ಬೇಕಾಬಿಟ್ಟಿ ಅಗೆದರೆ, ಅದು ಇಂದೇ ತೋಡಿಟ್ಟುಕೊಳ್ಳುವ ಒಳ್ಳೆಯ ಗೋರಿ ಆಗುತ್ತದಷ್ಟೆ.

ಜನರ ಬದುಕಿನ ಗುಣಮಟ್ಟದ ಸುಧಾರಣೆಗಳ ಬಗ್ಗೆ ಏನೂ ತೋಚದಿದ್ದರೆ ಮಾತ್ರ, ಒಂದು ಸರ್ಕಾರ ಇಂಥ ಆಚರಣೆಗಳನ್ನು ಕೈಗೆತ್ತಿಕೊಳ್ಳಬಹುದು. ಏಕೆಂದರೆ ಟಿಪ್ಪುವಿನ ಹೆಸರೆತ್ತುವುದೂ ಒಂದೇ- ಜೇನುಗೂಡಿಗೆ ಕಲ್ಲೆಸೆಯುವುದೂ ಒಂದೇ. ಇತಿಹಾಸದ ಅತ್ಯಂತ ವಿವಾದಾತ್ಮಕ ರಾಜರಲ್ಲಿ ಅವನಿಗೇ ಮೊದಲ ಸಿಂಹಾಸನ. ನಮ್ಮ ದೇಶದ, ಅಷ್ಟೇಕೆ ಜಗತ್ತಿನ ಎಲ್ಲ ರಾಜರೂ ತಮ್ಮ ಅಸ್ತಿತ್ವಕ್ಕೆ ಮತ್ತು ವಿಸ್ತರಣೆಗೆ ಅಗತ್ಯವಾದ ಕೊಲೆಸುಲಿಗೆ ಮಾಡಿಯೇ ಇರುತ್ತಾರೆ. ಯಾವ ರಾಜನ ಚರಿತ್ರೆಯಲ್ಲಿ ರಕ್ತದಲ್ಲಿ ಬರೆದ ಅಧ್ಯಾಯಗಳಿಲ್ಲ? ಯಾವ ಸಾಮ್ರಾಜ್ಯವನ್ನು ಯುದ್ಧಗಳಿಲ್ಲದೆ ಶೂನ್ಯದಿಂದ ಸೃಷ್ಟಿಸಲಾಗಿದೆ? ಯಾವ ದೇಶದ ರಾಜ ಪರಧರ್ಮದವರನ್ನು ಗೋಳಾಡಿಸಿಲ್ಲ? ‘ಪರಧರ್ಮ ಸಹಿಷ್ಣುತೆ’ ಅನ್ನುವ ಪದ ಹುಟ್ಟಿದ್ದು ಅಂದಿನ ಅಗತ್ಯದಿಂದಲೇ ಅಲ್ಲವೇ? ಮಹಾಭಾರತದ ಕಾಲದಿಂದ ಆರಂಭಿಸಿ ಯಾವ ರಾಜರ ಕಾಲದಲ್ಲಿ ಯುದ್ಧಗಳು ನಡೆದಿಲ್ಲ? ಟಿಪ್ಪುವಿನ ಆಡಳಿತದ ಹದಿನೇಳು ವರ್ಷಗಳೂ ಆ ಸಮರೋನ್ಮಾದದ ಮುಂದುವರಿಕೆಯೇ ಅಲ್ಲವೇ? ಟಿಪ್ಪು ಮಾಡಿದ ಅಥವಾ ಮಾಡಿರಬಹುದಾದ ಕೆಟ್ಟ ಕೆಲಸಗಳನ್ನು ಸಮರ್ಥಿಸಿಕೊಳ್ಳಲು ಈ ಪ್ರಶ್ನೆಗಳನ್ನು ಎತ್ತಬೇಕಿಲ್ಲ. ಹೀಗೆ ಎಲ್ಲರಂತೆ ಅವನೂ ಒಬ್ಬ ರಾಜ ಅಷ್ಟೇ ಅಂದರೆ ಸಾಕು.

ಬ್ರಿಟಿಷ್ ಇತಿಹಾಸಕಾರರು ತಮ್ಮ ಪರಮಶತ್ರು ಟಿಪ್ಪುವಿನ ವಿರುದ್ಧ ಏನು ಬರೆಯಬೇಕೋ ಅದನ್ನೇ ಬರೆದರಲ್ಲದೆ ಹೊಗಳಿ ಬರೆಯಲು ಸಾಧ್ಯವಿರಲಿಲ್ಲ. ಭಾರತೀಯ ಇತಿಹಾಸ ತಜ್ಞರೂ ಅವರ ಹಾಗೇ ಬರೆದರು. ಕೆಲವರು ಮಾತ್ರ ಅವನ ಆಡಳಿತದಲ್ಲಿ ಜನಪರ ನಿರ್ಧಾರಗಳನ್ನು ಹೆಕ್ಕಿ ಹೇಳಿದರು. ಬಹುಪಾಲು ರಾಜರು ಇತಿಹಾಸ ಹಡೆದ ಮಕ್ಕಳು. ಆದರೆ ಟಿಪ್ಪು ಮಾತ್ರ ಇತಿಹಾಸದ ಮಲಮಗ.     
ಟಿಪ್ಪು ಸುಲ್ತಾನ ತನಗಾಗಿ, ತನ್ನ ಸಂಸ್ಥಾನಕ್ಕಾಗಿ ಅಥವಾ ಆಗ ಅಸ್ತಿತ್ವದಲ್ಲೇ ಇಲ್ಲದಿದ್ದ ‘ರಾಷ್ಟ್ರ’ಕ್ಕಾಗಿ - ಇವುಗಳಲ್ಲಿ ಯಾವುದಕ್ಕೆ ಹೋರಾಡಿದನೋ ಒಟ್ಟಿನಲ್ಲಿ ಬ್ರಿಟಿಷರ ವಿರುದ್ಧ ಅನೇಕ ಬಾರಿ ಯುದ್ಧ ಮಾಡಿದ. ಅವನು ಬ್ರಿಟಿಷರ ವಿರುದ್ಧ ಮಾಡಿದ ಯುದ್ಧಗಳ ನಡುವೆ ಈ ನೆಲದಲ್ಲಿದ್ದ ಬ್ರಿಟಿಷರ ಮಿತ್ರರನ್ನೂ ಎದುರಿಸಬೇಕಾಯಿತು. ಟಿಪ್ಪು ಯುದ್ಧರಂಗದಲ್ಲಿ ಸತ್ತುಬಿದ್ದ ನಂತರವೇ ಭಾರತ ಆಳುವ ಬ್ರಿಟಿಷರ ಆಸೆ ಎದ್ದುನಿಂತಿತು. ಲಂಡನ್‌ನ ಲೇಡನ್‌ಹಾಲ್ ಸ್ಟ್ರೀಟ್‌ನಲ್ಲಿ ಈಸ್ಟ್ ಇಂಡಿಯಾ ಕಂಪೆನಿಯ ಮುಖ್ಯಕಚೇರಿ ಇತ್ತು. ಬೇರಾರೂ ಅಲ್ಲ ಬ್ರಿಟಿಷರೇ ಟಿಪ್ಪುವಿಗೆ ‘ಟೆರರ್ ಆಫ್ ಲೇಡನ್‌ಹಾಲ್ ಸ್ಟ್ರೀಟ್’ ಎಂದು ಹೆಸರಿಟ್ಟಿದ್ದರು! ಹಾಗೆ ಬ್ರಿಟಿಷರಿಗೆ ಸಿಂಹಸ್ವಪ್ನವಾಗಿ ಕಾಡಿದ ಟಿಪ್ಪು ಸತ್ತ ಸುದ್ದಿ ಕೇಳಿದೊಡನೆ ಅಲ್ಲಿದ್ದ ಜನರಲ್ ಹ್ಯಾರಿಸ್ ‘ಇನ್ನು ಇಂಡಿಯಾ ನಮ್ಮದು’ ಎಂದು ಹರ್ಷೋದ್ಗಾರ ಮಾಡಿದನಂತೆ. ಟಿಪ್ಪು ಒಬ್ಬ ಬರೀ ಚಿಲ್ಲರೆ ಪುಂಡು ಪೋಕರಿ ಪಾಳೆಯಗಾರ ಆಗಿದ್ದಿದ್ದರೆ, ಬ್ರಿಟಿಷರು ಅವನ ಬಗ್ಗೆಯೇ ಅತೀ ಹೆಚ್ಚು ತಲೆಕೆಡಿಸಿಕೊಂಡು, ಅವನ ವಿರುದ್ಧವೇ ಅತೀ ಹೆಚ್ಚು ಕಾದಾಡುವ ಅಗತ್ಯ ಇರಲಿಲ್ಲ.

ಬಹುತೇಕ ಸಂಸ್ಥಾನಗಳ ರಾಜರು ಬ್ರಿಟಿಷರ ಜೊತೆ ಸ್ನೇಹ ಮಾಡಲು, ಅವರ ಜೀವನಶೈಲಿ ಅನುಕರಿಸಲು, ಅವರ ಭಾಷೆ ಕಲಿಯಲು, ಅವರನ್ನು  ಸುಪ್ರೀತಗೊಳಿಸಲು ಹೆಣಗಾಡುತ್ತಿದ್ದ, ಇಷ್ಟು ಮಾಡಿಯೂ ಅವರಿಂದ ಒದೆ ತಿನ್ನುತ್ತಿದ್ದ ವಿವರಗಳನ್ನು ಇತಿಹಾಸ ಮರೆಮಾಚುವುದಿಲ್ಲ. ಉಳಿವಿನ ಪ್ರಶ್ನೆ ಬಂದಾಗ, ಬ್ರಿಟಿಷ್ ಅಧಿಕಾರಿಗಳಿಗೆ ಮಡದಿಮಗಳೂ ಸೇರಿ ಎಲ್ಲವನ್ನೂ ಮುಫತ್ತಾಗಿ ಅರ್ಪಿಸಿದವರ ಕಥೆಗಳೂ ಬೇಕಾದಷ್ಟಿವೆ. ಆದರೆ ಅವರು ಯಾರಿಗೂ ಇಲ್ಲದ ‘ರಾಷ್ಟ್ರದ್ರೋಹಿ’ ಕಿರೀಟ ಟಿಪ್ಪುವಿಗೆ ದೊರೆತಿದೆ. 

ಟಿಪ್ಪು ಬದುಕಿದ್ದ ಕಾಲದಲ್ಲಿ (1750-1799) ಹೊಸ ಚಿಂತನೆ ಮತ್ತು ಸಂಶೋಧನೆಗಳಿಂದಾಗಿ ಇಡೀ ಜಗತ್ತಿನ ಚರಿತ್ರೆ ಮತ್ತು ಭೂಗೋಳ ಎರಡೂ ಬದಲಾಗುತ್ತಿದ್ದವು. 18ನೇ ಶತಮಾನದ ಉತ್ತರಾರ್ಧದ ಈ ಹೊಸಬೆಳಕಿಗೆ ತನ್ನ ಕಣ್ಣು ತೆರೆದುಕೊಂಡಿದ್ದರಿಂದಲೇ ಟಿಪ್ಪು, ಅಂದು ದೂರದ ನೆಪೋಲಿಯನ್‌ಗೆ ಬರೆದ ಒಂದು ಪತ್ರದಲ್ಲಿ ತನ್ನನ್ನು ‘ಭಾರತ ಗಣರಾಜ್ಯದ ಒಬ್ಬ ಪ್ರಜೆ’ ಎಂದು ಕರೆದು ಕೊಂಡಿದ್ದ! ಭಾರತ ‘ರಾಷ್ಟ್ರ’ದ ಇಂಥ ಅಸಾಧಾರಣ ಪರಿಕಲ್ಪನೆಯನ್ನು ಅರ್ಥ ಮಾಡಿಕೊಳ್ಳುವುದು, ತಮ್ಮ ಪಾಳೆಯಪಟ್ಟುಗಳ ಪುಟ್ಟ ಪ್ರಪಂಚದಲ್ಲೇ ಮುಳುಗಿದ್ದ ಬಹುಪಾಲು ರಾಜರಿಗೆ ನಿಲುಕದ ಸಂಗತಿಯಾಗಿತ್ತು. ಯುರೋಪ್ ಜನರು ತಮ್ಮ ‘ರಾಷ್ಟ್ರ’ಕ್ಕೆ ನಿಷ್ಠರಾಗಿ ಅವುಗಳ ಸ್ವಾತಂತ್ರ್ಯ ರಕ್ಷಿಸಿಕೊಳ್ಳುವುದು ಸಾಧ್ಯವಾದರೆ, ನಮ್ಮ ಜನರೂ ಬ್ರಿಟಿಷರ ವಿರುದ್ಧ ಹೋರಾಡುವುದು ಅವಶ್ಯಕ ಎಂದು ಟಿಪ್ಪು ಯೋಚಿಸಿರಬಹುದು. ಆದರೆ ನಿಜಾಮರು, ಮರಾಠರು ಮತ್ತು ಇತರ ದೇಸೀ ಆಡಳಿತಗಾರರಲ್ಲಿ ಇಂಥ ಭಾರತೀಯ ಒಗ್ಗಟ್ಟಿನ ‘ರಾಷ್ಟ್ರೀಯ ಭಾವನೆ’ ಮೂಡುವುದು ಅಸಾಧ್ಯವಾಗಿತ್ತು.

ಟಿಪ್ಪುವನ್ನು ಸೋಲಿಸಿದ್ದು ಬ್ರಿಟಿಷರ ತಾಕತ್ತು ಅಲ್ಲ, ಅವರೊಂದಿಗೆ ಕೈಜೋಡಿಸಿದ ದೇಸೀ ರಾಜರ ಮಸಲತ್ತು. ಆ ಕಾಲದ ರಾಜರೆಲ್ಲರೂ ‘ಸ್ವದೇಶಿ ಹೋರಾಟ’ಕ್ಕೆ ಒಂದಾಗಿ ಬ್ರಿಟಿಷರ ವಿರುದ್ಧ ಕಾದಿದ್ದರೆ ಅಥವಾ ಟಿಪ್ಪು ಯಾಚಿಸಿದಂತೆ ಫ್ರಾನ್ಸ್, ಟರ್ಕಿ, ಈಜಿಪ್ಟ್ ಮುಂತಾದ ವಿದೇಶಿ ಬೆಂಬಲ ದೊರೆತಿದ್ದಿದ್ದರೆ ಒಂದು ಸಂಘಟಿತ ಹೋರಾಟ ಸಾಧ್ಯವಾಗಿ ನೂರೈವತ್ತು ವರ್ಷಗಳ ಮೊದಲೇ ಭಾರತದಿಂದ ಬ್ರಿಟಿಷರನ್ನು ಹೊಡೆದಟ್ಟಲು ಸಾಧ್ಯವಾಗುತ್ತಿತ್ತೇನೋ ಎಂದು ಊಹಿಸುವುದು ರಾಜಕೀಯ ಅಜ್ಞಾನದ ಬುರುಡೆ ಎಂದು ಯಾರಾದರೂ ಹಂಗಿಸಬಹುದು. ಆಮೇಲೆ ಈಗ ಹಾಗೆಲ್ಲಾ ತಮಾಷೆಗೆ ಹೇಳುವುದೂ ಅಪಾಯಕ್ಕೆ ಆಹ್ವಾನ ಕೊಟ್ಟಂತೆ. ಅದರಿಂದ ‘ಭಾರತ ಗಣರಾಜ್ಯದ ಒಬ್ಬ ಪ್ರಜೆ’ ಎಂದು ಕರೆದುಕೊಂಡ ಟಿಪ್ಪುವಿನ ವಿರುದ್ಧದ ಸಂಘಟಿತ ಹೋರಾಟ ಇನ್ನಷ್ಟು ಬಲಗೊಳ್ಳುತ್ತದಷ್ಟೆ. ಇದೆಲ್ಲ ರಾಷ್ಟ್ರೀಯವಾದಿ, ರಾಷ್ಟ್ರಪ್ರೇಮಿ, ಸ್ವದೇಶಪ್ರೇಮಿ ಸಮೂಹಗಳಿಂದಲೇ ಆಗುತ್ತದೆ ಎನ್ನುವುದು ಇನ್ನೂ ವಿಶೇಷ.

ಏಕೆಂದರೆ ಉದಾಹರಣೆ ಕೊಡಲು ಟಿಪ್ಪು ಮಾಡಿದ, ಮಾಡಿಸಿದ, ಮಾಡಿರಬಹುದಾದ, ಮಾಡಿದ್ದಾನೆನ್ನಲಾದ ಕೊಲೆಗಳು, ಸುಲಿಗೆಗಳು, ಅತ್ಯಾಚಾರಗಳು, ಮತಾಂತರಗಳ ಅಪಾರ ವಿವರಗಳೂ ದಾಖಲೆಗಳಲ್ಲಿವೆ. ಟಿಪ್ಪು ಇವುಗಳನ್ನು ಮಾಡಲಿಲ್ಲ ಎಂದು ಯಾರೂ ಹೇಳಲು ಸಾಧ್ಯವಿಲ್ಲ. ಆದರೆ ಅವನ ಹಾಗೆ, ಎಲ್ಲ ರಾಜರೂ ಅಗತ್ಯಕ್ಕೆ ತಕ್ಕಂತೆ ಯಥಾಶಕ್ತಿ ಇವುಗಳನ್ನು ಮಾಡಿಯೇ ಇರುತ್ತಾರೆ. ಏಕಾಂತ ರಾಮಯ್ಯ ಎಂಬ ಶೂರಶರಣ ನೂರಾರು ಜೈನ ಬಸದಿಗಳನ್ನು ವೀರಾವೇಶದಿಂದ ಒಡೆಯಲು ಸಾಧ್ಯವಾಗುವುದಾದರೆ, ಬಲಶಾಲಿಯಾದ ಒಬ್ಬ ರಾಜ ಪರಧರ್ಮಗಳ ದೇವಾಲಯಗಳನ್ನು ನಿರ್ನಾಮ ಮಾಡಿರುವುದು ಅಸಾಧ್ಯವೇನಲ್ಲ. ಮರಾಠ ರಾಜರು ಮಠಗಳ ಸಂಪತ್ತನ್ನು ಲೂಟಿ ಮಾಡಿ ದೇವರ ವಿಗ್ರಹಗಳನ್ನು ಎಸೆದರು ಎಂಬುದನ್ನೂ ದಾಖಲೆಗಳು ಹೇಳುತ್ತವೆ. ಆದರೆ ಇತಿಹಾಸದಲ್ಲಿ ಧಾರ್ಮಿಕ ಕ್ರೌರ್ಯ, ಮತಾಂಧತೆ ಇವುಗಳ ವ್ಯಾಖ್ಯಾನವೆಲ್ಲ, ಮಾಡಿದವರ ಮೇಲೂ ಬರೆದವರ ಮೇಲೂ ಅವಲಂಬಿತವಾಗುತ್ತದೆ. ಹೆಚ್ಚೆಂದರೆ ಅಂದಂದಿನ ಅಗತ್ಯ ಆಗಿರುತ್ತವೆ. ಈ ದೃಷ್ಟಿಯಿಂದ ಇತಿಹಾಸವನ್ನು ಬೆನ್ನ ಹಿಂದಿನ ಬೆಳಕು ಎನ್ನಲು ಭಯವಾಗುತ್ತದೆ; ಏಕೆಂದರೆ ಆ ಬೆಳಕಿನ ಸುತ್ತಲೂ
ಕೆಳಗೂ ಇಂಥ ಕತ್ತಲೆ ಇದ್ದೇ ಇರುತ್ತದೆ.

ಟಿಪ್ಪುವಿನ ಧರ್ಮಾಂಧತೆಯ ಕಥೆಗಳನ್ನು ಬಿಡಿ, ನಿರಂತರ ಯುದ್ಧಗಳ ನಡುವೆ ಅವನು ಬಿಡುವು ಮಾಡಿಕೊಂಡು ಬಡರೈತರ ಬಗ್ಗೆ ಯಾಕೆ ಯೋಚಿಸಿದ? ಸಕ್ಕರೆ ತಯಾರಿಸುವ ವಿಧಾನವನ್ನು ಚೀನಾದಿಂದ ಹೇಗೆ ತರಿಸಿದ? ರೇಷ್ಮೆ ಬೆಳೆಯುವುದನ್ನು ರೈತರಿಗೆ ಏಕೆ ಕಲಿಸಿದ? ‘ಕೃಷಿಯೇ ನಮ್ಮ ರಾಜ್ಯದ ರಕ್ತಮಾಂಸ’ ಎಂದು ಆ ರಕ್ತಪಿಪಾಸು ಸಮರಕೋರ ಹೇಳಿದ್ದನಂತೆ. ರೈತರು ತಪ್ಪುಮಾಡಿ ಸಿಕ್ಕಿಹಾಕಿಕೊಂಡರೆ ‘ರೈತರಿಗೆ ದಂಡ ಹಾಕಬೇಡಿ. ಕಡ್ಡಾಯವಾಗಿ ನಾಲ್ಕು ಮಾವಿನ ಸಸಿ, ಎರಡು ಹಲಸಿನ ಸಸಿ ನೆಟ್ಟು ಬೆಳೆಸುವ ಶಿಕ್ಷೆ ವಿಧಿಸಿ’ ಎಂದು ಅಧಿಕಾರಿಗಳಿಗೆ ತಾಕೀತು ಮಾಡಿದ್ದನಂತೆ. ‘ನಮ್ಮ ಜನರ ಸಾಮಾಜಿಕ, ಆರ್ಥಿಕ ಮತ್ತು ನೈತಿಕ ಒಳಿತಿಗಾಗಿ, ಮದ್ಯವನ್ನು ತಯಾರಿಸುವುದು ಮತ್ತು ಮಾರುವುದನ್ನು ಪೂರ್ಣವಾಗಿ ನಿಷೇಧಿಸುತ್ತೇನೆ’ ಎಂದು ಧೈರ್ಯವಾಗಿ ಫರ್ಮಾನು ಹೊರಡಿಸಿದ್ದ ರಾಜ ಅವನು. ಈ ಕಾಲದ ಮುಖ್ಯಮಂತ್ರಿ ಇಂಥ ಧೈರ್ಯ ಮಾಡಿದರೆ ಏನೇನು ಕಷ್ಟ ಅನುಭವಿಸಬೇಕು ಅನ್ನುವುದು ನಮಗೆ ಗೊತ್ತು!
ಟಿಪ್ಪು ಸುಲ್ತಾನನ ಪರ ಮತ್ತು ವಿರೋಧಿ ವಾಗ್ವಾದಗಳು ಚರಿತ್ರೆಯ ಅಭ್ಯಾಸದ ಬೇಲಿಯೊಳಗೆ ಎಂದಿನಿಂದಲೂ ನಡೆಯುತ್ತಿವೆ. ಎರಡನ್ನೂ ಹೇಳುವ ರಾಶಿ ರಾಶಿ ಲೇಖನಗಳು, ಪುಸ್ತಕಗಳು ಪ್ರಕಟವಾಗಿವೆ. ಅದೀಗ ಸೈದ್ಧಾಂತಿಕ ಸಂಘರ್ಷದ ರೂಪವನ್ನು ಪಡೆದುಬಿಟ್ಟಿದೆ. ಎಲ್ಲ ರಾಜರನ್ನೂ ಅವರವರ ಇತಿಮಿತಿಗಳ ಒಳಗೇ ಇತಿಹಾಸಕಾರರು ಆರಾಧಿಸುತ್ತಾರೆ. ಟಿಪ್ಪುವಿನ ಮೇಲೆ ಮಾತ್ರ ಇತಿಹಾಸಕಾರರೂ ಯುದ್ಧ ಮಾಡುತ್ತಲೇ ಇದ್ದಾರೆ. ಈಗ ವಿದ್ವಾಂಸರೊಂದಿಗೆ ವಿಧ್ವಂಸಕ ಕಾಲಾಳುಗಳೂ ಸೇರಿಕೊಂಡಿದ್ದಾರೆ. ಚರಿತ್ರೆ ಮತ್ತು ಅದರ ಅಹಿತಕರ ಸಂಗತಿಗಳು ಮರುಕಳಿಸದಂತೆ ಎಚ್ಚರ ವಹಿಸಬೇಕು. ಟಿಪ್ಪು ತನ್ನ ಅಪ್ಪನಂತೆ ಬೆಂಗಳೂರಿನ ಲಾಲ್‌ಬಾಗ್ ರೂಪಿಸಲು ಆಸಕ್ತಿ ವಹಿಸಿದ್ದನಂತೆ. ಆ ಲಾಲ್‌ಬಾಗ್‌ನಲ್ಲಿ ಬರೀ ಮರಗಿಡಗಳನ್ನು ಮುಳ್ಳುಕಂಟಿಗಳನ್ನು ಎಣಿಸುತ್ತಾ ಹೋದರೆ ಉದ್ಯಾನದ ಒಟ್ಟು ಸೌಂದರ್ಯ ತಿಳಿಯುತ್ತದೆಯೇ?

ಇಂಥ ಟಿಪ್ಪು ಸುಲ್ತಾನನನ್ನು ಗೋರಿಯೊಳಗೇ ಮಲಗಲು ಬಿಡೋಣ. ಅವನನ್ನು ಎಬ್ಬಿಸಿ ಕೂಡಿಸಿದ್ದು ಸರ್ಕಾರದ ತಪ್ಪು ಎನ್ನದೆ ಇನ್ನೇನು ಹೇಳಬೇಕು? ‘ಯಾರು ಎಷ್ಟು ಬೇಕಾದರೂ ಬಾಯಿ ಬಡಿದುಕೊಳ್ಳಲಿ, ಟಿಪ್ಪು ಜಯಂತಿ ಆಚರಿಸಿಯೇ ಸಿದ್ಧ’ ಎನ್ನುತ್ತಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹಟಮಾರಿತನದ ಮೇಲೆ ಹುಂಬತನದ ನೆರಳು ಕಾಣುತ್ತಿಲ್ಲವೇ? ಸರ್ಕಾರದ ಕೆಲಸ ಈರುಳ್ಳಿ ಬೆಳೆಗಾರನ ಬದುಕಿನ ಸುಧಾರಣೆಯೋ ಜಯಂತಿ ಆಚರಣೆಯೋ? ಸರ್ಕಾರದ ಈ ಅಧಿಕಪ್ರಸಂಗವನ್ನು ಸಂಘಿಗಳು, ಭಜರಂಗಿಗಳು ಮತ್ತು ಕೆಲವುಕಡೆ ಕಮಂಗಿಗಳು ಸದುಪಯೋಗ ಮಾಡಿಕೊಳ್ಳುವುದು ಖಂಡಿತ. ಆಪತ್ತಿಗೆ ಸವಾಲ್ ಹಾಕಿದರೆ ಅನಾಹುತವೇ ಜವಾಬ್ ಆಗಿರುವುದು ಖಚಿತ.
ಇತಿಹಾಸದಲ್ಲಿ ಆಗಿಹೋದ ವ್ಯಕ್ತಿಗಳನ್ನು ಆರಾಧಿಸುವ ದೇಗುಲಗಳು, ದರ್ಗಾಗಳು, ಬೃಂದಾವನಗಳು, ಗದ್ದುಗೆಗಳು, ಸಮಾಧಿಗಳು ನಮ್ಮ ನಾಡಿನ ಮೂಲೆಮೂಲೆಗಳಲ್ಲಿ ಕಿಕ್ಕಿರಿದಿವೆ. ಈ ಆರಾಧನೆಯನ್ನು ವಿಧಾನಸೌಧಕ್ಕೆ, ಸರ್ಕಾರಿ ಕಚೇರಿಗಳಿಗೆ ತಂದು ಜನರ ನೆಮ್ಮದಿಗೆ ಕಿರಿಕಿರಿ ಮಾಡುವ ಅಗತ್ಯವಿಲ್ಲ. ಟಿಪ್ಪು ಜಯಂತಿ ಮಾತ್ರವಲ್ಲ, ಜಾತಿಗೊಬ್ಬ ಸಂತನನ್ನು ಹುಡುಕಿ ಜಯಂತಿ ಮಾಡುವ ಕೆಲಸವನ್ನು ಎಲ್ಲ ಪಕ್ಷಗಳ ಸರ್ಕಾರಗಳೂ ನಿಲ್ಲಿಸಿದರೆ ಜನರಿಗೆ ಕ್ಷೇಮ. ರಾಷ್ಟ್ರದ ಧ್ವಜಾರೋಹಣ ಮಾಡುವ ದಿನಗಳನ್ನು ಬಿಟ್ಟರೆ ಮಿಕ್ಕೆಲ್ಲ ಆಚರಣೆಗಳೂ ಸಂವಿಧಾನದ ಮತಧರ್ಮ ನಿರಪೇಕ್ಷತೆ ಆಶಯದ ಅವರೋಹಣವೇ. ನಾಥೂರಾಮ್ ಗೋಡ್ಸೆ ಜಯಂತಿ ಆಚರಿಸುವ ಜನರು ಟಿಪ್ಪು ಜಯಂತಿ ವಿರೋಧಿಸುವ ವಿರೋಧಾಭಾಸವನ್ನು ತಡೆದುಕೊಳ್ಳುವ ದುರಂತ ಪ್ರಜೆಗಳು ಮತ್ತು ಪ್ರಜಾಪ್ರಭುತ್ವದ ಪಾಲಿಗೆ ಬೇಡವೇ ಬೇಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT