ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತನ್ನ ಜನಾಂಗದ ದುಃಖ ತನಗಷ್ಟೇ ಗೊತ್ತು

Last Updated 3 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಆ ಹುಡುಗನ ಹೆಸರು ‘ಆಸ್ತೀಕ’. ತಾಯ ಒಡಲಲ್ಲಿ ಹುಡುಗ ಬೆಳೆಯುತ್ತಿರುವುದನ್ನು ತಿಳಿದಾಗಲೇ ತಂದೆ ‘ಜರತ್ಕಾರು’ ಹೇಳಿದನಂತೆ – ‘ಅಸ್ತಿ’. ಹೌದು, ಇವನಿಲ್ಲಿ ಇದ್ದಾನೆ; ಎಂದು. ಇನ್ನೂ ಹುಟ್ಟುವ ಮುನ್ನವೇ, ಇವನು ಗರ್ಭಸ್ಥನಾಗಿ ಇದ್ದಾನೆ ಎನ್ನುವುದೇ ಒಂದು ದೊಡ್ಡ ಸಂಭ್ರಮವಾಗಿ ಹುಡುಗನಿಗೆ ‘ಆಸ್ತೀಕ’ ಎಂದೇ ಹೆಸರಾಯಿತು. ತಾನು ಇರುತ್ತ, ಉಳಿಯುತ್ತ ತನ್ನ ಕುಲವನ್ನೇ ಉಳಿಯುವಂತೆ ಮಾಡುವವನು ಎನ್ನುವುದೇ ‘ಆಸ್ತೀಕ’ ಎಂಬ ಹೆಸರಿನ ಅರ್ಥ, ಧ್ವನಿ. ಇದೇಕೆಂದರೆ, ಹುಡುಗನ ಕುಲವನ್ನೇ ಇಲ್ಲದಂತೆ ಮಾಡುವ ವಿಕಟ ಸಂದರ್ಭವೊಂದು ಇತಿಹಾಸದಲ್ಲಿ ಮೆಲ್ಲನೆ ರೂಪುಗೊಳ್ಳುತ್ತಿತ್ತು.

ಕಲಿಯುಗ ಕಾಲಿಟ್ಟಿತ್ತು. ಯಾದವರ ನಾಶವಾಗಿತ್ತು. ಕೃಷ್ಣ–ಬಲರಾಮರದೂ ನಿರ್ಯಾಣವಾಗಿತ್ತು. ಆಳುತ್ತಿದ್ದ ಪಾಂಡವರಿಗೆ ಈ ಲೋಕದ ಬದುಕು ಸಾಕೆನ್ನಿಸಿತ್ತು. ಅಭಿಮನ್ಯು–ಉತ್ತರೆಯರ ಮಗ  ಪರೀಕ್ಷಿತನಿಗೆ ಹಸ್ತಿನೆಯ ಗದ್ದುಗೆಯ ಪಟ್ಟಗಟ್ಟಿ ಪಾಂಡವರೈವರೂ ದ್ರೌಪದೀ ಸಮೇತರಾಗಿ ಸ್ವರ್ಗಕ್ಕೆ ನಡೆಯುವ ಸಂಕಲ್ಪದಿಂದ ಹಿಮಾಲಯದಲ್ಲಿ ಹೆಜ್ಜೆ ಹಾಕುತ್ತಿದ್ದರು.

ಒಂದು ರೀತಿಯಲ್ಲಿ ಇದು ಸಹಜಸಾವಿನ ನಿರೀಕ್ಷೆಯಾಗಿರಲಿಲ್ಲ. ಆ ಮಾತು ಬೇರೆ. ಧರ್ಮಜನೊಬ್ಬನನ್ನುಳಿದು – ಉಳಿದ ಯಾರಿಗೂ ಈ ಮರ್ತ್ಯದೇಹದಲ್ಲಿ ಸ್ವರ್ಗವನ್ನು ಏರಲೂ ಆಗಿರಲಿಲ್ಲ. ಸ್ವರ್ಗದ ದಾರಿಯಲ್ಲಿ ಎಲ್ಲೋ ಒಂದೊಂದೆಡೆಯಲ್ಲಿ ಏಕಾಂಗಿಗಳಾಗಿ, ಅನಾಥರಂತೆ ಎಲ್ಲರೂ ಕುಸಿದುಬಿದ್ದಿದ್ದರು! ಇಹದ ಬದುಕಿನಲ್ಲಿಯಾದರೋ ಪಾಂಡವರೈವರೂ ಜೊತೆಯಾಗಿದ್ದರು.

ಈ ಏಕತೆಯೇ ಅವರ ಹೆಮ್ಮೆಯಾಗಿತ್ತು. ಆದರೆ ಸಾವಿನಲ್ಲಿ ಮಾತ್ರ ಏಕಾಂಗಿಗಳು! ಅಥವಾ ಸಾವಿನಲ್ಲಿಯೂ ಜೊತೆಯಾಗಿರಬೇಕೆಂದುಕೊಳ್ಳುವುದು ಒಂದು ಮೌಲ್ಯವೇ ಅಲ್ಲವೇನೋ! ಏಕೆಂದರೆ ಯಾದವರು ಸಾವಿನಲ್ಲಿ ಎಲ್ಲರೂ ಜೊತೆಯಾಗಿದ್ದರು! ಆದರೆ ಅದು ಪರಸ್ಪರ ಹೊಡೆದಾಡಿಕೊಂಡು  ತಮ್ಮನ್ನು ನೀಗಿಕೊಂಡ ಸಾಮೂಹಿಕನಾಶದ ವಿಕಟಚಿತ್ರವಾಗಿತ್ತು; ದುರಂತಚಿತ್ರವಾಗಿತ್ತು.

ಯುಗದ ದೈವ ಕೃಷ್ಣನೂ ಏಕಾಂಗಿಯಾಗಿಯೇ ಲೋಕ ಬಿಟ್ಟು ತೆರಳಿದ್ದ. ಇದಕ್ಕಿಂತ ಭಿನ್ನವಾಗಿ, ರಣರಂಗದಲ್ಲಿ ಜೀವತೆತ್ತರೆ ವೀರಸ್ವರ್ಗ ಎನ್ನುವ ಸಾಮೂಹಿಕ ಕಲ್ಪನೆಗಿಂತ ಭಿನ್ನವಾಗಿ, ಸಾವಿನಲ್ಲಿಯೂ ಜೊತೆಯಾಗಿರಬೇಕೆಂಬುದನ್ನು ಸಾಧಿಸಿದ ಮಾದರಿಗಳೇ ಇರಲಿಲ್ಲ.

ದೇವತೆಗಳ ನಿಯೋಗದಿಂದ ಕುಂತಿಯಲ್ಲಿ ಜನಿಸಿದ ಮಕ್ಕಳಿಗೇ ಸ್ವರ್ಗದ ಬಾಗಿಲು ತೆರೆಯದೇ ಹೋಯಿತು! ಆಶ್ವರ್ಯ! ಮರ್ತ್ಯಕ್ಕೆ ಬಂದ ದೇವತೆಗಳಿಗೇ ಸ್ವರ್ಗದ ಬಾಗಿಲು ಮುಚ್ಚಿಕೊಂಡಂತೆ! ಇದು ಮರ್ತ್ಯದ ಗುಣವೇ ಇರಬೇಕು. ಧರ್ಮಜನ ಮಾತು ಬೇರೆ. ಅವನೊಬ್ಬನಿಗೆ ಸ್ವರ್ಗದ ಬಾಗಿಲು ತೆರೆಯಿತು.

ಅಚ್ಚರಿ ಎಂದರೆ ಈ ಇಹಲೋಕದಲ್ಲಿ ಧರ್ಮಜನಂತೆ ದುಃಖವನ್ನುಂಡ ಮತ್ತೊಂದು ಜೀವ ಇರಲಿಲ್ಲ. ದ್ರೌಪದಿಯ ದುಃಖ, ಕರ್ಣನ ದುಃಖ ತೀವ್ರವಾದುದಾದರೂ, ಅದು ವೈಯಕ್ತಿಕವಾಗಿತ್ತು. ಧರ್ಮಜನ ದುಃಖವಾದರೋ ಸಮುದಾಯ ಭಾವನೆಯಿಂದ ಬಂದುದಾಗಿತ್ತು.

ದುಃಖವೇ ನರಕ ಎಂದುಕೊಳ್ಳುವೆವಾದರೆ ಧರ್ಮಜನಿಗೆ ಮರ್ತ್ಯದಲ್ಲೇ ನರಕದುಃಖದ ಅನುಭವವಾಗಿತ್ತು. ಇಂಥ ಧರ್ಮಜನಿಗೆ ಸ್ವರ್ಗದ ಬಾಗಿಲು ತೆರೆಯಿತು! ದುಃಖದ ಅನುಭವ – ಮರ್ತ್ಯದೇಹದ, ಮರ್ತ್ಯಮನಸ್ಸಿನ ಗುಣಗಳನ್ನೇ ಬದಲಿಸಿ ಬಿಡುತ್ತದೇನೋ. ಸ್ವರ್ಗಯೋಗ್ಯತೆಯನ್ನುಂಟು ಮಾಡಿಬಿಡುತ್ತದೇನೋ.

ಪರೀಕ್ಷಿತ್‌ ಈಗ ರಾಜನಾಗಿದ್ದ. ಕಲಿಯುಗದ ಮೊದಲ ರಾಜ. ತಾಯ ಒಡಲೊಳಗೆ ಇರುವಾಗಲೇ ಅಶ್ವತ್ಥಾಮನೆಸೆದ ಅಸ್ತ್ರದಿಂದ ಆಘಾತಕ್ಕೆ ಒಳಗಾಗಿದ್ದ. ಕೃಷ್ಣನ ಪ್ರೀತಿಯಿಂದ ಮತ್ತೆ ಬದುಕಿ ಉಳಿದಿದ್ದ. ಇಂಥ ಹಿನ್ನೆಲೆ ಇರುವಾಗ, ಆಸ್ತೀಕನ ಸಂದರ್ಭದಲ್ಲಿ, ಗರ್ಭಸ್ಥ ಶಿಶುವಿನ ಇರುವಿಕೆಯೇ ಸಂಭ್ರಮಕ್ಕೆ ಕಾರಣವಾದದ್ದು ಸಹಜವೇ. ಪರೀಕ್ಷಿತ್‌, ತಾನು ರಾಜನಾಗಿ ಯುಗಪ್ರೇರಕನಾದ ‘ಕಲಿ’ಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದೇ ತನ್ನ ಕರ್ತವ್ಯವೆಂದುಕೊಂಡ. ನಿಯಂತ್ರಣವೆಂದರೆ ವ್ಯವಸ್ಥಿತಗೊಳಿಸುವುದು.

ವ್ಯವಸ್ಥೆ ಎಂದರೆ ಎಲ್ಲರಿಗೆ – ಅವರವರಿಗೆ ಉಚಿತವಾದ – ಸ್ಥಾನಕಲ್ಪನೆ. ‘ಕಲಿ’ಯ ಕ್ಷೇತ್ರಗಳು ಈ ನಾಲ್ಕು. ‘ದ್ಯೂತಂ ಪಾನಂ ಸ್ತ್ರೀಯಃ ಸೂನಾ’. ಜೂಜು, ಮಧ್ಯ, ಧರ್ಮವಿರುದ್ಧವಾದ ಕಾಮ ಮತ್ತು ಹಿಂಸೆ. ಈ ನಾಲ್ಕು ಪ್ರವೃತ್ತಿಗಳನ್ನು ವ್ಯವಸ್ಥಿತಗೊಳಿಸಿದರೆ ಅಂದರೆ ಜೂಜುಕಟ್ಟೆ, ಮದ್ಯಶಾಲೆ, ವೇಶ್ಯಾವಾಟಿಕೆ ಮತ್ತು ರಣರಂಗ ಇವುಗಳಲ್ಲಿ ಈ ಪ್ರವೃತ್ತಿಗಳಿಗೆ ಮುಕ್ತ ಅವಕಾಶವನ್ನು ಕಲ್ಪಿಸಿದಲ್ಲಿ ಮಾತ್ರ ಉಳಿದಂತೆ ಪ್ರಜೆಗಳ ಸಾಮಾಜಿಕ ಬದುಕು ಶಾಂತಸರಳವಾಗಿ ನಡೆಯಬಹುದೆನ್ನುವ ವ್ಯವಸ್ಥೆ.

ಆದರೆ ಏನಾಯಿತೆಂದರೆ ತನಗೆ ಬೇಕಾದುದೆಲ್ಲವನ್ನೂ ವ್ಯವಸ್ಥಿತವಾಗಿ ಮಾಡಿ ಮುಗಿಸುವುದು ಹೇಗೆಂದು ರಾಜನೇ ಕಲಿಗೆ ತಿಳಿಸಿಕೊಟ್ಟಂತಾಯಿತು. ಕೆಡುಕೇ ಆಗಿದ್ದರೂ ಅದು ಅವ್ಯವಸ್ಥಿತವಾಗಿದ್ದಾಗ ಅವರ ಜೊತೆಗೆ ಒಂದಿಷ್ಟು ಒಳಿತೂ ಅಮಾಯಕವಾಗಿ ಇರುತ್ತಿತ್ತು. ಅವ್ಯವಸ್ಥಿತವಾಗಿದ್ದಾಗ ಈ ಪ್ರವೃತ್ತಿಗಳನ್ನು ‘ಯುಗಧರ್ಮ’ ಎಂದು ಹೇಳುವಂತಿಲ್ಲವಾಗಿತ್ತು. ಇದು ಯಾವಾಗ ವ್ಯವಸ್ಥಿತವಾಯಿತು – ಆಗ ಇದು ಯುಗಧರ್ಮವೇ ಆಗಿಬಿಟ್ಟಿತು.

ಹತ್ಯಾಕಾಂಡವೊಂದನ್ನು ವ್ಯವಸ್ಥಿತವಾಗಿ ಮಾಡಿಬಿಟ್ಟರೆ – ಆ ವ್ಯವಸ್ಥೆಯ ದಕ್ಷತೆಯ ಮುಂದೆ – ಹತ್ಯೆಯ ಅಪರಾಧವೇ ಗೋಚರವಾಗದಂತೆ ಮಾಡಬಹುದಾಯಿತು! ನಮ್ಮ ಸೂಕ್ಷ್ಮ ಬುದ್ಧಿವಂತಿಕೆಯಿಂದ ಕಾಲದ ನಡೆಯನ್ನು ನಮಗೆ ಅನುಕೂಲವಾಗಿ ಬಳಸಿಕೊಳ್ಳಬಹುದೆಂದುಕೊಂಡರೆ – ನಾವು ಹಾಗೆಂದುಕೊಳ್ಳುವುದು ಕಾಲವೇ ನಮ್ಮಲ್ಲಿ ಉಂಟುಮಾಡಿದ ಪ್ರೇರಣೆಯಾಗಿ ಇರಬಹುದು – ದೈವಂ ಪ್ರಜ್ಞಾವಿಶೇಷಣ ಕೋ ನಿವರ್ತಿತು ಮರ್ಹತಿ – ಎನ್ನುವುದು ಮಹಾಭಾರತದ ಮಾತು. ಹಾಗೆ ಸರ್ಪಯಾಗದಂಥ ಭಯಾನಕ ಉಪಕ್ರಮವೊಂದು ಪ್ರಸ್ತುತವಾಗಿಬಿಟ್ಟಿತು.

ಪರೀಕ್ಷಿತದ್ರಾಜ ಅಚಾತುರ್ಯವೊಂದನ್ನು ಮಾಡಿಬಿಟ್ಟದ್ದ. ತಾನು ಕಾಡಿಗೆ ಬೇಟೆಗೆ ಹೋಗಿದ್ದಾಗ, ಪರಿವಾರದಿಂದ ವಿಂಗಡಗೊಂಡು, ಬೇಟೆಯಲ್ಲಿ ಬಳಲಿ, ಅಲ್ಲೇ ಕಾಡಿನಲ್ಲಿ ತನ್ನ ಆಶ್ರಮದಲ್ಲಿ ಧ್ಯಾನಮಗ್ನನಾಗಿದ್ದ ಮುನಿಯೊಬ್ಬನನ್ನು ಕಂಡು ದಾಹ ತಣಿಸಲು ನೀರು ಕೇಳಿದ್ದ. ಆದರೆ ಮುನಿಗೆ ಧ್ಯಾನದಿಂದ ಎಚ್ಚರವಾಗಲಿಲ್ಲ. ಪರೀಕ್ಷಿತ್‌ ಕುಪಿತನಾದ.

ಅಲ್ಲೇ ಬಳಿಯಲ್ಲಿ ಸತ್ತುಬಿದ್ದಿದ್ದ ಹಾವೊಂದನ್ನು ಬಿಲ್ಲಿನಿಂದೆತ್ತಿ ಧ್ಯಾನಲೀನ ಮುನಿಯ ಕೊರಳ ಸುತ್ತ ಸೂಡಿ ಅರಮನೆಯತ್ತ ತಾನು ಹೊರಟುಹೋಗಿದ್ದ. ಧ್ಯಾನಸ್ಥಿತಿಯ ಪರಿಚಯವೇ ರಾಜನಿಗಿರಲಿಲ್ಲ. ಧ್ಯಾನಲೀಲ ಕೃಷ್ಣನ ಸವಿವರವಾದ ವರ್ಣನೆಯನ್ನು ಧರ್ಮರಾಜ ಮಾಡಿದ್ದು – ಆ ಅಪೂರ್ವ ಚಿತ್ರಣ ಮಹಾಭಾರತದಲ್ಲಿದೆ. ಹಾಗೆ ವರ್ಣಿಸಬೇಕಾದರೆ ಧರ್ಮಜನಿಗೂ ಧ್ಯಾನದ ಅನುಭವವಿತ್ತು. ಆದರೆ ಪರೀಕ್ಷಿತನ ಕಾಲಕ್ಕಾಗಲೇ ಧ್ಯಾನಸ್ಥಿತಿಯನ್ನು ಗುರುತಿಸುವ ಸೂಕ್ಷ್ಮತೆ ಕಳೆದುಹೋಗಿತ್ತು. ಕಲಿ, ಅದಾಗಲೇ ಮನಸ್ಸುಗಳಿಗೆ ಅಡಿ ಇಟ್ಟುಬಿಟ್ಟಿದ್ದ.

ಈ ಕಾರಣದಿಂದ ಪರೀಕ್ಷಿತನಿಗೆ ಶಾಪವೇ ಒದಗಿ ಬಂದಿತ್ತು. ಸರ್ಪಶ್ರೇಷ್ಠನಾದ ತಕ್ಷಕನ ದಂಶನದಿಂದ ಸಾವು ಉಂಟಾಗಲೆಂದು. ತಕ್ಷಕ, ಶಾಪವನ್ನು ನಿಜ ಮಾಡಬೇಕಿತ್ತು. ಉತ್ಕಟವಾದ ಮಾತು ಹುಸಿಯಾಗುವುದಿಲ್ಲ ಎಂಬ ನಿಯಮವನ್ನು ಪಾಲಿಸಬೇಕಿತ್ತು. ಹಾಗೆ ತಕ್ಷಕನ  ದಂಶನದಿಂದ ಪರಿಕ್ಷಿದ್ರಾಜ ಮರಣ ಹೊಂದಿದ. ಈಗ ಅವನ ಮಗ ‘ಜನಮೇಜಯ’ ರಾಜ್ಯಭಾರ ಮಾಡುತ್ತಿದ್ದ. ಜನಮೇಜಯನಿಗೆ ತಕ್ಷಕನೆಂದರೆ, ಹಾವುಗಳೆಂದರೇ ಕ್ರೋಧದ ಉರಿ ಏಳುತ್ತಿತ್ತು.

ಅವನು ಕನಲಿಹೋಗಿದ್ದ. ವೈಯಕ್ತಿಕ ಕಾರಣಗಳಿಗಾಗಿ ತಕ್ಷಕನನ್ನು ದ್ವೇಷಿಸುತ್ತಿದ್ದ ಉತ್ತಂಕನಂಥವರು ಜನಮೇಜಯನಿಗೆ ಈ ವಿಷಯದಲ್ಲಿ ಜತೆಗೂಡಿದರು. ಈಗ, ಜನಮೇಜಯ, ಸರ್ವಸರ್ಪ ಸಂಹಾರಕನಾದ ಪರಮ ಹಿಂಸಾತ್ಮಕವಾದ ಸರ್ಪಯಾಗವನ್ನೇ ಮಾಡಲುದ್ಯುಕ್ತನಾದ. ಹೀಗೊಂದು ಯಾಗ ಉಂಟೆ? ‘ಪುರಾಣೇ ಪರಿಪಠ್ಯತೇ’ ಎಂದರು. ಪುರಾಣದಲ್ಲಿ ಹೇಳಲಾಗಿದೆಯಂತೆ.

ಜನಮೇಜಯನೇ ಇಂಥದೊಂದು ಯುಗವನ್ನು ಮಾಡಲು ಸಮರ್ಥನೆಂದೂ ವಿವರಿಸಲಾಗಿದೆಯಂತೆ! ಇದು ಸರಿಯಲ್ಲವೆಂದು ತಿಳಿದವರೂ ಕೂಡ ಧೈರ್ಯವಾಗಿ ಈ ಉಪಕ್ರಮವನ್ನು ಬೇಡವೆನ್ನಲಿಲ್ಲ. ಜನಮೇಜಯನ ಈ ಸರ್ಪದ್ವೇಷ ಒಂದು ರೀತಿಯಲ್ಲಿ ದುರ್ಯೋಧನನ ಪಾಂಡವದ್ವೇಷದಂತೆಯೇ ಇತ್ತು. ಪಾಂಡವರನ್ನು ಅರಗಿನಮನೆಯಲ್ಲಿ ಇರಿಸಿ ಜೀವಂತ ಸುಡಬೇಕೆಂದುಕೊಂಡಿದ್ದನಲ್ಲ – ದುರ್ಯೋಧನ. ಅಂಥದೇ ದ್ವೇಷ ಜನಮೇಜಯನಿಗೆ ಹಾವುಗಳ ಸಂತತಿಯ ಮೇಲೆ.

ಯುಗದ ಹೆಸರು ಬದಲಾಗಬಹುದು, ಯುಗ ಬದಲಾಗುವುದಿಲ್ಲವೆನಿಸುತ್ತದೆ. ಜೀವನಶೈಲಿ ಬದಲಾಗಬಹುದು, ಜೀವನ ಬದಲಾಗುವುದಿಲ್ಲವೆನಿಸುತ್ತದೆ. ಅಂತರಾಳದಲ್ಲಿ ಅವೇ ರಾಗದ್ವೇಷಗಳು ಅನಾದಿಯಿಂದಲೂ ಹರಿದುಬರುತ್ತಿವೆ.

ಜನಮೇಜಯನ ಸರ್ಪಯಾಗದ ಸಂದರ್ಭದಲ್ಲಿಯೇ ಮಹಾಭಾರತವು ಪ್ರವಚನ ಮಾಡಲ್ಪಟ್ಟಿತು – ವ್ಯಾಸಶಿಷ್ಯ ವೈಶಂಪಾಯನರಿಂದ. ಇದು ಸಾಮಾಜಿಕ ಸಂದರ್ಭ. ಇದು ಮಹಾಭಾರತದ ಎರಡನೆಯ ಆವೃತ್ತಿ. ಈ ಸಂದರ್ಭದಲ್ಲಿಯೇ ವೈಶಂಪಾಯನರ ಪ್ರವಚನವನ್ನು ಗಮನವಿಟ್ಟು ಕೇಳಿದ ಸೂತಪುರಾಣಿಕ, ಆಮೇಲೆ ಕೆಲಕಾಲಾನಂತರ ಶೌನಕಾದಿ ಮಹರ್ಷಿಗಳಿಗೆ ಮೂರನೆಯ ಸಲ ಪ್ರವಚನ ಮಾಡಿದ. ಇದು ಸಾಂಸ್ಕೃತಿಕ ಸಂದರ್ಭ.

ಸರ್ಪಯಾಗದ ಕಥೆ – ವಿವರಗಳು ಮಹಾಭಾರತೋತ್ತರ ಕಾಲದಲ್ಲಿ ನಡೆದುದಾದರೂ ಅದು ಆದಿಪರ್ವದಲ್ಲಿಯೇ ಸೇರ್ಪಡೆಗೊಂಡಿದೆ. ‘ಪುರಾಣೇ ಪರಿಪಠ್ಯತೇ’ ಎಂದಿದ್ದರಲ್ಲ – ಪ್ರಾಚೀನದಲ್ಲಿಯೇ ಹೇಳಲ್ಪಟ್ಟಿದೆ ಎಂದು. ಇವೆಲ್ಲದರ ಬೀಜ ಮೊದಲೇ ಇದೆ ಎಂದಂತಾಯಿತು. ಮೊದಲೇ ಇದ್ದುದು ಆದಿಪರ್ವದಲ್ಲಿಯೇ ಸೇರುವುದು ಉಚಿತವಲ್ಲವೆ?

ಅದು ಯುಗದ ಹಿಂದಿನ ಕತೆ. ಕದ್ರು–ವಿನತೆಯರು ಅಕ್ಕ–ತಂಗಿಯರು. ಈ ಹೆಸರುಗಳು ವೈದಿಕ ವಾಙ್ಮಯದಲ್ಲೇ ಬರುತ್ತವೆ. ಕದ್ರು ಹಾವುಗಳ, ವಿನತೆ ಹಕ್ಕಿಗಳ – ಕುಲಗಳ ತಾಯಂದಿರು. ಇಬ್ಬರೂ ಪ್ರಜಾಪತಿಯ ಮಕ್ಕಳಾಗಿ ಒಡಹುಟ್ಟುಗಳು. ಕಶ್ಯಪನ ಪತ್ನಿಯಾಗಿ ಸವತಿಯರು. ಕದ್ರು ಸಾವಿರ ಮೊಟ್ಟೆಗಳನ್ನಿಟ್ಟು ಅವು ಒಡೆದು ಮರಿಗಳಾಗಿ ಆಕೆ ಸಾವಿರ ಬಲಾಢ್ಯ ನಾಗಗಳ ತಾಯಿಯಾದಳು. ವಿನತಾ ಎರಡೇ ಮೊಟ್ಟೆಗಳನ್ನಿಟ್ಟಿದ್ದಳು.

ಅವು ಒಡೆದು ಹೊರ ಬರಲು ದೀರ್ಘಕಾಲ ಕಾಯಬೇಕಿತ್ತು. ಕಶ್ಯಪರೇ ಹಾಗೆಂದು ಹೇಳಿದ್ದರು. ಆದರೆ ಅಕ್ಕ ಕದ್ರು ಸಾವಿರ ಮಕ್ಕಳ ಹೆಮ್ಮೆಯ ತಾಯಿಯಾದ ಮೇಲೆ ವಿನತೆ ತಾಳ್ಮೆಗೆಟ್ಟಳು. ಒಂದು ಮೊಟ್ಟೆಯನ್ನು ಒಡೆದುಬಿಟ್ಟಳು. ಅಲ್ಲಿತ್ತು ದೇಹಾರ್ಧ ಮಾತ್ರ ವಿಕಸಿತವಾದ ವಿಕಲಾಂಗ ಶಿಶು. ಆಮೇಲೆ ಮಹಾಭಾರತದಲ್ಲಿ ಗಾಂಧಾರಿ, ಕುಂತಿಗೆ ತನಗಿಂತ ಮೊದಲು ಮಗುಹುಟ್ಟಿತೆಂದು ಕೇಳಿ, ಹೀಗೆಯೇ ತಾಳ್ಮೆಗೆಟ್ಟು, ತನ್ನೊಡಲನ್ನು ತಾನೇ ಕೆಣಕಿಕೊಂಡುಬಿಟ್ಟಳಲ್ಲ, ಈ ವಿನತೆ ಆ ಗಾಂಧಾರಿಯ ಪೂರ್ವರೂಪ.

ಹಾಗೆ ಹುಟ್ಟಿದ ವಿಕಲಾಂಗ ಶಿಶು – ಅರುಣ. ಅರುಣನಿಗೆ ತಾಯಿಯ ಮೇಲೆ ಸಿಟ್ಟುಕ್ಕಿತು. ತಾಯಿ ವಿನತೆಯನ್ನು, ದಾಸಿಯಾಗೆಂದು ಶಪಿಸಿದನಂತೆ. ತಾಯಿಯನ್ನು ಶಪಿಸಿದ ಮೊದಲ ಮಗುವಿರಬೇಕು – ಅರುಣ! ಆಮೇಲೆ ಎರಡನೆಯ ಮೊಟ್ಟೆ ಸಕಾಲದಲ್ಲೇ ಒಡೆದು ಅದರಿಂದ ‘ಪರಿಪೂರ್ಣಾವತಾರಿ ವಿನತಾಪುತ್ರ’ – ಗರುಡ ಹೊರಬಂದು ಅವನು ಅಮೃತವನ್ನೇ ತಂದು ತನ್ನ ತಾಯಿಯ ದಾಸ್ಯವನ್ನು ಕಳೆದದ್ದು – ಆದಿಪರ್ವದ ತುಂಬ ಹರಡಿಕೊಂಡಿರುವ ಕತೆ. ಅದಿರಲಿ.

ಒಮ್ಮೆ ಕದ್ರು–ವಿನತೆಯರಿಗೆ ವಿವಾದ ಉಂಟಾಯಿತು. ಸಮುದ್ರಮಥನ ಕಾಲದಲ್ಲಿ ಮೂಡಿಬಂದ ‘ಉಚ್ಚೈಶ್ರವಸ್‌’ ಎನ್ನುವ ಹಾಲ್ಬಿಳುಪಿನ ಕುದುರೆಯನ್ನು ಈ ಅಕ್ಕತಂಗಿಯರು ದೂರದಿಂದ ನೋಡಿದ್ದರು. ಕುದುರೆಯ ಮೈ ಇಡೀ ಅಚ್ಚ ಬಿಳಿ ಎಂದಳು ವಿನತೆ. ಆದರೆ ಕುದುರೆಯ ಬಾಲ ಮಾತ್ರ ಕಪ್ಪಗಿದೆ ಎಂದವಳು ಕದ್ರು. ತಮ್ಮ ಮಾತು ಸುಳ್ಳಾದವರು – ಗೆದ್ದವರ ದಾಸಿಯಾಗಿರಬೇಕೆಂದು ಪಣವಿಟ್ಟು ಈ ಅಕ್ಕತಂಗಿಯರು ವಾದಿಸಿದರು. ದಾಸ್ಯದ ಪಣ ಇತಿಹಾಸ ಪೂರ್ವಕಾಲದಿಂದ ಹರಿದುಬಂದಿದೆ. ಅದು ಮೂಲಭೂತವಾದದ್ದೇ ಇರಬೇಕು!

ಕದ್ರುವಿಗೆ ತನ್ನವಾದ ತಪ್ಪೆಂದು ತಿಳಿದಿತ್ತು. ಆಕೆ ತನ್ನ ಸಾವಿರ ಮಕ್ಕಳನ್ನು ಕರೆದಳು. ಕುದುರೆಯ ಬಾಲಕ್ಕೆ ಸುತ್ತಿಕೊಂಡು ಅದನ್ನು ಕಪ್ಪಾಗಿಸಿ ತೋರಿಸಿ – ಎಂದಳು. ಮುಗ್ಧಮಕ್ಕಳು ಇದು ಸರಿಯೇನಮ್ಮ ಎಂದು ಕೇಳಿದಳು. ಕದ್ರು ಮಕ್ಕಳ ಬಗ್ಗೆ ಖತಿಗೊಂಡಳು. ಭವಿಷ್ಯದ ಒಂದು ದಿನ ಜನಮೇಜಯನ ಸರ್ಪಯಾಗದಲ್ಲಿ ನೀವು ಉರಿದುಹೋಗುವಿರಿ – ಎಂದು ಘೋರವಾಗಿ ಶಪಿಸಿದಳು.

ಹೆದರಿದ ನಾಗಗಳು, ಕುದುರೆಯ ಬಾಲವನ್ನು ಕಪ್ಪಾಗಿಸಿ ತಾಯಿಯನ್ನು, ಪಣವನ್ನು ಗೆಲ್ಲಿಸಿದವೇನೋ ನಿಜ. ಆದರೆ ತಾಯಿಯ ಮಾತಿನ ಕಾವು ಕಾಲದ ಮೊಟ್ಟೆಯನ್ನೊಡೆದು ತಮ್ಮನ್ನು ಮರಣದ ಬೆಂಕಿಗೆ ತಳ್ಳುವುದನ್ನು ಮಕ್ಕಳು ನಂಬದೆ ಇರುವಂತಿರಲಿಲ್ಲ. ಗೆಲವಿನ ಹಿಂದೆ ಸೋಲು, ಯಜ್ಞದ ಹಿಂದೆ ಮಾಟ, ಒಳಿತಿನ ಹಿಂದೆ ಕೆಡುಕು, ಕುದುರೆಯ ಬಾಲದಲ್ಲಿ ಹೆಣೆದುಕೊಂಡಿರುವ ಹಾವು – ಇದು ಮಹಾಭಾರತಕ್ಕೇ ವಿಶಿಷ್ಟವಾದ ಚಿತ್ರವಾಗಿದೆ.

The Mahabharatha sees a vice behind every virtue, a snake behind every horse and a doomsday behind every victory’. ಇದು Wendy Doniger ಮಾತು. ನಿಜ, ಇವೆಲ್ಲ ಇವೆ. ಆದರೆ ಮಹಾಭಾರತ ಇಷ್ಟೇ ಅಲ್ಲ. ಮಹಾಭಾರತದಲ್ಲಿ ನೈಜ ತಾಯ್ತನವೆಲ್ಲಿದೆ ಎಂಬ ಆರ್ತ ಹುಡುಕಾಟವಿದೆ.

ಕದ್ರು ತನ್ನ ಮಕ್ಕಳಿಗೆ ಸುಟ್ಟುರಿದು ಹೋಗಿರೆನ್ನುವ ಶಾಪವಿತ್ತಳು. ತನ್ನ ಮೊಟ್ಟೆ–ಮರಿಗಳನ್ನು ತಾನೇ ತಿನ್ನುವ ಹಾವು! ವಿನತೆ ತನ್ನ ಮೊಟ್ಟೆ ಪೂರ್ಣ ಬಲಿಯುವ ಮುನ್ನವೇ ಒಡೆದಳು. ಕಾವು ಕೂರುವ ತಾಳ್ಮೆಯನ್ನು ಕಳೆದುಕೊಂಡ ಹಕ್ಕಿ! ಗಾಂಧಾರಿ ತನ್ನ ಹೊಟ್ಟೆ ತಾನೇ ಕೆಣಕಿಕೊಂಡಳು.

ಆ ಹೊತ್ತಿನಲ್ಲಿ ಅವಳು ನಿಜವಾಗಿಯೂ ಕುರುಡಿಯಾದಳು; ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕುರುಡಾದುದಲ್ಲ. ಸಿಂಹಾಸನವನ್ನು ಆಸೆಯಿಂದ ದಿಟ್ಟಿಸಿ ನೋಡಿದರೆ ತಾಯಂದಿರೂ ಕುರುಡಾಗುವರು! ಸ್ವಯಂ ವ್ಯಾಸರಿಗೇ ಬಾಲ್ಯವಿರಲಿಲ್ಲ. ಅವರು ತಂದೆ ಪರಾಶರರ ಜೊತೆ ಬೆಳೆದವರು; ತಾಯ ಒಡನಾಟವಿರಲಿಲ್ಲ. ಅವರಿಗೆ ತಾಯಹಂಬಲ ಅಪಾರವಾಗಿತ್ತು.

ವ್ಯಾಸರ ಮೈಯಗಂಧ ತನ್ನ ತಾಯಿಯ ಮೈಯ ಗಂಧದಂತೇ ಇತ್ತು; ಮತ್ಸ್ಯಗಂಧ! ಪರಾಶರರ ಮೈ ಗಂಧವಲ್ಲ! ಪರಾಶರರು ತನ್ನ ತಾಯಿಯ ಮೈಯ ಗಂಧ ಬದಲಿಸಿ, ‘ಯೋಜನಗಂಧಿ’ಯನ್ನಾಗಿ ಮಾಡಿದ್ದನ್ನೇ ಆಳದಲ್ಲಿ ಒಪ್ಪಿಕೊಳ್ಳಲಿಲ್ಲವೆಂಬಂತೆ. ವ್ಯಾಸರು ಹಸ್ತಿನೆಯ ಅರಮನೆಗೆ ಬಂದಾಗಲೆಲ್ಲ ಪರಾಶರಪೂರ್ವದ ತನ್ನ ಮೈಯ ಗಂಧ ಗಾಳಿಯಲ್ಲಿ ಸುಳಿದಂತಾಗಿ, ತಾಯಿ ಸತ್ಯವತಿಗೆ (ಮತ್ಸ್ಯಗಂಧಿ) ತನ್ನ ಬಾಲ್ಯವೇ ಮರಳಿ ದೊರೆಕೊಳ್ಳುತ್ತಿತ್ತು!

ಸತ್ಯವತೀ–ವ್ಯಾಸರ ಈ ತಾಯಿ–ಮಕ್ಕಳ ಸಂಬಂಧ ಹೃದಯಂಗಮವಾದುದು. ಗಾಂಧಾರಿ ಚೆಲ್ಲಿದ ಗರ್ಭಶಕಲಗಳನ್ನು ತುಪ್ಪದ ಕೊಡಗಳಲ್ಲಿಟ್ಟು ವ್ಯಾಸರು, ಮಹಾಕವಿ ತನ್ನ ಪಾತ್ರಗಳನ್ನು ಪೋಷಿಸುವಷ್ಟು ಜತನದಿಂದ, ಬೆಳೆಸಿದರೆನ್ನುವ ಮಾತು ವ್ಯಾಸರ ತಾಯ್ತನವನ್ನೇ ಸೂಚಿಸುತ್ತದೆ!
ಇವೆಲ್ಲ ಜನಾಂಗವನ್ನೇ ನಾಶ ಮಾಡುವ ಘೋರ ಆಭಿಚಾರಿಕ ಇತಿಹಾಸದ ನಡುವೆ!

ಇತ್ತ – ಸರ್ಪಗಳಿಗೆ ತಿಳಿದುಬಿಟ್ಟಿತ್ತು. ಈ ಲೋಕ ತಮ್ಮ ಪಾಲಿಗೆ ಅರಗಿನ ಮನೆ ಇದ್ದಂತಿದೆ. ಮಹಾದುರಂತವೊಂದು ಎದುರಾಗಲಿದೆ. ನಮ್ಮೊಳಗಿನ ನೋವನ್ನು ತಿಳಿಯಬಲ್ಲ ಸೂಕ್ಷ್ಮಜ್ಞರು – ಸಂವೇದನಾಶೀಲರು ಎಲ್ಲೂ ಇದ್ದಂತಿಲ್ಲ. ಅಲ್ಲದೆ ಇನ್ನೊಂದು ಸತ್ಯವೂ ಸರ್ಪಗಳಿಗೆ ಹೊಳೆದಿತ್ತು. ನಮ್ಮ ನೋವು ನಮ್ಮವರಿಗಲ್ಲದೆ; ನಮ್ಮೊಳಗಿನವರಿಗಲ್ಲದೆ; ರಕ್ತ ಹಂಚಿಕೊಂಡವರಿಗಲ್ಲದೆ ಹೆರವರಿಗೆ ಎಂದೂ ತಿಳಿಯದು ಎಂಬ ಸತ್ಯ! ಹಾವಿನ ಹೆಜ್ಜೆ ಹಾವಿಗೇ ಗೊತ್ತು – ಎಂದಂತೆ. ಆದುದರಿಂದ ಒಳಗಿನಿಂದ ನಮ್ಮವನಾಗಿ ಲೋಕದೊಡನೆ ವ್ಯವಹರಿಸಬಲ್ಲವನೊಬ್ಬ ಬೇಕು.

ಸರ್ಪಗಳ ಉಳಿವು ಲೋಕದ ಉಳಿವಿಗೂ ಕಾರಣವೆಂದು ತೋರಿಸಬಲ್ಲವನೊಬ್ಬ ಬೇಕು. ಲೋಕದ ಬದುಕಿಗೂ ಹಾವುಗಳ ಬದುಕಿಗೂ ಸಂಬಂಧವಿದೆ ಎಂದು ತನ್ನ ವ್ಯಕ್ತಿತ್ವದಲ್ಲಿಯೇ ತೋರಿಸಿಕೊಡುವವನೊಬ್ಬ ಬೇಕು. ಉಭಯಕುಲ – ಮನುಷ್ಯಕುಲ ಮತ್ತು ಸರ್ಪಕುಲ – ಉದ್ಧಾರಕನೊಬ್ಬ ಬೇಕು. ಇಂಥ ಆಳವಾದ ತಿಳಿವಳಿಕೆಯೊಂದು ಸರ್ಪಗಳಿಗೆ ಉಂಟಾಯಿತು.

ಈ ತಿಳಿವಳಿಕೆಯನ್ನು ಆಗುಮಾಡಿಸುವುದಕ್ಕಾಗಿ ವಿಶಿಷ್ಟ ಪರಿಕಲ್ಪನೆಯೊಂದು ಮಹಾಭಾರತದಲ್ಲಿ ಮೂಡಿಬಂತು. ಇದು ಜಾನಪದೀಯ ಕಲ್ಪನೆಯೂ ಹೌದು. ಅದೆಂದರೆ ಗಂಡಿನ ಹೆಸರೂ ಹೆಣ್ಣಿನ ಹೆಸರೂ ಒಂದೇ ಆಗಿರಬೇಕೆನ್ನುವ ಪರಿಕಲ್ಪನೆ. ಎರಡು ಜೀವಗಳ ಹೆಸರು ಒಂದೇ ಆಗಿರಬೇಕು.

ಗಂಡ–ಹೆಂಡತಿಯರ ಹೆಸರು, ತಂದೆ–ತಾಯಂದಿರ ಹೆಸರು ಒಂದೇ ಆಗಿರಬೇಕು. ಸರ್ಪ–ಮನುಷ್ಯ ಈ ಎರಡು ಕುಲದ ಹೆಣ್ಣು–ಗಂಡಿನ ಹೆಸರು ಒಂದೇ ಆಗಿರಬೇಕು. ಒಂದು ಹೆಸರು ಹಿಡಿದು ಕರೆದರೆ ಈ ಎರಡು ಜೀವಗಳೂ ಓಗೊಡುವಂತಾಗಬೇಕು.

ಸರ್ಪಯಾಗದ ಸಂದರ್ಭವನ್ನು ಗಮನಿಸುತ್ತ ಹೇಳುವುದಾದರೆ, ಯಾಗದ ಬೆಂಕಿಗೆ ಇಂಥ ಹೆಸರಿನ ಜೀವ ಆಹುತಿಯಾಗಲಿ ಎಂದು ಉದ್ಗಾತೃವು ತಾರಸ್ವರದಲ್ಲಿ ಆ ಹೆಸರನ್ನು ಕರೆದರೆ, ಅದು ಮನುಷ್ಯಜೀವದ ಹೆಸರೂ ಆಗಿರುವುದರಿಂದ ತಾಂತ್ರಿಕವಾಗಿ ಆ ಮನುಷ್ಯನನ್ನೇ ಕರೆದಂತೆ ಕೂಡ ಆಗಿ, ಸರ್ಪಮೇಧವು ನರಮೇಧವೂ ಆಗಿಬಿಡುವಂಥ ಅನೂಹ್ಯ ಸಂಭವ ಎದುರಾಗಬೇಕು! ಇದು ನಾಮದ ಬಲ! ಹೆಸರು ವ್ಯಕ್ತಿಗಳನ್ನೂ ಬೇರ್ಪಡಿಸುವುದು ಮಾತ್ರವಲ್ಲ, ಜನಾಂಗಗಳನ್ನು ಬೆಸೆಯಬಲ್ಲುದು.

ಹಾಗೆ ಮೂಡಿ ಬಂದ ಹೆಸರು – ‘ಜರತ್ಕಾರು’. ‘ಯಾಯಾವರ’ ಪಂಗಡಕ್ಕೆ ಸೇರಿದವನು ಈ ‘ಜರತ್ಕಾರು’. ಯಾಯಾವರರೆಂದರೆ ಎಲ್ಲೂ ನೆಲೆಯೂರದ ಅಲೆಮಾರಿ ಬ್ರಾಹ್ಮಣಪಂಗಡ. ಈ ಚರಂತಿಜೀವನದಲ್ಲೇ ಮದುವೆ; ಮಕ್ಕಳು – ಎಲ್ಲ ಸಂಸಾರವೂ. ಜರತ್ಕಾರು ಮಾತ್ರ ವಿರಕ್ತನಿದ್ದ. ಮದುವೆಗೆ ಒಲ್ಲೆನೆಂದಿದ್ದ. ಆಗ ಪೂರ್ವಜರು ಹೇಳಿದರಂತೆ – ಇದು ತಲೆಕೆಳಗಾದ ಬದುಕು, ನಿನ್ನ ಈ ನಿಲುವಿನಿಂದಾಗಿ ನಾವೂ ತಲೆಕೆಳಗಾಗಿ ಬದುಕಬೇಕಾಗಿ ಬಂದಿದೆ. ನಮ್ಮ ಜನಾಂಗವೇ ಕೊನೆಗೊಳ್ಳುತ್ತಿದೆ.

ನೀನು ವಿವಾಹಿತನಾಗಿ ಮಕ್ಕಳನ್ನು ಪಡೆದು ನಮ್ಮೆಲ್ಲರನ್ನೂ ಉದ್ಧರಿಸು – ಎಂದರಂತೆ. ಆಗ, ಜರತ್ಕಾರು – ತನ್ನದೇ ಹೆಸರಿನ ಹೆಣ್ಣಿಗೆ ಮಾತ್ರ ನಾನು ಒಲಿಯುವವನು ಎಂದಿದ್ದ. ಸರ್ಪ ರಾಜನಾದ ವಾಸುಕಿಗೆ ಇದು ತಿಳಿಯಿತು. ವಾಸುಕಿಯ ತಂಗಿಯೊಬ್ಬಳಿದ್ದಳು – ಅವಳ ಹೆಸರು ‘ಜರತ್ಕಾರು!’

‘ಜರತ್‌’ ಎಂದರೆ ಮುದಿಯಾಗುವ ಸ್ವಭಾವದ್ದು ಎಂದು. ‘ಕಾರು’ ಎಂದಾಗ ಬೇರೆ ಬೇರೆ ಅರ್ಥಗಳಿದ್ದರೂ – ‘ದೇಹ’ ಎಂಬರ್ಥವನ್ನಿಟ್ಟುಕೊಂಡರೆ, ಮುಪ್ಪಾಗುವ ದೇಹ ಎಂದು; ಒಂದು ಬದಿಯಲ್ಲಿ ವಿರಕ್ತಿಯನ್ನುಂಟುಮಾಡುವ ಪದವಿದು. ಸರ್ಪಗಳಿಗೆ ಸಂಬಂಧಿಸಿ ನೋಡುವಾಗ, ‘ಜರತ್ಕಾರು’ ಎಂಬ ಪದ, ಪೊರೆ ಕಳಚುವ ದೇಹ ಎಂಬರ್ಥವನ್ನು ಕೊಟ್ಟು – ಮತ್ತೆ ಮತ್ತೆ ಹೊಸತಾಗುವ ಸ್ವಭಾವದ್ದು ಎಂದೂ ಹೊಳೆಯಿಸುತ್ತದೆ! ಈ ಎರಡು ಅರ್ಥಗಳೂ ಪರಸ್ಪರ ವಿರೋಧಿಸದೆ – ಒಂದರೊಳಗೊಂದು ತಳಕು ಹಾಕಿಕೊಂಡಿವೆ – ಹಾವುಗಳಂತೆ!

ಹೀಗೆ ವಾಸುಕಿಯ ತಂಗಿ ಜರತ್ಕಾರುವಿನೊಡನೆ – ಜರತ್ಕಾರುವಿನ ಮದುವೆಯಾಯಿತು. ತಾಯ್ತನದ ಹುಡುಕಾಟವು ತಾಯ್ತಂದೆಯರ ಏಕನಾಮದ ತಾದಾತ್ಮ್ಯದಲ್ಲಿ ಒಂದು ಮಟ್ಟದ ಅರ್ಥಪೂರ್ಣತೆಯನ್ನು ಪಡೆಯಿತು. ಈ ತಾಯಿ–ತಂದೆಯರ ಮಗನೇ ‘ಆಸ್ತೀಕ’. ದೇವರು ‘ಇದ್ದಾನೆ’ ಎನ್ನುವುದು ಬರಿಯ ಒಂದು ಪದವಲ್ಲ. ಅದೊಂದು ಭರವಸೆ. ಹಾಗೆ ‘ಆಸ್ತೀಕ’ ಎಂದಾಗ ಇವನು ನಮ್ಮವನೆನ್ನುವ ಒಂದು ತುಂಬು ಭರವಸೆ – ಸರ್ಪಗಳಿಗೆ. ‘ಇರುವಿಕೆ’ಯೂ ಭರವಸೆ. ‘ಇರುವಿಕೆ’ಯೇ ಪ್ರೀತಿ. ‘ಇರುವಿಕೆ’ಯೇ ನಿರ್ಭೀತಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT