ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಲಾಖ್ ಮಸೂದೆ: ನ್ಯಾಯ ದಕ್ಕುವುದೇ?

Last Updated 26 ಡಿಸೆಂಬರ್ 2017, 20:42 IST
ಅಕ್ಷರ ಗಾತ್ರ

ತ್ರಿವಳಿ ತಲಾಖ್‌ಗೆ ಸಂಬಂಧಿಸಿದಂತೆ ಆಗಸ್ಟ್ 22ರಂದು ಸುಪ್ರೀಂ ಕೋರ್ಟ್ ನೀಡಿದ ತೀರ್ಪು ಚಾರಿತ್ರಿಕ. ಮುಸ್ಲಿಂ ಮಹಿಳೆಯರ ವೈವಾಹಿಕ ಬದುಕಲ್ಲಿ ಅಭದ್ರತೆಯನ್ನು ತುಂಬುತ್ತಿದ್ದ ತ್ರಿವಳಿ ತಲಾಖ್ ‘ಅಸಾಂವಿಧಾನಿಕ’ ಎಂದು ಐವರು ನ್ಯಾಯಮೂರ್ತಿಗಳ ಪೀಠ 3:2 ಅನುಪಾತದಲ್ಲಿ ಬಹುಮತದೊಂದಿಗೆ ತ್ರಿವಳಿ ತಲಾಖ್ ರದ್ದುಪಡಿಸಿತ್ತು. ಜೊತೆಗೆ ಆರು ತಿಂಗಳೊಳಗೆ ಈ ಸಂಬಂಧದಲ್ಲಿ ಕಾನೂನು ರಚಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಕೋರ್ಟ್ ಸೂಚಿಸಿತ್ತು.

ಈಗ ಕಾನೂನು ರಚನೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಮುಸ್ಲಿಂ ಮಹಿಳೆಯರ (ವಿವಾಹ ಹಕ್ಕುಗಳ ರಕ್ಷಣೆ) ಮಸೂದೆಗೆ ಕೇಂದ್ರ ಸಚಿವ ಸಂಪುಟ ಡಿಸೆಂಬರ್ 15ರಂದು ಅನುಮೋದನೆ ನೀಡಿದೆ. ಈ ಮಸೂದೆ, ಈಗ ನಡೆಯುತ್ತಿರುವ ಸಂಸತ್‌ನ ಚಳಿಗಾಲದ ಅಧಿವೇಶನದಲ್ಲಿ ನಾಳೆ (ಗುರುವಾರ) ಲೋಕಸಭೆಯಲ್ಲಿ ಮಂಡನೆಯಾಗಲಿದೆ. ತ್ರಿವಳಿ ತಲಾಖ್ ಮೂಲಕ ಪತ್ನಿಗೆ ವಿಚ್ಛೇದನ ನೀಡುವ ಮುಸ್ಲಿಂ ಪುರುಷನಿಗೆ ಮೂರು ವರ್ಷಗಳ ಜೈಲು ಶಿಕ್ಷೆ ಹಾಗೂ ದಂಡ ವಿಧಿಸಲು ಈ ಮಸೂದೆಯಲ್ಲಿ ಉದ್ದೇಶಿಸಲಾಗಿದೆ.

ಜೈಲು ಶಿಕ್ಷೆ ನೀಡಲು ಅವಕಾಶ ಇರುವ ಅಂಶ ಈಗ ಹಲವು ನೆಲೆಗಳಲ್ಲಿ ಚರ್ಚೆಯಾಗುತ್ತಿದೆ. ಕೆಲವರು ಈ ಅಂಶವನ್ನು ಬೆಂಬಲಿಸಿದರೆ ಮತ್ತೆ ಕೆಲವರು ಇದನ್ನು ತೀವ್ರವಾಗಿ ವಿರೋಧಿಸುತ್ತಿದ್ದಾರೆ. ಅದರಲ್ಲೂ ಮುಸ್ಲಿಂ ಮಹಿಳೆಯರ ಜೊತೆ ಕೆಲಸ ಮಾಡುತ್ತಿರುವ 15 ಸಂಘಟನೆಗಳ ಕೂಟವಾಗಿರುವ ‘ಬೆಬಾಕ್ ಕಲೆಕ್ಟಿವ್’ (ನಿರ್ಭೀತ ದನಿಗಳ ಕೂಟ), ತಲಾಖ್ ಆಚರಣೆಯನ್ನು ಕ್ರಿಮಿನಲ್ ವ್ಯಾಖ್ಯೆಗೆ ಒಳಪಡಿಸುವುದನ್ನು ತೀವ್ರವಾಗಿ ವಿರೋಧಿಸಿದೆ. ತ್ರಿವಳಿ ತಲಾಖ್‌ನಿಂದ ನೊಂದಿದ್ದ ಉತ್ತರಾಖಂಡದ ಮಹಿಳೆ ಶಾಯರಾ ಬಾನೊ ಅವರು ಸುಪ್ರೀಂ ಕೋರ್ಟ್‌ನಲ್ಲಿ ನಡೆಸಿದ ಕಾನೂನು ಹೋರಾಟಕ್ಕೆ ’ಬೆಬಾಕ್ ಕಲೆಕ್ಟಿವ್’ ಸಹ ಬೆಂಬಲ ನೀಡಿತ್ತು. ಈಗ ಇದೇ ಸಂಘಟನೆ ಕೇಂದ್ರದ ಮಸೂದೆಯನ್ನು ವಿರೋಧಿಸುತ್ತಿದೆ. ‘ವೈಯಕ್ತಿಕ ಕಾನೂನು ನಾಗರಿಕ ಕಾನೂನು. ಹೀಗಾಗಿ ನಾಗರಿಕ ಕಾನೂನನ್ನು ಹೇಗೆ ಕ್ರಿಮಿನಲ್ ಅಪರಾಧ ವ್ಯಾಖ್ಯೆಗೆ ತರುತ್ತೀರಿ?’ ಎಂಬುದು ‘ಬೆಬಾಕ್ ಕಲೆಕ್ಟಿವ್‌’ನ ಹಸೀನಾ ಖಾನ್ ಅವರ ಪ್ರಶ್ನೆ.

ಈ ಕರಡು ಮಸೂದೆಯನ್ನು ರಚಿಸುವ ಮೊದಲು ಮುಸ್ಲಿಂ ಸಂಘಟನೆಗಳ ಜೊತೆ ಸಮಾಲೋಚನೆ ನಡೆಸಿಲ್ಲ ಎಂದು ಲೋಕಸಭೆಗೆ ಲಿಖಿತ ಉತ್ತರದಲ್ಲಿ ಕಳೆದ ವಾರ ಕೇಂದ್ರ ಕಾನೂನು ಖಾತೆ ರಾಜ್ಯ ಸಚಿವ ಪಿ.ಪಿ. ಚೌಧರಿ ಉತ್ತರಿಸಿದ್ದಾರೆ.

ತ್ರಿವಳಿ ತಲಾಖ್ ಪದ್ಧತಿಯನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದ ಮೇಲೂ ಇದೇ ವಿಧಾನದಲ್ಲಿ ಪತ್ನಿಯರಿಗೆ ವಿಚ್ಛೇದನ ನೀಡಿದ 66 ಪ್ರಕರಣಗಳು ವರದಿಯಾಗಿವೆ. ಹೀಗಾಗಿ, ಸುಪ್ರೀಂ ಕೋರ್ಟ್ ಆದೇಶವನ್ನು ಪರಿಣಾಮಕಾರಿಯಾಗಿ ಜಾರಿಗೆ ತರಲು ಸರ್ಕಾರ ಕ್ರಮ ಕೈಗೊಳ್ಳಬೇಕಾದ ಅಗತ್ಯ ಮನಗಾಣಲಾಯಿತು ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್ ಹೇಳಿದ್ದಾರೆ. ಇಲ್ಲಿ, ಸರ್ಕಾರದ ಕ್ರಮ ಎಂದರೆ ಮಸೂದೆಯ ಮಂಡನೆ. ಲಿಂಗತ್ವ ನ್ಯಾಯ, ಲಿಂಗತ್ವ ಸಮಾನತೆ ಹಾಗೂ ಮಹಿಳೆಯ ಘನತೆಯನ್ನು ಈ ಉದ್ದೇಶಿತ ಮಸೂದೆ ಎತ್ತಿಹಿಡಿಯಲು ನೆರವಾಗಲಿದೆ. ಆದರೆ, ಸರ್ಕಾರ ಪ್ರತಿಪಾದಿಸಿಕೊಳ್ಳುತ್ತಿರುವಂತಹ ‘ವಿವಾಹಿತ ಮುಸ್ಲಿಂ ಮಹಿಳೆಯರ ಲಿಂಗತ್ವ ನ್ಯಾಯ ಹಾಗೂ ಲಿಂಗತ್ವ ಸಮಾನತೆ ನಿಜಕ್ಕೂ ಇಲ್ಲಿ ಮುಖ್ಯವಾಗಿದೆಯೇ?’ ಎಂಬುದು ‘ಬೆಬಾಕ್ ಕಲೆಕ್ಟಿವ್‌’ ಪ್ರಶ್ನೆ. ಮುಸ್ಲಿಂ ಪುರುಷರನ್ನು ಬಂಧಿಸುವ ಕ್ರಮ ಮುಸ್ಲಿಂ ಸಮುದಾಯದಲ್ಲಿ ಈಗಿರುವ ಅಭದ್ರತೆ ಹಾಗೂ ಪರಕೀಯ ಪ್ರಜ್ಞೆ ಹೆಚ್ಚಿಸುತ್ತದೆ ಎಂಬುದು ಈ ಸಂಘಟನೆಯ ವಾದ. ‘ಈಗಿರುವ ಮುಸ್ಲಿಂ ವಿವಾಹ ಕಾಯಿದೆ, 1939ಕ್ಕೆ ತಿದ್ದುಪಡಿ ತರಬೇಕು. ಈ ಕಾಯಿದೆ ಪ್ರಕಾರ, ವಿಚ್ಛೇದನಕ್ಕಾಗಿ ಮಹಿಳೆ ನ್ಯಾಯಾಲಯ ಸಂಪರ್ಕಿಸುವುದು ಅವಶ್ಯ. ಇದನ್ನು ಲಿಂಗನಿರಪೇಕ್ಷಗೊಳಿಸಿ, ವಿಚ್ಛೇದನಕ್ಕಾಗಿ ಪುರುಷರೂ ನ್ಯಾಯಾಲಯವನ್ನು ಸಂಪರ್ಕಿಸುವಂತೆ ಮಾಡಬೇಕು’ ಎಂಬುದು ಹಸೀನಾ ಖಾನ್ ಅವರ ಆಗ್ರಹ.

ತ್ರಿವಳಿ ತಲಾಖ್ ಪದ್ಧತಿಯನ್ನು ಅಪರಾಧ ವ್ಯಾಪ್ತಿಗೆ ತರುವುದರಿಂದ ಆಗಬಹುದಾದ ಪರಿಣಾಮಗಳ ಬಗ್ಗೆ ಹೆಚ್ಚಿನ ಗಮನ ನೀಡಿಲ್ಲವೇ ಎಂಬುದು ಪ್ರಶ್ನೆ. ಕರಡು ಮಸೂದೆ ರಚನೆಗೆ ಮುಂಚೆ ಅನುಸರಿಸಬೇಕಾದ ಪ್ರಕ್ರಿಯೆಗಳು ನಡೆದಿಲ್ಲ ಎಂಬುದು ವಾಸ್ತವ. ಮಹಿಳಾ ಸಂಘಟನೆಗಳು ಅಥವಾ ಇತರ ನಾಗರಿಕ ಗುಂಪುಗಳ ಜೊತೆ ಸಮಾಲೋಚಿಸಿ ಅಭಿಪ್ರಾಯ ಪಡೆದುಕೊಳ್ಳದೆಯೇ ಮಸೂದೆ ರೂಪಿಸಲಾಗಿದೆ. ಹೀಗಾಗಿ ವ್ಯಾಪಕ ನೆಲೆಯಲ್ಲಿ ಮುಸ್ಲಿಂ ಮಹಿಳೆಯರ ಸಮಸ್ಯೆಗಳನ್ನು ನಿರ್ವಹಿಸುವಲ್ಲಿ ಮಸೂದೆ ವಿಫಲವಾಗಿದೆ ಎಂಬಂತಹ ಟೀಕೆಗಳು ವ್ಯಕ್ತವಾಗುತ್ತಿವೆ.

ಅಭಿಪ್ರಾಯ ಪಡೆದುಕೊಳ್ಳುವುದಕ್ಕಾಗಿ ಕರಡು ಮಸೂದೆಯ ಪ್ರತಿಯನ್ನು ಸಂಬಂಧಿಸಿದ ಸಚಿವಾಲಯಗಳಿಗೆ ಕಳುಹಿಸಲಾಗಿತ್ತು. ಎಲ್ಲಾ ಸಚಿವಾಲಯಗಳು ಮಸೂದೆಗೆ ಒಪ್ಪಿಗೆ ಸೂಚಿಸಿವೆ.

ಮಸೂದೆ ರಚನೆಗೆ ರೂಪಿಸಲಾಗಿದ್ದ ಅಂತರ ಸಚಿವಾಲಯ ತಂಡದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ಇರಲಿಲ್ಲ. ಆದರೆ ಈ ಮಸೂದೆಗೆ ಪೂರ್ಣ ಬೆಂಬಲವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವಾಲಯ ವ್ಯಕ್ತಪಡಿಸಿದೆ. ಸಚಿವರ ತಂಡದಲ್ಲಿದ್ದವರ ಪೈಕಿ ಕೇಂದ್ರ ವಿದೇಶಾಂಗ ವ್ಯವಹಾರ ಸಚಿವೆ ಸುಷ್ಮಾ ಸ್ವರಾಜ್, ಹಣಕಾಸು ಸಚಿವ ಅರುಣ್ ಜೇಟ್ಲಿ, ಕೇಂದ್ರ ಕಾನೂನು ಸಚಿವ ರವಿಶಂಕರ ಪ್ರಸಾದ್ ಮುಖ್ಯರು. ತಂಡದ ನೇತೃತ್ವ ವಹಿಸಿದ್ದವರು ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್.

ತ್ರಿವಳಿ ತಲಾಖ್‌ನಿಂದ ಮಹಿಳೆಗೆ ವಿಚ್ಛೇದನ ನೀಡುವ ಪದ್ಧತಿಯಲ್ಲಿ ವ್ಯಕ್ತವಾಗುವ ಕ್ರೌರ್ಯ, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498ಎ ವ್ಯಾಪ್ತಿಗೆ ಬರುತ್ತದೆ. ಹೀಗಾಗಿ ಇದಕ್ಕೆ ಪ್ರತ್ಯೇಕ ಕಾನೂನೇಕೆ ಎಂಬಂತಹ ಪ್ರಶ್ನೆಯನ್ನೂ ಹಲವರು ಕೇಳುತ್ತಿದ್ದಾರೆ.

ಮುಸ್ಲಿಂ ಮಹಿಳೆಯರ ಹಕ್ಕುಗಳನ್ನು ಬಲಪಡಿಸುವ ಅಂಶಗಳನ್ನು ಕ್ರೋಡೀಕರಿಸಿದ ಕಾನೂನಿಗಾಗಿ ಮುಸ್ಲಿಂ ಮಹಿಳಾ ಗುಂಪುಗಳು ಒತ್ತಾಯಿಸುತ್ತಿವೆ. ‘ಮುಸ್ಲಿಂ ಕುಟುಂಬ ಕಾನೂನು’ ಕುರಿತ ಕರಡು ಮಸೂದೆಯನ್ನು ಈಗಾಗಲೇ ಭಾರತೀಯ ಮುಸ್ಲಿಂ ಮಹಿಳಾ ಆಂದೋಲನ (ಬಿಎಂಎಂಎ) ಸಿದ್ಧಪಡಿಸಿದೆ. ಇದರ ಹಿಂದೆ ಸುಮಾರು ಒಂಬತ್ತು ವರ್ಷಗಳ ಶ್ರಮವಿದೆ. ಇದಕ್ಕಾಗಿ ವಿದ್ವಾಂಸರು, ಸಂಶೋಧಕರು, ಧಾರ್ಮಿಕ ನಾಯಕರು ಸೇರಿದಂತೆ ಸುಮಾರು ಒಂದು ಲಕ್ಷ ಜನರ ಸಲಹೆಗಳನ್ನು ಪಡೆದುಕೊಳ್ಳಲಾಗಿದೆ ಎನ್ನುತ್ತಾರೆ ಬಿಎಂಎಂಎ ಸಂಸ್ಥಾಪಕಿ, ಅಹಮದಾಬಾದ್ ಮೂಲದ ಝಾಕಿಯಾ ಸೋಮನ್. ‘ಕೆಂದ್ರ ಸರ್ಕಾರ ಮಸೂದೆ ರೂಪಿಸಿರುವುದು ಸ್ವಾಗತಾರ್ಹ ನಡೆ. ಆದರೆ ಮುಸ್ಲಿಂ ವಿವಾಹಕ್ಕೆ ಸಂಬಂಧಿಸಿದಂತೆ ನಿಖಾ ಹಲಾಲಾ (ವಿಚ್ಛೇದಿತ ಪತ್ನಿ ಮತ್ತೆ ಮೊದಲ ಪತಿ ಬಳಿಗೇ ಹಿಂದಿರುಗಬೇಕಾದಲ್ಲಿ ಮರು ವಿವಾಹವಾಗಿ ಆ ವ್ಯಕ್ತಿಯೊಡನೆ ಒಂದು ರಾತ್ರಿ ಕಳೆಯಬೇಕಾದ ಪದ್ಧತಿ) ಹಾಗೂ ಬಹುಪತ್ನಿತ್ವದಂತಹ ಸಮಸ್ಯೆಗಳನ್ನೂ ನಿರ್ವಹಿಸುವಂತಹ ಸಮಗ್ರ ಕಾನೂನು ಬೇಕು.

ಕೇಂದ್ರ ಮಂಡಿಸುತ್ತಿರುವ ಮಸೂದೆಯ ಉದ್ದೇಶ ಲಿಂಗತ್ವ ನ್ಯಾಯ. ಆದರೆ ತಲಾಖ್ ಅನ್ನು ಕ್ರಿಮಿನಲ್ ಅಪರಾಧದ ಪರಿಧಿಗೆ ತರುವುದರಿಂದ ಸಮಸ್ಯೆ ಪರಿಹಾರವಾಗದು’ ಎಂದು ಅವರು ಹೇಳಿದ್ದಾರೆ. ಈ ಮಸೂದೆಯನ್ನು ಸಂಸತ್ತಿನ ಸ್ಥಾಯಿ ಸಮಿತಿಗೆ ಒಪ್ಪಿಸಿ ತಿದ್ದುಪಡಿಗಳಿಗೆ ಅವಕಾಶ ಮಾಡಬೇಕು ಎಂಬುದು ಅವರ ಆಗ್ರಹ.

ಮತ್ತೊಬ್ಬ ವ್ಯಕ್ತಿಗೆ ಯಾರೇ ಆದರೂ ತೊಂದರೆ ಮಾಡಬಾರದು ಎನ್ನುವ ಕಾರಣದಿಂದ ವೈಯಕ್ತಿಕ ನಡಾವಳಿಯ ಸ್ವಾತಂತ್ರ್ಯದಲ್ಲಿ ಪ್ರಭುತ್ವ ಮಧ್ಯ ಪ್ರವೇಶಿಸಬಹುದು ಎಂಬುದನ್ನು ರಾಜಕೀಯ ತತ್ವಜ್ಞಾನಿ ಜಾನ್ ಸ್ಟುವರ್ಟ್ ಮಿಲ್ ಒಪ್ಪುತ್ತಾನೆ. ಆದರೆ ಎಲ್ಲಾ ತೊಂದರೆಯೂ ಅಪರಾಧ ಆಗುವುದಿಲ್ಲ. ಮನನೋಯಿಸುವ ಆಕ್ರಮಣಕಾರಿ ವರ್ತನೆಗಳನ್ನು ಕ್ರಿಮಿನಲ್ ಕೃತ್ಯ ಎಂದು ಘೋಷಿಸಲಾಗದು. ಕ್ರಿಮಿನಲ್ ಕಾನೂನನ್ನು ಕಡೆಯ ಅಸ್ತ್ರವಾಗಿ ತೀರಾ ಕೆಟ್ಟ ಸಂದರ್ಭಗಳಿಗೆ ಬಳಸಬೇಕು ಎಂಬ ವಾದ ಇಲ್ಲಿ ಪ್ರಸ್ತುತ.

ತ್ರಿವಳಿ ತಲಾಖ್ ಹಾಗೂ ಕೌಟುಂಬಿಕ ಹಿಂಸಾಚಾರ ಮಧ್ಯೆ ಕಾನೂನಿನಲ್ಲಿ ವ್ಯತ್ಯಾಸ ಇರಬೇಕಾದುದು ಮುಖ್ಯ. ಮೊದಲನೆಯದು ಸಾಮಾಜಿಕ ಅನಿಷ್ಟ ಪದ್ಧತಿ. ನಾಗರಿಕ ಕಾನೂನಿನ ಮೂಲಕ ದಂಡಿಸಬೇಕಾದ ಅಪರಾಧ ಇದು. ವಿಚ್ಛೇದನ ಅಗತ್ಯ ಎಂದಾದಲ್ಲಿ ಜೀವನಾಂಶ ಹಾಗೂ ಪೋಷಣೆಯ ಹಕ್ಕುಗಳು ಮಹಿಳೆಗೆ ದೊರಕುವಂತಿರಬೇಕು, ಅದು ದೊರಕದಿದ್ದಲ್ಲಿ ಕಠಿಣ ಸ್ವರೂಪದ ದಂಡ ವಿಧಿಸಲು ಅವಕಾಶ ಇರಬೇಕು. ಆದರೆ ಜಾಮೀನುರಹಿತ ಅಪರಾಧವಾಗಿಸಿ ಗಂಡನನ್ನು ಜೈಲಿಗೆ ತಳ್ಳುವುದಾದಲ್ಲಿ ಅದರಿಂದಾಗುವ ಲಾಭ ಏನು? ‘ಗಂಡ ತಲಾಖ್ ನೀಡಿದಾಗ ಮನೆ ಬಿಟ್ಟು ಸಾಮಾಜಿಕ, ಮಾನಸಿಕ ಹಾಗೂ ಹಣಕಾಸು ಶೋಷಣೆಗೆ ಗುರಿಯಾಗಬೇಕು. ಈಗ ಗಂಡನನ್ನು ಜೈಲಿಗೆ ಕಳುಹಿಸುವಂತಾದರೆ ಅದು ಪರಿಹಾರವಲ್ಲ. ನಮ್ಮ ವಿವಾಹದ ಚೌಕಟ್ಟಿನೊಳಗೇ ನಾವು ಪರಿಹಾರ ಬಯಸುತ್ತೇವೆ’ ಎಂದು ಅನೇಕ ಮುಸ್ಲಿಂ ಮಹಿಳೆಯರು ಹೇಳುತ್ತಿದ್ದಾರೆ. ಹೀಗಾಗಿ, ವೈವಾಹಿಕ ಕಾನೂನಿನ ನಾಗರಿಕ ಸ್ವರೂಪ ರಕ್ಷಿಸುವುದೂ ಅಗತ್ಯ.

ಸಮುದಾಯ ಗಡಿಗಳನ್ನು ದಾಟಿ ತಮ್ಮ ನೋವು ಹಂಚಿಕೊಳ್ಳಲು ಮುಂದೆ ಬಂದ ಈ ಮಹಿಳೆಯರ ಹೋರಾಟಗಳ ಆಶಯಗಳಿಗೆ ಈ ಮಸೂದೆ ವಿರುದ್ಧವಾದುದಾಗಬಾರದು. ತ್ರಿವಳಿ ತಲಾಖ್ ಅಮಾನವೀಯವಾದದ್ದು ಎಂಬುದು ಸರಿ. ಆದರೆ ಮಹಿಳೆಯರಿಗೆ ನಾಗರಿಕ ಕಾನೂನಿನ ಪರಿಹಾರಗಳು ಬೇಕು. ಅವರು ತೊರೆದುಕೊಳ್ಳಲು ಅಥವಾ ಪರಿತ್ಯಕ್ತರಾಗಲು ಬಯಸುವುದಿಲ್ಲ. ಜೈಲಿಗೆ ಪುರುಷನನ್ನು ಕಳಿಸುವುದರಿಂದ ಏನು ಒಳ್ಳೆಯದಾಗುತ್ತದೆ ಎಂಬ ಪ್ರಶ್ನೆ ಸಹಜವಾದದ್ದು.

ರಾಷ್ಟ್ರದಾದ್ಯಂತ ಪರಿತ್ಯಕ್ತ ಹಿಂದೂ ಪತ್ನಿಯರು ದಯನೀಯ ಸ್ಥಿತಿಯಲ್ಲಿ ಬದುಕುತ್ತಿರುವ ನಿದರ್ಶನಗಳಿರುವಾಗ ಅಲ್ಪಸಂಖ್ಯಾತ ಮುಸ್ಲಿಂ ಮಹಿಳೆಯರಿಗೆ ಸೀಮಿತವಾದ ಕಾನೂನಿನ ಹಿಂದಿರುವ ಸರ್ಕಾರದ ಉದ್ದೇಶಗಳೇನು ಎಂಬುದು ಮಹಿಳಾ ಹಕ್ಕುಗಳ ವಕೀಲೆ ಫ್ಲೇವಿಯಾ ಆಗ್ನೆಸ್ ಪ್ರಶ್ನೆ. 2011ರ ಜನಗಣತಿ ಅಂಕಿಅಂಶಗಳ ಪ್ರಕಾರ, ಈ ಮಹಿಳೆಯರ ಸಂಖ್ಯೆ ಮುಸ್ಲಿಂ ವಿಚ್ಛೇದಿತ ಹಾಗೂ ಪರಿತ್ಯಕ್ತ ಮಹಿಳೆಯರಿಗಿಂತ ಹೆಚ್ಚಿದೆ.

ತ್ರಿವಳಿ ತಲಾಖ್ ಅನ್ನು ಕ್ರಿಮಿನಲ್ ಅಪರಾಧ ವ್ಯಾಖ್ಯೆಗೆ ಒಳಪಡಿಸಲು ಸಂಸತ್‌ನಲ್ಲಿ ಮಸೂದೆ ಮಂಡನೆಗೆ ಎನ್‌ಡಿಎ ಸರ್ಕಾರ ಸನ್ನದ್ಧವಾಗತ್ತಿರುವಂತೆಯೇ ಮಸೂದೆಯ ಪ್ರಮುಖ ಅಂಶಗಳ ಬಗ್ಗೆ ಪ್ರತಿಪಕ್ಷಗಳ ನಾಯಕರು ಅತೃಪ್ತಿ ತೋರಿದ್ದಾರೆ. ತ್ರಿವಳಿ ತಲಾಖ್ ಕಾನೂನಿನ ಅವಶ್ಯಕತೆ ಬಗ್ಗೆ ಕಾಂಗ್ರೆಸ್ ಹಾಗೂ ಸಿಪಿಎಂ ಪ್ರಶ್ನಿಸಿವೆ. ಸದನದಲ್ಲಿ ಐದನೇ ಅತಿ ದೊಡ್ಡ ಪಕ್ಷವಾಗಿರುವ ಬಿಜೆಡಿ, ಪತಿಗೆ ಜೈಲು ಶಿಕ್ಷೆ ವಿಧಿಸುವ ಅಂಶವನ್ನು ವಿರೋಧಿಸಿದೆ.

ಮತಬ್ಯಾಂಕ್ ತುಷ್ಟೀಕರಣದ ರಾಜಕಾರಣದಲ್ಲಿ ಮಹಿಳೆಯ ಹಿತ ಹಿಂದಕ್ಕೆ ಸರಿದ ಇತಿಹಾಸದ ಹೊರೆ ನಮ್ಮ ಬೆನ್ನಿಗಿದೆ. ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರ, ‘ಮುಸ್ಲಿಂ ಮಹಿಳೆಯರ (ವಿಚ್ಛೇದನೆಗೆ ಸಂಬಂಧಿಸಿದ ಹಕ್ಕುಗಳರಕ್ಷಣೆ) ಕಾಯ್ದೆ– 1986’ ಜಾರಿಗೆ ತಂದಿದ್ದನ್ನು ನೆನಪಿಸಿಕೊಳ್ಳಿ. ಸಂಸತ್ತಿನಲ್ಲಿ ನಡೆಯುವ ಚರ್ಚೆಗಳಲ್ಲಿ ಮಹಿಳೆಯ ಹಿತ ಮುನ್ನೆಲೆಗೆ ಬರುವುದೇ? ಕಾದು ನೊಡೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT