ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಲಿತ ರಾಜಕೀಯ ಮುನ್ನಲೆಗೆ

Last Updated 6 ಜನವರಿ 2018, 19:30 IST
ಅಕ್ಷರ ಗಾತ್ರ

ನಮ್ಮ ರಾಷ್ಟ್ರೀಯ ರಾಜಕಾರಣದಲ್ಲಿ ದಲಿತ ಚಳವಳಿ ಮತ್ತೆಪ್ರವರ್ಧಮಾನಕ್ಕೆ ಬರುತ್ತಿದೆಯೇ. ಇದೊಂದು ಬರೀ ಸಾಮಾಜಿಕ – ರಾಜಕೀಯ ಪ್ರತಿಪಾದನೆಯೇ ಅಥವಾ ಮುಂಬರುವ ದಿನಗಳಲ್ಲಿ ನಡೆಯಲಿರುವ ಚುನಾವಣೆಗಳಲ್ಲಿನ ಫಲಿತಾಂಶವನ್ನು ಏರುಪೇರು ಮಾಡುವ ಸಾಮರ್ಥ್ಯವನ್ನೂ ಹೊಂದಿದೆಯೇ? ಈ ಮಾತು ನಿಜವೇ ಆಗಿದ್ದರೆ 2019ರ ಮೇ ತಿಂಗಳಲ್ಲಿ ನಡೆಯಲಿರುವ ಸಾರ್ವತ್ರಿಕ ಚುನಾವಣೆವರೆಗೆ ಈ ಹೋರಾಟದ ಕಾವು ಇರಲಿದೆಯೇ ಅಥವಾ ಅದಕ್ಕೂ ಮುಂಚೆಯೇ ತಣ್ಣಗಾಗಲಿದೆಯೇ ಎನ್ನುವುದರಿಂದ ಹಿಡಿದು, ಈ ಹೊಸ ಚಳವಳಿಗೆ ಜಿಗ್ನೇಶ್‌ ಮೇವಾನಿ ಅವರು ಆದರ್ಶವಾಗಿ ನಿಲ್ಲುವರೇ ಎಂಬಲ್ಲಿಗೆ ನಮ್ಮ ಪ್ರಶ್ನೆಗಳನ್ನು ನಿಲ್ಲಿಸಬಹುದು.

ರಾಜಕೀಯ ಪರಿಭಾಷೆಯಲ್ಲಿ ಹೇಳುವುದಾದರೆ ಹೊಸ ಕಾನ್ಶಿರಾಂ ಅಥವಾ ಮಹೇಂದ್ರ ಸಿಂಗ್‌ ಟಿಕಾಯತ್‌ ಇಲ್ಲವೇ ನಿವೃತ್ತ ಕರ್ನಲ್‌ ಕಿರೊರಿ ಸಿಂಗ್‌ ಬೈನ್ಸಲ್‌ ಯಾರಾಗಲಿದ್ದಾರೆ ಎನ್ನುವ ಪ್ರಶ್ನೆಯೂ ಇಲ್ಲಿ ಎದುರಾಗುತ್ತದೆ. ಕೊನೆಯವರು ಯಾರು ಎನ್ನುವುದನ್ನು ಗೂಗಲ್‌ನಲ್ಲಿ ಮಾಹಿತಿ ಕಲೆ ಹಾಕಿದರೆ ನನ್ನ ವಿಚಾರ ಏನೆಂಬುದು ಗೊತ್ತಾಗುತ್ತದೆ. ಕಾನ್ಶಿರಾಂ ಅವರ ವ್ಯಕ್ತಿತ್ವವು ದೇಶದ ಮಧ್ಯಭಾಗದ ರಾಜಕೀಯದ ಮೇಲೆ ಗಾಢವಾದ ಪರಿಣಾಮ ಬೀರಿತ್ತು. ಉಳಿದ ಇಬ್ಬರು ಪ್ರಭಾವಿ ಜಾಟ್‌ ಮತ್ತು ಗುಜ್ಜರ್‌ ಜನಾಂಗದವರ ಬೆಂಬಲದ ಹೊರತಾಗಿಯೂ ಕ್ರಮೇಣ ಸಾರ್ವಜನಿಕ ಬದುಕಿನಿಂದಲೇ ಮಸುಕಾಗುತ್ತ ಹೋಗಿದ್ದರು.

ದೇಶದ ಒಟ್ಟು ಮತದಾರರ ಪೈಕಿ ದಲಿತರು ಶೇ 16.6 ರಷ್ಟು ಪಾಲು ಹೊಂದಿದ್ದಾರೆ. ಇದೇ ಕಾರಣಕ್ಕೆ ಮುಸ್ಲಿಮರನ್ನು ಹೊರತುಪಡಿಸಿದರೆ ದಲಿತರು ಪ್ರಭಾವಿ ವೋಟ್‌ ಬ್ಯಾಂಕ್‌ ಆಗಿದ್ದಾರೆ. 1989ರ ಮುಂಚೆ ಕಾಂಗ್ರೆಸ್‌ ಪಕ್ಷವು ತಮಿಳುನಾಡು, ಕೇರಳ ಮತ್ತು ಪಶ್ಚಿಮ ಬಂಗಾಳ ಹೊರತುಪಡಿಸಿ ಉಳಿದ ಕಡೆಗಳಲ್ಲಿ ಅವರನ್ನು ಗಂಭೀರವಾಗಿ ಪರಿಗಣಿಸಿರಲೇ ಇಲ್ಲ. 1989ರ ನಂತರ ಕಾಂಗ್ರೆಸ್‌ನಲ್ಲಿ ರಾಜೀವ್‌ ಗಾಂಧಿ ಅವರ ನಾಟಕೀಯ ಪ್ರಭಾವ ಕಡಿಮೆಯಾಗುತ್ತ ಹೋದಂತೆ ಪಕ್ಷವು ಹಿಂದುಳಿದ ವರ್ಗಗಳು ಮತ್ತು ಮುಸ್ಲಿಮರಂತೆ ದಲಿತರ ವೋಟ್‌ಗಳಿಗೂ ಎರವಾಗತೊಡಗಿತು.

ಮುಸ್ಲಿಮರಂತೆ ದಲಿತರು ಯಾವತ್ತೂ ಕಾರ್ಯತಂತ್ರ ಹೆಣೆದು ವೋಟ್‌ ಮಾಡಿದವರಲ್ಲ. ನಿರ್ದಿಷ್ಟ ಪಕ್ಷವನ್ನು ಆಯ್ಕೆ ಮಾಡುವ ಅಥವಾ ಇನ್ನೊಂದು ಪಕ್ಷವನ್ನು ಅಧಿಕಾರದಿಂದಲೇ ದೂರ ಇಡುವ ರೀತಿಯಲ್ಲಿ ಮತ ಚಲಾಯಿಸುತ್ತಲೂಬಂದಿಲ್ಲ. ಬಿಜೆಪಿ ಬೆಳೆಯಲು ಇದೂ ಒಂದು ಕಾರಣ. ಉತ್ತರ ಪ್ರದೇಶ, ಬಿಹಾರ ಒಳಗೊಂಡಂತೆ ಅನೇಕ ಪ್ರಮುಖ ರಾಜ್ಯಗಳಲ್ಲಿ ದಲಿತರ ವೋಟ್‌ಗಳು ಕಾಂಗ್ರೆಸ್‌ ಬಿಟ್ಟು ಇತರ ಪಕ್ಷಗಳಲ್ಲಿಹಂಚಿ ಹೋಗಿದ್ದರಿಂದ ಬಿಜೆಪಿಗೆ ಒಳಿತೇ ಆಗಿತ್ತು. ಇನ್ನೂ ಕೆಲವರು ನರೇಂದ್ರ ಮೋದಿ ಅವರತ್ತ ಆಕರ್ಷಿತರಾಗಿದ್ದರು. ರಾಷ್ಟ್ರೀಯ ರಾಜಕಾರಣದಲ್ಲಿ ಅದರ ಮಹತ್ವವೇ ಕಡಿಮೆಯಾಗುವಷ್ಟರ ಮಟ್ಟಿಗೆ ದಲಿತರ ವೋಟುಗಳು ವಿಭಜನೆಯಾಗಿವೆ.

ಮುಸ್ಲಿಮರಂತೆ ದಲಿತ ವೋಟ್‌ಗಳೂ ವಿಭಿನ್ನ ರಾಜ್ಯಗಳಲ್ಲಿ ವ್ಯಾಪಕವಾಗಿ ಚದುರಿ ಹೋಗಿವೆ. ಹೀಗಾಗಿ ಉತ್ತರ ಪ್ರದೇಶ ಹೊರತುಪಡಿಸಿ, ಬಹುತೇಕ ರಾಜ್ಯಗಳಲ್ಲಿ ಚುನಾವಣಾ ಹಣೆಬರಹ ನಿರ್ಧರಿಸುವ ರಾಜಕೀಯ ಬಲವೂ ಅವರಿಗೆ ಇಲ್ಲ. ದಾಖಲೆಗಳ ಪ್ರಕಾರ, ಪಂಜಾಬ್‌ನಲ್ಲಿ ದಲಿತರು ಗರಿಷ್ಠ (ಶೇ 32) ಸಂಖ್ಯೆಯಲ್ಲಿ ಇದ್ದಾರೆ. ಅವರಲ್ಲಿ ಬಹುಸಂಖ್ಯಾತರು ಸಿಖ್‌ರು. ಎರಡು ಪಕ್ಷಗಳ ರಾಜಕೀಯ ನೆಲೆಯಾಗಿರುವ ರಾಜ್ಯದಲ್ಲಿ ಜಾತಿಗೆ ಹೆಚ್ಚಿನ ಪ್ರಾಧಾನ್ಯ ಇಲ್ಲ.

ದಲಿತರ ವೋಟ್‌ ಬ್ಯಾಂಕ್‌ನಲ್ಲಿನ ಹೆಚ್ಚಿನ ಪ್ರಮಾಣವು ಯಾವುದೇ ರಾಜ್ಯದಲ್ಲಿ ಯಾವುದೇ ಒಂದು ನಿರ್ದಿಷ್ಟ ಪಕ್ಷದತ್ತ ವಾಲಿದರೂ ಫಲಿತಾಂಶ ಬೇರೆಯೇ ಆಗಿರುತ್ತದೆ. ಸದ್ಯಕ್ಕೆ ಕಂಡು ಬರುತ್ತಿರುವ ದಲಿತರ ಪ್ರತಿಪಾದನೆ ಮತ್ತು ಅದರ ನಾಯಕತ್ವ ವಿಶೇಷವಾಗಿ ಯುವ ಜಿಗ್ನೇಶ್‌ ಮೇವಾನಿ ಅವರ ನಾಯಕತ್ವವು ದಲಿತರನ್ನೆಲ್ಲ ಒಗ್ಗೂಡಿಸುವ ಸಾಮರ್ಥ್ಯ ಹೊಂದಿದೆಯೇ ಎನ್ನುವ ಪ್ರಶ್ನೆಯೂ ಇಲ್ಲಿ ಎದುರಾಗುತ್ತದೆ.

ದೇಶದ ಮಧ್ಯ ಭಾಗದಲ್ಲಿನ ವಿವಿಧ ರಾಜ್ಯಗಳಲ್ಲಿ ಹಂಚಿ ಹೋಗಿರುವ ದಲಿತರನ್ನು ಮುನ್ನಡೆಸುವ ಸಮರ್ಥ ನಾಯಕನೊಬ್ಬ ಈಗ ಬೇಕಾಗಿದ್ದಾನೆ. ಎಪ್ಪತ್ತರ ದಶಕದ ಮಧ್ಯಭಾಗದವರೆಗೆ ಬಾಬು ಜಗಜೀವನ್‌ ರಾಂ ಅವರು ಕಾಂಗ್ರೆಸ್‌ ಪಕ್ಷಕ್ಕೆ ಇಂಥ ನಾಯಕರಾಗಿದ್ದರು. ನಂತರದ ವರ್ಷಗಳಲ್ಲಿ ದಲಿತ ಮುಖಂಡನನ್ನು ಬೆಳೆಸಲು ಆ ಪಕ್ಷ ಆಸಕ್ತಿಯನ್ನೇ ತೋರಿಸಲಿಲ್ಲ. ಲೋಕಸಭೆಯಲ್ಲಿನ ಕಾಂಗ್ರೆಸ್‌ ಮುಖಂಡ ಮಲ್ಲಿಕಾರ್ಜುನ ಖರ್ಗೆ ದಲಿತರಾಗಿದ್ದರೂ, ಅವರ ಬಳಿ ಅಧಿಕಾರ ಇಲ್ಲ ಅಥವಾ ತಮ್ಮವರನ್ನೆಲ್ಲ ಜತೆಯಾಗಿ ಕರೆದೊಯ್ಯುವ ವರ್ಚಸ್ಸೂ ಅವರಿಗೆ ಇಲ್ಲ. ಅದೇ ರೀತಿ, ಯಾವುದೇ ಪಕ್ಷದಲ್ಲಿ, ಅದರಲ್ಲೂ ವಿಶೇಷವಾಗಿ ಕಾಂಗ್ರೆಸ್‌ನಲ್ಲಿ ಸದ್ಯಕ್ಕೆ ಆದಿವಾಸಿ ಮುಖಂಡ ಒಬ್ಬನೂ ಇಲ್ಲ. ಆದಿವಾಸಿಗಳು ಶೇ 8ರಷ್ಟು ವೋಟ್‌ಗಳನ್ನು ಹೊಂದಿದ್ದಾರೆ. ವಿವಿಧ ರಾಜ್ಯಗಳಲ್ಲಿ ಜನಾನುರಾಗಿಯಾಗಿದ್ದ ಪಿ.ಎ ಸಂಗ್ಮಾ ಅವರ ನಂತರ ಕಾಂಗ್ರೆಸ್‌ನಲ್ಲಿ ಅಂತಹ ಇನ್ನೊಬ್ಬ ಮುಖಂಡ ಕಂಡು ಬರುತ್ತಿಲ್ಲ.

ಈ ವಿಷಯದಲ್ಲಿ ಬಿಜೆಪಿಯ ಸಾಧನೆ ಇನ್ನೂ ಕಳಪೆಯಾಗಿದೆ. ರಾಷ್ಟ್ರಪತಿ ರಾಮನಾಥ ಕೋವಿಂದ ಅವರನ್ನು ಲೆಕ್ಕಕ್ಕೆ ಪರಿಗಣಿಸುವಂತಿಲ್ಲ. ಅವರೊಬ್ಬ ಸಂಭಾವಿತ ವ್ಯಕ್ತಿ. ದಲಿತರಾಗಿದ್ದರೂ, ಅವರು ನಾಯಕನಾಗಿ ಗಮನ ಸೆಳೆದಿಲ್ಲ. ದೆಹಲಿಯಲ್ಲಿ ಇತ್ತೀಚೆಗೆ ನಡೆದ ಪ್ರಶಾಂತ್‌ ಝಾ ಅವರ ‘ಹೌ ದಿ ಬಿಜೆಪಿ ವಿನ್ಸ್‌’ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗಿಯಾಗಿದ್ದೆ. ಬಿಜೆಪಿ ಸಚಿವ ಸಂಪುಟದಲ್ಲಿ ಇರುವ ಅತ್ಯಂತ ಪ್ರಮುಖ ದಲಿತ ಮುಖಂಡ ಯಾರು ಎಂದು ನಾನು ಝಾ ಅವರನ್ನು ಪ್ರಶ್ನಿಸಿದ್ದೆ. ‘ಥವರ್‌ ಚಂದ್‌ ಗೆಹ್ಲೋಟ್‌’ ಎಂದು ಅವರು ಉತ್ತರಿಸಿದ್ದರು. ಸಮಾರಂಭದಲ್ಲಿ ಭಾಗವಹಿಸಿದ್ದ ದೆಹಲಿ ಬುದ್ಧಿಜೀವಿಗಳಿಗೆ ಗೆಹ್ಲೋಟ್ ಅವರ ಖಾತೆ ಯಾವುದು ಎಂದು ನಾನು ಪ್ರಶ್ನಿಸಿದ್ದೆ. ಕೈಬೆರಳೆಣಿಕೆಯ ಜನರಷ್ಟೇ ಕೈ ಮೇಲೆತ್ತಿದ್ದರು.

ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿದರೆ, ಉಳಿದ ಕಡೆಗಳಲ್ಲಿ ಅಲ್ಪಸಂಖ್ಯಾತರು, ದಲಿತರು ಮತ್ತು ಆದಿವಾಸಿಗಳು ಕೇಂದ್ರ ಸಚಿವ ಸಂಪುಟದಲ್ಲಿ ಪ್ರಮುಖ ಖಾತೆ ಹೊಂದಿದ, ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದ ನಿದರ್ಶನಗಳು ಸದ್ಯಕ್ಕಂತೂ ಕಂಡು ಬಂದಿಲ್ಲ. ರಾಷ್ಟ್ರ ರಾಜಕಾರಣ
ದಲ್ಲಿನ ಇಂತಹ ಆಸಕ್ತಿದಾಯಕ ಘಟ್ಟದಲ್ಲಿ ಜಿಗ್ನೇಶ್‌ ಮೇವಾನಿ ರಾಜಕೀಯವಾಗಿ ಬೆಳೆಯುವ ಅವಕಾಶವನ್ನು ಹೆಚ್ಚಿಸಿದೆ.

ಮೇವಾನಿ ಅವರು ತನಗೆ ಬೆದರಿಕೆ ಒಡ್ಡುವ ರೀತಿಯಲ್ಲಿ ಬೆಳೆಯುವುದನ್ನು ಮೋದಿ –ಷಾ ಅವರ ಬಿಜೆಪಿ ಇಷ್ಟಪಡುವುದಿಲ್ಲ. ಎಲ್ಲವನ್ನೂ ಗೆದ್ದುಬಿಡುವ ಮಹಾನ್‌ ಶಕ್ತಿ ತಮಗಿದೆ ಎನ್ನುವ ಮನೋಭಾವ ಅವರಲ್ಲಿದೆ. ಹೀಗಾಗಿ ಇಂತಹ ಬೆದರಿಕೆಯನ್ನು ಮೊಳಕೆಯಲ್ಲಿಯೇ ಚಿವುಟಿ ಹಾಕಲು ಬಿಜೆಪಿ ಕಾರ್ಯತಂತ್ರ ರೂಪಿಸಲಿದೆ. ದಲಿತರ ಚಳವಳಿಗೆ ಅತಿಯಾದ ಪ್ರತಿಕ್ರಿಯೆ ನೀಡಿರುವುದರಲ್ಲಿಯೇ ಇದನ್ನು ಕಾಣಬಹುದು. ಭೀಮಾ – ಕೋರೆಗಾಂವ್‌ ಹಿಂಸಾಚಾರ ಅದರ ಕಾರ್ಯತಂತ್ರದ ಭಾಗವೇ ಆಗಿದೆ.

ಉನಾ ದೌರ್ಜನ್ಯದ ಫಲವಾಗಿ ಮೇವಾನಿ ರಾಜಕೀಯವಾಗಿ ಬೆಳಕಿಗೆ ಬಂದರು. ಆರಂಭದಲ್ಲಿ ಅವರೊಬ್ಬ ಸ್ಥಳೀಯ ಸೀಮಿತ ಪ್ರಭಾವದ ವ್ಯಕ್ತಿಯಾಗಿದ್ದರು. ಗುಜರಾತ್‌ನಲ್ಲಿ ದಲಿತರ ಜನಸಂಖ್ಯೆ ಗಮನಾರ್ಹವಾಗಿ ಇಲ್ಲ. ಹೀಗಾಗಿ ಅದರು ರಾಜಕೀಯವಾಗಿ ಬೀರುವ ಪ್ರಭಾವ ಕೂಡ ಗಂಭೀರ ಸ್ವರೂಪದಲ್ಲಿ ಇಲ್ಲ. ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ ಸಿದ್ಧಾಂತಗಳಿಂದ ಪ್ರಭಾವಿತರಾಗಿರುವ ಮೇವಾನಿ ಅವರ ವಾದಸರಣಿಯು ಸಾಂಪ್ರದಾಯಿಕ ಚುನಾವಣಾ ರಾಜಕೀಯವನ್ನು ಇಷ್ಟಪಡುವುದಿಲ್ಲ. ಆದರೆ, ಚುನಾವಣೆಗೆ ಸ್ಪರ್ಧಿಸಲುನಿರ್ಧರಿಸಿದ ಅವರು ರಾಷ್ಟ್ರೀಯ ಪಕ್ಷದ ಜತೆ ಮೈತ್ರಿಯನ್ನೂ ಮಾಡಿಕೊಂಡರು.

ಗುಜರಾತ್‌ ಶಾಸಕರಾಗಿರುವ ಮೇವಾನಿ ಅವರಿಗೆ ಇತರ ರಾಜ್ಯಗಳಲ್ಲಿನ ದಲಿತರ ದನಿಯಾಗಲು ಈಗ ಮಾನ್ಯತೆ ಸಿಕ್ಕಿದಂತಾಗಿದೆ. ಇದೇ ಕಾರಣಕ್ಕೆ ಅವರು ಮೊನ್ನೆ ಮಹಾರಾಷ್ಟ್ರದಲ್ಲಿ ದಲಿತರನ್ನು ಬಡಿದೆಬ್ಬಿಸುವಲ್ಲಿ ಸಫಲರಾಗಿದ್ದಾರೆ.

ಮೇವಾನಿ ಅವರ ಪರ ಅನೇಕ ಸಕಾರಾತ್ಮಕ ಸಂಗತಿಗಳಿವೆ. ಯುವ ಚೈತನ್ಯ, ವಾಕ್‌ ಚಾತುರ್ಯ, ಸಾಮಾಜಿಕ ಮಾಧ್ಯಮಗಳ ಸಮರ್ಥ ಬಳಕೆಯ ಕೌಶಲ, ರಾಜಕೀಯ ಮತ್ತು ಸೈದ್ಧಾಂತಿಕ ಹೊಂದಾಣಿಕೆಯ ಗುಣವೂ ಅವರಲ್ಲಿ ಇದೆ. ಇದೇ ಕಾರಣಕ್ಕೆ ಬಿಜೆಪಿಯು ತನ್ನ ಈ ಹೊಸ ಶತ್ರುವಿನ ಮೇಲೆ ತನ್ನೆಲ್ಲ ಗಮನ ಕೇಂದ್ರೀಕರಿಸಿದೆ.

ಮೇವಾನಿ ಅವರಲ್ಲಿ ಕೆಲ ದೌರ್ಬಲ್ಯಗಳೂ ಇವೆ. ಅವರು ಸಣ್ಣ ರಾಜ್ಯದಿಂದ ಬಂದಿದ್ದಾರೆ. ಎಡಪಂಥೀಯ ವಿಚಾರಧಾರೆ ಹೊಂದಿದ್ದಾರೆ. ಈ ಚಿಂತನೆಗೆ ಜೆಎನ್‌ಯು ಆಚೆ ಮತ್ತು ದೇಶದ ಮಧ್ಯಭಾಗದಲ್ಲಿ ಇರುವ ಪ್ರಮುಖ ರಾಜ್ಯಗಳಲ್ಲಿ ಅಷ್ಟೇನೂ ಮಹತ್ವ ಇಲ್ಲ. ಪುಟ್ಟ ರಾಜ್ಯದಿಂದ ಬಂದಿದ್ದ ದಲಿತ ಮುಖಂಡ ಕಾನ್ಶಿರಾಂ ಅವರು ನಂತರದ ದಿನಗಳಲ್ಲಿ ಸಶಕ್ತ ರಾಜಕೀಯ ಪಕ್ಷ ಕಟ್ಟಿ ಬೆಳೆಸಿದ ಸಾಧನೆಯ ನಿದರ್ಶನವೊಂದು ಅವರ ಬೆನ್ನಿಗೆ ಇದೆಯಷ್ಟೆ.

ಪಂಜಾಬ್‌ನವರಾಗಿದ್ದ ಕಾನ್ಶಿರಾಂ ಅವರು, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಘಟನೆಯ (ಡಿಆರ್‌ಡಿಒ) ಪ್ರಯೋಗಾಲಯದಲ್ಲಿ ವಿಜ್ಞಾನಿಯಾಗಿ
ದ್ದರು. ಅಂಬೇಡ್ಕರ್‌ ಅವರ ಕುರಿತ ಓದಿನ ಪ್ರಭಾವದಿಂದ ಅವರು ರಾಷ್ಟ್ರೀಯ ಮಟ್ಟದಲ್ಲಿ ಪರಿಶಿಷ್ಟ, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಉದ್ಯೋಗಿಗಳ ಸಂಘ ರಚಿಸಿದ್ದರು. ಅಲ್ಲಿಯವರೆಗೆ ದಲಿತರು ಈ ಬಗೆಯಲ್ಲಿ ಸಂಘಟಿತರಾಗಿರಲಿಲ್ಲ.ಆರಂಭದಲ್ಲಿ ನಾವೆಲ್ಲ ಅವರನ್ನು ಪ್ರಚಾರ ಪ್ರಿಯ ಎಂದೇ ಪರಿಗಣಿಸಿದ್ದೆವು. 80ರ ದಶಕದ ನಂತರ ಕಾಂಗ್ರೆಸ್‌ ಅವನತಿಯತ್ತ ಸಾಗಿದ್ದರೆ, ಪ್ರತ್ಯೇಕತಾ ಚಳವಳಿಗಳು ಏರುಗತಿಯಲ್ಲಿದ್ದವು. ಸಿಖ್‌ ಪ್ರತ್ಯೇಕತಾವಾದಿಗಳೂ ಸೇರಿದಂತೆ ಇಂತಹ ವಿಭಿನ್ನ ಗುಂಪುಗಳನ್ನು ಅವರು ಒಟ್ಟುಗೂಡಿಸಿದರು. ಸಣ್ಣ ಉಪಟಳ ಎಂದೇ ಇವರನ್ನು ಉಪೇಕ್ಷಿಸಿದ್ದವರು ಬೆರಗಾಗುವಂತೆ ಇವರು ಕ್ರಮೇಣ ಜನರನ್ನು ಅಪಾರ ಪ್ರಮಾಣದಲ್ಲಿ ಸೆಳೆಯಲಾರಂಭಿಸಿದರು.

ಅರವಿಂದ್‌ ಕೇಜ್ರಿವಾಲ್‌ ಅವರು ಅಣ್ಣಾ ಹಜಾರೆ ಅವರ ಕೈಬಿಟ್ಟಂತೆ, ಒಂದು ಹಂತಕ್ಕೆ ಏರುತ್ತಿದ್ದಂತೆ ಕಾನ್ಶಿರಾಂ ಅವರೂ ಅನೇಕರನ್ನು ಹೊರ ಹಾಕಿದ್ದರು. ಮೇವಾನಿ ಅವರು ರಾಜಕೀಯವಾಗಿ ಮೇಲೆ ಬರಬೇಕೆಂದರೆ ಉಮರ್‌ ಖಾಲಿದ್‌ ಅವರ ಕೈಬಿಡಬೇಕು. ಪ್ರಮುಖ ರಾಜ್ಯಗಳಲ್ಲಿ ಬೇರು ಬಿಡುವವರೆಗೆ ದಲಿತರು ರಾಜಕೀಯ ಮಾಡಲುಸಾಧ್ಯವಿಲ್ಲ ಎನ್ನುವುದನ್ನು ಕಾನ್ಶಿರಾಂ ಅವರು 30 ವರ್ಷಗಳ ಹಿಂದೆಯೇ ಮನಗಂಡಿದ್ದರು. ಕಾನ್ಶಿರಾಂ ಅವರ ಹೋರಾಟ ಹಿಂದೂ ದೇವರುಗಳ ವಿರುದ್ಧ ಇದ್ದಿರಲಿಲ್ಲ. ದೇವಸ್ಥಾನಗಳಿಂದ ದಲಿತರನ್ನುದೂರ ಇಟ್ಟಿರುವ ಮನುವಾದಿಗಳನ್ನು ಅವರು ಎದುರು ಹಾಕಿಕೊಂಡಿದ್ದರು. ನಾವೇಕೆ ನಮ್ಮ ದೇವರುಗಳನ್ನುಅವರಿಗೆ ಬಿಟ್ಟುಕೊಡೋಣ ಎಂದೇ ಅವರು ಪ್ರಶ್ನಿಸುತ್ತಿದ್ದರು.

ಅವರ ಮೊದಲ ದೊಡ್ಡ ಮಟ್ಟದ ರಾಜಕೀಯಪ್ರವೇಶವು 1988ರಲ್ಲಿ ಐತಿಹಾಸಿಕ ಅಲಹಾಬಾದ್‌ ಚುನಾವಣೆಯಲ್ಲಿ ನಡೆದಿತ್ತು. ಬೊಫೋರ್ಸ್‌ ಹಗರಣದಲ್ಲಿ ರಾಜೀವ್‌ ಗಾಂಧಿ ಅವರ ವಿರುದ್ಧ ಆರೋಪ ಮಾಡಿದ್ದವಿ.ಪಿ. ಸಿಂಗ್‌ ಅವರು ರಾಜೀವ್‌ ಸಂಪುಟಕ್ಕೆ ಮತ್ತು ತಮ್ಮಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅಮಿತಾಭ್‌ಬಚ್ಚನ್‌ ತೆರವುಗೊಳಿಸಿದ್ದ ಅಲಹಾಬಾದ್‌ ಕ್ಷೇತ್ರದ ಮರು ಚುನಾವಣೆಯಲ್ಲಿ ಗೆಲ್ಲಲು ಹೊರಟಿದ್ದರು. ದಿವಂಗತ ಲಾಲ್‌ ಬಹದ್ದೂರ ಶಾಸ್ತ್ರಿ ಅವರ ಮಗ ಸುನೀಲ್‌ ಶಾಸ್ತ್ರಿ (ಕಾಂಗ್ರೆಸ್‌ ಅಭ್ಯರ್ಥಿ) ಮತ್ತು ವಿ. ಪಿ. ಸಿಂಗ್‌ ಮಧ್ಯೆ ನೇರ ಸ್ಪರ್ಧೆ ನಡೆಯಲಿದೆ ಎಂದೇ ನಾವೆಲ್ಲ ಎಣಿಕೆ ಹಾಕಿದ್ದೆವು. ಪ್ರಚಾರಕ್ಕೆ ರಂಗೇರುತ್ತಿದ್ದಂತೆ ಕಾನ್ಶಿರಾಂ ಅವರ ಪ್ರಭಾವ ಅನುಭವಕ್ಕೆ ಬರತೊಡಗಿತ್ತು.

ದಲಿತರ ರಾಜಕಾರಣದ ಬಗ್ಗೆ ಬಹಿರಂಗವಾಗಿಮಾತನಾಡುವುದನ್ನು ಕೇಳುವ ಮೊದಲ ಅನುಭವ ನಮ್ಮದಾಗಿತ್ತು. ‘ನೀವೆಲ್ಲ 40 ವರ್ಷಗಳಿಂದ ಗುಲಾಮರಾಗಿ ಜೀವಿಸುತ್ತಿದ್ದೀರಿ. ಮಾನವರಾಗುವ ಕಾಲ ಸನ್ನಿಹಿತವಾಗಿದೆ’ ಎಂದೇಕಾನ್ಶಿರಾಂ ಅವರು ದಲಿತರಲ್ಲಿ ಸ್ವಾಭಿಮಾನದ ಬೀಜ
ಬಿತ್ತುತ್ತಿದ್ದರು.

ಉತ್ತರ ಪ್ರದೇಶದಲ್ಲಿ ಆಡಳಿತ ಚುಕ್ಕಾಣಿ ಹಿಡಿಯುವ ಹಾದಿಯಲ್ಲಿ ಅವರು ಈ ಮೊದಲು ತಮ್ಮೊಂದಿಗೆ ಇದ್ದ ಪ್ರತ್ಯೇಕತಾವಾದಿಗಳಾದ ಸಿಮ್ರನ್‌ಜಿತ್‌ ಸಿಂಗ್‌ ಮಾನ್‌, ಸುಭಾಷ್‌ ಘೀಸಿಂಗ್‌ ಅವರ ಕೈಬಿಟ್ಟಿದ್ದರು. ವಿಶ್ವದ ಮೊದಲ ಮಹಾಯುದ್ಧದಿಂದ ಹಿಡಿದು ಬ್ಲೂಸ್ಟಾರ್‌ ಕಾರ್ಯಾಚರಣೆವರೆಗೆ ತಮ್ಮ ಕುಟುಂಬದ ಸದಸ್ಯರು ಪ್ರಾಣತ್ಯಾಗ ಮಾಡಿದ್ದನ್ನು ಅವರು ಪದೇ ಪದೇಹೇಳಿಕೊಳ್ಳುತ್ತಿದ್ದರು. ಅವರ ಚುನಾವಣಾ ಪ್ರಚಾರವು ಸೇನಾ ಶಿಸ್ತಿನ ಮಾದರಿಯಲ್ಲಿಯೇ ಇರುತ್ತಿತ್ತು. ಕಿರುಹೊತ್ತಿಗೆ ಬ್ರಿಗೇಡ್‌ ಅನ್ನು ಪಕ್ಷದ ಕಾರ್ಯಕ್ರಮಗಳ ಪ್ರಚಾರಕ್ಕೆ ಬಳಸಿಕೊಂಡರೆ, ಜನರಿಂದ ಹಣ ಸಂಗ್ರಹಿಸಲು ಭಿಕ್ಷಾ ಪಡೆಯನ್ನೂ
ಅವರು ಕಟ್ಟಿದ್ದರು. ಈ ತಂಡದ ಸದಸ್ಯರು ಡಬ್ಬಿಗಳನ್ನು ಹಿಡಿದುಕೊಂಡು ದಲಿತರ ಕೇರಿಗೆ ತೆರಳಿ ಚಿಲ್ಲರೆ ಹಣ  ಸಂಗ್ರಹಿಸುತ್ತಿದ್ದರು.

‘ಬಹುಗುಣ ಸಮಾಜ’ ಹೆಸರಿನಲ್ಲಿ ಇತರ ಗುಂಪುಗಳನ್ನೂ ಸೇರಿಸಿಕೊಂಡು ಹೊಸ ಪ್ರಚಾರ ಅಭಿಯಾನ ನಡೆಸಿದ್ದರು. ವೋಟ್‌ ನಮ್ಮದು, ಆಡಳಿತ ನಿಮ್ಮದು. ಇದೆಲ್ಲ ಇನ್ಮುಂದೆ ನಡೆಯದು (ವೋಟ್‌ ಹಮಾರಾ, ರಾಜ್‌ ತುಮ್ಹಾರಾ / ನಹಿ ಚಲೇಗಾ ನಹೀ ಚಲೇಗಾ) ಎಂದು ಮತದಾರರಲ್ಲಿ ಜಾಗೃತಿ ಮೂಡಿಸಿದ್ದರು.

ಅಧಿಕಾರಕ್ಕೆ ಬರಬೇಕು ಎಂದರೆ ಮುಸ್ಲಿಮರು ಮತ್ತು ಮೇಲ್ವರ್ಗದವರನ್ನೂ ಸೇರ್ಪಡೆ ಮಾಡಿಕೊಳ್ಳಬೇಕು ಎನ್ನುವ ವಾಸ್ತವವನ್ನು ಆನಂತರ ಕಾನ್ಶಿರಾಂ ಮತ್ತು ಮಾಯಾವತಿ ಮನಗಂಡರು. ಈ ಧೋರಣೆಯ ಫಲವಾಗಿಯೇ ಅವರು ಅಧಿಕಾರ ಅನುಭವಿಸುವಂತಾಯಿತು. ಸೋತರೂ ಮಾಯಾವತಿ ಈಗಲೂ ಸಾಕಷ್ಟು ಜನಾನುರಾಗಿ ಆಗಿರುವುದಕ್ಕೂ ಇದೇ ಮುಖ್ಯ ಕಾರಣವಾಗಿದೆ.

ಕಾನ್ಶಿರಾಂ ಅವರು ರಾಜಕೀಯ ಮೇಧಾವಿ ಆಗಿದ್ದರು. ಅವರೊಬ್ಬ ದಲಿತ ಕೌಟಿಲ್ಯ. ಮಾಯಾವತಿಯೇ ಅವರ ಪಾಲಿಗೆ ಚಂದ್ರಗುಪ್ತ. ಮೇವಾನಿ ಅವರೂ ಇದೇ ಬಗೆಯ ರಾಜಕೀಯ ತಂತ್ರಗಾರಿಕೆ ಕರಗತ ಮಾಡಿಕೊಂಡಿರುವರೇ? ಕಾನ್ಶಿರಾಂ ಅವರಷ್ಟೇ ಚಾಣಾಕ್ಷರಾಗಿರುವರೇ? ಈ ಪ್ರಶ್ನೆಗಳಿಗೆ ಉತ್ತರಿಸುವುದು ತುಂಬ ಕಠಿಣ. ಆದರೆ, ಬಿಜೆಪಿ ಮತ್ತು ಸಾಂಪ್ರದಾಯಿಕ ಹಿಂದೂ ಸಮಾಜಶ್ರೇಷ್ಠರು ಮೇವಾನಿ ಅವರ ಬಗ್ಗೆ ಭಯ ಹೊಂದಿರುವುದು ಎಲ್ಲವನ್ನೂ ವಿವರಿಸುತ್ತದೆ.

(ಲೇಖಕ ‘ದಿ ಪ್ರಿಂಟ್‌’ನ ಸಂಸ್ಥಾಪಕ ಹಾಗೂ ಪ್ರಧಾನ ಸಂಪಾದಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT