ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಡ್ಡಿಲ್ಲದಿದ್ದರೂ ನೈಜ ಸ್ನೇಹ ಸಂಪಾದಿಸಲು ಅಡ್ಡಿಯೇನು?

Last Updated 28 ಮೇ 2017, 19:30 IST
ಅಕ್ಷರ ಗಾತ್ರ

ವಿಶ್ವನಾಥ ಪ್ರತಾಪ್ ಸಿಂಗ್ ಅವರು ಭಾರತದ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರ ಶ್ರೀಲಂಕಾದ ಅಧ್ಯಕ್ಷ ರಣಸಿಂಘೆ ಪ್ರೇಮದಾಸ ಅವರನ್ನು ಭೇಟಿ ಮಾಡಿದ್ದರು. ಇದಾಗಿ ಮೂವತ್ತು ವರ್ಷ ಕೂಡ ಪೂರ್ತಿಯಾಗಿಲ್ಲ. ಆಗ ಪ್ರೇಮದಾಸ ಅವರು ಆಡಿದ ಮೊದಲ ಮಾತು, ‘ನಿಮ್ಮ ಸೇನೆಯನ್ನು ವಾಪಸ್ ಕರೆಸಿಕೊಳ್ಳುವುದು ಯಾವಾಗ?’ ಎಂಬುದಾಗಿತ್ತು. ಈ ಮಾತು ಕೇಳಿ ಆಶ್ಚರ್ಯವಾಯಿತು ಎಂದಿದ್ದರು ಸುಸಂಸ್ಕೃತ ವ್ಯಕ್ತಿ ಸಿಂಗ್.

ಎಲ್‌ಟಿಟಿಇ ಉಗ್ರರ ವಿರುದ್ಧ ಹೋರಾಡಲು ಭಾರತ ಶ್ರೀಲಂಕಾಕ್ಕೆ ಕಳುಹಿಸಿದ್ದ ಶಾಂತಿ ಪಾಲನಾ ಪಡೆಯ ಸೈನಿಕರ ಕುರಿತು ಪ್ರೇಮದಾಸ ಅವರು ಈ ಮಾತು ಆಡಿದ್ದರು. ಭಾರತವು ಶಾಂತಿಪಾಲನಾ ಪಡೆಯ ಹತ್ತಾರು ಸಾವಿರ ಯೋಧರನ್ನು ಶ್ರೀಲಂಕಾಕ್ಕೆ ಕಳುಹಿಸಿತ್ತು. (ಇವರಲ್ಲಿ ಒಂದು ಸಾವಿರಕ್ಕಿಂತ ಹೆಚ್ಚು ಯೋಧರು ಎಲ್‌ಟಿಟಿಇ ಉಗ್ರರ ವಿರುದ್ಧದ ಕದನದಲ್ಲಿ ಮಡಿದರು.) ಹೀಗೆ ಯೋಧರನ್ನು ಕಳುಹಿಸಿದ್ದು ಲಂಕನ್ನರಿಗಾಗಿ ಮಾಡಿದ ತ್ಯಾಗ ಎಂದು ಭಾರತೀಯರು ನಂಬಿದ್ದರು. ಆದರೆ, ಭಾರತದ ಕ್ರಮವನ್ನು ಶ್ರೀಲಂಕನ್ನರು ಒಂದು ಹಂತದ ನಂತರ ‘ಹಸ್ತಕ್ಷೇಪ’ ಎಂಬಂತೆ ಕಾಣಲಾರಂಭಿಸಿದರು ಎಂದಿದ್ದರು ಸಿಂಗ್. ಭಾರತದ ಯೋಧರು ತಮ್ಮ ದೇಶದಿಂದ ವಾಪಸ್ ಹೋಗಬೇಕು ಎಂದೂ ಶ್ರೀಲಂಕನ್ನರು ಬಯಸಿದ್ದರು.

ರಾಷ್ಟ್ರೀಯವಾದಿ ಸಿಂಹಳೀಯರ ಜಯದೊಂದಿಗೆ ಶ್ರೀಲಂಕಾದ ಜನಾಂಗೀಯ ಯುದ್ಧ ಕೊನೆಗೊಂಡಿತು. ಈಗ ಶ್ರೀಲಂಕಾದಲ್ಲಿ ಭಾರತದ ಪ್ರಭಾವ ಮೂವತ್ತು ವರ್ಷಗಳ ಹಿಂದೆ ಇದ್ದಂತೆ ಇಲ್ಲ. ಈಗ ಶ್ರೀಲಂಕಾದ ಹಲವರು ತಮ್ಮ ನಾಡಲ್ಲಿ ಚೀನಾದ ಹಸ್ತಕ್ಷೇಪ ಇದೆ ಎಂದು ಹೇಳುತ್ತಿದ್ದಾರೆ. ಕೊಲಂಬೊ ಮತ್ತು ಹಂಬನ್‌ತೊಟಾದಲ್ಲಿ ಚೀನಾ ದೇಶ ನಿರ್ಮಿಸುತ್ತಿರುವ ಬಂದರುಗಳಿಗೆ ಸಮಾನವಾದ ಮತ್ತೊಂದು ಯೋಜನೆಯನ್ನು ರೂಪಿಸಲು ಭಾರತಕ್ಕೆ ಸಾಧ್ಯವಿಲ್ಲ. ಆದರೆ ಈ ಬಂದರು ನಿರ್ಮಾಣದ ವಿಚಾರದಲ್ಲಿ ಲಂಕನ್ನರು ಕೆಲವು ಹೊಂದಾಣಿಕೆಗಳನ್ನೂ ಮಾಡಿಕೊಳ್ಳಬೇಕಾಗಿದೆ. ಚೀನಾದ ಯಾವುದೇ ಅಭಿವೃದ್ಧಿ ಮಾದರಿಯ ಜೊತೆ ಈ ರೀತಿಯ ಹೊಂದಾಣಿಕೆ ಅನಿವಾರ್ಯ.  ಆದರೆ, ಇದು ತಮ್ಮ ದೇಶದಲ್ಲಿ ಚೀನಾದ ವಸಾಹತುಗಳನ್ನು ಹೊಂದುವುದಕ್ಕೆ ಸಮ ಎಂದು ಚುಟುಕಾಗಿ ಹೇಳಬಹುದು. ವಿಸ್ತರಿಸಿ ಹೇಳಬೇಕು ಎಂದಾದರೆ, ಇದು ಚೀನಾದಿಂದ ಸಾಲ ಪಡೆದಂತೆ. ಈ ಸಾಲವನ್ನು ತೀರಿಸುವ ಸಾಮರ್ಥ್ಯ ಆ ದೇಶಕ್ಕೆ ಇರಬಹುದು, ಇಲ್ಲದೆಯೂ ಇರಬಹುದು.

ಚೀನಾ ಈಗ ಅತ್ಯಂತ ಪ್ರಮುಖವಾದ, ವಿಶ್ವದ ಅತ್ಯಂತ ದೊಡ್ಡದಾದ ಮೂಲಸೌಕರ್ಯ ಯೋಜನೆಯ ಅನುಷ್ಠಾನದಲ್ಲಿ ನಿರತವಾಗಿದೆ. ಇದರ ಹೆಸರು ‘ಒನ್‌ ಬೆಲ್ಟ್‌ ಒನ್‌ ರೋಡ್’. ಇಲ್ಲಿ ‘ಬೆಲ್ಟ್‌’ ಅಂದರೆ ಸಾಲು ಸಾಲು ಹೆದ್ದಾರಿಗಳು ಎಂಬ ಅರ್ಥ, ‘ರೋಡ್’ ಅಂದರೆ ಬಂದರುಗಳ ಹಾಗೂ ಸಮುದ್ರ ಮಾರ್ಗಗಳ ಜಾಲ ಎಂಬ ಅರ್ಥವಿದೆ. ತನ್ನ ಉದ್ದೇಶಗಳು ಏನು ಎಂಬುದನ್ನು ಹೇಳಲು ಚೀನಾ ಮೇ ತಿಂಗಳಲ್ಲಿ ಒಂದು ಸಭೆಯನ್ನು ಆಯೋಜಿಸಿತ್ತು. ಇದನ್ನು ಭಾರತ ಬಹಿಷ್ಕರಿಸಿತ್ತು.

ಆದರೆ ಭೂತಾನ್ ಹೊರತುಪಡಿಸಿದರೆ ಭಾರತದ ನೆರೆಯ ದೇಶಗಳೆಲ್ಲವೂ ಈ ಸಭೆಯಲ್ಲಿ ಪಾಲ್ಗೊಂಡಿದ್ದವು. ಶ್ರೀಲಂಕಾ, ಮ್ಯಾನ್ಮಾರ್, ಬಾಂಗ್ಲಾದೇಶ, ಮಾಲ್ಡೀವ್ಸ್‌ ಮತ್ತು ನೇಪಾಳ, ಸಭೆಯಲ್ಲಿ ಪಾಲ್ಗೊಂಡಿದ್ದವು. ಇದು ‘ತನ್ನನ್ನು ಈ ದೇಶಗಳು ಜಾಣತನದಿಂದ ಸುತ್ತುವರೆಯಬಹುದು’ ಎಂಬ ಆತಂಕವನ್ನು ಭಾರತದ ಮನಸ್ಸಿನಲ್ಲಿ ಮೂಡುವಂತೆ ಚೀನಾ ಮಾಡಿತು. ಚೀನಾ ಜೊತೆ ಪಾಲುದಾರಿಕೆಗೆ ಮುಂದಾದರೆ ಭಾರೀ ಬೆಲೆ ತೆರಬೇಕಾದೀತು ಎಂದು ಭಾರತ ಎಚ್ಚರಿಕೆ ನೀಡಿತ್ತು. ಆದರೂ ಯಾವ ದೇಶವೂ ನಮ್ಮ ಮಾತು ಕೇಳಲಿಲ್ಲ. ಅವರು ಏಕೆ ನಮ್ಮ ಮಾತು ಕೇಳಲಿಲ್ಲ ಎಂಬುದು ಈಗಿರುವ ಪ್ರಶ್ನೆ. ಈ ಪ್ರಶ್ನೆಗೆ ಉತ್ತರವು ಈ ಲೇಖನದ ಮೂಲ ಕೇಂದ್ರದತ್ತ ಹೊರಳುತ್ತದೆ. ಅಂದರೆ, ನಮ್ಮ ನೆರೆಹೊರೆಯ ಬಹುತೇಕ ರಾಷ್ಟ್ರಗಳು ನಮ್ಮನ್ನು ಒಂದೋ ಅನುಮಾನದ ಕಣ್ಣಿನಿಂದ ನೋಡುತ್ತವೆ ಅಥವಾ ನಮ್ಮನ್ನು ಕಂಡರೆ ಆ ರಾಷ್ಟ್ರಗಳಿಗೆ ಆಗದು. ಹಿಂದೂ ನೇಪಾಳದಲ್ಲಿ ಕೂಡ ಭಾರತೀಯರ ಬಗ್ಗೆ ಒಳ್ಳೆಯ ಅಭಿಪ್ರಾಯವಿಲ್ಲ. ಅಮೆರಿಕವು ಕೆನಡಾ ಜೊತೆ ಹೊಂದಿರುವಂತಹ ಸಂಬಂಧವನ್ನು ನಾವು ನೆರೆಯ ಯಾವುದೇ ದೇಶದ ಜೊತೆ ಹೊಂದಿಲ್ಲ. ನಮ್ಮ ಗಡಿಗಳೆಲ್ಲ ಅಮೆರಿಕ- ಮೆಕ್ಸಿಕೊ ನಡುವಣ ಗಡಿಗಳಂತೆ ಅಥವಾ ಅದಕ್ಕಿಂತ ಕೆಟ್ಟದ್ದಾಗಿ ಇವೆ.

ಇಲ್ಲಿ ಸಂಪೂರ್ಣ ತಪ್ಪು ನೆರೆಯ ದೇಶಗಳಲ್ಲೇ ಆಗಿರಬಹುದು. ಬೇರೆ ದೇಶಗಳ ಪುಂಡಾಟಿಕೆಗಳಿಗೆ ನಾವು ಬಲಿಯಾಗಿದ್ದೇವೆ ಎಂಬ ಭಾವನೆ ಸಾಮಾನ್ಯ ಭಾರತೀಯರಲ್ಲಿ ಇರುವುದು ನಿಜ. ಇದರ ಜೊತೆ ನಾವು ನಮ್ಮ ನೆರೆಯ ದೇಶಗಳ ಬಗ್ಗೆ ಹೊಂದಿರುವ ಪೂರ್ವಗ್ರಹ ಪೀಡಿತ ದೃಷ್ಟಿಕೋನವೂ ಸೇರಿಕೊಂಡಿದೆ. ಬಾಂಗ್ಲಾದೇಶದವರೆಲ್ಲ ಅಕ್ರಮ ವಲಸಿಗರು, ನೇಪಾಳದವರೆಲ್ಲ ಗೇಟು ಕಾಯುವ ಕೆಲಸದವರು, ಪಾಕಿಸ್ತಾನದವರೆಲ್ಲ ಭಯೋತ್ಪಾದಕರು ಎಂಬ ನಂಬಿಕೆಯನ್ನು ನಾವು ಬೆಳೆಸಿಕೊಂಡಿದ್ದೇವೆ. ಕೆಲವು ವರ್ಷಗಳ ಹಿಂದೆ ನೇಪಾಳದಲ್ಲಿ ಭಾರತ ವಿರೋಧಿ ಹಿಂಸಾಚಾರ ನಡೆಯಿತು. ಇದರಲ್ಲಿ ಜನರ ಹತ್ಯೆಗಳಾದವು, ಆಸ್ತಿಗಳಿಗೆ ನಷ್ಟ ಉಂಟಾಯಿತು. ಇದು ಆಗಿದ್ದು, ‘ನಾನು ನೇಪಾಳಿಗಳನ್ನು ದ್ವೇಷಿಸುತ್ತೇನೆ’ ಎಂದು ನಟ ಹೃತಿಕ್ ರೋಶನ್ ಹೇಳಿದ್ದಾರೆ ಎಂಬ ವರದಿ ಬಂದ ನಂತರ. ಹೃತಿಕ್ ಅವರು ಅಂತಹ ಮಾತು ಆಡಿರಲಿಲ್ಲ. ವರದಿ ಸುಳ್ಳಾಗಿತ್ತು. ಆದರೆ ಇಂತಹ ವರದಿಯನ್ನು ನೇಪಾಳಿ ಜನ ತಕ್ಷಣ ನಂಬಿದ್ದು ಏಕೆ?

ಭಾರತವು ನೇಪಾಳದ ಜನರನ್ನು ‘ಪರ್ವತ ಪ್ರದೇಶಗಳಿಗೆ ಸೇರಿದವರು’ ಹಾಗೂ ‘ಸಮತಟ್ಟು ಪ್ರದೇಶಗಳಿಗೆ ಸೇರಿದವರು’ ಎಂದು ಒಡೆದು ಆಟವಾಡುತ್ತಿದೆ, ಪರ್ವತ ಪ್ರದೇಶಗಳ ಜನರ (ಇವರು ಮೇಲ್ವರ್ಗದವರು) ವಿರುದ್ಧದ ದಿಗ್ಬಂಧನಕ್ಕೆ ಪ್ರಚೋದನೆ ನೀಡುತ್ತಿದೆ ಎಂದು ಉತ್ತರ ನೇಪಾಳದ ಜನ ನಂಬಿದ್ದಾರೆ. ತಮ್ಮ ಸಾಂವಿಧಾನಿಕ ಪ್ರಕ್ರಿಯೆಗಳಲ್ಲಿ ಕೂಡ ಭಾರತ ಹಸ್ತಕ್ಷೇಪ ಮಾಡುತ್ತಿದೆ ಎಂದು ನೇಪಾಳಿಯರು ಭಾವಿಸಿದ್ದಾರೆ.

ನೇಪಾಳದ ಬಗ್ಗೆ ಭಾರತದ ಕಳವಳಗಳು ಸುಳ್ಳು ಆಗಿರಲಾರವು. ಆದರೆ, ‘ಚೀನಾದ ವಿಚಾರದಲ್ಲಿ ಕೂಡ ಹಿಂದೂ ನೇಪಾಳವನ್ನು ನಮ್ಮ ಜೊತೆ ಕರೆದೊಯ್ಯಲು ನಮಗೆ ಏಕೆ ಆಗುತ್ತಿಲ್ಲ’ ಎಂಬ ಪ್ರಶ್ನೆಯನ್ನು ನಾವು ಕೇಳಿಕೊಳ್ಳಬೇಕು. ಚೀನಾದ ವಿಚಾರದಲ್ಲಿ ನಮ್ಮ ಪಾಲಿನ ಏಕೈಕ ಸ್ನೇಹಿತ ಭೂತಾನ್ ದೇಶದ ಜೊತೆ ನಾವು ಹೊಂದಿರುವ ಸಂಬಂಧ ಸಮಾನ ಪಾತಳಿಯ ಮೇಲೆ ನಿಂತಿರುವಂಥದ್ದಲ್ಲ. ನೆಹರೂ ಆಡಳಿತದ ಅವಧಿಯಲ್ಲಿ ಭಾರತವು ಭೂತಾನ್ ದೇಶದ ಮೇಲೆ ‘ಸ್ನೇಹ ಒಪ್ಪಂದ’ವೊಂದನ್ನು ಹೇರಿತು. ಆದರೆ ಇದರಲ್ಲಿ ಸ್ನೇಹದ ಅಂಶ ಇಲ್ಲ. ಈ ಒಪ್ಪಂದವು ಭೂತಾನ್ ದೇಶದ ವಿದೇಶಾಂಗ ನೀತಿಗಳ ವಿಚಾರದಲ್ಲಿ ಭಾರತಕ್ಕೆ ಪರಮಾಧಿಕಾರ ನೀಡುತ್ತದೆ. ಒಪ್ಪಂದದಲ್ಲಿ ಇದ್ದ ಸಾಲು ಹೀಗಿದೆ: ‘ಬೇರೆ ದೇಶಗಳ ಜೊತೆಗಿನ ಸಂಬಂಧದ ವಿಚಾರದಲ್ಲಿ ಭಾರತದ ಸಲಹೆಯ ಪ್ರಕಾರ ಹೆಜ್ಜೆ ಇಡಲು ಭೂತಾನ್ ಸರ್ಕಾರ ಒಪ್ಪಿಗೆ ನೀಡುತ್ತದೆ’.

ಈ ಸಾಲನ್ನು ಕೆಲವೇ ವರ್ಷಗಳ ಹಿಂದೆ ಅಳಿಸಲಾಯಿತು. ಇದು ಆಗಿದ್ದು ವಾಜಪೇಯಿ ಅಧಿಕಾರಾವಧಿಯಲ್ಲಿ ಎಂಬುದು ನನ್ನ ನಂಬಿಕೆ. ನೆಹರೂ ಅವರು ವಿಸ್ತರಣಾವಾದಿ ಸಾಮ್ರಾಜ್ಯಶಾಹಿಯಿಂದ ಅಧಿಕಾರ ಸ್ವೀಕರಿಸಿದರು. ಈ ಸಾಮ್ರಾಜ್ಯಶಾಹಿಯ ಅವಧಿಯಲ್ಲಿ ದೇಶದ ಗಡಿಗಳು ಖಚಿತವಾಗಿರಲಿಲ್ಲ. ಬ್ರಿಟಿಷ್ ಆಡಳಿತಾವಧಿಯ ಭಾರತದ ಬಗ್ಗೆ ನೆರೆಯ ದೇಶಗಳು ಸಹಜವಾಗಿಯೇ ಭಯ ಹೊಂದಿದ್ದವು. ಆ ಕಾಲದ ಭಯವನ್ನು, ಅಪನಂಬಿಕೆಯನ್ನು ತೊಡೆದು, ಅರ್ಥಪೂರ್ಣ, ಪರಸ್ಪರರ ಹಿತಾಸಕ್ತಿಗಳನ್ನು ಆಧರಿಸಿದ, ಪರಸ್ಪರರನ್ನು ಗೌರವಿಸುವ  ಸಂಬಂಧವನ್ನು ಕಟ್ಟಲು ನಮ್ಮಿಂದ ಆಗದಿರುವುದು ಒಂದು ವೈಫಲ್ಯ.

ಈ ವೈಫಲ್ಯವು ಚೀನಾದಲ್ಲಿ ಮೇ ತಿಂಗಳಲ್ಲಿ ನಡೆದ ಸಭೆಯಲ್ಲಿ ಎದ್ದು ಕಂಡಿತು. ನಮ್ಮ ನೆರೆಯ ದೇಶಗಳ ಮೇಲೆ ಚೀನಾ ಹೊಂದಿರುವ ಆರ್ಥಿಕ ಪ್ರಭಾವವನ್ನು ಸರಿಗಟ್ಟಲು ನಮಗೆ ಬಹುಕಾಲದವರೆಗೆ ಸಾಧ್ಯವಿಲ್ಲ. ಆದರೆ ಇದು ಅವರ ಜೊತೆ ನೈಜ ಸ್ನೇಹ ಬೆಸೆಯಲು ಅಡ್ಡಿಯಾಗುವುದಿಲ್ಲ.
(ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT