ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುರುಳ ಮತದಾರರು –ಧೂರ್ತ ನಾಯಕರು

Last Updated 5 ಜುಲೈ 2016, 19:30 IST
ಅಕ್ಷರ ಗಾತ್ರ

‘ನಿಮ್ಮ ಅಂಕಣದಲ್ಲಿ ಬರೀ ರಾಜಕೀಯ ನಾಯಕರನ್ನೇ ಟೀಕಿಸುತ್ತೀರಿ; ಆದರೆ ಅವರಷ್ಟೇ ಕೆಟ್ಟಿರುವ ಮತದಾರರ ಬಗ್ಗೆ ಸೊಲ್ಲೇ ಎತ್ತುವುದಿಲ್ಲವಲ್ಲ?’ ಎಂದು ಆ ಹಿರಿಯ ವಕೀಲರು ಮತ್ತೆಮತ್ತೆ ಕೇಳುತ್ತಿದ್ದರು.

‘ಪಾಪ, ಮತದಾರರ ಭ್ರಷ್ಟಾಚಾರ ಐದು ವರ್ಷಕ್ಕೊಂದು ಸಲ; ಅವರಲ್ಲಿ ಬಹುತೇಕರು ಒಂದು ಅರ್ಥದಲ್ಲಿ ಮುಗ್ಧರು; ಅಸಹಾಯಕರು’ ಎಂದು ವಿಷಯವನ್ನು ತೇಲಿಸಲೆತ್ನಿಸಿದರೆ, ಆ ವಕೀಲರು ಬಡಪೆಟ್ಟಿಗೆ ಬಿಡಲಿಲ್ಲ. ‘ಅವರು ಯಾವ ಸೀಮೆಯ ಮುಗ್ಧರು ಬಿಡಿ! ಹಣಕ್ಕೆ, ಹೆಂಡಕ್ಕೆ, ಜಾತಿಗೆ, ಧರ್ಮಕ್ಕೆ, ಸ್ವಜನ ಪಕ್ಷಪಾತಕ್ಕೆ ಬಲಿ ಬಿದ್ದು ವೋಟು ಹಾಕುತ್ತಾರೆ. ಅವರಲ್ಲಿ ಮುಗ್ಧತೆ ಹುಡುಕುವುದೇ ತಪ್ಪು.

ಹೀಗೆ ವೋಟು ಹಾಕುವುದರಿಂದಲೇ ಈ ನಾಯಕರು ಅಸಂಬದ್ಧವಾಗಿ ಮಾತಾಡಿದಾಗ, ಕೆಟ್ಟಾಗ, ಕೆಟ್ಟದಾಗಿ ನಡೆದುಕೊಂಡಾಗ ಮತದಾರರಿಗೆ ಮಾತಾಡಲು ಬಾಯೇ ಇರುವುದಿಲ್ಲ’ ಎಂದು ಅವರು ವಾದಿಸುತ್ತಿದ್ದರು. 

ಹಿಂದೊಮ್ಮೆ ಟೆಲಿವಿಷನ್ ಚರ್ಚೆಯೊಂದರಲ್ಲಿ ಆ ಸಲದ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಮೂರೂ ಪಕ್ಷಗಳು ಮತದಾರರಿಗೆ ಹಣ ಹಂಚುವ ವಿಚಾರ ಬಂದಿತ್ತು. ಆಗ ಚುನಾವಣೆಗೆ ನಿಂತಿದ್ದ ಸದಾನಂದಗೌಡರು ‘ಹಾಗಾದರೆ, ಮೂರು ಪಕ್ಷಗಳಿಂದಲೂ ಹಣ ಪಡೆದು ಒಬ್ಬ ಅಭ್ಯರ್ಥಿಗೆ ಮತ ಹಾಕುವ ಮತದಾರರನ್ನು ಏನೆನ್ನುತ್ತೀರಿ?’ ಎಂದರು. ನಾನು ‘ಅಂದರೆ ಮತದಾರರೂ ಭ್ರಷ್ಟರಾಗಿದ್ದಾರೆ ಎನ್ನುತ್ತಿದ್ದೀರಿ ತಾನೆ?’  ಎಂದೆ. ಸದಾ ಸುಮ್ಮಸುಮ್ಮನೆ ನಗುವ ಸದಾನಂದಗೌಡರು ಆಗ ಇನ್ನೂ ಜಾಸ್ತಿ ನಕ್ಕು, ‘ನಾನು ಇದಕ್ಕೆ ಉತ್ತರ ಕೊಡುವುದಿಲ್ಲ!’ ಎಂದರು.

ಈ ಸಿದ್ಧಉತ್ತರ ಎಲ್ಲರಿಗೂ ಗೊತ್ತಿದೆ. ಇವತ್ತು ಯಾವ ರಾಜಕೀಯ ಪಕ್ಷವೂ ಈ ಬಗ್ಗೆ ಉತ್ತರ ಕೊಡಲು ಸಿದ್ಧವಿಲ್ಲ. ಮತದಾರರೂ ಈ ಪ್ರಶ್ನೆ ಎತ್ತಲು ಸಿದ್ಧರಿಲ್ಲ. ಧರ್ಮಗುರುಗಳು ‘ಹಣಕ್ಕೆ, ಹೆಂಡಕ್ಕೆ ಮತ ಮಾರಿಕೊಳ್ಳಬೇಡಿ’ ಎಂದು ಕರೆ ಕೊಡಬಲ್ಲರೇ ಹೊರತು, ಅವಕ್ಕಿಂತ ಅಪಾಯಕಾರಿಯಾದ ಜಾತಿ, ಧರ್ಮಗಳಿಗೆ ವೋಟು ಮಾರಿಕೊಳ್ಳಬೇಡಿ ಎಂದು ಹೇಳುವುದಿಲ್ಲ. ಇನ್ನು ಖಾಸಗಿ ವಲಯಗಳು ರಾಜಕೀಯ ಪಕ್ಷಗಳಿಗೆ ಹಣ ಕೊಡುವುದೇ ಆ ದುಡ್ಡನ್ನು ಪಕ್ಷಗಳು ಮತದಾರರಿಗೆ ಹಂಚಲಿ; ಗೆದ್ದವರು ತಮಗೆ ಲಾಭ ಮಾಡಿಕೊಡಲಿ ಎಂಬ ಉದ್ದೇಶದಿಂದ.   

ಇದರ ನಡುವೆಯೇ ಮತ್ತೊಂದು ಇಂಡಿಯಾ ಕೂಡ ಇದೆ. ನಾಲ್ಕು ವರ್ಷಗಳ ಕೆಳಗೆ ತೀರ್ಥಹಳ್ಳಿ ತಾಲ್ಲೂಕಿನ ಹಳ್ಳಿಯೊಂದರಲ್ಲಿ ಸಿಕ್ಕ ಎಪ್ಪತ್ತೈದು ವರ್ಷದ ಹಿರಿಯ
ರೊಬ್ಬರು ‘ಗೋಪಾಲಗೌಡರು ಹೋದ ನಂತರ ನಾನು ಯಾರಿಗೂ ವೋಟೇ ಹಾಕಿಲ್ಲ’ ಅಂದರು. ಅರವತ್ತರ ದಶಕದಲ್ಲಿ ಸಮಾಜವಾದಿ ನಾಯಕ ಶಾಂತವೇರಿ ಗೋಪಾಲ
ಗೌಡರು ಒಂದು ಊರಿನಲ್ಲಿ ಚುನಾವಣಾ ಪ್ರಚಾರ ಮಾಡಿ ಮುಂದಿನ ಊರಿಗೆ ಹೋಗಲು ಯಾರಾದರೂ ಕಾರಿಗೆ ಪೆಟ್ರೋಲ್ ಅಥವಾ ಬಸ್ಸಿಗೆ ಹಣ ಕೊಡಬೇಕಾಗಿತ್ತು.

ಗೌಡರು ‘ಒಂದು ವೋಟು; ಒಂದು ನೋಟು’ ಎಂದು ಜನರನ್ನು ಕೇಳುತ್ತಿದ್ದರು. ಸಾಮಾನ್ಯರೂ ಅವರ ಚುನಾವಣಾ ಓಡಾಟಕ್ಕೆ ಒಂದು ರೂಪಾಯಿಯಿಂದ ಹಿಡಿದು ತಮ್ಮ ಕೈಲಾದಷ್ಟು ಹಣ ಕೊಡುತ್ತಿದ್ದರು. ಮುಂದೊಮ್ಮೆ ಯಾವುದೇ ಜಾತಿ ಬೆಂಬಲವಿಲ್ಲದ ಕೋಣಂದೂರು ಲಿಂಗಪ್ಪ ಚುನಾವಣೆಗೆ ನಿಂತಾಗ ಶಾಂತವೇರಿಯವರು ಲಿಂಗಪ್ಪ
ನವರಿಗೆ ತಮ್ಮ ಮಫ್ಲರ್ ಹೊದಿಸಿದರು; ಶಾಂತವೇರಿಯವರ ಮಫ್ಲರ್ ನೋಡಿಯೇ ತೀರ್ಥಹಳ್ಳಿಯ ಜನ ವೋಟು ಕೊಟ್ಟರು ಎಂಬುದನ್ನೂ ಅಲ್ಲಿನ ಹಿರಿಯರು ನೆನೆಯುತ್ತಾರೆ.

ಇವನ್ನೆಲ್ಲ ಇವತ್ತು ಹೇಳಿದರೆ, ಇವೆಲ್ಲ ದಂತಕತೆಗಳಂತಿವೆ ಎನ್ನುವವರಿದ್ದಾರೆ. ರಾಜಕೀಯ ನಾಯಕರಿರಲಿ, ಮತದಾರರು ಕೂಡ ‘ಇದೆಲ್ಲ ಇವತ್ತು ಆಗಹೋಗದ ಮಾತು’ ಎನ್ನುತ್ತಾರೆ. ಸಾಹಿತ್ಯ ಪರಿಷತ್ ಚುನಾವಣೆಯಿಂದ ಹಿಡಿದು ವಿಧಾನ ಪರಿಷತ್ ಚುನಾವಣೆಯವರೆಗೂ ‘ವಿದ್ಯಾವಂತರು’ ಎನ್ನಿಸಿಕೊಳ್ಳುವವರು ಮಾತ್ರ ಮತ ಹಾಕುವ ಚುನಾವಣೆಗಳಲ್ಲೂ ಮತದಾರರಿಗಾಗಿ ಕೋಟಿಗಟ್ಟಲೆ ಹಣ ಚೆಲ್ಲಲಾಗಿದೆ ಎಂದು ‘ಸಂಭ್ರಮ’ದಿಂದ ಹೇಳುವ ನಾಯಕರು, ಮತದಾರರಿದ್ದಾರೆ.

ಇನ್ನು ಲೋಕಸಭೆಯಿಂದ ಗ್ರಾಮ ಪಂಚಾಯಿತಿ ಚುನಾವಣೆಯವರೆಗೂ ಮತದಾರರಿಗೆ ಹಣ ಹಂಚುವ ಕತೆ ಎಲ್ಲರಿಗೂ ಗೊತ್ತಿದೆ. ಮೊನ್ನೆ ರಾಜ್ಯಸಭಾ ಚುನಾವಣೆಯಲ್ಲಿ ಶಾಸಕರೇ ಮತದಾರರಾಗಿದ್ದಾಗ ನಡೆದ ಹಣದ ವಹಿವಾಟಿನ ಬಗ್ಗೆ ಕುಟುಕು ಕಾರ್ಯಾಚರಣೆ ನಡೆದಾಗ, ಅದನ್ನು ಖಚಿತವಾಗಿ ನಿರಾಕರಿಸಿರುವವರು ಶಾಸಕ ಬಿ.ಆರ್. ಪಾಟೀಲ್ ಮಾತ್ರ; ಉಳಿದವರ ಔಪಚಾರಿಕ ನಿರಾಕರಣೆ ಈ ಪ್ರಶ್ನೆ ಎಷ್ಟು ಸಾಮಾನ್ಯವಾಗಿದೆ ಎಂಬುದನ್ನು ಸೂಚಿಸುವಂತಿದೆ. 
 
ಆದರೂ ಮತದಾರರೆಂಬ ಈ ಅಮೂರ್ತ ವರ್ಗವನ್ನು ಟೀಕಿಸುವ ಬರಹಗಳು, ಭಾಷಣಗಳು ಕಡಿಮೆ. ಚುನಾವಣಾ ಅಭ್ಯರ್ಥಿಗಳು, ಮತ್ತವರ ಹಿಂಬಾಲಕರು ಮತದಾ
ರರಿಗೆ ಹಂಚಲು ಸಾಗಿಸುತ್ತಿದ್ದ ಹಣವನ್ನು ಜಪ್ತಿ ಮಾಡಿದ ಪ್ರಸಂಗಗಳಿವೆ; ಆದರೆ ಹಣ ಪಡೆದ ಮತದಾರರನ್ನು ಬಂಧಿಸಿದ ಪ್ರಕರಣಗಳನ್ನು ನಾನಂತೂ ಕೇಳಿಲ್ಲ.

ಹಾಗಾದರೆ, ಹಣದ ಬಂಡವಾಳವಲ್ಲದೆ ಇನ್ಯಾವ ಬಗೆಯ ಬಂಡವಾಳವೂ ಚುನಾವಣೆಯನ್ನು ಗೆಲ್ಲಲಾರದೆ?  ವಿಚಾರ, ತತ್ವ, ವ್ಯಕ್ತಿತ್ವ ಇವನ್ನೆಲ್ಲ ಗುರುತಿಸುವ ಕಣ್ಣನ್ನು ಮತ
ದಾರರು ಸಂಪೂರ್ಣ ಕಳೆದುಕೊಂಡಿರುವರೆ? ನನ್ನ ಪ್ರಕಾರ, ಆ ಕಣ್ಣು ಮಬ್ಬಾಗಲು ಬಹುತೇಕ ರಾಜಕಾರಣಿಗಳೇ ಕಾರಣ. ಯಾರಾದರೂ ಹಣವಿಲ್ಲದೆ ರಾಜಕೀಯ ಮಾಡುತ್ತೇವೆಂದು ಹೊರಟರೆ ಅದರ ವಿರುದ್ಧ ಸಿನಿಕ ರಾಗ ಎಳೆಯುವವರಲ್ಲಿ ರಾಜಕಾರಣಿಗಳು, ಅವರ ಚೇಲಾಗಳೇ ಮುಂಚೂಣಿಯಲ್ಲಿರುತ್ತಾರೆ.

‘ಹೇಗಾದರೂ ಮಾಡಿ ಗೆಲ್ಲು’ ಎಂಬ ದುರುಳ ಧೋರಣೆಯನ್ನು ಮಾರುಕಟ್ಟೆಯಿಂದ ಹಿಡಿದು ಶಾಲೆ, ಚುನಾವಣೆಗಳವರೆಗೂ ಹಬ್ಬಿಸಿರುವ ಈ ಕಾಲದಲ್ಲಿ ಹಣವಿಲ್ಲದ ಚುನಾವಣೆಯ ಬಗ್ಗೆ ಸಜ್ಜನರು ಕೂಡ ಉತ್ಸಾಹ ತೋರುವಂತೆ ಕಾಣುವುದಿಲ್ಲ.

ಹಣ ಹಂಚಿ, ಹಣ ಬೆಳೆಯುತ್ತೇವೆ ಎನ್ನುವ ಇಂಥ ಭಂಡತನದ ಕಾಲದಲ್ಲಿ ಖ್ಯಾತ ವಿಚಾರವಾದಿ ಕೆ.ಎಸ್. ಭಗವಾನ್ ಮೊನ್ನೆ ಇದ್ದಕ್ಕಿದ್ದಂತೆ ದಕ್ಷಿಣ ಪದವೀಧರರ ಕ್ಷೇತ್ರದ ವಿಧಾನ ಪರಿಷತ್ತಿನ ಚುನಾವಣೆಗೆ ಸ್ಪರ್ಧಿಸಿ ಎರಡೂವರೆ ಸಾವಿರಕ್ಕೂ ಹೆಚ್ಚು ಮತ ಗಳಿಸಿರುವುದನ್ನು ಅನೇಕರು ಗಮನಿಸಿದಂತಿಲ್ಲ. ಗೆದ್ದ ಜೆಡಿಎಸ್ ಅಭ್ಯರ್ಥಿಗೆ 17,166 ಮತಗಳು ಬಿದ್ದವು; ಬಿಜೆಪಿ ಅಭ್ಯರ್ಥಿಗೆ 16,853 ಹಾಗೂ ಕಾಂಗ್ರೆಸ್ ಅಭ್ಯರ್ಥಿಗೆ 8,245 ಮತಗಳು ಬಿದ್ದವು.

ಈ ಮೂರೂ ರಾಜಕೀಯ ಪಕ್ಷಗಳು ಖರ್ಚು ಮಾಡಿರುವ ಹಣ ಎಷ್ಟೆಂಬುದನ್ನು ಯಾರಾದರೂ ಊಹಿಸಬಹುದು. ಆದರೆ ಇಂಥ ಹಿಂಬಾಗಿಲ ತಂತ್ರಗಳಿಲ್ಲದೆ ಭಗವಾನ್ ಅವರಿಗೆ ಬಿದ್ದ ಮತಗಳ ಸಂಖ್ಯೆಯನ್ನು ನಾವು ಎಚ್ಚರದಿಂದ ಗಮನಿಸಬೇಕು. ಅಂದರೆ, ಕೊನೆಯ ಪಕ್ಷ ಶೇಕಡ ಐದರಷ್ಟು ಮತದಾರರು ಹಣ ಪಡೆಯದೆ ಅವರನ್ನು ಬೆಂಬಲಿಸಿ
ದ್ದಾರೆ ಎಂದಾಯಿತು.

ಇದಕ್ಕಿಂತ ಇನ್ನೂ ಹೆಚ್ಚಿನ ಸಂಖ್ಯೆಯ ಮತದಾರರು ಎಲ್ಲ ಚುನಾವಣೆಗಳಲ್ಲೂ ಯಾರಿಂದಲೂ ಹಣ ಪಡೆಯದೆ ಮತ ಹಾಕುತ್ತಾರೆ; ಆದರೂ ಈ ವರ್ಗದ ಅನೇಕರು ಜಾತೀಯ ಹಾಗೂ ಕೋಮುಪ್ರಲೋಭನೆಗೆ ತುತ್ತಾಗಿ ಮತ ಹಾಕುವುದರಿಂದ ಅವರು ಕೂಡ ವಸ್ತುನಿಷ್ಠವಾಗಿ ಮತ ಹಾಕುತ್ತಾರೆ ಎನ್ನುವಂತಿಲ್ಲ.

ಆದರೂ ಮನುಷ್ಯಮನಸ್ಸು ಆಗಾಗ್ಗೆಯಾದರೂ ಸ್ವತಂತ್ರವಾಗಿ ಹಾಗೂ ನ್ಯಾಯವಾಗಿ ಆಲೋಚಿಸಲೆತ್ನಿಸುತ್ತದೆ ಎಂಬುದನ್ನು ಮರೆಯಬಾರದು. ಒಂದೂವರೆ ವರ್ಷದ ಕೆಳಗೆ ದೆಹಲಿಯಲ್ಲಿ ಆಮ್ ಆದ್ಮಿ ಪಕ್ಷಕ್ಕೆ ತಾವೇ ಹಣ ನೀಡಿ ಮತ ಹಾಕಿದವರೂ ಹೆಚ್ಚಿನ ಸಂಖ್ಯೆಯಲ್ಲಿದ್ದುದನ್ನು ಗಮನಿಸಿ: ಇಂಡಿಯಾದಲ್ಲಿ ಹೊಸ ಮತದಾರ ವರ್ಗವೊಂದು ನಿರ್ಮಾಣವಾಗುತ್ತಿದೆ.

ಅದು ಇನ್ನೂ ಈ ವ್ಯವಸ್ಥೆ ರಿಪೇರಿಯಾಗಬಹುದೆಂದು, ರಿಪೇರಿ ಮಾಡಬಹುದೆಂದು ನಂಬುತ್ತಿದೆ.  ಅಷ್ಟೇ ಅಲ್ಲ, ಅದು ಸೋಷಿಯಲ್ ಮೀಡಿಯಾವನ್ನು ಬಳಸುತ್ತಿದೆ; ಸೋಷಿಯಲ್ ಮೀಡಿಯಾವನ್ನು ಆಸಕ್ತಹಿತಗಳು ದುರುದ್ದೇಶಕ್ಕೆ ಬಳಸುತ್ತಿರುವಾಗಲೂ, ತರುಣ ಮತದಾರರು ಅಲ್ಲಿ ದಿಟ್ಟ ಪ್ರಶ್ನೆಗಳನ್ನು ಎತ್ತಬಲ್ಲವರಾಗಿದ್ದಾರೆ. ಉದಾಹರಣೆಗೆ, ಮೊನ್ನೆ ಫೇಸ್ ಬುಕ್ಕಿನಲ್ಲಿ ನಾಗಣ್ಣನವರು ಅಂಬರೀಷ್ ಕುರಿತು ಎತ್ತಿದ ಹತ್ತು ಪ್ರಶ್ನೆಗಳು ಹೊಸ ತಲೆಮಾರಿನಲ್ಲಾದರೂ ಸ್ಪಂದನ ಹುಟ್ಟಿಸಿ
ರುವ ಸಾಧ್ಯತೆ ಇದೆ.    
 
ಕೇವಲ ಇಪ್ಪತ್ತು ವರ್ಷಗಳ ಕೆಳಗೆ, ಬಹುಜನ ಸಮಾಜ ಪಕ್ಷದ ನಾಯಕ ಕಾನ್ಷೀರಾಂ ಅವರಿಗೆ ಚುನಾವಣಾ ಸಭೆಗಳಲ್ಲಿ ಮತದಾರರೇ ಹಣ ಕೊಡುತ್ತಿದ್ದುದು ನೆನಪಾಗು
ತ್ತದೆ. ಅಂದರೆ, ಈ ಬಗೆಯ ಜನಬೆಂಬಲಕ್ಕೆ ಹೊಸ ರಾಜಕೀಯ ಪಕ್ಷಗಳ ಬಗ್ಗೆ, ಜನಪರ ತತ್ವಗಳ ಬಗ್ಗೆ ಜನರಲ್ಲಿ ಮೂಡುವ ಆಶಾವಾದ ಹಾಗೂ ಹೊಸ ಪಕ್ಷಗಳು ಹುಟ್ಟಿ
ಸುವ ಭರವಸೆಗಳು ಕೂಡ ಕಾರಣವಿರಬಹುದು.

ಇಂಥ ಬೆಳವಣಿಗೆಗಳನ್ನು ಎಲ್ಲೋ ಒಮ್ಮೊಮ್ಮೆ ಆಗುವ ಪವಾಡ ಎಂದು ಭಾವಿಸಿ ಸುಮ್ಮನಾದರೆ ಪ್ರಯೋಜನವಿಲ್ಲ. ಕೊನೆಯ ಪಕ್ಷ ಇದನ್ನು ಎಲ್ಲರಿಗೂ ಹೇಳುವ ಕೆಲಸವನ್ನಾದರೂ ಮಾಡುತ್ತಿರಬೇಕಾಗುತ್ತದೆ.

 ಅದರಲ್ಲೂ ಈ ಬಗೆಯ ‘ಗಂಡುರಾಜಕಾರಣ’ದ ಹಣಬಲವನ್ನು ಹಿಮ್ಮೆಟ್ಟಿಸದಿದ್ದರೆ, ಸ್ತ್ರೀಯರು ಚುನಾವಣೆ ಗೆಲ್ಲುವುದೇ ಕಷ್ಟ ಎಂಬುದು ಮಹಿಳಾ ವರ್ಗಕ್ಕಾದರೂ ಸರಿಯಾಗಿ ಅರ್ಥವಾಗಬೇಕು. 

ಚುನಾವಣೆಯ ಕಾಲದಲ್ಲಿ  ‘ಬಂದಷ್ಟು ಬರಲಿ’ ಎಂದು ಹಣ ತೆಗೆದುಕೊಳ್ಳುವವರು ಸದಾ ಇರಲಿ ಎಂಬುದು ಬಹುತೇಕ ರಾಜಕೀಯ ಪಕ್ಷಗಳ ಒಳ ಆಸೆಯೂ ಆಗಿರು
ವಂತಿದೆ. ತಮ್ಮ ಎದುರಾಳಿ ಪಕ್ಷ ಇನ್ನಾವುದಾದರೂ ತಂತ್ರ ಬಳಸಿ ಗೆಲ್ಲಬಹುದು; ಆದ್ದರಿಂದ ಹಣವೇ ಹೆಚ್ಚಿನ ಗ್ಯಾರಂಟಿ ಹಾದಿ ಎಂದು ಈ ಪಕ್ಷಗಳು ನಂಬಿವೆ. ದೇವರಿಗೇ ಲಂಚ ಕೊಡುವ ಅನೈತಿಕ ಸಮಾಜದಲ್ಲಿ ಮತದಾರರಿಗೆ ಲಂಚ ಕೊಡುವ ಕೆಲಸವನ್ನು ನಮ್ಮ ರಾಜಕೀಯ ಪಕ್ಷಗಳು ಆರಾಮಾಗಿ ಮಾಡುತ್ತಿವೆ.

ಅವರೂ ತಿನ್ನುತ್ತಾರೆ, ನಮಗೂ ಬಿಡಿಗಾಸು ಕೊಡುತ್ತಾರೆ ಎಂದು ಮತದಾರರೂ ಸಿನಿಕರಾಗಿದ್ದಾರೆ. ಈ ಸಿನಿಕ ಹಾಗೂ ಕ್ರೂರ ರಾಜಕೀಯದಲ್ಲಿ ನಾಯಕರು ಮತದಾರರನ್ನೂ, ಮತದಾರರು ನಾಯಕರನ್ನೂ ಆಳದಲ್ಲಿ ಅತ್ಯಂತ ತಿರಸ್ಕಾರದಿಂದ ನೋಡುತ್ತಿರುತ್ತಿರುತ್ತಾರೆ ಎಂಬುದು ಎಲ್ಲರಿಗೂ ಗೊತ್ತಿರಲಿ. ಈಗಾಗಲೇ ಈ ಆಟದಲ್ಲಿ ಬಲಿತುಕೊಂಡಿರುವ ರಾಜಕೀಯ ಪಕ್ಷಗಳ ಅಂತರಂಗದ ಖಚಿತ ಅಭಿಪ್ರಾಯ ಇಷ್ಟೇ: ‘ಈ ಮತದಾರರು ಮನುಷ್ಯರೇ ಅಲ್ಲ; ಸ್ವತಂತ್ರ ಪ್ರಜೆಗಳಂತೂ ಅಲ್ಲವೇ ಅಲ್ಲ.

ಇವು ಯೋಚಿಸುವ ಜೀವಿಗಳೇ ಅಲ್ಲ. ಇವರನ್ನು ಖೆಡ್ಡಾದಲ್ಲಿ ಕೆಡವಲು ಸುಳ್ಳು, ಉತ್ಪ್ರೇಕ್ಷೆ, ಹಣ, ಜಾತಿ, ಕೋಮು, ಧರ್ಮ- ಇಷ್ಟು ಮಾತ್ರ ಸಾಕು.’ ಆದರೂ ಇಷ್ಟೆಲ್ಲ ಆಮಿಷ ಒಡ್ಡಿದರೂ ಮತದಾರರ ಮೂಡನ್ನು ಅಳೆಯಲಾಗದು ಎಂಬ ಒಳಭಯವೊಂದೇ ಎಲ್ಲ ಪಕ್ಷಗಳನ್ನೂ ಕೊಂಚ ಆತಂಕದಲ್ಲಿ ಇಟ್ಟಿರುವುದು.

ಇದೀಗ ಹೊಸ ರಾಜಕೀಯದ ಬಗ್ಗೆ ಆಸಕ್ತಿಯಿರುವ ಹೊಸ ತಲೆಮಾರಾದರೂ ಮತದಾರರ ಈ ನಿಗೂಢಶಕ್ತಿಯನ್ನು ಅವರಿಗೇ ಮನದಟ್ಟು ಮಾಡಿ, ಅವರನ್ನು ನಿಜಕ್ಕೂ ‘ಯೋಚಿಸುವ’ ಪ್ರಜೆಗಳನ್ನಾಗಿಸುವ ಬಗ್ಗೆ ಆಳವಾಗಿ ಚರ್ಚಿಸಬೇಕು.

ಕೊನೆ ಟಿಪ್ಪಣಿ:  ಕೂಗುಮಾರಿಗಳು ಮತ್ತು ಮತದಾರರು! ಶೇಕ್‌ಸ್ಪಿಯರನ ‘ಜೂಲಿಯಸ್ ಸೀಸರ್’ ನಾಟಕದಲ್ಲಿ ಸೀಸರನನ್ನು ಕೊಲೆ ಮಾಡಿದ ಗುಂಪಿನಲ್ಲಿದ್ದ ಸೂಕ್ಷ್ಮಜೀವಿ ಬ್ರೂಟಸ್   ‘ನಮ್ಮ ದೇಶ ಸೀಸರನ ಸರ್ವಾಧಿಕಾರಕ್ಕೆ ಸಿಲುಕಬಾರದೆಂಬ ಮಹೋದ್ದೇಶದಿಂದ ಈ ಹತ್ಯೆಯಲ್ಲಿ ಭಾಗಿಯಾದೆ’ ಎಂದು ಭಾಷಣ ಮಾಡುತ್ತಾನೆ. ಜನ ಅವನು
ಹೇಳಿದ್ದನ್ನೆಲ್ಲಾ ಒಪ್ಪುತ್ತಾರೆ. ಅವನ ನಂತರ ಆಂಟನಿ ಅತಿನಟನೆ, ಉತ್ಪ್ರೇಕ್ಷೆಗಳನ್ನು ಬಳಸಿ ಮಾತಾಡಿದಾಗ, ಜನ ಅವನನ್ನು ನಂಬಿ ಬ್ರೂಟಸ್ ವಿರುದ್ಧ ಕೆರಳುತ್ತಾರೆ. 

ನಾಯಕರ ತಿರುಗುನಾಲಿಗೆಗೆ ತಕ್ಕಂತೆ ತಿರುಗುವ ತನ್ನ ಕಾಲದ ಜನರನ್ನು ಶೇಕ್‌ಸ್ಪಿಯರ್ ಇಲ್ಲಿ ಗೇಲಿ ಮಾಡುತ್ತಿರಬಹುದು.ವಿಚಿತ್ರವೆಂದರೆ, ಮೊನ್ನೆ ಇಂಗ್ಲೆಂಡ್ ‘ಯೂರೋಪಿ
ಯನ್ ಯೂನಿಯನ್ನಿಲ್ಲಿರಬೇಕೋ ಬೇಡವೋ’ ಎಂಬ ಜನಮತಗಣನೆಯಲ್ಲಿ ಮತ ಹಾಕಿದ ಇಂಗ್ಲೆಂಡಿನ ಪ್ರಜೆಗಳೂ ಹೆಚ್ಚುಕಡಿಮೆ ಅದೇ ಥರ ಆಡುತ್ತಿರುವಂತಿದೆ.

 ಮೂಲ ಬ್ರಿಟಿಷರು ಮತ್ತು ಪರಕೀಯರು ಎಂದು ವಿಭಜನೆಯ ರಾಜಕೀಯ ಮಾಡುವ ನಾಯಕನೊಬ್ಬನ ಮಾತು ಕೇಳಿ, ಜನ ಯೂರೋಪಿಯನ್ ಯೂನಿಯನ್ ಬಿಡುವುದರ ಪರ ಹೆಚ್ಚು ಮತ ಹಾಕಿದರು. ಈಗ ಮತ್ತೆ ಜನಮತಗಣನೆ ನಡೆದರೆ ಇದಕ್ಕೆ ವಿರುದ್ಧವಾಗಿ ಮತ ಹಾಕುತ್ತೇವೆ ಎನ್ನುತ್ತಿದ್ದಾರೆ!

ಅತ್ತ ಅಮೆರಿಕದಲ್ಲಿ ಡೊನಾಲ್ಡ್ ಟ್ರಂಪ್ ಎಂಬ ಕೂಗುಮಾರಿ ನಮ್ಮ ಮತೀಯವಾದಿಗಳಂತೆಯೇ ಕಿರುಚುತ್ತಿದ್ದಾನೆ. ಅಮೆರಿಕನ್ನರು ಅವನಿಗೂ ವೋಟು ಹಾಕುವಂತೆ ಕಾಣುತ್ತಿದೆ. ಮತದಾರರ ಸಂಕುಚಿತತೆಯ ವಿಷಯದಲ್ಲಾದರೂ ಇಂಗ್ಲೆಂಡ್, ಅಮೆರಿಕಾಗಳು ಇಂಡಿಯಾದ ಮಟ್ಟ ಮುಟ್ಟಿವೆಯೆಂದು ‘ಹೆಮ್ಮೆ’ ಪಡೋಣ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT