ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಪ್ರೀತಿಯ ಅಂಬಾಜಿಡ್ರು

Last Updated 14 ಜೂನ್ 2014, 12:38 IST
ಅಕ್ಷರ ಗಾತ್ರ

ಭಾಗ : 1
ನನ್ನ ಪ್ರೀತಿಯ ಘನತೆವೆತ್ತ ಮೊದಲ ಮಹಾರಾಣಿ ಅಂಬಾಸಡರ್ ತೀರಿಕೊಂಡಿದ್ದಾಳೆ. ಅವಳು ಆಗಮಿಸುತ್ತಿದ್ದರೆ ಗೋಡೆಗಳು ಬೆಚ್ಚಿ ಹಿಂದೆ ಸರಿಯುತ್ತಿದ್ದವು. ಮುಳ್ಳುಬೇಲಿಗಳು ತಮ್ಮನ್ನು ತರಚಿಯಾಳೆಂದು ಬಾಗಿ ದಾರಿ ಬಿಡುತ್ತಿದ್ದವು. ಆಕಾರ ಕಳೆದುಕೊಂಡು ಅಪ್ಪಚ್ಚಿಯಾಗುತ್ತೇನೆಂದು ಕೆಸರು ಅಂಜುತ್ತಿತ್ತು. ದುರ್ಬಲ ಸೇತುವೆಗಳು ಗಡಗಡ ನಡುಗುತ್ತಿದ್ದವು. ಗುಂಡಿ ಹೊಂಡದ ಒರಟು ಹಾದಿಯಲ್ಲಿ ಇವಳು ಆರು ಟ್ರಿಪ್ಪು ಅಡ್ಡಾಡಿದರೆ ಅದು ಸಮತಟ್ಟಾದ ರಸ್ತೆಯಾಗುತ್ತಿತ್ತು.

ಕುಟುಂಬ ಮಾತ್ರವಲ್ಲ, ಮನೆ ಸಾಮಾನು ಸಮೇತ, ಪಶುಪಕ್ಷಿಗಳಾದಿಯಾಗಿ ಒಂದೇ ಟ್ರಿಪ್ಪಿನಲ್ಲಿ ತುಂಬು ಬಸುರಿಯಂತೆ ಕೊಂಡೊಯ್ಯುತ್ತಿದ್ದಳು. ಕೆಟ್ಟು ನಿಂತರೆ ಸೈಕಲ್ ಶಾಪಿನ ಹುಡುಗ ನಿಮಿಷಾರ್ಧದಲ್ಲಿ ರಿಪೇರಿ ಮಾಡುವಷ್ಟು ಸರಳವಾಗಿದ್ದಳು. ನಾನು ಬರುತ್ತಿದ್ದೇನೆ ಎಂದು ಮೂರು ಕಿಲೋಮೀಟರು ದೂರದಿಂದಲೇ ಘರ್ಜಿಸುತ್ತಿದ್ದಳು. ಗುದ್ದಿದವನು ಗಾಯಗೊಳ್ಳುತ್ತಿದ್ದನೇ ಹೊರತು ಮಹಾರಾಣಿಯವರಿಗೇನೂ ಆಗುತ್ತಿರಲಿಲ್ಲ.

ಹದಿನಾಲ್ಕು ಅಡಿ ಉದ್ದದ, ಐದೂ ಮುಕ್ಕಾಲು ಅಡಿ ಅಗಲದ, ನೆಲದ ಮೇಲೂ ತೇಲಿ ಬರುತ್ತಿದ್ದ ಈ ಹಡಗನ್ನು ಕಂಡು ಚರಾಚರಗಳೆಲ್ಲ ಬೆಕ್ಕಸಬೆರಗಾಗಿ ನೋಡುತ್ತಿದ್ದವು. ಅಟ್ಟಿಸಿಕೊಂಡು ಹೋಗಲು ನಾಯಿಗಳು ಹೆದರಿದರೆ, ಬಾಯಿ ಬಿಡಲು ಮೈಕುಗಳು ಅಂಜುತ್ತಿದ್ದವು. ಇಂಥ ಧೀರೆಯನ್ನು ಮೇ ಇಪ್ಪತ್ನಾಲ್ಕರಂದು ಮಣ್ಣು ಮಾಡಲಾಗಿದೆ. ನನ್ನಂಥ ವಾಹನ ಮೋಹಿಗಳೆಲ್ಲ ಶೋಕಾಚರಣೆ ಮಾಡುತ್ತಿದ್ದೇವೆ.

ಈ ಗ್ರ್ಯಾಂಡ್ ಓಲ್ಡ್ ಲೇಡಿಗೆ ಭಲರೇ ಎನ್ನುವಂಥ ಇತಿಹಾಸವಿದೆ. ಬ್ರಿಟಿಷರು ಭಾರತದಲ್ಲಿ ಇಂಗ್ಲಿಷ್ ಬಿಟ್ಟು ಹೋದಂತೆ, ಈ ಕಾರನ್ನೂ ಬಿಟ್ಟು ಹೋದಂತೆ ಕಾಣುತ್ತದೆ. ಬ್ರಿಟಿಷ್ ಮಾರಿಸ್ ಆಕ್ಸ್‌ಫರ್ಡ್‌ನ ಮೂರನೇ ಮಾಡೆಲ್‌ ಅನ್ನು ಅಂಬಾಸಡರ್‌ನ ಅಜ್ಜಿ ಎನ್ನಬಹುದು. ಇಂಡಿಯಾದ ಗುಂಡಿಗಳಿಗೆ ಹೊಂದುವಂತೆ ರೂಪಧಾರಣೆ ಮಾಡಿಕೊಂಡು ೧೯೫೭ರಲ್ಲಿ ಭಾರತಕ್ಕೆ ಬಂದಳು. ಅದಕ್ಕೂ ಮುನ್ನ ಇವಳಿಗಿದ್ದ ಹೆಸರು ಲ್ಯಾಂಡ್‌ಮಾಸ್ಟರ್. ೧೯೬೦ರಲ್ಲಿ ಇವಳ ಬೆಲೆ ೧೨,೦೦೦ರೂಗಳು! ನೆಹರು ಕುಳಿತ ಮೇಲೆ ಇವಳ ಘನತೆ ಹೆಚ್ಚಿತು. ಸರ್ಕಾರದ ಅಧಿಕೃತ ಗೂಟದ, ಕೆಂಪು ದೀಪದ ಕಾರಾದ ಮೇಲೆ ಮಂತ್ರಿ ಮಹೋದಯರು, ಗಣ್ಯ ಅಧಿಕಾರಿಗಳು ಬಳಸತೊಡಗಿದರು.

ಅಂದಿನ ಅಂಬಾಸಡರಿಣಿಯರಿಗೆ ಬಾಯಿ ಬಂದರೆ ಕಾರಿನೊಳಗೆ ನಡೆದ ಎಂತೆಂಥ ಕಥೆ ಹೇಳುತ್ತಾರೋ! ಹುನ್ನಾರದ, ಚಾಡಿಯ, ಲಂಚದ, ನಂಬಿಕೆದ್ರೋಹದ, ಹಾದರದ, ಪದಚ್ಯುತಿಯ, ವರ್ಗಾವಣೆಯ, ಚೇಲಾಗಿರಿಯ, ಪ್ರಣಯದ ಕಥೆಗಳು. ಕುವೆಂಪು ಕಾದಂಬರಿಯ ಕಡೆಗೋಲಿನಂತೆ. ಈಕೆ ಭಾರತದ ರಾಜಕೀಯ ಜಗತ್ತಿನ, ಅಧಿಕಾರಷಾಹಿಯ ಭಾಗವಾಗಿದ್ದಳು. ಮಂತ್ರಿ ಪದಚ್ಯುತನಾದಾಗ, ಅಧಿಕಾರಿ ನಿವೃತ್ತನಾದಾಗ ಮತ್ತೆ ಹೊಸಬರನ್ನು ಕೂರಿಸಿಕೊಂಡು ಈ ಮಹಾರಾಣಿ ಮುನ್ನಡೆಯುತ್ತಿದ್ದಳು.

ಆ ಕಾಲದಲ್ಲಿ ಅವಳಿಗೆ ಬ್ರಶ್‌ನಿಂದಲೇ ಬಣ್ಣ ಬಳಿಯುತ್ತಿದ್ದರು. ಫ್ಯಾಶನ್ ಡಿಸೈನರ್ ಅರೋರಾ ಇದು ಕಾಲಾತೀತವಾದ ಕಾರು ಎನ್ನುತ್ತಾನೆ. ನೇರಳೆ ಬಣ್ಣದ ಕಾರಿನಲ್ಲಿ ಭಾರತವಿಡೀ ಸುತ್ತಿದ ಅಲೆಕ್ಸ್ ಲೆಬಾನ್ integral part of Indian experience ಎಂದು ಹೊಗಳುತ್ತಾನೆ. ಘೋಷ್ ಎಂಬ ಕಲಾವಿದ ‘ದೆಹಲಿಯಿಂದ ಕನ್ಯಾಕುಮಾರಿಯವರೆಗೆ ಹೋಗಿ ಬಂದೆ. ಪಾಪದ್ದು, ಒಂಚೂರೂ ತೊಂದರೆ ಕೊಡಲಿಲ್ಲ’ ಎಂದು ಬೆನ್ನು ತಟ್ಟುತ್ತಾನೆ. ಅದು ನಮ್ಮ ಮಹಾರಾಣಿಗೆ ಸುವರ್ಣಯುಗ! ೮೦ರ ದಶಕದವರೆಗೂ ಈಕೆ ವಿಜೃಂಭಿಸಿದಳು.

೧೫೦೦ ಡಿಎಸ್‌ಎಲ್, ೧೮೦೦ ಐಎಸ್‌ಜಡ್, ೨೦೦೦ ಡಿಎಸ್‌ಜಡ್, ಮಾರ್ಕ್ ೩, ಅವಿಗೋ ಇತ್ಯಾದಿ ಉಪಶೀರ್ಷಿಕೆಗಳನ್ನು ಧರಿಸಿ ಓಡಾಡಿದ್ದಳು. ಅಂಬಾಸಡರ್ ಹೊಂದುವುದು, ಪ್ರಯಾಣಿಸುವುದು ಪ್ರತಿಷ್ಠೆಯ ದಿನಗಳಾಗಿದ್ದುವು. ಆದರೆ ರಾಜಕೀಯ ಪಕ್ಷಗಳ ಏರಿಳಿತಗಳಂತೆಯೇ ಇವಳ ಬದುಕಲ್ಲೂ ಏರುಪೇರುಗಳಾದವು. ಥಳಕು ಬಳುಕಿನ, ಪುಟಾಣಿ ಗಾತ್ರದ, ಆಟಿಕೆಯಂತಿದ್ದ ಮಾರುತಿ ಸುಜುಕಿ- ೮೦೦ ಪ್ರವೇಶಿಸಿದ ಮೇಲೆ, ಒಂದರ ಹಿಂದೊಂದು ಹೊಸ ಬಗೆಯ ಕಾರುಗಳು ರಸ್ತೆಗಿಳಿದವು. ೨೦೦೪ರಲ್ಲಿ 40 ಲಕ್ಷ  ಅಂಬಾಸಡರಿಣಿಯರನ್ನು ಮಾರಿದ್ದ ಹಿಂದೂಸ್ತಾನ್ ಮೋಟಾರ್ಸ್ ಸಂಸ್ಥೆಗೆ ಹತ್ತು ವರ್ಷಗಳ ನಂತರ ೨೦೧೪ರಲ್ಲಿ ಕೇವಲ ೨೨೦೦ ಕಾರುಗಳನ್ನು ಮಾರಲು ಸಾಧ್ಯವಾಯಿತು.

ಅಟಲ ಬಿಹಾರಿ ವಾಜಪೇಯಿ ಈ ಮಹಾರಾಣಿಯನ್ನು ನಿರ್ಲಕ್ಷಿಸಿ ಬಿಎಂಡಬ್ಲ್ಯು ಬಳಸತೊಡಗಿದರೆ, ಮೊನ್ನೆ ಮೋದಿ ಕೂಡಾ ಮಹೇಂದ್ರ ಸ್ಕಾರ್ಪಿಯೋ-ಎಸ್‌ಯುವಿ ಆರಿಸಿಕೊಂಡರು. ದೆಹಲಿಯಿಂದ ನಿರ್ಗಮಿಸುತ್ತಿದ್ದಂತೆ ನಮ್ಮ ಈ ಮಹಾರಾಣಿಯ, ಚಲಿಸುವ ರಾಯಭಾರಿಯ ಯುಗಾಂತ್ಯ ಸಮೀಪಿಸಿತು. ಬೇಡಿಕೆ ತಗ್ಗಿದ್ದರಿಂದ, ಆರ್ಥಿಕ ಸಮಸ್ಯೆಗಳಿಂದ, ಪರ್ಯಾಯಮಾರ್ಗಗಳಿಲ್ಲದೆ, ಉತ್ತರಪುರದ ಪ್ಲಾಂಟನ್ನು ಮುಚ್ಚುತ್ತಿದ್ದೇವೆ ಎಂಬ ಪ್ರಕಟಣೆಯೊಂದಿಗೆ ಈ ನಮ್ಮ ಪ್ರೀತಿಯ ಅಂಬಾಸಡರಿಣಿ ಹರೆಯದ ಸವತಿಯರೊಂದಿಗೆ ಸ್ಪರ್ಧಿಸಲಾಗದೆ ಚರಿತ್ರೆಯಾದಳು. ಕೋಲ್ಕೊತ್ತಾದಲ್ಲಿ ಇನ್ನೂ ೩೩೦೦೦ ಟ್ಯಾಕ್ಸಿಗಳಿವೆಯಂತೆ. ಕ್ರಮೇಣ ಅವೆಲ್ಲವೂ ಕಣ್ಮರೆಯಾಗಲಿವೆ.

ಈ ಮಹಾರಾಣಿಯನ್ನು ನೋಡಬಯಸುವವರು ಮುಂದಿನ ದಿನಗಳಲ್ಲಿ ಮ್ಯೂಸಿಯಂಗೆ ಹೋಗಬೇಕಾಗಬಹುದು. ಈ ಮಹಾರಾಣಿಯ ಕೊಲೆಗೆ, ಅಂಬಿಯ ಸಾವಿಗೆ ಕಾರಣ, ಹಿಂದೂಸ್ತಾನ್ ಮೋಟಾರ್ಸ್ ಎಂಬ ಅವಿವೇಕಿ ಸಂಸ್ಥೆ. ಹೊಸ ಕಾರುಗಳ ಪ್ರವಾಹ ಬಂದಾಗಲೂ ಇದು ಎಚ್ಚೆತ್ತುಕೊಳ್ಳಲಿಲ್ಲ. ಜಗತ್ತಿನ ಪ್ರತಿಷ್ಠಿತ ಬ್ರಾಂಡ್ ಕಾರುಗಳ ಅನೇಕ ಲಕ್ಷಣಗಳನ್ನು, ಸವಲತ್ತುಗಳನ್ನು ಎಗರಿಸಿ ತಮ್ಮದಾಗಿಸಿಕೊಂಡು ಸಣ್ಣಪುಟ್ಟ ಕಾರುಗಳ ಉತ್ಪಾದಕರು ಗ್ರಾಹಕರನ್ನು ಸೆಳೆಯತೊಡಗಿದರು.

ಅಂಬಾಸಡರ್ ಮಾತ್ರ ಶರಶಯ್ಯೆಯಲ್ಲಿ ಮಲಗಿದ್ದ ಭೀಷ್ಮನಂತಿತ್ತು. ಎದ್ದರೆ ಆಳಲ್ಲ. ಆದರೆ ಏಳಲಿಲ್ಲ. ಹಳೆಯ ಡಬ್ಬಕ್ಕೇ ಹೊಸ ಮಾರ್ಕು ಹಚ್ಚುತ್ತಿದ್ದರು. ಇಂಧನ ಉಳಿತಾಯದ ಯಾವ ಹೊಸ ಹುಡುಕಾಟಕ್ಕೂ ಹೋಗಲಿಲ್ಲ. ನಿರುಪಯುಕ್ತನಾದರೆ, ದುಡಿಯದಿದ್ದರೆ, ವಯಸ್ಸಾದ ಮನುಷ್ಯರನ್ನೇ ಕಸದಂತೆ ಕಾಣುವ ಇಂದಿನ ಸಮಾಜದಲ್ಲಿ ಯಂತ್ರವೊಂದನ್ನು ಯಾರು ಪ್ರೀತಿಸುತ್ತಾರೆ? ಏಕೆ ಖರೀದಿಸುತ್ತಾರೆ? ಉಳಿದದ್ದು ಲೊಚಗುಟ್ಟುವ ನಾಸ್ಟಾಲ್ಜಿಯಾ ಮಾತ್ರ. ನಾನು ಕೊಂಡ ಪ್ರಪ್ರಥಮ ಕಾರು ಅಂಬಾಸಡರ್ ಆಗಿತ್ತು. ಅದೊಂದು ಸುಖಾಂತ್ಯ ದುರಂತ ಕತೆ.
***
ನಾನು ಹುಟ್ಟುವ ಮೊದಲೇ ಕಾರಿನ ಮೋಹ ನನಗೆ ಆವರಿಸಿತ್ತೆಂದು ತೋರುತ್ತದೆ. ಬಾಲ್ಯದಲ್ಲಿ ಹೆದ್ದಾರಿ ಮೇಲೆ ಶಾಲೆಗೆ ನಡೆಯುತ್ತಾ ಹೋಗುವಾಗ ಓ.. ಅಂಬಾಜಿಡ್ರು ಎಂದು ಕೂಗುತ್ತಿದ್ದೆ. ಅಸಂಖ್ಯ ಅಕ್ಷಮ್ಯ ಉಚ್ಚಾರಣೆಗಳ ಸುವರ್ಣ ಕಾಲವೆಂದರೆ ಅದು. ಒಮ್ಮೆ ಅಂಬಾಜಿಡ್ರು ಕಾರಿನಲ್ಲಿ ಕೂರಬೇಕೆಂಬ ಮಹದಾಸೆಯನ್ನು ಈಡೇರಿಸಿದ ಕರುಣಾಳು, ತಿಟ್ಟನ ಹೊಸಹಳ್ಳಿ ರಂಗಪ್ಪ. ಅವರ ಎಲೆಕ್ಷನ್ ಪ್ರಚಾರದ ಅಂಬಾಜಿಡ್ರು ಬರುತ್ತಿದ್ದಂತೆ, ಕಾರಿನಲ್ಲಿ ಕೂರುವ ಆಸೆಗಾಗಿ, ಹೂವಿನ ಗುರುತಿಗೆ ಓಟು ಕೊಡಿ ಎಂದು ಕೂಗುತ್ತಿದ್ದೆವು. ಮರುಳಾದ ರಂಗಪ್ಪ ಇನ್ನೂ ಮತದಾರರಾಗಿರದಿದ್ದ ಇಪ್ಪತ್ತು ಹುಡುಗರನ್ನೂ ಕುರಿಗಳಂತೆ ತುಂಬಿ ವಸಿ ದೂರ ಬಿಟ್ಟುಕೊಡುತ್ತಿದ್ದರು. ಜೀವಮಾನದಲ್ಲೊಮ್ಮೆ ಅಂಬಾಜಿಡ್ರಿನ ಮಾಲೀಕನಾಗಬೇಕೆಂದು ಆಗಲೇ ಪಣ ತೊಟ್ಟಿದ್ದು.

ಆದರೆ ಮದುವೆಯಾದ ಮೇಲೆ ಅರಿವಾದದ್ದು, ನಾನು ಕಾರುವಿರೋಧಿಯೊಬ್ಬಳನ್ನು ವರಿಸಿದ್ದೇನೆಂದು. ‘ಇರೋದು ಚಿಕ್ಕ ಬಾಡಿಗೆ ಮನೆ. ಇಬ್ಬರಿಗೂ ಪಾರ್ಟ್‌ಟೈಂ ಜಾಬು. ಟೂವೀಲರ್ ನಿಲ್ಲಿಸೋಕೇ ಜಾಗ ಇಲ್ಲ. ಮೊದಲು ಸೈಟು, ಸ್ವಂತ ಮನೆ. ಈಗ ಸಾಲ ಮಾಡಿ, ಕಾರು ತಗೊಂಡು ಬೀದೀಲಿ ನಿಲ್ಲಿಸಿದರೆ, ಅದನ್ನು ಹುಚ್ಚು ಎನ್ನುತ್ತಾರೆ-’ ಎಂದು ಸುಡುಬಿಸಿನೀರೆರಚಿದಳು. ಲೋಕರೂಢಿಗಳನ್ನು ಪ್ರಶ್ನಿಸುವುದು, ಸಾಧ್ಯವಾದರೆ ಅವುಗಳನ್ನು ರಿವರ್ಸ್ ಮಾಡುವುದರಲ್ಲಿ ಅಚಲ ನಂಬಿಕೆ ಉಳ್ಳ ನಾನು, ನನ್ನ ಯಾವ ಪಟ್ಟಿಗೂ ಅವಳು ಬಗ್ಗದಿದ್ದಾಗ, ಈಕೆ ಕಾರಿನ ಸುಖವನ್ನರಿಯದ ದಡ್ಡಿ ಎಂದು ತೆಪ್ಪನಾದೆ.

ಆದರೆ ಒಂದು ಮುಂಗಾರಿನ ಮುಂಜಾನೆ ನಾನು ಹಾಲು ತರುತ್ತಿದ್ದಾಗ ಎದುರು ಸಿಕ್ಕ ಮಹಾನುಭಾವ, ಒಬ್ಬ ಹೂ ಮಾರುವ ಹುಡುಗ. ನನ್ನ ಕತೆಗಳ ಅಭಿಮಾನಿ. ಆತ ತನ್ನ ಬಡತನದ ಫ್ಲಾಶ್‌ಬ್ಯಾಕ್ ಹೇಳಿಕೊಂಡ: ಹೂವಿನ ವ್ಯಾಪಾರ ಗಿಟ್ಟುತ್ತಿಲ್ಲ. ಮನೆಯಲ್ಲಿ ಮದುವೆಯಾಗದ ತಂಗಿ. ವಯಸ್ಸಾದ ತಾಯಿ. ಓದಬೇಕಾದ ತಮ್ಮ. ನನಗೆ ಕಾರು ಡ್ರೈವಿಂಗ್ ಲೈಸೆನ್ಸ್ ಇದೆ. ಒಂದು ಅಂಬಾಜಿಡ್ರು ಕಾರು ಕೊಡಿಸಿ. ಟ್ಯಾಕ್ಸಿ ಓಡಿಸೋಣ. ದಿನಕ್ಕೆ ಎಲ್ಲಾ ಖರ್ಚು ಕಳೆದು ಆರುನೂರು ರೂಪಾಯಿ ತಂಡ್ಕೊಡ್ತೀನಿ. ನೀವೂ ತಿನ್ನಿ- ನಂಗೂ ತಿನ್ಸಿ. ಬುಕ್ಕಿಂಗ್ ಇಲ್ಲದಿದ್ದಾಗ ನಿಮ್ಮ ಸ್ವಂತಕ್ಕೂ ಉಪಯೋಗಿಸಬಹುದು...

...ಮನುಷ್ಯರನ್ನು ಹಚ್ಚಿಕೊಳ್ಳುವುದರಲ್ಲಿ, ಅವರಿಂದ ಅನಂತರ ಚುಚ್ಚಿಸಿಕೊಳ್ಳುವುದರಲ್ಲಿ ಮತ್ತು ಕಚ್ಚಿಸಿಕೊಳ್ಳುವುದರಲ್ಲಿ ನಾನು ಪ್ರವೀಣನಾಗಿದ್ದ ಕಾಲ ಅದು. ಹೂ ಹುಡುಗನ ಕಮುನ್ಯಿಸಂಗೆ ಮಾರು ಹೋದೆ. ವರ್ಷಕ್ಕೆ ಅಂದಾಜು ಎರಡು ಲಕ್ಷ ಸಂಪಾದನೆ! ಎರಡೇ ವರ್ಷಕ್ಕೆ  ಸೈಟು!! ನಾಲ್ಕೇ ವರ್ಷಕ್ಕೆ ಸ್ವಂತ ಮನೆ!!! ದಾಸ್ ಕ್ಯಾಪಿಟಲ್ ಬೋಧಿಸಿ ಹೆಂಡತಿಯನ್ನು ಒಪ್ಪಿಸಿದೆ. ನಾಟಕದಲ್ಲಿ ವಿದೂಷಕನ ಪಾರ್ಟು ಮಾಡುತ್ತಿದ್ದ ಇನ್ನೊಬ್ಬ ನಟಶಿರೋಮಣಿ ದೈವನಿಮಾಯಕದಂತೆ ಮುಸ್ಸಂಜೆಯಲ್ಲಿ ಸಿಕ್ಕ. ಏಳನೇ ಕ್ಲಾಸು ಫೇಲಾಗಿದ್ದರೂ ಅವನು ಏರೋಪ್ಲೇನ್ ತಯಾರಿಸಬಲ್ಲವನಾಗಿದ್ದ.

ಸೈಟಿನಿಂದ ಹಿಡಿದು ಸೌಂಡ್ ನೆಗೆಟಿವ್‌ವರೆಗೆ ಏನನ್ನು ಬೇಕಾದರೂ ಕಡಿಮೆಗೆ ಕೊಂಡು, ಹೆಚ್ಚಿನ ಲಾಭಕ್ಕೆ ಮಾರುತ್ತಿದ್ದ ಆತನ ಬಳಿ ಗುಂಡುಸೂಜಿಯಿಂದ ಗನ್‌ವರೆಗೆ ಎಲ್ಲಾ ಸಿಗುತ್ತಿದ್ದವು. ನನ್ನ ಕಾರಿನ ಮೋಹ ತಿಳಿದ ಆತ, ರೆಕ್ಸಿನ್ ಸೀಟಿನಿಂದ ಮಿರಮಿರ ಮಿಂಚುತ್ತಿದ್ದ, ಪ್ರಾಚೀನ ಕಾಲದ ಅಸೆಂಬಲ್ಡ್ ಎಂಜಿನ್ ಕೂರಿಸಿದ್ದ, ಅತಿ ಮೇಕಪ್ ಧರಿಸಿದ ಮುದಿತಾರೆಯಂತೆ ಮಿನುಗುತ್ತಿದ್ದ, ಅಂಬಾಸಿಡರ್ ಕಾರನ್ನು ತಂದು ಮನೆ ಮುಂದೆ ನಿಲ್ಲಿಸಿದ. ನಾಳೆ ಕೈ ತುಂಬ ದುಡಿಯುವ ಸಲುವಾಗಿ, ಇಂದು ಮೈತುಂಬ ಸಾಲ ಮಾಡಿ ಒಂದೂವರೆ ಲಕ್ಷಕ್ಕೆ  ಕಾರು ಕೊಂಡೇಬಿಟ್ಟೆ. ಕಾರಿನ ಕೀ ಅನ್ನು ಹೂ ಹುಡುಗನ ಕೈಗಿತ್ತು, ಪೂಜೆಗೀಜೆ ಏನೂ ಬೇಡ, ಚಕ್ರಕ್ಕೆ ನಿಂಬೆ ಹಣ್ಣು ಇಟ್ಟು ವ್ಯರ್ಥ ಮಾಡಬೇಡ. ಕುಟುಂಬ ಸಮೇತ ಒಂದು ಸಿನಿಮಾ ನೋಡೋಣ ನಡಿ ಎಂದಿದ್ದೆ.
***
ಮನುಷ್ಯರಂತೆಯೇ ವಾಹನಗಳಿಗೂ ಅಡ್ಡಹೆಸರಿಟ್ಟು ಕರೆಯುವುದು ನನಗಿಷ್ಟ. ನಾನು ಕೊಂಡ ಮೊದಲ ಮೊಪೆಡ್‌ಗೆ ದುಶ್ಶಾಸನ ಎಂದು ಹೆಸರಿಸಿದ್ದೆ. ಹಿಂದೆ ಕುಳಿತು ಚೇತೋಹಾರಿಯಾಗಿ ಪಯಣಿಸುತ್ತಿದ್ದ ನನ್ನ ಪ್ರಿಯತಮೆಯ ಸೀರೆಯನ್ನು ನಡುರಸ್ತೆಯಲ್ಲಿ ಎಳೆದು ಆ ಮೊಪೆಡ್ ಅಪಮಾನಿಸಿತ್ತು. ಹಿಂದಿನಿಂದ ಬರುವವರು ತುಸು ಅಲರ್ಟ್ ಆಗಿ ಬ್ರೇಕ್ ಮೇಲೆ ನಿಗಾ ಇಟ್ಟುಕೊಳ್ಳಲಿ ಎಂದು ನನ್ನ ಮೊದಲ ಸ್ಕೂಟರ್ ಹಿಂದೆ ಸಾವು ಎಂದು ಬರೆದಿದ್ದೆ. ಆದರೆ ಈ ಕಾರಿಗೆ ಪ್ರಥಮ ಎಂದು ಹೆಸರಿಟ್ಟೆ.

ನಾನು ಟ್ಯಾಕ್ಸಿ ಇರಿಸಿದ ಸುದ್ದಿ ಲೋಕಕ್ಕೆಲ್ಲ ಜನಜನಿತವಾಗಿ ಸಾಹಿತಿಗಳು, ಸಿನಿಮಾದವರು ಅಭಿನಂದಿಸತೊಡಗಿದರು. ಮುಂದೊದಗುವ ಅಪಾಯದ ಅರಿವಿಲ್ಲದೆ ಯಾರಿಗಾದ್ರೂ ಗಾಡಿ ಬೇಕಾದ್ರೆ ಹೇಳ್ರಪ್ಪಾ ಎಂದೆ. ಮರುದಿನವೇ ಅನೇಕ ಬುಕ್ಕಿಂಗ್ ಕರೆಗಳು ಬರತೊಡಗಿದವು. ಹೂ ಹುಡುಗ ತನ್ನ ಹೂಗಳನ್ನೂ, ಸೈಕಲ್ಲನ್ನೂ ತಿಪ್ಪೆಗೆ ಬಿಸಾಕಿ ಹೊಸ ದಿರಿಸು ಧರಿಸಿ ನಿಂತ. ಹೆಂಡತಿ ಮಾತ್ರ ಬಾಡಿಗೆಮನೆಯಲ್ಲಿರುವ ನಮಗೆ ಈ ಚಿಲ್ಲರೆ ಶೋಕಿ ಬೇಕೆ ಎಂದು ಕುಟುಕುತ್ತಿದ್ದಳು. ನನ್ನ ಪ್ರಥಮಳು ನಿಬ್ಬೆರಗಾಗುವಂತೆ ಪ್ರಥಮ ತಿಂಗಳಿನಲ್ಲೇ ಖರ್ಚೆಲ್ಲಾ ಕಳೆದು ಹದಿನೈದು ಸಾವಿರ ಸಂಪಾದಿಸಿಬಿಟ್ಟಳು.                                
ಆದರೆ...
(ಭಾಗ- ೨ ಮುಂದುವರಿಯುವುದು)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT