ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಮ್ಮ ಸ್ಥಳಗಳು ಪುರುಷರಿಗೂ ಸುರಕ್ಷಿತವಲ್ಲ!

Last Updated 12 ಜನವರಿ 2017, 19:30 IST
ಅಕ್ಷರ ಗಾತ್ರ

ನಮ್ಮನ್ನು ಕಾಡುವುದಾದರೂ ಏನು? ಬೆಂಗಳೂರಿನಲ್ಲಿ ಮಹಿಳೆಯರು ಸುರಕ್ಷಿತರಲ್ಲ ಎಂದು ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದೆ. ಆ ಮೂಲಕ ಬೆಂಗಳೂರಿನ ಪ್ರತಿಷ್ಠೆಗೆ ಮತ್ತು ಬ್ರ್ಯಾಂಡ್‌ಗೆ ಧಕ್ಕೆಯಾಗಿದೆ ಎಂಬುದೆ? ಅಥವಾ ಬೆಂಗಳೂರಿನಲ್ಲಿ 2017ರಲ್ಲಿಯೂ ಮಹಿಳೆಯರ ಮೇಲೆ ಹಿಂಸಾತ್ಮಕ ಮತ್ತು ಆಕ್ರಮಣಕಾರಿ ಘಟನೆಗಳು ನಡೆಯುತ್ತಿವೆ, ನಮ್ಮೆಲ್ಲರ ಮುಂದೆಯೇ ನಡೆಯುತ್ತಿರುತ್ತವೆ ಎನ್ನುವುದೆ? ಇಲ್ಲವೆ ಕಾನೂನು ಮತ್ತು ಸುವ್ಯವಸ್ಥೆಯನ್ನು ನೋಡಿಕೊಳ್ಳಬೇಕಾದ ಪೊಲೀಸರು ಇಂದೂ ಇಷ್ಟೆಲ್ಲ ಮಾಧ್ಯಮಗಳಲ್ಲಿ ನಡೆಯುವ ಚರ್ಚೆಗಳ ನಡುವೆಯೂ ಇಂತಹ ಘಟನೆಗಳನ್ನು ತಡೆಯುವುದು ಸಾಧ್ಯವಿಲ್ಲ ಎನ್ನುವ ನಿಲುವನ್ನು ತಳೆಯುತ್ತಾರೆ ಎನ್ನುವುದೆ?

ಗೃಹ ಸಚಿವ ಜಿ.ಪರಮೇಶ್ವರ ಅವರ ಮಾತಿನ ಬಗ್ಗೆ ಮಾಧ್ಯಮಗಳಲ್ಲಿ ಸಾಕಷ್ಟು ಚರ್ಚೆಯಾಗಿದೆ. ಆದರೆ ಇಲ್ಲಿರುವ ಸಮಸ್ಯೆಯಿದು: ‘ಇಂತಹ ಘಟನೆಗಳು ನಡೆಯುತ್ತಿರುತ್ತವೆ’ ಎನ್ನುತ್ತಿದ್ದಂತೆ ಇವುಗಳನ್ನು ಪೊಲೀಸರಿಂದ ತಡೆಯಲು ಸಾಧ್ಯವಿಲ್ಲ ಎನ್ನುವ ಅಂಶವನ್ನು ಒಪ್ಪಿಕೊಂಡಂತೆ ಆಗುತ್ತದೆ. ‘ಪಾಶ್ಚಾತ್ಯ ಸಂಸ್ಕೃತಿಯ ಪ್ರಭಾವದಿಂದ ಹೀಗಾಗುತ್ತದೆ’ ಎನ್ನುತ್ತಿದ್ದಂತೆ ನಮ್ಮ ಸಮಾಜದಲ್ಲಿ ಮಹಿಳೆಯರಿಗೆ ಕನಿಷ್ಠ ಸ್ವಾತಂತ್ರ್ಯ ಮತ್ತು ಅವಕಾಶಗಳನ್ನೂ ನೀಡಲು ಆಗುವುದಿಲ್ಲ ಎಂದಂತೆ ಆಗುತ್ತದೆ. ಇದಕ್ಕೆ ಪ್ರತಿಯಾಗಿ ನಾವೆಲ್ಲರೂ ನಿರೀಕ್ಷಿಸುವಂತೆ ‘ಇಂತಹ ಘಟನೆಗಳನ್ನು ನಾವು ಸಹಿಸುವುದಿಲ್ಲ, ಮಹಿಳೆಯರ ಮೇಲೆ ಆಕ್ರಮಕವಾಗಿ ನಡೆದುಕೊಳ್ಳುವುದನ್ನು ತಡೆಯುತ್ತೇವೆ, ಕಾನೂನಿನ ಸಂಪೂರ್ಣ ಬಲವನ್ನು ಈ ಉದ್ದೇಶಕ್ಕಾಗಿ ಬಳಸುತ್ತೇವೆ’ ಎಂದರೆ, ನಮ್ಮ ಸಮಾಧಾನಕ್ಕೆ ಏನೋ ಹೇಳಿದಂತಾಗುತ್ತದೆ ಮಾತ್ರ. ವಾಸ್ತವದಲ್ಲಿ ಪೊಲೀಸರಿಂದ ಈ ಕೆಲಸವನ್ನು ಮಾಡಲು ಆಗುತ್ತಿಲ್ಲ, ಆಗುವುದೂ ಇಲ್ಲ.

ಬೆಂಗಳೂರೂ ಸೇರಿದಂತೆ ನಮ್ಮ ನಗರಗಳ ಸಾರ್ವಜನಿಕ ತಾಣಗಳು ಎಷ್ಟು ಹೊತ್ತಿನಲ್ಲಿಯೂ ಸುರಕ್ಷಿತ ಸ್ಥಳಗಳಲ್ಲ, ಸಹನೀಯ ಬದುಕಿನ ಸಾಧ್ಯತೆಗಳನ್ನು ಹೊಂದಿರುವ ಜಾಗಗಳಲ್ಲ. ಇದು ಮಹಿಳೆಯರ ವಿಷಯದಲ್ಲಿ ಮಾತ್ರವಲ್ಲ, ಮಕ್ಕಳು ಹಾಗೂ ಹಿರಿಯ ನಾಗರಿಕರಿಗೆ ಸಂಬಂಧಿಸಿದಂತೆ ಸಹ ನಿಜ. ಒಂದು ಹೆಜ್ಜೆ ಮುಂದೆ ಹೋಗಿ, ಈ ಮಾತನ್ನು ಪುರುಷರಿಗೂ ಅನ್ವಯಿಸಿ ಹೇಳಿದರೆ ತಪ್ಪಾಗಲಾರದು. ನಮ್ಮ ನಗರಗಳ ರಸ್ತೆಗಳು, ಕೆಲಸದ ಸ್ಥಳಗಳು ಸಹನೀಯ ಜಾಗಗಳಾಗಿ ಉಳಿದಿಲ್ಲ. ಯಾರಾದರೂ ನಿಧಾನವಾಗಿ ವಾಹನವನ್ನು ಓಡಿಸುತ್ತಿರುವ ಅಥವಾ ರಸ್ತೆಯನ್ನು ದಾಟುತ್ತಿರುವ ಸಂದರ್ಭಗಳಲ್ಲಿ ನಮ್ಮ ಪ್ರತಿಕ್ರಿಯೆಯೇನಿರುತ್ತದೆ ಎನ್ನುವುದನ್ನು ನೆನಪಿಸಿಕೊಳ್ಳಿ. ನಮ್ಮ ಜೊತೆಯಲ್ಲಿ ವಾಸಿಸುವ ನಾಗರಿಕರೊಡನೆ ತಾಳ್ಮೆಯ, ಸಭ್ಯ ನಾಗರಿಕ ವರ್ತನೆಯನ್ನು ತೋರಿಸುವ ಶಕ್ತಿಯನ್ನು ನಾವು ಕಳೆದುಕೊಂಡಿದ್ದೇವೆಯೇ ಎನ್ನುವ ಪ್ರಶ್ನೆ ಪ್ರತಿದಿನವೂ ಮೂಡುತ್ತದೆ.

ಈ ಮಾತನ್ನು ಹೇಳುವಾಗ ಮಹಿಳೆಯರು ಪ್ರತಿದಿನದ ಬದುಕಿನಲ್ಲಿ ಎದುರಿಸುವ ಹಿಂಸೆಯನ್ನು, ಆಕ್ರಮಕ ನಡವಳಿಕೆಗಳನ್ನು ಇತರ ಬಗೆಯ ಅಸಹನೀಯ ನಡವಳಿಕೆಗಳ ಜೊತೆಗೆ ಹೋಲಿಸುವುದು ನನ್ನ ಉದ್ದೇಶವಲ್ಲ. ಮಹಿಳೆಯರು ಎದುರಿಸುವ ಸಮಸ್ಯೆಗಳು ಖಂಡಿತವಾಗಿಯೂ ಕೇವಲ ನಮ್ಮ ನಗರಗಳಲ್ಲಿ ಕಾಣುವ ಅಸಹನೀಯ ನಡವಳಿಕೆಗಳ ಉಪವರ್ಗವಲ್ಲ. ವಾಸ್ತವದಲ್ಲಿ ನಮ್ಮ ನಗರಗಳಲ್ಲಿನ ಹಿಂಸೆಯ ಸಂಕಷ್ಟಗಳನ್ನು ಮುಖ್ಯವಾಗಿ ಎದುರಿಸುವವರು ಮಹಿಳೆಯರೆ. ಒಂದೆಡೆ ಹೆಣ್ಣುಮಕ್ಕಳು ಏನನ್ನಾದರೂ ಕಲಿಯಬಹುದು, ಯಾವ ವೃತ್ತಿಯನ್ನಾದರೂ ಬೆನ್ನಟ್ಟಿ ಹೋಗಬಹುದು, ಸ್ವತಂತ್ರವಾಗಿ ಬದುಕನ್ನು ಕಟ್ಟಿಕೊಳ್ಳಬಹುದು ಎಂದು ಹೇಳುತ್ತೇವೆ. ಮತ್ತೊಂದೆಡೆ ಇಂತಹ ಆದರ್ಶಗಳನ್ನು ವಾಸ್ತವದ ಪರಿಮಿತಿಯೊಳಗೆ ಕಟ್ಟಿಕೊಳ್ಳಬೇಕೆನ್ನುವ ವ್ಯಾವಹಾರಿಕ ಉಪದೇಶಗಳನ್ನೂ ಮಾಡುತ್ತೇವೆ. ನಮ್ಮ ಮನೆಗಳ ಹೆಣ್ಣುಮಕ್ಕಳೇ ದಿನಕ್ಕೆ ಎಷ್ಟು ಬಾರಿ ನಾವು ಆಷಾಢಭೂತಿಗಳು (ಹಿಪೊಕ್ರಿಟ್ಸ್) ಎಂದು ಆಪಾದಿಸುತ್ತಾರೆ ಎನ್ನುವುದನ್ನು ನೆನಪಿಸಿಕೊಳ್ಳಿ. ಪ್ರತಿದಿನದ ಬದುಕಿನ ಸಂದರ್ಭದಲ್ಲಿಯೆ ಹೆಣ್ಣುಮಕ್ಕಳ ಸ್ವಾತಂತ್ರ್ಯಕ್ಕೆ ಕಡಿವಾಣ ಹಾಕುವ ಕೆಲಸ ದಿನವೂ ಎಲ್ಲರಿಂದಲೂ ನಡೆಯುತ್ತಿರುತ್ತದೆ. ತಡವಾಗಿ ಮನೆಗೆ ಬಂದರೆ ಅಥವಾ ಯಾರಾದರೂ ಸಹಪಾಠಿ, ಸಹೋದ್ಯೋಗಿಯ ಜೊತೆಗೆ ಕಾಫಿ ಕುಡಿದರೆ ಬರುವ ಆಕ್ಷೇಪಣೆಗಳು ಎಷ್ಟು?

ಸ್ವತಂತ್ರವಾಗಿ ಓಡಾಡಲು, ಕೆಲಸ ಮಾಡಲು ಮತ್ತು ಈ ಎಲ್ಲ ಸಂದರ್ಭಗಳಲ್ಲಿ ತಾವು ಸುರಕ್ಷಿತ ಎನ್ನುವ ಭಾವನೆ ಮಹಿಳೆಯರಿಗೆ ದೊರಕಬೇಕು ಎನ್ನುವ ಆದರ್ಶ ನಮ್ಮಲ್ಲಿ ಮೂಡಿರಬಹುದು. ಇದರ ಫಲವಾಗಿ ಸಾರ್ವಜನಿಕ ವ್ಯವಹಾರದ ಸ್ಥಳಗಳಲ್ಲಿ ಮಹಿಳೆಯರ ಸಂಖ್ಯೆಯೂ ಕ್ರಮೇಣವಾಗಿ ಹೆಚ್ಚುತ್ತಿರಬಹುದು. ಆದರೂ ನಾನು ಮೇಲೆ ಗುರುತಿಸಿದ ಆದರ್ಶವನ್ನು ನಮ್ಮ ಸಮಾಜದ ಬಹುಪಾಲು ಜನರು ಸಂಪೂರ್ಣವಾಗಿ ಒಪ್ಪುತ್ತಿಲ್ಲ. ಈ ಮಾತನ್ನು ಕೇವಲ ಉತ್ತರ ಭಾರತದ ಖಾಪ್ ಪಂಚಾಯಿತಿಗಳ ಸಾಂಪ್ರದಾಯಿಕ ಸಂಸ್ಕೃತಿಯನ್ನು ಗಮನದಲ್ಲಿರಿಸಿಕೊಂಡು ಹೇಳುತ್ತಿಲ್ಲ. ಇದು ಬೆಂಗಳೂರು ನಗರಕ್ಕೆ ಸಹ ಅನ್ವಯವಾಗುವ ಮಾತು. ಇದು ನಮ್ಮ ಮುಂದಿರುವ ವಿಪರ್ಯಾಸ. ಆರ್ಥಿಕ ಸ್ವಾತಂತ್ರ್ಯ ಮತ್ತು ತನ್ನ ಸುಖವನ್ನು ಅರಸುವ ಅವಕಾಶ- ಇವೆರಡೂ ಮಹಿಳೆಗೆ ದೊರಕಿರುವ ಸ್ವಾತಂತ್ರ್ಯದ ಚಿಹ್ನೆ ಎಂದು ಒಂದೆಡೆ ಭಾವಿಸುತ್ತೇವೆ. ಆದರೆ ಈ ಸ್ವಾತಂತ್ರ್ಯಗಳೇ ಪುರುಷನೊಬ್ಬನಿಗೆ ಅವುಗಳನ್ನು ಹೊಂದಿರುವ ಮಹಿಳೆ ‘ತನಗೆ ಲಭ್ಯವಿರುವ ವಸ್ತು’ ಎನ್ನುವ ಠಸ್ಸೆಯನ್ನು ಆಕೆಯ ಮೇಲೆ ಹಾಕಿದಂತೆ ಗೋಚರಿಸುತ್ತದೆ. ಈ ಸಂದರ್ಭದಲ್ಲಿ ಈ ಪುರುಷ ಸಾಂಪ್ರದಾಯಿಕ ಹಿನ್ನೆಲೆಯವನೊ ಅಥವಾ ಆಧುನಿಕ ಮನಸ್ಥಿತಿಯವನೊ ಎನ್ನುವುದು ಮುಖ್ಯವಾಗುವುದಿಲ್ಲ.  ಈ ಎರಡೂ ವರ್ಗದ ಪುರುಷರಿಗೆ ತನ್ನ ಸ್ವಾತಂತ್ರ್ಯವನ್ನು ಚಲಾಯಿಸಿದ ಮಹಿಳೆ ಭೋಗದ ವಸ್ತುವಾಗಿಯೆ ಕಾಣುತ್ತಾಳೆ.

ಈ ಮಾತು ನಮ್ಮ ಸಮುದಾಯದೊಳಗಿನ ಮತ್ತು ಹೊರಗಿನಿಂದ ಬಂದ ಮಹಿಳೆಯರಿಬ್ಬರ ವಿಷಯದಲ್ಲಿಯೂ ಅನ್ವಯವಾಗುತ್ತದೆ. ಆದರೆ ಹೊರಗಿನಿಂದ ಬಂದ ಮಹಿಳೆಯರು, ಅದರಲ್ಲೂ ಬೇರೆ ವರ್ಣ ಮತ್ತು ಜನಾಂಗೀಯ ಹಿನ್ನೆಲೆಯವರಾದ ಪಕ್ಷದಲ್ಲಿ, ಮತ್ತಷ್ಟು ಸಮಸ್ಯೆಗಳನ್ನು ಎದುರಿಸುತ್ತಾರೆ. ಈಶಾನ್ಯದ ರಾಜ್ಯಗಳ ಹೆಣ್ಣುಮಕ್ಕಳು ಅಥವಾ ಆಫ್ರಿಕನ್ ಇಲ್ಲವೆ ಶ್ವೇತವರ್ಣೀಯ ಮಹಿಳೆಯರ ಅನುಭವಗಳನ್ನೇ ಗಮನಿಸಿ. ಇಲ್ಲಿ ಅವರ ಭೌತಿಕ ಚಹರೆ, ವೇಷಭೂಷಣ ಮತ್ತು ಹಾವಭಾವಗಳ ಕಾರಣದಿಂದಲೇ ಮತ್ತಷ್ಟು ಆಕ್ರಮಕ ನಡವಳಿಕೆಗಳನ್ನು ಅನುಭವಿಸುತ್ತಾರೆ. ನನ್ನ ಸ್ನೇಹಿತೆಯರಿಂದ ನೂರಾರು ಬಾರಿ ಕೇಳಿರುವ ಪ್ರಶ್ನೆಯಿದು: ಏಳೆಂಟು ವರ್ಷ ವಯಸ್ಸಿನ ಬಾಲಕರಿಂದ ವಯಸ್ಕ ಪುರುಷರ ತನಕ ಎಲ್ಲರೂ ಹೊರಗಿನ ಮಹಿಳೆಯರನ್ನು ತಮ್ಮ ಸಮುದಾಯದ ಹೆಣ್ಣುಮಕ್ಕಳಿಗಿಂತ ಭಿನ್ನವಾಗಿ ಯಾಕೆ ನೋಡುತ್ತಾರೆ? ಅವರ ದೃಷ್ಟಿಯಲ್ಲಿ ಲೈಂಗಿಕ ನೋಟ (ಗೇಜ಼್) ಯಾಕೆ ಇರುತ್ತದೆ? ಅವರನ್ನು ಲಭ್ಯ ಭೋಗದ ವಸ್ತುವೆಂದು ಯಾಕೆ ಭಾವಿಸುತ್ತಾರೆ?

ಬೆಂಗಳೂರು ನಗರ ಜಾಗತಿಕ ಅರ್ಥ ವ್ಯವಸ್ಥೆಯ ಕೇಂದ್ರಗಳಲ್ಲೊಂದಾಗಿ ಕಳೆದ ಎರಡು ದಶಕಗಳಲ್ಲಿ ಹೊರಹೊಮ್ಮಿದೆ. 1970ರ ದಶಕದಿಂದಲೂ ಪ್ರಪಂಚದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ನಗರಗಳ ಪಟ್ಟಿಯಲ್ಲಿದೆ. ಇಲ್ಲಿರುವ ಔದ್ಯೋಗಿಕ ಮತ್ತು ಶೈಕ್ಷಣಿಕ ಅವಕಾಶಗಳ ಕಾರಣದಿಂದ ದೇಶದ ಮತ್ತು ಜಗತ್ತಿನ ಹಲವು ಭಾಗಗಳಿಂದ ಎಲ್ಲ ವರ್ಗಗಳಿಗೆ ಸೇರಿದ ಪುರುಷರು ಮತ್ತು ಮಹಿಳೆಯರನ್ನು ಆಕರ್ಷಿಸಿದೆ. ಭಾರತದ ಇತರ ನಗರಗಳಿಗೆ ಹೋಲಿಸಿದಾಗ ಬೆಂಗಳೂರಿನ ಜನರು ಮತ್ತು ಹವಾಮಾನಗಳೆರಡೂ ಆಹ್ಲಾದಕರವಾದ ಪರ್ಯಾಯವನ್ನು ಇಲ್ಲಿಗೆ ಬರುವ ವಲಸಿಗರಿಗೆ ಒದಗಿಸುತ್ತವೆ. ಇದೇ ಬೆಂಗಳೂರಿನ ವಿಶ್ವಪ್ರಜ್ಞೆಯ (ಕಾಸ್ಮೊಪಾಲಿಟನಿಸಮ್) ಆಧಾರ ಸಹ. ಹಾಗೆಂದ ಮಾತ್ರಕ್ಕೆ ಮಹಿಳಾ ಸ್ವಾತಂತ್ರ್ಯವನ್ನು ಗುರುತಿಸುವ, ವರ್ಣ-ಜನಾಂಗಗಳ ಭಿನ್ನತೆಯನ್ನು ಗೌರವಿಸುವ ಆಧುನಿಕ ಪ್ರಜ್ಞೆಯೊಂದು ಅಸ್ತಿತ್ವದಲ್ಲಿದೆಯೆಂದಲ್ಲ. ಬೆಂಗಳೂರಿನ ರಸ್ತೆಗಳನ್ನು ಒಂದು ಕ್ಷಣ ಮರೆಯೋಣ. ಅಲ್ಲಿನ ಆಧುನಿಕ ಪ್ರಪಂಚದ ದ್ಯೋತಕವಾದ ಮತ್ತು ಮಹಿಳೆಯರು ಗಣನೀಯ ಸಂಖ್ಯೆಯಲ್ಲಿ ಇರುವ ಕಾರ್ಪೊರೇಟ್ ಪ್ರಪಂಚದಲ್ಲಿ ಮಹಿಳೆಯರು ಅನುಭವಿಸುತ್ತಿರುವ ಲೈಂಗಿಕ ಕಿರುಕುಳವನ್ನು ಗಮನಿಸಿ. ಈ ಪ್ರಕರಣಗಳು ಹೆಚ್ಚಿನ ಸಂಖ್ಯೆಯಲ್ಲಿ ವರದಿಯಾಗುತ್ತಿಲ್ಲ. ಹಿಂಸೆಯನ್ನು ಅನುಭವಿಸುತ್ತಿರುವ ಮಹಿಳೆಯರೂ ನಾನಾ ಕಾರಣಗಳಿಂದ ದನಿಯೆತ್ತುತ್ತಿಲ್ಲ. ಅವರಿಗಿರುವ ಕಾನೂನಿನ ರಕ್ಷಣೆಯೂ ನಗಣ್ಯವಾದುದು.

ನಾನು ಮೇಲೆ ಪ್ರಸ್ತಾಪಿಸಿದ ಯಾವ ವಿಚಾರವೂ ಹೊಸದೇನಲ್ಲ. ಆದರೆ ಈಗ ಬೆಂಗಳೂರಿನ ಘಟನೆಗಳಿಗೆ ಮತ್ತು ಅವುಗಳಿಗೆ ಪ್ರತಿಕ್ರಿಯಿಸಿದ ರಾಜಕಾರಣಿಗಳ ಮಾತುಗಳಿಗೆ ಪ್ರಚಾರ ಸಿಗುತ್ತಿರುವುದು ಹೊರಗಿನಿಂದ ಬಂದ ಮಹಿಳೆಯರ ಮೇಲೆ ಹಲ್ಲೆಯಾಗುತ್ತಿದೆ ಎನ್ನುವ ಕಾರಣದಿಂದ. ಜೊತೆಗೆ ಹೊರಗಿನ ಉಪಸ್ಥಿತಿ ಬೆಂಗಳೂರಿನಲ್ಲಾಗುವ ಎಲ್ಲ ವಿದ್ಯಮಾನಗಳನ್ನೂ ಸುದ್ದಿಯಾಗಿಸುತ್ತದೆ. ಆದರೆ ಹಿಂಸೆಯ ಮೂಲಗಳು ಮತ್ತು ಆಕ್ರಮಕ ನಡವಳಿಕೆಯ ಸ್ವರೂಪವನ್ನು ಅಭ್ಯಸಿಸಿದಾಗ ನಮ್ಮ ಸಮುದಾಯದೊಳಗಿನ ಮಹಿಳೆಯರೂ ಇಂತಹ ನಡವಳಿಕೆಯಿಂದ ತಪ್ಪಿಸಿಕೊಳ್ಳಲಾಗುತ್ತಿಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಬಹುಪಾಲು ಮಹಿಳೆಯರ ಮೇಲಿನ ಹಿಂಸೆಯನ್ನು ನಡೆಸುವವರು ಕುಟುಂಬದ ಸದಸ್ಯರೆ ಅಥವಾ ಹತ್ತಿರದ ಬಂಧುಮಿತ್ರರು. ಇಂತಹ ವಿದ್ಯಮಾನಗಳ ಚರ್ಚೆಯಾಗುವಾಗ ನಾವು ಸಾಮಾನ್ಯವಾಗಿ ನಮ್ಮ ಸಂಸ್ಕೃತಿ-ಸಂಸ್ಕಾರಗಳನ್ನು ಶ್ಲಾಘಿಸುವ ಕೆಲವು ಕಗ್ಗಗಳ ಹಿಂದೆ ಅಡಗಿಕೊಳ್ಳುತ್ತೇವೆ. ಉದಾಹರಣೆಗೆ ವಿವಾಹದೊಳಗೆ ಅತ್ಯಾಚಾರ ಸಾಧ್ಯವಿಲ್ಲ, ಯಾಕೆಂದರೆ ನಮ್ಮ ಸಂಸ್ಕೃತಿಯಲ್ಲಿ ಮದುವೆಯೆಂಬುದು ಒಂದು ಪವಿತ್ರವಾದ ಸಂಬಂಧವೆನ್ನುವ ವಿವರಣೆಯನ್ನೇ ನೆನಪಿಸಿಕೊಳ್ಳಿ. ವಿವಾಹ ಸಂಬಂಧದೊಳಗೆ ಹಿಂಸೆಯನ್ನು ತೊಡೆದುಹಾಕುವಲ್ಲಿ ನಮ್ಮ ಸಂಸ್ಕೃತಿ ಯಶಸ್ವಿಯಾಗಿದೆ ಎಂದು ಪ್ರಾಮಾಣಿಕವಾಗಿ ಯಾರಾದರೂ ಹೇಳಲು ಸಾಧ್ಯವೆ?

ಮಹಿಳಾ ಸ್ವಾತಂತ್ರ್ಯವನ್ನು ಒಂದು ಮೌಲ್ಯವಾಗಿ, ಮಹಿಳೆಯರ ಪಾತ್ರ ಸಾರ್ವಜನಿಕ ಜೀವನದಲ್ಲಿ ಹೆಚ್ಚುತ್ತಿರುವ ಸಾಮಾಜಿಕ ವಾಸ್ತವವನ್ನು ಒಪ್ಪಲು ನಮಗೆ ಆಗುತ್ತಿಲ್ಲ. ಅದರ ಬಗ್ಗೆ ಪ್ರಾಮಾಣಿಕವಾಗಿ ನಮ್ಮ ಮಿತಿಗಳನ್ನು ಒಪ್ಪಿಕೊಂಡು, ಅವುಗಳನ್ನು ಮೀರಲು ಪ್ರಯತ್ನಿಸುವುದು ಉಚಿತವೇನೊ. ಈ ಸವಾಲನ್ನು ಎದುರಿಸಲು ನಮಗೆ ಯಾವ ಬಗೆಯ ನಾಗರಿಕ ಪ್ರಜ್ಞೆಯ ಅಗತ್ಯವಿದೆ ಎನ್ನುವುದು ನಮ್ಮ ಮುಂದಿರುವ ಸವಾಲು. ನಮ್ಮ ಸಂಸ್ಕೃತಿಯೊಳಗೆ ಪರನಾರಿ ಸಹೋದರ ಎನ್ನುವ ಮೌಲ್ಯವಿದೆ. ಅದನ್ನು ಸಾಧಿಸಲು ಆಗದಿದ್ದರೂ ಪರವಾಗಿಲ್ಲ. ಪುರುಷ ತನ್ನ ಬಯಕೆಗಳ ಮೇಲೆ ಸ್ವಲ್ಪಮಟ್ಟಿನ ನಿಯಂತ್ರಣ ಸಾಧಿಸಿ, ಅದು ಕಣ್ಣಿಗೆ ಕಾಣುತ್ತ, ಆಕ್ರಮಕ ದಾಳಿಯ ರೂಪದಲ್ಲಿ ಮಹಿಳೆಗೆ ಅನುಭವವಾಗದಂತೆ ಮಾಡಿದರೆ ಅಷ್ಟರಮಟ್ಟಿಗೆ ಪ್ರಗತಿಯನ್ನು ಸಾಧಿಸಿದಂತಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT