ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಾನು ಆಕೆಗೆ ಸಹಾಯ ಮಾಡಬೇಕಿತ್ತು...

Last Updated 27 ಜುಲೈ 2013, 19:59 IST
ಅಕ್ಷರ ಗಾತ್ರ

ಆಕೆ ಜಿಮ್ ಒಂದರಲ್ಲಿ ಪರಿಚಾರಕಿ. ಆತನಿಗೆ ಸೂಪರ್ ಮಾರ್ಕೆಟ್‌ನಲ್ಲಿ ಕೆಲಸ. ನನಗೆ ಹಲವು ವರ್ಷಗಳ ಪರಿಚಯದ ಈ ಪತಿ ಪತ್ನಿ ಜೋಡಿ `ಮೇಡ್ ಫಾರ್ ಈಚ್ ಅದರ್' ಎನ್ನುವಂತಿತ್ತು. ಸದಾ ಮಾತನಾಡುತ್ತಲೇ ಇರುವ ಪತ್ನಿ ಲವಲವಿಕೆಯ ಮತ್ತು ಉಪಕಾರ ಮನೋಭಾವದಾಕೆ. ಜಿಮ್‌ನಲ್ಲಿ ಎಲ್ಲಾ ಸದಸ್ಯರಿಗೂ ಆಕೆ ಮೆಚ್ಚಿನ ಸಹಾಯಕಿ. ಎಲ್ಲರ ಕಷ್ಟದ ಕಸರತ್ತುಗಳಿಗೆ ನೆರವಾಗುವ ಆಕೆ ಅದರಿಂದ ಸ್ವಲ್ಪ ಹಣವನ್ನು ಹೆಚ್ಚುವರಿಯಾಗಿಯೂ ಸಂಪಾದಿಸುತ್ತಿದ್ದಳು. ಗಂಡನ ಕುರಿತು ಮಾತುಗಳಾಡದೆ ಆಕೆಯ ದಿನ ಕಳೆಯುವುದು ಸಾಧ್ಯವೇ ಇರಲಿಲ್ಲ. ಜಿಮ್ ಸದಸ್ಯರು/ ಗೆಳೆಯರು ಒಂದೇ ದಿನ ವಿವಿಧ ಸಮಯದಲ್ಲಿ ಸಿಕ್ಕಾಗಲೆಲ್ಲಾ ಹಳೆಯ ಕಥೆಗಳೇ ಪುನರಾವರ್ತನೆ. ತನ್ನ ಗಂಡ ತನ್ನನ್ನು ಎಷ್ಟು ಪ್ರೀತಿಸುತ್ತಾನೆ ಎನ್ನುವುದರ ಸುತ್ತ ಆಕೆಯ ಮಾತುಗಳು ಇರುತ್ತಿದ್ದವು. ಆಕೆಯೊಂದಿಗೆ ನಾವೂ ಮನಬಿಚ್ಚಿ ಮಾತನಾಡುತ್ತಾ ಭಾವನೆಗಳನ್ನು ಹಂಚಿಕೊಳ್ಳುತ್ತಿದ್ದೆವು. ಒಂದು ದಿನ ನಾನು ಮನೆಗೆಲಸಕ್ಕೆ ಕೆಲಸದವರನ್ನು ಹುಡುಕುವುದು ಕಷ್ಟವಾಗಿದೆ, ಈಗ `ಯಜಮಾನ- ಜವಾನ' ಕಾಲವೂ ಹೊರಟು ಹೋಗಿದೆ ಎಂದು ಹೇಳಿಕೊಂಡೆ. `ಅದಕ್ಕೆ ಏಕೆ ಚಿಂತಿಸುತ್ತೀರಿ ಮೇಡಂ?' ಎಂದ ಆಕೆ, `ವಿವಿಧ ಕೆಲಸ ಮಾಡುವ ಯಂತ್ರಗಳನ್ನು ಖರೀದಿಸಿ' ಎಂದು ಸಲಹೆ ನೀಡಿದಳು. ತನ್ನ ಪತಿ ತನಗಾಗಿ ಬಟ್ಟೆ ಒಣಗಿಸುವ ಸೌಲಭ್ಯವನ್ನೂ ಒಳಗೊಂಡ ಅತ್ಯಾಧುನಿಕ ತಂತ್ರಜ್ಞಾನದ ವಾಷಿಂಗ್ ಮೆಷಿನ್ ಅನ್ನು 22 ಸಾವಿರ ರೂಪಾಯಿಗೆ ತಂದುಕೊಟ್ಟಿರುವುದನ್ನು ವಿವರಿಸಿದಳು. ನನ್ನೊಳಗಿನ ಅಚ್ಚರಿಯನ್ನು ಅಡಗಿಸಿಕೊಂಡೆ!

ಭಾನುವಾರದ ದಿನಗಳಂದು ಮನೆಗೆ ಬಂದು ನನಗೆ ಸಹಾಯ ಮಾಡುವ ಭರವಸೆಯನ್ನು ಆಕೆ ನೀಡಿದಳು. ಅದು ಎಂದಿಗೂ ನೆರವೇರಲಿಲ್ಲವಷ್ಟೆ. ಒಂದು ದಿನ, ನಾನು ಜಿಮ್‌ಗೆ ಹೋಗುವಾಗ ತಡವಾಗಿತ್ತು. ನನಗಾಗಿ ಕಾದಿದ್ದ ಆಕೆ, ಯಾಕೆ ತಡವಾಯಿತೆಂದು ವಿಚಾರಿಸಿದಳು. ನಾನು ವಾಹಿನಿಯೊಂದರ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ತೆರಳಿದ್ದೆ ಎಂದೆ. ನನ್ನ ಮಾತನ್ನು ಪೂರ್ಣಗೊಳಿಸುವ ಮುನ್ನವೇ, ಎಲ್‌ಇಡಿ ಟೀವಿಯ ಕುರಿತು ಮಾತನಾಡಲು ಶುರುಮಾಡಿದ ಆಕೆ, `ಆ ಕಾರ್ಯಕ್ರಮವನ್ನು ಖಂಡಿತಾ ನೋಡುತ್ತೇನೆ' ಎಂದಳು. `ಎಲ್‌ಇಡಿ ಟೀವಿಯಲ್ಲಿನ ಸ್ಪಷ್ಟತೆ ತುಂಬಾ ಚೆನ್ನಾಗಿದೆ' ಎಂದು, ನಮ್ಮ ಮನೆಯಲ್ಲಿರುವ ಟೀವಿಯ ಬಗ್ಗೆ ಕೇಳಿದಳು. `ನಮ್ಮ ಮನೆಯ ಟಿವಿ 28 ವರ್ಷ ಹಳೆಯದು' ಎಂದು ಉತ್ತರಿಸಿದೆ. ಆಕೆ ಅರೆಕ್ಷಣ ದಿಗ್ಭ್ರಮೆಗೊಳಗಾದಂತೆ ನಿಂತಳು. ಎಲ್‌ಇಡಿ ಟಿವಿ ಖರೀದಿಸುವಂತೆ ನನ್ನನ್ನು ಒತ್ತಾಯಿಸಿದಳು. ತರಕಾರಿ ಹೆಚ್ಚುವುದು, ಬಟ್ಟೆ ಮಡಚುವುದು ಇತ್ಯಾದಿ ಮನೆಗೆಲಸಗಳನ್ನು ಟಿವಿಯ ಎದುರೇ ಮಾಡುತ್ತೇನೆ ಎಂದು ಹೇಳಿಕೊಂಡಳು.

ವಿವಿಧ ಬಗೆಯ ಖಾದ್ಯಗಳ ಕುರಿತು ಚರ್ಚಿಸುವಾಗ, ಆಕೆ ತನ್ನ ಗಂಡನಿಗೆ ಮಾಡಿ ಬಡಿಸಲು ಅತ್ಯುತ್ತಮ ತಿನಿಸು ಯಾವುದೆಂದು ಕೇಳುತ್ತಿದ್ದಳು. ಒಳ್ಳೆಯ ರುಚಿಗಾಗಿ ಚಟ್ನಿಯನ್ನು ರುಬ್ಬುಕಲ್ಲಿನಲ್ಲಿ ಮಾಡಬೇಕು ಎಂದು ಹೇಳಿದೆ. `ಮೇಡಂ ನೀವು 2/3 ಕಲ್ಲುಗಳಿರುವ ವೆಟ್ ಗ್ರೈಂಡರ್ ಕೊಳ್ಳುವುದು ಒಳಿತು' ಎಂಬ ಸಲಹೆಯಿತ್ತಳು ಆಕೆ (ಎಷ್ಟು ಕಲ್ಲುಗಳೆಂದು ಆಕೆ ಹೇಳಿದ್ದನ್ನು ನಾನು ನಿಜಕ್ಕೂ ಮರೆತಿದ್ದೇನೆ). ನಿಜ. ಆಕೆಯ ಗಂಡ ಆಕೆಗೆ ಅದನ್ನೂ ಕೂಡ ತಂದುಕೊಟ್ಟಿದ್ದ. ಇಂಥ ಪ್ರೀತಿ ತೋರುವ ಪತಿಯಿರುವ ಈ ಹುಡುಗಿ ಎಷ್ಟು ಅದೃಷ್ಟವಂತೆಯಲ್ಲವೆ ಎನಿಸಿತು. ಜೊತೆಗೆ ಮನದ ಮೂಲೆಯಲ್ಲೊಂದು ಪ್ರಶ್ನೆಯೂ ಕಾಡಿತು. ಇದಕ್ಕಾಗಿ ಅವರು ಹಣವನ್ನು ಹೇಗೆ ಹೊಂದಿಸುತ್ತಾರೆ? ಎನ್ನುವ ಪ್ರಶ್ನೆಯದು. ಅಲ್ಲದೆ ತನ್ನ ಮನೆಯಲ್ಲಿನ ಯಂತ್ರೋಪಕರಣಗಳನ್ನು ನೋಡಲು ಬರುವಂತೆ ಆಕೆ ಆಗಾಗ್ಗೆ ಆಹ್ವಾನಿಸುತ್ತಿದ್ದಳು. ಆದರೆ ಆ ದಿನ ಬರಲೇ ಇಲ್ಲ. ಉಳಿದವರು ಆಕೆಯ ಮಾತುಗಳನ್ನು ಕೇಳಿಸಿಕೊಳ್ಳದೆ ತಪ್ಪಿಸಿಕೊಳ್ಳುತ್ತಿದ್ದರು, ನಿರ್ಲಕ್ಷಿಸಿದ್ದರು. ಅದು ಆಕೆಗೆ ನೋವನ್ನುಂಟು ಮಾಡಿತ್ತು. “ನೋಡಿ ಮೇಡಂ, ಅವರೆಲ್ಲರೂ ತಾವು ಮಾತ್ರ ಶ್ರೀಮಂತರು, ನಾವೆಲ್ಲರೂ ಬಡವರು ಎಂದು ಭಾವಿಸಿದ್ದಾರೆ” ಎನ್ನುತ್ತಿದ್ದಳು. ನಾನು ಆಕೆಯನ್ನು ಸಮಾಧಾನಪಡಿಸುತ್ತಿದ್ದೆ. ಆಕೆ ತುಂಬಾ ಆತ್ಮಗೌರವ ಉಳ್ಳವಳಾಗಿದ್ದಳು!

2013ರ ಏಪ್ರಿಲ್ 17. ಆ ದಿನ ಚಿನ್ನದ ಬೆಲೆಯಲ್ಲಿ ತೀವ್ರ ಇಳಿಕೆಯಾಗಿತ್ತು. ಆಕೆಯ ಗಂಡ ಎರಡು ಜೊತೆ ಚಿನ್ನದ ಕಿವಿಯೋಲೆಗಳನ್ನು ಕೊಡಿಸಿದ್ದ. `ಇದನ್ನು ಪ್ರದರ್ಶಿಸುವುದು, ಎಲ್ಲರನ್ನೂ ಮನೆಗೆ ಆಹ್ವಾನಿಸುವುದು ಮಾಡಬೇಡ. ಪ್ರಪಂಚ ಸರಿಯಿಲ್ಲ. ಜಾಗ್ರತೆಯಾಗಿರು' ಎಂದು ಎಚ್ಚರಿಸಿದ್ದೆ. ಗದರಿಸಿದ್ದ ಕಾರಣಕ್ಕಾಗಿಯೇನೋ ಒಂದೆರಡು ದಿನ ಆಕೆ ಮೌನವಾಗಿದ್ದಳು. ನನ್ನನ್ನು ತಪ್ಪು ತಿಳಿದುಕೊಳ್ಳುವ ಸ್ವಭಾವದವಳಲ್ಲದ ಆಕೆ ಬೇಗನೆ ನನ್ನ ಜೊತೆ ಮತ್ತೆ ಹೊಂದಿಕೊಂಡಳು. ಅವಳು ಯಾವಾಗಲೂ ಹೇಳುತ್ತಿದ್ದದ್ದು- ನಾನು ಹಳ್ಳಿಯಿಂದ ಬಂದವಳಾಗಿರುವುದರಿಂದ ಅವಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುತ್ತೇನೆ ಎಂದು.

ಅವಳು ನನಗೆ ತೋರಿಸಿದ ಕೊನೆಯ ಉಪಕರಣ, ಪತಿ ಉಡುಗೊರೆಯಾಗಿ ನೀಡಿದ ಸೆಲ್‌ಫೋನ್. `ನಮಗೆ ಮಾತನಾಡಲು ಸಮಯ ಸಿಗುವುದೇ ಕಷ್ಟ. ಅದಕ್ಕೇ ಈ ಸೆಲ್‌ಫೋನ್'. ಅದು ಪ್ರೀಪೇಯ್ಡ ಅಥವಾ ಪೋಸ್ಟ್ ಪೇಯ್ಡ ಎಂಬ ನನ್ನ ಕುತೂಹಲ ತಣಿಸಿಕೊಳ್ಳಬೇಕು ಎಂದಿದ್ದಾಗ ನನ್ನ ಸ್ನೇಹಿತೆ ಕಲಾ ನನ್ನನ್ನು ಜಿಮ್‌ನಿಂದ ಹೊರಗೆಳೆದುಕೊಂಡು ಬಂದರು. `ಆಕೆಗೆ ಏಕೆ ಅಷ್ಟು ಗಮನ ಕೊಡುವಿರಿ? ಒಂದೋ ಆಕೆ ಸುಳ್ಳು ನುಡಿಯುತ್ತಿರಬೇಕು, ಇಲ್ಲವೇ ಕದ್ದದ್ದಿರಬೇಕು. ಒಬ್ಬ ಕೆಲಸದಾಕೆ ಇವುಗಳನ್ನೆಲ್ಲಾ ಕೊಳ್ಳಲು ಸಾಧ್ಯವೇ, ಯೋಚಿಸಿ!'.

ಆಕೆ ತನ್ನ ಕುಟುಂಬದ ಮದುವೆಯೊಂದಕ್ಕೆ ನನ್ನನ್ನು ಆಹ್ವಾನಿಸಿದ್ದಳು. ಆಭರಣ, ಬಟ್ಟೆ ಮತ್ತು ಉಡುಗೊರೆಗಳನ್ನು ಖರೀದಿಸುವುದರಲ್ಲಿ ತಾನೆಷ್ಟು ಬಿಜಿಯಾಗಿಬಿಡುತ್ತೇನೆ ಎಂದೂ ಹೇಳಿದಳು. `ಮೇಡಂ, ನೀವು ಅವೆನ್ಯೂ ರಸ್ತೆ ಮತ್ತು ಚಿಕ್ಕಪೇಟೆಗಳಲ್ಲಿ ಶಾಪಿಂಗ್ ಮಾಡಬೇಕು. ನನ್ನ ಪತಿಯ ಸ್ನೇಹಿತರೊಬ್ಬರು ನಮಗೆ ತುಂಬಾ ರಿಯಾಯಿತಿ ದರದಲ್ಲಿ ವಸ್ತುಗಳು ಸಿಗಲು ಸಹಾಯ ಮಾಡುತ್ತಾರೆ'.

ಒಮ್ಮೆ ನಾನು `ನಿನ್ನ ಗಂಡ ನಿನಗಾಗಿ ತಾಜ್‌ಮಹಲ್ ಕಟ್ಟಿಸಬಲ್ಲನೇ?' ಎಂದು ರೇಗಿಸಿದೆ. ಆಕೆ ನಕ್ಕು, `ತಾಜ್‌ಮಹಲ್ ಎಂದರೆ ಏನು?' ಎಂದು ಕೇಳಿದಳು. ಆಕೆಗೆ ಪ್ರಾಪಂಚಿಕ ತಿಳಿವಳಿಕೆಯಿಲ್ಲ ಎಂದು ನಾನು ಭಾವಿಸಿದೆ. ಕೂಡಲೇ ಆ ಸನ್ನಿವೇಶವನ್ನು ಬದಲಿಸಲು, ಅದೊಂದು ಚಹಾ ಪುಡಿ ಬ್ರ್ಯಾಂಡ್‌ನ ಹೆಸರು ಎಂದೆ. ವೈದ್ಯಳಾದ ನನಗೆ ಇಲ್ಲೇನೋ ಸಮಸ್ಯೆಯಿದೆ ಎಂದೆನಿಸತೊಡಗಿತು. ಈ ಹುಡುಗಿಗೆ ನಾನು ಸಹಾಯ ಮಾಡಬೇಕಿತ್ತು. ಆದರೆ ನನ್ನ ಸ್ನೇಹಿತರು ದುರಾಸೆಯ ಜನರಲ್ಲಿ ರೋಗ ಪತ್ತೆ ಮಾಡುವ ಶ್ರಮ ಬೇಡ ಎಂದರು.

ಮರುದಿನ ನಾನು ವಿಕ್ಟೋರಿಯಾ ಆಸ್ಪತ್ರೆಯ ಮನೋರೋಗ ಚಿಕಿತ್ಸಾ ವಿಭಾಗದಲ್ಲಿ ಡಾ. ಪ್ರಶಾಂತ್ ಅವರನ್ನು ಭೇಟಿ ಮಾಡಿ ಕಥೆಯನ್ನು ವಿವರಿಸಿದೆ. ತಕ್ಷಣವೇ ಅವರು ಅದನ್ನು `ಆಬ್ಸೆಸಿವ್ ಕಂಪಲ್ಸಿವ್ ಡಿಸಾರ್ಡರ್' (ಅತಿಯಾದ ಕೊಳ್ಳುವ ಬಯಕೆಯ ಸಮಸ್ಯೆ) ಪ್ರಕರಣವೆಂದು ಗುರುತಿಸಿ, ಅದಕ್ಕೆ ಚಿಕಿತ್ಸೆ ಅತ್ಯಗತ್ಯ ಎಂದರು. ನನ್ನ ಊಹೆ ಸರಿಯಾಗಿತ್ತು.

`ಆ ದಂಪತಿ ಮಾನಸಿಕ ಆಪ್ತಸಮಾಲೋಚನೆಗೆ ಬಾರದಿದ್ದರೆ ಯಾರಲ್ಲಿ ಈ ಕಾಯಿಲೆಯಿದೆ ಎಂದು ಹೇಳುವುದು ಸಾಧ್ಯವಿಲ್ಲ' ಎಂದರು ಡಾ. ಪ್ರಶಾಂತ್. ಅವರು, `ಆಬ್ಸೆಸಿವ್ ಕಂಪಲ್ಸಿವ್ ಆ್ಯಂಡ್ ರಿಲೇಟೆಡ್ ಡಿಸಾರ್ಡರ್ಸ್‌ ಇನ್ ಅಡಲ್ಟ್' ಎಂಬ ಪುಸ್ತಕದಲ್ಲಿ, `ಕಂಪಲ್ಸಿವ್ ಬೈಯಿಂಗ್' ಎಂಬ ಅಧ್ಯಾಯವನ್ನು ಗುರುತು ಮಾಡಿ ನನಗೆ ನೀಡಿದರು.

ಕೊಳ್ಳುವಿಕೆಯತ್ತ ಆಂತರಿಕ ಪ್ರಚೋದನೆ ಅಥವಾ ಖರೀದಿ ಹುಚ್ಚುತನ, ವ್ಯಸನ ಅಥವಾ ಖರೀದಿ ಮಾಡುವುದರ ತುಡಿತ, ಎಲ್ಲವೂ ಒಂದೇ ಅರ್ಥ. ಪ್ರಚೋದನಾತ್ಮಕ ಖರೀದಿಯು ತಡೆಯಿಲ್ಲದ ಆಕರ್ಷಣೆಗಳು, ದುಬಾರಿಯಾದುದರ ಮೇಲೆ ಹೆಚ್ಚು ಮತ್ತು ಅನಗತ್ಯ ಹಣ ವ್ಯಯಮಾಡುವ ಸ್ವಭಾವಗಳಿಂದ ಪ್ರೇರಿತ. ಇದು ಕೆಲವರ ಮೇಲೆ ಕೆಟ್ಟ ಪರಿಣಾಮ ಬೀರುವುದೂ ಉಂಟು. ಅದು ದೀರ್ಘಾವಧಿ ಮತ್ತು ರೂಢಿಯಾಗಿಯೂ ಇರಬಹುದು (ಒಂದರ ಮೇಲೊಂದು ಸೀರೆ ಕೊಳ್ಳುವ ನನ್ನ ಗೆಳತಿಯೊಬ್ಬಳಿದ್ದಾಳೆ). ಈ ಪ್ರಚೋದಿತ ಸ್ವಭಾವವು ಅದರಿಂದ ನೇತ್ಯಾತ್ಮಕ ಪರಿಣಾಮ ಬೆಳೆಯುವವರೆಗೆ ಸಹನೀಯ.

ಪ್ರಚೋದಿತ ಖರೀದಿಯ ರೋಗ ನಿರ್ಣಯವು ಅತಿ ಸೂಕ್ಷ್ಮವಾದುದು. ಮಿತಿಮೀರಿದ ಕೊಳ್ಳುವಿಕೆ ಅಥವಾ ಖರೀದಿಯು, ಮಾನಸಿಕ ವಿಕಲ್ಪತೆ (ಅಸಾಮಾನ್ಯ ಹೆಚ್ಚಳ ಅಥವಾ ಸಿಟ್ಟಿಗೇಳುವ ಪ್ರವೃತ್ತಿ), ಎಳೆ ಹುಚ್ಚು (ಕಡಿಮೆ ಹುಚ್ಚು- ಮರುಕಳಿಸುವ ಮತ್ತು ವ್ಯಾಪಿಸುವ ಗುಣದಿಂದ ಬೆಳೆದ ಅಥವಾ ಅತೀವ ಸಂತೋಷದಿಂದ ಭಾವಸ್ಥಿತಿ) ಸ್ಥಿತಿಯ ಅವಧಿಯಲ್ಲಿ ವಿಶೇಷವಾಗಿ ಹುಟ್ಟುವುದಿಲ್ಲ. ಲಘು ಉನ್ಮಾದದ ಸ್ಥಿತಿಯಲ್ಲಿರುವ ಹೆಚ್ಚಿನವರು ಶಕ್ತಿಶಾಲಿ, ವಾಚಾಳಿ, ಆತ್ಮವಿಶ್ವಾಸಿ ಮತ್ತು ಹಟದ ಸ್ವಭಾವದವರಾಗಿರುತ್ತಾರೆ.

ಈ ಕಾಯಿಲೆ ಹೊಂದಿರುವವರಲ್ಲಿ ಮಹಿಳೆಯರು ಹೆಚ್ಚು. ತಾರುಣ್ಯದ ಅಥವಾ ಇಪ್ಪತ್ತರ ಹರೆಯದ ಮೇಲಿನವರಲ್ಲಿ ಇದರ ಪರಿಣಾಮ ಜಾಸ್ತಿ. ಆದರೆ ಅದರ ಪ್ರತಿಕೂಲ ಪರಿಣಾಮದ ವ್ಯಾಪ್ತಿಯನ್ನು ತಿಳಿಯಲು, ವ್ಯಕ್ತಿಯಲ್ಲಿರುವ ಈ  ಸಮಸ್ಯೆಯ ಅಸ್ತಿತ್ವವನ್ನು ಅರಿಯುವ ಹೊತ್ತಿಗೆ ದಶಕವೇ ಕಳೆದುಹೋಗಬಹುದು.

ಈ ಸಮಸ್ಯೆಯು ಹೆಚ್ಚಿನ ಪ್ರಕರಣಗಳಲ್ಲಿ ನಿರಂತರವಾದುದು (ಒಂದು ತಿಂಗಳು ಅಥವಾ ಅದಕ್ಕಿಂತ ಹೆಚ್ಚು ಸಮಯ ಗೈರುಹಾಜರಾಗದು) ಮತ್ತು ಶೇ 40ರಷ್ಟು ಪ್ರಕರಣಗಳಲ್ಲಿ ನಡು ನಡುವೆ ಮರುಕಳಿಸುತ್ತದೆ.

ಕೊಳ್ಳುಬಾಕ ಬಯಕೆ ಮತ್ತು ವರ್ತನೆ ಸಂಪೂರ್ಣ ಬದಲಾಗುವಂಥದ್ದು. ಕೆಲವು ದಿನಗಳಿಗೊಮ್ಮೆ ಅಥವಾ ವಾರದಲ್ಲಿ ಒಮ್ಮೆ ಕಾಣಿಸಿಕೊಳ್ಳಬಹುದಾದ ಈ ಸಮಸ್ಯೆ ಮನೆ, ಕೆಲಸದ ಸ್ಥಳ, ಅಂಗಡಿ ಅಥವಾ ಕೆಲವೊಮ್ಮೆ ವಾಹನ ಚಾಲನೆ ಮಾಡುವಂಥ ಸನ್ನಿವೇಶಗಳಲ್ಲೂ ಹುಟ್ಟಿಕೊಳ್ಳಬಹುದು. ಹೆಚ್ಚಿನ ಸುಶಿಕ್ಷಿತ ಜನರು ಈ ಬಗೆಯ ಬಯಕೆಗಳನ್ನು ಹತ್ತಿಕ್ಕಲು ಪ್ರಯತ್ನಿಸುತ್ತಾರೆ (ಅಂಗಡಿಗಳಿಗೆ ಹೋಗುವುದನ್ನು ತಪ್ಪಿಸಿಕೊಳ್ಳುವ ಮೂಲಕ ಅಥವಾ ಕ್ರೆಡಿಟ್ ಕಾರ್ಡ್ ಅನ್ನು ನಾಶಪಡಿಸುವ ಮೂಲಕ). ಆದರೆ ಅವರು ಹಲವು ಬಾರಿ ಸಂತೋಷಕ್ಕಿಂತ ದುಃಖ, ಕೋಪ ಅಥವಾ ಒಂಟಿತನ ಅನುಭವಿಸುವ ತೀವ್ರವಾದ ನೇತ್ಯಾತ್ಮಕ ಭಾವನೆಗಳಿಂದಾಗಿ ಬಯಕೆಯನ್ನು ಹತ್ತಿಕ್ಕುವಲ್ಲಿ ಸೋಲುತ್ತಾರೆ. ತೃಪ್ತಿ, ಆನಂದ ಅಥವಾ ಒತ್ತಡದಿಂದ ಮುಕ್ತಿ ಹೊಂದುವ ಪ್ರಕ್ರಿಯೆ- ಇವು ಯಾವಾಗಲೂ ಖರೀದಿಯ ಪ್ರಚೋದನೆಯನ್ನು ಹಿಂಬಾಲಿಸುತ್ತಿರುತ್ತವೆ. ಆದರೆ ಅವುಗಳದ್ದು ಕ್ಷಣಿಕಾವಧಿ. ಹೀಗೆ ಕೊಳ್ಳುವ ವಸ್ತುಗಳು ಹೆಚ್ಚಾಗಿ ದೈಹಿಕ ನೋಟ ಇಲ್ಲವೇ ಆಕರ್ಷಣೆಗೆ ಸಂಬಂಧಿಸಿರುತ್ತವೆ; ಉದಾ: ಬಟ್ಟೆಬರೆ, ಆಭರಣ, ಕಾಸ್ಮೆಟಿಕ್ (ತಾರುಣ್ಯದಲ್ಲಿ), ಗೃಹೋಪಕರಣಗಳು, ವಾಹನ ಮತ್ತು ಮೊಬೈಲ್ ಫೋನ್‌ಗಳು.

ಕೊಂಡ ವಸ್ತುಗಳೆಲ್ಲವನ್ನೂ ಅವರು ಸದಾ ಬಳಕೆ ಮಾಡುವುದಿಲ್ಲ. ಅತಿಯಾಗಿ ಕೊಳ್ಳುವವರು ಸುಳ್ಳು ಚೆಕ್‌ಗಳನ್ನು ನೀಡುವ ಅಥವಾ ದಿವಾಳಿತನ ಘೋಷಿಸುವ ಕೃತ್ಯಕ್ಕೆ ಮುಂದಾಗುತ್ತಾರೆ. `ಪ್ರತಿಕಾರಕ್ಕಾಗಿ ವ್ಯಯ' (ಬೇರೆ ವ್ಯಕ್ತಿಯ ಹಣ ಖಾಲಿ ಮಾಡುವುದು) ಹೆಚ್ಚಾಗಿ ಶ್ರೀಮಂತ ಪೋಷಕರ ಯೌವನಾವಸ್ಥೆಯಲ್ಲಿರುವ ಮಕ್ಕಳಲ್ಲಿ ಕಂಡುಬರುತ್ತದೆ.
ಈ ಕೊಳ್ಳುಬಾಕರಲ್ಲಿ ಹೆಚ್ಚಿನವರು ಹಿಂದೆ ಅಥವಾ ಪ್ರಸ್ತುತ ತೀವ್ರವಾದ ಖಿನ್ನತೆ, ಉದ್ವೇಗದ ಕಾಯಿಲೆ, ಮದ್ಯಪಾನ ವ್ಯಸನ ಅಥವಾ ಅತಿ ಹಸಿವು (ತಿನ್ನುವ ಕಾಯಿಲೆ) ಸಮಸ್ಯೆಗಳಿಂದ ಬಳಲುತ್ತಿರುತ್ತಾರೆ. ನೆನಪಿಡಿ, ಅತಿಯಾದ ಕೊಳ್ಳುವ ಪ್ರವೃತ್ತಿಯು ಒಂದು ಕಾಯಿಲೆ ಮತ್ತು ಅದನ್ನು ಔಷಧ (ಫಾರ್ಮಾಕೊಥೆರಪಿ) ಹಾಗೂ ಮಾನಸಿಕ ಚಿಕಿತ್ಸೆ (ಸೈಕೊಥೆರಪಿ) ಮೂಲಕ ವಾಸಿ ಮಾಡಬಹುದು. ಕೊಳ್ಳುವಿಕೆಯ ಹಂಬಲದಿಂದ ದುರ್ಬಲಗೊಳ್ಳುವ ಆತ್ಮಗೌರವವನ್ನು ಹೆಚ್ಚಿಸಲು ಅವರ ದೈಹಿಕ ಸೌಂದರ್ಯಕ್ಕೆ ಸಂಬಂಧಿಸಿದಂತೆ ಪ್ರಶಂಸೆ ವ್ಯಕ್ತಪಡಿಸಬೇಕು ಮತ್ತು ಅವರನ್ನು ರಕ್ಷಿಸಬೇಕು.

ಡಾ. ಪ್ರಶಾಂತ್ ಅವರಿಂದ ವೈಜ್ಞಾನಿಕ ಜ್ಞಾನ ಮತ್ತು ಸಾಮರ್ಥ್ಯ ಪಡೆದ ನಾನು ಈ ದಂಪತಿಗೆ ಸಹಾಯ ಮಾಡಲು ಉತ್ಸಾಹ ಮತ್ತು ಸಂತಸದೊಂದಿಗೆ ಜೂನ್ 30ರಂದು ಜಿಮ್ ಪ್ರವೇಶಿಸಿದೆ. ಬಾಗಿಲ ಬಳಿ ಸಮೀಪಿಸುತ್ತಿದ್ದಂತೆ ಆಕೆಯನ್ನು ಕೂಗಿದೆ. ಆದರೆ ಅಲ್ಲಿ ನೀರವ ಮೌನವಿತ್ತು. ಅಲ್ಲಿದ್ದ ಮತ್ತೊಬ್ಬ ಜಿಮ್ ಸಹಾಯಕರು, ಸಣ್ಣನೆಯ ಸ್ವರದಲ್ಲಿ, `ಆ ದಂಪತಿ ಬೆಳಿಗ್ಗೆ ನಸುಕಿನಲ್ಲಿ ಓಡಿಹೋಗಿದ್ದಾರೆ' ಎಂದು ಪಿಸುಗುಟ್ಟಿದರು.

ಒಂದು ವಾರದ ಬಳಿಕ- ಜನರು (ಅವರಿಗೆ ಸಾಲ ಕೊಟ್ಟವರು) ಆ ದಂಪತಿಯನ್ನು ಹುಡುಕುತ್ತಿದ್ದಾರೆ ಎಂದು ತಿಳಿಯಿತು. ಐದು ಲಕ್ಷ ರೂಪಾಯಿಗೂ ಅಧಿಕ ಹಣವನ್ನು ಅವರು ಬ್ಯಾಂಕ್ ಮತ್ತು ಜನರಿಗೆ ವಂಚಿಸಿದ್ದರು. ಅದೇನೇ ಇದ್ದರೂ ಆಕೆ ಆತ್ಮ ಗೌರವವುಳ್ಳ ಮಾನವೀಯ ವ್ಯಕ್ತಿಯಾಗಿದ್ದಳು. ಆಕೆ ಜೀವಂತವಾಗಿ ಇದ್ದಾಳೆ ಎಂದು ಭರವಸೆ ಹೊಂದಿರಲು ಮತ್ತು ಪ್ರಾರ್ಥಿಸಲು ಮಾತ್ರ ನನ್ನಿಂದ ಸಾಧ್ಯ. ನನ್ನ ಅಂತಃಪ್ರಜ್ಞೆಯ ನೆರವಿನಿಂದ ಆಕೆಗೆ ಮೊದಲೇ ಸಹಾಯ ಮಾಡಬೇಕಿತ್ತು ಎಂಬ ಬೇಸರದ ಭಾವದೊಂದಿಗೆ ನಾನು ಅಲ್ಲಿಂದ ವಾಪಸ್ ಆದೆ.

ಸಮಾಜವಾಗಿ ನಾವು ವಿಭಜನೆಗೊಳ್ಳುತ್ತಾ, ಸ್ವಾರ್ಥಿಗಳಾಗುತ್ತಾ, ಹೆಚ್ಚು ಯಾಂತ್ರಿಕ ಮತ್ತು ಐಹಿಕ ಸುಖಕ್ಕೆ ದಾಸರಾಗುತ್ತಿದ್ದೇವೆ. ಉಳ್ಳವರು  ಈ ಕಾಯಿಲೆಯನ್ನು ನಿಭಾಯಿಸಬಲ್ಲರು, ಆದರೆ ಯಾತನೆ ಅನುಭವಿಸುವುದು ಬಡವರು. ನಾವು ಕನಿಕರ, ಕಾಳಜಿ ಮತ್ತು ಸಹಾನುಭೂತಿಯುಳ್ಳ ಜನರ ಸಮುದಾಯವನ್ನು ಮತ್ತೆ ಆವಿಷ್ಕರಿಸುವ ಅಗತ್ಯವಿದೆ. ನಾವೆಲ್ಲೋ ಒಂಟಿ ಜೀವಿಗಳಾಗುತ್ತಿದ್ದೇವೆ. ನಮ್ಮಗಳ ನಡುವೆ ಸಂಪರ್ಕ ಬೆಸೆದುಕೊಳ್ಳಬೇಕಿದೆ!

ಈ ಪುಸ್ತಕಗಳನ್ನೊಮ್ಮೆ ತಿರುವಿ ಹಾಕಿ-
`ಶಾಪೊಹಾಲಿಕ್ಸ್: ಸೀರಿಯಸ್ ಹೆಲ್ಪ್ ಫಾರ್ ಅಡಿಕ್ಟೆಡ್ ಸ್ಪೆಂಡರ್', `ವುಮೆನ್ ಹೂ ಶಾಪ್ ಟೂ ಮಚ್- ಓವರ್‌ಕಮಿಂಗ್ ದಿ ಅರ್ಜ್ ಟು ಸ್ಪ್ಲರ್ಗ್'. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT