ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ದೇಶಕನಿಗೆ ನಿವೃತ್ತಿ ಬೇಕೇ?

Last Updated 19 ಏಪ್ರಿಲ್ 2012, 19:30 IST
ಅಕ್ಷರ ಗಾತ್ರ

ಚಲನಚಿತ್ರ ನಿರ್ದೇಶಕನಿಗೆ, ನಾಯಕ ನಟನಿಗೆ  ನಿವೃತ್ತಿ ಇದೆಯೇ? ಬ್ಯಾಟ್ ಬೀಸುವ ಶಕ್ತಿ ಕಡಿಮೆಯಾಗುತ್ತಾ ಬಂದಂತೆ ಕ್ರಿಕೆಟಿಗರು ನಿವೃತ್ತಿ ಘೋಷಿಸಿ, ಮೈದಾನದಿಂದ ಹೊರ ಬರುತ್ತಾರೆ.

ಆದರೆ ಚಿತ್ರರಂಗದಲ್ಲಿ ಪರಿಸ್ಥಿತಿ ಆ ರೀತಿ ಇಲ್ಲ. ಪ್ರೇಕ್ಷಕ ಮುಖ ತಿರುವಿದ ಕೂಡಲೇ ಸೂಪರ್ ಸ್ಟಾರ್ ಆದವನೂ, ಗ್ರೇಟ್ ನಿರ್ದೇಶಕನೂ ತೆರೆಮರೆಗೆ ಸರಿಯುತ್ತಾರೆ. ಆದರೆ ಸೃಜನಾತ್ಮಕ ಕೆಲಸದಲ್ಲಿ ನಿಪುಣನಾದ ನಿರ್ದೇಶಕನಿಗೆ ನಿವೃತ್ತಿ ಎನ್ನುವುದು ಸರಿಯಾಗಿ ಹೊಂದಾಣಿಕೆ ಆಗದ ಪದ.

ಕಳೆದ 20 ವರ್ಷಗಳಿಂದ ಚಿತ್ರರಂಗದಲ್ಲಿ ತನ್ನ ಸಾಮರ್ಥ್ಯವನ್ನು ಸಾಬೀತು ಪಡಿಸಿರುವ, 45 ಚಿತ್ರಗಳ ಮೂಲಕ ಯಶಸ್ಸು, ಜನಪ್ರಿಯತೆ, ಸೋಲು ಎಲ್ಲವನ್ನೂ ಕಂಡಿರುವ ನಿರ್ದೇಶಕ, ಎಸ್. ನಾರಾಯಣ್ ಚಿತ್ರರಂಗದಿಂದ ನಿವೃತ್ತಿಯಾಗುವುದಾಗಿ ಘೋಷಿಸಿದ್ದಾರೆ.
ಇದು ಚಿತ್ರರಂಗದ ದುರಂತದ ಒಂದು ಮುಖ. ನಿವೃತ್ತಿ ಘೋಷಣೆಯ ಅಂತರಂಗದಲ್ಲಿ ಕನ್ನಡ ಚಿತ್ರರಂಗದ ಪರಿಸ್ಥಿತಿಯೂ ತೆರೆದುಕೊಳ್ಳುತ್ತದೆ. ಕನ್ನಡ ಚಿತ್ರರಂಗ ಕಳೆದ ಐದು ವರ್ಷಗಳಲ್ಲಿ ಕಾಣುತ್ತಿರುವ ಬದಲಾವಣೆ, ತಾಂತ್ರಿಕ ಬೆಳವಣಿಗೆ, ಸ್ಟಾರ್‌ಗಳ ಹಿಡಿತ, ಚಿತ್ರಮಂದಿರಗಳ ಮೇಲಾಟ, ಪರಭಾಷಾ ಚಿತ್ರಗಳ ಅಟ್ಟಹಾಸ, ಎಲ್ಲಕ್ಕಿಂತ ಮುಖ್ಯವಾಗಿ ಕನ್ನಡ ಚಿತ್ರಗಳತ್ತ ಪ್ರೇಕ್ಷಕರು ವಿಮುಖರಾಗಿರುವುದು ಎಲ್ಲವೂ ಫ್ಲ್ಯಾಷ್ ಬ್ಯಾಕ್ ತಹರ ಮೂಡಿ ಬರುತ್ತದೆ.

ಕಳೆದ ಎರಡು ವರ್ಷಗಳ ಹಿಂದೆ 50 ಚಿತ್ರ ನಿರ್ದೇಶಿಸಿರುವ ಯಶಸ್ವಿ ನಿರ್ದೇಶಕ ಎಂದೇ ಖ್ಯಾತಿಗಳಿಸಿದ ಸಾಯಿಪ್ರಕಾಶ್, ಆತ್ಮಹತ್ಯೆಗೆ ಯತ್ನಿಸಿದ ಘಟನೆ ನೆನಪಿಸಿಕೊಳ್ಳಿ, ಮತ್ತೊಬ್ಬ ನಿರ್ದೇಶಕ, ನಟ ಹರೀಶ್‌ರಾಜ್ ಚಿತ್ರಮಂದಿರದ ಮೇಲಿನಿಂದ ಬಿದ್ದು ಆತ್ಮಹತ್ಯೆಗೆ ಯತ್ನಿಸಿದ ಘಟನೆಯನ್ನೂ ನೆನಪಿಸಿಕೊಳ್ಳಿ. ಪುಟ್ಟಣ ಕಣಗಾಲ್ ಅವರೇ `ಋಣ ಮುಕ್ತಳು~ ನಿರ್ದೇಶಿಸುತ್ತಿರುವ ಸಮಯದಲ್ಲಿ ಎಂತಹ ಸಂಕಟಕ್ಕೊಳಗಾಗಿದ್ದರು ಎನ್ನುವುದನ್ನು ನೆನಪಿಸಿಕೊಳ್ಳಿ.
 
ಈಗ ನಾರಾಯಣರ ನಿರ್ಧಾರವೂ, ಅಂದು ಇತರ ನಿರ್ದೇಶಕರು ತಳೆದ ನಿಲುವೂ ಎಲ್ಲವೂ ಒಂದೇ ರೀತಿಯಾಗಿದೆ ಅನಿಸುತ್ತಿದೆ. ಕಳೆದ 20 ವರ್ಷಗಳಿಂದ ಚಿತ್ರರಂಗದಲ್ಲಿ ಸಾಧನೆ ಮಾಡಿದ ನಿರ್ದೇಶಕರ ಸ್ಥಿತಿ ಇಂದು ಏನಾಗಿದೆ? 1981ರಲ್ಲಿ ನಟನಾಗಬೇಕು ಎಂದುಕೊಂಡು ಬೆಂಗಳೂರಿಗೆ ಬಂದ ನಾರಾಯಣ್, ಅಂದು ಜನಪ್ರಿಯ ನಿರ್ದೇಶಕರಾಗಿದ್ದ ಭಾರ್ಗವ, ಎಂ.ಟಿ. ರಘು, ರಾಜ್‌ಕಿಶೋರ್ ಅವರ ಬಳಿ ಸಹಾಯಕರಾಗಿ ಸೇರಿಕೊಂಡರು.
 
ಆ ನಿರ್ದೇಶಕರುಗಳು ಇನ್ನೂ ಇದ್ದಾರೆ. ನಿವೃತ್ತಿ ಘೋಷಿಸಿಲ್ಲ. ಗೀತಪ್ರಿಯ, ಭಗವಾನ್, ವಿಜಯ್, ಕೆ.ಎಸ್. ಎಲ್.ಸ್ವಾಮಿ (ರವಿ), ಎಸ್. ವಿ. ರಾಜೇಂದ್ರ ಸಿಂಗ್ ಬಾಬು, ಎಂ. ಎಸ್. ರಾಜಶೇಖರ್, ಶಿವಮಣಿ, ಸುನಿಲ್ ಕುಮಾರ್ ದೇಸಾಯಿ, ಉಮಾಕಾಂತ್, ಫಣಿ ರಾಮಚಂದ್ರ ಮೊದಲಾದವರೆಲ್ಲ ಈಗ ಎಲ್ಲಿದ್ದಾರೆ? ಅವರೆಲ್ಲಾ ಇನ್ನೂ ನಿವೃತ್ತಿ ಘೋಷಿಸಿಲ್ಲ. ಅದು ಅಗತ್ಯವೂ ಇಲ್ಲ. ಚಿತ್ರರಂಗದಲ್ಲಿ ಮಾರ್ಗದರ್ಶಕರಾಗಿ ಅವರು ತಮ್ಮ ವೃತ್ತಿಯನ್ನು ಮುಂದುವರೆಸಲು ನಾನಾ ಹಾದಿಗಳಿದೆ.

ಇವರ ಸಾಲಿನಲ್ಲೇ ಎಸ್. ನಾರಾಯಣ್ ಇದ್ದಾರೆ. ಚಿತ್ರರಂಗದಲ್ಲಿ ನಿರ್ಮಾಪಕರು ಕರೆಯಲಿಲ್ಲ ಎಂದರೆ, ನಟರು ನಖರಾ ಮಾಡಿದರೆ, ಪ್ರೇಕ್ಷಕರು ಚಿತ್ರಮಂದಿರಕ್ಕೆ ಬರಲಿಲ್ಲ ಎಂದರೆ ಅದಕ್ಕೆ ಬದಲಾಗುತ್ತಿರುವ ಚಿತ್ರರಂಗವೇ ಕಾರಣ. ಎಸ್. ನಾರಾಯಣ್ ಅವರು ಚಿತ್ರರಂಗಕ್ಕೆ ನೀಡಿರುವ ಕೊಡುಗೆ ಕಡಿಮೆ ಏನಲ್ಲ. ಅಂತವರು ದೂರ ಸರಿಯುವೆ ಎಂದರೆ ಅದರ ಹಿಂದೆ ಚಿತ್ರರಂಗ ಕಾಣುತ್ತಿರುವ ಸಂಕಟ, ಕುಸಿತ ಎಲ್ಲವೂ ಇದೆ.

ಅದನ್ನು ಸರಿಪಡಿಸಲು ಮುಂದೆ ಬರಬೇಕಾದವರು ಯಾರು?
ರಾಜ್‌ಕುಮಾರ್ ಅಭಿನಯದ ಕೊನೆಯ ಚಿತ್ರ `ಶಬ್ದವೇದಿ~, ವಿಷ್ಣುವರ್ಧನ್ ಅಭಿನಯದ `ವೀರಪ್ಪ ನಾಯ್ಕ~ ಭಾರೀ ಯಶಸ್ಸುಗಳಿಸಿದ `ಚೈತ್ರದ ಪ್ರೇಮಾಂಜಲಿ~ ಮೊದಲಾದ ಚಿತ್ರಗಳ ಮೂಲಕ ಚಿತ್ರರಂಗಕ್ಕೊಂದು ಟ್ರೆಂಡ್ ಸೃಷ್ಟಿಸಿದ ಖ್ಯಾತಿ ನಾರಾಯಣ್‌ದು.

ರಾಜೇಂದ್ರ ಸಿಂಗ್ ಬಾಬು `ಕುರಿಗಳು ಸಾರ್ ಕುರಿಗಳು~ ನಿರ್ಮಿಸಿದಾಗ ಹಾಸ್ಯ ನಟನಾಗಿ ನಟನಾ ಪ್ರತಿಭೆ ಪ್ರದರ್ಶಿಸಿ, ಸತತವಾಗಿ `ಸಾರ್.....~ ಸರಣಿ ನಿರ್ಮಾಣಕ್ಕೆ ರಾಜೇಂದ್ರ ಸಿಂಗ್ ಬಾಬುಗೆ ಪ್ರೇರಣೆ ನೀಡಿದವರು ನಾರಾಯಣ್. ಇಂತಹ ಪ್ರತಿಭೆ, ಚಿತ್ರರಂಗದಿಂದಲೇ ನಿವೃತ್ತಿಯಾಗುತ್ತೇನೆ ಎಂದು ಹೇಳಿದರೆ, ಚಿತ್ರರಂಗದ ಪ್ರತಿಕ್ರಿಯೆ ತಣ್ಣಗಿದೆ. ಯಾರೊಬ್ಬರೂ ಈ ಬಗ್ಗೆ ಪ್ರತಿಕ್ರಿಯಿಸಿಲ್ಲ ಎಂದರೆ, ಚಿತ್ರರಂಗ ಎಷ್ಟು ಜಡವಾಗಿದೆ ನೋಡಿ.

`ಉದ್ಯಮದ ಹಿತದ ದೃಷ್ಟಿಯಿಂದ ನಾನು ನಿವೃತ್ತನಾಗುವ ನಿರ್ಧಾರ ತೆಗೆದು ಕೊಂಡಿದ್ದೇನೆ~ ಎಂದು ನಾರಾಯಣ್ ನನ್ನ ಬಳಿ ಹೇಳಿದರು. `ನನ್ನ ನಿರ್ಧಾರದ ಬಗ್ಗೆ ಅಭಿಮಾನಿಗಳು ಚಕಿತರಾಗಿ ಸ್ಪಂದಿಸಿದರು. ಉದ್ಯಮದ ಕಡೆಯಿಂದ ಯಾರೊಬ್ಬರೂ ಮಾತನಾಡಿಸಿಲ್ಲ.
 
ನಾನು ಚಿತ್ರರಂಗದ ಎಂಟು ಸಂಘಗಳ ಸದಸ್ಯನಾಗಿದ್ದೇನೆ, ಈ ಸಂಘದವರೂ `ಯಾಕೀಗೇ?~ ಎಂದು ಕೇಳಲಿಲ್ಲ~ ಎಂದು ನಾರಾಯಣ್ ನೊಂದುಕೊಂಡರು.
ಇತ್ತೀಚೆಗೆ ನಾರಾಯಣ್ ನಿರ್ದೇಶಿಸಿದ `ಶೈಲೂ~, `ಮುಂಜಾನೆ~ ಎರಡೂ ಚಿತ್ರಗಳೂ ಸೋಲು ಕಂಡವು.

ಅವರ ಪುತ್ರ ಪಂಕಜ್ ಅಭಿನಯದ ಸ್ವಂತ ನಿರ್ಮಾಣದ `ವೀರು~, `ಚೈತ್ರದ ಚಂದ್ರಮ~, `ಚೆಲುವಿನ ಚಿಲಿಪಿಲಿ~, `ದುಷ್ಟ~ ಎಲ್ಲವೂ ಸೋತವು. ದರ್ಶನ್ ಕಾಲ್‌ಶೀಟ್‌ಗೆ ನಿರಾಕರಿಸಿದರು ಎಂಬ ಸುದ್ದಿ ಬಂತು. ಇವೆಲ್ಲಾ ಹತಾಶೆ  ನಿವೃತ್ತಿಗೆ ಕಾರಣವೇ?
`ಚಿತ್ರರಂಗದಲ್ಲಿ ನಾಲ್ಕು ವರ್ಷಗಳಿಂದ ನಾನು ಪಡಬಾರದ ನೋವು ಅನುಭವಿಸುತ್ತಾ ಇದೀನಿ. ಚಿತ್ರರಂಗದಲ್ಲಿ ನಿರ್ದೇಶಕನಿಗೆ ಗೌರವ ಇರಬೇಕು.

ಈಗ ಅದು ಕಾಣೆಯಾಗಿದೆ, ನಾನೊಬ್ಬನೇ ಡ್ರೈವ್ ಮಾಡಿದರೆ ಸಾಲದು, ರಸ್ತೇನೂ ಚೆನ್ನಾಗಿರಬೇಕು, ಈಗ ಬಂದಿರುವ ಹೊಸ ಜನರೇಶನ್‌ನ ಪ್ರವಾಹದಲ್ಲಿ ನಿರ್ದೇಶಕರಿಗೆ ಗೌರವ ಇಲ್ಲ. ನಾನು ಇದುವರೆಗೆ ಚಿತ್ರರಂಗದಲ್ಲಿ ಗಳಿಸಿರುವ ಮೌಲ್ಯ ಎಲ್ಲ ಕಳೆದು ಹೋಗುತ್ತದೆಯೇ ಎಂಬ ಭಯ ನನ್ನನ್ನು ಕಾಡುತ್ತಿದೆ. ಅದನ್ನು ಉಳಿಸಿಕೊಳ್ಳಲು ನಿವೃತ್ತಿಯೊಂದೇ ದಾರಿ~.

`ನನ್ನ ಸಿನಿಮಾಗಳು ಇತ್ತೀಚಿನ ದಿನಗಳಲ್ಲಿ ಸೋತಿರಬಹುದು. ಅದಕ್ಕೆ ನಾನು ಯಾರನ್ನೂ ಹೊಣೆಗಾರರನ್ನಾಗಿ ಮಾಡುವುದಿಲ್ಲ. ನನ್ನ ಚಿತ್ರಗಳ ಸೋಲಿಗೆ ನಾನೇ ಕಾರಣ. ಚಿತ್ರರಂಗವನ್ನು ಈಗ ಸ್ಟಾರ್‌ಗಳು ಆಳುತ್ತಿದ್ದಾರೆ.

ಜನರನ್ನು ಆಕರ್ಷಿಸಿ ಚಿತ್ರಮಂದಿರಕ್ಕೆ ಎಳೆತರುವ ಶಕ್ತಿ ಇರುವ ನಟರು ಆಳಿದರೆ ಪರವಾಗಿಲ್ಲ. ಆದರೆ ಒಂದು ರೂಪಾಯಿಗೂ ಬೆಲೆ ಇಲ್ಲದ, ಒಂದು ಚಿತ್ರಮಂದಿರದ ಒಂದು ಶೋವನ್ನೂ ತುಂಬಲಾಗದ ನಟರು ಕಮಾಂಡ್ ಮಾಡಿದರೆ ಬೇಜಾರಾಗುತ್ತದೆ~ ಎಂದು ನೋವು ತೋಡಿಕೊಂಡ ನಾರಾಯಣ್, `ನಿರ್ದೇಶಕ ಯಾರೊಬ್ಬರ ಗುಲಾಮ ಆಗಬಾರದು~ ಎಂದರು.

`ಕನ್ನಡ ಪ್ರೇಕ್ಷಕರಿಗೆ ಕನ್ನಡ ಚಿತ್ರಗಳು ಬೇಕಾಗಿಲ್ಲ. ಜನ ಸಿನಿಮಾ ನೋಡಲು ಚಿತ್ರಮಂದಿರಕ್ಕೆ ಬರುತ್ತಿಲ್ಲ. ಸೋಲುತ್ತಿರುವ ಎಲ್ಲ ಕನ್ನಡ ಚಿತ್ರಗಳೂ ಕೆಟ್ಟ ಚಿತ್ರಗಳಲ್ಲ. ಆದರೂ ಈ ರೀತಿ ಚಿತ್ರಗಳ ಸೋಲಿಗೆ ಕಾರಣ ಕಂಡು ಹಿಡಿಯುವ ಕೆಲಸ ಆಗ್ತಾ ಇಲ್ಲ. ಉದ್ಯಮವನ್ನು ಯಾರೂ ಗಂಭೀರವಾಗಿ ಪರಿಗಣಿಸುತ್ತಿಲ್ಲ.
 
`ಶೈಲೂ~ ಅಂತಹ ಸಿನಿಮಾವನ್ನು ಜನಗಳ ಮಧ್ಯೆ ತೆಗೆದುಕೊಂಡು ಹೋಗಲು ಆಗಲಿಲ್ಲ. ಅದೇಕೆ ಆ ಚಿತ್ರ ಜನರನ್ನು ತಲುಪಲಿಲ್ಲ ಅಂತ ನನಗೆ ಈಗಲೂ ಅರ್ಥವಾಗ್ತಾ ಇಲ್ಲ. ಇವೆಲ್ಲಾ ನೋವು ನನ್ನ ನಿವೃತ್ತಿ ಹಿಂದೆ ಇದೆ~ ಎನ್ನುತ್ತಾರೆ ನಾರಾಯಣ್.

ಸಿನಿಮಾ ಸೇರಬೇಕೆಂದು ನಾರಾಯಣ್ 1981ರಲ್ಲಿ ಬೆಂಗಳೂರಿಗೆ ಬಂದಾಗ ಹರಕಲು ಶರಟು, ಒಂದು ರೂಪಾಯಿ ಇತ್ತು. ಈಗ ನಿವೃತ್ತರಾಗುವಾಗ ಅಪಾರ ಜನಪ್ರೀತಿ ಜೊತೆಯಲ್ಲಿದೆ. ಮೊದಲ ಚಿತ್ರ `ಚೈತ್ರದ ಪ್ರೇಮಾಂಜಲಿ~ ಮಾಡಿದಾಗ ಹಂಸಲೇಖ ಜೊತೆಯಲ್ಲಿದ್ದರು.
 
ಎಲ್ಲರ ಮನದಲ್ಲಿ ಉಳಿದಿದ್ದ ಹಾಡುಗಳು ಚಿತ್ರಕ್ಕೂ, ನಿರ್ದೇಶಕ ನಾರಾಯಣ್ ಅವರಿಗೂ ಜನಮನ್ನಣೆ ತಂದುಕೊಟ್ಟಿತು. ಮೊದಲನೆ ಚಿತ್ರದಲ್ಲೇ ನಾರಾಯಣ್‌ಗೆ ಯಶಸ್ಸು. ನಂತರ ಅವರದು ನೇರ ಹಾದಿ. ಈ ಹಾದಿಯಲ್ಲಿ ಸೋಲು, ಗೆಲುವು ಸಮಸಮನಾಗಿದೆ.

`ಅನುರಾಗದ ಅಲೆಗಳು~, `ಕ್ಯಾಪ್ಟನ್~, `ಮೇಘಮಾಲೆ~ ಈ ಮೂರೂ ಚಿತ್ರಗಳು ಸತತವಾಗಿ ಸೋಲನ್ನು ಕಂಡಾಗ ಕೂಡ ನಾರಾಯಣ್ ಇವತ್ತಿನ ರೀತಿ ಮಾನಸಿಕ ಯಾತನೆಗೆ ಒಳಗಾಗಿರಲಿಲ್ಲ. ಒಂದೆರೆಡು ವರ್ಷ ಮೌನವಾಗಿದ್ದು ಮತ್ತೆ ಸ್ವಂತ ನಿರ್ಮಾಣ ಆರಂಭಿಸಿದರು. ಕಡಿಮೆ ವೆಚ್ಚದಲ್ಲಿ `ನಿಘಾತ~ ಪತ್ತೆದಾರಿ ಚಿತ್ರ ಮಾಡಿದರು.

ಅವರೇ ಹಾಸ್ಯ ಪಾತ್ರಗಳಲ್ಲಿ ಕಾಣಿಸಿಕೊಂಡರು. `ಭಾಮಾ, ಸತ್ಯಭಾಮಾ~, `ನನ್ನವಳು ನನ್ನವಳು~, `ಅಂಜಲಿ ಗೀತಾಂಜಲಿ `ಮೂಲಕ ಹೀರೋ ಆದರು. ರಾಜ್‌ಕುಮಾರ್ ಅವರ ಅಭಿನಯದ ಕೊನೆಯ ಚಿತ್ರ `ಶಬ್ದವೇದಿ~, ವಿಷ್ಣುವರ್ಧನ್ ಅಭಿನಯದ `ವೀರಪ್ಪನಾಯಕ~, `ಸೂರ‌್ಯವಂಶ~, ಶಿವರಾಜ್‌ಕುಮಾರ್ ಜತೆ `ಗಲಾಟೆ ಅಳಿಯಂದ್ರು..~ ನಾರಾಯಣರ ಸಕ್ಸಸ್ ಹಾದಿ ಇದು.

`ಅನುರಾಗದ ಅಲೆಗಳು~ ಚಿತ್ರೀಕರಣ ಸಮಯದಲ್ಲಿ ರಾಜಕುಮಾರ್ ಅವರು, ನಾರಾಯಣ್ ಅವರ ಶಿಸ್ತು, ಸೆಟ್‌ನಲ್ಲಿ ಕೆಲಸದಲ್ಲಿ ತೊಡಗಿಕೊಳ್ಳುವ ತಲ್ಲೆನತೆ ಕಂಡು ನನ್ನ ಮುಂದಿನ ಚಿತ್ರ ನೀವೇ ಮಾಡಿ ಎಂದು ಹೇಳಿದ್ದರಂತೆ. ಅದೇ ರೀತಿ `ಶಬ್ದವೇದಿ~ಗೆ ನಾರಾಯಣ್ ನಿರ್ದೇಶಕರಾದರು. `ರಾಜ್ ಆಗಲಿ, ವಿಷ್ಣುವಾಗಲಿ ಇತ್ತೀಚೆಗೆ ಅಂಬರೀಷ್ ಅವರೂ ಕೂಡ ಬೆಳಿಗ್ಗೆ 7 ಗಂಟೆಗೆ ನನ್ನ ಚಿತ್ರದ ಸೆಟ್‌ಗೆ ಆಗಮಿಸಿ ಕೆಲಸಮಾಡಿದ್ದಾರೆ.

ಆದರೆ ಇಂದಿನ ನಾಯಕರು ಅಂತಹ ಶಿಸ್ತನ್ನು ಇಟ್ಟುಕೊಂಡಿಲ್ಲ. ಕೆಲಸವನ್ನು ನಾನು ಪ್ರೀತಿಸ್ತೀನಿ. ಆದರೆ ಇವತ್ತು ಚಿತ್ರರಂಗದಲ್ಲಿ ಅಂತಹ ಶಿಸ್ತು ಹೋಗಿಬಿಟ್ಟಿದೆ. ನಿರ್ದೇಶಕರ ಮೇಲೆ ನಟರು, ನಿರ್ಮಾಪಕರು ಸವಾರಿ ಮಾಡ್ತಾ ಇದ್ದಾರೆ.

ಈಗ ಚಿತ್ರರಂಗದಲ್ಲಿ ಹಣ ಮಾತಾಡ್ತಾ ಇದೆ. ನನ್ನ ಶಿಸ್ತಿಗೆ ಹೆದರಿ ನಟರು ಕಾಲ್‌ಶೀಟ್ ಕೊಡೋದಿಕ್ಕೆ ಹೆದರ‌್ತಾ ಇದಾರೆ. ನನಗೆ ಈಗ ಒಂದು ಮೌಲ್ಯ ಇದೆ. ಅದನ್ನು ಉಳಿಸಿಕೊಳ್ಳೋದಿಕ್ಕೆ ನಿವೃತ್ತಿ ನಿರ್ಧಾರ ಮಾಡಿದ್ದೀನಿ~ ಎಂದು ನಾರಾಯಣ್ ಖಚಿತವಾಗಿಯೇ ಹೇಳುತ್ತಾರೆ.

ಹೊಸ ಪೀಳಿಗೆ ಬಂದ ನಂತರ ಚಿತ್ರರಂಗದಲ್ಲಿ ಆಗಿರುವ ಪಲ್ಲಟಗಳಿಗೆ ಕಾರಣ ಕಂಡು ಹಿಡಿಯಬೇಕು. ಚಿತ್ರರಂಗದ ಕುಸಿತವನ್ನು ತಡೆಯಲೇ ಬೇಕು. ಇಲ್ಲಿ ನಾರಾಯಣ್ ಅವರ ಜವಾಬ್ದಾರಿಯೂ ಬಹಳ ಇದೆ. ಅವರ ಅನುಭವದ ಬಲದಿಂದ, ನಾಯಕನಟರ ಪೊಗರಿಗೆ ಕಡಿವಾಣ ಹಾಕುವ ಕೆಲಸ ಆರಂಭಿಸಬೇಕು.

ಸಿಕ್ಕಾಪಟ್ಟೆ ಹಣ ಸುರಿದು ಚಿತ್ರ ತೆಗೆಯುವುದಕ್ಕಿಂತ ಕಡಿಮೆ ವೆಚ್ಚದ ಪರ್ಯಾಯ, ವ್ಯಾಪಾರೀ ಚಿತ್ರವನ್ನು ಹೇಗೆ ತೆಗೆಯಬಹುದು ಎನ್ನುವುದನ್ನೂ ನಾರಾಯಣ್ ಹೇಳಿಕೊಡಬಹುದು. ಅವರು `ನಿಘಾತ~ ನಿರ್ಮಿಸಿದ್ದು ಹೀಗೆ ಅಲ್ಲವೇ? ನಾರಾಯಣ್ ಈ ರೀತಿಯ ಪಾತ್ರವನ್ನು ವಹಿಸಲಿ, ನಿವೃತ್ತಿ ನಿರ್ಧಾರ ಬಿಡಲಿ ಎಂದು ಆಶಿಸೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT