ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ಮಲವಾದ ಕ್ಷಮೆ

Last Updated 28 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ರಬಿಯಾ-ಅಲ್-ಅದಾಯಿಯಾ ಸೂಫಿ ಪರಂಪರೆ ಕಂಡ ಅತ್ಯಂತ ಶ್ರೇಷ್ಠ ಸಂತಳಾಗಿದ್ದವಳು. ಸುಮಾರು ಆರು-ಏಳನೇ ಶತಮಾನದಲ್ಲಿ ಬದುಕಿ ಬಾಳಿದ ಈ ಮಳೆಯ ಜೀವನಗಾಥೆ ಅದ್ಭುತವಾದದ್ದು. ಆಕೆ ತನ್ನ ಬದುಕಿನಲ್ಲಿ ಬಹಳ ಜನ ಸಾಧು-ಸಂತರಿಗೆ ಮಾದರಿಯಾಗಿ ಅನೇಕರಿಗೆ ಜ್ಞಾನೋದಯವಾಗುವುದಕ್ಕೆ ಕಾರಣಳಾದವಳು.

ಆಕೆಯ ಆ ಮನಸ್ಸಿನ ಪರಿಪಕ್ವತೆ ಭಗವಂತನ ಕೃಪೆಯೇ ಹೌದು. ಬಹುಶಃ ಆಕೆಗೆ ಅದು ಸಣ್ಣ ವಯಸ್ಸಿನಲ್ಲೇ ಸಾಧಿಸಿರಬೇಕು. ರಬಿಯಾ ಹುಟ್ಟಿದ್ದು ಅತ್ಯಂತ ಬಡ ಕುಟುಂಬದಲ್ಲಿ ತಂದೆ ತಾಯಿಯರಿಗೆ ನಾಲ್ಕನೇ ಮಗುವಾಗಿ ಹುಟ್ಟಿ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ಆಕೆ ತನ್ನ ತಾಯಿಯ ವಾತ್ಸಲ್ಯವನ್ನು ಹೆಚ್ಚು ದಿನ ಕಾಣಲಿಲ್ಲ. ಇದು ಸಾಲದೆಂಬಂತೆ ಆಕೆ ಸುಮಾರು ಏಳೆಂಟು ವರ್ಷದವಳಿದ್ದಾಗ ದೇಶದಲ್ಲಿ ಭಾರಿ ಬರಗಾಲ ಬಿದ್ದು ಮನೆ ಮಂದಿಯೆಲ್ಲ ದಿಕ್ಕುದಿಕ್ಕಿಗೆ ಹಂಚಿ ಹೋದರು. ಆಕೆಗೆ ತನ್ನ ಅಣ್ಣ ತಮ್ಮಂದಿರು, ತಂದೆ ಎತ್ತ ಹೋದರೆಂಬುದೇ ಗೊತ್ತಾಗಲಿಲ್ಲ. ಈ ಪುಟ್ಟ ಹುಡುಗಿಯನ್ನು ಯಾರೋ ಧನದಾಸೆಗೆ ಹೊತ್ತುಕೊಂಡು ಬೇರೆ ಊರಿಗೆ ಹೋಗಿ ಒಬ್ಬ ಯಜಮಾನನಿಗೆ ದಾಸಿಯಾಗಿ ಮಾರಿಬಿಟ್ಟರು.

ಈ ಯಜಮಾನನೋ ಮಹಾ ಕ್ರೂರಿ. ಆತ ಮಾತೆತ್ತಿದ್ದರೆ ಬೈಗುಳಗಳನ್ನು ಸುರಿಸುತ್ತಿದ್ದ. ಇಡೀ ಮನೆಯ ಕೆಲಸವನ್ನು ರಬಿಯಾ ಒಬ್ಬಳೇ ಮಾಡಬೇಕಿತ್ತು. ಮನೆ ಗುಡಿಸಿ, ಒರೆಸಿ, ಪಾತ್ರೆ ತೊಳೆದು, ಬಟ್ಟೆ ಒಗೆದು ಮತ್ತೆ ಯಾವ ಕೆಲಸ ಹೇಳಿದರೂ ಮಾಡುವ ರಬಿಯಾಳಿಗೆ ಒಂದು ಸ್ವಲ್ಪವಾದರೂ ವಿಶ್ರಾಂತಿ ದೊರೆಯುತ್ತಿರಲಿಲ್ಲ. ಇಷ್ಟೊಂದು ಕೆಲಸದಲ್ಲಿ ಸ್ವಲ್ಪವಾದರೂ ಹೆಚ್ಚು-ಕಡಿಮೆಯಾದರೆ ಆಕೆಗೆ ಅಂದು ಊಟವಿಲ್ಲ. ಮೇಲೆ ಯಜಮಾನ ನಿರ್ದಯಿಯಾಗಿ ಬಾರುಕೋಲಿನಿಂದ ಬಾಸುಂಡೆ ಬರುವಂತೆ ಹೊಡೆಯುತ್ತಿದ್ದ.

ಪುಟ್ಟ ಮಗು ರಬಿಯಾ ಕಷ್ಟ ಹೇಳಿಕೊಳ್ಳುವುದು ಯಾರ ಮುಂದೆ? ಅವಳ ರಕ್ಷಣೆಗೆ, ಆಶ್ರಯಕ್ಕೆ ನಿಲ್ಲುವವರು ಯಾರೂ ಇರಲಿಲ್ಲ. ಆದ್ದರಿಂದ ರಬಿಯಾ ರಾತ್ರಿ ತಾನೊಬ್ಬಳೇ ಅತ್ತು ಸಮಾಧಾನ ಮಾಡಿಕೊಳ್ಳುತ್ತಿದ್ದಳು. ಒಂದು ದಿನವಾದರೂ ಮತ್ತೊಬ್ಬರ ಮುಂದೆ ತನ್ನ ಕಷ್ಟಗಳನ್ನು ಹೇಳಿಕೊಂಡಿದ್ದಿಲ್ಲ.

ಒಂದು ರಾತ್ರಿ ಯಜಮಾನ ತುಂಬ ತಡವಾಗಿ ಮನೆಗೆ ಬಂದ. ಮಗು ರಬಿಯಾ ಎಚ್ಚರವಿದ್ದು, ಬಾಗಿಲು ತೆಗೆದು, ಅವನಿಗೆ ಊಟಕ್ಕೆ ಬಡಿಸಿ ನಂತರ ಅವನ ಊಟವಾದ ಮೇಲೆ ಮಲಗಲು ತೆರಳಿದಳು. ಯಜಮಾನ ತನ್ನ ಕೊಠಡಿಗೆ ಹೋಗಬೇಕೆನ್ನುವಾಗ ಪುಟ್ಟ ರಬಿಯಾನ ಕೋಣೆಯಲ್ಲಿ ಏನೋ ಪಿಸುಮಾತು ಕೇಳಿಸಿದಂತಾಯಿತು. ಅವನಿಗೆ ಸಂಶಯ. ಈ ಹುಡುಗಿ ಈ ಹೊತ್ತಿನಲ್ಲಿ ಯಾರೊಡನೆ ಮಾತನಾಡುತ್ತಿರಬೇಕು? ಆಕೆ ಏನಾದರೂ ಹೊಂಚು ಹಾಕುತ್ತಿರಬಹುದೇ? ಹೀಗೆಲ್ಲ ಯೋಚಿಸಿ ಆತ ನಿಧಾನವಾಗಿ ಸದ್ದು ಮಾಡದೇ ಬಂದು ಆಕೆಯ ಕೋಣೆಯ ಬಾಗಿಲಿನ ಂದೆ ನಿಂತು ಒಳಗೆ ಇಣುಕಿದ.

ರಬಿಯಾ ಮಲಗುವ ಮೊದಲು ಪ್ರಾರ್ಥನೆ ಮಾಡುತ್ತಿದ್ದಾಳೆ, ‘ಭಗವಂತ ಪ್ರಪಂಚದ ಎಲ್ಲರಿಗೂ ಒಳ್ಳೆಯದನ್ನು ಮಾಡು. ಅದರಲ್ಲೂ ನನ್ನ ಯಜಮಾನನಿಗೆ ವಿಶೇಷ ಕೃಪೆ ಮಾಡು. ಆತ ತುಂಬ ದಯಾಳು. ನನ್ನನ್ನು ಮನೆಯಲ್ಲಿ ಸಾಕಿಕೊಂಡು ಅನ್ನದಾತನಾಗಿದ್ದಾನೆ. ಆತ ತುಂಬ ಒತ್ತಡದಲ್ಲಿದ್ದಾನೆ. ಯಾವುದೇ ಆತಂಕವಿದ್ದರೆ ದಯವಿಟ್ಟು ಪರಿಹರಿಸು, ಅವನ ಮನಸ್ಸಿನಲ್ಲಿ ಕೋಪಕ್ಕೆ ಕಾರಣವಿಲ್ಲದಂತೆ ಮಾಡು. ಅವನಿಗೂ, ಅವನ ಪರಿವಾರಕ್ಕೂ ಸುಖ, ಶಾಂತಿ, ನೆಮ್ಮದಿಗಳನ್ನು ನೀಡು ತಂದೆ. ಅವರೆಲ್ಲರ ಹೃದಯದಲ್ಲಿ ನಿನ್ನ ಅಪಾರವಾದ ಪ್ರೀತಿಯನ್ನು ತುಂಬು.’ ಯಜಮಾನ ಈ ಪ್ರಾರ್ಥನೆಯನ್ನು ಕೇಳಿ ತನ್ನ ಕೋಣೆಗೆ ಹೋದ. ಅವನಿಗೆ ರಾತ್ರಿಯಿಡೀ ನಿದ್ರೆಯೇ ಬರಲಿಲ್ಲ. ತಾನು ಯಾವ ಬಾಲಕಿಗೆ ಅಸಾಧ್ಯವಾದ ನೋವನ್ನು, ಹಿಂಸೆಯನ್ನು ನೀಡಿದ್ದನೋ ಅಂಥವನಿಗಾಗಿ ಆ ಹುಡುಗಿ ಭಗವಂತನಿಗೆ ಪ್ರ್ರಾರ್ಥಿಸುತ್ತಿದ್ದಾಳೆ!

ಮರುದಿನ ಬೆಳಿಗ್ಗೆ ಎದ್ದವನೇ ಆಕೆಯ ಕೋಣೆಗೆ ಹೋಗಿ ಕಾಲಿಗೆ ನಮಸ್ಕರಿಸಿದ. ‘ಅಮ್ಮಾ ರಬಿಯಾ ನಾನು ಇಷ್ಟು ದಿನ ನೀಡಿದ ನೋವಿಗೆ, ತೊಂದರೆಗೆ ನನ್ನನ್ನು ಕ್ಷಮಿಸು. ಈ ಕ್ಷಣದಿಂದ ನಿನ್ನ ದಾಸ್ಯ ವಿಮೋಚನೆಯಾಯಿತು. ನನ್ನದೊಂದು ವಿನಂತಿ. ನೀನು ನನ್ನ ಮನೆಯಲ್ಲೇ ಇರಬೇಕು. ಆದರೆ ದಾಸಿಯಾಗಿಯಲ್ಲ, ನಮ್ಮ ಗೌರವದ ಅತಿಥಿಯಾಗಿ, ಮಾರ್ಗದರ್ಶಿಯಾಗಿ. ನಿನ್ನ ಸೇವೆ ಮಾಡುವ ಭಾಗ್ಯ ನನಗೆ ದೊರಕಲಿ, ಅದರಿಂದ ನಮ್ಮ ಮನಸ್ಸು ಪರಿಶುದ್ಧವಾಗಲಿ.’

ಕ್ಷಮೆಗಿಂತ ಬಲವಾದ ಅಸ್ತ್ರವಿಲ್ಲ. ಅದರಲ್ಲೂ ನಮಗೆ ಅನ್ಯಾಯ ಮಾಡಿದವರಿಗೆ, ತೊಂದರೆ ನೀಡಿದವರಿಗೆ ನಾವು ನೀಡಬಹುದಾದ ಶ್ರೇಷ್ಠ ಶಿಕ್ಷಣ ಎಂದರೆ ಕ್ಷಮೆ. ಯಾಕೆಂದರೆ ಈ ನಿರ್ಮಲವಾದ ಕ್ಷಮೆ ಅವರ ಮನಃಸಾಕ್ಷಿಯನ್ನು ಇರಿದಷ್ಟು ಮತ್ತಾವ ಆಯುಧವೂ ಇರಿಯಲಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT