ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೋಟು ರದ್ದತಿಯಲ್ಲಿ ಕಂಡ ಡಿಜಿಟಲ್ ಡಿವೈಡ್

Last Updated 22 ನವೆಂಬರ್ 2016, 19:30 IST
ಅಕ್ಷರ ಗಾತ್ರ
‘ಡಿಜಿಟಲ್ ಡಿವೈಡ್’ ಅಥವಾ ವಿದ್ಯುನ್ಮಾನ ಕಂದಕ ಎಂಬ ಪದಪುಂಜ ಬಳಕೆಯಾಗುತ್ತಿದ್ದುದು ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಬೌದ್ಧಿಕ ಚರ್ಚೆಗಳಲ್ಲಿ ಮಾತ್ರ. ಆಗೀಗ ನೀತಿ ನಿರೂಪಕರ ಬಾಯಲ್ಲಿ ಈ ಪದ ಕೇಳಿಬರುತ್ತಿತ್ತಾದರೂ ಮುಖ್ಯವಾಹಿನಿಯ ಚರ್ಚಾ ವಿಷಯವಾಗಿರಲಿಲ್ಲ. ಆದರೆ ಕಳೆದ ಹದಿಮೂರು ದಿನಗಳಲ್ಲಿ ಇದು ನಾವಿರುವ ಕೋಣೆಯೊಳಕ್ಕೇ ಬಂದು ಆನೆಯಂತೆ ನಿಂತು ಬಿಟ್ಟಿದೆ. ‘ಡಿಜಿಟಲ್ ಡಿವೈಡ್’ ನಿಜಕ್ಕೂ ಎಷ್ಟು ದೊಡ್ಡ ಸಂಗತಿ ಎಂಬುದನ್ನು ಅರ್ಥ ಮಾಡಿಸಿದ್ದು ನೋಟು ರದ್ದತಿಯ ನಿರ್ಧಾರ. ನವೆಂಬರ್ ಎಂಟರ ರಾತ್ರಿಯೂ ಇದನ್ನು ಬುದ್ಧಿಜೀವಿಗಳ ಬತ್ತಳಿಕೆಯಲ್ಲಿರುವ ಪಾರಿಭಾಷಿಕಗಳಲ್ಲಿ ಒಂದು ಎಂದು ಭಾವಿಸುತ್ತಿದ್ದವರಿಗೆ ಬೆಳಗಾಗುವಾಗ ಕಣ್ಣೆದುರಿನ ವಾಸ್ತವವಾಗಿಬಿಟ್ಟಿತು. 
 
ವಿದ್ಯುನ್ಮಾನ ಕಂದಕ ಎಂಬ ಪರಿಕಲ್ಪನೆಯನ್ನು ಹೆಚ್ಚಿನವರು ಅರ್ಥ ಮಾಡಿಕೊಂಡದ್ದು ಮಾಹಿತಿ ತಂತ್ರಜ್ಞಾನ ಒದಗಿಸುತ್ತಿರುವ ಸೌಲಭ್ಯಗಳನ್ನು ಬಳಸುವ ಅವಕಾಶ ಇರುವವರು ಮತ್ತು ಇಲ್ಲದವರು ಎಂಬ ಸರಳ ವ್ಯಾಖ್ಯೆಯ ಮೂಲಕ. ಹೀಗೆ ಅರ್ಥ ಮಾಡಿಕೊಂಡಿದ್ದರಲ್ಲಿ ತಪ್ಪೇನೂ ಇರಲಿಲ್ಲ. ಬ್ಯಾಂಕುಗಳು ಕೋರ್ ಬ್ಯಾಂಕಿಂಗ್ ಆರಂಭಿಸಿ, ಸರ್ಕಾರಗಳು ಇ–ಆಡಳಿತವನ್ನು ಅಳವಡಿಸಿಕೊಂಡು, ಕಚೇರಿಗಳಲ್ಲಿ ಬಯೋಮೆಟ್ರಿಕ್ಸ್ ಬಂದು ಅಂಗಡಿ ಎಂಬುದು ಇ–ಕಾಮರ್ಸ್ ಆಗಿ ಬದಲಾದಾಗ ಇವನ್ನೆಲ್ಲಾ ಅದನ್ನೆಲ್ಲಾ ಬಳಸಿಕೊಳ್ಳಲು ಕೆಲವರಿಗೆ ಸಾಧ್ಯವಾಯಿತು. ಆದರೆ ಇದರ ಜೊತೆಯಲ್ಲೇ ಈ ಎಲ್ಲವುಗಳಿಂದಲೂ ಕೆವರು ಹೊರಗೇ ಉಳಿದರು. ಹೀಗೊಂದು ಅಸಮಾನತೆ ಸೃಷ್ಟಿಯಾಗುತ್ತಿರುವ ವಿಚಾರವನ್ನು ಸಮಾಜವಾಗಿ, ಆಡಳಿತ ವ್ಯವಸ್ಥೆಯಾಗಿ ನಾವು ಗಮನಿಸಿದ್ದು ಬಹಳ ಕಡಿಮೆ. 
 
ವಾಸ್ತವದಲ್ಲಿ ಡಿಜಿಟಲ್ ಡಿವೈಡ್ ಎಂಬ ಪರಿಕಲ್ಪನೆಯ ವ್ಯಾಖ್ಯೆ ಬದಲಾಗಿ ಬಹುಕಾಲವಾಯಿತು. ಈಗಿನ ಅರ್ಥದಲ್ಲಿ ಡಿಜಿಟಲ್ ಡಿವೈಡ್ ಎಂದರೆ–ಮಾಹಿತಿ ತಂತ್ರಜ್ಞಾನದ ಕುರಿತ ಅರಿವು, ಬಳಕೆ, ಪ್ರಭಾವ ಮತ್ತು ಪರಿಣಾಮದ ಸಂದರ್ಭದಲ್ಲಿ ಕಾಣಿಸಿಕೊಳ್ಳುವ ಸಾಮಾಜಿಕ ಮತ್ತು ಆರ್ಥಿಕ ಅಸಮಾನತೆ. ಈ ಅಸಮಾನತೆಯ ಬಗ್ಗೆ ಬಹಳಷ್ಟು ಚರ್ಚೆಗಳು ನಡೆದಿದ್ದವಾದರೂ ಅವೆಲ್ಲಾ ವಿದ್ವತ್ಪತ್ರಿಕೆಗಳಲ್ಲಿ ಪ್ರಕಟವಾಗುವ ಪ್ರಬಂಧಗಳಲ್ಲಿತ್ತು. ಹೆಚ್ಚೆಂದರೆ ನೀವೀಗ ಓದುತ್ತಿರುವಂಥ ಲೇಖನಗಳಲ್ಲಿ ಇದು ಪ್ರಸ್ತಾಪವಾಗುತ್ತಿತ್ತು.  ನೀತಿ ನಿರೂಪಣೆಯ ಕ್ಷೇತ್ರದಲ್ಲಿದ್ದವರಿಗೆ ಮಾಹಿತಿ ತಂತ್ರಜ್ಞಾನ ಎಂಬುದು ಎಲ್ಲಾ ಸಾಮಾಜಿಕ, ಆರ್ಥಿಕ, ಆಡಳಿತಾತ್ಮಕ ಸಮಸ್ಯೆಗಳ ಪರಿಹಾರಕ್ಕಿರುವ ಮಂತ್ರದಂಡದಂತೆ ಕಾಣಿಸುತ್ತಿತ್ತು. ಈ ಮಂತ್ರದಂಡ ಕೆಲಸ ಮಾಡಬೇಕೆಂದರೆ ಅದಕ್ಕೆ ಪೂರಕವಾಗ ಸಾಮಾಜಿಕ ಮತ್ತು ಆರ್ಥಿಕ ವಾತಾವರಣ ಬೇಕು ಎಂದು ಅವರಿಗೆ ಅನ್ನಿಸುತ್ತಿರಲಿಲ್ಲ.
 
ನಮ್ಮ ಕಣ್ಣೆದುರೇ ಇದ್ದರೂ ಗಮನಿಸದೇ ಇದ್ದ ಮತ್ತೊಂದು ಆನೆ ಈಗ ನಮ್ಮ ದಾರಿಗೇ ಅಡ್ಡ ನಿಂತಿದೆ. ಇದರ ಹೆಸರು ‘ಅನೌಪಚಾರಿಕ ಆರ್ಥಿಕತೆ’. ಬೀದಿ ಬದಿಯ ಮಾರಾಟಗಾರರು, ಸಣ್ಣ ಕಿರಾಣಿ ಅಂಗಡಿಯವರು, ಕೂಲಿ ಕಾರ್ಮಿಕರು ಮುಂತಾದವರೆಲ್ಲಾ ಒಳಗೊಂಡಿದ್ದ ಆರ್ಥಿಕತೆ ಇದು. ಕ್ರೆಡಿಟ್ ಕಾರ್ಡ್, ಡೆಬಿಟ್ ಕಾರ್ಡ್, ಬ್ಯಾಂಕ್ ಖಾತೆ, ಸಾಂಸ್ಥಿಕ ಸಾಲದಂಥ ಯಾವ ಪರಿಕಲ್ಪನೆಗಳೂ ಈ ಅನೌಪಚಾರಿಕ ಆರ್ಥಿಕತೆಯನ್ನು ಒಳಗೊಳ್ಳುವುದರ ಬಗ್ಗೆ ಯಾವತ್ತೂ ಆಲೋಚಿಸಿರಲಿಲ್ಲ. 
 
ನವೆಂಬರ್ ಎಂಟರ ರಾತ್ರಿ ಪ್ರಧಾನ ಮಂತ್ರಿ ದೇಶವನ್ನುದ್ದೇಶಿಸಿ ಮಾತನಾಡುತ್ತಾ 500 ಮತ್ತು 1000 ರೂಪಾಯಿಗಳ ನೋಟನ್ನು ರದ್ದು ಪಡಿಸಿದ ಘೋಷಣೆ ಮಾಡಿದಾಗ ವಿದ್ಯುನ್ಮಾನ ಕಂದಕ ಮತ್ತು ಅನೌಪಚಾರಿಕ ಆರ್ಥಿಕತೆಗಳೆರಡರ ಸಂಬಂಧ ನಮ್ಮ ಅರಿವಿಗೆ ಬಂತು. ಎಟಿಎಂಗಳು ವ್ಯಾಪಕವಾದ ನಂತರ ಜನಸಂದಣಿಯಿಂದ ಮುಕ್ತವಾಗಿದ್ದ ಬ್ಯಾಂಕ್‌ಗಳ ಎದುರು ಉದ್ದುದ್ದದ ಸರತಿ ಸಾಲುಗಳು ಕಾಣಿಸಿಕೊಂಡವು. ಮೊಬೈಲ್ ಕ್ರಾಂತಿಯಿಂದ ಜನರಿಂದ ಸ್ವಲ್ಪ ಮಟ್ಟಿಗೆ ದೂರವಾಗಿದ್ದ ಅಂಚೆ ಕಚೇರಿಗಳ ಎದುರೂ ಸರತಿ ಸಾಲುಗಳ ಬೆಳೆಯ ತೊಡಗಿದವು. ತಳ್ಳುಗಾಡಿಯಲ್ಲಿ ತರಕಾರಿ ತರುತ್ತಿದ್ದವರು, ಸೈಕಲ್ ಮೇಲೆ ಮೀನು ತರುತ್ತಿದ್ದವರು, ಅತ್ಯಾಧುನಿಕ ಫ್ಯಾಷನ್‌ ಅನ್ನು ಅಗ್ಗದ ದರದಲ್ಲಿ ರಸ್ತೆ ಬದಿಯಲ್ಲೇ ಒದಗಿಸುತ್ತಿದ್ದವರೆಲ್ಲಾ ಕಾಣೆಯಾದರು. ಬ್ಯಾಂಕು ಎಂದರೇನೆಂಬುದನ್ನೇ ನೋಡದೇ ಇದ್ದವರು ಬ್ಯಾಂಕಿನೆದುರು ಸರತಿ ಸಾಲಿನಲ್ಲಿ ನಿಂತಿದ್ದರು!
 
ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಜಾಲ ತಾಣದಲ್ಲಿ ಲಭ್ಯವಿರುವ ಅಂಕಿ–ಅಂಶಗಳನ್ನು ಪರಿಶೀಲಿಸಿದರೆ ಒಟ್ಟು ಸಮಸ್ಯೆಯ ಸಂಕೀರ್ಣ ಸ್ವರೂಪ ಹೆಚ್ಚು ಅರ್ಥವಾಗುತ್ತದೆ. ಆಗಸ್ಟ್ ತಿಂಗಳ ಅಂತ್ಯದವರೆಗಿನ ಲೆಕ್ಕಾಚಾರಗಳಂತೆ ಭಾರತದಲ್ಲಿರುವ ಒಟ್ಟು ಕ್ರೆಡಿಟ್ ಕಾರ್ಡ್‌ಗಳ ಸಂಖ್ಯೆ 2.63 ಕೋಟಿ. ಡೆಬಿಟ್ ಕಾರ್ಡ್‌ಗಳ ಸಂಖ್ಯೆ 71.24 ಕೋಟಿ. ಈ ಸಂಖ್ಯೆಗಳನ್ನು ನೋಡಿ ಒಟ್ಟು ಜನಸಂಖ್ಯೆಯ ಅರ್ಧಕ್ಕಿಂತ ಹೆಚ್ಚು ಭಾಗ ಒಂದಲ್ಲ ಒಂದು ಕಾರ್ಡ್ ಹೊಂದಿದ್ದಾರೆ ಎಂಬ ತೀರ್ಮಾನಕ್ಕೆ ಬರಲಾಗುವುದಿಲ್ಲ. ಏಕೆಂದರೆ ಬಹುತೇಕರ ಬಳಿ ಒಂದಕ್ಕಿಂತ ಹೆಚ್ಚು ಸಂಖ್ಯೆಯ ಕಾರ್ಡ್‌ಗಳಿವೆ. 
 
ಈ ಕಾರ್ಡ್‌ಗಳಲ್ಲಿ ನಡೆದಿರುವ ವ್ಯವಹಾರವನ್ನು ನೋಡೋಣ. ಡೆಬಿಟ್ ಕಾರ್ಡ್‌ಗಳು ಹೆಚ್ಚು ಬಳಕೆಯಾದದ್ದು ಎಟಿಎಂನಿಂದ ಹಣ ತೆಗೆಯುವುದಕ್ಕೆ. ಆಗಸ್ಟ್ ತಿಂಗಳಲ್ಲಿ ನಡೆದಿರುವ ಒಟ್ಟು 88.72 ಕೋಟಿ ವ್ಯವಹಾರಗಳಲ್ಲಿ 75.67 ಕೋಟಿ ವ್ಯವಹಾರಗಳು ನಡೆದದ್ದು ಎಟಿಎಂನಲ್ಲಿ. ಕ್ರೆಡಿಟ್ ಕಾರ್ಡ್‌ನ ವಿಷಯದಲ್ಲಿ ಇದು ಭಿನ್ನವಾಗಿದೆ. ಒಟ್ಟು ವ್ಯವಹಾರಗಳ ಸಂಖ್ಯೆ 8.46 ಕೋಟಿ. ಇವುಗಳಲ್ಲಿ 64.6 ಲಕ್ಷದಷ್ಟು ವ್ಯವಹಾರಗಳು ಮಾತ್ರ ಎಟಿಎಂನಿಂದ ಹಣ ಪಡೆಯುವುದಕ್ಕೆ ಸಂಬಂಧಿಸಿದವು.
 
ಈ ವ್ಯತ್ಯಾಸಕ್ಕೆ ಕಾರಣವೂ ಇದೆ. ಕ್ರೆಡಿಟ್ ಕಾರ್ಡ್ ಬಳಸಿ ಹಣ ಪಡೆಯುವುದು ಅತ್ಯಂತ ದುಬಾರಿ ವ್ಯವಹಾರ. ತೀರಾ ಅಗತ್ಯವಿದ್ದವರಷ್ಟೇ ಇದನ್ನು ಮಾಡುತ್ತಾರೆ.ನಮ್ಮ ಆರ್ಥಿಕತೆಯಲ್ಲಿ ಡೆಬಿಟ್ ಕಾರ್ಡ್ ಉಳ್ಳವರ ನಿತ್ಯದ ವ್ಯವಹಾರದಲ್ಲಿಯೂ ಬಹುಪಾಲು ಕರೆನ್ಸಿ ನೋಟುಗಳೇ ಬಳಕೆಯಾಗುತ್ತಿದ್ದವು ಎಂಬುದನ್ನು ಈ ಅಂಕಿ–ಅಂಶಗಳೇ ಸ್ಪಷ್ಟ ಪಡಿಸುತ್ತಿವೆ. ಇದಕ್ಕೆ ಕಾರಣವಿಲ್ಲದೇ ಇಲ್ಲ. ರಿಸರ್ವ್ ಬ್ಯಾಂಕ್‌ ನೀಡುವ ವಿವರಗಳಂತೆ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಮೂಲಕ ಹಣ ಪಡೆಯಲು ಬೇಕಾಗಿರುವ ‘ಪಾಯಿಂಟ್ ಆಫ್ ಸೇಲ್ಸ್’ ಉಪಕರಣಗಳಿರುವುದು ಕೇವಲ 14.61 ಲಕ್ಷ ಮಾತ್ರ. 
 
ನಮ್ಮ ವಿದ್ಯುನ್ಮಾನ ಕಂದಕದ ಸಮಸ್ಯೆ ಬಹಳ ವಿಲಕ್ಷಣವಾದುದು. ಕೆಳ ಮಧ್ಯಮ ವರ್ಗದ ಕುಟುಂಬದಲ್ಲಿ ಒಬ್ಬನ ಬಳಿಯಾದರೂ ಡೆಬಿಟ್ ಕಾರ್ಡ್ ಇದ್ದೇ ಇರುತ್ತದೆ. ಇದನ್ನು ಖರೀದಿಗೆ ಬಳಸಬಹುದಾದ ಅಂಗಡಿ ಮಾತ್ರ ಅವರ ಮಟ್ಟದಿಂದ ಬಹಳ ಮೇಲಿರುತ್ತದೆ. ಬಡವರ ವಿಷಯವನ್ನು ಹೇಳುವ ಅಗತ್ಯವೇ ಇಲ್ಲ. ಅವರಿಗೆ ಎಟುಕುವ ಕಿರಾಣಿ ಅಂಗಡಿಯಲ್ಲಾಗಲೀ ಬೀದಿ ಬದಿಯ ತರಕಾರಿ ವ್ಯಾಪಾರಿಯ ಬಳಿಯಾಗಲೀ ಪಾಯಿಂಟ್ ಆಫ್ ಸೇಲ್ಸ್ (ಪಿಓಎಸ್) ಉಪಕರಣ ಇರುವುದಿಲ್ಲ. ಈ ವ್ಯಾಪಾರಿಗಳ ಸ್ಥಿತಿಯೂ ಅವರ ಗಿರಾಕಿಗಳಿಗಿಂತ ಭಿನ್ನವಲ್ಲ. ಅವರ ಒಟ್ಟು ವ್ಯವಹಾರ ಪಿಓಎಸ್‌ ಉಪಕರಣವನ್ನು ನಿರ್ವಹಿಸಲು ಬೇಕಿರುವಷ್ಟು ಸಾಮರ್ಥ್ಯವನ್ನು ಹೊಂದಿರುವುದಿಲ್ಲ. ಏಕೆಂದರೆ ಈ ಯಂತ್ರ ಇಟ್ಟುಕೊಳ್ಳುವುದಕ್ಕೆ ಒಂದಷ್ಟು ಶುಲ್ಕ ಆಮೇಲೆ ಪ್ರತಿಯೊಂದು ಖರೀದಿಯ ಮೇಲೆ ಮತ್ತೊಂದಷ್ಟು ಶುಲ್ಕವನ್ನು ಅಂಗಡಿಯವರು ಪಾವತಿಸಬೇಕಾಗುತ್ತದೆ. 
 
ಪೇಟಿಎಂ, ಮೊಬೈಲ್ ವ್ಯಾಲೆಟ್‌ನಂಥವುಗಳು ಈ ಸಮಸ್ಯೆಗೆ ಒಂದು ಮಟ್ಟಿಗಿನ ಪರಿಹಾರವೇನೋ ಹೌದು. ಆದರೆ ಈ ವ್ಯಾಪಾರಿಗಳ ವ್ಯವಹಾರದ ಮಾದರಿಯಲ್ಲಿ ಈ ಬಗೆಯ ಸಾಂಸ್ಥಿಕ ವ್ಯವಸ್ಥೆ ಪ್ರವೇಶ ಪಡೆಯುವುದಕ್ಕೆ ಇನ್ನಷ್ಟು ಅಡಚಣೆಗಳಿವೆ. ಬೆಳಿಗ್ಗೆ ಖರೀದಿಸಿ ತಂದ ಸರಕು ಮಾರಾಟವಾದರಷ್ಟೇ ಆತನಿಗೆ ಮರುದಿನಕ್ಕೆ ಸರಕು ಖರೀದಿಸಲು ಸಾಧ್ಯ. ಯಾವ ಸಾಂಸ್ಥಿಕ ಹಣಕಾಸು ವ್ಯವಸ್ಥೆಯೂ ಈ ಬಗೆಯ ವ್ಯವಹಾರಕ್ಕೆ ಬೇಕಿರುವ ಅನುಕೂಲವನ್ನು ಕಲ್ಪಿಸುವುದಿಲ್ಲ. ಪೇಟಿಎಂನಲ್ಲಿ ಹಣ ಪಡೆದರೆ ಅದು ಖಾತೆಗೆ ವರ್ಗಾವಣೆಯಾಗಿ ಸಿಗುವುದಕ್ಕೆ ಕನಿಷ್ಠ ಒಂದು ವಾರ ಬೇಕು.
 
ಒಂದು ವೇಳೆ ಅದು ಒಂದೇ ದಿನದಲ್ಲಿ ಸಿಕ್ಕರೂ ಆತ ತನಗೆ ಬೇಕಿರುವ ಸರಕು ಖರೀದಿಸುವಲ್ಲಿ ಈ ಬಗೆಯಲ್ಲೇ ಹಣ ಪಡೆಯುವ ವ್ಯವಸ್ಥೆ ಇರುವುದಿಲ್ಲ. ತಳ್ಳುಗಾಡಿಯ ತರಕಾರಿ ಮಾರಾಟಗಾರರು ಖರೀದಿಸುವುದು ಅನೇಕ ಸಂದರ್ಭಗಳಲ್ಲಿ ರೈತರಿಂದ. ಅಥವಾ ಅವರದೇ ವರ್ಗದ ಸ್ವಲ್ಪ ದೊಡ್ಡ ಮಾರಾಟಗಾರರಿಂದ. ಬೀದಿ ಬದಿಯಲ್ಲಿ ಆಹಾರ ಪದಾರ್ಥಗಳನ್ನು ಮಾರುವವರ ಸಮಸ್ಯೆ ಇನ್ನೂ ಸಂಕೀರ್ಣ. ಇವರ ದೊಡ್ಡ ಸಂಖ್ಯೆಯ ಗಿರಾಕಿಗಳೇ ಕೂಲಿ ಕಾರ್ಮಿಕರು ಮುಂತಾದವರು. ಪೇಟಿಎಂನಂಥ ವ್ಯವಸ್ಥೆಯಿಂದ ಹಣವನ್ನು ಪಡೆಯುವ ವ್ಯವಸ್ಥೆಯೊಂದನ್ನು ಇವರು ರೂಪಿಸಿಕೊಳ್ಳಬಹುದು. ಆದರೆ ಆ ಮೂಲಕ ಪಾವತಿಸುವವರು ಗಿರಾಕಿಗಳು ಇವರ ಬಳಿ ಬರುವುದೇ ಇಲ್ಲ.
 
ದೇಶದ ಅರ್ಧದಷ್ಟಿರುವ ದೊಡ್ಡ ವರ್ಗ ಈ ಆರ್ಥಿಕತೆಯ ಭಾಗ. ಇಲ್ಲಿ ಅದಂದಿನ ಸಮಸ್ಯೆಗಳಿಗೆ ತಕ್ಷಣದ ಪರಿಹಾರಗಳು ಬೇಕು. 500 ಮತ್ತು 1000 ರೂಪಾಯಿಗಳು ಚಲಾವಣೆಯಲ್ಲಿರುವುದಿಲ್ಲ ಎಂದಾಗ ಈ ವರ್ಗ ಕೇವಲ 800 ರೂಪಾಯಿಗಳಿಗೆ ತನ್ನಲ್ಲಿದ್ದ ಸಾವಿರ ರೂಪಾಯಿಗಳ ನೋಟುಗಳನ್ನು ಮಾರಿ ತನ್ನ ಸಮಸ್ಯೆಗೆ ಪರಿಹಾರ ಕಂಡುಕೊಂಡಿತು. ಅವರಿಗೆ ಅದು ಹೊಸತೇನೂ ಅಲ್ಲ. ಸಂಜೆ ಹಿಂದಿರುಗಿಸುವ ಭರವಸೆಯೊಂದಿಗೆ ಒಂದು ಸಾವಿರ ರೂಪಾಯಿ ಸಾಲ ಪಡೆಯುವಾಗಲೂ ಅವರಿಗೆ ಸಿಗುವುದು ಬಡ್ಡಿ ಕಡಿತ ಮಾಡಿದ 900 ರೂಪಾಯಿಗಳು ಮಾತ್ರ. 
 
ಬೀದಿ ವ್ಯಾಪಾರಿಗಳಿಗೆ ಮೊಬೈಲ್ ವ್ಯಾಲೆಟ್ ಪರಿಹಾರವಾಗಬಹುದು ಎಂದು ಆಲೋಚಿಸುವಾಗಲೇ ಅವರ ಸಂಭಾವ್ಯ ಗ್ರಾಹಕರಾಗಿರುವ ಬಡವರ ಬಳಿ ಪೇಟಿಎಂ ಆ್ಯಪ್ ಇನ್‌ಸ್ಟಾಲ್ ಮಾಡಲು ಆಗಬಹುದಾದ ಮೊಬೈಲ್ ಫೋನ್ ಇರುವಂತೆ ಮಾಡಿದರಷ್ಟೇ ನಮ್ಮ ಕಾಲದ ವಿದ್ಯುನ್ಮಾನ ಕಂದಕವನ್ನು ಮುಚ್ಚಬಹುದು. ನೋಟಿನ ಬಳಕೆಯನ್ನು ಮಿತಗೊಳಿಸುವ ಆರ್ಥಿಕತೆಯನ್ನೂ ಕಲ್ಪಿಸಿಕೊಳ್ಳಬಹುದು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT