ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಟೀದಾರರ ಸಿಟ್ಟಿನಲ್ಲಿದೆ ಮೋದಿ ಗೆಲುವಿನ ಗುಟ್ಟು

Last Updated 3 ಡಿಸೆಂಬರ್ 2017, 19:30 IST
ಅಕ್ಷರ ಗಾತ್ರ

ಹುಟ್ಟು, ಮೈ ಬಣ್ಣ, ಲಿಂಗ ಭೇದಗಳು ಮೇಲು ಕೀಳನ್ನು ತೀರ್ಮಾನಿಸುವ ಏಣಿ ಶ್ರೇಣಿಗಳ ಸಮಾಜಗಳು ಸಮಾನತೆಯನ್ನು ಮನಸಾರೆ ಎಂದೂ ಒಪ್ಪಿಲ್ಲ. ಮುಂದೆಯೂ ಒಪ್ಪುವ ಸಾಧ್ಯತೆಗಳು ವಿರಳ. ಸಮಾನತೆಯನ್ನು ಕಟ್ಟಿಕೊಡುವ ದೂರದ ಪ್ರಯತ್ನ ಎನಿಸಿದ ಮೀಸಲಾತಿಯನ್ನು ಈ ಸಮಾಜಗಳು ಕಡು ಅಸಹನೆಯ ಬೆಂಕಿಯಲ್ಲಿ ನಿರಂತರ ಉರಿಸುತ್ತ ಬಂದಿವೆ. ಪ್ರಭುತ್ವಗಳು ಕೂಡ ಅರೆಮನಸಿನಿಂದಲೇ ಜಾರಿಗೊಳಿಸಿರುವ ಈ ಕ್ರಮವನ್ನು ರದ್ದು ಮಾಡಬೇಕೆಂಬ ದುರಾಗ್ರಹದ ಕತ್ತಿಯನ್ನು ಮಸೆಯುತ್ತಲೇ ಬಂದಿವೆ ಬಲಿಷ್ಠ ಜಾತಿಗಳು. ಮೀಸಲಾತಿ ತಮಗೂ ಬೇಕೆಂದು ಹೊಸ ದಿರಿಸು ಧರಿಸಿ ಬೀದಿಗಿಳಿದಿವೆ. ರಾಜಸ್ಥಾನ-ಹರಿಯಾಣದ ಜಾಟರು, ಮಹಾರಾಷ್ಟ್ರದ ಮರಾಠರು ಹಾಗೂ ಗುಜರಾತಿನ ಪಾಟೀದಾರರು ತಮ್ಮ ಕಾಲ ಕೆಳಗಿನ ನೆಲ ಕುಸಿಯುತ್ತಿದೆ ಎಂಬ ಭ್ರಮೆಯನ್ನು ತಾವೇ ಸೃಷ್ಟಿಸಿ ಅದನ್ನು ನಂಬಿಕೊಂಡಿದ್ದಾರೆ.

ಭೂ ಹಿಡುವಳಿಗಳು ಒಡೆಯುತ್ತ ಸಿಡಿಯುತ್ತ ಸಣ್ಣವಾಗುತ್ತಿವೆ. ನೀರಾವರಿ ಬೆಳೆಗೆ ನೀರು ಸಾಲುತ್ತಿಲ್ಲ. ಕೃಷಿಯೇತರ ವಲಯಗಳಿಗೆ ಇವರ ಪ್ರವೇಶ ದುಸ್ತರವಾಗಿದೆ, ಪರಂಪರಾಗತ ಬಿಗಿ ಹಿಡಿತ ಹೊಸ ಆರ್ಥವ್ಯವಸ್ಥೆಯಲ್ಲಿ ಸಡಿಲಾಗತೊಡಗಿದೆ. ನಟ್ಟನಡುವಿನಲ್ಲಿದ್ದ ತಾವು ಅಂಚಿಗೆ ಸರಿಯುತ್ತಿದ್ದೇವೆಂಬ ಭಾವನೆಗಳು ಈ ಬಲಿಷ್ಠರನ್ನು ಕಾಡಿವೆ. ಅದರೆ ಅಧಿಕೃತ ಅಂಕಿ ಅಂಶಗಳ ಮಾಹಿತಿ ಅವರ ಭ್ರಮೆ ಹುಸಿ ಎಂದೂ ಆಧಾರರಹಿತವೆಂದೂ ಸಾರಿವೆ. ತಾವು ಬಲಿಪಶುಗಳು ಎಂಬ ಈ ಬಲಿಷ್ಠರ ವಾದವನ್ನು 2011-12ರ ಭಾರತ ಮಾನವ ಅಭಿವೃದ್ಧಿ ಸಮೀಕ್ಷೆಯ ಅಂಕಿ ಅಂಶಗಳು ತಳ್ಳಿ ಹಾಕಿವೆ ಮತ್ತು ಈ ಜಾತಿಗಳ ತಡೆರಹಿತ ಮೇಲ್ಮುಖ ಚಲನೆಯನ್ನು ನಿಚ್ಚಳವಾಗಿ ಗುರುತಿಸಿವೆ.

ಆದರೂ ಈ ಮೂರೂ ಪ್ರಬಲ ಜಾತಿಗಳು ಭಾರೀ ಆಂದೋಲನದ ತೋಳ್ಬಲವನ್ನು ಮೆರೆದು ಸರ್ಕಾರಗಳನ್ನೇ ಮಣಿಸಿವೆ. ಮರಾಠರು ಮತ್ತು ಜಾಟರಂತೂ ತಮ್ಮ ಬೇಡಿಕೆಗಳನ್ನು ಒಪ್ಪಿಕೊಳ್ಳುವಂತೆ ಶಾಸನಸಭೆಗಳನ್ನೇ ಬಗ್ಗಿಸಿದರು. ಪ್ರಭುತ್ವ ಮತ್ತು ಪ್ರಬಲ ಜಾತಿಗಳ ಈ ತೋಳ್ಬಲದ ನಡುವಿನ ಒಳ ಒಪ್ಪಂದಗಳನ್ನು ನ್ಯಾಯಾಂಗ ಮನ್ನಿಸದೆ ಮುರಿದು ಹಾಕಿದೆ. ಉತ್ಪಾದನೆಯ ಪ್ರಮುಖ ಸಾಧನವಾಗಿದ್ದ ಭೂಮಿಯ ಒಡೆತನವನ್ನು ಅನೂಚಾನವಾಗಿ ಅನುಭವಿಸಿಕೊಂಡ ಈ ಜಾತಿಗಳು ಸಾಮಾಜಿಕವಾಗಿ ಮತ್ತು ರಾಜಕೀಯವಾಗಿ ಇಂದಿಗೂ ಭದ್ರ ಮತ್ತು ಬಲಿಷ್ಠ. ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಬೇಕೆಂಬ ಇವರ ಬೇಡಿಕೆಯನ್ನು ಆಯೋಗಗಳು ಕೂಡ ಮನ್ನಿಸಿಲ್ಲ.

ಮೂರೂ ಜಾತಿಗಳ ಪೈಕಿ ಇತ್ತೀಚಿನ ವರ್ಷಗಳಲ್ಲಿ ಬೀದಿಗಿಳಿದು ರಾಜಕೀಯ ಅಲ್ಲೋಲ ಕಲ್ಲೋಲ ಸೃಷ್ಟಿಸಿರುವ ಸಮುದಾಯ ಗುಜರಾತಿನ ಪಾಟೀದಾರರದು. 80ರ ದಶಕದ ಮೀಸಲಾತಿ ವಿರೋಧದ ಉಗ್ರ ಚಳವಳಿಯ ಮುಂಚೂಣಿಯಲ್ಲಿದ್ದ ಸಮುದಾಯವಿದು. ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೀಸಲಾತಿ ರದ್ದತಿಗೆ ಆಗ್ರಹಿಸಿ ಹಿಂಸಾಚಾರಕ್ಕೂ ಹೇಸಿರಲಿಲ್ಲ.

182 ಸದಸ್ಯಬಲದ ಗುಜರಾತ್ ವಿಧಾನಸಭೆಯ 71ಕ್ಕೂ ಹೆಚ್ಚು ಕ್ಷೇತ್ರಗಳ ಫಲಿತಾಂಶಗಳನ್ನು ಪಾಟೀದಾರರು ಪ್ರಭಾವಿಸಬಲ್ಲರು. ರಾಜ್ಯದಲ್ಲಿ ಇವರ ಜನಸಂಖ್ಯಾ ಪ್ರಮಾಣ ಶೇಕಡ 12. 1995ರಿಂದ ಇಲ್ಲಿಯ ತನಕ ಬಿಜೆಪಿಯನ್ನು ಬೆಂಬಲಿಸುತ್ತ ಬಂದಿರುವ ಸಮುದಾಯವಿದು. ಹಿಂದುತ್ವದ ಖಡ್ಗ ಹಸ್ತ. ಗುಜರಾತಿನಲ್ಲಿ ಬಿಜೆಪಿ ‘ಪಟೇಲ್ ಪಾರ್ಟಿ’ ಎಂದೇ ಜನಜನಿತ. ಬಿಜೆಪಿ ಮತ್ತು ಪಾಟೀದಾರರದು ಪರಸ್ಪರ ಲಾಭದಾಯಕ ಸಂಬಂಧ. ಈ ನೆಂಟಸ್ತಿಕೆಗೆ ಇತ್ತೀಚಿನ ವರ್ಷಗಳಲ್ಲಿ ಭಂಗ ಬಂದಿದೆ. ಉದ್ಯೋಗ ಮತ್ತು ಶಿಕ್ಷಣದಲ್ಲಿ ಮೀಸಲಾತಿ ಬೇಕೆಂದು ಕೇಸರಿ ಪಕ್ಷದ ವಿರುದ್ಧ ಸಿಡಿದು ನಿಂತಿದೆ.

ಮಾಧವಸಿಂಗ್ ಸೋಲಂಕಿ ಎಂಬ ಚತುರ ಕಾಂಗ್ರೆಸ್ ತಲೆಯಾಳು 80ರ ದಶಕದಲ್ಲಿ ‘ಖಾಮ್’ (KHAM- ಕ್ಷತ್ರಿಯ, ಹರಿಜನ, ಆದಿವಾಸಿ, ಮುಸ್ಲಿಂ) ಎಂಬ ಮಳೆಬಿಲ್ಲಿನ ಮೈತ್ರಿಕೂಟ ಕಟ್ಟಿ 182 ಸೀಟುಗಳ ಪೈಕಿ 149ನ್ನು ಗೆದ್ದಿದ್ದರು. ಅಂದು ಕಾಂಗ್ರೆಸ್ಸಿನತ್ತ ಬೆನ್ನು ತಿರುಗಿಸಿದ ಪಾಟೀದಾರರು ಮೂರು ದಶಕಗಳ ನಂತರ ಇದೀಗ ತಾವು ತಿರಸ್ಕರಿಸಿದ್ದ ಪಕ್ಷದೆಡೆಗೆ ಪುನಃ ಮುಖ ಮಾಡಿದ್ದಾರೆ, ಅದು ಆಂಶಿಕವಾಗಿಯಾದರೂ ಸರಿ. ಅಂದಿನ ಮಾಧವಸಿಂಗ್ ಸೋಲಂಕಿ ಅವರ ಮಗ ಭರತ್ ಸಿಂಗ್ ಸೋಲಂಕಿ ಈಗ ಗುಜರಾತ್ ಕಾಂಗ್ರೆಸ್ ಅಧ್ಯಕ್ಷ. ತಂದೆ ಕಟ್ಟಿದ್ದ ‘KHAM’ ಮಗನ ಕಾಲದಲ್ಲಿ ‘KHAP’ ರೂಪ ಧರಿಸಿದೆ. ಮೈತ್ರಿಕೂಟದ ಮುಸ್ಲಿಂ ಪದದ ಜಾಗವನ್ನು ಪಟೇಲ್ ಅಥವಾ ಪಾಟೀದಾರ ಪದ ತುಂಬಿದೆ. ಅಂದ ಮಾತ್ರಕ್ಕೆ ಮುಸ್ಲಿಮರನ್ನು ಕೈಬಿಟ್ಟಿದ್ದೇವೆ ಎಂದು ಅರ್ಥವಲ್ಲ. ಬಿಜೆಪಿ ಬಯಸುವ ಕೋಮುವಾದಿ ಧ್ರುವೀಕರಣವನ್ನು ದೂರ ಇರಿಸುವ ನಡೆಯಿದು. ‘ಮುಸ್ಲಿಂ ಪರ ಪಕ್ಷವೆಂದು ಬಿಜೆಪಿ ಹೆಸರಿಡುವುದನ್ನು ತಡೆದಿದ್ದೇವೆ. ಹೇಗೂ ನಮ್ಮ ಪಕ್ಷವನ್ನು ಬಿಟ್ಟರೆ ಮುಸಲ್ಮಾನರಿಗೆ ಬೇರೆ ಆಯ್ಕೆ ಇಲ್ಲ’ ಎಂಬುದು ಕಾಂಗ್ರೆಸ್ ಗ್ರಹಿಕೆ.

ದೆಹಲಿಯ ಪ್ರತಿಷ್ಠಿತ ಲೋಕನೀತಿ-ಸಿ.ಎಸ್.ಡಿ.ಎಸ್. (ಸೆಂಟರ್ ಫಾರ್ ಸ್ಟಡಿ ಆಫ್ ಡೆವೆಲಪಿಂಗ್ ಸೊಸೈಟೀಸ್) ಆಗಸ್ಟ್ ತಿಂಗಳ ಮೊದಲ ಭಾಗದಲ್ಲಿ ನಡೆಸಿದ ಚುನಾವಣಾಪೂರ್ವ ಸಮೀಕ್ಷೆ ಪ್ರಕಾರ ಗುಜರಾತಿನಲ್ಲಿ ಬಿಜೆಪಿಯ ಗೆಲುವು ಗೋಡೆಯ ಮೇಲಿನ ಬರಹದಷ್ಟೇ ನಿಚ್ಚಳವಿತ್ತು. ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಶೇ 30ರಷ್ಟು ಮತಗಳ ಅಂತರವನ್ನು ಗುರುತಿಸಿತ್ತು. 2014ರ ಲೋಕಸಭಾ ಚುನಾವಣೆಗಳಲ್ಲಿ ಕಂಡು ಬಂದಿದ್ದು ಇದೇ ಪ್ರಮಾಣದ ಅಂತರ. ಆದರೆ ಇದೇ ಲೋಕನೀತಿ-ಸಿ.ಎಸ್.ಡಿ.ಎಸ್. ಮೂರು ತಿಂಗಳ ನಂತರ ಅಕ್ಟೋಬರ್ ಕಡೆಯ ವಾರದಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಬಿಜೆಪಿಯ ಮುನ್ನಡೆ ಶೇ 30ರಿಂದ ಕೇವಲ ಶೇ 6ಕ್ಕೆ ಕುಸಿದಿದ್ದು ಕಂಡು ಬಂದಿದೆ. ಬಿಜೆಪಿ ಈಗಲೂ ಮುಂದೆಯೇ. ಆದರೆ ಕಾಂಗ್ರೆಸ್ ದೊಡ್ಡ ಪ್ರಮಾಣದ ಚೇತರಿಕೆ ಕಂಡಿದೆ. ಈ ಚೇತರಿಕೆಯನ್ನು ಮುಂಬರುವ ದಿನಗಳಲ್ಲೂ ಉಳಿಸಿಕೊಂಡು ಇನ್ನಷ್ಟು ಗಟ್ಟಿ ಮಾಡಿಕೊಂಡರೆ ಬಿಜೆಪಿಗೆ ಸವಾಲಾಗಬಲ್ಲದು ಕಾಂಗ್ರೆಸ್ಸು. ಕಡೆಗೆ ಈ ಎರಡೂ ಪಕ್ಷಗಳ ನಡುವೆ ‘ಫೋಟೊ ಫಿನಿಷ್’ ಸ್ವರೂಪದ ಹೋರಾಟ ಜರುಗಿದರೂ ಆಶ್ಚರ್ಯಪಡಬೇಕಿಲ್ಲ. ಬಿಜೆಪಿ ವಿರುದ್ಧ ಪಾಟೀದಾರರ ಬಂಡಾಯವೇ ಕಾಂಗ್ರೆಸ್ ಚೇತರಿಕೆಯ ಹಿಂದಿನ ಬಹುದೊಡ್ಡ ಕಾರಣ. ಕಳೆದ ಹಲವಾರು ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಪರವಾಗಿ ನಿಂತ ಪಾಟೀದಾರರ ಪ್ರಮಾಣ ಮೂರನೆಯ ಎರಡರಷ್ಟು. ಆಗಸ್ಟ್ ಸಮೀಕ್ಷೆಯ ಹೊತ್ತಿನಲ್ಲಿ ಬಿಜೆಪಿ ಹೊಂದಿದ್ದ ಶೇ 58ರಷ್ಟು ಪಾಟೀದಾರ ಬೆಂಬಲ ಅಕ್ಟೋಬರ್ ಕೊನೆಯ ವಾರದ ವೇಳೆಗೆ ಶೇ 20ಕ್ಕೆ ಕುಸಿದಿದೆ. ಪಾಟೀದಾರ ಸಮುದಾಯದ ಬೆಂಕಿ ಚೆಂಡಿನಂತಹ ಯುವ ಮುಂದಾಳು ಹಾರ್ದಿಕ್ ಪಟೇಲ್ ಬಿಜೆಪಿಯನ್ನು ಸೋಲಿಸುವಂತೆ ಕರೆ ನೀಡಿದ್ದಾರೆ ಮತ್ತು ಪ್ರತಿ ಮೂವರು ಪಾಟೀದಾರರ ಪೈಕಿ ಇಬ್ಬರು ಹಾರ್ದಿಕ್ ಅವರನ್ನು ಬೆಂಬಲಿಸಿರುವುದು ಈ ಕುಸಿತಕ್ಕೆ ಕಾರಣ. ಗಡಿಪಾರಿನ ಶಿಕ್ಷೆಯ ನಂತರ ಈ ವರ್ಷದ ಜನವರಿಯಲ್ಲಿ ಗುಜರಾತಿನ ನೆಲಕ್ಕೆ ಕಾಲಿಟ್ಟ ನಂತರ ಹಾರ್ದಿಕ್ ಪಟೇಲ್ ಇಲ್ಲಿಯವರೆಗೆ 325ಕ್ಕೂ ಹೆಚ್ಚು ಸಾರ್ವಜನಿಕ ಸಭೆಗಳಲ್ಲಿ ಬಿಜೆಪಿ ವಿರುದ್ಧ ಕೆಂಡ ಕಾರಿದ್ದಾರೆ. ಇತ್ತೀಚಿನ ಅವರ ಕೆಲವು ಸಭೆಗಳು ಮೋದಿಯವರ ಸಭೆಗಳಿಗಿಂತ ಹೆಚ್ಚು ಜನಸ್ತೋಮವನ್ನು ಆಕರ್ಷಿಸಿವೆ.

ಸೌರಾಷ್ಟ್ರ ಮತ್ತು ಉತ್ತರ ಗುಜರಾತ್ ಸೀಮೆಗಳು ಪಾಟೀದಾರರ ಗಡ. ಅವರ ಜನಸಂಖ್ಯಾ ಪ್ರಮಾಣ ಶೇ 12ರಿಂದ ಶೇ 15ರಷ್ಟು. ಸೂರತ್‌ನ ವರ್ಛಾ ಎಂಬ ಕ್ಷೇತ್ರದಲ್ಲಿ ಪಾಟೀದಾರ ಮತದಾರರ ಪ್ರಮಾಣ ಶೇ 60. ಉತ್ತರ ಸೂರತ್‌ನ ಕಟಾರ್ ಗ್ರಾಮ ಮತ್ತು ಕಮ್ರೇಜ್ ಕ್ಷೇತ್ರಗಳಲ್ಲಿ ಈ ಸಮುದಾಯದ ಪ್ರಮಾಣ ಶೇ 40. ಪಾಟೀದಾರರಿಗೆ ಅನ್ಯಾಯವಾಗಿದೆ ಎಂಬ ಕಾರಣ ಮುಂದೆ ಮಾಡಿ ಈ ಹಿಂದೆ ಬಿಜೆಪಿಯ ಮಾಜಿ ಮುಖ್ಯಮಂತ್ರಿ ಮತ್ತು ಪಾಟೀದಾರ ನಾಯಕ ಕೇಶುಭಾಯಿ ಪಟೇಲ್ ಬಿಜೆಪಿ ವಿರುದ್ಧ ಪಕ್ಷ ಕಟ್ಟಿ ಚುನಾವಣೆಯಲ್ಲಿ ಸೆಣಸಿದ್ದರು. ತಮ್ಮ ಸಮುದಾಯದ ಬೆಂಬಲ ಅವರಿಗೆ ದೊರೆತಿರಲಿಲ್ಲ.

ಈ ವಿಫಲ ಪೂರ್ವನಿದರ್ಶನವನ್ನು ಹಾರ್ದಿಕ್ ನೇತೃತ್ವದ ಮೀಸಲಾತಿ ಆಂದೋಲನವು ಪಾಟೀದಾರ ಸಮುದಾಯದಲ್ಲಿ ಉಂಟು ಮಾಡಿರುವ ಸಂಚಲನಕ್ಕೆ ಹೋಲಿಸಲು ಬರುವುದಿಲ್ಲ. ಹೆಚ್ಚಾಗಿ ಪಾಟೀದಾರ ಯುವಜನರನ್ನು ತೆಕ್ಕೆಗೆ ತೆಗೆದುಕೊಂಡಿರುವ ಆಂದೋಲನದಲ್ಲಿ 14 ಮಂದಿ ಜೀವ ತೆತ್ತಿದ್ದಾರೆ.ಪಾಟೀದಾರ ಆಂದೋಲನವನ್ನು ಹತ್ತಿಕ್ಕಲು ಉಗ್ರ ವಿಧಾನಗಳನ್ನು ಬಳಸಿದ ಬಿಜೆಪಿ ಕುರಿತು ಸಮುದಾಯದಲ್ಲಿ ಉಂಟಾದ ಅಸಮಾಧಾನದ ಬೆಂಕಿ ಆರದಂತೆ ತಿದಿಯೊತ್ತುವುದನ್ನು ಹಾರ್ದಿಕ್ ನಿಲ್ಲಿಸಿಲ್ಲ. ತಾವು ಬೆಳೆದ ಬೆಳೆಗಳಿಗೆ ನ್ಯಾಯಯುತ ದರ ಒದಗಿಸುವ ಮೋದಿಯವರ ಭರವಸೆ ಈಡೇರಿಲ್ಲ ಎಂಬ ಅಸಮಾಧಾನ ರೈತ ಸಮುದಾಯದ್ದು. ಪಾಟೀದಾರ ರೈತರ ಪ್ರಮಾಣ ದೊಡ್ಡದೆಂಬುದು ಗಮನಾರ್ಹ.

ಮುನಿದಿರುವ ಪಟೇಲರನ್ನು ರಮಿಸಿ ವಾಪಸು ಕರೆತರುವ ಎಲ್ಲ ಪ್ರಯತ್ನಗಳನ್ನೂ ನಡೆಸಿದೆ ಬಿಜೆಪಿ. ಮುಂಬರುವ ದಿನಗಳಲ್ಲಿ ಈ ಪ್ರಯತ್ನ ಅರೆಬರೆ ಫಲ ನೀಡಿದರೂ ಮೋದಿ- ಅಮಿತ್ ಷಾ ಜೋಡಿ ದಡ ಸೇರಿದಂತೆಯೇ. ಗುಜರಾತಿನ ಸ್ವಾಮಿನಾರಾಯಣ ಪಂಥವು ಪಾಟೀದಾರ ಸಮುದಾಯದ ಮೇಲೆ ಹೊಂದಿರುವ ಪ್ರಭಾವವನ್ನು ಪ್ರಧಾನಮಂತ್ರಿ ಬಲ್ಲರು. ಅವರು ಬಾರಿ ಬಾರಿಗೆ ಈ ಪಂಥದ ಮುಂದೆ ನಡುಬಗ್ಗಿಸಿ ಶಿರಬಾಗಿ ಕೈ ಜೋಡಿಸಿರುವ ಲೆಕ್ಕಾಚಾರದಲ್ಲಿ ಪಾಟೀದಾರರೂ ಇದ್ದಾರೆ. ತನ್ನ 39 ಶಾಸಕರು, ಐವರು ಸಂಸದರು, ಇಬ್ಬರು ಕೇಂದ್ರ ಮಂತ್ರಿಗಳು, ರಾಜ್ಯ ಸರ್ಕಾರದಲ್ಲಿ ಹತ್ತು ಮಂದಿ ಸಚಿವರು, ಉಪಮುಖ್ಯಮಂತ್ರಿ, ಕಡೆಗೆ ರಾಜ್ಯ ಬಿಜೆಪಿ ಅಧ್ಯಕ್ಷ ಕೂಡ ಪಾಟೀದಾರ ಸಮುದಾಯಕ್ಕೆ ಸೇರಿದವರೇ. ಇಷ್ಟು ಪ್ರಬಲ ಪ್ರಾತಿನಿಧ್ಯವನ್ನು ಪಾಟೀದಾರರಿಗೆ ನಾವಲ್ಲದೆ ಬೇರೆ ಯಾರು ನೀಡಬಲ್ಲರು, ಕಾಂಗ್ರೆಸ್ಸಿನಲ್ಲಿ ಒಬ್ಬರೇ ಒಬ್ಬ ಎತ್ತರದ ಪಾಟೀದಾರ ತಲೆಯಾಳಿನ ಹೆಸರು ಹೇಳಬಲ್ಲಿರಾ ಎಂಬ ಸವಾಲಿನ ದನಿಯ ಪ್ರಶ್ನೆ ಬಿಜೆಪಿಯದು. ಹಾರ್ದಿಕ್ ನೇತೃತ್ವದ ಪಾಟೀದಾರ್ ಅನಾಮತ್ ಅಂದೋಲನ ಸಮಿತಿ (ಪಾಸ್) ಇದೀಗ ಒಡೆದ ಮನೆ. ಹಲವು ಪ್ರಮುಖ ತಲೆಯಾಳುಗಳು ಬಿಜೆಪಿ ಸೇರಿದ್ದಾರೆ.

ಕಾಂಗ್ರೆಸ್ ಪಕ್ಷದ ಖಾಮ್ (KHAM- ಕ್ಷತ್ರಿಯ, ಹರಿಜನ, ಆದಿವಾಸಿ, ಮುಸ್ಲಿಂ) ಸೂತ್ರ ಹೆಣೆದು ಪಟೇಲರನ್ನು ಅಧಿಕಾರದಿಂದ ದೂರ ಇರಿಸಿದ್ದ ದಿನಗಳು ಮತ್ತು ‘ಮುಸಲ್ಮಾನರದೇ ದರ್ಬಾರು ಜರುಗಿದ’ ಕಾಂಗ್ರೆಸ್ ಆಡಳಿತ ಮತ್ತೆ ಬರಬೇಕೇ ಎಂದು ಪಾಟೀದಾರರನ್ನು ಎಚ್ಚರಿಸತೊಡಗಿದೆ ಬಿಜೆಪಿ.

ಮುನಿಸಿಕೊಂಡಿರುವ ಪಾಟೀದಾರರು ಕೈ ಕೊಟ್ಟರೆ ಪರ್ಯಾಯ ಬೆಂಬಲ ನೆಲೆ ರೂಪಿಸುವ ಮುನ್ನೆಚ್ಚರವನ್ನು ಅಮಿತ್ ಷಾ ವಹಿಸಿದ್ದಾರೆ. ಕಡಿಮೆ ಜನಸಂಖ್ಯೆಯ ಹಲವು ಹಿಂದುಳಿದ ವರ್ಗಗಳು ಗುಜರಾತಿನಲ್ಲಿ ಬಹುದೊಡ್ಡ ಸಂಖ್ಯೆಯಲ್ಲಿವೆ. ಒಂದು ಅಂದಾಜಿನ ಪ್ರಕಾರ ಈ ಹಿಂದುಳಿದ ಜಾತಿಗಳ ಸಂಖ್ಯೆ 145. ಬಿಡಿ ಬಿಡಿಯಾಗಿ ಸಣ್ಣ ಜನಸಂಖ್ಯೆಯಾದರೂ, ಇಡಿಯಾಗಿ ಪರಿಗಣಿಸಿದಾಗ ದೊಡ್ಡ ಸಂಖ್ಯೆಯ ಮತದಾರ ಸಮೂಹವಿದು. ಈ ಜಾತಿಗಳ ತಲೆಯಾಳುಗಳನ್ನು ಗುರುತಿಸಿ ಅವರಿಗೆ ವಾಹನಗಳನ್ನು ಒದಗಿಸಿರಿ. ತಮ್ಮ ತಮ್ಮ ಜಾತಿಗಳ ಮನೆ ಮನೆಗಳಿಗೆ ಹೋಗಿ ಬಿಜೆಪಿಗೆ ಬೆಂಬಲ ಯಾಚಿಸುವಂತೆ ಅವರ ಮನ ಒಲಿಸಿರಿ ಎಂಬ ಷಾ ಸೂಚನೆ ಕಾರ್ಯಗತ ಆಗತೊಡಗಿದೆ. ದಲಿತ ಜಿಗ್ನೇಶ್, ಕ್ಷತ್ರಿಯ ಅಲ್ಪೇಶ್, ಪಾಟೀದಾರ ಹಾರ್ದಿಕ್ ಇದೀಗ ಕಾಂಗ್ರೆಸ್ ಮಿತ್ರರು. ಸೀಟು ಮೈತ್ರಿಯಲ್ಲಿ ಈ ಮೂರು ಸಮುದಾಯಗಳಿಗೂ ಕಾಂಗ್ರೆಸ್ ಅವಕಾಶ ಮಾಡಿಕೊಡಬೇಕಿದೆ. ಈ ಪ್ರಕ್ರಿಯೆಯಲ್ಲಿ ಪಟೇಲರಿಗೆ ಸೀಟು ಕೊಟ್ಟರೆ ಕ್ಷತ್ರಿಯರೂ, ಕ್ಷತ್ರಿಯರಿಗೆ ಕೊಟ್ಟರೆ ಪಟೇಲರೂ ಮುನಿಯುವ ಅವಕಾಶ ಇದ್ದೇ ಇದೆ. ಈ ಮುನಿಸನ್ನು ತನ್ನ ಲಾಭಕ್ಕೆ ನಗದು ಮಾಡಿಕೊಳ್ಳುವ ಸೂಕ್ಷ್ಮ ಯೋಜನೆಯನ್ನೂ ಬಿಜೆಪಿ ಸಿದ್ಧವಾಗಿ ಇರಿಸಿಕೊಂಡಿದೆ.

ಭಾವುಕತೆಯನ್ನು ಪಕ್ಕಕ್ಕೆ ಸರಿಸಿ ಲಾಭದತ್ತ ಕೈ ಚಾಚುವ ಗುಣ ಸಾಮರ್ಥ್ಯ ಗುಜರಾತಿಗಳಿಗಿದೆ ಎನ್ನುತ್ತಾರೆ ಖುದ್ದು ಗುಜರಾತಿಯೇ ಆದ ಹಿರಿಯ ಪತ್ರಕರ್ತ ಆಕಾರ್ ಪಟೇಲ್. ತಾವು ಹೇಳುವ ಗುಜರಾತಿಗಳಲ್ಲಿ ಸುಲಭವಾಗಿ ಸಂಧಾನ ಮಾಡಿಕೊಳ್ಳಬಲ್ಲ ವರ್ತಕ (ಬನಿಯಾ), ಭಾವನೆಗಳನ್ನು ಅದುಮಿಡುವುದು ಅಸಾಧ್ಯವೆನಿಸಿದ ಪಾಟೀದಾರ ಹಾಗೂ ಅಂಗಡಿ ಇಟ್ಟು ನಿಗದಿತ ಪರ್ಸೆಂಟೇಜ್ ದರದ ಲಾಭ ಗಳಿಸುವ ಮೋದಿ ಮೂವರೂ ಇದ್ದಾರೆ.

ಅಸಮಾಧಾನವನ್ನು ಅದುಮಿಟ್ಟು ಮತ್ತೆ ಬಿಜೆಪಿಯ ಬೆಂಬಲಕ್ಕೆ ನಿಲ್ಲುವರೇ ಪಾಟೀದಾರರು? ಡಿ.18ರ ಫಲಿತಾಂಶಗಳೇ ತಿಳಿಸಿಕೊಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT