ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಜಾಪ್ರಭುತ್ವದಲ್ಲಿ ರಾಜತ್ವದ ಮೆರವಣಿಗೆ

Last Updated 23 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ರಾಜ, ಮಹಾರಾಜ, ಉತ್ತರಾಧಿಕಾರಿ, ಯದುವಂಶ, ತಲಕಾಡಿನ ಶಾಪ, ಸಿಂಹಾಸನ, ಅಂಬಾರಿ ಇವೆಲ್ಲ ಕಳೆದ ವಾರ ಮಾಧ್ಯಮದ ಚರ್ಚೆಯ ರೋಚಕತೆಗೆ ಆಹಾರ­ವಾಗಿದ್ದವು. ಕನ್ನಡ ನಾಡು ಇನ್ನೂ ರಾಜತ್ವದ ಅಡಿಯಲ್ಲಿ ಬದುಕುತ್ತಿದೆಯೇ ಎಂಬ ಅನುಮಾನ ಹುಟ್ಟು ಹಾಕುವಂತಹ ಮಾತು ಮೇಲಿಂದ ಮೇಲೆ ಕೇಳುತ್ತಲೇ ಇತ್ತು. ಶ್ರೀಕಂಠದತ್ತ ನರಸಿಂಹ­ರಾಜ ಒಡೆಯರ ‘ನಿರ್ಗಮನ’ ಇದಕ್ಕೆ ಅವಕಾಶ ಕಲ್ಪಿಸಿತ್ತು.

೧೯೭೪ ರಲ್ಲಿ ಮೈಸೂರಿನ ಜಯ­ಚಾಮ­ರಾಜೇಂದ್ರ ಒಡೆಯರ್ ಮಹಾರಾಜರು ತೀರಿ­ಕೊಂಡರಂತೆ ಎಂದು ಕೇಳಿ ಹಳ್ಳಿಗಳಿಂದ ಅವರ ಪಾರ್ಥಿವ ಶರೀರವನ್ನು ನೋಡಲು ಚಾಮುಂಡಿ­ಬೆಟ್ಟದ ತಪ್ಪಲಿನ ಮಧುವನಕ್ಕೆ ಜನ ಬರ­ತೊಡ­ಗಿದರು. ಶ್ರೀಗಂಧದ ಕೊರಡನ್ನು ಒಟ್ಟಿ ದೇಹ­ವನ್ನು ಚಿತೆಗಿಟ್ಟು ಸಂಸ್ಕಾರದ ವಿಧಿಗಳನ್ನು ಮುಗಿ­ಸಿ­­ಕೊಂಡು ಕುಟುಂಬಸ್ಥರು ಮರಳಿ ಹೋಗಿದ್ದರೂ ಸಂಸ್ಕಾರಕ್ಕೆ ಅರ್ಧರಾತ್ರಿಯಲ್ಲಿ ಬಂದ ಹಳ್ಳಿ­ಯವರು ಅರ್ಧ ಬೆಂದ ದೇಹವನ್ನು ಕಂಡು ಮತ್ತೆ ಸೌದೆ­ಯನ್ನು ಒಟ್ಟಿ ಚಿತೆಯನ್ನು ಪೂರ್ಣ­ಗೊಳಿ­ಸಿದ್ದರು. ಇಂತಹ ನೆನಪುಗಳು ಜನರಲ್ಲಿ ಇನ್ನೂ ಉಳಿದಿವೆ.

ಆ ಹೊತ್ತಿಗೆ ಜನರಲ್ಲಿ  ಅನುಮಾನಾಸ್ಪದ ವದಂತಿ­ಗಳೂ ಹರಡಿದ್ದವು-. ಅವರ ಮಗನೇ ಅವರ ವಿರುದ್ಧ ಕೋರ್ಟ್‌ಗೆ ಹೋಗಿದ್ದರಂತೆ. ರಾಜರಿಗೆ ಸಮನ್ಸ್ ಬಂದಿತಂತೆ, ರಾಜನಾಗಿದ್ದೂ ಜನಸಾಮಾನ್ಯರಂತೆ ಕೋರ್ಟ್‌ಗೆ  ಹೋಗ­ಬೇಕಾಗಿ ಬಂದಿತು. ಆಘಾತಗೊಂಡ ಅವರು ಹಿಂದಿನ ದಿನ ವಿಷ ಸೇವಿಸಿದ್ದರಂತೆ. ಇಂತಹ ವದಂತಿಗಳನ್ನೂ, ಅರಮನೆ ಸುತ್ತಲ ದಂತಕಥೆ­ಗಳನ್ನೂ ಕೇಳುತ್ತಾ ಮೈಸೂರಿನಲ್ಲಿ ಬೆಳೆದವಳು ನಾನು. ಅಂತಿಮವಾಗಿ ಮೈಸೂರು ವಿಶ್ವ­ವಿದ್ಯಾಲಯದಲ್ಲಿ ಮೌಖಿಕ ಚರಿತ್ರೆಯನ್ನು ಆಧರಿಸಿ ಸಂಶೋಧನೆ ಮಾಡಬೇಕೆಂದು ನಿರ್ಧ­ರಿಸಿದಾಗ, ಪ್ರಾಯೋಗಿಕವಾಗಿ ಮೈಸೂರಿನ ಕಡೆಯ ಮಹಾರಾಜರನ್ನು ಅಧ್ಯಯನಕ್ಕೆ ಆರಿಸಿಕೊಂಡಿದ್ದೆ.

ಎಸ್. ನಿಜಲಿಂಗಪ್ಪ, ಅಜೀಜ್ ಸೇಠ್‌, ಬಿ.ಡಿ.ಜತ್ತಿ, ಅರಮನೆ ನಿಕಟವರ್ತಿಗಳನ್ನೂ ಒಳ­ಗೊಂಡಂತೆ ನೂರಾರು ಜನರನ್ನು ಸಂದರ್ಶಿಸಿದ್ದೆ. ಅವರು ಹೇಳುತ್ತಿದ್ದ ಮಾಹಿತಿಯನ್ನು ಟೇಪ್ ರೆಕಾರ್ಡರ್‌ನಲ್ಲಿ ದಾಖಲಿಸಿಕೊಳ್ಳುತ್ತಿದ್ದೆ. ಟೇಪ್ ರೆಕಾರ್ಡರ್ ಆನ್ ಮಾಡಿದ ಕೂಡಲೇ ಅರ­ಮನೆಯ ಸೇವೆಯಲ್ಲಿದ್ದವರೆಲ್ಲರೂ ಅಧಿಕೃತವಾಗಿ ಪ್ರಕಟಗೊಂಡಿದ್ದ ಜೀವನ ಚರಿತ್ರೆಯ ವರದಿ­ಯನ್ನು ನೀಡುತ್ತಿದ್ದರು. ಮಹಾರಾಜರು ಹುಟ್ಟಿ ಬೆಳೆದದ್ದು, ಓದಿದ ಶಾಲೆ ಕಾಲೇಜು, ಇಂತಹ ಪ್ರಕಟಿತ ಮಾಹಿತಿಯನ್ನಷ್ಟೇ ಕೊಡುತ್ತಿದ್ದರು.

ಟೇಪ್ ರೆಕಾರ್ಡರನ್ನು ಆರಿಸಿದ ನಂತರ, ಇದನ್ನೆಲ್ಲಾ ದಾಖಲಿಸಬೇಡಿ ಎಂದು ಹೇಳುತ್ತಾ, ಮಹಾರಾಜರ ವೈಯಕ್ತಿಕ ಬದುಕನ್ನು ಪಿಸುಮಾತಿನಲ್ಲಿ ಹೇಳುತ್ತಿದ್ದರು. ಹಾಗೆ ಹೇಳುವಾಗ ಅವರ ಸಾವು ಸಹಜವಾಗಿರಲಿಲ್ಲ,- ಅವರ ಮಗನೇ ಅವರ ವಿರುದ್ಧ ಕೋರ್ಟ್‌ಗೆ ಹೋಗಿದ್ದರಂತೆ. ಮಹಲನ್ನು ಹೋಟೆಲ್ ಮಾಡಲು ಹೊರಟಿದ್ದು  ತಂದೆಗೆ ಇಷ್ಟವಿರಲಿಲ್ಲ. ರಾಜರಿಗೆ ಸಮನ್ಸ್ ಬಂದಿತಂತೆ, ರಾಜನಾಗಿದ್ದೂ ಜನಸಾಮಾನ್ಯರಂತೆ ಕೋರ್ಟ್‌ಗೆ ಹೋಗ­ಬೇಕಾಗಿ ಬಂದು ಆಘಾತಗೊಂಡ ಅವರು ಹಿಂದಿನ ದಿನ ವಿಷ ಸೇವಿಸಿದ್ದರಂತೆ. ಇದೊಂದು ದುರಂತವೇ ಆಗಿತ್ತು. ಹೀಗೆ ಹೇಳಲು ಹಿಂಜ­ರಿ­ಯುತ್ತಿದ್ದ ಮತ್ತೊಂದು ವಿಷಯ, ಅವರು ರಚಿಸಿದ ಸಂಗೀತ ಕೃತಿಗಳು. ಅವರಿಗೆ ಸಂಗೀತ­ದಲ್ಲಿ ಆಸಕ್ತಿ ಇದ್ದದ್ದು ನಿಜ. ಅದರಲ್ಲೂ ಪಾಶ್ಚಿ­ಮಾತ್ಯ ಸಂಗೀತವನ್ನು ವಿಶೇಷವಾಗಿ ಕಲಿತಿದ್ದರು. ಯಾವುದೇ ಕಾಲದಲ್ಲೂ ನಡೆಯುವಂತೆ ಸಂಗೀತ ವಿದ್ವಾಂಸರು ರಾಜರ ಹೆಸರಿನಲ್ಲಿ ಕೃತಿಗಳನ್ನು ರಚನೆ ಮಾಡುತ್ತಿದ್ದರು.

ಇದರೆಲ್ಲದರ ಆಚೆಗೂ, ಮೈಸೂರು ಒಡೆಯರ ಬಗ್ಗೆ ಹೊಂದಿದ್ದ ಅಪಾರ ಗೌರವ­ದಿಂದಾಗಿ ಕರ್ನಾಟಕದ ಏಕೀಕರಣದ ಸಂದರ್ಭ­ದಲ್ಲಿ ಹಳೇ ಮೈಸೂರು ಪ್ರಾಂತ್ಯ ಪ್ರತ್ಯೇಕವಾಗಿ ಉಳಿಯಲು ಬಯಸಿತ್ತು. ಕಡೆಗೆ ಜಯಚಾಮ­ರಾಜೇಂದ್ರ ಒಡೆಯರ್ ರಾಜ ಪ್ರಮುಖ­ರಾದುದು ಜನರಿಗೊಂದು ಸಾಂತ್ವನದಂತಿತ್ತು. ರಾಜತ್ವದ ನೆನಪುಗಳಿಂದ ನಿಧಾನವಾಗಿ ದೂರ ಸರಿಯಲು ಇದು ಸಹಕಾರಿಯಾಗಿತ್ತು.


ಮೈಸೂರಿನಲ್ಲಿ ನಡೆದ ರಾಜತ್ವ, ರಾಷ್ಟ್ರೀಯ ತೆಯ ಸಂಘರ್ಷ ಕುತೂಹಲಕಾರಿ­ಯಾದುದು. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಜನಪರವಾದ ಅಭಿವೃದ್ಧಿ ಕಾರ್ಯ­ಗಳಿಂದಾಗಿ ಜನರಿಗೂ, ರಾಷ್ಟ್ರೀಯ ನಾಯಕ­ರಿಗೂ ಅಪಾರ ಗೌರವವಿತ್ತು. ಅದೇ ಸೈದ್ಧಾಂತಿಕ ಬದ್ಧತೆಯಿಂದ ಹೋರಾಡುತ್ತಿದ್ದ ಮೈಸೂರು ಕಾಂಗ್ರೆಸ್, ಬ್ರಿಟಿಷ್ ವಿರುದ್ಧದ ಹೋರಾಟವನ್ನು ಕೈಗೆತ್ತಿಕೊಂಡಿತು. ಬ್ರಿಟಿಷರ ಅಡಿಯಲ್ಲಿ ಅಧಿ­ಕಾರ ನಿರ್ವಹಿಸುತ್ತಿದ್ದ ಮೈಸೂರು ಮಹಾರಾಜರ ವಿರುದ್ಧವೂ ಅವರ ಹೋರಾಟ ನಡೆದಿತ್ತು.

ಮೈಸೂರು ಪ್ರದೇಶದ ಜನ ‘ಡಬಲ್‌ಸ್ಲೇವರಿ’­ಯಲ್ಲಿ ನರಳುತ್ತಿದ್ದಾರೆ ಎಂದು ಮೈಸೂರು ಕಾಂಗ್ರೆಸ್‌ ಭಾವಿಸುತ್ತಿತ್ತು. ಬ್ರಿಟಿಷ್‌ ನೇರ ಆಳ್ವಿಕೆಯ ಪ್ರದೇಶಗಳಲ್ಲಿರುವ ಗುಲಾಮಗಿರಿ­ಗಿಂತ ರಾಜತ್ವದ ಅಡಿಯ ಪ್ರದೇಶಗಳಲ್ಲಿ ಇರುವ ಗುಲಾಮಗಿರಿ ಎರಡರಷ್ಟಿರುತ್ತದೆ ಎಂದೇ ಅವರು ಹೇಳುತ್ತಿದ್ದರು. ರಾಜತ್ವವನ್ನು ವಿರೋಧಿಸುತ್ತಾ ಮುಂದಿನ ಪ್ರಜಾಪ್ರಭುತ್ವದ ಕನಸು ಕಂಡಿದ್ದರು. ಅದೇ ಸಂದರ್ಭದಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್, ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಗೌರವಿಸುತ್ತಿತ್ತು. ಗಾಂಧೀಜಿ ನಾಲ್ವಡಿ­ಯವರನ್ನು ‘ರಾಜರ್ಷಿ’ ಎಂದು ಸಂಬೋಧಿ­ಸುತ್ತಿದ್ದರು. ಭಾವುಕ ಕಾರಣಕ್ಕೆ ರಾಜರಿಗೆ ಗೌರವವೂ, ಸಿದ್ಧಾಂತದ ಕಾರಣಕ್ಕೆ ವಿರೋಧವೂ ವ್ಯಕ್ತವಾಗುತ್ತಿತ್ತು.

ಜಯಚಾಮರಾಜೇಂದ್ರ ಒಡೆಯರ್, ವಸಾಹ ತುಶಾಹಿಯ ಕಡೆಯ ಏಳು ವರ್ಷಗಳು ಸಿಂಹಾ ಸನದಲ್ಲಿದ್ದರು. ಆ ಹೊತ್ತಿಗೆ ಭಾರತ ಸ್ವಾತಂತ್ರ್ಯ ದೆಡೆಗೆ ಸಾಗುತ್ತಿತ್ತು. ಚೇಂಬರ್ಸ್ ಆಫ್‌ ಪ್ರಿನ್ಸ್‌ಸ್ (ಭಾರತ ರಾಜರ ಒಕ್ಕೂಟ) ಸಹ ರಾಜರ ಹಿತಾ ಸಕ್ತಿಗಳನ್ನು ಕಾಯ್ದುಕೊಳ್ಳುವ ಯೋಜನೆ­ಗಳನ್ನು ರೂಪಿಸುತ್ತಿತ್ತು. ಹಾಗೆ ಸ್ವಾತಂತ್ರ್ಯ ಘೋಷಣೆ ಯಾದ ಕೂಡಲೇ ಮೈಸೂರು, ಭಾರತ ಒಕ್ಕೂಟ ವನ್ನು ಸೇರದಿದ್ದಾಗ ಮೈಸೂರು ಕಾಂಗ್ರೆಸ್  ‘ಮೈಸೂರ್ ಚಲೊ’ ಸತ್ಯಾಗ್ರಹವನ್ನು ಆರಂಭಿ ಸಿತು. ಕೂಡಲೇ ಮಹಾರಾಜರು ಮೈಸೂರು ರಾಜ್ಯವನ್ನು ಒಕ್ಕೂಟಕ್ಕೆ ಬಿಟ್ಟುಕೊಟ್ಟರು. ಭಾರತ ಸರ್ಕಾರ ಒಡೆಯರ್‌ ಅವರನ್ನು ರಾಜ ಪ್ರಮುಖರಾಗಿ ಮುಂದುವರಿಸಲು ನಿರ್ಧರಿಸಿತ್ತು.

ಸಾಮ್ರಾಜ್ಯಶಾಹಿಯ ವಿರುದ್ಧದ ಹೋರಾಟ ಹದಿನೆಂಟನೆಯ ಶತಮಾನದಲ್ಲಿ ಆರಂಭ­ವಾಗಿತ್ತು. ಫ್ರಾನ್ಸ್‌ನಲ್ಲಿ ಆರಂಭಗೊಂಡ ಈ ಹೋರಾಟ, ಪ್ರಜಾಪ್ರಭುತ್ವದ ಕಡೆ ಚಿಂತಿಸು­ವಂತೆ ಮಾಡಿತು. ಹಾಗೇ ವಸಾಹತು ವಿರುದ್ಧದ ಹೋರಾಟದ ಜೊತೆಗೆ ಪ್ರಜಾ­ಪ್ರಭುತ್ವಕ್ಕಾಗಿ ಹೋರಾಟಗಳು ನಡೆಯುತ್ತಾ ಬಂದಿವೆ. ರಾಷ್ಟ್ರ, ಪ್ರಜಾಪ್ರಭುತ್ವದ ಕಲ್ಪನೆಗಳು ಮಹತ್ವವನ್ನು ಪಡೆದಂತೆ ರಾಜಶಾಹಿ, ಊಳಿಗಮಾನ್ಯ ಪದ್ಧತಿ ಇವೆಲ್ಲಾ ನಿವಾರಿಸಿಕೊಳ್ಳಲೇಬೇಕಾದ ವ್ಯವಸ್ಥೆಗಳೆನಿಸಿಕೊಂಡವು.

ಬ್ರಿಟಿಷರು, ಭಾರತೀಯ ರಾಜರನ್ನು ಸೋಲಿಸಿದಾಗ ಆ ರಾಜ್ಯಗಳನ್ನೆಲ್ಲಾ ಸುಲಭವಾಗಿ ಅವರ ನೇರ ಆಳ್ವಿಕೆಗೆ ಸೇರಿಸಿಕೊಳ್ಳಬಹುದಿತ್ತು. ಆದರೆ ಭಾರತೀಯನ ಭಾವಕೋಶದಲ್ಲಿ ಆಳವಾಗಿ ಬೇರೂರಿರುವ ರಾಜರ ಬೆಲೆಯನ್ನು ಕಂಡುಕೊಂಡ ಬ್ರಿಟಿಷರು ಅವರನ್ನು ಉಳಿಸಿ­ಕೊಂಡು ಅವರ ಮೂಲಕವೇ ಕಾರ್ಯ ಸಾಧಿಸಲು ನಿರ್ಧರಿಸಿದರು. ಅಧಿಕಾರವಿಲ್ಲದ ಜವಾಬ್ದಾರಿಯನ್ನು ಹೊರಿಸುವ ಅವರ ತಂತ್ರಗಾರಿಕೆಯು ಸೋತ ರಾಜರಿಗೂ, ಗೆದ್ದ ಬ್ರಿಟಿಷ­ರಿಗೂ ಸ್ವೀಕೃತವಾಗಿತ್ತು. ಬ್ರಿಟಿಷರ ಅಡಿಯಾಳಾ­ಗಿರುವುದನ್ನು ವಿರೋಧಿಸಿ ಕಡೆ ಗಳಿಗೆಯವರೆಗೂ ಹೋರಾಡಿದ ಟಿಪ್ಪುವನ್ನು ಇಲ್ಲಿ ನೆನೆಯ­ಬೇಕಾಗುತ್ತದೆ. ಹಾಗೂ ಹೀಗೂ ದತ್ತು ಮಕ್ಕಳಿಗೆ ಹಕ್ಕಿಲ್ಲವೆಂಬ ನೀತಿಯ ವಿರುದ್ಧವಾಗಿ ನಿಂತ ದೇಶಿ ರಾಜರು ೧೮೫೭ರವರೆಗೂ ಹೋರಾಟ ಮುಂದುವರಿಸಿದ್ದರು.

ಮೈಸೂರಿನಲ್ಲಿ ಟಿಪ್ಪುವಿನ ನಂತರ ಅಧಿಕಾರವನ್ನು ಒಡೆಯರಿಗೆ ಹಿಂತಿರುಗಿಸಿದರು. ಹೀಗೆ, ಪುನಃ ಆಳ್ವಿಕೆಗೆ ಬಂದ ಮೈಸೂರಿನ ಒಡೆಯರು ದಿವಾನರುಗಳ ನೆರವಿನೊಂದಿಗೆ ಬ್ರಿಟಿಷರಿಗೆ ಸಲ್ಲಿಸಬೇಕಾದ ಕೊಡುಗೆಯನ್ನು ಸಲ್ಲಿಸುತ್ತಾ ಅವರು ಹಾಕುವ ನಿಯಮಾವಳಿಗಳ ಅಡಿಯಲ್ಲಿ ರಾಜ್ಯಭಾರವನ್ನು ನಿಭಾಯಿಸಿದರು. ಈ ಎಲ್ಲಾ ಕಾರಣಗಳಿಂದಾಗಿ ಮೈಸೂರಿನಲ್ಲಿ ಸ್ವಾತಂತ್ರ್ಯ ಚಳವಳಿಯು ಬಿರುಸಿನಿಂದ ಸಾಗಲಿಲ್ಲ. ಆದರೂ  ಶಿವಪುರ, ವಿದುರಾಶ್ವತ್ಥ, ಈಸೂರು- ಈ ಸ್ಥಳಗಳು ರಾಜತ್ವದ ಸಂಕೇತಗಳನ್ನು ವಿರೋಧಿಸಿ ಮಾಡಿದ ಹೋರಾಟದ ತಾಣಗಳಾಗಿವೆ.

ಸಂದರ್ಭವೊಂದು ಒದಗಿ ಬಂದಾಗ ಕುವೆಂಪು ಅವರು ‘ವಸಂತವನದಲಿ ಹಾಡುವ ಕೋಗಿಲೆ ರಾಜನ ಬಿರುದನು ಬಯಸುವುದೇನು’  ಎಂದು ಕವನವನ್ನು ಬರೆದರು.

ಹಾಗೇ, ರಾಜತ್ವದ ಸಂಕೇತಗಳನ್ನು ತೀವ್ರವಾಗಿ ವಿರೋಧಿಸಿದವರಲ್ಲಿ ಕೆಂಗಲ್ ಹನುಮಂತಯ್ಯ ಪ್ರಮುಖರು. ಸ್ವಾತಂತ್ರ್ಯಾನಂತರ ದಸರಾ ಮೆರ­ವಣಿಗೆಯ ಅಂಬಾರಿಯಲ್ಲಿ ರಾಜರು ಹೋಗು­ವುದನ್ನು ಅವರು ವಿರೋಧಿಸಿದ್ದರು. ಅದರ ಬದಲಿಗೆ ಪ್ರಜಾ ಪ್ರತಿನಿಧಿಗಳು ಹೋಗ­ಬೇಕೆಂಬುದು ಅವರ ನಿಲುವಾಗಿತ್ತು. ಮುಂದೆ, ತಾಯಿ ಭುವನೇಶ್ವರಿಯ ಭಾವಚಿತ್ರವನ್ನು ಹೊತ್ತು ಸಾಗುವುದು ಆರಂಭವಾಯಿತು. ಇವೆಲ್ಲಾ ಕಾಲಕಾಲಕ್ಕಾದ ಬದಲಾವಣೆಗಳ ಸೂಚನೆಗಳಾಗಿವೆ.

ಈ ವಿಚಾರ ಶ್ರೀಕಂಠದತ್ತ ಒಡೆಯರ್‌ರವರ ಸಾವಿನ ನಂತರ ನಡೆದ ಚರ್ಚೆಗಳಲ್ಲಿ, ‘ಇನ್ನು ಮುಂದೆ ದಸರೆಯಲ್ಲಿ ಚಾಮುಂಡೇಶ್ವರಿಗೆ ಪೂಜೆ ಸಲ್ಲಿಸಿ ಮೆರವಣಿಗೆ ಆರಂಭಿಸುವವರು ಯಾರು? ಆಯುಧ ಪೂಜೆಯನ್ನು ಯಾರು ಮಾಡು­ತ್ತಾರೆ?’ ಎಂಬೆಲ್ಲಾ ಪ್ರಶ್ನೆಗಳನ್ನು ಕೇಳಿದ್ದರ ಹಿನ್ನೆಲೆಯಲ್ಲಿ ವಿವರಿಸಿಕೊಳ್ಳಬೇಕಾಗಿದೆ.

ಪ್ರಜಾಪ್ರಭುತ್ವದ ಅಡಿಯಲ್ಲಿ ಜನ ಸಾಮಾನ್ಯ­ನಾಗುವುದನ್ನು ಒಪ್ಪಿಕೊಳ್ಳಲಾಗದ ಮನಸ್ಥಿತಿ ಇಲ್ಲಿ ಹೆಜ್ಜೆ ಹೆಜ್ಜೆಗೂ ಕಾಣುತ್ತದೆ. ಸ್ವತಂತ್ರ ಭಾರತ­ದಲ್ಲಿ ರಾಜರಿಗೆ ಬಿಟ್ಟುಕೊಡಬೇಕಾದ ಆಸ್ತಿಯ ವಿಷಯದಲ್ಲಿ ಭಾರತ ಸರ್ಕಾರ ಬಹು ಉದಾರವಾಗಿಯೇ ನಡೆದುಕೊಂಡಿದೆ.

ಇದ್ದಕ್ಕಿ­ದ್ದಂತೆ ಜನಸಾಮಾನ್ಯನಾಗಿ ಬದುಕುವ ಸ್ಥಿತಿ ತಲೆದೋರದಂತೆ ರಾಜರಿಗೆ ಸ್ವಾತಂತ್ರ್ಯಾ­ನಂತರವೂ ‘ಪ್ರಿವಿ ಪರ್ಸ್‌’ (ರಾಜಧನ) ನಿಗದಿಪಡಿಸಿತು. ಹಲವು ಅರಮನೆಗಳನ್ನು, ಬಂಗಲೆಗಳನ್ನು, ಉಳುವ ಭೂಮಿಯನ್ನು ರಾಜವಂಶದ ಆಸ್ತಿಯಾಗಿ ಪರಿಗಣಿಸಿತು. ಆಸ್ತಿಯ ಮೇಲೆ ನಿರ್ಬಂಧವನ್ನು ಹೇರಿದಾಗ ಅದನ್ನೆಲ್ಲಾ ಉಳಿಸಿಕೊಳ್ಳುವುದು ರಾಜ­ವಂಶಸ್ಥರಿಗೆ ಸವಾಲೇ ಆಗಿತ್ತು. ಇದು ಮೈಸೂರಿನಲ್ಲಿ ಮಾತ್ರವಲ್ಲ, ಭಾರತದಾದ್ಯಂತ ಇದ್ದ ಐನೂರಅರವತ್ತೆರಡು ರಾಜಮನೆತನಗಳೂ ಒಂದಲ್ಲಾ ಒಂದು ರೀತಿಯಲ್ಲಿ ಆಸ್ತಿಗಾಗಿ ಹೊಡೆದಾಡಿವೆ. ಅದರಲ್ಲೂ ಮೈಸೂರಿನಂತಹ ವಿಶಾಲ ರಾಜ್ಯಗಳಿಂದ ಬಂದಂತಹ ರಾಜ­ಮನೆತನ­ದವರಿಗೆ ಸಂಪತ್ತು ಮತ್ತಷ್ಟು ಕಾಡಿಸಿದೆ.

ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರಿಗೆ ಹೀಗೆ ಬೆಂಗಳೂರು ಅರಮನೆ ಅಲ್ಲದೇ ಮೈಸೂರಿನಲ್ಲೂ ಹಲವು ಕಡೆ ಆಸ್ತಿಯನ್ನು ಉಳಿಸಿಕೊಳ್ಳಲು ಒದ್ದಾಡಬೇಕಾಯಿತು. ರಾಜರ ವಂಶದಿಂದ ಬಂದವರೆಂಬ ಒಂದೇ ಕಾರಣಕ್ಕೆ ಖಾಸಗಿ ದರ್ಬಾರ್ ಎಂದು ರಾಜರ ಪೋಷಾಕಿನಲ್ಲಿ ಕಾಣಿಸಿಕೊಳ್ಳುವುದು, ರಾಜ ಲಾಂಛನಗಳನ್ನು ಮೆರೆಸುವುದು ಸಂವಿಧಾನದ ಅಡಿಯಲ್ಲಿ ಪ್ರಶ್ನಿಸುವ ವಿಚಾರವೇ ಆಗಿದೆ.

ರಷ್ಯಾ, ಚೀನಾ, ಫ್ರಾನ್ಸ್ ಅಂತಹ ರಾಷ್ಟ್ರಗಳು ರಾಜತ್ವದಿಂದ ಹೊರ ಬಂದಾಗ ರಾಜತ್ವವನ್ನು ಅಪರಾಧಿ ಮನೋಭಾವದಿಂದ ನೋಡ­ಲಾಯಿತು. ಭಾರತೀಯರಿಗೆ ವಸಾಹತು­ಶಾಹಿಯ ವಿರೋಧ ಬಹು ಮುಖ್ಯವಾಗಿದ್ದರಿಂದ ಮತ್ತು ರಾಜರುಗಳು ಅಧಿಕಾರವನ್ನು ಕಳೆದು­ಕೊಂಡು ದೈನ್ಯವಾಗಿ ನಡೆದು­ಕೊಳ್ಳುತ್ತಿದ್ದು­ದ­ರಿಂದ ರಾಜತ್ವದ ವಿರೋಧವೂ ತೀವ್ರವಾಗಿರಲಿಲ್ಲ.

ಭಾರತದ ಜಾತಿ ವ್ಯವಸ್ಥೆಯಲ್ಲಿ ಮೈಸೂರು ಒಡೆಯರ್ ಆಳುವ ಮನೆತನವಾದುದರಿಂದ ಅರಸು ಎಂಬ ಜಾತಿ ಸಮುದಾಯ ಹುಟ್ಟಿ ಬಂದಿದೆ. ಒಡೆಯರ್ ಆಳ್ವಿಕೆ ಕಾಲಕ್ಕೆ ಈ ಸಮುದಾಯದ ಕುಟುಂಬಗಳಿಗೆಲ್ಲಾ ಧನ ಸಹಾಯವನ್ನೂ, ವಿಶೇಷ ಸಂದರ್ಭಗಳಲ್ಲಿ ಗೌರವವನ್ನೂ ನೀಡಲಾಗುತ್ತಿತ್ತು. ಸಮು­ದಾಯದ ಶಿಕ್ಷಣಕ್ಕಾಗಿ ಅರಸು ಬೋರ್ಡಿಂಗ್ ಸ್ಕೂಲ್ ತೆರೆಯಲಾಯಿತು. ವೀರಶೈವರು ಹಾಗೂ ಉತ್ತರ ಭಾರತದ ಕ್ಷತ್ರಿಯರ ಜೊತೆಗೆ ವೈವಾಹಿಕ ಸಂಬಂಧಗಳನ್ನು ಹೊಂದಿದ್ದರೂ, ಅರಸು ಒಂದು ಅಲ್ಪಸಂಖ್ಯಾತ ಜಾತಿಯಾಗಿ ರೂಪಿತವಾಗಿದೆ. ಈ ನಿಟ್ಟಿನಲ್ಲಿ ಯೋಚಿಸಿದಾಗ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರ ಸಾವು ಸಮುದಾಯದ ರಾಜಕೀಯ ಪ್ರತಿನಿಧಿ ಯೊಬ್ಬರ ಕೊರತೆಯನ್ನು ಹುಟ್ಟುಹಾಕಿದೆ.

ಇನ್ನು ದಸರಾ ಮೆರವಣಿಗೆಯ ವಿಚಾರಕ್ಕೆ ಬಂದರೆ, ಸ್ವಾತಂತ್ರ್ಯಾನಂತರವೂ ಸಂಭ್ರಮದಿಂದ ಆಚರಿಸುತ್ತಾ ಬಂದಿದ್ದೇವೆ. ರಾಜರು ತಾವು ಗೆದ್ದ ಯುದ್ಧಗಳ ವಿಜಯದ ಸಂಕೇತವಾಗಿ ಈ ಮೆರವಣಿಗೆಯನ್ನು ಮಾಡುತ್ತಿದ್ದರು. ವಿಜಯನಗರ ಸಾಮ್ರಾಟರ ಕೆಳಗೆ ಸಣ್ಣ ಪಾಳೆ­ಪಟ್ಟಾಗಿದ್ದ ಮೈಸೂರು, ವಿಜಯನಗರದ ಪತನಾನಂತರ  ದಸರಾ ಆಚರಣೆಯನ್ನು ಕೈಗೆತ್ತಿಕೊಂಡಿತು. ಮೈಸೂರು ಒಡೆಯರು ಅಧಿಕಾರ ಕಳೆದುಕೊಂಡು ಹೈದರ್ ಆಳ್ವಿಕೆ ನಡೆಸುತ್ತಿದ್ದ ಕಾಲಕ್ಕೂ ಈ ಮೆರವಣಿಗೆಗಳಲ್ಲಿ ಒಡೆಯರರನ್ನೇ ಕರೆದೊಯ್ಯಲಾಯಿತು.

ಹೈದರ್ ಅಧಿಕಾರಕ್ಕೆ ಬಂದಾಗಿನಿಂದ ಟಿಪ್ಪುವಿನ ಮರಣ­ದವರೆಗೆ ಯುದ್ಧಗಳನ್ನು ಗೆದ್ದು ರಾಜ್ಯವನ್ನು ವಿಸ್ತರಿಸಿದವರು ಹೈದರ್ ಮತ್ತು ಟಿಪ್ಪು. ಆ ನಂತರ ಬ್ರಿಟಿಷರ ಅಧೀನದಲ್ಲಿ ಆಳ್ವಿಕೆಗೆ ಬಂದವರು ಮೈಸೂರು ಒಡೆಯರು. ಹಾಗಾಗಿ ಸುಮಾರು ಇನ್ನೂರು ವರ್ಷಗಳ ಕಾಲ ಅವರು ಯಾವ ಯುದ್ಧವನ್ನೂ ಮಾಡಲಿಲ್ಲ. ಹಾಗಾ ದರೆ, ಮೆರವಣಿಗೆಗಳಲ್ಲಿ ಕೊಂಡೊ­ಯ್ಯುವ ತುಪಾಕಿಗಳಾಗಲೀ, ಯುದ್ಧದ ವಾದ್ಯಗಳಾಗಲೀ, ವಿಜಯ ಪತಾಕೆಗಳಾಗಲೀ ಯಾವುದರ ಸಂಕೇತ?
ನಿಮ್ಮ ಅನಿಸಿಕೆ ತಿಳಿಸಿ:
editpagefeedback@prajavani.co

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT