ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರತಿನಾಯಕ ಪ್ರಜ್ಞೆಯ ರಾಮ ಮನೋಹರ ಲೋಹಿಯಾ

Last Updated 29 ನವೆಂಬರ್ 2014, 19:30 IST
ಅಕ್ಷರ ಗಾತ್ರ

ಮೋದಿಯವರ ಮಧುಚಂದ್ರ ಮತ್ತು ಚಮತ್ಕಾರದ ಮಾತುಗಳು ಕೊನೆಯ ಸುತ್ತಿಗೆ ಬಂದಂತಿವೆ. ಅವರನ್ನು ಕೊಂಡಾಡುತ್ತಿದ್ದ ಮೋದಿ ಭಜನಾ ಮಂಡಲಿಯ ಅಧಿಕೃತ ಸದಸ್ಯರಾದ ಕೆಲವು ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮದವರ ಬತ್ತಳಿಕೆಯ ಪ್ರಶಂಸೆಯ ಮಾತುಗಳೆಲ್ಲ ಖಾಲಿಯಾದಂತೆ ಕಾಣುತ್ತಿವೆ. ಆಕರ್ಷಕ ಮಾತುಗಾರರನ್ನು ಅನುಮಾನದಿಂದ ನೋಡಬೇಕೆಂದು ಚರಿತ್ರೆ ನಮಗೆ ಕಲಿಸಿದೆ. ಅದ್ಭುತ ಮಾತುಗಳನ್ನು ಜೋಡಿಸುತ್ತಾ ಕುಳಿತವನು ಕೆಲಸವನ್ನು ಮರೆಯುವ ಸಾಧ್ಯತೆ ಇರುತ್ತದೆ. ಮಾತುಗಾರ ಕೆಲಸಗಾರನೂ ಆದರೆ ಚೆನ್ನ. ಗಾಂಧಿ ಮತ್ತು ನೆಹರು ವಿಚಾರಧಾರೆಯನ್ನೂ ಮೋದಿ ಇತ್ತೀಚೆಗೆ ಲಪಟಾಯಿಸಿದ್ದಾರೆ. ನಾಳೆ ನಾಡಿದ್ದರಲ್ಲಿ ಅವರು ಲೋಹಿಯಾ ಚಿಂತನೆಗಳನ್ನೂ ಹೈಜಾಕ್ ಮಾಡಲಿದ್ದಾರೆ. ಇದೇನೂ ಅಪರಾಧವಲ್ಲ. ಆದರೆ ಇವು ಅವರ ಅಸಲಿ ಮುಖವನ್ನು ಮುಚ್ಚಿಡುವ ಮುಖವಾಡವಾಗಿ ಬಳಕೆಯಾಗಬಾರದು. ಹುಲಿಗಿಂತ, ಹುಲಿವೇಷ ತೊಟ್ಟ ಹಸು ಅಪಾಯಕಾರಿ.

ಈ ಹೊತ್ತಿನಲ್ಲಿ ಲೋಹಿಯಾ ನೆನಪಾಗುತ್ತಿದ್ದಾರೆ. ಹಣ್ಣು ಬಿಟ್ಟ ಮರದಂತೆ ನಿಂತಿದ್ದ ಚಿಂತಕ. ಎಷ್ಟೊಂದು ಹಕ್ಕಿಪಕ್ಷಿಗಳು ಕೂತಿರುತ್ತಿದ್ದವು ! ಯಾರು ಕಲ್ಲು ಬೀರಿದರೋ ಎಲ್ಲ ದಿಕ್ಕಾಪಾಲಾಗಿ ಆಶ್ರಯ ಹುಡುಕಿ ಚೆದುರಿ ಹೋಗಿದ್ದಾರೆ. ಲೋಹಿಯಾ ಚಿಂತನೆಗಳು ಮಸುಕಾಗಿವೆ. ಹಣ್ಣು ತಿಂದು ಹಾರಿ ಹೋದ ಹಕ್ಕಿಗಳು ಹೋದ ಕಡೆ ಬೀಜ ಬಿತ್ತಿವೆ. ಭೂ ಸುಧಾರಣೆ, ಇಪ್ಪತ್ತು ಅಂಶದ ಕಾರ್ಯಕ್ರಮ, ಪ್ರಾದೇಶಿಕ ಭಾಷೆಗಳ ಮಾನ್ಯತೆ, ಸಾಮೂಹಿಕ ಕೃಷಿ, ಮಹಿಳೆಯರ ಹಕ್ಕು, ಯುದ್ಧನೀತಿ, ದಲಿತರಿಗೆ ಸಮಾನತೆ, ಕಡ್ಡಾಯ ಶಿಕ್ಷಣ, ಕೋಮು ಸೌಹಾರ್ದ ಯಾವ ಯೋಜನೆಯನ್ನು ಯಾವ ಪಕ್ಷವಾದರೂ ಘೋಷಿಸಿಕೊಳ್ಳಲಿ ಅದರ ಹಿಂದೆ ಲೋಹಿಯಾರ ಆಳವಾದ ಚಿಂತನೆ ಇರುತ್ತದೆ.  ನಾಯಕರಾಗಬೇಕೆನ್ನುವವರು ಲೋಹಿಯಾರನ್ನು ಅನುಸರಿಸಬೇಕಿಲ್ಲ. ಪ್ರತಿ ನಾಯಕ ಹೇಗಿರಬೇಕೆನ್ನುವವರು ಲೋಹಿಯಾರತ್ತ ನೋಡಬೇಕು. ಶಿಪ್ಪಿಂಗ್ ಕಂಪೆನಿಯಿಂದ ಇಂದಿರಾಗಾಂಧಿ ದುಬಾರಿ ಬೆಲೆಯ ಮಿಂಕ್ ಕೋಟನ್ನು ಉಡುಗೊರೆಯಾಗಿ ಪಡೆದಿದ್ದಕ್ಕೆ ಲೋಹಿಯಾ ನೆಹರು ಕುಟುಂಬದ ಜನ್ಮ ಜಾಲಾಡಿದ್ದರು. ಭಾರತದ ಇತಿಹಾಸದಲ್ಲಿ ಲೋಹಿಯಾರಂಥ ಸಮರ್ಥ ಪ್ರತಿನಾಯಕ ಮತ್ತೊಬ್ಬ ಕಾಣಿಸಲಾರ. ಈಗ ರಾಜ್ಯದಲ್ಲೂ, ಕೇಂದ್ರದಲ್ಲೂ ಪ್ರತಿನಾಯಕರು ಗಾಢ ಗೊರಕೆಯಲ್ಲಿದ್ದಾರೆ. ಕಪ್ಪು ಹಣದ ವಿಷಯದಲ್ಲಿ ಮೊನ್ನೆ ಖರ್ಗೆ ಮಾತನಾಡಿರುವುದನ್ನು ಬಿಟ್ಟರೆ ಕಾಂಗ್ರೆಸ್ ಮಲಗಿಕೊಂಡಿದೆ.

‘ಅವಿವಾಹಿತ ಮಹಿಳೆ ಎಂದ ಮಾತ್ರಕ್ಕೆ ಅವಳನ್ನು ಒಂಟಿ ಎಂದು ತಿಳಿಯಬಾರದು. ಇನ್ನೇನು ಮಳೆಯಾಗುವಂತೆ ತೋರುವ ಸೂರ್ಯನಿರದ ಹಗಲಿನಂತೆ ಅವಳು ; ಸುರಹೊನ್ನೆ ಮರದ ಎಲೆಗಳ ಮೂಲಕ ತೂರಿ ಬರುವ ಚಂದ್ರನ ಬೆಳಕಿನಂತೆ; ಅಥವಾ ಈ ಎರಡೂ ಸ್ಥಿತಿಗಳನ್ನು ಪ್ರತಿನಿಧಿಸುವವಳು. ಬಾಲ ವಿಧವೆಯ ಸ್ಥಿತಿ ಕೂಡಾ ಒಂಟಿ ಮಹಿಳೆಗೆ ಹೋಲಿಸುವಂಥದ್ದು, ಆದರೆ ಇಲ್ಲಿ ಮೋಡ ಕಟ್ಟಿದರೂ ಮಳೆಯಿಲ್ಲದ ಹಗಲು; ಸುರಹೊನ್ನೆ ಮರದ ಎಲೆಗಳ ಮಧ್ಯದಿಂದ ಚಂದ್ರ ಕಿರಣ ಕೂಡಾ ತೂರಿ ಬರುವುದಿಲ್ಲ’. ಹೀಗೆ ಕವಿಯಂತೆ, ಸಾಮಾಜಿಕ ಚಿಕಿತ್ಸಕನಂತೆ, ದಾರ್ಶನಿಕನಂತೆ ಮಾತನಾಡುತ್ತಿದ್ದವರು ಮತ್ತು ದಾಖಲಿಸುತ್ತಿದ್ದವರು ಲೋಹಿಯಾ.

ಗಾಂಧೀಜಿಯವರ ಮಾನಸಪುತ್ರನಂತಿದ್ದ, ಅವರ ಮೌಲ್ಯಗಳ ಉತ್ತರಾಧಿಕಾರಿಯಂತಿದ್ದ ಲೋಹಿಯಾ, ಗ್ರಹಿಸದೆ ಇದ್ದ ವಿಚಾರ, ಪ್ರತಿಭಟಿಸದೆ ಇದ್ದ ಅನ್ಯಾಯ ಇಲ್ಲವೇ ಇಲ್ಲ. ಅವರು ಎಷ್ಟೊಂದು ಮುನ್ನೋಟ ಉಳ್ಳವರಾಗಿದ್ದರೆಂದರೆ ಅವರು ಮನುಷ್ಯರನ್ನು ಮತ್ತು ಸಮುದಾಯವನ್ನು ಕುರಿತು ಹೇಳಿದ ಬಹುತೇಕ ಮಾತುಗಳು ಇಂದಿಗೂ ಪ್ರಸ್ತುತ. ಆಯ್ದ ಕೆಲವನ್ನು ಉಲ್ಲೇಖಿಸುವುದಾದರೆ ;

೧. ‘ಯಾವುದಾದರೂ ಬಿಳಿ ದೇಶವೊಂದರಿಂದ ಶಸ್ತ್ರಾಸ್ತ್ರಗಳ ಸರಬರಾಜಾಗದಿದ್ದರೆ ಪಾಕಿಸ್ತಾನ ಒಂದು ವಾರ, ಭಾರತ ಮೂರು   ವಾರ ಆಧುನಿಕ ಯುದ್ಧದಲ್ಲಿ ತೊಡಗಬಲ್ಲವು. ಹೀಗಿದ್ದೂ ಪರಸ್ಪರ ಹೇಗೆ ಗುರುಗುಟ್ಟುತ್ತವೆ ನೋಡಿ. ಸ್ವಾತಂತ್ರ್ಯೋತ್ಸವ ಬಂದರೆ ದಿಲ್ಲಿಯಲ್ಲಿ ಹಳೆಯ ಹಾಗೂ ರಿಪೇರಿಯಾದ ಟ್ಯಾಂಕುಗಳು ರಸ್ತೆಯ ಮೇಲೆ ಲಾಗಾ ಹಾಕುತ್ತವೆ’.
೨. ‘ಜನಸಂಖ್ಯೆಯ ಶೇಕಡಾ ಒಂದು ಭಾಗವಿರುವ ನಾಯಕರು ಮತ್ತು ನೌಕರಷಾಹಿ ಮಾಡುವ ದುಂದುವೆಚ್ಚ ಕೊಳಕಿನಂತೆ. ಅವರ ಸಂಬಳದ ಹತ್ತು ಪಟ್ಟು ಹಣವನ್ನು ಸುಖಸೌಲಭ್ಯಗಳಿಗೆ ವೆಚ್ಚ ಮಾಡಲಾಗುತ್ತಿವೆ. ಒಂದಾದರೂ ವಸ್ತುವಿನ ಅಭಾವವನ್ನು ಎಲ್ಲ ಜನ ಸಮುದಾಯವೂ ಸಮಾನವಾಗಿ ಹಂಚಿಕೊಳ್ಳುವ ಆನಂದವನ್ನು ಅನುಭವಿಸಬೇಕು’.
೩.‘ಭಾರತದ ಸಸ್ಯಾಹಾರವಾದ ಆಷಾಢಭೂತಿತನದಿಂದ ಕೂಡಿದೆ. ಜೈನರು ತಮ್ಮ ಬಗ್ಗೆ ತಾವೇ ಒಂದು ಜೋಕು ಮಾಡಿಕೊಳ್ಳುವುದಿದೆ: ನಾವು ಕ್ರಿಮಿಕೀಟಗಳನ್ನು ಉಳಿಸಲೆಂದು ನೀರನ್ನು ಸೋಸಿ ಕುಡಿಯುತ್ತೇವೆ, ಆದರೆ ಮನುಷ್ಯರ ರಕ್ತವನ್ನು ಮಾತ್ರ ಸೋಸದೆ ಕುಡಿಯುತ್ತೇವೆ- ಎಂಬುದಾಗಿ. ಅನ್ಯರ ಸ್ವತ್ತಿಗೆ ಕೈ ಹಾಕುವ ಮೂಲಕ ಮಾಡಲಾಗುವ ಶೋಷಣೆಗೆ ರಕ್ತವನ್ನು ಮಾತ್ರ ಸೋಸದೆ ಕುಡಿಯುವ ಕ್ರಿಯೆ ಒಂದು ರೂಪಕದಂತಿದೆ. ಈ ಅರ್ಥದಲ್ಲಿ ಸಸ್ಯಾಹಾರೀ ಕ್ರೌರ್ಯ, ಮಾಂಸಾಹಾರೀ ಕ್ರೌರ್ಯಕ್ಕಿಂತ ಅಪಾಯಕಾರಿ’.
೪. ‘ಬನಾರಸ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ವೇಶ್ಯಾಗೃಹಗಳಿಗೆ ಹೋಗುತ್ತಿರುವುದನ್ನು ಹತ್ತಿಕ್ಕುವ ಘನಕಾರ್ಯವನ್ನು ಹಮ್ಮಿಕೊಳ್ಳುವ ಅನಿವಾರ್ಯತೆ ಏನಿಲ್ಲ. ಇದನ್ನು ಪರೋಕ್ಷವಾಗಿ ಸರಿಪಡಿಸಬೇಕು. ಮಾನವ ಘನತೆ ಹಾಗೂ ಶುದ್ಧವಾದ ಶೈಕ್ಷಣಿಕ ಅನ್ವೇಷಣೆಗಳ ಬಗ್ಗೆ ಅರಿವು ಮೂಡಿಸಬೇಕು. ಯಾವ ಮಹಿಳೆಯೂ ವೇಶ್ಯೆಯಾಗದಂತೆ ಎಚ್ಚರವಹಿಸಬೇಕು’.
೫. ‘ಈ ದೇಶದಲ್ಲಿನ ಎಲ್ಲಾ ಸಮಸ್ಯೆಗಳಿಗೂ ನೆಹರೂರವರೇ ಕಾರಣವೆಂದು ನಾನು ಭಾವಿಸಿಲ್ಲ. ಆದರೆ ನಾನು ಹೇಳಬಯಸುತ್ತಿರುವುದು ಈ ಸಮಸ್ಯೆಗಳ ಸಂಕೇತ ಮತ್ತು ಪರಿಣಾಮ ನೆಹರೂ ಎಂದು’.
೬. ‘ನನ್ನ ನಲವತ್ತೈದನೇ ವರ್ಷದವರೆಗೆ ಸ್ವಾತಂತ್ರ್ಯದಲ್ಲಿ ನಂಬಿಕೆ ಇಟ್ಟಿದ್ದೆ ; ಸಂಘಟನೆಯಲ್ಲಿ ಅಲ್ಲ. ಹತ್ತು ವರ್ಷಗಳಿಂದೀಚೆಗೆ, ಸಂಘಟನೆ ಇಲ್ಲದಿದ್ದರೆ ಪ್ರತಿಯೊಬ್ಬರೂ ಒಣಗಿದ ಜೊಂಡಿನಂತಾಗುತ್ತಾರೆ ಎಂದು ಗೊತ್ತಾಗಿದೆ. ಸಂಘಟನೆ ಎಂದರೆ ವ್ಯಕ್ತಿಗಳನ್ನು ಆರಿಸಿಕೊಂಡು ನಿರೀಕ್ಷಿತ ದಿಕ್ಕಿನಲ್ಲಿ ಅವರಿಗೆ ತರಬೇತಿ ನೀಡುವುದು’.

ಉತ್ತರ ಪ್ರದೇಶದ ಅಕ್ಬರ್‌ಪುರದಲ್ಲಿ ೧೯೧೦ರ ಮಾರ್ಚಿ ೨೩ ರಂದು ಹುಟ್ಟಿದವರು ಲೋಹಿಯಾ. ಹತ್ತು ವರ್ಷದ ಹುಡುಗನಾಗಿದ್ದಾಗಲೇ ಗಾಂಧೀಜಿಯವರನ್ನು ಭೇಟಿ ಮಾಡಿದ ಲೋಹಿಯಾ, ಮುಂದೆ ನೆಹರು, ಸುಭಾಷ್‌ಚಂದ್ರ ಬೋಸ್‌ರ ಸಂಪರ್ಕ ಬೆಳೆಸಿಕೊಂಡರು. ಬರ್ಲಿನ್ ವಿಶ್ವವಿದ್ಯಾನಿಲಯದಲ್ಲಿ ಅರ್ಥಶಾಸ್ತ್ರದಲ್ಲಿ ಪಿಎಚ್‌.ಡಿ ಪದವಿ ಮುಗಿಸಿ ಬಂದ ಮೇಲೆ ಗಾಂಧಿ ಒಡನಾಟ ಹೆಚ್ಚಿದ ಪರಿಣಾಮ ದಸ್ತಗಿರಿಗಳು ಶುರುವಾದವು. ೧೯೩೮ರಲ್ಲಿ ಕಲ್ಕತ್ತದಲ್ಲಿ, ೧೯೪೦ರಲ್ಲಿ ದೋಸ್ತ್‌ಪುರ ಮತ್ತು ಅಲಹಾಬಾದ್‌ನಲ್ಲಿ, ೧೯೪೪ರಲ್ಲಿ ಮುಂಬಯಿಯಲ್ಲಿ, ೧೯೪೬ರಲ್ಲಿ ಗೋವಾದಲ್ಲಿ ಚಿತ್ರಹಿಂಸೆ, ಕಠಿಣ ಶಿಕ್ಷೆಗಳ ಭೀಕರ ಹಗಲು ರಾತ್ರಿಗಳನ್ನು ಕಂಡರು. ದೇಶವಿಭಜನೆಗೆ ಲೋಹಿಯಾ ವೈಯಕ್ತಿಕವಾಗಿ ವಿರೋಧವಿದ್ದರು. ಕಲಕತ್ತೆಯ ಕೋಮುಗಲಭೆಯಲ್ಲಿ ನೊಂದವರನ್ನು ಸಂತೈಸಲು ಗಾಂಧಿಯವರಂತೆಯೇ ತೀವ್ರವಾಗಿ ತೊಡಗಿಸಿಕೊಂಡಿದ್ದರು. ನಾಳೆ ಸಂಜೆ ಬನ್ನಿ, ಮಾತನಾಡೋಣ ಎಂದು ಗಾಂಧಿ ನೀಡಿದ್ದ ಆಹ್ವಾನ ನಿಜವಾಗಲಿಲ್ಲ. ಮರುದಿನವೇ ಗಾಂಧೀಜಿ ಮತಾಂಧನೊಬ್ಬನಿಂದ ಕಗ್ಗೊಲೆಯಾದರು.

ಸ್ವಾತಂತ್ರ್ಯಾನಂತರವೂ ಲೋಹಿಯಾರ ಹೋರಾಟ, ಬಂಧನ, ಬಿಡುಗಡೆಗಳು ಮುಂದುವರಿದವು. ಅವರು ಹಿಂದ್ ಕಿಸಾನ್ ಪಂಚಾಯತ್‌ನ ಮೊದಲ ಅಧ್ಯಕ್ಷರು. ನಮ್ಮ ಸಾಗರದ ಕಾಗೋಡಿಗೆ ಬಂದು ಗದ್ದೆಗಿಳಿದು ಗೇಣಿದಾರರ ಸತ್ಯಾಗ್ರಹದಲ್ಲಿ ಭಾಗವಹಿಸಿ ದಸ್ತಗಿರಿಗೊಳಗಾದರು. ನಂತರ ೧೯೫೨ರಲ್ಲಿ ಪ್ರಜಾ ಸಮಾಜವಾದಿ ಪಕ್ಷದ ರಚನೆ. ದಲಿತರ, ಮಹಿಳೆಯರ, ರೈತರ ಪರವಾದ ಹೋರಾಟಗಳು. ಲಖ್ನೋದಲ್ಲಿ ೧೯೫೫ ರ ಮಾರ್ಚ್ ೧ ರಂದು ಲೋಹಿಯಾ ನೇತೃತ್ವ ವಹಿಸಿದ್ದ ರೈತರ ಭಾರೀ ಪ್ರತಿಭಟನಾತ್ಮಕ ಮೆರವಣಿಗೆ ಐತಿಹಾಸಿಕ. ಭಾರತ ಎಂಥ ದೊಡ್ಡ ಹೊಂಡವೆಂದರೆ ಇಲ್ಲಿ ಏನೇ ಪ್ರತಿಭಟನೆ ನಡೆದರೂ ಅದು ಒಂದೆರಡು ಪುಟ್ಟ ತರಂಗಗಳನ್ನೆಬ್ಬಿಸಿ ಏನೂ ನಡೆದಿಲ್ಲವೆಂಬಂತೆ ಮಂಗಮಾಯಮಾಡಿಬಿಡುತ್ತದೆ ಎಂದು ಎಚ್ಚರಿಸುತ್ತಿದ್ದರು.

ಅವರ ಹೋರಾಟದ ಕೆಚ್ಚು, ಲೇಖನಿಯಾಗಿ ರೂಪಾಂತರಗೊಂಡದ್ದು ೧೯೫೬ರಲ್ಲಿ ‘ಮ್ಯಾನ್‌ಕೈಂಡ್’ ಪತ್ರಿಕೆಯನ್ನು ಆರಂಭಿಸಿದಾಗ. ಭಾರತೀಯ ಪತ್ರಿಕೋದ್ಯಮಕ್ಕೆ ಇದು ಮಹತ್ವದ ಸೇರ್ಪಡೆ. ಜನರಿಗೆ ಮುಟ್ಟಿಸಲು, ಚಂದಾ ಸಂಗ್ರಹಿಸಲು, ಮೊದಲ ದರ್ಜೆಯ ಪ್ರತಿಭಟನಾತ್ಮಕ ಪತ್ರಿಕೆಯಾಗಿಸಲು ಹೆಣಗಿದರು. ನೆಹರು ಅವರನ್ನು ಗೌರವಿಸುತ್ತಲೇ ಕುಟುಕುತ್ತಿದ್ದರು. ವ್ಯಕ್ತಿ ಪೂಜೆಯನ್ನು ಖಂಡಿಸುತ್ತಿದ್ದರು. ಸಿಟ್ಟು, ಅಂತಃಕರಣ, ನಿಜ ಕಾಳಜಿಗಳು ಅವರ ಬರವಣಿಗೆಯ ಜೀವಶಕ್ತಿಗಳಾಗಿದ್ದವು. ಇಂಗ್ಲಿಷ್‌ನಲ್ಲಿ ಹದಿನಾಲ್ಕು ಕೃತಿಗಳು, ಹಿಂದಿಯಲ್ಲಿ ಹದಿಮೂರು ಕೃತಿಗಳು ಪ್ರಕಟಗೊಂಡಿವೆ. ಈ ಅಗಾಧ ಭಿತ್ತಿಯಲ್ಲಿ ಸಮಗ್ರ ವಸ್ತುವಿಷಯಗಳ ಮೊನಚಾದ ಮತ್ತು ಖಚಿತವಾದ ಬರಹಗಳಿವೆ. ಪಂಜಿನಂತೆ ಉರಿಯುತ್ತ ಬದುಕಿಯೂ ಗಾಂಧೀಜಿಯವರ ಅಹಿಂಸೆ ಮತ್ತು ಸಾರ್ವಜನಿಕ ಅಸಹಕಾರ ಚಳುವಳಿಯಲ್ಲಿ ನಂಬಿಕೆ ಇರಿಸಿಕೊಂಡಿದ್ದ ಲೋಹಿಯಾ ಲೋಕಸಭಾ ಚುನಾವಣೆಯಲ್ಲಿ ಒಮ್ಮೆ ಸೋತು ಎರಡು ಬಾರಿ ಗೆದ್ದರು. ಆದರೆ ನಿರಂತರ ಸೆರೆವಾಸ, ಕಠಿಣ ಶಿಕ್ಷೆ, ಅಲೆಮಾರಿತನ, ಪತ್ರಿಕೆಯ ನಿರ್ವಹಣೆ ಮುಂತಾದ ಹೊಡೆತಗಳಿಂದ ಜರ್ಝರಿತವಾಗಿ, ಕೇವಲ ಐವತ್ತೇಳನೆ ವಯಸ್ಸಿನಲ್ಲಿ ಅವಿವಾಹಿತರಾಗಿಯೇ ತೀರಿಕೊಂಡರು.

ಕನ್ನಡದ ಹಲವು ಸೂಕ್ಷ್ಮ ಮನಸ್ಸುಗಳು ಲೋಹಿಯಾ ಚಿಂತನೆಗಳ ಗಾಢ ಪ್ರಭಾವಕ್ಕೊಳಗಾದವು. ಅಡಿಗ, ತೇಜಸ್ವಿ, ಸುಬ್ಬಣ್ಣ, ಅನಂತಮೂರ್ತಿ, ಚಂಪಾ, ದೇವನೂರು, ಲಂಕೇಶ್, ಪಟ್ಟಣಶೆಟ್ಟಿ, ಕಾಡನಕುಪ್ಪೆ, ಆಲನಹಳ್ಳಿ, ಸಿದ್ಧಲಿಂಗಯ್ಯ, ಎಂ.ಡಿ. ನಂಜುಂಡಸ್ವಾಮಿ, ಗೋಪಾಲಗೌಡ, ಜೆ.ಹೆಚ್. ಪಟೇಲ್, ಕೊಣಂದೂರು ವೆಂಕಪ್ಪ, ಕೊಣಂದೂರು ಲಿಂಗಪ್ಪ, ಕಡಿದಾಳ್ ಶಾಮಣ್ಣ, ಬಂಗಾರಪ್ಪ, ರಮೇಶ್ ಬಂದಗದ್ದೆ, ಎಂ.ಡಿ. ಸುಂದರೇಶ್, ರಮೇಶ್‌ಕುಮಾರ್, ಸಿದ್ಧರಾಮಯ್ಯ, ಹೆಚ್. ವಿಶ್ವನಾಥ್... ಇದು ಪ್ರಾತಿನಿಧಿಕ ಪಟ್ಟಿಯಷ್ಟೆ. ಇದರಲ್ಲಿ ಅರ್ಧದಷ್ಟು ಮಂದಿ ನಿರ್ಗಮಿಸಿದ್ದಾರೆ. ಇಲ್ಲಿ ಹುಟ್ಟಿದ ಸಮಾಜವಾದಿ ಯುವ ಜನಸಭಾ, ಜಾತಿ ವಿನಾಶ ಚಳುವಳಿ, ನವನಿರ್ಮಾಣ ಸಮಿತಿ, ಕರ್ನಾಟಕ ರಾಜ್ಯ ರೈತ ಸಂಘ ಇವೆಲ್ಲವೂ ಲೋಹಿಯಾ ಚಿಂತನೆಯ ಬೀಜದಿಂದ ಹುಟ್ಟಿದ ಟಿಸಿಲುಗಳೇ.

‘ಇತಿಹಾಸ ಚಕ್ರ’, ‘ರಾಜಕೀಯದ ಮಧ್ಯೆ ಬಿಡುವು’ ಮುಂತಾದ ಕೃತಿಗಳು ಲೋಹಿಯಾ ಚಿಂತನೆಗಳನ್ನು ಕನ್ನಡಕ್ಕೂ ತಂದವು. ಲಂಕೇಶರ ‘ಟೀಕೆ ಟಿಪ್ಪಣಿ’ಯ ಹೆಸರು ಮತ್ತು ಹೂರಣ ಎರಡರಲ್ಲೂ ಲೋಹಿಯಾರ ‘ಮ್ಯಾನ್‌ಕೈಂಡ್‌’ನ ಅಂಕಣ ‘ನೋಟ್ ಅಂಡ್ ಕಾಮೆಂಟ್‌’ನ ಛಾಯೆ ಇದೆ. ಎಂಡಿಎನ್‌ರ ‘ನಮ್ಮ ನಾಡು’ವಿನ ಸಂಪಾದಕೀಯ, ಸಾರ್ವಜನಿಕ ಭಾಷಣಗಳೂ ಲೋಹಿಯಾ ವಿಚಾರಧಾರೆಯಿಂದ ಪ್ರೇರಿತಗೊಂಡಿರುತ್ತಿದ್ದವು. ಜೆ.ಹೆಚ್. ಪಟೇಲ್ ಮತ್ತು ಸಿದ್ಧರಾಮಯ್ಯನವರ ಆಳ್ವಿಕೆಯ ಕಾಲದಲ್ಲಿ, ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯದ ನಿರ್ದೇಶಕ ವೈ.ಕೆ. ಮುದ್ದುಕೃಷ್ಣರ ನೇತೃತ್ವದಲ್ಲಿ, ಡಾ. ಕಾಳೇಗೌಡ ನಾಗವಾರ ಅವರ ಅಧ್ಯಕ್ಷತೆಯಲ್ಲಿ, ಲೋಹಿಯಾ ಸಮಗ್ರ ಕೃತಿಗಳ ಪ್ರಕಟಣಾ ಸಮಿತಿಯ ಮೂಲಕ ಹಲವು ಕೃತಿಗಳನ್ನು ತರಲಾಗಿದೆ.

ಈ ಸರಣಿಯಲ್ಲಿ ಡಾ. ನಟರಾಜ್ ಹುಳಿಯಾರ್ ಮತ್ತು ಚಿಂತಾಮಣಿ ಕೊಡ್ಲೆಕೆರೆ ಸಂಪಾದಿಸಿರುವ ಲೋಹಿಯಾ ಅವರ ಮ್ಯಾನ್‌ಕೈಂಡ್ ಮಾಸಿಕದ ಅಂಕಣ ಬರಹಗಳ ಕನ್ನಡ ಅನುವಾದ ‘ಮಾನವ ಕುಲದ ಏಕತೆ’ ಬಹುಮುಖ್ಯವಾದ ಕೃತಿ. ಇದರಲ್ಲಿ ಬಿ. ಗಂಗಾಧರಮೂರ್ತಿ, ಸಿ. ನಾಗಣ್ಣ, ಬಿ.ವಿ. ವೀರಭದ್ರಪ್ಪ, ಕೆ. ಪುಟ್ಟಸ್ವಾಮಿ, ಎಸ್. ಗಂಗಾಧರಯ್ಯ, ಆರ್. ರಾಜಾರಾಮ್, ಗುರುರಾಜ ಬೀಡೀಕರ್, ಎ.ಆರ್. ನಾಗಭೂಷಣ, ರಾಜಶೇಖರ ನೀರಮಾನ್ವಿ, ಸಿ.ಎಸ್. ದ್ವಾರಕಾನಾಥ್, ಡಿ.ಆರ್. ಶಶಿಧರ, ಕೆ. ನರಸಿಂಹಮೂರ್ತಿ, ಮಂಗ್ಳೂರ ವಿಜಯ, ಅಬ್ಬೂರು ರಾಜಶೇಖರ ಮತ್ತು ಸಂಪಾದಕರಿಬ್ಬರ ಅಮೂಲ್ಯ ಬರಹಗಳಿವೆ. ಕನ್ನಡ ವಿಶ್ವವಿದ್ಯಾನಿಲಯವೂ ಈ ಕೆಲಸ ಮುಂದುವರಿಸಿದೆ. ಲೋಹಿಯಾ ಚಿಂತನೆಗಳ ಅಸ್ಮಿತೆ ಮತ್ತು ಅನಿವಾರ್ಯತೆ ಈಗಿನ ಜಗತ್ತಿಗೆ ತಿಳಿಯಲು ತರುಣರು ಲೋಹಿಯಾ ವಿಚಾರಧಾರೆಗಳನ್ನು ಓದಬೇಕಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT