ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರೀತಿ ತಂದೊಡ್ಡಿದ ದುರಂತ

Last Updated 17 ಡಿಸೆಂಬರ್ 2011, 19:30 IST
ಅಕ್ಷರ ಗಾತ್ರ

ಪ್ರೀತಿ ಪ್ರೇಮ ಪ್ರಣಯದ ಮೂಲ ಹೆಣ್ಣು. ಆಕೆಗೊಂದು ಹಿನ್ನೆಲೆ ಇರುತ್ತದೆ. ತಂದೆ, ತಾಯಿ, ಅಣ್ಣ-ತಂಗಿ, ಅಜ್ಜಿ-ತಾತ ಹೀಗೆ ಬಗೆಬಗೆಯ ಸಂಬಂಧಗಳ ಪ್ರೀತಿಯ ಬಂಧನವಿರುತ್ತದೆ.

ಹೆಣ್ಣಿನದ್ದು ತಾಯಿಕರುಳು. ಹಾಗಾಗಿ ಆಕೆಗೆ ಮನೆಯವರಿಂದ ಸಿಗುವ ಮಮಕಾರ ದೊಡ್ಡದು. ರಕ್ಷಿಸುವವರ ಕೋಟೆಯಲ್ಲಿ ತಾನಿದ್ದೇನೆ ಎಂಬ ಭಾವನೆಯಲ್ಲೇ ಆಕೆ ಬೆಳೆಯುತ್ತಾಳೆ. ಮದುವೆಯ ವಿಚಾರ ಬಂದಾಗ ಮಾತ್ರ ಪರಿಸ್ಥಿತಿ ಬದಲಾಗುತ್ತದೆ.

ಬೇರೆಯದ್ದೇ ಪರಿಸರಕ್ಕೆ ಹೋಗಿ ಆಕೆ ಬದುಕಬೇಕಾಗುತ್ತದೆ. ನೆಚ್ಚಿಕೊಂಡವನ ಜೊತೆ ಏಗಬೇಕಾಗುತ್ತದೆ. ಪ್ರೇಮವಿವಾಹಗಳು ಎಷ್ಟು ಸಂಕೀರ್ಣ ಎಂಬುದನ್ನು ಬಹುಶಃ ಪೊಲೀಸರಿಗಿಂತ ಚೆನ್ನಾಗಿ ಬೇರೆ ಯಾರೂ ತಿಳಿದಿರಲಾರರು.

ಬೆಂಗಳೂರು, ಮುಂಬೈನಂಥ ನಗರ ಪ್ರದೇಶಗಳಲ್ಲಿ ವಯಸ್ಸಿಗೆ ಬಂದ ಹೆಣ್ಣುಮಕ್ಕಳು ಗಂಡಿಗೆ ಒಲಿಯು ವುದು, ಹೊರನೋಟಕ್ಕೆ ಆತ ಗುರುತಾಗುವ ಬಗೆ ಯಿಂದ. ನಿಲುವು, ಗತ್ತು, ವೇಷಭೂಷಣ, ಮೈಕಟ್ಟು- ಇವುಗಳ ಜೊತೆಗೆ ಆತನಿಗಿರುವ ಪ್ರಭಾವಳಿಗೆ ಮನಸೋಲುತ್ತಾರೆ.
 
ಅವರ ಬಾಹ್ಯ ಅಸ್ತಿತ್ವ ಖೊಟ್ಟಿ ಎಂಬುದು ಅರಿವಿಗೆ ಬರುವಷ್ಟರಲ್ಲಿ ಅಂಥ ಹೆಣ್ಣು ಮಕ್ಕಳು ಅವರಿಗೆ ತಮ್ಮನ್ನು ತಾವು ಸಂಪೂರ್ಣವಾಗಿ ಅರ್ಪಿಸಿಕೊಂಡಿರುತ್ತಾರೆ. ಸೆರಗಿನಲ್ಲಿ ಕೆಂಡ ಕಟ್ಟಿಕೊಂಡ ನಂತರದ ನೋವು ಅವರಿಗಷ್ಟೇ ಗೊತ್ತು.

ಹಣಕಾಸು ಸಂಸ್ಥೆಯ ಒಡೆಯ ತನ್ನ ಗಂಡ ಎಂದು ಹೆಮ್ಮೆಪಡುವ ಹೆಣ್ಣುಮಗಳಿಗೆ ಅದೇ ಗಂಡ ನಡೆಸಿದ್ದು `ಬ್ಲೇಡ್ ಕಂಪೆನಿ~ ವ್ಯವಹಾರ ಎಂಬುದು ತಡವಾಗಿ ಗೊತ್ತಾದರೆ ಹೇಗಾಗಬೇಡ? ರಾಜಕಾರಣಿಗಳಿಂದ, ಮಠಾಧೀಶರಿಂದ ಸನ್ಮಾನ ಮಾಡಿಸಿಕೊಂಡ, ಧಾರ್ಮಿಕ ಸಮಾರಂಭಗಳಲ್ಲಿ ಎದೆ ಸೆಟೆದುಕೊಂಡು ಓಡಾಡಿದ ವಿನಿವಿಂಕ್ ಶಾಸ್ತ್ರಿ ಸಿಕ್ಕಿಬಿದ್ದ ಮೇಲೆ ಅವರ ಕುಟುಂಬ ದವರು ಎಂಥ ಯಾತನೆ ಅನುಭವಿಸಿರಬೇಕು? ನಾನು ಇಂಥ ಅನೇಕ ನಯವಂಚಕರನ್ನು ವೃತ್ತಿಬದುಕಿನಲ್ಲಿ ನೋಡಿಕೊಂಡು ಬಂದಿದ್ದೇನೆ.

ನಾನು 1979ರಲ್ಲಿ ಮಾಗಡಿ ರಸ್ತೆ ಪೊಲೀಸ್ ಠಾಣೆಗೆ ಪ್ರೊಬೆಷನರಿ ಸಬ್ ಇನ್ಸ್‌ಪೆಕ್ಟರ್ ಆಗಿ ಕೆಲಸಕ್ಕೆ ಸೇರಿದೆ. ಆಗ ಅಲ್ಲಿನ ಸರ್ಕಾರಿ ಆಸ್ಪತ್ರೆಯ ವೈದ್ಯೆಯನ್ನು ಒಬ್ಬ ಬ್ಲೇಡಿನಲ್ಲಿ ಗಂಭೀರ ಸ್ವರೂಪದಲ್ಲಿ ಗಾಯಗೊಳಿಸಿದ. ಅಲ್ಲಿದ್ದ ಜನರೇ ಅವನನ್ನು ಹಿಡಿದು ತಂದರು. ನಾವು ಕೊಲೆಯತ್ನದ ಕೇಸು ದಾಖಲಿಸಿಕೊಂಡು ವಿಚಾರಣೆ ನಡೆಸಿದೆವು.

ಬ್ಲೇಡಿನಲ್ಲಿ ಹಲ್ಲೆ ನಡೆಸಿದವನು ಲಾರಿ ಚಾಲಕ. ಹಲ್ಲೆಗೊಳಗಾದದ್ದು ಆತನ ಪತ್ನಿ. ವೈದ್ಯೆಯಾಗಿದ್ದ ಆಕೆ ಆತನ ರೂಪಕ್ಕೆ ಮರುಳಾಗಿ ಮದುವೆಯಾಗಿದ್ದಳು. ಮೋಹಿಸಿ ಮದುವೆಯಾಗಿ ತಪ್ಪು ಮಾಡಿದೆ ಎಂಬ ಅರಿವು ಮೂಡಿದ್ದು ತುಂಬಾ ತಡವಾಗಿ. ಅಷ್ಟರಲ್ಲಿ ಮಡಿಲಲ್ಲಿ ಎರಡು ಮಕ್ಕಳಿದ್ದವು.

ಮನೆ ಮಂದಿಯನ್ನೆಲ್ಲಾ ಧಿಕ್ಕರಿಸಿ ಒಬ್ಬ ಲಾರಿ ಚಾಲಕನನ್ನು ಬಯಸಿದ್ದಕ್ಕೆ ಆ ವೈದ್ಯೆ ಬದುಕಿನಲ್ಲಿ ಅನುಭವಿಸಿದ ಯಾತನೆ ಅಷ್ಟಿಷ್ಟಲ್ಲ. ಆ ಕಾಲಘಟ್ಟದಲ್ಲಿ ಮಹಿಳಾ ದೌರ್ಜನ್ಯದ ವಿರುದ್ಧ ಕೇಸು ದಾಖಲಿಸುವಂತೆಯೂ ಇರಲಿಲ್ಲ. ದೀರ್ಘಾವಧಿ ಆ ನೋವನ್ನೇ ನುಂಗಿಕೊಂಡು ಆಕೆ ನಲುಗಿದಳು.

ಹಿಂದೆ ಹೆಣ್ಣುಮಗಳಿಗೆ ಮದುವೆ ಮಾಡುವಾಗ ಮನೆಯ ಹಿರಿಯರು ತಮ್ಮ ನೆಂಟರಿಷ್ಟರು, ಆಪ್ತೇಷ್ಟ ರಲ್ಲಿ ಗಂಡಿನ ಬಗ್ಗೆ ಬಹಳವಾಗಿ ವಿಚಾರಿಸುತ್ತಿದ್ದರು. ಆತನ ಹಿನ್ನೆಲೆಯನ್ನು ಜಾಲಾಡದ ಹೊರತು ತಮ್ಮ ಮನೆ ಹೆಣ್ಣುಮಗಳನ್ನು ಮದುವೆ ಮಾಡಿಕೊಡುತ್ತಿರಲಿಲ್ಲ.

ಅದು ಈಗ ನಮಗೆ ಬಾಲಿಶವಾಗಿ ಕಾಣಬಹುದು. ಆದರೆ, ಸೂಕ್ಷ್ಮವಾಗಿ ಗಮನಿಸಿದರೆ ಅದರ ಮಹತ್ವ ಅರಿವಾದೀತು. ಈಗ ಆನ್‌ಲೈನ್ ಮದುವೆಗಳು ಮಾಮೂಲಾಗಿವೆ.

ಇಂಟರ್ನೆಟ್‌ನಲ್ಲಿ ಸಿಕ್ಕ ಹುಡುಗ ಪಕ್ಕದ ಬೀದಿಯವನೇ ಎಂದು ಗೊತ್ತಾಗಿ ಪುಳಕಿತರಾಗುವ ಮಂದಿ ನಮ್ಮ ನಡುವೆ ಇದ್ದಾರೆ. ಅಂತೆಯೇ ಯಾರೋ ತೆವಲಿನ ಹುಡುಗನ ತೆಕ್ಕೆಗೆ ಬೀಳುವ ನತದೃಷ್ಟೆಯರೂ ಇದ್ದಾರೆ.

ತುತ್ತೂಟಕ್ಕಾಗಿ ದೇಹ ಮಾರಿಕೊಳ್ಳುವ ಹೆಣ್ಣು ಮಕ್ಕಳನ್ನು ನಾವು ರೆಡ್‌ಲೈಟ್ ಏರಿಯಾಗಳಲ್ಲಿ ಹಿಡಿದಾಗ ಅವರ ಹಿನ್ನೆಲೆ ಕೇಳಿ ಬೇಸರವಾಗುತ್ತಿತ್ತು. ಆ ದಂಧೆಗೆ ಇಳಿಯುತ್ತಿದ್ದವರಲ್ಲಿ ಬಹುಪಾಲು ಮಂದಿ ಬಡವರು. ಪ್ರೀತಿಸಿದ ಹುಡುಗರೇ ಇನ್ನು ಕೆಲವರನ್ನು ಆ ಪಾಪದ ಕೂಪಕ್ಕೆ ತಳ್ಳಿರುತ್ತಿದ್ದರು.

ಇತ್ತೀಚೆಗೆ ಮಂಗಳೂರಿನಲ್ಲಿ ಒಂದು ಪ್ರಕರಣ ನಡೆಯಿತು. ಇನ್‌ಸ್ಪೆಕ್ಟರ್ ನಂಜುಂಡೇಗೌಡ ಹಾಗೂ ಬಳ್ಳಾರಿ ಎಸ್ಪಿ ಚಂದ್ರ ಗುಪ್ತ ಅವರ ನೇತೃತ್ವದ ಪೊಲೀಸ್ ತಂಡವು ಒಬ್ಬನನ್ನು ದಸ್ತಗಿರಿ ಮಾಡಿತು. ದಸ್ತಗಿರಿಯಾದವನಿಂದ 20 ಹೆಣ್ಣುಮಕ್ಕಳು ಮೋಸಹೋಗಿದ್ದರು.
 
ಅಷ್ಟೂ ಜನರಿಗೆ ಸೈನೈಡ್ ನುಂಗಿಸಿ ಕೊಂದು, ಅವರ ಒಡವೆಗಳನ್ನೆಲ್ಲಾ ದೋಚಿದ್ದ. ಆ ಪ್ರಕರಣಗಳ ವಿಚಾರಣೆ ಈಗ ನಡೆಯುತ್ತಿದೆ. ಅವನಿಂದ ಮೋಸಹೋದವರಲ್ಲಿ ಬಹುಪಾಲು ಜನರು ಸುಶಿಕ್ಷಿತರು. ಅಕ್ಷರದ ಸಂಪತ್ತಿಗೇ ಹೆಸರಾದ ದಕ್ಷಿಣ ಕನ್ನಡ ಜಿಲ್ಲೆಯವರು.

ಬೆಂಗಳೂರಿನಲ್ಲಿ ಒಬ್ಬ ಶ್ರೀಮಂತರಿದ್ದರು; ರಿಯಲ್ ಎಸ್ಟೇಟ್ ಉದ್ಯಮಿ. ತಮ್ಮ ಮಕ್ಕಳನ್ನು ಬಹಳ ಶಿಸ್ತಿನಿಂದ ಬೆಳೆಸಿದರು. ಮಗ ಕಾಲೇಜು ಮೆಟ್ಟಿಲು ಹತ್ತುವ ಸಂದರ್ಭದಲ್ಲಿ ಅವರ ಪತ್ನಿ ತೀರಿಹೋದರು. ಯಾರ‌್ಯಾರದ್ದೋ ಮಾತು ಕೇಳಿಕೊಂಡು ಅವರು ಇನ್ನೊಂದು ಮದುವೆಯಾದರು.

ಕಾಲೇಜಿನಲ್ಲಿ ಓದುತ್ತಿದ್ದ ಹುಡುಗ ಅದುವರೆಗೆ ರೂಢಿಸಿಕೊಂಡಿದ್ದ ಶಿಸ್ತು ಮಾನಸಿಕ ತೊಳಲಾಟದ ಕಾರಣಕ್ಕೋ ಏನೋ ಸಡಿಲಗೊಂಡಿತು. ಕಾಲೇಜಿನಲ್ಲಿ ಸಹಪಾಠಿಯಾಗಿದ್ದ ಹುಡುಗಿಯನ್ನು ಪ್ರೀತಿಸಿದ. ಆಕೆ ಮಧ್ಯಮವರ್ಗದ ಹೆಣ್ಣುಮಗಳು.

ನಿವೃತ್ತ ಸರ್ಕಾರಿ ನೌಕರರ ಮಗಳು. ಆ ಹುಡುಗ-ಹುಡುಗಿಗೆ ಮುಸ್ಲಿಂ ಯುವಕನೊಬ್ಬ ಗೆಳೆಯನಾಗಿದ್ದ. ಅವರದ್ದು ಅಂತರ್ಜಾತೀಯ ಪ್ರೀತಿ. ಅದಕ್ಕೆ ಬೇರೆ ಧರ್ಮದವನ ಬೆಂಬಲ. ಮೂವರೂ ಒಟ್ಟೊಟ್ಟಾಗಿಯೇ ಓಡಾಡಿಕೊಂಡಿದ್ದರು.

ಒಮ್ಮೆ ಆ ಮೂವರೂ ನಾಪತ್ತೆಯಾದರು. ಕಾಣೆಯಾಗಿದ್ದಾರೆಂದು ಮೂರು ಕೇಸುಗಳು ದಾಖಲಾದವು. ಮುಸ್ಲಿಂ ಯುವಕ ಮತ್ತು ಬೇರೆ ಜಾತಿಯವನು ತಮ್ಮ ಮನೆಯ ಹುಡುಗಿಯನ್ನು ಕರೆದುಕೊಂಡು ಹೋಗಿದ್ದಾರೆಂಬ ಕಾರಣಕ್ಕೆ ನಿವೃತ್ತ ಸರ್ಕಾರಿ ನೌಕರರ ಮನೆಯವರಿಗೆ ಸಹಜವಾದ ಆತಂಕ. ಶ್ರೀಮಂತ ಹುಡುಗ ಮಾತ್ರ ಒಂದಿಷ್ಟು ಹಣ ತೆಗೆದು ಕೊಂಡು ಹೋಗಿದ್ದ. ಅವರು ಎಲ್ಲಿಗೆ ಹೋಗಿದ್ದಾರೆಂಬ ಸಣ್ಣ ಸುಳಿವನ್ನೂ ಬಿಟ್ಟಿರಲಿಲ್ಲ.

ಹಾಗಾಗಿ ಮೂರೂ ಕುಟುಂಬದವರ ನಡುವೆ ಪರಸ್ಪರ ಅಪನಂಬಿಕೆ ಹೊಗೆಯಾಡತೊಡಗಿತು. ಹಿಂದೂ ಧರ್ಮಕ್ಕೆ ಸೇರಿದ ಎರಡೂ ಕುಟುಂಬದವರಿಗೆ ಮುಸ್ಲಿಂ ಹುಡುಗನ ಕುಟುಂಬದವರ ಮೇಲೆ ಸಿಟ್ಟು, ಅನುಮಾನ ಇತ್ತು. ಪ್ರಕರಣ ಕೋಮು ಗಲಭೆಯ ಬಣ್ಣ ಪಡೆದುಕೊಳ್ಳುವ ಆತಂಕವೂ ಇತ್ತು. ಪೊಲೀಸರು ಹುಡುಕಾಟ ನಡೆಸಿದರೂ ಕಾಣೆಯಾದ ಮೂವರೂ ಸಿಗಲಿಲ್ಲ.

ಕಾಲಕ್ರಮೇಣ ಪ್ರಕರಣ ತಣ್ಣಗಾಯಿತು. ಆ ಶ್ರೀಮಂತ ತಂದೆ ತುಂಬಾ ನೊಂದುಕೊಂಡರು. ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತು. ನಿವೃತ್ತ ಸರ್ಕಾರಿ ನೌಕರರು ಕೂಡ ಮಗಳು ದೂರಾದಳಲ್ಲ ಎಂಬ ಕೊರಗಿನಲ್ಲೇ ಒದ್ದಾಡುತ್ತಿದ್ದರು. ಒಮ್ಮೆ ಬಾಂಬೆ ಪೊಲೀಸರು ಆ ಶ್ರೀಮಂತರ ಮನೆಯಲ್ಲಿ ಪ್ರತ್ಯಕ್ಷ ರಾದರು.
 
`ನಿನ್ನ ಮಗ ಬಾಂಬೆಯಲ್ಲಿ ಸಂದೇಹಾಸ್ಪದ ವಾಗಿ ಓಡಾಡುತ್ತಿದ್ದ. ಹಾಗಾಗಿ ದಸ್ತಗಿರಿ ಮಾಡಿದ್ದೇವೆ. ಸಿಆರ್‌ಪಿಸಿ 41, 102 ಪ್ರಕರಣ ದಾಖಲಿಸಿ ಕೊಂಡಿದ್ದೇವೆ. ವಿಚಾರಣೆ ಮಾಡಿದಾಗ ಅವನು ಮಾಡಿರಬಹುದಾದ ಅವಘಡ ಗೊತ್ತಾಗಿದೆ~ ಎಂದರು. ಆಗ ಆ ತಂದೆಯ ಜಂಘಾಬಲ ಉಡುಗಿಹೋಯಿತು.

ನಡೆದದ್ದು ಇಷ್ಟು: ಆ ಹುಡುಗ-ಹುಡುಗಿ ತುಂಬಾ ಪ್ರೀತಿಸುತ್ತಿದ್ದರು. ಇಬ್ಬರ ಕುಟುಂಬದವರೂ ಮದುವೆಗೆ ಒಪ್ಪಲಿಲ್ಲ. ಹೇಗಿದ್ದರೂ ಪದವಿ ಓದುತ್ತಿದ್ದರಿಂದ ಎಲ್ಲಿಯಾದರೂ ಜೀವನ ಮಾಡಬಹುದು ಎಂದು ಕೊಂಡು ಬಾಂಬೆಗೆ ಹೊರಟರು.
 
ಸ್ನೇಹದ ಬಂಧದ ಕಾರಣಕ್ಕೆ ಆ ಮುಸ್ಲಿಂ ಹುಡುಗನೂ ಅವರ ನೆರವಿಗಾಗಿ ಹೊರಟ. ಅವರೆಲ್ಲಾ ಬಾಂಬೆಯ ಧಾರಾವಿ ಕೊಳೆಗೇರಿ ಯಲ್ಲಿ ಮನೆ ಮಾಡಿದರು. ಪಗಡಿ, ಮುಂಗಡ ಹಣ, ಬಾಡಿಗೆ ತೆತ್ತರು.

ಕೈಲಿದ್ದ ಹಣ ಕರಗತೊಡಗಿದ ನಂತರ ಆ ಶ್ರೀಮಂತ ಹುಡುಗ ಲಾರಿಗೆ ಕಬ್ಬಿಣ ತುಂಬುವ ಕಾರ್ಖಾನೆಯಲ್ಲಿ ಕೂಲಿ ಕೆಲಸ ಮಾಡತೊಡಗಿದ. ಕಾರಿನಲ್ಲಿ ಓಡಾಡಿಕೊಂಡು ಐಷಾರಾಮಿ ಬದುಕು ನಡೆಸಿದವನು ಅವುಡುಗಚ್ಚಿಕೊಂಡು ಬದುಕುವ ಪರಿಸ್ಥಿತಿ ಸೃಷ್ಟಿಯಾಗಿತ್ತು.

ಆ ಹುಡುಗಿ ಕೂಡ ಕೊಳೆಗೇರಿಯಲ್ಲಿ ಪಾಠ ಹೇಳುತ್ತಿದ್ದಳು. ಅವಳಿಗೆ ವಿಷಮಶೀತಜ್ವರ ಬಂತು. ಆ ಇಬ್ಬರೂ ಹುಡುಗರು ಅಲ್ಲಿನ ವೈದ್ಯರಿಗೆ ತೋರಿಸಿ ಅವಳಿಗೆ ಚಿಕಿತ್ಸೆ ಕೊಡಿಸಿದರು. ಪೋಷಕಾಂಶವೇ ಇಲ್ಲದ ಆಹಾರ ತಿಂದು ಮೊದಲೇ ಸೊರಗಿದ್ದ ಆ ಹುಡುಗಿ ಒಂದು ದಿನ ಇದ್ದಕ್ಕಿದ್ದಂತೆ ಅಸುನೀಗಿದಳು.

ಮನೆಬಿಟ್ಟು ಬಂದಿದ್ದ ಕಾರಣ ಅವಳ ಸಾವನ್ನು ಎದುರಿಸುವ ಧೈರ್ಯ ಹುಡುಗರಿಗೆ ಇರಲಿಲ್ಲ. ಅವರು ಭಯದಿಂದಾಗಿ ಆ ಹುಡುಗಿಯ ಶವವನ್ನು ಅಲ್ಲಿಯೇ ಬಿಟ್ಟು, ಮನೆಗೆ ಬೀಗ ಜಡಿದು, ಬಾಂಬೆಯಲ್ಲೇ ಸ್ಥಳಾಂತರ ಮಾಡಿದರು. ಮತ್ತೆ ಅವರು ಬಾಡಿಗೆ ಮನೆ ಹಿಡಿಯಲಿಲ್ಲ.
 
ಫ್ಲೈಓವರ್ ಕೆಳಗೆ ಮಲಗುವುದು, ಹಮಾಮ್‌ಗಳಲ್ಲಿ ಸ್ನಾನ ಮಾಡುವುದನ್ನು ಅಭ್ಯಾಸ ಮಾಡಿಕೊಂಡರು. ನೋಡಲು ಉತ್ತಮ ಕುಟುಂಬದ ಹಿನ್ನೆಲೆಯವರಂತೆ ಕಾಣುತ್ತಿದ್ದ ಅವರು ಅನುಮಾನಾಸ್ಪದವಾಗಿ ಫ್ಲೈಓವರ್ ಕೆಳಗೆ ಮಲಗಿದ್ದನ್ನು ಕಂಡು ಪೊಲೀಸರು ಒಮ್ಮೆ ವಿಚಾರಿಸಿದರು.

ಭಯದಲ್ಲೇ ನಡೆದ ಘಟನೆಯನ್ನು ಅವರು ಪೊಲೀಸರಲ್ಲಿ ಬಾಯಿಬಿಟ್ಟರು. ಹುಡುಗಿ ಮೃತಪಟ್ಟ ಮನೆಗೂ ಕರೆದುಕೊಂಡು ಹೋದರು. ಆದರೆ, ಅಲ್ಲಿ ಅದಾಗಲೇ ಬೇರೆಯವರು ಬಾಡಿಗೆಗೆ ಇದ್ದರು. ಪೊಲೀಸರು ಆ ಮನೆ ಯಾರದ್ದೆಂದು ವಿಚಾರಿಸಿದಾಗ, ಅದು ಧಾರಾವಿ ಕೊಳೆಗೇರಿಯ ಭೂಗತಪಾತಕಿಯ ಮನೆ ಎಂಬುದು ಗೊತ್ತಾಯಿತು.

ಶವ ಕೊಳೆತು ಅಕ್ಕಪಕ್ಕದವರಿಗೆ ವಾಸನೆ ಬರಲಾರಂಭಿಸಿ ವಿಷಯವನ್ನು ಆ ಮನೆಯ ಮಾಲೀಕನಿಗೆ ಮುಟ್ಟಿಸಿದ್ದರು. ಅವನು ಬಂದು ಬಾಗಿಲು ಒಡೆದು ನೋಡಿದಾಗ ಒಳಗೆ ಶವವಿತ್ತು. ಅದನ್ನು ಪಕ್ಕದಲ್ಲೇ ಇದ್ದ ದೊಡ್ಡ ಚರಂಡಿಗೆ ಬಿಸಾಡಿ, ಮನೆಯನ್ನು ಶುಚಿಗೊಳಿಸಿ ಬೇರೆಯವರಿಗೆ ಬಾಡಿಗೆಗೆ ಕೊಟ್ಟ. ಕೊಳೆತ ಸ್ಥಿತಿಯಲ್ಲಿದ್ದ ಆ ಶವ ಪೊಲೀಸರಿಗೆ ಸಿಕ್ಕಿತು.

ಅಸ್ವಾಭಾವಿಕ ಮರಣ ಎಂದು ಪೊಲೀಸರು ಕೇಸು ದಾಖಲಿಸಿಕೊಂಡರಷ್ಟೆ. ಆಮೇಲೆ ಈ ಹುಡುಗರು ಸಿಕ್ಕಾಗ ಅದರ ಹಿಂದೆ ಅಡಗಿದ್ದ ಕಥೆ ಅನಾವರಣಗೊಂಡಿತು. ಸಾವು ಎಂದೊಡನೆ ಜಾಗೃತರಾದ ಪೊಲೀಸರು ಪ್ರಕರಣದ ತನಿಖೆ ನಡೆಸಿಕೊಂಡು, ಆ ಹುಡುಗರ ಮೂಲ ಹಿಡಿದು ಬೆಂಗಳೂರಿನ ಶ್ರೀಮಂತರ ಮನೆಗೆ ಬಂದಿದ್ದರು.

ಆತುರದ ಕೈಗೆ ಬುದ್ಧಿ ಕೊಟ್ಟರೆ ತಮ್ಮದಷ್ಟೇ ಅಲ್ಲದೆ ಮನೆಯವರ ಬದುಕೂ ಎಷ್ಟು ದಾರುಣವಾಗುತ್ತದೆ ಎಂಬುದಕ್ಕೆ ಈ ಪ್ರೇಮ ಪ್ರಕರಣ ಉದಾಹರಣೆ.

ಮುಂದಿನ ವಾರ: ನಟೀಮಣಿಯ ಆತ್ಮಹತ್ಯೆ ಪ್ರಸಂಗ
ಶಿವರಾಂ ಅವರ ಮೊಬೈಲ್ ಸಂಖ್ಯೆ 94483 13066

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT