ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ಲೀಸ್ ಫ್ರೆಂಡ್ಸ್; ನನ್ನ ಕಳಿಸಬೇಡಿ

Last Updated 21 ಮೇ 2014, 19:30 IST
ಅಕ್ಷರ ಗಾತ್ರ

ಸುನೀತೆ ಎಲ್ಲರ ಹಾಗಲ್ಲ. ಬಜಾರಿ ಮತ್ತು ಹಟಮಾರಿ ಹುಡುಗಿ. ಸಿಟ್ಟು ಮೂಗಿನ ಮೇಲೆ. ಏನು ಹೇಳಿದರೂ ಸಹಿಸುವುದಿಲ್ಲ. ಅವಳು ಕೆಟ್ಟಂಕೊಳಕ ಬೈತಾಳೆ. ಯಾರ ಹತ್ರನೂ ಸೇರಲ್ಲ, ಅವಳನ್ನ ಮಾತ್ರ ಯಾವುದೇ ಕಾರಣಕ್ಕೂ ಎನ್.ಎಸ್.ಎಸ್. ಸ್ಪೆಷಲ್ ಕ್ಯಾಂಪಿಗೆ ಸೆಲೆಕ್ಟ್ ಮಾಡಬೇಡಿ ಸಾರ್ ಎಂದು ಹುಡುಗರೂ ಹುಡುಗಿಯರೂ ಒಟ್ಟಾಗಿ ಬಂದು ಅವಳ ಮೇಲೆ ಚಾಡಿ ಹೇಳಿದರು. ವಿದ್ಯಾರ್ಥಿಗಳು ಹೇಳುತ್ತಿರುವುದು ಸತ್ಯ ಎಂದು ತಿಳಿದಿದ್ದರೂ ನಾನವಳನ್ನ ಕ್ಯಾಂಪಿಗೆ ಆಯ್ಕೆ ಮಾಡಿದೆ. ಬಹಳಷ್ಟು ಮಕ್ಕಳು ಮುಖವೂದಿಸಿಕೊಂಡು ನನ್ನ ಮೇಲೆ ತಮ್ಮ ಅಸಹನೆ ವ್ಯಕ್ತಪಡಿಸಿದರು.

ಒಂದು ಹಳ್ಳಿಯ ಶಾಲೆಯಲ್ಲಿ ನಮ್ಮ ಕ್ಯಾಂಪು ನಿಗದಿಯಾಗಿತ್ತು. ಸಂಜೆಯ ಹೊತ್ತಿಗೆ ಅಲ್ಲಿಗೆ ತಲುಪಿದೆವು. ಮಲೆನಾಡಿನ ರಮ್ಯ ಪರಿಸರ ನೋಡಿ ಮಕ್ಕಳೆಲ್ಲಾ ನಲಿದರು.  ನಾನು ಒಂದು ಸಣ್ಣ ಸಭೆ ನಡೆಸಿ ಕ್ಯಾಂಪಿನಲ್ಲಿ ಎಲ್ಲರೂ ಹೇಗೆ ಒಂದೇ ಕುಟುಂಬದ ಸದಸ್ಯರಂತೆ ಸಹಬಾಳ್ವೆಯಿಂದ ಇರಬೇಕು ಎಂಬುದನ್ನು ವಿವರಿಸಿದೆ.

ಎಲ್ಲರೂ ರಾತ್ರಿ ಊಟ ಮುಗಿಸುವಾಗ ನಮ್ಮ ಸುನೀತೆಯ ರಗಳೆಗಳು ಸಣ್ಣಗೆ ಶುರುವಾದವು. ಗೆಳತಿಯರ ಜೊತೆ ಹೊಂದಾಣಿಕೆ ಮಾಡಿಕೊಳ್ಳುವ ಸ್ವಭಾವ ಸುನೀತೆಯಲ್ಲಿ ಇರಲೇ ಇಲ್ಲ. ಮತ್ತೊಬ್ಬರಿಗೆ ಸತ್ಕರಿಸುವುದು ಆಕೆಗೆ ಗೊತ್ತಿರಲಿಲ್ಲ. ಯಾರೂ ತನ್ನ ಪಕ್ಕ ಕೂರಬಾರದು. ಯಾರೂ ನನಗೆ ಕೆಲಸ ಹೇಳಬಾರದು. ಎಲ್ಲರೂ ತಾನು ಹೇಳಿದಂತೆ ಕೇಳಬೇಕು ಎಂಬ ಹಟ ಅವಳದು.  ಹೀಗಾಗಿ, ತಾನೇ, ಎಲ್ಲರಿಗೂ ಕೆಲಸ ಹೇಳುತ್ತಾ, ಆರ್ಡರ್ ಮಾಡುತ್ತಾ  ಓಡಾಡುತ್ತಿದ್ದಳು.

ಆಕೆಗೆ ನಿರ್ವಹಿಸಲು ಹೇಳಿದ ಯಾವ ಕೆಲಸಗಳನ್ನೂ ಆಕೆ ಮಾಡುತ್ತಿರಲಿಲ್ಲ. ಬದಲಾಗಿ, ತಾನು ತಿಂದ ತಟ್ಟೆಯನ್ನೂ ಎತ್ತಲು, ಅದನ್ನು ತೊಳೆದಿಡಲು ಅಲ್ಲಿದ್ದ ಬೇರೆಯವರಿಗೆ ಆಜ್ಞೆ ಮಾಡುತ್ತಿದ್ದಳು. ಇದನ್ನು ಗಮನಿಸಿದ ನಾನು ಅದನ್ನು ಯಾರೂ ಎತ್ತಬೇಡಿ ಎಂದು ಹೇಳಿ ಅವಳು ತಿಂದ ಊಟದ ತಟ್ಟೆಯನ್ನು ಅವಳ ಕೈಯಿಂದಲೇ ಎತ್ತಿಸಿದೆ. ಸಿಡುಕುತ್ತಲೇ ತಟ್ಟೆ ಎತ್ತ್ತಿಕೊಂಡು ಹೋಗಿ ತೊಳೆಯುವ ಜಾಗದಲ್ಲಿ ಎರಡು ಮೂರು ಸಲ ಡಭಾರ್ ಎಂದು ತಟ್ಟೆಯನ್ನು ಎತ್ತಿ ಕುಕ್ಕಿದಳು. ಏನದು ಸದ್ದು ಎಂದಿದ್ದಕ್ಕೆ ಏನಿಲ್ಲಾ ಸಾರ್ ಎಂದು ಕೊಂಚ ಅಳುವ ಧ್ವನಿಯಲ್ಲೇ ಉತ್ತರಿಸಿದಳು.

ತನಗೆ ಅವಮಾನವಾಯಿತು ಎಂದು ಭಾವಿಸಿ ನೊಂದುಕೊಂಡಿದ್ದಳು. ನಂತರ ನಾನು ಆಕೆಯನ್ನು ಕರೆದು ಬೇರೆಯವರಿಗೆ ಬೇಜಾರಾಗುವಂತೆ ನೀನು ನಡೆದುಕೊಳ್ಳುತ್ತಿದ್ದೀಯ, ಅದನ್ನು ನೀನು ತಿದ್ದಿಕೊಳ್ಳಬೇಕು. ನಿಮಗೆ ಈ ಜೀವನದ ಪಾಠ ಕಲಿಸೋದಕ್ಕೆ ಇಂಥ ಎನ್.ಎಸ್.ಎಸ್. ಕ್ಯಾಂಪ್ ನಡೆಸೋದು. ನಿಧಾನಕ್ಕೆ ನೀನೂ ಎಲ್ಲಾ ಕಲೀತೀಯ, ಈಗ ಹೋಗು ಎಂದು ಸಮಾಧಾನದಿಂದ ಹೇಳಿದೆ. ಆದರೂ,  ಮುಖ ಗಂಟಿಕ್ಕಿಕೊಂಡೇ ಆಕೆ ಮಲಗಲು ಹೋದಳು.

ಸರಿ ಅರ್ಧ ರಾತ್ರಿಯಲ್ಲಿ ಧಡಧಡ ಎಂದು ನಮ್ಮ ಬಾಗಿಲನ್ನು ಯಾರೋ ಬಡಿಯುವ ಸದ್ದಾಯಿತು. ಗಾಬರಿಯಿಂದ ಎದ್ದು ಕೂತಾಗ ಪಕ್ಕದ ರೂಮಿನಿಂದ ಯಾರೋ ಗೊಳೋ ಎಂದು ಅಳುವ ಸದ್ದು ಕೂಡ ಕೇಳುತ್ತಿತ್ತು. ಏನೋ ಅನಾಹುತ ಆಗಿರಬಹುದೆಂದು ಭಾವಿಸಿದೆ. ನಮ್ಮ ಕಾಲೇಜಿನ ಮೇಡಂ ಹೆದರಿ ಓಡಿ ಬಂದು ಬಾಗಿಲು ಬಡೀತಿದ್ದರು. ಕದ ತೆರೆದಾಗ, ‘ಸಾರ್ ಇಲ್ಲಿ ಬಂದು ನೋಡಿ’ ಎಂದರು.  ನಾವೆಲ್ಲಾ ಹೋಗಿ ನೋಡಿದಾಗ ಆ ರೂಮಿನಲ್ಲಿ ಮಲಗಿದ್ದ ಎಲ್ಲಾ ಹುಡುಗಿಯರೂ ಗಾಬರಿಯಿಂದ ಎದ್ದು ಕೂತು ಪಿಳಿಪಿಳಿ ಕಣ್ಣು ಬಿಡುತ್ತಿದ್ದರು.  ಸುನೀತೆ ಮಾತ್ರ ಎಲ್ಲರೂ ಹೊದ್ದಿದ್ದ ಬೆಡ್‌ಶೀಟ್‌ಗಳನ್ನು ಕಿತ್ತಿಟ್ಟುಕೊಂಡು ಬಂದು ಅದರ ಮೇಲೆ ರಾಣಿ ಥರ ಕೂತು ನನಗೆ ಅವ್ವ ಬೇಕು, ಅಪ್ಪ ಬೇಕು ಎಂದು ಅಬ್ಬರಿಸಿ ಅಳುತ್ತಿದ್ದಳು.

ನಾನು ಹೋಗಿ ಸಹನೆಯಿಂದಲೇ; ಏನಮ್ಮ ಸುನೀತೆ ಇದೆಲ್ಲ ಎಂದೆ.  ನಾನು ಅವ್ವ ಅಪ್ಪನ ಪಕ್ಕಾನೇ ಮಲಗಿ ರೂಢಿ ಸಾರ್. ಅವರನ್ನು ಬಿಟ್ಟು ನಾನು ಎಲ್ಲಿಗೂ ಯಾವತ್ತೂ ಹೋಗಿಲ್ಲ. ನನಗೆ ಹೆದರಿಕೆ ಆಗ್ತಿದೆ. ಅವರ ನೆನಪಾಗುತ್ತಿದೆ. ಈಗಲೇ ನನ್ನ ಕರ್ಕೊಂಡು ಹೋಗಿ ಸಾರ್ ಪ್ಲೀಸ್ ಎಂದು ಮತ್ತೆ ರೋಧಿಸತೊಡಗಿದಳು. ಈ ಸರಿ ರಾತ್ರಿಯಲ್ಲಿ ನಿಮ್ಮಪ್ಪ ಅಮ್ಮನ್ನ ಕರೆಸೋದು ಕಷ್ಟ. ಈಗ ಸುಮ್ಮನೆ ಮಲಕ್ಕೋಳಮ್ಮ. ನೋಡು ಎಲ್ಲರೂ ನಿನ್ನ ಥರಾನೇ ಮಾಡ್ತಿದ್ದಾರಾ? ನೀನೊಬ್ಬಳೇ ಯಾಕಂಗೆ ಮಾಡ್ತಿದ್ದೀಯಾ? ಎಂದು ಸಾಕಷ್ಟು ಸಮಾಧಾನ ಹೇಳಿದೆ. ಕೊನೆಗೆ ಸಾಕಾಗಿ ಜೋರು ಮಾಡಿ, ಅವಳನ್ನು ಮಲಗಿಸುವುದರಲ್ಲಿ ಸಾಕು ಸಾಕಾಗಿ ಹೋಯಿತು.

ಇನ್ನು ಇವಳನ್ನು ಈ  ಕ್ಯಾಂಪಿನಲ್ಲಿ ಇಟ್ಟುಕೊಂಡು ಸಂಭಾಳಿಸುವುದು ಕಷ್ಟ ಸಾರ್, ಬೆಳಿಗ್ಗೇನೆ ಇವರ ತಂದೆ ತಾಯಿಗೆ ಬರಲು ಹೇಳಿ ಮೊದಲು ಇವಳನ್ನು ಕಳಿಸಿಬಿಡಿ ಎಂದು ಎಲ್ಲರೂ ಸಲಹೆ ಕೊಟ್ಟರು. ಸರಿ ರಾತ್ರ್ರಿಯಲ್ಲಿ ಸುಖಾಸುಮ್ಮನೆ ನಿದ್ದೆ ನೆಮ್ಮದಿ ಹಾಳು ಮಾಡಿದ್ದ ಸುನೀತೆ ಮೇಲೆ ಎಲ್ಲರ ಕೋಪ ಕೊತಕೊತ ಕುದಿಯುತ್ತಿತ್ತು. ಸರಿ ಎಲ್ಲರೂ ಮಲಗಿ, ಬೆಳಿಗ್ಗೆ ನೋಡೋಣ ಎಂದು ಹೇಳಿದೆ. ನಿದ್ದೆ ಹಾರಿದ ನಮ್ಮ ರೂಮಿನ ಗಂಡು ಹುಡುಗರು ಮಾತ್ರ  ಅವ್ವ ಬೇಕು, ಆಹಾ ಅಪ್ಪ ಬೇಕು ಎಂದು ಅವಳನ್ನು ಕಿಚಾಯಿಸಿ ವ್ಯಂಗ್ಯವಾಗಿ ಹಾಡು ಹೇಳುತ್ತಿದ್ದರು. ಅವರನ್ನು ಸುಮ್ಮನಿರಿ ಎಂದು ಗದರಿಸಿದೆ. ಆದರೂ, ಅವರು ತಕ್ಷಣ ಮಲಗದೆ ಒಳಗೊಳಗೇ ಏನೇನೋ ಜೋಕ್ ಮಾಡಿಕೊಂಡು ಮುಸಿಮುಸಿ ಎಂದು ನಗುತ್ತಲೇ ಇದ್ದರು.

ನನಗೆ ನಿದ್ದೆ ಬರಲಿಲ್ಲ. ಸುನೀತೆಯ ಸ್ಥಿತಿ ನೋಡಿದ ಮೇಲೆ ಅವಳ ಬಗ್ಗೆ ಅಯ್ಯೋ ಎನಿಸಹತ್ತಿತು. ಸುನೀತೆ ಕೆಟ್ಟವಳಲ್ಲ ನಿಜ. ಆದರೂ ಯಾಕೆ ಹೀಗೆ ಒರಟಾಗಿ, ವ್ಯತಿರಿಕ್ತವಾಗಿ ವರ್ತಿಸುತ್ತಾಳೆ? ಎಲ್ಲಾ ಮಕ್ಕಳಂತೆ ಯಾಕೆ ಆಕೆ ಸಹಜವಾಗಿಲ್ಲ? ಈ ಹಟ, ಮೊಂಡುತನ, ಜಗಳ, ಸಿಟ್ಟು  ಕೊನೆಗೆ ಒಮ್ಮೆಗೇ ಅಳು... ಯಾಕೆ ಹೀಗೆ? ಇವಳ ವರ್ತನೆಗಳನ್ನು ತಿದ್ದಲು, ಅರ್ಥಮಾಡಿಕೊಳ್ಳಲು ಸಾಧ್ಯವಿಲ್ಲವೇ? ಸುನೀತೆಗೆ ನಿಜಕ್ಕೂ ಇರುವ ಸಮಸ್ಯೆ ಯಾವುದು? ಸಹಬಾಳ್ವೆಯ ಅರಿವು ಮೂಡಿಸುವ ಒಳ್ಳೆಯ ಸ್ನೇಹಿತರ ಅಗತ್ಯ ಆಕೆಗೆ ಬೇಕೆ? ಯಾವ ಬಗೆಯ ಸಾಂತ್ವನದ ನಿರೀಕ್ಷೆಯಲ್ಲಿ ಆಕೆ ಇದ್ದಾಳೆ? ಎಂಬ ಅನೇಕ ಪ್ರಶ್ನೆಗಳು ನನ್ನ ತಲೆಯಲ್ಲಿ ಹುಟ್ಟಿಕೊಂಡವು.

ನಾನು ಗಮನಿಸಿದ ಹಾಗೆ; ಒಬ್ಬನೇ ಮಗ ಇಲ್ಲವೇ ಒಬ್ಬಳೇ ಮಗಳೆಂದು ಅತಿಯಾದ ಪ್ರೀತಿ ತೋರಿಸಿ ಸಾಕುವ ಕೆಲ ಮಕ್ಕಳ ಸ್ವಭಾವವಿದು. ಒಂಟಿಯಾಗಿ ಬೆಳೆಯುವ ಇಂಥ ಮಕ್ಕಳಿಗೆ ಶೇರಿಂಗ್ ಗುಣ ಇರುವುದಿಲ್ಲ.  ಬೇರೆಯವರ ಜೊತೆ ಬೆರೆತು ಆಡಿ ನಲಿದು ಅಭ್ಯಾಸ ಇರುವುದಿಲ್ಲ. ಹೊರ ಜಗತ್ತಿನ ಪ್ರೀತಿ, ಸ್ನೇಹ, ತ್ಯಾಗಗಳ ಸ್ಪರ್ಶ ಇವರಿಗೆ ತಾಕಿರುವುದಿಲ್ಲ. ಇವರ ಅಪ್ಪ ಅಮ್ಮ ಇವರು ಹೇಳಿದಂತೆ ಕೇಳುತ್ತಾರೆ. ಎಲ್ಲದಕ್ಕೂ ಹ್ಞೂ ಎಂದು ಕತ್ತು ಕುಣಿಸಿ ಬೆಳೆಸಿರುತ್ತಾರೆ. ಹೀಗಾಗಿ, ಹೊರಗಿನ ಜಗತ್ತು ಏನೇ ಬುದ್ಧಿಮಾತು ಹೇಳಿದರೂ ಅದೆಲ್ಲಾ ಕೇಳಬೇಕು ಎಂಬ ಅರಿವೇ ಅವರಿಗೆ ಇರುವುದಿಲ್ಲ. ಇಂಥ ಮಕ್ಕಳಲ್ಲಿ ಮೊಂಡುತನ, ಹಟ, ಸಿಟ್ಟು, ಮತ್ತು ಸ್ವಾರ್ಥ ಬುದ್ಧಿ ಬೆಳೆದಿರುತ್ತದೆ. ನಮ್ಮ ಸುನೀತೆಯೂ ಹಾಗೇ ಬೆಳೆದವಳು.

ಮಾರನೆಯ ಬೆಳಿಗ್ಗೆ ಎಲ್ಲ್ಲರೂ ಎದ್ದರೂ ಆಕೆ ಇನ್ನೂ ಮಲಗಿಯೇ ಇದ್ದಳು. ನಾನೇ ಆಕೆಯನ್ನು ಯಾರೂ ಏಳಿಸಬೇಡಿ ಎಂದು ಹೇಳಿದೆ. ನಾವೆಲ್ಲಾ ತಿಂಡಿ ಮುಗಿಸಿ ಶಾಲೆಯ ಮೈದಾನದಲ್ಲಿ ಶ್ರಮದಾನ ಮಾಡುತ್ತಿದ್ದೆವು. ಹನ್ನೊಂದು ಗಂಟೆಗೆ ಎದ್ದ ಆಕೆ ಹಲ್ಲುಜ್ಜಿ ಸ್ನಾನ ಮಾಡಿ ಸಿಂಗಾರವಾಗುವ ತನಕ ಮಧ್ಯಾಹ್ನವೇ ಆಗಿತ್ತು. ಆಕೆಯನ್ನು ಯಾರೂ ಅವತ್ತು ಮಾತಾಡಿಸಲಿಲ್ಲ. ಎಲ್ಲರೂ ತಮ್ಮ ತಮ್ಮ ಕೆಲಸಗಳಲ್ಲಿ ಮಗ್ನರಾಗಿದ್ದರು. ಅವಳೇ ಬಂದು ಎಲ್ಲರಿಗೂ ಮೇಲೆ ಬಿದ್ದು ಮಾತಾಡಿಸುತ್ತಿದ್ದಳು.

ಅಷ್ಟರಲ್ಲಿ ಅವರ ಅಪ್ಪ ಅಮ್ಮ ಬಂದರು. ಸುನೀತೆ ನೀನು ಈಗ ಹೋಗಬಹುದು ಎಂದು ಹೇಳಿದೆ. ಅವಳ ಲಗೇಜನ್ನು ಹುಡುಗಿಯರು ತಂದಿಟ್ಟರು. ಸುನೀತೆ ಸುಮ್ಮನೆ ನಿಂತಿದ್ದಳು. ಅವ್ವ ಬೇಕು, ಅಪ್ಪ ಬೇಕು ಅಂತ ಕೇಳಿದ್ದೆ ತಾನೆ? ಅವರು ಬಂದಿದ್ದಾರೆ ಹೋಗಮ್ಮ ಎಂದು ಮತ್ತೊಮ್ಮೆ ಹೇಳಿದೆ. ವಿದ್ಯಾರ್ಥಿಗಳೆಲ್ಲಾ ಉಸಿರು ಬಿಗಿಹಿಡಿದು ಆಕೆಯ ಸುತ್ತಮುತ್ತ ನಿಂತಿದ್ದರು. ಎಲ್ಲರನ್ನೂ ದಿಟ್ಟಿಸಿ ನೋಡುತ್ತಿದ್ದ ಸುನೀತೆ ಒಮ್ಮೆಗೇ ಅಳತೊಡಗಿದಳು. ವಿನಮ್ರವಾಗಿ ಕೈ ಮುಗಿದು, ನಾನು ಹೋಗಲ್ಲ ನನ್ನ ದಯಮಾಡಿ ಕಳಿಸಬೇಡಿ ಸಾರ್. ಪ್ಲೀಸ್ ಫ್ರೆಂಡ್ಸ್ ನನ್ನ ಕಳಿಸಬೇಡಿ ನಾನು ನಿಮ್ಮ ಜೊತೆ ಇರ್ತೀನಿ ಎಂದು ಎಲ್ಲರ ಬಳಿಯೂ ಹೋಗಿ ನಿಂತು ಅಂಗಲಾಚತೊಡಗಿದಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT