ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಡತನದ ಕ್ರೂರ ವಾಸ್ತವದ ಎದುರು ಸೋತ ಸತ್ಯಮ್ಮ

Last Updated 27 ಜೂನ್ 2011, 19:30 IST
ಅಕ್ಷರ ಗಾತ್ರ

ಕೆಲ ದಿನಗಳ ಹಿಂದೆ ಸತ್ಯಮ್ಮ ಎಂಬ ವಿಧವೆಯೊಬ್ಬಳು ತನ್ನ 8 ಮತ್ತು 14 ವರ್ಷದ ಹೆಣ್ಣು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಳು. ಈ ಸಂಗತಿ ಬಹುತೇಕ ಪತ್ರಿಕೆಗಳಲ್ಲಿ ಒಳಗಿನ ಪುಟದಲ್ಲೆಲ್ಲೋ ಸಣ್ಣ ಸುದ್ದಿಯಾಗಿ ಪ್ರಕಟವಾಗಿದ್ದು ಬಿಟ್ಟರೆ ಅದು ಅಂತಹ ಗಮನ ಸೆಳೆಯುವ ಸುದ್ದಿಯೇನೂ ಆಗಲಿಲ್ಲ.
 
ದೇವರ ಮುಂದೆ ಆಣೆ ಪ್ರಮಾಣ ಮಾಡುವ ಉಮೇದಿನ ಸತ್ಯ ಪರೀಕ್ಷೆಯ ರಾಜಕೀಯ `ತಮಾಷೆ~ ಮಾತ್ರ ದಿನಪತ್ರಿಕೆಗಳಲ್ಲಿ ಸಾಕಷ್ಟು ಪ್ರಾಮುಖ್ಯ ಪಡೆದುಕೊಂಡಿತು.
 
ಇಂತಹ `ಮಹತ್ವ~ದ ಸುದ್ದಿಗಳ ಪ್ರವಾಹದಲ್ಲಿ ರಾಜಧಾನಿಗಿಂತ ದೂರದ ಚಿತ್ರದುರ್ಗದಲ್ಲೆಲ್ಲೋ ನಡೆದ ಆತ್ಮಹತ್ಯೆಯಂತಹ `ಸಣ್ಣ~ ಘಟನೆ ಸಹಜವಾಗಿಯೇ ಎಲ್ಲೋ ಕಳೆದುಹೋಯಿತು. ಪೊಲೀಸರು ತಮ್ಮ ಕಡತಗಳಲ್ಲಿ ಈ ಸಾವಿಗೊಂದು ಸರಳ ವ್ಯಾಖ್ಯಾನ ಬರೆದು ಕರ್ತವ್ಯ ಮುಗಿಸಿ ಕೈತೊಳೆದುಕೊಂಡರು.

ತೀವ್ರ ಬಡತನದ ಬೇಗೆಯಲ್ಲಿ ಬೇಯುತ್ತಿದ್ದ ಸತ್ಯಮ್ಮ ಮಕ್ಕಳಿಗೆ ಅಮೋನಿಯಂ ಫಾಸ್ಫೇಟ್ ತಿನ್ನಿಸಿ, ತಾನೂ ತಿಂದು ಆತ್ಮಹತ್ಯೆ ಮಾಡಿಕೊಂಡಿದ್ದಳು. ಆಟೊ ಚಾಲಕನಾಗಿದ್ದ ಗಂಡನನ್ನು ಕೆಲವು ತಿಂಗಳುಗಳ ಹಿಂದಷ್ಟೇ ಕಳೆದುಕೊಂಡಿದ್ದ ಆಕೆಗೆ ನಂತರ ತನ್ನ ಮೇಲೆ ಬಿದ್ದ ಆರ್ಥಿಕ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ನಿಭಾಯಿಸುವುದು ಸಾಧ್ಯವಾಗಲಿಲ್ಲ.
 
ತನ್ನ ಕೂಲಿಯಿಂದ ಬರುತ್ತಿದ್ದ ಅತ್ಯಲ್ಪ ಹಣದಿಂದ ಸಂಸಾರ ತೂಗಿಸುವುದು ಕಷ್ಟವಾದಾಗ ಅಂತಿಮವಾಗಿ ಆಕೆ ಬದುಕನ್ನೇ ಕೊನೆಗೊಳಿಸಿಕೊಳ್ಳುವ ಕಠಿಣ ನಿರ್ಧಾರಕ್ಕೆ ಬಂದಿದ್ದಳು.

`ವಿಧವೆಯರ ಕಣ್ಣೀರು ಒರೆಸದ, ಅನಾಥರಿಗೆ ತುತ್ತು ಅನ್ನ ಕರುಣಿಸದ ದೇವರು ಅಥವಾ ಧರ್ಮದ ಬಗ್ಗೆ ನನಗೆ ನಂಬಿಕೆ ಇಲ್ಲ~ ಎಂದು ಒಂದು ಶತಮಾನಕ್ಕೂ ಹಿಂದೆ ಸ್ವಾಮಿ ವಿವೇಕಾನಂದರು ಹೇಳಿದ್ದರು.
 
`ನಮ್ಮದು ಪ್ರಜಾತಂತ್ರ ರಾಷ್ಟ್ರ~ ಎಂದು ನಾವು ಹೇಳಿಕೊಳ್ಳುತ್ತೇವಾದರೂ ನಮ್ಮ ಸರ್ಕಾರವಾಗಲಿ ಅಥವಾ ಸಮಾಜವಾಗಲಿ ಈ ಸಂದೇಶದ ಮಹತ್ವವನ್ನು ಗ್ರಹಿಸಿದಂತೆ ಕಾಣುವುದಿಲ್ಲ. ವಾಸ್ತವದಲ್ಲಿ ಸತ್ಯಮ್ಮ ಮತ್ತು ಆಕೆಯ ಮಕ್ಕಳ ಸಾವಿಗೆ ಯಾರು ಹೊಣೆ?

ಬಡತನದ ಕಾರಣಕ್ಕೆ ಆದ ಘಟನೆ ಎಂದು ಈ ವಿಷಯವನ್ನು ನಾವು ಲಘುವಾಗಿ ತಳ್ಳಿಹಾಕಿಬಿಡಬೇಕೇ ಅಥವಾ ಇಂತಹದ್ದೊಂದು ದುರಂತ ತಡೆಯಲು ನಮ್ಮೆಲ್ಲರ ಸಾಮೂಹಿಕ ವೈಫಲ್ಯ ಎಷ್ಟರ ಮಟ್ಟಿಗೆ ಕಾರಣ ಎಂಬ ಬಗ್ಗೆ ಗಂಭೀರ ಚಿಂತನೆ ನಡೆಸಬೇಕೇ? ಅತ್ಯಂತ ಸೂಕ್ಷ್ಮವಾಗಿರುವ ನಮ್ಮ ಸಮಾಜಕ್ಕೆ ಈ ಬಗೆಯ ಸಾವನ್ನು ತಡೆಯಲು ಸಾಧ್ಯವೇ ಇರಲಿಲ್ಲವೇ?

ಸರ್ಕಾರದ ಬಹಳಷ್ಟು ಸಮಾಜ ಕಲ್ಯಾಣ ಕಾರ್ಯಕ್ರಮಗಳು ಅನುಷ್ಠಾನದಲ್ಲಿ ಇರುವಾಗ, ಸಾಮಾಜಿಕ ಮತ್ತು ಆರ್ಥಿಕ ನ್ಯಾಯ ಒದಗಿಸುವ ಗುರಿಯೊಂದಿಗೆ ಸಾಕಷ್ಟು ಸರ್ಕಾರೇತರ ಸಂಸ್ಥೆಗಳೂ ದುಡಿಯುತ್ತಿರುವಾಗ ಇಂತಹ ಹೃದಯ ವಿದ್ರಾವಕ ಘಟನೆಯನ್ನು ನೋಡುತ್ತಾ ನಾವು ಮೂಕಪ್ರೇಕ್ಷಕರಂತೆ ಕುಳಿತುಕೊಳ್ಳಲು ಹೇಗೆ ಸಾಧ್ಯ?
 
ಈ ಬಗೆಯ ಸಮಸ್ಯೆಗಳನ್ನು ಎದುರಿಸುವಲ್ಲಿ ನಮ್ಮೆಲ್ಲರ ಸಾಮೂಹಿಕ ವೈಫಲ್ಯ ಎಷ್ಟರಮಟ್ಟಿಗೆ ಕಾರಣ ಎಂದು ಯೋಚಿಸಿದರೆ ದೇಶದ ಸ್ಥಿತಿಗತಿಯ ಚಿತ್ರಣವೇ ನಮ್ಮೆದುರು ನಿಲ್ಲುತ್ತದೆ.

ಒಂದೆಡೆ ಒಂದು ರಾಷ್ಟ್ರವಾಗಿ ನಮ್ಮ ಆರ್ಥಿಕ ಪ್ರಗತಿಯ ಬಗ್ಗೆ ನಮಗೆ ಸಮಾಧಾನ ಇದೆ. ದೇಶದ ಆರ್ಥಿಕ ವೃದ್ಧಿ ದರ ಶೇ 8ರ ಆಸುಪಾಸಿನಲ್ಲಿದೆ. ಬಡತನ ಈಗೇನಿದ್ದರೂ ಇತಿಹಾಸ ಸೇರಿದ ಪದ ಎಂಬ ಭಾವನೆ ಮೂಡಿಸುವಷ್ಟರ ಮಟ್ಟಿಗೆ ದೇಶದಲ್ಲಿ ಆಸ್ತಿಪಾಸ್ತಿ ಸೃಷ್ಟಿಯಾಗಿದೆ.

ಈ ಪರಿಯ ಬೆಳವಣಿಗೆಯನ್ನು ಕಂಡ ಮೇಲೂ ರಾಜ್ಯದ ಶೇ 54ರಷ್ಟು ಮಕ್ಕಳು ಅಪೌಷ್ಟಿಕತೆಯಿಂದ ಮತ್ತು ಶೇ 74ರಷ್ಟು ಗ್ರಾಮೀಣ ಮಹಿಳೆಯರು ರಕ್ತಹೀನತೆಯಿಂದ ಬಳಲುತ್ತಿರುವುದಕ್ಕೆ ಯಾವ ಕಾರಣಗಳನ್ನು ತಾನೇ ನಾವು ನೀಡಲು ಸಾಧ್ಯ?

ಅಗತ್ಯ ಪ್ರಮಾಣದಲ್ಲಿ ಸುರಕ್ಷಿತ ಕುಡಿಯುವ ನೀರನ್ನು ಶೇ 30ಕ್ಕೂ ಹೆಚ್ಚು ಜನರಿಗೆ ಹಾಗೂ ನೈರ್ಮಲ್ಯ ಸೌಲಭ್ಯವನ್ನು ಶೇ 20ಕ್ಕಿಂತಲೂ ಹೆಚ್ಚು ಮಂದಿಗೆ ಒದಗಿಸಲು ನಮಗೆ ಯಾಕೆ ಸಾಧ್ಯವಾಗುತ್ತಿಲ್ಲ? ಶೇ 50ಕ್ಕೂ ಹೆಚ್ಚು ಜನ, ದಿನಕ್ಕೆ ಅಗತ್ಯಕ್ಕಿಂತ ಕಡಿಮೆ ಪ್ರಮಾಣದ ಕ್ಯಾಲೊರಿಯುಕ್ತ ಆಹಾರ ಸೇವಿಸುತ್ತಿದ್ದಾರೆ.

ವಾರ್ಷಿಕವಾಗಿ 3600 ಕೋಟಿ ರೂಪಾಯಿ ವೆಚ್ಚ ಮಾಡುತ್ತಿದ್ದರೂ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯು ಲಕ್ಷಾಂತರ ಶ್ರಮಜೀವಿಗಳನ್ನು ತಲುಪದೆ ಜಾರಿ ಅಧಿಕಾರಿಗಳ ಜೇಬನ್ನು ಭರ್ತಿ ಮಾಡುತ್ತಿದೆ. ಹೀಗಿರುವಾಗ ಎಷ್ಟು ದಿನ ತಾನೇ ನಾವು ಇದನ್ನೆಲ್ಲ ನೋಡುತ್ತಾ ಸುಮ್ಮನೇ ಕುಳಿತುಕೊಳ್ಳಬೇಕು?

ವಾಸ್ತವ ಚಿತ್ರಣ: ದೇಶದ ಬೆಳವಣಿಗೆ ಹೊರನೋಟಕ್ಕೆ ಕಾಣುವುದಕ್ಕಿಂತಲೂ ವಾಸ್ತವದಲ್ಲಿ ಬೇರೆ ರೀತಿಯೇ ಇದೆ. ಭಾರತದ ಶೇ 40ರಷ್ಟು ಸಂಪತ್ತು ಕೇವಲ 50ಕ್ಕಿಂತಲೂ ಕಡಿಮೆ ಸಂಖ್ಯೆಯ ಕುಟುಂಬಗಳ ಒಡೆತನದಲ್ಲಿದೆ.
 
ಶೇ 85ರಷ್ಟು ಆರ್ಥಿಕತೆ ಉನ್ನತ ವರ್ಗದ ಶೇ 20ರಷ್ಟು ಮಂದಿಯ ಹಿಡಿತದಲ್ಲಿದ್ದರೆ, ಕೆಳ ಹಂತದ ಶೇ 20ರಷ್ಟು ಮಂದಿಯ ಬಳಿ ಇರುವುದು ಶೇ 1.5ರಷ್ಟು ಆರ್ಥಿಕತೆ ಮಾತ್ರ. ಸಂಪತ್ತು ವೃದ್ಧಿಯ ಜೊತೆಜೊತೆಗೇ ಅಸಮಾನತೆಯ ಪ್ರಮಾಣವೂ ಅಧಿಕವಾಗುತ್ತಿದೆ.
 
ನಮ್ಮ ಆಹಾರದ ಹಣದುಬ್ಬರ ಶೇ 10ರ ಆಸುಪಾಸಿನಲ್ಲೇ ಇದೆ. ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ಬಡವರಿಗಾಗಿ ಮೀಸಲಿಟ್ಟ ಶೇ 70ರಷ್ಟು ಆಹಾರಧಾನ್ಯ ದುರ್ಬಳಕೆ ಆಗುತ್ತಿರುವುದನ್ನು ವಿಶ್ವ ಬ್ಯಾಂಕ್‌ನ ಇತ್ತೀಚಿನ ವರದಿ ಎತ್ತಿ ಹಿಡಿದಿದೆ.

ಬರೀ ಘೋಷಣೆ?: ಕುಡುಕ ಗಂಡನಿಂದ ಬೇಸತ್ತಿದ್ದ ಮಹಿಳೆಯೊಬ್ಬಳು ಆಕೆಯ ಹೆಸರಿನಲ್ಲಿ ಬ್ಯಾಂಕ್ ಖಾತೆ ತೆರೆಯಲು ನೆರವು ಕೋರಿ ಇತ್ತೀಚೆಗೆ ನನ್ನ ಬಳಿ ಬಂದಿದ್ದಳು.

ಸಿಕ್ಕ ದುಡ್ಡನ್ನೆಲ್ಲಾ ಕುಡಿತಕ್ಕೆ ಹಾಕುವ ಗಂಡನ ಕಣ್ಣು ತಪ್ಪಿಸಿ ಈ ಮೂಲಕವಾದರೂ ಒಂದಷ್ಟು ಹಣ ಉಳಿಸಬಹುದು ಎಂಬ ಉದ್ದೇಶ ಆಕೆಯದಾಗಿತ್ತು. ಆದರೆ ಸ್ಥಳೀಯ ಬ್ಯಾಂಕ್ ತನ್ನ ಬಳಿ ಖಾತೆ ತೆರೆಯುವ ಅರ್ಹತೆ ಆಕೆಗಿಲ್ಲ ಎಂದು ಹೇಳಿ ವಾಪಸ್ ಕಳುಹಿಸಿತ್ತು.

ಈ ಬಗ್ಗೆ ವಿಚಾರಿಸಿದಾಗ ಆಕೆ ಬಡವಳಾಗಿದ್ದುದೇ ಇದಕ್ಕೆ ಕಾರಣ ಎಂಬ ವಿಷಯ ನನಗೆ ತಿಳಿದುಬಂತು. ಇದನ್ನು ಕಂಡಾಗ `ಆರ್ಥಿಕತೆ ಬಡವರನ್ನೂ ಒಳಗೊಳ್ಳಬೇಕು~ ಎಂಬ ಯೋಜನಾ ಆಯೋಗದ ಘೋಷಣೆ ಬರೀ ಘೋಷಣೆಯಾಗಷ್ಟೇ ಉಳಿಯುವುದೇನೋ ಎನಿಸದೇ ಇರದು.

ಪ್ರತಿ ಹಂತದಲ್ಲೂ ಬಡವರು ತಮ್ಮ ಬಡತನದ ಬಲೆಯಿಂದ ಹೊರಬರುವ ಪ್ರಯತ್ನದಲ್ಲಿ ಸಾಕಷ್ಟು ಅಡೆತಡೆಗಳನ್ನು ಅನುಭವಿಸುತ್ತಾರೆ. ಇಂತಹವರಿಗೆ ಅತ್ಯಗತ್ಯವಾದ ಸುರಕ್ಷತಾ ಬಲೆಗಳು ಮತ್ತು ಏಣಿಗಳನ್ನು ಒದಗಿಸಿದಾಗಷ್ಟೇ ಅವರು ಬಡತನದ ಕೂಪದಿಂದ ಮೇಲ್ದ್ದೆದು ಬರಲು ಸಾಧ್ಯ ಎಂಬ ಸತ್ಯವನ್ನು ನಮ್ಮ ಸರ್ಕಾರವಾಗಲಿ ಸಮಾಜವಾಗಲಿ ಅರ್ಥ ಮಾಡಿಕೊಂಡಂತೆ ಕಾಣುವುದಿಲ್ಲ.
 
ಆರ್ಥಿಕ ಬೆಳವಣಿಗೆ ಮತ್ತು ಸಂಪತ್ತು ಸೃಷ್ಟಿ ಕೇವಲ ಕೆಲವರಿಗಷ್ಟೇ ಸೀಮಿತ ಆಗಬಾರದು. ಬಡವರೂ ಬೆಳವಣಿಗೆಯ ಪಾಲುದಾರರಾಗುವಂತೆ ನೋಡಿಕೊಳ್ಳಲು ಸರ್ಕಾರ ಪ್ರಾಮಾಣಿಕ ಪ್ರಯತ್ನ ನಡೆಸಬೇಕು.

ಗಂಡನನ್ನು ಕಳೆದುಕೊಂಡು ಬದುಕಿನ ಬಂಡಿ ಎಳೆಯಲು ಹೆಣಗುತ್ತಿದ್ದ ಸತ್ಯಮ್ಮ ಮತ್ತು ಆಕೆಯ ಮಕ್ಕಳನ್ನು ನಿಜವಾಗಿಯೂ ಬಲಿ ತೆಗೆದುಕೊಂಡದ್ದು ಬಡತನವಲ್ಲ, ಆಕೆಯ ಬಡತನದ ಬಗ್ಗೆ ನಾವು ಹೊಂದಿರುವ ಮನೋಭಾವ ಎಂಬುದು ಮಾತ್ರ ಕಟು ವಾಸ್ತವ.
 
ಇಷ್ಟರ ನಡುವೆಯೂ ಮಾನವೀಯತೆ, ಅನುಕಂಪ ಮತ್ತು ಉತ್ತಮ ಸಾಮಾಜಿಕ ವ್ಯವಸ್ಥೆಯೊಂದನ್ನು ರೂಪಿಸಲು ನಮಗೆ ಸಾಧ್ಯವಾಗುವುದಾದರೆ, ಆಗ ಮಾತ್ರ ಸತ್ಯಮ್ಮನಂತಹವರ ಆತ್ಮಕ್ಕೆ ಶಾಂತಿ ದೊರಕಿಸಿದಂತಾಗುತ್ತದೆ.

(ನಿಮ್ಮ ಅನಿಸಿಕೆಗಳನ್ನು ಕಳುಹಿಸಿ: editpagefeedback@prajavani.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT