ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬದುಕೊಂದು ಪವಾಡ

Last Updated 23 ಮೇ 2012, 19:30 IST
ಅಕ್ಷರ ಗಾತ್ರ

ನನಗೆ ಪವಾಡಗಳಲ್ಲಿ ಬಲವಾದ ನಂಬಿಕೆಯಿದೆ. ಆ ಪವಾಡಗಳನ್ನು ಅನುಭವಿಸಲೂ ನಂಬಿಕೆ ಬೇಕು. ನಾನು ದೊಡ್ಡ ದೊಡ್ಡ ಪವಾಡಗಳನ್ನು ಕಂಡವನಲ್ಲ. ಆದರೆ, ಕಂಡ, ಅನುಭವಿಸಿದ ಪವಾಡಗಳು ತುಂಬ ದೊಡ್ಡವೆನಿಸಿವೆ.
 
ಈ ಪವಾಡಗಳು ನಮ್ಮೆಲ್ಲರ ಜೀವನದಲ್ಲಿ ಪ್ರತಿದಿನ, ಪ್ರತಿಕ್ಷಣ ನಡೆಯುತ್ತವೆ. ಅವುಗಳನ್ನು ಕಾಣಲು ಧನಾತ್ಮಕವಾದ ಮನಸ್ಸುಬೇಕು. ನನಗೆ ಶಾಲಾ ಶಿಕ್ಷಣದಲ್ಲಿ ಕಾಲೇಜು ಪಾಠದಲ್ಲಿ ಉತ್ತಮ ದರ್ಜೆಗಳೇ ದೊರಕಿದ್ದರಿಂದ ಆಗ ಕೆಲಸಗಳು ದೊರಕುವುದು ಕಷ್ಟವಿರಲಿಲ್ಲ. ಸಂಶೋಧನೆ  ಮುಗಿಸಿದ ಮೇಲಂತೂ, ಪರದೇಶದಲ್ಲಿ ಕೆಲಸ ಮಾಡುವ, ಸಂಶೋಧನೆ ಮುಂದುವರೆಸುವ ಅವಕಾಶಗಳು ಸುಲಭವಾಗಿ ಬಂದಿದ್ದವು.

ನಮ್ಮ ಬಳಗದ, ಪರಿಚಯದ ಜನರೆಲ್ಲರೂ ಈ ಅವಕಾಶಗಳನ್ನು ಬಳಸಿಕೊಳ್ಳಲು ಉತ್ತೇಜನ ನೀಡಿದರೆ, ನನ್ನ ಶಾಲೆಯ ಗುರುಗಳೊಬ್ಬರು ಪ್ರೀತಿಯಿಂದ ಶಿಕ್ಷಕತ್ವದ ಮಾದರಿ ಹಾಕಿದ್ದರು.

ಪವಾಡವೆಂದರೆ ಎಲ್ಲರ ಸಲಹೆ ಸೂಚನೆಗಳಿಗಿಂತ ಗುರುಗಳ ಮಾತೇ ಹೃದಯದಲ್ಲಿ ನಿಂತು ನನ್ನ ಜೀವನದ ಪಥವನ್ನು ನಿರ್ಧರಿಸಿತು. ಅದು ಪವಾಡವೇಕೆಂದರೆ ಮೂವತ್ತೊಂಬತ್ತು ವರ್ಷಗಳ ನಂತರವೂ ಶಿಕ್ಷಕತನದ ಉತ್ಸಾಹ ಇನಿತೂ ಕಡಿಮೆಯಾಗಿಲ್ಲ. ಬದಲಾಗಿ ಹೆಚ್ಚುತ್ತಿದೆ!

ತೀರ ಸಣ್ಣ ವಯಸ್ಸಿಗೆ ಒಂದು ಸುಂದರ ಪ್ರಥಮ ದರ್ಜೆ ಕಾಲೇಜಿಗೆ ಪ್ರಾಂಶುಪಾಲನಾಗುವ ಅವಕಾಶವೂ ಪವಾಡವೇ. ಸುಮಾರು ಹದಿನಾರು ವರ್ಷ, ಸಹೋದ್ಯೋಗಿಗಳು, ವಿದ್ಯಾರ್ಥಿಗಳು ಅಕಾರಣವಾದ ಪ್ರೀತಿ, ವಿಶ್ವಾಸಗಳನ್ನು ತೋರಿದ್ದು ಪವಾಡವಲ್ಲವೆ.

ಉನ್ನತ ಶಿಕ್ಷಣದಲ್ಲೇ ಇಪ್ಪತ್ತೈದು ವರ್ಷ ಕಳೆದು ಸ್ಥಿರವಾಗಿದ್ದೆೀನೆ ಎಂದುಕೊಂಡಾಗಲೇ ಮನದಲ್ಲಿ ಅಸ್ಥಿರವಾಗಿದ್ದ ಪ್ರಾಥಮಿಕ ಶಾಲೆಯಲ್ಲಿ ಕೆಲಸಮಾಡುವ ತೀರ್ಮಾನಕ್ಕೆ ಬಂದದ್ದು ಮತ್ತೊಂದು ಪವಾಡ. ಆಗಲೂ ಅದು ತಪ್ಪು ನಿರ್ಧಾರವೆಂದು ಹೇಳಿದವರು ನೂರಕ್ಕೆ ತೊಂಬತ್ತರಷ್ಟು ಜನ. ಆದರೆ, ಉಳಿದ ಹತ್ತು ಜನರ ಮಾತೇ ನನಗೆ ನಿರ್ದೇಶನ ಮಾಡಿದ್ದು ಪವಾಡವೇ.

ನನಗೀಗ ಉನ್ನತ ಶಿಕ್ಷಣ ಕ್ಷೇತ್ರದ ಕೆಲಸಕ್ಕಿಂತ ಪ್ರಾಥಮಿಕ, ಮಾಧ್ಯಮಿಕ ಶಿಕ್ಷಣದ ಕಾರ್ಯ ಹೆಚ್ಚು ಮುಖ್ಯವಾದದ್ದೆಂದು ಬಲವಾಗಿ ಅನ್ನಿಸಿದೆ. ಆದ್ದರಿಂದ ಆಗ ಅತ್ಯಂತ ಕಡಿಮೆ ಸಂಖ್ಯೆ ಜನರು ನೀಡಿದ ಅಭಿಪ್ರಾಯವೇ ಸರಿಯಾಯಿತಲ್ಲ.

ಬರೀ ನೌಕರಿ ಮಾಡುತ್ತ ಅವರಿವರ ಅಭಿಪ್ರಾಯಕ್ಕೆ ತಕ್ಕಂತೆ ಕೆಲಸ ಮಾಡುವುದಕ್ಕಿಂತ ನಮ್ಮದೇ ಒಂದು ಶಿಕ್ಷಕರ ಸಂಸ್ಥೆಯನ್ನು ತೆಗೆಯಬಾರದೇಕೆ ಎಂಬ ಚಿಂತನೆ ಬಂದಾಗ ನೂರಕ್ಕೆ ತೊಂಬತ್ತೊಂಬತ್ತು ಜನ ಬೇಡವೆಂದೇ ತೀರ್ಮಾನ ನೀಡಿದರು.
 
ಸಂಸ್ಥೆ ಕಟ್ಟುವುದು ಸುಲಭದ ಕೆಲಸವೇ. ಜೇಬಿನಲ್ಲಿ ಹಣವಿಲ್ಲ. ವ್ಯವಹಾರ ಮಾಡುವ ಚತುರತೆ ಇಲ್ಲ. ಬರೀ ಮಾಸ್ತರಿಕೆ ಮಾಡಿ ಆಯುಷ್ಯ ಕಳೆದವನಿಗೆ ಈ ಹುಚ್ಚು ಅಪಾಯಕಾರಿ ಎಂದರು. ಆದರೆ ಪ್ರತಿಶತ ಒಂದರಷ್ಟು ಜನ  `ನಿನಗೆ ಇದರಲ್ಲಿ ವಿಪರೀತ ಹುಚ್ಚು ಇದೆಯಲ್ಲ.  ಹ್ಯಾಗೋ ನಡೆದೀತು, ಮಾಡಿ ಬಿಡು  ಎಂದರು.

ಆ ಅಲ್ಪಸಂಖ್ಯಾತರ ಸಲಹೆಯೇ ಸರಿ ಎನ್ನಿಸಿತು. ಅದರ ಫಲವಾಗಿ ಬೆಳೆದು ನಿಂತ ನಮ್ಮ ಶಿಕ್ಷಕರ ಕೇಂದ್ರ ಇಂದು ಪ್ರಪಂಚದ ಬೇರೆ ಬೇರೆ ಭಾಗಗಳಲ್ಲಿ ಸುಮಾರು ಅರ್ಧ ಶತಕಗಳಷ್ಟು ಸಂಸ್ಥೆಗಳ ಹುಟ್ಟಿಗೆ ಕಾರಣವಾಗಿದೆ ಎಂಬುದನ್ನು ನೆನೆದಾಗ ಅದೊಂದು ಪವಾಡ ಎನ್ನಿಸುತ್ತದೆ.

ಆದ್ದರಿಂದ ಯಾವಾಗಲೂ ಬಹಳ ಮಂದಿ ಹೇಳಿದ್ದೆೀ ಸರಿಯೆಂದು ಒಪ್ಪಿ ನಡೆಯುವುದಕ್ಕಿಂತ ಚಿಂತಿಸಿ ಸಲಹೆ ನೀಡುವ ಕೆಲವೇ ಜನರ ಅಭಿಪ್ರಾಯವನ್ನು, ಅದರಲ್ಲೂ ಅದು ನಮ್ಮ ಹೃದಯದ ಒತ್ತಾಸೆಯನ್ನು ಬೆಂಬಲಿಸುತ್ತಿದ್ದಲ್ಲಿ ಅದನ್ನೇ ನಂಬುವುದು ಸರಿ ಎನ್ನಿಸಿದೆ.

ಹೀಗೆ ಪವಾಡಗಳ ಸರಣಿ ಬೆಳೆಯುತ್ತದೆ. ಇದು ನನ್ನ ಜೀವನದಲ್ಲಿ ಮಾತ್ರವಲ್ಲ, ಪ್ರತಿಯೊಬ್ಬರ ಜೀವನದಲ್ಲಿ ನಡೆಯುತ್ತದೆ. ರಾತ್ರಿ ಮಲಗಿದಾಗ ಬದುಕಿರುವುದೂ ಗೊತ್ತಿಲ್ಲದ ನಮಗೆ ಮರು ಬೆಳಗು ಒಂದು ಪವಾಡ.
 
ಮನುಷ್ಯ-ಮನುಷ್ಯರ ನಡುವಿನ ಗುಪ್ತಗಾಮಿನಿಯಾದ ಸ್ನೇಹ ಒಂದು ಪವಾಡ. ಜಗತ್ತಿನಲ್ಲಿ ಎಷ್ಟೊಂದು ಕೋಪ, ಅಸಹನೆ, ಹಿಂಸೆ ಇದ್ದರೂ ಆ ಕೆಸರಿನಲ್ಲೇ ಅತ್ಯಂತ ಮಾರ್ದವವಾದ ಪ್ರೀತಿ, ನಂಬಿಕೆ, ಸ್ನೇಹ, ಸಹಕಾರಗಳು ಕಾಣುತ್ತಿರುವುದು ಪವಾಡ.
 
ಸದಾ ಒಳ್ಳೆಯದನ್ನೇ ಕಾಣುವ, ಮಾತನಾಡುವುದನ್ನೇ ನಡೆದು ತೋರುವ ಮನುಷ್ಯರು ಆಗಾಗ ನಮ್ಮ ಮುಂದೆ ಹೊಳೆಯುವುದು ಪವಾಡ.  ಇಷ್ಟು ವರ್ಷಗಳ ಕಾಲ ಬದುಕಿದ್ದೆೀ ಪವಾಡ. ಪ್ರತಿದಿನದ ಸೂರ್ಯೋದಯ, ಸೂರ್ಯಾಸ್ತಗಳು ಪವಾಡ. ಈ ಪವಾಡಗಳ ಸರಣಿಯನ್ನು ಅನುಭವಿಸಲು ಅಚಲವಾದ ನಂಬಿಕೆಬೇಕು.

ಈ ನಂಬಿಕೆ ಮೊದಲು ನಮ್ಮ ಆತ್ಮಶಕ್ತಿಯಲ್ಲಿ, ನಮ್ಮ ಕೆಲಸಗಳಲ್ಲಿ, ಸಂಬಂಧಗಳಲ್ಲಿ, ವ್ಯವಸ್ಥೆಯಲ್ಲಿ ಹಾಗೂ ನಮ್ಮೆಲ್ಲರನ್ನೂ ಮುನ್ನಡೆಯಿಸುವ ಶಕ್ತಿಯೊಂದಿದೆ ಎಂಬ ಚಿಂತನೆಯಲ್ಲಿ ಮೂಡಿ ಬರಬೇಕು. ಅಂದಾಗ ಮಾತ್ರ ನಮ್ಮ ನಾಳೆ ಇಂದಿಗಿಂತಲೂ ಸುಂದರವಾಗಿರುತ್ತದೆ ಎಂಬ ಆಶಾವಾದದ ಕಾಮನಬಿಲ್ಲು ಮನದಲ್ಲಿ ಸ್ಫುಟವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT