ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುದ್ಧಿವಂತರ ಪಾಠ

Last Updated 3 ಮಾರ್ಚ್ 2015, 19:30 IST
ಅಕ್ಷರ ಗಾತ್ರ

ಗುಂಡಣ್ಣ ಅತ್ಯಂತ ಬುದ್ಧಿವಂತ. ಆದರೆ, ಬಡವ.  ಅವನ ಪಕ್ಕದ ಮನೆಯೇ ಕಿಟ್ಟಣ್ಣನದು. ಕಿಟ್ಟಣ್ಣ ಭಾರಿ ಶ್ರೀಮಂತ. ಆದರೆ, ಅವನು ಅಸಾಧ್ಯ ಜಿಪುಣ ಮತ್ತು ಸಂಶಯಪಿಶಾಚಿ.  ಕಿಟ್ಟಣ್ಣ ಯಾವತ್ತೂ ಸಂತೋಷವಾಗಿ ಇದ್ದವನಲ್ಲ. ಗುಂಡಣ್ಣ ಬಡತನದಲ್ಲೂ ಸಂತೋಷವಾಗಿರುವುದನ್ನು ಕಂಡು ಕಿಟ್ಟಣ್ಣನಿಗೆ ಹೊಟ್ಟೆಯುರಿ. ಯಾವಾ­ಗಲೂ ಕಿಟ್ಟಣ್ಣನ ಮನೆಯ ಕಡೆಗೇ ಕಣ್ಣಿಟ್ಟು ನೋಡುತ್ತಿದ್ದ.

ಒಂದು ದಿನ ಗುಂಡಣ್ಣ ದೇವರಿಗೆ ಪ್ರಾರ್ಥನೆ ಮಾಡಿ ಕೈ ಮುಗಿದು ಕೇಳಿದ, ‘ದೇವರೇ, ನನಗೆ ತುಂಬ ಕಷ್ಟವಿದೆ. ದಯವಿಟ್ಟು ಎರಡು ಸಾವಿರ ರೂಪಾಯಿ ಕೊಡು. ಆದರೆ ನೀನು ಒಂದು ರೂಪಾಯಿ ಕಡಿಮೆ ಕೊಟ್ಟರೂ ನಾನು ತೆಗೆದುಕೊ­ಳ್ಳುವು­ದಿಲ್ಲ,  ನೆನಪಿರಲಿ’.  ಇದನ್ನು ಕೇಳಿಸಿಕೊ­ಳ್ಳುತ್ತಿದ್ದ ಕಿಟ್ಟಣ್ಣ ಗುಂಡಣ್ಣನ ಪ್ರಾಮಾ­ಣಿಕತೆಯನ್ನು ಪರೀಕ್ಷೆ ಮಾಡಿಯೇ ತೀರಬೇಕೆಂದು ತೀರ್ಮಾನಿಸಿ ತನ್ನ ಸೇವಕನನ್ನು ಕರೆದುಕೊಂಡು ಹೋಗಿ ಗುಂಡಣ್ಣನ ಮನೆಯಲ್ಲಿ ಸಾವಿರ ರೂಪಾ­ಯಿಗಳನ್ನು ಎಸೆದು ಬಂದ.  ಕಿಟ್ಟಣ್ಣ ನೋಟುಗಳನ್ನು ನೋಡಿದ, ಎಣಿಸಿದ.  ನಂತರ ಆಕಾಶದ ಕಡೆಗೆ ಮುಖ ಮಾಡಿ ಹೇಳಿದ.

‘ಆಯ್ತು ಪ್ರಭೂ, ನಿನಗೂ ತೊಂದರೆಗಳು ಇರುತ್ತವೆ.  ನೀನು ಕಂತಿನ ಮೇಲೆ ಕೊಡಲು ತೀರ್ಮಾನ ಮಾಡಿದ್ದೀಯಾ, ಪರವಾಗಿಲ್ಲ. ಉಳಿದ ಸಾವಿರ ರೂಪಾಯಿ ಮುಂದಿನ ವಾರ ಕೊಡು’. ಈ ಮಾತು ಕೇಳಿ ಕಿಟ್ಟಣ್ಣನ ಎದೆ ಬಿರಿಯಿತು. ಎಲಾ ದುಷ್ಟ, ಎರಡು ಸಾವಿ­ರಕ್ಕಿಂತ 1 ರೂಪಾಯಿಯನ್ನೂ ಕಡಿಮೆ ತೆಗೆದುಕೊಳ್ಳುವುದಿಲ್ಲವೆಂದು ಹೇಳಿದ್ದ ಈತ ಸುಲಭವಾಗಿ ಸಾವಿರ ರೂಪಾಯಿ ನುಂಗಿ ಹಾಕಿದನಲ್ಲ ಎಂದು­ಕೊಂಡು ಸೀದಾ ಗುಂಡಣ್ಣನ ಮನೆಗೆ ಹೋದ, ‘ಗುಂಡಣ್ಣ, ನನ್ನ ಸಾವಿರ ರೂಪಾಯಿ ಕೊಡು’ ಎಂದ. 

ಗುಂಡಣ್ಣ, ‘ಕಿಟ್ಟಣ್ಣ, ನೀನೆಲ್ಲಿ ನನಗೆ ಹಣ ಕೊಟ್ಟೆ? ನನಗೆ ಕೊಟ್ಟಿದ್ದು ದೇವರು’ ಎಂದ. ಕಿಟ್ಟಣ್ಣ ಏನೆಲ್ಲ ಹೇಳಿದರೂ ಗುಂಡಣ್ಣ ಒಪ್ಪಲಿಲ್ಲ. ಬೇರೆ ಗತಿ ಇಲ್ಲದೇ ಕಿಟ್ಟಣ್ಣ ಹೇಳಿದ, ‘ನಡೆ ಜಿಲ್ಲಾಧಿಕಾರಿಯವರ ಬಳಿಗೆ. ಅಲ್ಲಿಯೇ ನಿನಗೆ ತಕ್ಕ ಶಿಕ್ಷೆಯಾಗುತ್ತದೆ’. ಗುಂಡಣ್ಣ ಹೇಳಿದ, ‘ನಾನೇನೋ ಬರು­ತ್ತೇನೆ.  ಆದರೆ, ದೊಡ್ಡವರ ಹತ್ತಿರ ಬರಲು ನನ್ನ ಬಳಿ ಹೊಸ ಬಟ್ಟೆಯಿಲ್ಲ, ಕಾಲಿಗೆ ಬೂಟುಗಳಿಲ್ಲ’. ಕಿಟ್ಟಣ್ಣ, ‘ಆಯ್ತಪ್ಪ, ನಿನಗೆ ಹೊಸ ಬಟ್ಟೆ, ಹೊಸ ಬೂಟ್ಸು ನಾನೇ ಕೊಡುತ್ತೇನೆ’ ಎಂದ. ‘ಆದರೆ, ನಾನು ಜಿಲ್ಲಾಧಿಕಾರಿಯವರ ಕಚೇರಿಯ­ವರೆಗೆ ಬರುವುದು ಹೇಗೆ? ನನಗೋ ಬಹಳ ನಿಶ್ಯಕ್ತಿ’ ಎಂದು ಗೊಣಗಿದ ಗುಂಡಣ್ಣ. ‘ಸರಿ, ನನ್ನ ಹೊಸ ಸೈಕಲ್ ಇದೆ.  ಅದನ್ನೇ ತೆಗೆದುಕೊಂಡು ಬಾ’ ಎಂದು ನಿಟ್ಟುಸಿರುಬಿಟ್ಟ ಕಿಟ್ಟಣ್ಣ.

ಮರುದಿನ ಗುಂಡಣ್ಣ, ಹೊಸಬಟ್ಟೆ, ಹೊಸ ಬೂಟ್ಸು, ಸೈಕಲ್ಲಿನೊಂದಿಗೆ ಜಿಲ್ಲಾಧಿಕಾರಿಯವರ ಕಚೇರಿಗೆ ಹೋದ. ‘ನಿನಗೆ ಕಿಟ್ಟಣ್ಣ ಹಣ ಕೊಟ್ಟಿದ್ದು ನಿಜವೇನಪ್ಪ?’ ಅಧಿಕಾರಿ ಕೇಳಿದರು.  ‘ಇಲ್ಲ ಸಾರ್, ಇದನ್ನು ದೇವರು ನನಗೆ ಕೊಟ್ಟಿದ್ದು’ ಎಂದ ಗುಂಡಣ್ಣ. ಕಿಟ್ಟಣ್ಣನಿಗೆ ಸಿಟ್ಟು ನೆತ್ತಿಗೇರಿತು, ‘ಇಲ್ಲ ಸ್ವಾಮಿ, ಅದನ್ನು ನಾನು ಕೊಟ್ಟಿದ್ದು’ ಎಂದು ಕೂಗಿದ, ಆಗ ಗುಂಡಣ್ಣ ಶಾಂತವಾಗಿ ಹೇಳಿದ, ‘ಇವನ ತಲೆ ಸರಿ ಇಲ್ಲ ಸ್ವಾಮಿ, ಬೇಕಾದರೆ ಕೇಳಿ ನೋಡಿ, ಈ ಸೈಕಲ್ ತನ್ನದೇ ಎನ್ನುತ್ತಾನೆ’ ಎಂದ.

‘ಹೌದು ಅದು ನನ್ನದೇ’ ಕೂಗಿದ ಕಿಟ್ಟಣ್ಣ. ‘ಸ್ವಾಮಿ, ಅವನು ನಾನು ಹಾಕಿಕೊಂಡ ಬಟ್ಟೆಯೂ ತನ್ನದೇ ಎನ್ನುತ್ತಾನೆ ನೋಡಿ’ ಹೇಳಿದ ಗುಂಡಣ್ಣ. ‘ಹೌದೇ ಹೌದು. ಅವನ ಬಟ್ಟೆಗಳನ್ನೂ ನಾನೇ ಕೊಟ್ಟಿದ್ದು’ ಹೌಹಾರಿ ಕೂಗಿದ ಕಿಟ್ಟಣ್ಣ. ‘ಅಯ್ಯೋ, ಏನಾಗಿದೆ ನಿನ್ನ ಬುದ್ಧಿಗೆ ಕಿಟ್ಟಣ್ಣ? ಸ್ವಾಮಿ, ನಾನು ಹಾಕಿಕೊಂಡ ಬೂಟುಗಳನ್ನು ನಾನೇ ಕೊಟ್ಟಿದ್ದು ಎನ್ನುತ್ತಾನೆ ನೋಡಿ ಇವನು’ ಎಂದು ಕಿಚಾ­ಯಿಸಿದ ಗುಂಡಣ್ಣ. ‘ಸ್ವಾಮಿ, ಅವನ ಬೂಟ್ಸನ್ನೂ ನಾನೇ ಕೊಡಿಸಿದ್ದು, ಪ್ರಮಾಣ­ವಾಗಿ’ ಎಂದ ಕಿಟ್ಟಣ್ಣ.  ಬೆವರು ಸುರಿಯುತ್ತಿತ್ತು.

ಜಿಲ್ಲಾಧಿಕಾರಿ ಕಿಟ್ಟಣ್ಣನನ್ನು ದುರು­ಗುಟ್ಟಿ ನೋಡಿ, ‘ನೀನು ಸುಳ್ಳುಗಾರ, ನಡೆ ಆಚೆಗೆ’ ಎಂದು ಕಿಟ್ಟಣ್ಣನನ್ನು ದಬ್ಬಿಸಿ­ಬಿಟ್ಟ.  ಕಿಟ್ಟಣ್ಣ ಅಳುತ್ತ ಮನೆಗೆ ಬಂದ.  ನಂತರ ಗುಂಡಣ್ಣ ಕಿಟ್ಟಣ್ಣನ ಮನೆಗೆ ಹೋಗಿ, ‘ಇದೋ ಕಿಟ್ಟಣ್ಣ, ಇವು ನಿನ್ನ ಬಟ್ಟೆ, ಬೂಟ್ಸುಗಳು.  ತೆಗೆದುಕೋ ನಿನ್ನ ಸಾವಿರ ರೂಪಾಯಿ. ನಿನ್ನ ಹಣ ನನಗೆ ಬೇಡ. ಆದರೆ ದೇವರನ್ನು ಬೇಡುವಾ­ಗಲಾ­ದರೂ ನನ್ನನ್ನು ಗಮನಿಸುವುದನ್ನು ಬಿಡು. ನಿನ್ನ ಬದುಕು ನಿನಗೆ, ನನ್ನದು ನನಗೆ’ ಎಂದು ಹೇಳಿ ಬಂದ. ಬುದ್ಧಿವಂತರು ಹೆಚ್ಚು ಮಾತನಾಡು­ವು­ದಿಲ್ಲ. ಹಾಗೆಂದು ಅವರು ಅಪ್ರಯೋ­ಜಕರು ಎಂದು ಭಾವಿಸುವುದು ಬೇಡ. ಅವರನ್ನು ಕೆಣಕಿದರೆ ಸರಿಯಾದ ಪಾಠ ಕಲಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT