ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲೊಂದು ಪುಟ್ಟ ಜಪಾನ್

Last Updated 28 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಎಂಭತ್ತರ ದಶಕದಲ್ಲಿ ಇರಾನ್‌ನಿಂದ ಸಾವಿರಾರು ವಿದ್ಯಾರ್ಥಿಗಳು ಬೆಂಗಳೂರಿಗೆ ಓದಲು ಬಂದಿದ್ದರು. ಬೈಕ್ ಹತ್ತಿಕೊಂಡು ಬೀದಿ ಬೀದಿ ಸುತ್ತುತ್ತಿದರು. ಹೆಚ್ಚು ಬಾಡಿಗೆ ಕೊಟ್ಟು ಮನೆಗಳನ್ನು ಪಡೆಯುತ್ತಿದ್ದರು. ಅಲ್ಲೊಂದು ಇಲ್ಲೊಂದು ಜಗಳವನ್ನೂ ಆಡುತ್ತಿದ್ದರು. ಹಾಗಾಗಿ ಅವರು ಬೆಂಗಳೂರಿನಲ್ಲಿದ್ದದ್ದು ಎಲ್ಲರಿಗೂ ಗೊತ್ತಿತ್ತು. ಅವರ ಬಗ್ಗೆ ಜನ ಮಾತಾಡಿಕೊಳ್ಳುತ್ತಿದ್ದರು.

ಇರಾನಿ ಹುಡುಗರಲ್ಲಿ ಕೆಲವರು ಮಾಡುತ್ತಿದ್ದ ಧಾಮ್ ಧೂಮ್ ಸ್ಥಳೀಯರಲ್ಲಿ ಸಿಟ್ಟು, ಅಸೂಯೆ ಹುಟ್ಟಿಸುತ್ತಿತ್ತು. ಆದರೆ ಎಲ್ಲ ವಿದೇಶಿಯರೂ ಹಾಗಿರುವುದಿಲ್ಲ. ಇಂದು ಜಪಾನ್ ದೇಶದ ಹಲವರು ಬೆಂಗಳೂರಿಗೆ ಬಂದು ನೆಲೆಸಿದ್ದಾರೆ. ಆದರೆ ಅವರ ಬಗ್ಗೆ ಕಂಡು ಕೇಳಿದವರು ವಿರಳ. ಅವರ ಜೊತೆ ಕೆಲಸ ಮಾಡುವವರನ್ನು ಬಿಟ್ಟರೆ ಬೇರೆಯವರಿಗೆ ಅವರ ಪರಿಚಯವಿಲ್ಲ.

ಬೆಂಗಳೂರಿನಲ್ಲಿನ ಜಪಾನೀಯರ ಬಗ್ಗೆ ಮಾರ್ಗೋ ಕೋಹೆನ್ ಎಂಬ ಪತ್ರಕರ್ತೆ ಒಂದಷ್ಟು ಮಾಹಿತಿ ಹೊರತೆಗೆದಿದ್ದಾರೆ. ಪ್ರತಿ ವರ್ಷ ಸುಮಾರು 18,000 ಜನ ಆ ದೇಶದಿಂದ ಬೆಂಗಳೂರಿಗೆ ಉದ್ಯೋಗದ ಮೇಲೆ ಪ್ರಯಾಣ ಬೆಳೆಸುತ್ತಾರೆ. ಅವರಿಗೆ ಅನುಕೂಲವಾಗುವಂತೆ ರೆಸಿಡೆನ್ಸಿ ರಸ್ತೆಯ ಒಂದು ಹೋಟೆಲ್ ತನ್ನ ಫರ್ನಿಚರ್ ಮತ್ತು ಬಾತ್ ಟಬ್ ಗಳನ್ನು ಬದಲಾಯಿಸುತ್ತಿದೆ. ಹೊಸ ವಿನ್ಯಾಸಗಾರರು ಕೆಲಸದಲ್ಲಿ ತೊಡಗಿದ್ದಾರೆ. ಯುರೋಪಿಯನ್ ಶೈಲಿ ಹೋಗಿ ಜಪಾನಿ ಶೈಲಿ ಅಲ್ಲಿ ಬೇರೂರುತ್ತಿದೆ. ಟೊಯೋಟಾ ಸಂಸ್ಥೆಯ ಹಿರಿಯ ಉದ್ಯೋಗಿಗಳಿಗಾಗಿಯೇ ಜಪಾನೀ ಮಸಾಜ್ ತಜ್ಞೆಯೊಬ್ಬರು ಬಂದಿದ್ದಾರೆ.

ಭಾರತದಲ್ಲಿ ಇಂದು ಡೆಲ್ಲಿ ಬಿಟ್ಟರೆ ಬೆಂಗಳೂರಿನಲ್ಲಿಯೇ ಹೆಚ್ಚು ಜಪಾನ್ ಪ್ರಜೆಗಳು ಇರುವುದು. ಅವರು ಇತರ ನಗರಗಳಿಗಿಂತ ಬೆಂಗಳೂರನ್ನು ಇಷ್ಟ ಪಡುವುದಕ್ಕೆ ಒಂದು ಕಾರಣ ಗಾಲ್ಫ್ ಕೋರ್ಸ್ ಗಳಂತೆ. ಮೈಸೂರ್ ರಸ್ತೆಯ ಗಾಲ್ಫ್ ಕೋರ್ಸ್ ಒಂದರಲ್ಲಿ ಜಪಾನೀ ಭಾಷೆ ಮಾತಾಡುವ ಸಹಾಯಕರೂ ಇದ್ದಾರೆ.

ಇನ್ನು ಇಲ್ಲಿ ಕಟ್ಟುತ್ತಿರುವ ಮೆಟ್ರೋ ಸುರಂಗಗಳ ಮೇಲ್ವಿಚಾರಣೆ ಮಾಡುತ್ತಿರುವುದು ರೆಯ್ಕೋ ಅಬೆ ಎಂಬ ಮಹಿಳ ಇಂಜಿನಿಯರ್. ಬಿಡುವಿನಲ್ಲಿ ಕಾದಂಬರಿ ಬರೆಯುವ ಈಕೆ ಇನ್ನೊಂದು ವರ್ಷ ಇಲ್ಲಿದ್ದು, ಕೆಲಸ ಮುಗಿದ ಮೇಲೆ ಬಾಂಗ್ಲಾದೇಶಕ್ಕೆ ಹೊರಡಲು ಅಣಿಯಾಗಿದ್ದಾರೆ. ಕಜೂಮ ಕುಬೋಕಿ ಎಂಬ ಹಾಡುಗಾರ 2003 ರಿಂದ ಬೆಂಗಳೂರಿನಲ್ಲಿ ಇದ್ದಾರೆ. ಕನ್ನಡ ಕಲಿತಿದ್ದಾರೆ. ಗಂಧದ ಗುಡಿ, ಆಕಸ್ಮಿಕ ಮತ್ತು ಮುಂಗಾರು ಮಳೆ ಚಿತ್ರಗಳ ಹಾಡನ್ನು ಅಭ್ಯಾಸ ಮಾಡಿದ್ದಾರೆ. ಮೆಗುಮಿ ಸಕಕಿದ ಎಂಬ ಚಿತ್ರಕಲಾ ಪರಿಷತ್ ವಿದ್ಯಾರ್ಥಿ ಕುಂದಾಪುರವನ್ನು ತುಂಬ ಹಚ್ಚಿಕೊಂಡಿದ್ದಾರೆ.  ಕನ್ನಡ ಸಾಹಿತ್ಯವನ್ನೂ ಅಭ್ಯಾಸ ಮಾಡುತ್ತಿದ್ದಾರೆ.

ಬೆಂಗಳೂರಿನಲ್ಲಿರುವ ಜಪಾನೀ ಕಂಪನಿಗಳ ಸಂಖ್ಯೆ 229. ಇಲ್ಲೆೀ ನೆಲೆಸಿರುವ ಜಪಾನೀ ಪ್ರಜೆಗಳ ಸಂಖ್ಯೆ 886. ಇದು ಅಂತ ದೊಡ್ಡ ಸಂಖ್ಯೆ ಅನಿಸದಿದ್ದರೂ, ಜಪಾನಿಯರಿಗೆ ಬೆಂಗಳೂರು ಪ್ರಿಯವಾಗಿದೆ. ಬರುವ ವರ್ಷಗಳಲ್ಲಿ ಇನ್ನೂ ಹೆಚ್ಚು ಹೆಚ್ಚು ಇಲ್ಲಿಗೆ ಬರುವುದರಲ್ಲಿ ಸಂಶಯವಿಲ್ಲ. ಅವರನ್ನೇ ಮನಸಿನಲ್ಲಿಟ್ಟುಕೊಂಡು ಒಂದು ಟ್ರಾವೆಲ್ ಏಜನ್ಸಿ ಕೂಡ ಶುರುವಾಗಿದೆ.

ಜಪಾನಿಯರು ಶೋ ಆಫ್ ಮಾಡುವುದಿಲ್ಲ. ಕೆಲಸ ಕಟ್ಟುನಿಟ್ಟಾಗಿ ಮಾಡುವ ಖ್ಯಾತಿ ಅವರದು. ಕೆಲವು ವಿಷಯಗಳಲ್ಲಿ ಅತಿಯೆನಿಸುವ ಧೋರಣೆ ಅವರದು ಎಂದು ಸಹೋದ್ಯೋಗಿಗಳು ಒಮ್ಮಮ್ಮೆ ದೂರುತ್ತಾರೆ. ಕೆಲಸದ ಸ್ಥಳದಲ್ಲಿ ಅವರಿಗೂ ಭಾರತೀಯರಿಗೂ ಹೊಂದಾಣಿಕೆಯಾಗದ ಪ್ರಸಂಗಗಳ ಬಗ್ಗೆಯೂ ಒಂದೆರಡು ಬಾರಿ ನನ್ನ ಕಿವಿಗೆ ಬಿದ್ದಿದೆ. ಆದರೆ ಇಲ್ಲಿಯ ಜನರೊಂದಿಗೆ ಸ್ನೇಹದಿಂದ ಬೆರೆಯುವ ಮನಸು ಅವರಲ್ಲಿ ಹಲವರದು. ಹಾಗಾಗಿ ಇಲ್ಲಿ ಇರಾನಿಯರಿಗೂ ಸ್ಥಳೀಯರಿಗೂ ಇದ್ದ ವೈಮನಸ್ಯ ನನಗಂತೂ ಕಾಣುತ್ತಿಲ್ಲ. ಆದರೆ ಅವರು ಯಾರ ಕಣ್ಣಿಗೂ ಅಷ್ಟಾಗಿ ಬೀಳುವುದಿಲ್ಲ.

ಮರೆಯಾದ ಸಂಗೀತ ದಿಗ್ಗಜರು

ಹೋದ ವಾರ ಲಾಲ್ಗುಡಿ ಜಯರಾಮನ್ ಅವರು ನಿಧನರಾದ ಬಗ್ಗೆ ಕೇಳಿರುತ್ತೀರಿ. ಸಂಗೀತ ಪ್ರೇಮಿಗಳು ತುಂಬ ಗೌರವ ಭಾವದಿಂದ ಕಾಣುತ್ತಿದ್ದ ಈ ವಯೊಲಿನ್ ವಾದಕ ಚೆನ್ನೈ ವಾಸಿಯಾಗಿದ್ದರು. ವಯೊಲಿನ್ ಸಂಗೀತದಲ್ಲಿ ಮತ್ತೊಬ್ಬ ಖ್ಯಾತರಾದ ಎಂ.ಎಸ್. ಗೋಪಾಲಕಷ್ಣನ್ ಕೂಡ ಇದೇ ವರ್ಷದ ಜನವರಿಯಲ್ಲಿ ತೇರಿಕೊಂಡರು. ಐದು ವರ್ಷದ ಹಿಂದೆ ಅಗಲಿದವರು ಕುನ್ನಕ್ಕುಡಿ ವೈದ್ಯನಾಥನ್. ಈ ಕಲಾವಿದರೆಲ್ಲ ಬೆಂಗಳೂರಿಗೆ ಬಂದು ಹೋಗುತ್ತಿದ್ದರು. ಅವರ ಧನಿಮುದ್ರಿಕೆಗಳು ಇಲ್ಲಿಲಭ್ಯ. ಹಾಗಾಗಿ ಅವರ ವಿಭಿನ್ನ ಶೈಲಿ ಇಲ್ಲಿನ ರಸಿಕರಿಗೆ ಸಹಜವಾಗಿಯೇ ಪರಿಚಯ ಇದೆ.  

ವಯೊಲಿನ್ ಪಾಶ್ಚಾತ್ಯ ವಾದ್ಯ.  ಹದಿನೆಂಟನೆಯ ಶತಮಾನದಿಂದ ಈಚೆಗೆ ಅದನ್ನು ನಮ್ಮ ಸಂಗೀತಕ್ಕೆ ಸರಿಹೊಂದುವಂತೆ ಪಳಗಿಸಿಕೊಂಡಿರುವುದಾಗಿ ಹೇಳುತ್ತಾರೆ. ಈ ವಾದ್ಯವನ್ನು ಹಿಡಿಯುವ ರೀತಿ ಮತ್ತು ನುಡಿಸುವ ರೀತಿ ಎರಡನ್ನೂ ಭಾರತೀಯ ಸಂಗೀತಗಾರರು ಮಾರ್ಪಾಡು ಮಾಡಿಕೊಂಡಿದ್ದಾರೆ. ಇಂದು ಕರ್ನಾಟಕ ಸಂಗೀತದಲ್ಲಿ ಅದಕ್ಕೆ ಪಕ್ಕವಾದ್ಯ ಮತ್ತು ತನಿ ವಾದ್ಯವಾಗಿ ಹೆಮ್ಮೆಯ ಸ್ಥಾನವಿದೆ. ಹಿಂದೂಸ್ತಾನಿ ಸಂಗೀತದಲ್ಲಿ ತನಿ ವಾದ್ಯವಾಗಿಯೇ ಹೆಚ್ಚು ಪ್ರಚಲಿತ. ಕೀಬೋರ್ಡ್ ಮತ್ತು ಸಂಪ್ಲರ್‌ಗಳ ಮೇಲುಗೈ ಆಗುವ ವರೆಗೆ ನಮ್ಮ ಸಿನಿಮ ಸಂಗೀತದಲ್ಲಿ ವಯೊಲಿನ್ ಇಲ್ಲದೆ ಏನೂ ಆಗುತ್ತಿರಲಿಲ್ಲ.

ಒಮ್ಮೆ ಸಿತಾರ್ ದಿಗ್ಗಜರಾದ ವಿಲಾಯತ್ ಖಾನ್ ರ ಜೊತೆ ಮಾತಾಡುವ ಅವಕಾಶ ಸಿಕ್ಕಿತ್ತು. ಆಗ ಅವರು ಹೇಳಿದ್ದು: ಭಾರತೀಯ ವಾದ್ಯಗಳನ್ನು ಕಡೆಗಣಿಸಿ ಪಾಶ್ಚಾತ್ಯ ವಾದ್ಯಗಳನ್ನು ನಾವು ನೆಚ್ಚಿಕೊಂಡಿದ್ದೇವೆ. ಇದು ಶಾಸ್ತ್ರೀಯ ಸಂಗೀತದಲ್ಲೇ ಆಗಿದೆ. ಭಾರತೀಯ ಪರಂಪರೆಯಲ್ಲೆೀ ಎಷ್ಟೋ ತಂತಿ ವಾದ್ಯಗಳು ಇವೆಯಲ್ಲ, ಅವುಗಳನ್ನು ಬಳಸಬಾರದೇಕೆ?

ಆದರೆ ಲಾಲ್ಗುಡಿ ಜಯರಾಮನ್ ಅವರಂಥ ಮೇರು ಕಲಾವಿದರ ಕೈಯಲ್ಲಿ ವಯೊಲಿನ್ ಕೇಳಿದಾಗ ಅದು ಪಾಶ್ಚಾತ್ಯ ಮೂಲದ್ದು ಎಂದು ನಂಬುವುದೇ ಕಷ್ಟ! ಎಂ.ಎಸ್. ಗೋಪಾಲಕಷ್ಣನ್ ಅವರ ಕೈಯಲ್ಲಿ ಕೆಲವು ಕಡೆ ಕರ್ನಾಟಕ ಸಂಗೀತದ ಕತಿಗಳಿಗೆ ಹಿಂದುಸ್ತಾನಿ ಸಂಗೀತದ ಸ್ಪರ್ಶ ಬಂತೇನೋ ಎಂದೆನಿಸುತ್ತಿತ್ತು. ಕುನ್ನಕ್ಕುಡಿ ಅವರ ದೈತ್ಯ ಪ್ರತಿಭೆ ಹಲವು ಹತ್ತು ಕಡೆ ಹರಿಯುತ್ತಿತ್ತು. ವೇಗ ಅವರಿಗೆ ತುಂಬ ಇಷ್ಟವಾಗಿತ್ತು. ಸಿನಿಮಾ ಹಾಡುಗಳನ್ನೂ ಅವರು ಕಛೇರಿಗಳಲ್ಲಿ ನುಡಿಸುತ್ತಿದ್ದರು.

ಆದರೆ ಲಾಲ್ಗುಡಿ ಕರ್ನಾಟಕ ಸಂಗೀತದ ಪರಿಶುದ್ಧತೆ ಕಾಪಾಡಿಕೊಳ್ಳಬೇಕು ಎನ್ನುವವರ ಪೈಕಿ.  ಹಾಗಾಗಿ ಅವರ ವಯೊಲಿನ್ ಇತರರ ವಯೊಲಿನ್‌ಗಿಂತ ಗಂಭೀರವಾಗಿ ಕೇಳುತ್ತದೆ.  ಪ್ರಾಚೀನ ಪರಂಪರೆಯೊಂದರ ಪ್ರತೀಕವಾಗಿ ಕಾಣುತ್ತದೆ. ನನಗಂತೂ ಅವರು ನುಡಿಸಿರುವ ಮರುಗೇಲರ, ನಾದ ಲೋಲುಡೈ ಮತ್ತು ಮೊಕ್ಷಮು ಗಲದ  ಕೃತಿಗಳು ಮತ್ತು ಮೋಹನ ಕಲ್ಯಾಣಿ ರಾಗದ ತಿಲ್ಲಾನ ತುಂಬ ಇಷ್ಟ. 
-ಎಸ್.ಆರ್.ರಾಮಕೃಷ್ಣ.
srramakrishna@gmail.com

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT