ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಅಭಿವೃದ್ಧಿ: ಇನ್ಫಿ ನಾರಾಯಣಮೂರ್ತಿ ಚಿಂತನೆ

Last Updated 2 ಜುಲೈ 2013, 19:59 IST
ಅಕ್ಷರ ಗಾತ್ರ

ಇನ್ಫೊಸಿಸ್‌ನ ಸ್ಥಾಪಕರಲ್ಲಿ ಒಬ್ಬರಾಗಿರುವ ನಾರಾಯಣಮೂರ್ತಿ ಅವರು, ರಾಜ್ಯ ಮತ್ತು ರಾಜಧಾನಿ ಬೆಂಗಳೂರಿನ ಮೂಲ ಸೌಕರ್ಯಗಳ ಸುಧಾರಣೆ ಬಗ್ಗೆ ಮೊನ್ನೆ ಹೆಚ್ಚು ಒತ್ತು ಕೊಟ್ಟು ಮಾತನಾಡಿರುವುದು ಉತ್ಸಾಹ ಮೂಡಿಸುವಂತಿದೆ. ಬೆಂಗಳೂರಿನ ಪ್ರಮುಖ ವಾಣಿಜ್ಯೋದ್ಯಮ ಸಂಘಟನೆಗಳಲ್ಲಿ ಒಂದಾಗಿರುವ ಬೆಂಗಳೂರು ವಾಣಿಜ್ಯೋದ್ಯಮ ಸಂಘದ (ಬಿಸಿಐಸಿ) ವಾರ್ಷಿಕ ಮಹಾಸಭೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಉಪಸ್ಥಿತಿಯಲ್ಲಿಯೇ ಮೂರ್ತಿ ಅವರು,  ಮೂಲಸೌಕರ್ಯಗಳ ಅಗತ್ಯಗಳ ಬಗ್ಗೆ ಹೆಚ್ಚು ಒತ್ತು ಕೊಟ್ಟು ಮಾತನಾಡಿದರು.  

ಮೂಲ ಸೌಕರ್ಯಗಳ ಅಗತ್ಯಗಳಿಗಾಗಿ ಬೆಂಗಳೂರಿನ ಪ್ರಭಾವಶಾಲಿ ಪೌರ ಸಮುದಾಯವು ಗಟ್ಟಿ ದನಿಯಲ್ಲಿ ಮಾತನಾಡಿ ತುಂಬ ಸಮಯವೂ ಆಗಿತ್ತು. ಕೆಲ ವರ್ಷಗಳ ಹಿಂದೆ, ಹೊಸೂರು ರಸ್ತೆಯಲ್ಲಿ ಸಂಚರಿಸುವುದು ಎಂದರೆ ಪ್ರತಿಯೊಬ್ಬರ ಸಹನೆ ಪರೀಕ್ಷಿಸುವ ಯಮಯಾತನೆ ಆಗಿರುತ್ತಿತ್ತು ಎನ್ನುವುದನ್ನು ಸುಲಭವಾಗಿ ಮರೆಯಲು ಆಗಲಾರದು. ನಾರಾಯಣಮೂರ್ತಿ ಮತ್ತು ಇತರರ ಸತತ ಪರಿಶ್ರಮದ ಫಲವಾಗಿ ಈಗ ನಾವೆಲ್ಲ ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕ ಕಲ್ಪಿಸುವ ಮೇಲು ಸೇತುವೆ ರಸ್ತೆ ಮೂಲಕ  ಸರಾಗವಾಗಿ ಸಂಚರಿಸುವಂತಾಗಿದೆ.

ಈ ಹಿಂದಿನ ಹೊಸೂರು ರಸ್ತೆಯು ಕೆಲ ವರ್ಷಗಳ ಹಿಂದೆ ಅದೆಷ್ಟರ ಮಟ್ಟಿಗೆ ಕುಖ್ಯಾತಿ ಗಳಿಸಿತ್ತು ಎಂದರೆ, ಸಾಗರೋತ್ತರ ಗ್ರಾಹಕರು ಕೂಡ  ಈ ರಸ್ತೆಯ ಅಂಕುಡೊಂಕುಗಳ  ಬಗ್ಗೆ ಚರ್ಚಿಸುವಂತಾಗಿತ್ತು.

ಎಲೆಕ್ಟ್ರಾನಿಕ್ ಸಿಟಿಯಲ್ಲಿ ಸಭೆ ಅಥವಾ ವಿಡಿಯೊ ಕಾನ್ಫರೆನ್ಸ್ ನಡೆಸುವುದು ಎಂದರೆ, ಈ ರಸ್ತೆಯಲ್ಲಿನ ಸಂಚಾರ ದಟ್ಟಣೆ ಸಮಸ್ಯೆಯ ಪೂರ್ವಾನುಮತಿ ಪಡೆಯಬೇಕಾಗುತ್ತದೆ - ಎಂದು ಕೆಲ ವರ್ಷಗಳ ಹಿಂದೆ ಸಾಫ್ಟ್‌ವೇರ್ ತಂತ್ರಜ್ಞರೆಲ್ಲ ಕುಹಕವಾಡುವ ಕಾಲವೊಂದಿತ್ತು.

ಅದೇ ಆಗ ಅಂಬೆಗಾಲು ಇಡುತ್ತಿದ್ದ ಸಾಫ್ಟ್‌ವೇರ್ ಉದ್ದಿಮೆಯು ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕ ಕಲ್ಪಿಸುತ್ತಿದ್ದ  ಹೊಸೂರು  ರಸ್ತೆಯಲ್ಲಿನ ಸಂಚಾರ ದಟ್ಟಣೆ,  ರಸ್ತೆಯಲ್ಲಿನ ಗುಂಡಿ ಮತ್ತಿತರ ದುರವಸ್ಥೆಯ ಕಾರಣಕ್ಕೆ ಸಾಗರೋತ್ತರ ಗ್ರಾಹಕರ ಸಮ್ಮುಖದಲ್ಲಿ ಅದೆಷ್ಟರ ಮಟ್ಟಿಗೆ ಮುಜುಗರದ ಪರಿಸ್ಥಿತಿ ಎದುರಿಸುತ್ತಿದ್ದರು ಎನ್ನುವುದು ಅನುಭವಿಸಿದವರಿಗೇ ಗೊತ್ತು. ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿ ಗ್ರಾಹಕರನ್ನು ಮನವೊಲಿಸಲು ಸಾಫ್ಟ್‌ವೇರ್ ಉದ್ದಿಮೆ ಪ್ರಮುಖರೆಲ್ಲ ಸಾಕಷ್ಟು ತಿಪ್ಪರಲಾಗವನ್ನೂ  ಹಾಕಬೇಕಾಗುತ್ತಿತ್ತು.

ಸದ್ಯಕ್ಕೆ ಎಲೆಕ್ಟ್ರಾನಿಕ್ ಸಿಟಿಗೆ ಸಂಪರ್ಕ ಕಲ್ಪಿಸುವ ಮೂಲ ಸೌಕರ್ಯದಲ್ಲಿ ಸಾಕಷ್ಟು ಸುಧಾರಣೆಯಾಗಿದ್ದರೂ, ಒಂದೆರಡು ದಶಕಗಳ ಹಿಂದಿನ ಅನೇಕ ದುಃಸ್ವಪ್ನಗಳು ಕಾಲಗರ್ಭದಲ್ಲಿ ಹುದುಗಿ ಹೋಗಿವೆ.

ಇತ್ತೀಚಿನ ವರ್ಷಗಳಲ್ಲಿ ಬೆಂಗಳೂರಿನ ಸ್ವರೂಪದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಹಲವಾರು ಹೊಸ ಉದ್ದಿಮೆಗಳನ್ನು ಆಕರ್ಷಿಸುವಲ್ಲಿಯೂ ಬೆಂಗಳೂರು ನಗರ ಸಫಲವಾಗಿದೆ. ಹಲವಾರು ಸಂಶೋಧನೆ ಮತ್ತು ಇತರ ಜ್ಞಾನಾಧಾರಿತ ಚಟುವಟಿಕೆಯ ಉದ್ದಿಮೆಗಳ ಕೇಂದ್ರವಾಗಿ ಇಡೀ ವಿಶ್ವದ ಗಮನ ಸೆಳೆಯುತ್ತಿದೆ. ಅನೇಕ ಬಹುರಾಷ್ಟ್ರೀಯ ಸಂಸ್ಥೆಗಳ ಜಾಗತಿಕ ಉದ್ದಿಮೆ ವಹಿವಾಟಿನಲ್ಲಿ ಬೆಂಗಳೂರು ವಿಶಿಷ್ಟ ಸ್ಥಾನಮಾನ ಹೊಂದಿದ್ದು, ವಿಶ್ವದಾದ್ಯಂತ ಅತ್ಯುತ್ತಮ ಪ್ರತಿಭೆಗಳೂ ಬೆಂಗಳೂರಿನತ್ತ ಆಕರ್ಷಿತರಾಗುತ್ತಿದ್ದಾರೆ.

ಬೆಂಗಳೂರಿನತ್ತ ಇಡೀ ವಿಶ್ವವೇ ಬೆರಗುಗಣ್ಣಿನಿಂದ ನೋಡುತ್ತಿದ್ದರೂ, ಇಲ್ಲಿನ ಮೂಲ ಸೌಕರ್ಯಗಳ ಆಮೆನಡಿಗೆಯ ಪ್ರಗತಿಯು ನಗರದ ಸ್ಫೋಟಕ ರೂಪದ ಬೆಳವಣಿಗೆಗೆ ಅದೆಷ್ಟರ ಮಟ್ಟಿಗೆ ಪೂರಕವಾಗಿರಲಿದೆ ಎನ್ನುವ ಗಂಭೀರ ಪ್ರಶ್ನೆ ನಗರದ ಜನತೆಯನ್ನು ತೀವ್ರವಾಗಿ ಕಾಡುತ್ತಲೇ ಇದೆ.

ಈ ಹಿಂದೆ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರವು ನಗರದ ಮೂಲ ಸೌಕರ್ಯ ಯೋಜನೆಗಳನ್ನು ತ್ವರಿತವಾಗಿ ಕಾರ್ಯಗತಗೊಳಿಸುವುದಾಗಿ ಭರವಸೆ ನೀಡಿದ್ದರೂ, ವಾಸ್ತವದಲ್ಲಿ ಕಾರ್ಯಗತವಾದದ್ದು ಮಾತ್ರ ತೀರ ಮಂದಗತಿಯಲ್ಲಿತ್ತು.
ಜನರ ಬದಲಾವಣೆಯ ನಿರೀಕ್ಷೆಗೆ ಪೂರಕವಾಗಿ,  ರಾಜ್ಯದಲ್ಲಿ  ಸರ್ಕಾರ ಬದಲಾಗಿರುವುದು ಮತ್ತು ನಾರಾಯಣಮೂರ್ತಿ ಅವರಲ್ಲಿ ಬೆಂಗಳೂರಿನ ಬೆಳವಣಿಗೆ ಬಗ್ಗೆ ಮತ್ತೆ ಆಸಕ್ತಿ ಮೂಡಿರುವುದು ಉತ್ಸಾಹ ಮೂಡಿಸುತ್ತಿದೆ. ನಗರದಲ್ಲಿನ ಮೂಲ ಸೌಕರ್ಯಗಳನ್ನು ತ್ವರಿತವಾಗಿ ಅಭಿವೃದ್ಧಿಪಡಿಸುವ ಬೇಡಿಕೆಗೆ ಈಗ ಮತ್ತೊಮ್ಮೆ ಬಲ ಬಂದಿದೆ. ಇದು ರಾಜ್ಯ ಸರ್ಕಾರದ ಪಾಲಿಗೆ ಎಚ್ಚರಿಕೆ ಗಂಟೆಯಾಗಿದೆ ಎಂದೂ ನನಗೆ ಅನಿಸುತ್ತದೆ.

ಬೆಂಗಳೂರಿನಲ್ಲಿ ಮೂಲ ಸೌಕರ್ಯಗಳು ಸಾಕಷ್ಟು ಸುಧಾರಣೆಯಾಗಬೇಕು ಎನ್ನುವುದೇ  ನಾರಾಯಣಮೂರ್ತಿ ಅವರ ಮುಖ್ಯ ಆಶಯವಾಗಿದೆ. ಬೆಂಗಳೂರು ಪೂರ್ವಭಾಗದ ಜನರ ಅನುಕೂಲಕ್ಕಾಗಿ ಪುಟ್ಟ ವಿಮಾನ ನಿಲ್ದಾಣ ನಿರ್ಮಾಣ ಮಾಡಬೇಕು ಎನ್ನುವುದು ಅವರ ಇನ್ನೊಂದು ಪ್ರಮುಖ ಹೊಸ ಬೇಡಿಕೆಯಾಗಿದೆ. ಸದ್ಯಕ್ಕೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ತಲುಪಲು ನಗರದ ಈ ಭಾಗದ ಜನರಿಗೆ  ಎರಡರಿಂದ ಮೂರು ಗಂಟೆ ಸಮಯ ಬೇಕಾಗುತ್ತದೆ.

ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯು ಈಗಲೂ ತುಂಬ ನಿರ್ಲಕ್ಷಿತ ಸ್ಥಿತಿಯಲ್ಲಿದೆ. ಈ ರಸ್ತೆಯ ಸ್ಥಿತಿಗತಿ ಸುಧಾರಣೆ ಮಾಡುವ ಬಗ್ಗೆ ರಾಜ್ಯ ಸರ್ಕಾರಕ್ಕೂ ಯಾವುದೇ ಪರಿಹಾರವೂ ಕಂಡು ಬರುವಂತೆ ಕಾಣುತ್ತಿಲ್ಲ.

ವಿಮಾನ ನಿಲ್ದಾಣ ನಿರ್ಮಾಣ ಹಂತದಿಂದಲೂ ಅಲ್ಲಿಗೆ ಅಡೆತಡೆರಹಿತವಾದ ರಸ್ತೆ ಸಂಪರ್ಕ ಕಲ್ಪಿಸುವ ಬಗ್ಗೆ ಮಾತನಾಡುತ್ತಲೇ ಬರಲಾಗಿದ್ದರೂ, ಅದು ಇನ್ನೂ ಕಾಗದದ ಮೇಲೆಯೇ ಇದೆ. ನಗರದಲ್ಲಿ ದಿನೇ ದಿನೇ ವಾಹನಗಳ ಸಂಖ್ಯೆ  ಹೆಚ್ಚುತ್ತಲೇ ಇದ್ದು ರಸ್ತೆಗಳಲ್ಲಿ ದಟ್ಟಣೆ ಪ್ರಮಾಣವೂ ಏರುಗತಿಯಲ್ಲಿಯೇ ಇದೆ.

ಬೆಂಗಳೂರಿನ ಮೂಲ ಸೌಕರ್ಯಗಳ ಸುಧಾರಣೆ ಬಗ್ಗೆ ಮೂರ್ತಿ ಅವರು ನೀಡಿರುವ ಸಲಹೆಗಳು ಗಂಭೀರ ಚರ್ಚೆಗೂ ಆಸ್ಪದ ಮಾಡಿಕೊಟ್ಟಿವೆ. ಹೊಸ ಪುಟ್ಟ ವಿಮಾನ ನಿಲ್ದಾಣ ನಿರ್ಮಾಣಕ್ಕೆ ಸಂಬಂಧಿಸಿದಂತೆ ಹಣಕಾಸು, ಕಾನೂನು ಮತ್ತಿತರ ಸಂಕೀರ್ಣ ಸಂಗತಿಗಳ ಬಗ್ಗೆ ಪ್ರತಿಯೊಬ್ಬರಿಗೂ ಅರಿವಿದೆ. ಆದರೆ, ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗುವ ಅಗತ್ಯವೂ ಇದೆ. ಎರಡು ವಿಮಾನ ನಿಲ್ದಾಣಗಳನ್ನು ಹೊಂದಿದ ಮಾದರಿ ನಗರವಾಗಿ ಬೆಂಗಳೂರು ಅಭಿವೃದ್ಧಿಗೊಳ್ಳುವುದರಲ್ಲಿ ತಪ್ಪೇನೂ ಕಂಡು ಬರಲಾರದು.

ಮೂರ್ತಿ ಅವರು ಉಲ್ಲೇಖಿಸಿರುವ ಇತರ ವಿಷಯಗಳಲ್ಲಿ ಉತ್ತಮ ರಸ್ತೆ, ಶುದ್ಧ ನೀರು, ಅತ್ಯುತ್ತಮ ಸಮೂಹ ಸಾರಿಗೆ ಮುಂತಾದವು ಬೆಂಗಳೂರು ನಗರವು ವಿಶ್ವದಾದ್ಯಂತ ಅತ್ಯುತ್ತಮ ಪ್ರತಿಭೆಗಳನ್ನು   ಆಕರ್ಷಿಸಲು ಅನಿವಾರ್ಯ ಆಗಿವೆ.

ಜ್ಞಾನಾಧಾರಿತ ಅರ್ಥ ವ್ಯವಸ್ಥೆಯು ಸಂಪೂರ್ಣವಾಗಿ ಗುಣಮಟ್ಟದ ಮಾನವ ಸಂಪನ್ಮೂಲವನ್ನೇ ಅವಲಂಬಿಸಿರುತ್ತದೆ. ಇತ್ತೀಚಿನ ದಿನಗಳಲ್ಲಿ ಅನೇಕ ಕಾರಣಗಳಿಗೆ ಬೆಂಗಳೂರು ಮಹಾನಗರದ ಸ್ಥಾನಮಾನಕ್ಕೆ ಚ್ಯುತಿ ಕಂಡುಬರುತ್ತಿದೆ. ಈ ಅಪಾಯ ತಪ್ಪಿಸಲು ಮೂಲ ಸೌಕರ್ಯಗಳ ಸುಧಾರಣೆಯು ಸಾಕಷ್ಟು ನೆರವಾಗಲಿದೆ.

ನಾರಾಯಣಮೂರ್ತಿ ಅವರು ಇನ್ಫೊಸಿಸ್‌ಗೆ ಮರಳಿ ಬಂದಿರುವುದಕ್ಕೆ ಮಿಶ್ರ ಪ್ರತಿಕ್ರಿಯೆಗಳೂ ವ್ಯಕ್ತವಾಗಿವೆ. ಅನೇಕ ಸ್ವಯಂ ಘೋಷಿತ ಪರಿಣತರು ಮತ್ತು ಸಲಹೆಗಾರರು ಮೂರ್ತಿ ಅವರ ಪುನರಾಗಮನಕ್ಕೆ ನಕಾರಾತ್ಮಕವಾಗಿ ಪ್ರತಿಕ್ರಿಯಿಸಿರುವುದನ್ನು ಅರ್ಥೈಸಿಕೊಳ್ಳುವಲ್ಲಿ ನಾನಂತೂ ವಿಫಲನಾಗಿರುವೆ.

ಇನ್ಫೊಸಿಸ್‌ಗೆ ಗತವೈಭವ ಮರಳಿ ತರುವ ಸಮರ್ಥ ನಾಯಕನ ಅಗತ್ಯ ಇರುವುದು ವಾಸ್ತವ ಸಂಗತಿಯಾಗಿದೆ. ಬದಲಾದ ಸಾಮಾಜಿಕ, ಆರ್ಥಿಕ ಪರಿಸ್ಥಿತಿಯಲ್ಲಿ ಹೊಸ ಸವಾಲುಗಳನ್ನು ಎದುರಿಸಿ ಸಂಸ್ಥೆಯನ್ನು ಸಮರ್ಥವಾಗಿ ಮುನ್ನಡೆಸುವಲ್ಲಿ ಸಂಸ್ಥೆಯ ಹಾಲಿ ನಾಯಕತ್ವವು ವಿಫಲವಾದರೆ, ಈಗಾಗಲೇ ಸಾಬೀತಾಗಿರುವ ಸಮರ್ಥ ನಾಯಕತ್ವದ ಮೂರ್ತಿ ಅವರನ್ನು ಮರಳಿ ಕರೆ ತರುವ ಸಂಸ್ಥೆಯ ಆಡಳಿತ ಮಂಡಳಿಯ ನಿರ್ಧಾರವನ್ನು ಪ್ರತಿಯೊಬ್ಬರೂ ಶ್ಲಾಘಿಸಲೇಬೇಕಾಗುತ್ತದೆ. ಹೊಸ ಸವಾಲು ಸ್ವೀಕರಿಸಿರುವ ಮೂರ್ತಿ ಅವರ ನಿಲುವಿಗೂ ಬೆಲೆಕಟ್ಟಬೇಕಾಗುತ್ತದೆ.

ಇನ್ಫೊಸಿಸ್‌ಗೆ ಮೂರ್ತಿ ಪುನರಾಗಮನವು ಬೆಂಗಳೂರಿನ  ಅಭಿವೃದ್ಧಿ ಮೇಲೂ ಸಾಕಷ್ಟು ಪರಿಣಾಮ ಬೀರಲಿದೆ. ಬೆಂಗಳೂರಿನ ತಕ್ಷಣದ ಅಗತ್ಯಗಳ ಬಗ್ಗೆ ತಮ್ಮ ಅನಿಸಿಕೆಗಳನ್ನು ವಾಣಿಜ್ಯೋದ್ಯಮ ಸಂಘದಲ್ಲಿ ಪ್ರಸ್ತುತಪಡಿಸುವ ಮೂಲಕ ಮೂರ್ತಿ ಅವರು ಬೆಂಗಳೂರಿನ ಚಿತ್ರಣ ಬದಲಿಸುವ ನಿಟ್ಟಿನಲ್ಲಿಯೂ ಸಕ್ರಿಯವಾಗಿ ಕಾರ್ಯಪ್ರವೃತ್ತರಾಗಿದ್ದಾರೆ.

ಮೂರ್ತಿ ಅವರ ಉನ್ನತ ವ್ಯಕ್ತಿತ್ವದ ಪ್ರಭಾವ ಮತ್ತು ಬೆಂಗಳೂರು ನಗರದ ಬಗೆಗಿನ ಅವರ ದೂರದೃಷ್ಟಿಯು ರಾಜ್ಯ ಸರ್ಕಾರಕ್ಕೂ ಮನವರಿಕೆಯಾದರೆ ಅಗತ್ಯ ಮೂಲ ಸೌಕರ್ಯ ಯೋಜನೆಗಳು ಕಾರ್ಯಗತಗೊಳ್ಳುವುದು ಇನ್ನಷ್ಟು  ಸುಲಭವಾಗಲಿದೆ.

ರಾಜ್ಯದ ಒಟ್ಟಾರೆ ವರಮಾನದಲ್ಲಿ ಬೆಂಗಳೂರಿನ ಕೊಡುಗೆ ಶೇ 60ರಷ್ಟಿದೆ  ಮತ್ತು  ರಾಜ್ಯದ ಆರ್ಥಿಕ ಬೆಳವಣಿಗೆಯು ಬೆಂಗಳೂರಿನೊಂದಿಗೆ ಸಾಕಷ್ಟು ತಳಕು ಹಾಕಿಕೊಂಡಿದೆ ಎನ್ನುವುದು, ಈ ಹಿಂದಿನ ಸರ್ಕಾರಗಳಲ್ಲಿ ಹಣಕಾಸು ಖಾತೆ ನಿರ್ವಹಿಸಿದ್ದ ಸಿದ್ದರಾಮಯ್ಯ ಅವರಿಗೆ ಗೊತ್ತಿರುವಂತಹ ಸಂಗತಿಯೇ ಆಗಿದೆ.

ಸಿದ್ದರಾಮಯ್ಯ ಅವರು ಕೃಷಿ ಹಿನ್ನೆಲೆಯಿಂದ ಬಂದವರಾಗಿದ್ದರೂ, ಅಭಿವೃದ್ಧಿ ಕಾರ್ಯಸೂಚಿಯಲ್ಲಿ ಉದ್ದಿಮೆ ವಹಿವಾಟಿಗೆ ಸಾಕಷ್ಟು ಮಹತ್ವ ಕೊಡಬಲ್ಲವರಾಗಿದ್ದಾರೆ. ಮೂರ್ಖತನದ ಧೋರಣೆಗಳಿಗೆ ಹೊರತಾದವರು ಎನ್ನುವುದನ್ನು ಈಗಾಗಲೇ ಸಾಬೀತುಪಡಿಸಿರುವ ಮುಖ್ಯಮಂತ್ರಿಗಳು, ಆಡಳಿತದ ಮೇಲೆ ಕ್ಷಿಪ್ರವಾಗಿ ಹಿಡಿತ ಸಾಧಿಸಿದ್ದಾರೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮತ್ತು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಗಳು (ಬಿಡಿಎ) ಬೆಂಗಳೂರಿನ ಅಭಿವೃದ್ಧಿಗೆ ರೂಪಿಸಿರುವ ಯೋಜನೆಗಳು ಈಗಾಗಲೇ ಸಾಕಷ್ಟು ಸಂಖ್ಯೆಯಲ್ಲಿ ಇವೆ. ಅವುಗಳಿಗೆ ಜೀವ ತುಂಬಿ ಕಾರ್ಯಗತಗೊಳಿಸಲು ಕಿಂಚಿತ್ತೂ ಕಾಲ ವಿಳಂಬ ಮಾಡದೇ ಕಾರ್ಯಪ್ರವೃತ್ತರಾಗುವ ಅನಿವಾರ್ಯತೆ ಇದೆ.

ಮೂಲ ಸೌಕರ್ಯ ಯೋಜನೆಗಳನ್ನು ತ್ವರಿತವಾಗಿ ಕಾರ್ಯಗತಗೊಳಿಸುವುದರಿಂದ ಇಡೀ ವಿಶ್ವಕ್ಕೆ ಸರಿಯಾದ ಸಂದೇಶ ರವಾನೆಯಾಗುವುದರ ಜತೆಗೆ ಹೊಸ ಸರ್ಕಾರದ ಮೊದಲ ಛಾಪು ಕೂಡ ಪರಿನಾಮಕಾರಿಯಾಗಿರುತ್ತದೆ. ಒಟ್ಟಾರೆ, ಈ ಎಲ್ಲ ಬೆಳವಣಿಗೆಗಳ ಫಲವಾಗಿ ಬೆಂಗಳೂರಿನ ಮೂಲ ಸೌಕರ್ಯಗಳು ಸಾಕಷ್ಟು ಸುಧಾರಣೆಗೊಳ್ಳಲಿವೆ ಎಂದೇ ನಾವೆಲ್ಲ ಆಶಿಸಬಹುದಾಗಿದೆ.

ನಿಮ್ಮ ಅನಿಸಿಕೆ ತಿಳಿಸಿ:   editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT