ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತ, ಪಾಕ್‌ ಸಂಬಂಧ ಸುಧಾರಣೆ...

Last Updated 24 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಪಾಕಿಸ್ತಾನದ ಪ್ರಧಾನ ಮಂತ್ರಿ ನವಾಜ್ ಷರೀಫ್ ಅವರು ಭಾರತದ ಜತೆ ಮಾತುಕತೆಗೆ ಉತ್ಸುಕತೆ ತೋರಿದ್ದಾರೆ. 2008ರ ನವೆಂಬರ್‌­ನಲ್ಲಿ ಮುಂಬೈನಲ್ಲಿ ನಡೆದ ಉಗ್ರರ ದಾಳಿಯ ನಂತರ ಮುರಿದುಬಿದ್ದ ಮಾತುಕತೆ ಪ್ರಕ್ರಿಯೆ­ಯನ್ನು  ಪುನರಾರಂಭಿಸಬೇಕು ಎಂದು ಅವರು ಭಾರತ ಸರ್ಕಾರವನ್ನು ಹಲವು ಸಲ ಕೋರಿ­ದ್ದಾರೆ.

ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ ನವಾಜ್ ಷರೀಫ್ ಅವರ ಸಹೋದರ ಶಹಬಾಜ್ ಷರೀಫ್ ಮುಖ್ಯಮಂತ್ರಿ­ಯಾಗಿ­ದ್ದಾರೆ.  ಈಚೆಗೆ ಭಾರತದ ಪಂಜಾಬ್‌ಗೆ ಭೇಟಿ ಕೊಟ್ಟಿದ್ದ ಸಂದರ್ಭದಲ್ಲಿ ಶಹಬಾಜ್ ಅವರೂ ನವಾಜ್ ಷರೀಫ್ ಅವರ ಅನಿಸಿಕೆಗಳನ್ನೇ ಮತ್ತೆ ಹೇಳಿ ಜನರ ಗಮನ ಸೆಳೆದಿದ್ದಾರೆ. ಯುದ್ಧ ಯಾವು­­ದಕ್ಕೂ ಪರಿ­ಹಾರವೇ ಅಲ್ಲ ಎಂದಿರುವ ಅವರು ಸಂವಾದದ ಮೂಲಕ ಉಭಯ ದೇಶ­­ಗಳೂ ಸಂಬಂಧ ಸುಧಾರಣೆಗೆ ಒತ್ತು ನೀಡಬೇಕು ಎಂದಿ­ದ್ದಾರೆ.

ಭಾರತದ ವಿದೇಶಾಂಗ ವ್ಯವಹಾರಗಳ ಸಚಿವ ಸಲ್ಮಾನ್ ಖುರ್ಷಿದ್ ಕೂಡಾ ಅದೇ ಅಭಿಪ್ರಾಯ ಹೊಂದಿ­ದ್ದಾರೆ. ಭಾರತ ಯಾವತ್ತೂ ಶಾಂತಿಯ ಮಾತುಕತೆಗೆ ವಿರೋಧ ವ್ಯಕ್ತ ಪಡಿಸಿಯೇ ಇಲ್ಲ ಎಂದೂ ಅವರು ನುಡಿದಿದ್ದಾರೆ. ಆದರೆ  ಉಭಯ ದೇಶಗಳ ನಡುವಣ ಅಂತಹ ಮಾತು­ಕತೆಗೆ ಪೂರಕವಾದ ಉತ್ತಮ ವಾತಾವರಣ ನಿರ್ಮಾಣ­ವಾಗಬೇಕಾದ ಅಗತ್ಯ­ವಿದೆ ಎಂದಿ­ದ್ದಾರೆ. ಎರಡೂ ದೇಶಗಳ ನಡುವಣ ಸಂಬಂಧ ಹದ­ಗೆಡಲು ಕಾರಣವಾಗಿರುವ ಕೆಲವು ಅಹಿತ­ಕರ ಘಟನೆಗಳನ್ನು ಮನಸ್ಸಿನೊಳಗಿರಿಸಿಕೊಂಡೇ ಸಲ್ಮಾನ್ ಅವರು ಮಾತನಾಡಿದಂತಿದೆ.

ಮುಂಬೈ ದಾಳಿಯ ಪ್ರಕರಣವಂತೂ ಮಾತು­ಕತೆಯ ಆರಂಭಕ್ಕೆ ತೊಡಕಾಗಿಯೇ ಪರಿಣಮಿ­ಸಿದೆ. ಆ ಪ್ರಕರಣಕ್ಕೆ ಸಂಬಂಧಿಸಿದವರ ಬಗ್ಗೆ ಕ್ರಮ ಕೈಗೊಳ್ಳುವ ದಿಸೆಯಲ್ಲಿ ಪಾಕಿಸ್ತಾನ ಸರ್ಕಾರ ಇನ್ನೂ ಮೀನ ಮೇಷ ಎಣಿಸುತ್ತಾ ಕುಳಿತಿ­ರುವುದು ಭಾರತಕ್ಕೆ  ಕಿರಿಕಿರಿ ಉಂಟು ಮಾಡಿದೆ. ಘಟನೆ ನಡೆದು ಐದು ವರ್ಷಗಳು ಕಳೆದಿದ್ದರೂ ಅಲ್ಲಿನ ನ್ಯಾಯಾಲಯದಲ್ಲಿ ವಿಚಾರಣೆಯು ಇನ್ನೂ ಪ್ರಾಥಮಿಕ ಹಂತದಲ್ಲಿಯೇ ಇದೆ. ವಿಚಾ­ರಣೆ ಕೈಗೆತ್ತಿಕೊಂಡ ನ್ಯಾಯಾಧೀಶರು ಒಂದೋ ವರ್ಗವಾಗಿ ಹೋಗುತ್ತಾರೆ ಇಲ್ಲವೇ ರಜೆಯ ಮೇಲೆ ಹೋಗುವುದು ಸಾಮಾನ್ಯ­ವಾಗಿ­ಬಿಟ್ಟಿದೆ.

ಇವುಗಳೆಲ್ಲದರ ನಡುವೆ ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ ಮಹಮ್ಮದ್ ಇಫ್ತಿಕಾರ್ ಚೌಧರಿ ಅವರು ಈಚೆಗೆ ತಾವು ನಿವೃತ್ತ­­ರಾಗುವ ಮೊದಲು ಸಂವಿಧಾನದ ಮೌಲ್ಯ­­ಗಳನ್ನು ಎತ್ತಿ ಹಿಡಿದು ಅತ್ಯುತ್ತಮ ಕೆಲಸ­ವನ್ನೇ ಮಾಡಿದ್ದಾರೆ. ಎರಡೂ ದೇಶಗಳ ನಡುವೆ ಸಂಬಂಧ ಮಧುರ­ಗೊಳ್ಳಬೇಕೆಂದರೆ, ಮುಂಬೈ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಬೇಕೆನ್ನುವ ವಾದದಲ್ಲಿ ತಪ್ಪೇನಿದೆ?

ಮುಂಬೈ ದಾಳಿಗೆ ಸಂಬಂಧಿಸಿದಂತೆ ತಂತ್ರ­ಗಳನ್ನು ಹೆಣೆದವನು ಎಂದು ಭಾರತ ಶಂಕಿಸಿರುವ ಹಫೀಜ್ ಸಯೀದ್‌ನನ್ನು ಸಾಕ್ಷ್ಯಾ­ಧಾರಗಳ ಕೊರತೆ­ಯ ಕಾರಣ ನೀಡಿ, ಪಾಕ್ ನ್ಯಾಯಾ­ಲಯ ಆತನನ್ನು  ಬಿಡುಗಡೆಗೊಳಿಸಿದೆ.  ಆದರೆ ಆತ ಭಾರತದ ವಿರುದ್ಧ ಜಿಹಾದ್‌ಗೆ ಕರೆ ನೀಡಿ­ದ್ದಾನೆ. ಇವತ್ತು ಪಾಕಿಸ್ತಾನದ ವಿದೇಶಾಂಗ ನೀತಿ­ಯನ್ನು ಭಾರತದ ವಿರುದ್ಧ ರೂಪಿಸುವಲ್ಲಿ ಆತನ ಕೈವಾಡ ಇದೆ ಎಂದು ಹಲವರು ಹೇಳುತ್ತಿದ್ದಾರೆ.

ಇಂತಹ ಕೆಲವು ನಕಾರಾತ್ಮಕ ಅಂಶಗಳು ಎದುರಿಗಿದ್ದರೂ ಭಾರತದಾದ್ಯಂತ ಜನ­ಸಾಮಾನ್ಯರು ಪಾಕಿಸ್ತಾನದ ಬಗ್ಗೆ ಸಕಾರಾತ್ಮಕ ಭಾವನೆ­ಯನ್ನೇ ಹೊಂದಿದ್ದಾರೆ. ಪಾಕಿಸ್ತಾನಕ್ಕೆ ಹೋಗಿ ವಾಪಸಾದವರು ಅಲ್ಲಿನ ಜನಗಳ ಆತಿಥ್ಯ, ಸ್ನೇಹ, ಪ್ರೀತಿಯ ಕುರಿತು ಮನದುಂಬಿ ಮಾತನಾಡು­ವುದನ್ನು ನಾನು ಕೇಳಿದ್ದೇನೆ. ಭಾರತಕ್ಕೆ ಭೇಟಿ ನೀಡಿದ ಪಾಕ್ ಮಂದಿ ಕೂಡಾ ಭಾರತೀಯ­ರ ಬಗ್ಗೆ ಅದೇ ಭಾವನೆಯನ್ನು ವ್ಯಕ್ತ­ಪಡಿಸಿದ್ದಾರೆ.

ಈ ಎರಡೂ ದೇಶಗಳ ನಡುವೆ ಸಂಬಂಧ ಸೌಹಾರ್ದಮಯವಾಗಿರುವುದಕ್ಕೆ ಅಡ್ಡ­ಗಾಲಾ­­ಗಿರುವುದು ಕೆಲವು ರಾಜಕಾರಣಿ­ಗಳು ಮತ್ತು ಅಧಿಕಾರಿವರ್ಗ ಎಂದೆನಿಸ­ತೊಡ­ಗಿದೆ. ಸಂಬಂಧ­ಗಳ ನಡುವೆ ಬೆಂಕಿ ಹೊತ್ತಿಸಿ ತಾವು ಬೆಚ್ಚಗೆ ಕುಳಿತುಕೊಳ್ಳುವ ಜಾಯಮಾನ ಅವರದು.
ಇಂತಹದೇ ಮನೋಭಾವದ ಅಧಿಕಾರಿ­ಯೊಬ್ಬರು ಈಚೆಗೆ ಪತ್ರಿಕಾ ಹೇಳಿಕೆಯೊಂದನ್ನು ನೀಡಿ ಕಾಶ್ಮೀರ ಸಮಸ್ಯೆಯು ಭಾರತ ಮತ್ತು ಪಾಕಿಸ್ತಾನದ ನಡುವಣ ನಾಲ್ಕನೇ ಯುದ್ಧಕ್ಕೆ ಕಾರಣ­­ವಾಗಲಿದೆ ಎಂದು ಪ್ರಧಾನಿ ನವಾಜ್ ಷರೀಫ್ ತಿಳಿಸಿದ್ದಾರೆ ಎಂದು ಹೇಳಿದರು. ಆದರೆ ನವಾಜ್ ಅವರ ಕಚೇರಿ ಇದಕ್ಕೆ ತದ್ವಿರುದ್ಧವಾದ ಹೇಳಿಕೆ­­ಯನ್ನು ಪ್ರಕಟಿಸಿತು. 

ಅಷ್ಟರಲ್ಲಿ ನೀರು ಕದಡಿ ಹೋಗಿತ್ತು. ಪ್ರಧಾನಿ ಮನಮೋಹನ್ ಸಿಂಗ್ ಅವರು ಹೇಳಿಕೆ­ಯೊಂದನ್ನು ನೀಡಿ ‘ಪಾಕಿ­ಸ್ತಾನ­ವು ಭಾರತದ ವಿರುದ್ಧದ ಯುದ್ಧ­ದಲ್ಲಿ ಗೆಲುವು ಪಡೆಯು­ವುದನ್ನಂತೂ ನನ್ನ ಜೀವಿತಾ­ವಧಿಯಲ್ಲಿ ಕಾಣಲು ಸಾಧ್ಯವಿಲ್ಲ, ಬಿಡಿ’ ಎಂದರು. ಮನಮೋಹನ್ ಸಿಂಗ್ ಅವರಂತಹ  ಮುತ್ಸದ್ದಿಯೇ ಇಂತಹ­ದ್ದೊಂದು ಹೇಳಿಕೆ ನೀಡಿ­ದ್ದೊಂದು ವಿಪರ್ಯಾಸ. ಮುಂಬರುವ ಸಾರ್ವ­ತ್ರಿಕ ಚುನಾ­ವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಶಕ್ತಿ ಪ್ರದರ್ಶನದ ನೆಲೆಯಲ್ಲಿ ಪ್ರಧಾನಿ ಸಿಂಗ್ ಇಂತಹ ಹೇಳಿಕೆ ನೀಡಿರಬಹುದೆನ್ನಿಸುತ್ತದೆ.

ಬಿಜೆಪಿಯಂತಹ ಪಕ್ಷವೇ ಈಚೆಗೆ ಪಾಕಿಸ್ತಾನ ವಿರುದ್ಧದ ಹೇಳಿಕೆಗಳಿಗೆ ತನ್ನ ಶ್ರಮ ವ್ಯಯ ಮಾಡುತ್ತಿಲ್ಲ. ಈ ವಿಷಯಕ್ಕೆ  ಸಾರ್ವಜನಿಕರ ಪ್ರತಿಕ್ರಿಯೆ ನೀರಸ ಎಂಬುದು ಆ ಪಕ್ಷಕ್ಕೆ ಮನ­ದಟ್ಟಾ­­ಗಿಬಿಟ್ಟಿದೆ. ಪರಿಸ್ಥಿತಿ ಹೀಗಿರುವಾಗ ಪ್ರಧಾನಿ­ಯವರಿಗೆ ಅಥವಾ ಅವರು ಪ್ರತಿನಿಧಿ­ಸುವ ಕಾಂಗ್ರೆಸ್ ಪಕ್ಷಕ್ಕೆ ಈ ವಾಸ್ತವ ಅರಿವಾಗಿಲ್ಲ  ಎನ್ನುವು­ದೊಂದು ವಿಪರ್ಯಾಸ. ಪಕ್ಷದಲ್ಲಿರುವ ಕೆಲವರು 1947ರ ಇತಿಹಾಸ, ಆಗ ನಡೆದ ದೇಶ ವಿಭಜನೆ, ಹತ್ಯಾಕಾಂಡಗಳೆಲ್ಲದರ ಬಗ್ಗೆ ಕಣ್ಣಿಗೆ ಕಟ್ಟಿದಂತೆ ಮಾತನಾಡುವುದಿದೆ. ಅದೇನೇ ಇದ್ದರೂ ಪಾಕ್ ವಿರೋಧಿ ವಿಚಾರಗಳು ಈಗ ಲಾಭದಾಯಕವಂತೂ ಅಲ್ಲವೇ ಅಲ್ಲ.

ಪಾಕಿಸ್ತಾನದಲ್ಲಿ ಮಾಧ್ಯಮಗಳು ಭಾರತದ ವಿರುದ್ಧ ಪ್ರಚಾರ ಮಾಡುತ್ತಿವೆ ಎಂದು ಭಾರತೀ­ಯ ಮಾಧ್ಯಮಗಳು ಹಲವು ಸಲ ಆರೋಪಿಸಿವೆ. ಅದು ನಿಜವಲ್ಲ. ಈ ವಿಷಯದಲ್ಲಿ ನಾವು ಎರಡೂ ದೇಶಗಳ ಸರ್ಕಾರವನ್ನೇ ಟೀಕಿಸ­ಬೇಕಾ­ಗುತ್ತದೆ. ಎರಡೂ ದೇಶಗಳು ಕೇವಲ ಒಂದು ಸುದ್ದಿ ಸಂಸ್ಥೆಗೆ ಮತ್ತು ಒಂದು ದಿನಪತ್ರಿಕೆಗೆ ವೀಸಾ ನೀಡಿವೆ. ಅಲ್ಲಿ ಒಂದು ಟಿ.ವಿ.  ಚಾನೆಲ್‌ ಇದ್ದು, ಅದರಲ್ಲಿ ‘ಸಮರೋತ್ಸಾಹ’ವೇ ಎದ್ದು ಕಾಣು­ತ್ತದೆ. ಆದರೆ ಭಾರತದಲ್ಲಿ ಮೂನ್ನೂರಕ್ಕೂ ಹೆಚ್ಚು ಚಾನೆಲ್‌ಗಳಿದ್ದು, ಅವು ಪಾಕಿಸ್ತಾನ­ದ ಒಂದು ಚಾನೆಲ್‌ ಬೇರೆ ದೇಶಗಳ ಬಗ್ಗೆ ಏನು ಮಾಡುತ್ತಿದೆಯೋ ಅದನ್ನು ಈ ಎಲ್ಲಾ ಚಾನೆಲ್‌ಗಳು ಮಾಡುತ್ತವೆ!

ಅದೇನೇ ಇರಲಿ, ಭಯೋತ್ಪಾದಕರ ವಿರುದ್ಧ­ದ ಹೋರಾಟದಲ್ಲಿ ಈ ಎರಡೂ ದೇಶಗಳು ಹೆಗಲಿಗೆ ಹೆಗಲು ನೀಡಿ ಹೋರಾಡಬಹುದು. ಇದಕ್ಕೆ ಸಂಬಂಧಿಸಿದಂತೆ ನವಾಜ್‌ ಷರೀಫ್‌ ಈಚೆಗೆ ಪ್ರಸ್ತಾಪಿಸಿದ ಸಂಗತಿಯೊಂದು ಗಮ­ನಾರ್ಹ. ಭಾರತ ಮತ್ತು ಪಾಕಿಸ್ತಾನಗಳ ಭದ್ರತಾ ಸಲಹೆ­ಗಾರರ ಮಟ್ಟದ ಸಭೆ ನಿರಂತರವಾಗಿ ನಡೆಯಬೇಕು ಮತ್ತು ಅಲ್ಲಿ ಭಯೋತ್ಪಾದಕರ ವಿರುದ್ಧದ ಹೋರಾಟಕ್ಕೆ ಸಂಬಂಧಿಸಿದಂತೆ ಜಂಟಿ ಕಾರ್ಯತಂತ್ರವನ್ನು ಹೆಣೆಯಬೇಕು ಎಂದು ನವಾಜ್‌ ಷರೀಫ್ ಸಲಹೆ ನೀಡಿದ್ದರು.

ಕೊನೆಗೂ ಎರಡೂ ದೇಶಗಳ ನಡುವೆ ಈ ದಿಸೆಯಲ್ಲಿ ಸಕಾರಾತ್ಮಕ ಬೆಳವಣಿಗೆಯೊಂದು ನಡೆದಿದೆ. ಉಭಯ ದೇಶಗಳ ಸೇನಾ ಕಾರ್ಯಾ­ಚರಣೆಗಳ ಮಹಾ ನಿರ್ದೇಶಕರುಗಳ ಮಟ್ಟದ ಸಭೆ­ಯೊಂದನ್ನು ನಿಗದಿ ಮಾಡಲಾಗಿದೆ. ಆ ಸಭೆ­ಯಲ್ಲಿ ಗಡಿ ನಿಯಂತ್ರಣ ರೇಖೆಯ ಪಾವಿತ್ರ್ಯ­ವನ್ನು ಕಾಪಾಡುವ ನಿಟ್ಟಿನಲ್ಲಿ ಚರ್ಚಿಸಲಾ­ಗು­ವುದು. ಇದೊಂದು ಸರಿದಿಕ್ಕಿನಲ್ಲಿ ನಡೆಯುತ್ತಿ­ರುವ ಪ್ರಯತ್ನವಾಗಿದೆ.

ಎರಡೂ ದೇಶಗಳ ನಡುವೆ ಇಂತಹ ಅದೆಷ್ಟೇ ಚಟುವಟಿಕೆ ನಡೆಯಬಹುದು. ಆದರೆ ಎರಡೂ ದೇಶಗಳ ಮಂದಿ ಪರಸ್ಪರ ನಂಬುವಂತಹ ವಾತಾ­ವರಣ ನಿರ್ಮಾಣಕ್ಕೆ ಪೂರಕವಾದಂತಹ ಕೆಲಸ ಆಗ­ಬೇಕಿದೆ. ಇದೇ ಮಾತನ್ನು ಸ್ವತಃ  ನವಾಜ್‌ ಅವರೇ ಒಪ್ಪಿಕೊಂಡಿದ್ದಾರೆ. ಆದರೆ ಇಂತಹ ಪ್ರಯತ್ನಗಳಿಗೆ ಕಾಶ್ಮೀರ ಸಮಸ್ಯೆಯೇ ತೊಡಕಾ­ಗಿದೆ ಎಂದು ಪಾಕಿಸ್ತಾನದಲ್ಲಿಯೇ ಬಹಳ ಮಂದಿ ನಂಬಿದ್ದಾರೆ. ಆದರೆ ಇದೊಂದು ‘ಲಕ್ಷಣ ಅಷ್ಟೇ, ಕಾಯಿಲೆಯಲ್ಲ’.

ಒಂದು ವೇಳೆ  ಕಾಶ್ಮೀರ ಸಮಸ್ಯೆ ಬಗೆಹರಿಯಿತು ಎಂದಿಟ್ಟು­ಕೊಳ್ಳಿ, ಎರಡೂ ದೇಶಗಳ ನಡುವೆ ಇನ್ನೊಂದು ಸಮಸ್ಯೆ ಧುತ್ತೆನ್ನುವುದಂತೂ ನಿಜ. ಪರಸ್ಪರ ನಂಬಿಕೆಯ ಕೊರತೆಯಿಂದಲೇ ಇಂತಹ ಪರಿಸ್ಥಿತಿ ನಿರ್ಮಾಣ­ವಾಗುತ್ತದೆ.  ಹೀಗಾಗಿ ಭಾರತ – ಪಾಕ್‌ ನಡು­­ವಣ ಸಂಬಂಧ ಸುಧಾರಣೆಗೆ ಕಾಶ್ಮೀರ ವಿವಾ­ದವೇ ತೊಡಕು ಎನ್ನುವಂತೆಯೂ ಇಲ್ಲ.

ತಮ್ಮಲ್ಲಿರುವ ಅಣ್ವಸ್ತ್ರಗಳ ಸಂಗ್ರಹ ಯಾವ ಮಟ್ಟಿಗೆ ಕೆಡುಕು ಮಾಡುವಂತಹದ್ದು ಎಂಬ ಅರಿವು ಎರಡೂ ದೇಶಗಳಿಗೇ ಇದ್ದೇ ಇದೆ. ಪರಿಸ್ಥಿತಿ ಈ ರೀತಿ ಇರುವಾಗ ಎರಡೂ ದೇಶಗಳು ತಮ್ಮ ನಡುವಣ ಭಿನ್ನಾಭಿಪ್ರಾಯಗಳನ್ನು ಶಾಂತ ರೀತಿಯಿಂದಲೇ ಬಗೆಹರಿಸಿಕೊಳ್ಳುವುದು ಒಳ್ಳೆಯ ತೀರ್ಮಾನ. 1965ರ ಸಮರದ ನಂತರ ತಾಷ್ಕೆಂಟ್‌ನಲ್ಲಿ ಉಭಯ ದೇಶಗಳ ನಡುವೆ ನಡೆದ ಒಪ್ಪಂದ­ದಲ್ಲಿ ಈ ಕುರಿತೂ ಚರ್ಚಿಸಿ ಒಂದು ತೀರ್ಮಾನಕ್ಕೆ ಬರಲಾಗಿತ್ತು.

ಈ ದಿಸೆ-­ಯಲ್ಲಿ ಆಗಿನ ಪ್ರಧಾನಿ ಲಾಲ್‌ ಬಹದ್ದೂರ್‌ ಶಾಸ್ತ್ರಿ ಮಹತ್ವದ ಹೆಜ್ಜೆಯನ್ನಿರಿಸಿದ್ದನ್ನು ಯಾರೂ ಮರೆಯುವಂತಿಲ್ಲ. ಆಗ ಪಾಕಿಸ್ತಾನದ ಸೇನಾ­ಡಳಿತದ ಮುಖ್ಯಸ್ಥರಾಗಿದ್ದ ಜನರಲ್‌ ಅಯೂಬ್‌ ಖಾನ್‌,  ವಿಶ್ವಸಂಸ್ಥೆಯ ನಿಯಮಗಳಿಗೆ ಅನು­ಸಾರ ನಡೆದುಕೊಳ್ಳುವುದಾಗಿಯೂ  ಹೇಳಿದ್ದರು. ಅಂದು ಅವರಿಬ್ಬರೂ ನೀಡಿದ ಜಂಟಿ ಹೇಳಿಕೆ­ಯಲ್ಲಿ ‘ಮತ್ತೆ ಶಸ್ತ್ರಾಸ್ತ್ರಗಳ ಮೊರೆ ಹೋಗು­ವುದಿಲ್ಲ’ ಎಂದು ಘೋಷಿಸಿದ್ದರು.

ಇದೀಗ ಇಸ್ಲಾಮಾಬಾದ್‌ನಲ್ಲಿ ಆಡಳಿತ­ಗಾರ­ರು ‘ಗಡಿ ನಿಯಂತ್ರಣ ರೇಖೆಯನ್ನು ಗೌರವಿಸು­ವುದು ಎರಡೂ ಸರ್ಕಾರಗಳ ಜವಾಬ್ದಾರಿ­ಯಾಗಿದೆ’ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ದೆಹಲಿಯ ಆಡಳಿತ­ಗಾರರು ‘ಗಡಿ ನಿಯಂತ್ರಣ ರೇಖೆಯ ವಿಷಯ ಸೇನೆಗೆ ಸಂಬಂಧಿಸಿದ್ದು, ಇದು ರಾಜಕೀಯ ವಿಷಯ­ವಲ್ಲ’ ಎಂದಿದ್ದಾರೆ.

ಇಂತಹದ್ದೊಂದು ಹೇಳಿಕೆ ಪಾಕಿಸ್ತಾನದ ಕಡೆಯಿಂದ ಬಂದಿದ್ದರೆ ನಮಗೆ ಪರಿಸ್ಥಿತಿ ಏನೆಂದು ಅರ್ಥವಾಗುತಿತ್ತು. ಏಕೆಂದರೆ ಅಲ್ಲಿ ಸೇನೆಯದೇ ಮಾತು ನಡೆಯುವುದಲ್ಲವೇ? ಆದರೆ ಇದೀಗ ಇಂತಹದ್ದೊಂದು ಹೇಳಿಕೆಯನ್ನು ಭಾರತ ಸರ್ಕಾರವೇ ನೀಡಿದೆ. ಇದಕ್ಕೇನನ್ನುವುದು ? ಗಡಿ ನಿಯಂತ್ರಣ ರೇಖೆಯ ಬಗ್ಗೆ ಶಿಮ್ಲಾದಲ್ಲಿ ಆಗಿನ ಪ್ರಧಾನಿ ಇಂದಿರಾ ಗಾಂಧಿ ಮತ್ತು ಪಾಕ್‌ನ ಆಡಳಿತದ ಮುಖ್ಯಸ್ಥ ಜುಲ್ಫಿಕರ್‌ ಅಲಿ ಭುಟ್ಟೊ ನಡುವೆ ಮಾತುಕತೆ ನಡೆದಿತ್ತು.

ಆಗ ಈ ರೇಖೆಯ ಬಗ್ಗೆ ಒಂದು ಖಚಿತವಾದ ನಿರ್ಧಾರಕ್ಕೆ ಬರ­ಲಾಗಿತ್ತು. ಆದರೆ ಈಗ ದೆಹಲಿಯಲ್ಲಿರುವ ಆಡಳಿತಗಾರರು ಗಡಿ ನಿಯಂತ್ರಣ ರೇಖೆಯ ವಿಷಯವನ್ನು ಸೇನೆಯ ಜವಾಬ್ದಾರಿ ಎನ್ನುತ್ತಿರು­ವುದು ಅದೆಷ್ಟರ ಮಟ್ಟಿಗೆ ಸರಿ? ಉಭಯ ದೇಶಗಳ ನಡುವಣ ಸಂಬಂಧ ಸುಧಾರಣೆಯ ನಿಟ್ಟಿನಲ್ಲಿ ಭಾರತವೂ ಅರ್ಥಪೂರ್ಣ ನಿರ್ಧಾರ ತೆಗೆದುಕೊಳ್ಳಬೇಕಿದೆಯಲ್ಲವೇ? 
ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT