ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾರತದ ರಾಜಕಾರಣದಲ್ಲಿ ಹೊಸ ಆಯಾಮ

Last Updated 21 ಜನವರಿ 2014, 19:30 IST
ಅಕ್ಷರ ಗಾತ್ರ

ಭಾರತದ ರಾಜಕಾರಣ ಹೊಸ ಆಯಾ­ಮ­­ವೊಂದನ್ನು ಪಡೆದುಕೊಳ್ಳುವತ್ತ ದಾಪು­ಗಾಲಿಡುತ್ತಿದೆ. ಇಲ್ಲಿ ಎಲ್ಲವೂ ಸರಿ ದಿಕ್ಕಿನಲ್ಲಿದೆ, ನಮ್ಮ ಮೂಗಿನ ನೇರಕ್ಕಿದೆ ಎಂದು­ಕೊಳ್ಳ­ಬೇಕೆಂದೇನಿಲ್ಲ. ಅದೇನೇ ಇದ್ದರೂ, ಬದ­ಲಾವಣೆಯ ಗಾಳಿಯಂತೂ ಬೀಸುತ್ತಿದೆ. ಸರ್ಕಾ­ರೇತರ ಸಂಸ್ಥೆಗಳ ಸಾವಿರಾರು ಕಾರ್ಯಕರ್ತರ ನೇತೃತ್ವದಲ್ಲಿ ಹತ್ತು ಹಲವು ಚಳವಳಿಗಳು, ಪ್ರತಿ­ಭಟನೆಗಳು ನಡೆದು, ಆ  ಮೂಲಕ ಜನಮನ ತಲು­ಪಿದ ಅವರು ಆಮ್‌ ಆದ್ಮಿ ಪಕ್ಷದ ಸ್ವರೂಪ­ದಲ್ಲಿ ಎದ್ದು ನಿಂತಿದ್ದಾರೆ.

ಈ ಸಂದರ್ಭದಲ್ಲಿ ಅದೇ ಹಳೆಯ ವೈನ್‌ ತುಂಬಿ­­ಟ್ಟು­ಕೊಂಡಿರುವ ಅದೇ ಹಳೆಯ ವಿಭಿನ್ನ­ವಾದ ಎರಡು ಶೀಷೆಗಳು ಎಂದೇ ನಾವು ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳನ್ನು ಅರ್ಥ್ಯೆಸ­ಬಹು­ದಾಗಿದೆ. ಇಂತಹ ‘ಹಳೆಯ ಶೀಷೆ’ಗಳಿಗೆ ಅಗ­ತ್ಯ­ವಾಗಿದ್ದ ಪರ್ಯಾಯವೊಂದನ್ನು ಜನ ‘ಆಮ್‌ ಆದ್ಮಿ’ಗಳಲ್ಲಿ ಕಂಡು ಕೊಂಡಿದ್ದರೆ ಅಚ್ಚರಿ ಏನಲ್ಲ.

ರಾಜ್ಯಗಳಲ್ಲಿ ಸಾಕಷ್ಟು ಪ್ರಭಾವಿಯಾಗಿದ್ದ ಪ್ರಾದೇಶಿಕ ಪಕ್ಷಗಳು ಇಂತಹ ಬೆಳವಣಿಗೆಗಳಿಂದ ಈಚೆ­ಗಿನ ದಿನಗಳಲ್ಲಿ ತಾವು ಪಡೆದು­ಕೊಂಡಿ­ದ್ದನ್ನು ಕಳೆದುಕೊಳ್ಳುತ್ತಿರುವುದೇ ಹೆಚ್ಚು. ಅಂತಹ ಪ್ರಾದೇಶಿಕ ಪಕ್ಷಗಳ ಮುಖ್ಯ ಬಂಡವಾಳವಾಗಿದ್ದ ಭಾಷೆ, ಪ್ರಾದೇಶಿಕತೆ, ಧರ್ಮ ಇತ್ಯಾದಿ ಅಂಶ­ಗಳೆಲ್ಲಾ ಈಗ ಸವಕಲು ಎನಿಸತೊಡಗಿವೆ. ಜಾತಿ, ಜನಾಂಗ ಇತ್ಯಾದಿ ವಿಷಯಗಳನ್ನೇ ಮುಂದಿಟ್ಟು­ಕೊಂಡು ರಾಜಕಾರಣ ನಡೆಸುತ್ತಿದ್ದವರ ನಡುವೆ ಇದ್ದ ಧ್ರುವೀಕರಣ ಪ್ರಕ್ರಿಯೆಗಳೆಲ್ಲಾ ಅಪ್ರಸ್ತುತ ಎನಿಸುವಂತೆ ದೆಹಲಿ ವಿಧಾನಸಭಾ ಚುನಾವಣಾ ಫಲಿತಾಂಶ ಬಂದಿತು. ಆಮ್‌ ಆದ್ಮಿ ಪಕ್ಷದ (ಎಎಪಿ)  ಜಯಭೇರಿಯು ಮತದಾರರ ಹೊಸ ಆಲೋಚನೆಯ ಸಂಕೇತದಂತಿದೆ.

ಎಎಪಿ ಯಶಸ್ಸನ್ನು ಕಂಡಾಗ ಅದರಿಂದ ತಾವೂ ಕಲಿಯುವುದು ಬಹಳಷ್ಟಿದೆ ಎಂಬುದನ್ನು ಸ್ವತಃ ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳ ಕೆಲವು ಮುಖಂಡರೇ ಒಪ್ಪಿಕೊಂಡಿದ್ದಾರೆ.

ಎಎಪಿ ಒಳಗೆ ಮಾರ್ಕ್ಸಿಸ್ಟರು ಅಥವಾ ಮಾವೊವಾದಿಗಳಿದ್ದರೂ ಪರವಾಗಿಲ್ಲ ಬಿಡಿ, ಅವರು ಜನರ ಭಾವನೆಗಳಿಗೆ ಸ್ಪಂದಿಸು­ತ್ತಿದ್ದಾ­ರಲ್ಲಾ ಅಷ್ಟೇ ಸಾಕು ಎನ್ನುವಂತಹ ಮನಸ್ಥಿತಿಗೆ ನಾವು ಬಂದು ಬಿಟ್ಟಿದ್ದೇವೆ. ಭಾರತಕ್ಕೆ ಸ್ವಾತಂತ್ರ್ಯ ಬಂದು ಆರೂವರೆ ದಶಕಗಳು ಉರುಳಿವೆ. ಆದರೂ ಈ ನೆಲದ ಅರ್ಧಕ್ಕೂ ಹೆಚ್ಚಿನ ಜನ­ಸಂಖ್ಯೆ ಬಡತನದ ರೇಖೆಯ ಕೆಳಗಿದೆ. ಇಂತಹ ಸಂದಿಗ್ಧ­ದಲ್ಲಿ ಬಡವರನ್ನು ಆರ್ಥಿಕವಾಗಿ ಮೇಲೆ­ತ್ತುವ ಕೈಂಕರ್ಯದಲ್ಲಿ ಎಎಪಿ ಯಾವ ರೀತಿ ಕಾರ್ಯ­ಕ್ರಮಗಳನ್ನು ಹಮ್ಮಿಕೊಳ್ಳುತ್ತದೆ ಎನ್ನುವುದು ಮುಖ್ಯವಾಗುತ್ತದೆ.

ಈ ಎಲ್ಲಾ ಬೆಳವಣಿಗೆಗಳ ನಡುವೆ ಎಡ­ಪಕ್ಷ­ಗಳು ಗೊಂದಲಕ್ಕೆ ಬಿದ್ದಿರುವುದಂತೂ ನಿಜ. ಎಡ­ಪಕ್ಷ­ಗಳು ಈ ಎಲ್ಲಾ ಬೆಳವಣಿಗೆಗಳಿಂದ ದಿಕ್ಕು ತೋಚ­­ದಂತಾಗಿರುವುದನ್ನು ಅಲ್ಲಗಳೆ­ಯು­ವಂ­ತಿಲ್ಲ. ಸಮಸಮಾಜ ನಿರ್ಮಾಣದ ಮಾತು­ಗಳು ಘೋಷಣೆಯಾಗಷ್ಟೇ ಉಳಿದಿರುವ ಈ ಸಂದರ್ಭ­ದಲ್ಲಿ ಆಮ್‌ ಆದ್ಮಿ ಪಕ್ಷದವರು ತಳ­ಮಟ್ಟ­ದಲ್ಲಿರುವ ಜನರನ್ನು ಮೇಲೆತ್ತುವ ಕಾರ್ಯ­­ಕ್ರಮಗಳೊಂದಿಗೆ ಬಂದಿರುವುದು ಗಮನಾರ್ಹ.

ಕಮ್ಯುನಿಸ್ಟರು ಪಶ್ಚಿಮ ಬಂಗಾಳದಲ್ಲಿ ಮೂರೂ­ವರೆ ದಶಕಗಳ ಕಾಲದ ತಮ್ಮ ಅಧಿಕಾ­ರಾ­­ವಧಿಯಲ್ಲಿ ಏನು ಮಾಡಿದ್ದಾರೆ ಎಂಬ ಪ್ರಶ್ನೆ ಧುತ್ತೆನ್ನುತ್ತಿದೆ. ಅಲ್ಲಿ ಕಮ್ಯುನಿಸ್ಟರು ಅಭಿವೃದ್ಧಿ ಮಾಡಿ­­ರುವುದಾಗಿ ಸೋಗು ಹಾಕಿದ್ದರಷ್ಟೇ ಎಂಬ ಮಾತು­­ಗಳೇ ಕೇಳಿ ಬರುತ್ತಿವೆ. ಅವರ ಒಡಲ ಒಳಗೆ ಹೊಕ್ಕು ನೋಡಿದರೆ, ಅವರೂ ವ್ಯವಸ್ಥೆಯ ಭಾಗ­ವಾಗಿದ್ದುಕೊಂಡು ಎಲ್ಲದರೊಂದಿಗೆ ಹೊಂದಿ­ಕೊಂಡು ನಡೆದರು ಎಂದು ಗೊತ್ತಾ­ಗುತ್ತದೆ. ಎಎಪಿ ಇದೀಗ ಒಂದೇ ಒಂದು ವರ್ಷ­ದಲ್ಲಿ ಮಾಡಿ ತೋರಿಸುತ್ತೇವೆಂದು ಎದೆ ತಟ್ಟಿ ನಿಂತಿ­ರುವ ಜನಪರ ಕಾರ್ಯಕ್ರಮ ಗಳನ್ನು ಕಮ್ಯು­ನಿಸ್ಟರು ಅವರ ಸುದೀರ್ಘ ಅಧಿಕಾರಾವಧಿಯಲ್ಲಿ ಮಾಡಲು ಸಾಧ್ಯವಾಗಲಿಲ್ಲವಲ್ಲ.

ಇನ್ನು ಕಾಂಗ್ರೆಸ್‌ ಮತ್ತು ಬಿಜೆಪಿ ಪಕ್ಷಗಳಂತೂ ದೇವ­­ಸ್ಥಾನಗಳ ಮಹಂತರಂತೆ ಕಾಣಿಸುತ್ತಿವೆ. ಆ ಪಕ್ಷ­ಗಳು ಕಲಿತದ್ದೂ ಏನಿಲ್ಲ, ಮರೆತದ್ದೂ ಏನಿಲ್ಲ. ಹೊಸ ರಾಜಕೀಯ ಬೆಳವಣಿಗೆಗಳನ್ನು ಕಂಡು ತಾವು ಸುಧಾರಿಸಿಕೊಳ್ಳುವ ಬದಲು ಕಾಂಗ್ರೆಸ್‌, ಬಿಜೆಪಿ­­ಗಳು ಎಎಪಿ ವಿರುದ್ಧವೇ ಕಿಡಿ ಕಾರ­ತೊಡ­ಗಿವೆ. ‘ಆಮ್‌ ಆದ್ಮಿ ಬೆಳವಣಿಗೆ ಕ್ಷಣಿಕ. ಇದು ನೀರ ಮೇಲಣ ಗುಳ್ಳೆಯಂತೆ. ಮುಂದಿನ ಸಾರ್ವ­ತ್ರಿಕ ಚುನಾವಣೆಯ ವೇಳೆಗೆ ಈ ಗುಳ್ಳೆ ಒಡೆದು ಹೋಗು­­ತ್ತದೆ...’ ಎಂದೆಲ್ಲಾ ಆ ಪಕ್ಷಗಳ ಮುಖಂ­ಡರು ಮಾತಾ­ಡಿಕೊಳ್ಳು­ತ್ತಿರು­ವು­ದೊಂದು ವಿಪ­ರ್ಯಾಸ. ಲಕ್ಷಾಂತರ ಮಂದಿ ಆಮ್‌ ಆದ್ಮಿ ಆಂದೋ­­ಲನದ ಜತೆಗೆ ಸಾಗಿದ್ದನ್ನು ಅಷ್ಟೊಂದು ಲಘುವಾಗಿ ಪರಿಗಣಿಸುವಂತಹದ್ದೇನಲ್ಲ.

ಬಿಜೆಪಿಯು ಈಗಾಗಲೇ ನರೇಂದ್ರ ಮೋದಿ ಅವ­ರನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸಿದೆ. ಆದರೆ ಇವತ್ತು ಮೋದಿ ಅಲೆ ಹಿಂದಿನಂತಿಲ್ಲ. ಆದರೂ ಮಾಧ್ಯಮ ಮಾತ್ರ ಅಂತಹದ್ದೊಂದು ಅಲೆ ಇದೆ ಎಂದೇ ಬಿಂಬಿಸುತ್ತಿದೆ. ಮೋದಿ ಅಲೆಯ ಎದುರು ಆಮ್‌ ಆದ್ಮಿ ಅಲೆ ಗಮನ ಸೆಳೆ­ಯು­ತ್ತಿ­ರುವುದನ್ನು ಅಲ್ಲಗಳೆಯುವಂತಿಲ್ಲ. ಪರಿಸ್ಥಿತಿ ಈ ರೀತಿ ಇರುವುದರಿಂದಲೇ ಬಿಜೆಪಿಯು ಎಎಪಿ ಬಗ್ಗೆ ಹೆಚ್ಚು ಎಚ್ಚರ ವಹಿಸಬೇಕೆಂದು ಆರ್‌ಎಸ್‌ಎಸ್‌ ಮುಖಂಡರು ಹೇಳುತ್ತಿದ್ದಾರೆ.

ದೆಹಲಿ­­ಯಲ್ಲಿ ಮೂರನೇ ಸ್ಥಾನಕ್ಕೆ ಕುಸಿದ ಕಾಂಗ್ರೆಸ್‌­ಗಿಂತ ಎಎಪಿಯೇ ಹೆಚ್ಚು ಶಕ್ತಿಶಾಲಿ ಎಂಬ ವಾಸ್ತವ ಆರ್‌ಎಸ್‌ಎಸ್‌ ಮಂದಿಗೆ ಗೊತ್ತಿಲ್ಲ­­ದ್ದೇನೂ ಅಲ್ಲ. ಈ ನಡುವೆ ನರೇಂದ್ರ ಮೋದಿ ಅವರನ್ನು ತಡೆಯುವ ಉದ್ದೇಶದಿಂದ ಕಾಂಗ್ರೆಸ್‌, ಎಎಪಿಗೆ ಬೆಂಬಲ ನೀಡಿದೆ ಎಂದರೆ ಅತಿ­ಶ­­ಯೋಕ್ತಿಯಂತೂ ಅಲ್ಲ. ದೆಹಲಿ ವಿಧಾನ­ಸಭೆ­­ಯಲ್ಲಿ ಮರಳಿ ಅಧಿಕಾರದ ಗದ್ದುಗೆ ಏರಲು ಸದ್ಯ­ಕ್ಕಂತೂ ಸಾಧ್ಯವಿಲ್ಲ ಎಂಬ ವಾಸ್ತವ ಕಾಂಗ್ರೆ­ಸ್‌­ಗೆ ಚೆನ್ನಾಗಿ ಗೊತ್ತಿರುವುದರಿಂದ ಅದು ಈ ನಿರ್ಧಾರ ತೆಗೆದುಕೊಂಡಿತು. ಮೋದಿ ಮುಂದಿನ ದಿನಗಳಲ್ಲಿ ಕೇಂದ್ರದ ಗಾದಿಗೆ ಏರು­ವು­ದನ್ನು ತಡೆಯಲು ಕಾಂಗ್ರೆಸ್‌ ತನಗೆ ಸಿಗುವ ಯಾವುದೇ ಅವಕಾಶವನ್ನೂ ವ್ಯರ್ಥ ಮಾಡುವುದಿಲ್ಲ.

ಇವತ್ತು ಸಾರ್ವಜನಿಕ ಬದುಕನ್ನು ಭ್ರಷ್ಟಾ­ಚಾರ ಇನ್ನಿಲ್ಲದಂತೆ ಕಾಡುತ್ತಿದೆ.  ಇದೀಗ ಮೌಲ್ಯ­ಗಳ ಬಗ್ಗೆ ಕಾಂಗ್ರೆಸ್‌ ಮತ್ತು ಬಿಜೆಪಿಗಳು ಅದೆಷ್ಟೇ ಮಾತನಾಡಿದರೂ, ಆ ಪಕ್ಷಗಳಲ್ಲಿ ಅನೇಕ ಮಂದಿ ಕಳಂಕಿತ ಮುಖಂಡರಿದ್ದಾರೆ ಎನ್ನುವುದು ನಿಜ. ಕಾಂಗ್ರೆಸ್‌ ಪಕ್ಷ ಇವತ್ತಿಗೂ ಹಿಮಾಚಲ ಪ್ರದೇಶದ ಮುಖ್ಯಮಂತ್ರಿ ವೀರಭದ್ರ ಸಿಂಗ್‌ ಅವರ ವಿರುದ್ಧ ಕ್ರಮ ಕೈಗೊಳ್ಳಲು ಹಿಂದೇಟು ಹೊಡೆ­ಯುತ್ತಲೇ ಇದೆ.

ಹಿಮಾಚಲದಲ್ಲಿ ದೊಡ್ಡ ಮಟ್ಟದ ಅವ್ಯವಹಾರವೊಂದರಲ್ಲಿ ಭಾಗಿ­ಯಾಗಿ­ರುವ ಕಂಪೆನಿಯೊಂದರ ಬಹಳಷ್ಟು ಷೇರು­ಗಳು ವೀರಭದ್ರ ಸಿಂಗ್‌ ಅವರ ಸಮೀಪ ಬಂಧು­ಗಳ ಬಳಿಯೇ ಇರುವುದು ಸಾಬೀತಾಗಿದೆ.  ಭ್ರಷ್ಟಾ­ಚಾರದ ವಿರುದ್ಧ ಮಾತನಾಡುತ್ತಿರುವ ಮೋದಿ ಅವರ ಸಚಿವ ಸಂಪುಟದಲ್ಲಿಯೇ ಕಳಂ­ಕಿತ ವ್ಯಕ್ತಿಯೊಬ್ಬರಿದ್ದಾರೆ. ಅವರು ಅಪರಾಧಿ ಎಂದು ನ್ಯಾಯಾಲಯ ತೀರ್ಪು ನೀಡಿದೆ. ಲಾಲೂ ಪ್ರಸಾದ್‌ ಮತ್ತು ಕಾಂಗ್ರೆಸ್‌ ಪಕ್ಷದ ರಶೀದ್‌ ಮಸೂದ್‌ ಅವರನ್ನು ಸಂಬಂಧಪಟ್ಟ  ಪ್ರಕ­ರ­ಣಗಳಲ್ಲಿ ಅಪರಾಧಿ ಎಂದು ನ್ಯಾಯಾ­ಲಯ ತೀರ್ಪು ನೀಡಿದ ತಕ್ಷಣ ಇಬ್ಬರೂ ಲೋಕ­ಸಭೆ­ಯಲ್ಲಿನ ತಮ್ಮ ಸ್ಥಾನಗಳಿಗೆ ರಾಜೀನಾಮೆ ಸಲ್ಲಿ­ಸಿ­ದರು. ಆದರೆ ಗುಜರಾತ್‌ ಸರ್ಕಾರದಲ್ಲಿ ಸಚಿವ­ರಾಗಿರುವ ಕಳಂಕಿತ ವ್ಯಕ್ತಿಯನ್ನು ಬಿಜೆಪಿ ರಕ್ಷಿಸುತ್ತಿರುವುದಾದರೂ ಏಕೆ?

ವ್ಯಕ್ತಿ ಪೂಜೆಯ ಹಾವಳಿಯಂತೂ ಇವತ್ತಿನ ರಾಜ­ಕಾರಣದಲ್ಲಿ ಎದ್ದು ಕಾಣುತ್ತಿದೆ. ‘ಬಲಿಷ್ಠ ವ್ಯಕ್ತಿ ಇದ್ದರೆ, ಪ್ರಬಲ ಸರ್ಕಾರ ಇರುತ್ತದೆ’ ಎಂಬ ಮೋದಿ­­ಯವರ ಘೋಷಣೆಯು ವ್ಯಕ್ತಿ ಪೂಜೆಯ ಸಂಕೇತವೇ ಆಗಿದೆ.

ಹಿಂದೆ ಅಹಮದಾಬಾದ್‌ನಲ್ಲಿ ಪ್ರಕರಣ­ವೊಂದಕ್ಕೆ ಸಂಬಂಧಿಸಿದಂತೆ ಮೋದಿ ವಿರುದ್ಧ ಪೊಲೀಸರು ಮೊದಲ ಮಾಹಿತಿ ವರದಿಯನ್ನು ದಾಖಲಿಸಿಕೊಳ್ಳಲು ಹಿಂಜರಿದಿದ್ದರು. ಅದು ಅಚ್ಚರಿಯ ಸಂಗತಿ ಎನ್ನುವಂತಿಲ್ಲ, ಅದೊಂದು ಆಘಾತಕಾರಿ ವಿಷಯ ಎಂದುಕೊಳ್ಳಬೇಕು.
ಯುವತಿಯೊಬ್ಬರ ಮೇಲೆ ಸರ್ಕಾರಿ ವ್ಯವಸ್ಥೆ­ಯನ್ನು ಬಳಸಿಕೊಂಡು ಕಣ್ಗಾವಲು ಇರಿಸಿದ ಪ್ರಕ­ರಣಕ್ಕೆ ಸಂಬಂಧಿಸಿದಂತೆ ಮೋದಿ ಅವರ ಮೇಲೆ ಆರೋಪ ಇದೆ.  ಕೇಂದ್ರ ಸರ್ಕಾರ ನೇಮಿಸಿದ ಸಮಿತಿ­­ಯಷ್ಟೇ ಇದಕ್ಕೆ ಸಂಬಂಧಿಸಿದ ಸತ್ಯವನ್ನು ಬಯ­ಲಿಗೆ ಎಳೆಯಲು ಸಾಧ್ಯ. ಆದರೆ ಸ್ಥಳೀಯ ಆಡಳಿತ ವ್ಯವಸ್ಥೆಯು ಈ ತನಿಖೆಗೆ ಸಂಬಂ­ಧಿಸಿ­ದಂತೆ ಯಾವುದೇ ರೀತಿಯ ಸಹಕಾರ ನೀಡಲೂ ಸಿದ್ಧವಿದ್ದಂತಿಲ್ಲ.

ಮುಂದಿನ ಸಾರ್ವತ್ರಿಕ ಚುನಾವಣೆಯು ವ್ಯಕ್ತಿ ಆಧಾರಿತ­ವಾಗಿರುವಂತೆ ನೋಡಿಕೊಳ್ಳುವುದು ಮೋದಿ ಅವರ ಆಶಯವಾಗಿರುವಂತಿದೆ. ಅವರಿಗೆ ವಿಷಯಾಧಾರಿತ ಚುನಾವಣೆ ಬೇಕಿಲ್ಲ­ವೆನಿ­ಸುತ್ತದೆ. ಕಾಂಗ್ರೆಸ್‌ನಲ್ಲಿಯೂ ರಾಹುಲ್‌ ಗಾಂಧಿ ಅವರನ್ನು ಬಿಂಬಿಸಲಾಗುತ್ತಿದೆ.

ರಾಹುಲ್‌ ಅವರು ಸಿದ್ಧಾಂತಗಳ ಬಗ್ಗೆ, ಮೌಲ್ಯ­ಗಳ ಕುರಿತು ಪದೇ ಪದೇ ಮಾತನಾಡುತ್ತಿದ್ದಾರೆ. ಆದರೆ ಅವರದೇ ಪಕ್ಷದ ನೇತೃತ್ವದ ಸರ್ಕಾರಗಳೇ ರಾಹುಲ್‌ ವಿಚಾರಗಳಿಗೆ ವಿರುದ್ಧವಾಗಿ ನಡೆದು­ಕೊಂಡಿವೆ. ಜನಪ್ರತಿನಿಧಿಯೊಬ್ಬನನ್ನು ಅಪರಾಧಿ ಎಂಬು­ದಾಗಿ ನ್ಯಾಯಾಲಯ ತೀರ್ಪು ನೀಡಿದರೆ, ಅಂತಹ ಜನಪ್ರತಿನಿಧಿಯು ಶಾಸನಸಭೆಯಲ್ಲಿ ತನ್ನ ಸ್ಥಾನವನ್ನು ತೆರವುಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿತು. ಆ ತೀರ್ಪನ್ನು ರಾಹುಲ್‌  ಹೊಗಳಿದ್ದರು. ಆದರೆ ಕೇಂದ್ರ ಸರ್ಕಾರ ಆ ತೀರ್ಪನ್ನು ಮೊಟಕು­ಗೊಳಿ­ಸುವ ವಿಶೇಷ ಆದೇಶವನ್ನು ತಂದಿತು.

ಮುಂಬೈನಲ್ಲಿ ಆದರ್ಶ ಗೃಹ ನಿರ್ಮಾಣ ಅವ್ಯವ­ಹಾರಕ್ಕೆ ಸಂಬಂಧಿಸಿದಂತೆ ರಾಹುಲ್‌  ನಿಲು­ವಿಗೆ ವಿರುದ್ಧವಾಗಿ ಮಹಾರಾಷ್ಟ್ರ ಸರ್ಕಾರ ನಡೆದುಕೊಂಡಿತು. ಇಂತಹ ಸಂದಿಗ್ಧ ಕಾಲ­ಘಟ್ಟದಲ್ಲಿ ದೆಹಲಿ­ಯಲ್ಲಿ ಎಎಪಿ ಜನಮನ್ನಣೆಯ ಉತ್ತುಂಗ­ದಲ್ಲಿ­ರ­ಬಹುದು. ಆದರೆ ಎಎಪಿ ಒಳಗೆ ಯಾವತ್ತೂ ಏಕಾ­­­ಭಿ­ಪ್ರಾಯವೇ ಇರುತ್ತೆ ಎಂದು ಕೇಜ್ರಿವಾಲ್‌ ನಂಬಿ­­­­ಕೊಳ್ಳುವ ಅಗತ್ಯವಿಲ್ಲ. ಅದೇನೇ ಇರಲಿ, ಅವ­­­ರೊಬ್ಬರೇ ಹದಿನಾರು ಇಲಾಖೆಗಳನ್ನು ತಮ್ಮ­ಲ್ಲಿಯೇ ಇರಿಸಿ­ಕೊಂಡಿ­ರುವುದು ಅಚ್ಚರಿ ಎನಿ­ಸುತ್ತದೆ.

ಜಯಪ್ರಕಾಶ್‌ ನಾರಾಯಣ್‌ ನೇತೃತ್ವದ ಜನಾಂ­­ದೋಲನದಿಂದ ಕೇಂದ್ರದಲ್ಲಿ ಜನತಾ ಸರ್ಕಾರ ಆಡಳಿತದ ಚುಕ್ಕಾಣಿ ಹಿಡಿದಿತ್ತು. ಅದೂ ಹೆಚ್ಚು ಕಾಲ ಬಾಳಲಿಲ್ಲ ಬಿಡಿ. ಆದರೆ ನಂತರ ಎಂದೂ ತುರ್ತು ಪರಿಸ್ಥಿತಿ ಬರಲಿಲ್ಲ. ಅದೂ ಆ ಆಂದೋಲನದ ಬಲು ದೊಡ್ಡ ಕೊಡುಗೆ ಎನ್ನುವುದನ್ನೂ  ನಾವು ಮರೆಯು­ವಂ­ತಿಲ್ಲ. ಅದೇ ರೀತಿ ಆಮ್‌ ಆದ್ಮಿ ಪಕ್ಷ ತನ್ನ ಮಿತಿ­ಯೊ­­ಳಗೆ ವ್ಯವಸ್ಥೆಯೊಂದನ್ನು ಶುದ್ಧ­ಗೊಳಿ­ಸು­ವಲ್ಲಿ ಯಶಸ್ಸಿನ ಹೊಸ ಹೆಜ್ಜೆಗ­ಳನ್ನಿ­ರಿಸಿದರೆ, ಅದು ಈ ಪ್ರಜಾಪ್ರಭುತ್ವ ವ್ಯವಸ್ಥೆಗೆ ಬಲು ದೊಡ್ಡ ಕೊಡು­­ಗೆಯಾಗುತ್ತದೆ. ಆ ಪಕ್ಷ ಅಧಿ­ಕಾರದಲ್ಲಿ ಎಷ್ಟು ದೀರ್ಘ ಕಾಲ ಇರುತ್ತದೆ ಅಥವಾ ಎಷ್ಟು ಬೇಗ ಉರುಳುತ್ತದೆ ಎನ್ನು­ವುದ­ಕ್ಕಿಂತ ಅದು ತನ್ನ ಅವಧಿಯಲ್ಲಿ ನೀಡಿದ ಕೊಡು­ಗೆಯೇ ಮುಖ್ಯವಾಗುತ್ತದೆ. ಅದೇ ನೆನಪಲ್ಲಿರುವುದು.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT