ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭೂಹಗರಣಕ್ಕಿಂತಲೂ ದೊಡ್ಡದು ಪ್ರಶಸ್ತಿ ಹಗರಣ!

Last Updated 10 ನವೆಂಬರ್ 2011, 19:30 IST
ಅಕ್ಷರ ಗಾತ್ರ

2009 -10 ನೇ ಸಾಲಿನ ಕನ್ನಡ ಚಲನಚಿತ್ರ ಪ್ರಶಸ್ತಿ ಪಟ್ಟಿ ಪ್ರಕಟವಾದ 22 ದಿನಗಳ ನಂತರವೂ ವಿವಾದವನ್ನು ಜೀವಂತವಾಗಿಡುವ ಪ್ರಯತ್ನಗಳು ಸತತವಾಗಿ ನಡೆಯುತ್ತಿದೆ. ಪ್ರತೀ ವರ್ಷ ಸರ್ಕಾರ ಕೊಡುವ ಪ್ರಶಸ್ತಿಗಳು ವಿವಾದದಿಂದ ತಪ್ಪಿಸಿಕೊಳ್ಳುವುದು ಕಷ್ಟ.
 
ಕಳೆದ ಹಲವಾರು ವರ್ಷಗಳಿಂದಲೂ ಪ್ರಶಸ್ತಿ ಪ್ರಶ್ನೆಗೆ ಒಳಗಾಗುತ್ತಿರುವುದು ಗೊತ್ತಿದ್ದೂ ಸರ್ಕಾರ ನಿಯಮಾವಳಿಗೆ ತಿದ್ದುಪಡಿ ತರುವ ಪ್ರಯತ್ನಗಳನ್ನು ಮಾಡುತ್ತಿಲ್ಲ.

ಲೋಪದೋಷಗಳನ್ನು ಸರಿಪಡಿಸುವ ಕೆಲಸಕ್ಕೆ ಮುಂದಾಗುತ್ತಿಲ್ಲ. ಈ ಲೋಪದೋಷಗಳನ್ನೇ ಗುರಾಣಿ ಮಾಡಿಕೊಂಡು  ಪ್ರಶಸ್ತಿ ಸಮಿತಿ ಪ್ರತೀವರ್ಷ ತನಗೆ ತೋಚಿದಂತೆ, ತನಗೆ ಬೇಕಾದಂತೆ ಪ್ರಶಸ್ತಿಗಳನ್ನು ಹಂಚುತ್ತಿದೆ.

ಈಗ ನಡೆಯುತ್ತಿರುವ ಚರ್ಚೆ ಒಟ್ಟಾರೆ ಪ್ರಶಸ್ತಿ ಸ್ವರೂಪವನ್ನೂ, ಮಾನದಂಡವನ್ನೂ, ಸಿನಿಮಾ ಅಂದರೆ ಏನು? ಯಾರಿಗಾಗಿ ಸಿನಿಮಾ ಎನ್ನುವಂತಹ  ವಿಷಯವನ್ನು ಒಳಗೊಳ್ಳಬೇಕಾಗಿತ್ತು. ಬಹುತೇಕ ಟೀಕಾಕಾರರು ದೊಡ್ಡ ಹೆಗ್ಗಣವನ್ನು ಬಿಟ್ಟು ಸಣ್ಣ ಇಲಿ ಬಡಿಯುತ್ತಿರುವುದನ್ನು ನೋಡಿದರೆ, ಇವರು ಗುಡ್ಡ ಅಗೆದು ಏನು ಹಿಡಿಯುತ್ತಾರೆ ಎನ್ನುವುದೇ ಗೊತ್ತಾಗುತ್ತಿಲ್ಲ. 

ಪ್ರಶಸ್ತಿ ಸಮಿತಿ ಅಧ್ಯಕ್ಷರು ಪ್ರಶಸ್ತಿಗಳಿಗೆ, ನಿರ್ದೇಶಕರುಗಳಿಗೆ, ಸ್ಪರ್ಧೆಗಳಲ್ಲಿ ಭಾಗವಹಿಸುವವರಿಗೆ ನ್ಯಾಯ ಒದಗಿಸಬೇಕಾಗುತ್ತದೆ. ಪ್ರಶಸ್ತಿ ಸಮಿತಿಯ ತೀರ್ಪಿನ ಬಗ್ಗೆ ವಿವಾದ ಎದ್ದಿದೆ ಎಂದರೆ ಅಲ್ಲಿ ರಾಜಕೀಯ ನಡೆದಿದೆ ಎಂದೇ ಅರ್ಥ.
 
ಜಾತೀಯತೆ, ಪಕ್ಷಪಾತ, ಅನುಕಂಪ, ಪೂರ್ವಗ್ರಹ, ಅಜ್ಞಾನ, ಮೂಢನಂಬಿಕೆ ಇವೆಲ್ಲದರ ವಿರುದ್ಧ ಪರಿಣಾಮಕಾರಿ ಹೋರಾಟ ಮಾಡಬೇಕಾದ ಸಿನಿಮಾ ಕ್ಷೇತ್ರದಲ್ಲಿ ಅವೆಲ್ಲವೂ ಮನೆಮಾಡಿವೆ ಎನ್ನುವುದೇ ನಮ್ಮ ದೇಶದ ಸಿನಿಮಾ ರಂಗದ ದುರಂತ. ಪ್ರಶಸ್ತಿ ಸಮಿತಿ ತಪ್ಪು ಮಾಡಿದೆ ಎಂದು ಗೊತ್ತಾದ ಕೂಡಲೇ ಅವರನ್ನೂ ಪರಪ್ಪನ ಅಗ್ರಹಾರದತ್ತ ಕಳುಹಿಸಿದರೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ತಂತಾನೇ ದೊರಕುತ್ತದೆ.

ಪ್ರಶಸ್ತಿ ಸಮಿತಿ ಪಟ್ಟಿಯನ್ನು ಪತ್ರಿಕಾಗೋಷ್ಠಿಯಲ್ಲಿ ಬಿಡುಗಡೆ ಮಾಡುವಾಗ, ಸಮಿತಿಯ ಅಧ್ಯಕ್ಷ ದ್ವಾರಕೀಶ್ ಅವರಿಗೆ ಪತ್ರಕರ್ತರೊಬ್ಬರು ಪ್ರಶ್ನೆಯೊಂದನ್ನು ಕೇಳಿದರು. “ ಗಿರೀಶ್ ಕಾಸರವಳ್ಳಿಯವರ “ಕನಸೆಂಬೊ ಕುದುರೆಯನೇರಿ..

” ಚಿತ್ರಕ್ಕೆ ಅಂತರರಾಷ್ಟ್ರೀಯ ಪ್ರಶಸ್ತಿ ಬಂದಿದೆ. ಅದನ್ನು ಪ್ರಶಸ್ತಿ ಸಮಿತಿ ಪರಿಗಣಿಸಿಲಿಲ್ಲವೇ?” ಅದಕ್ಕೆ ದ್ವಾರಕೀಶ್ ಥಟ್ಟನೆ ಉತ್ತರಿಸಿದ್ದು ಹೀಗೆ: “ಆ ಚಿತ್ರ ಬೋರ್ಡ್‌ಗೇ ಬರಲಿಲ್ಲ” -ಈ ಉತ್ತರವೇ ಹೊಸ ಅಲೆ ಚಿತ್ರದ ಬಗ್ಗೆ ಪ್ರಶಸ್ತಿ ಸಮಿತಿ ಅಧ್ಯಕ್ಷರಿಗೆ ಇದ್ದ ಧೋರಣೆಯನ್ನು ತಿಳಿಸುತ್ತದೆ. ಇನ್ನು  ಸಮಿತಿ ತೀರ್ಪು ಯಾವ ರೀತಿ ಇರಬಹುದು ಎನ್ನುವುದನ್ನು ಯಾರಾದರೂ ಊಹಿಸಬಹುದು.

ಸಮಿತಿ ಅಧ್ಯಕ್ಷರಾದ ದ್ವಾರಕೀಶ್ ಅವರ ನಿಲುವಿನ ಬಗ್ಗೆಯೇ ಚರ್ಚೆ ನಡೆಯಬೇಕಾಗಿತ್ತು. `ಶಬರಿ~ ಚಿತ್ರಕ್ಕೆ ಸಾಮಾಜಿಕ ಪರಿಣಾಮ ಬೀರುವ ಚಿತ್ರ ಎಂಬ ಪ್ರಶಸ್ತಿಯನ್ನು ನೀಡಿರುವುದು ಚರ್ಚೆಯ ವಿಷಯವೇ ಅಲ್ಲ. ಡಾಕ್ಯುಮೆಂಟರಿಯೊಂದಕ್ಕೆ ಪ್ರಥಮ ಅತ್ಯುತ್ತಮ ಚಿತ್ರ ಎಂಬ ಪ್ರಶಸ್ತಿ ನೀಡಿರುವುದು ಪ್ರಶ್ನಾರ್ಹ.

`ರಸಋಷಿ ಕುವೆಂಪು~ ಅತ್ಯುತ್ತಮ ಕಥಾಚಿತ್ರ ಆಗಿರುವುದಕ್ಕೆ ಒತ್ತಡಗಳೇ ಕಾರಣ ಎಂದು ಬೇರೆ ಹೇಳಬೇಕಿಲ್ಲ. ಮರಣೋತ್ತರವಾಗಿಯೂ ಅತ್ಯುತ್ತಮ ನಟ ಪ್ರಶಸ್ತಿಯನ್ನು ನೀಡಬಹುದು ಎಂಬ ಪದ್ಧತಿಯನ್ನು ಆರಂಭಿಸಿರುವುದೂ ಸಮಿತಿ ಅಧ್ಯಕ್ಷರಾದ ದ್ವಾರಕೀಶ್ ಅವರ ಹೊಸ ಕೊಡುಗೆ ಎನ್ನಬಹುದು. ಇನ್ನೂ ಒಂದು ತಮಾಷೆ ಎಂದರೆ `ಆಪ್ತ ರಕ್ಷಕ~ ಚಿತ್ರವನ್ನು ವಿಷ್ಣುವರ್ಧನ್ ಕೈಗೆತ್ತಿಕೊಂಡದ್ದು ದ್ವಾರಕೀಶ್ ಅವರಿಗೆ ಸವಾಲಾಗಿ!

`ಆಪ್ತಮಿತ್ರ~ದ ಪ್ರಚಂಡ ಯಶಸ್ಸಿಗೆ ಕಾರಣಕರ್ತರಾರು? ಎಂಬ ಚರ್ಚೆ ಬಂದಾಗ  ವಿಷ್ಣುವರ್ಧನರನ್ನು ಕಡೆಗಣಿಸಲಾಯಿತು. `ಆಪ್ತಮಿತ್ರ~ ಯಶಸ್ಸಿಗೆ ನಟಿ ಸೌಂದರ್ಯ ಹಾಗೂ ನಿರ್ಮಾಪಕ ದ್ವಾರಕೀಶ್ ಕಾರಣ ಎನ್ನುವ ವಾದ ಹೆಚ್ಚಾದಾಗ ಸಹಜವಾಗಿಯೇ ವಿಷ್ಣುವರ್ಧನ್ ನೊಂದುಕೊಂಡಿದ್ದರು.
 
ಆಪ್ತಮಿತ್ರದ ಯಶಸ್ಸು ವಿಷ್ಣು ಇಮೇಜಿನಿಂದ ಎನ್ನುವುದನ್ನು ಸಾಬೀತು ಪಡಿಸುವುದಕ್ಕಾಗಿಯೇ ಆಪ್ತರಕ್ಷಕ ದಲ್ಲಿ ತಮ್ಮೆಲ್ಲಾ ಸಾಮರ್ಥ್ಯವನ್ನು ಒತ್ತೆಯಿಟ್ಟು ವಿಷ್ಣು ಅಭಿನಯಿಸಿದರು. ಈಗ ಅದೇ ಚಿತ್ರಕ್ಕೆ ದ್ವಾರಕೀಶರಿಂದಲೇ `ಅತ್ಯುತ್ತಮ ನಟ~ ಪ್ರಶಸ್ತಿ ಪಡೆದು ಕೊಂಡಿರುವುದರ ಹಿಂದೆ `ಆಪ್ತ~ ಸಂಗತಿಗಳಿರಬಹುದೇ? ಪ್ರಶಸ್ತಿ ವಿಷಯದಲ್ಲಿ ವಿಷ್ಣುವರ್ಧನ್ ಅವರಿಗೆ ಅಂತಹ ಮೋಹವೇನಿರಲಿಲ್ಲ. ಹಿಂದೆ `ದೀಪಾವಳಿ~ ಎನ್ನುವ ಚಿತ್ರಕ್ಕೆ ಅತ್ಯುತ್ತಮ ನಟ ಪ್ರಶಸ್ತಿಯನ್ನು ರಮೇಶ್ ಜತೆ ಹಂಚಿದಾಗ ಅದನ್ನು ಅವರು ತಿರಸ್ಕರಿಸಿದ್ದರು.

ಕಳೆದ ವರ್ಷವೂ ಕೆ.ಎಸ್.ಆರ್.ದಾಸ್ ಅವರಿಗೆ ಪುಟ್ಟಣ್ಣ ಪ್ರಶಸ್ತಿಯನ್ನು ಪ್ರಕಟಿಸಿ, ಪತ್ರಿಕಾಗೋಷ್ಠಿಯಲ್ಲಿ ಗಿರೀಶ್ ಕಾರ್ನಾಡ್ ಅವರ ಹೆಸರು ಪ್ರಕಟಿಸಿ ಗೊಂದಲವಾದದ್ದು ಎಲ್ಲರಿಗೂ ತಿಳಿದೇ ಇದೆ. ಕಾರ್ನಾಡರೂ ಅದನ್ನು ತಿರಸ್ಕರಿಸಿದಾಗ ಮತ್ತೆ ಕೆ.ಎಸ್.ಆರ್.ದಾಸ್ ಅವರಿಗೇ ಪ್ರಶಸ್ತಿಯನ್ನು ದಾಟಿಸಲಾಯಿತು. ಪ್ರಶಸ್ತಿಗಳೆಂದರೆ ಕಾಲ್ಚೆಂಡಾಟವಲ್ಲ ಅಲ್ಲವೇ?

ಭೂತ, ಪ್ರೇತ, ಪಿಶಾಚಿ, ಮೂಢ ನಂಬಿಕೆಗಳನ್ನು ಬಿತ್ತುವ ಚಲನಚಿತ್ರಗಳನ್ನು ಪ್ರೋತ್ಸಾಹಿಸಬಾರದು ಎನ್ನುವುದೂ ಕೂಡ ಚಲನಚಿತ್ರ ನೀತಿ. ಇದು ಪ್ರಶಸ್ತಿ ಸಮಿತಿ ಅಧ್ಯಕ್ಷರಿಗೆ ತಿಳಿದಿರಲೇಬೇಕು. `ನಾಗವಲ್ಲಿ~ ಮಹಿಮೆಯನ್ನು ಸಾರುವ `ಆಪ್ತ ರಕ್ಷಕ~ ಚಿತ್ರವನ್ನು ಪ್ರಶಸ್ತಿ ಸಮಿತಿ ವೀಕ್ಷಿಸಲೇ ಬಾರದಿತ್ತು. ವೀಕ್ಷಿಸಿದ ನಂತರವಾದರೂ ಅದರ ಬಗ್ಗೆ ಚರ್ಚಿಸಿ ಸ್ಪರ್ಧೆಯಿಂದ ಆ ಚಿತ್ರವನ್ನು ಹೊರಗಿಡಬಹುದಾಗಿತ್ತು.

ಈ ಅಧಿಕಾರ ಸಮಿತಿಗೆ ಇದೆ. ಸ್ಪರ್ಧೆಗೆ ಬಂದ ಎಲ್ಲ ಚಿತ್ರಗಳನ್ನೂ ವೀಕ್ಷಿಸುವುದಕ್ಕೆ ಮುನ್ನ ಕೆಲವು ನಿಯಮಾವಳಿಗಳನ್ನು ಸಮಿತಿಯ ಎಲ್ಲ ಸದಸ್ಯರೂ ರೂಢಿಸಿ, ಲಿಖಿತವಾಗಿ ದಾಖಲಿಸಿದರೆ ಆಯ್ಕೆಗೆ ಸಮರ್ಥನೆಯೂ ದೊರಕುತ್ತದೆ. ಮುಂದಿನ ಸಮಿತಿಗಳಿಗೆ ಮಾರ್ಗದರ್ಶನವೂ ಆಗುತ್ತದೆ. ಸಾಮಾಜಿಕ ಪರಿಣಾಮ ಬೀರುವ ಚಿತ್ರಗಳ ಆಯ್ಕೆಯನ್ನು ಪ್ರಶ್ನಿಸುವವರು, ಭೂತ ಪ್ರೇತ ಚಿತ್ರಗಳನ್ನು ಆಯ್ಕೆ ಮಾಡಿರುವುದನ್ನು ಜಾಣತನದಿಂದ ಮರೆಯುತ್ತಾರೆ.

ಈ ಸಂದರ್ಭದಲ್ಲಿ ನಡೆಯುತ್ತಿರುವ ಮತ್ತೊಂದು ಚರ್ಚೆ ಎಂದರೆ, ಬಿಡುಗಡೆಯೇ ಆಗದ ಚಿತ್ರಕ್ಕೆ ಪ್ರಶಸ್ತಿ ಕೊಡುವುದು ನ್ಯಾಯವೇ ಎನ್ನುವುದು. ಸಿನಿಮಾ ಮಾಡುವುದೇ ಜನರಿಗಾಗಿ. ಜನರಿಗೇ ತಲುಪಿಸಲಾಗದ ಸಿನಿಮಾ ಯಾರಿಗಾಗಿ ಎನ್ನುವ ಪ್ರಶ್ನೆ ಎದ್ದಿದೆ.
 
ಈ ಬಾರಿ ಬಿಡುಗಡೆಯಾಗದ ಐದು ಚಿತ್ರಗಳು ಪ್ರಶಸ್ತಿ ಪಡೆದಿವೆ. (ರಸಋಷಿ ಕುವೆಂಪು, ಕಿನ್ನರ ಬಾಲೆ, ಪರೀಕ್ಷೆ, ಏಕಮೇವ, ಕಾಜರ್) ಆದರೂ ಬರಗೂರು ರಾಮಚಂದ್ರಪ್ಪ ನಿರ್ದೇಶಿಸಿದ “ಶಬರಿ” ಬಗ್ಗೆ ಮಾತ್ರ ಚರ್ಚೆಯನ್ನು ಕೇಂದ್ರೀಕರಿಸುವುದು ಸಿನಿಕತನವಾಗುತ್ತದೆ. 

 ಇಂತಹ ಚಿತ್ರಗಳನ್ನು ಪ್ರಶಸ್ತಿಗಾಗಿಯೇ ನಿರ್ಮಿಸಿದ ಚಿತ್ರ ಎಂದು ಕೆಲವರು ಟೀಕಿಸುತ್ತಾರೆ. ಗಾಂಧೀನಗರದ ಜನ ನಿರ್ಮಿಸುವ ಕಮರ್ಷಿಯಲ್ ಚಿತ್ರಗಳಿಗೆ ಮಾತ್ರ ಪ್ರಶಸ್ತಿ ಕೊಡಬೇಕು ಎಂಬುದು ಕೆಲವರ ಹಠವಾಗಿದೆ. ಬಹುಕೋಟಿ ವೆಚ್ಚದ ಚಿತ್ರಗಳನ್ನೂ ಕೂಡ ಜನ ಮೆಚ್ಚದೆ, ಅಂತಹ ಚಿತ್ರಗಳು ಗಲ್ಲಾಪೆಟ್ಟಿಗೆಯಲ್ಲಿ ಸೋತ  ಉದಾಹರಣೆಗಳಿವೆ. ಅಂತಹ ಚಿತ್ರಗಳಿಗೂ ಪ್ರಶಸ್ತಿ ಬಂದಿರುವ ಉದಾಹರಣೆ ಇದೆ.

ಕಡಿಮೆ ವೆಚ್ಚದಲ್ಲಿ ಚಿತ್ರ ನಿರ್ಮಿಸುವವರು ಸಿನಿಮಾವನ್ನು ಒಂದು ಕಲೆಯಾಗಿ ನೋಡುತ್ತಾರೆ. ಅಂತಹ ಚಿತ್ರಗಳಿಗೆ ಚಿತ್ರಮಂದಿರದ ಸಮಸ್ಯೆ ಇದೆ. ಬಂಡವಾಳ ಹೂಡುವವರ ಅಭಾವವಿದೆ. ಪರ್ಯಾಯ ಸಿನಿಮಾ ಬೆಳೆಸುವವರ ಕಷ್ಟಸುಖಗಳನ್ನೂ ನಾವು ಗಮನಿಸಬೇಕಾಗಿದೆ.

ಈ ಸಮಸ್ಯೆ ಕಳೆದ ಹತ್ತು ವರ್ಷಗಳಿಂದ ಆಗಾಗ ಪ್ರಸ್ತಾಪಗೊಳ್ಳುತ್ತಲೇ ಇದೆ. ಹೊಸ ಅಲೆ ಚಿತ್ರಗಳಿಗೆ ಚಿತ್ರಮಂದಿರದ ಸಮಸ್ಯೆ ಇದೆ. ಪ್ರೇಕ್ಷಕರ ಸಮಸ್ಯೆಯೂ ಇದೆ. ಸಂಸ್ಕಾರ, ವಂಶವೃಕ್ಷ, ಕಾಡು, ಘಟಶ್ರಾದ್ಧ ಮೊದಲಾದ ಚಿತ್ರಗಳು ಬಿಡುಗಡೆಯಾದಾಗ ಇಂತಹ ಸಮಸ್ಯೆ ಇರಲಿಲ್ಲ.

ಶತದಿನ ಕಂಡ ಹೊಸ ಅಲೆ ಚಿತ್ರಗಳೂ ನಮ್ಮಲ್ಲಿ ಇವೆ. ನಂತರದ ದಿನಗಳಲ್ಲಿ ಹೊಸ ಅಲೆಯ ಹೆಸರಿನಲ್ಲಿ ಕೆಲವು ನಿರ್ದೇಶಕರು ಚೂಯಿಂಗ್‌ಗಮ್ ತರಹ ಎಳೆಯುವ ಸಿನಿಮಾಗಳನ್ನು ತಯಾರಿಸತೊಡಗಿದಂತೆ ಪ್ರೇಕ್ಷಕರು ಅಂತಹ ಚಿತ್ರಗಳಿಂದ ದೂರವಾಗದೇ ವಿಧಿಯೇ ಇರಲಿಲ್ಲ.

ನಂತರದ ದಿನಗಳಲ್ಲಿ ಬಂದ ನಿರ್ದೇಶಕರು ಅದಕ್ಕಾಗಿಯೇ ಸಿನಿಮಾವನ್ನೇ ಜನರ ಮಧ್ಯೆ ತೆಗೆದುಕೊಂಡು ಹೋಗುವ ಪದ್ಧತಿ ಆರಂಭಿಸಿದರು. ಒಂದು ಕಾಲದಲ್ಲಿ ಸಾಹಿತ್ಯವನ್ನು ತಲೆಯ ಮೇಲೆ ಹೊತ್ತುಕೊಂಡು ಹೋಗಿ ಊರಿಂದೂರಿಗೆ ಹಂಚುತ್ತಿದ್ದ ಸಾಹಿತಿಗಳ ಪರಂಪರೆಯಿದ್ದ ನಮ್ಮ ನಾಡಿಗೆ ಇದೇನೂ ಹೊಸತಲ್ಲ.

ಕಾಸರವಳ್ಳಿ, ಶೇಷಾದ್ರಿ, ಸುರೇಶ್, ರಾಮದಾಸ್‌ನಾಯ್ಡು, ನಂಜುಂಡೇಗೌಡ, ಬರಗೂರು ಮೊದಲಾದವರೆಲ್ಲಾ ಜಿಲ್ಲಾ ಕೇಂದ್ರಗಳಿಗೆ, ತಾಲೂಕು ಕೇಂದ್ರಗಳಿಗೆ ತಮ್ಮ ನಿರ್ದೇಶನದ ಚಿತ್ರಗಳನ್ನು ತೆಗೆದುಕೊಂಡು ಹೋಗಿ ಜನರಿಗೆ ತೋರಿಸುವ ಚಳವಳಿ ನಡೆಸಿದ್ದಾರೆ. ಬರಗೂರರ “ಶಬರಿ” ಇದೇ ರೀತಿ ಯಾತ್ರೆ ನಡೆಸಿ ಶತದಿನ ಪ್ರದರ್ಶನ ಕಂಡಿದ್ದು ಒಂದು ವಿನೂತನ ಮಾರುಕಟ್ಟೆ ತಂತ್ರವಾಗಿಯೇ ಕಾಣುತ್ತದೆ. 

 ಗೋವಾದಲ್ಲಿ ನಡೆಯುವ ಅಂತರರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನವಾಗುವ ಎಲ್ಲ ಚಿತ್ರಗಳೂ ಪ್ರೇಕ್ಷಕರಿಗೆ ನೋಡಲು ಲಭ್ಯವಾಗುವುದಿಲ್ಲ. ಆದರೂ ಅವು ಬಹುಮಾನ ಪಡೆಯುತ್ತವೆ. ಮತ್ತೊಂದು ಚಿತ್ರೋತ್ಸವಕ್ಕೆ ತೆರಳುತ್ತವೆ.

ರಾಷ್ಟ್ಟ್ರಿಯ ಪ್ರಶಸ್ತಿ ಪಡೆದ ಎಷ್ಟೋ ಚಿತ್ರಗಳನ್ನು ನೋಡಲು ನಾವು ಅದು ಕಿರುತೆರೆಗೆ ಬರುವುದನ್ನು ಕಾಯಬೇಕು. ಅಂತಹ ಪರಿಸ್ಥಿತಿಯನ್ನು ತಪ್ಪಿಸಲು ಸಿನಿಮಾಸಕ್ತರು ಏನು ಮಾಡಬೇಕು ಎನ್ನುವುದು ಈ ಸಮಯದಲ್ಲಾದರೂ ಚರ್ಚೆಯಾಗಬೇಕು.
 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT