ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಮನಿರಸನ ತರುವ ನಿರೀಕ್ಷೆಗಳು

Last Updated 25 ಫೆಬ್ರುವರಿ 2017, 19:30 IST
ಅಕ್ಷರ ಗಾತ್ರ

ವಿಧಾನಸಭಾ ಚುನಾವಣೆ ನಡೆಯುತ್ತಿರುವ ಉತ್ತರ ಪ್ರದೇಶದಲ್ಲಿನ ‘ಗೋಡೆಗಳ ಮೇಲಿನ ಬರಹ’ವು ಬೇರೆಯೇ ಆದ ಕಥೆಯನ್ನು ಹೇಳುತ್ತಿದೆ. ಈ ಹಿಂದಿನ ದಶಕದಲ್ಲಿನ ರಾಜ್ಯ ರಾಜಕೀಯದ ಬಗ್ಗೆ ನಾವು ವರದಿ ಮಾಡಿದ ಮತ್ತು ಓದಿದ ವಿವರಗಳಿಗಿಂತ ಈ ಗೋಡೆ ಬರಹ ಭಿನ್ನವಾಗಿದೆ. ಜನರು ರಾಜಕೀಯ ಪಕ್ಷಗಳಿಂದ ಹೆಚ್ಚಿನದನ್ನು ನಿರೀಕ್ಷಿಸುತ್ತಾರೆ ಎನ್ನುವುದು ಈ ಗೋಡೆ ಬರಹಗಳಿಂದ ಸ್ಪಷ್ಟಗೊಳ್ಳುತ್ತದೆ.

ಬಿಹಾರ ಮತ್ತು ದೇಶದ ಇತರ ಭಾಗಗಳ ಗೋಡೆಗಳ ಮೇಲಿನ ಬರಹಗಳು ಇದನ್ನೇ ಹೇಳುತ್ತಿದ್ದವು. ಮತದಾರರಲ್ಲಿ, ಅದರಲ್ಲೂ ವಿಶೇಷವಾಗಿ ಯುವಜನರಲ್ಲಿ ಹೊಸ ಆಶಾವಾದ, ಆತ್ಮವಿಶ್ವಾಸ ಕಂಡು ಬರುತ್ತಿತ್ತು. ಜನರ ಬಳಿ ಕೆಲಮಟ್ಟಿಗೆ ಹಣ ಉಳಿದಿರುತ್ತಿತ್ತು. ಈ ಉಳಿತಾಯದ ಹಣವನ್ನು ವೆಚ್ಚ ಮಾಡುವುದರಿಂದ ಸರಕು ಮತ್ತು ಸೇವೆಗಳಿಗೆ ಬೇಡಿಕೆ ಹೆಚ್ಚಾಗಿ ಮಾರುಕಟ್ಟೆ ಚೇತರಿಕೆ ಕಂಡಿತ್ತು. ಖಾಸಗಿ ಶಾಲೆಗಳಿಗೆ ಮಕ್ಕಳನ್ನು ಸೇರಿಸುವ ಪ್ರವೃತ್ತಿಯಲ್ಲಿ ಹೆಚ್ಚಳ ಉಂಟಾಗಿತ್ತು. ದಕ್ಷಿಣ ಭಾರತದಲ್ಲಿ ಬ್ರ್ಯಾಂಡೆಡ್‌ ಕೋಳಿ ಮಾಂಸಕ್ಕೆ ಬೇಡಿಕೆ ಹೆಚ್ಚಿತ್ತು. ಪಂಜಾಬ್‌ನಲ್ಲಿ ವಿದೇಶಗಳಿಗೆ ವಲಸೆ ಹೋಗುವವರ ಸಂಖ್ಯೆ ಹೆಚ್ಚಿತ್ತು. ಎರಡು ಹೊತ್ತಿನ ತುತ್ತಿಗೆ ಪರದಾಡುತ್ತಿದ್ದ ಬಿಹಾರದ ಕಡು ಬಡವರೂ, ನಿತೀಶ್‌ ಅವರ ಮೊದಲ ಅಧಿಕಾರಾವಧಿಯಲ್ಲಿ ಬ್ರ್ಯಾಂಡೆಡ್‌ ಒಳ ಉಡುಪು ಖರೀದಿಸುವ ಮಟ್ಟಕ್ಕೆ ಆರ್ಥಿಕ ಚೈತನ್ಯ ಪಡೆದುಕೊಂಡಿದ್ದರು.

ಆರ್ಥಿಕ ಸಮೃದ್ಧತೆಯ ಈ ಎಲ್ಲ ಮಾನದಂಡಗಳನ್ನು ಗಣನೆಗೆ ತೆಗೆದುಕೊಂಡರೆ, ಉತ್ತರ ಪ್ರದೇಶದಲ್ಲಿ ಅಂತಹ ಭಾರಿ ಬದಲಾವಣೆಯ ಚಿತ್ರಣವೇನೂ ಕಂಡು ಬರುವುದಿಲ್ಲ. ಹೊಸ ನಿರೀಕ್ಷೆಗಳ ಭಾರದಿಂದಾಗಿಯೇ 2009ರಲ್ಲಿ ಕೇಂದ್ರದಲ್ಲಿ ಯುಪಿಎ ಅಧಿಕಾರಕ್ಕೆ ಮರಳಿ ಬಂದಿತ್ತು. ಯುವ ಅಖಿಲೇಶ್ ಯಾದವ್‌ ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಅದಕ್ಕೆ ಹಳೆಯ ಮುಸ್ಲಿಂ– ಯಾದವ್‌ ವೋಟ್‌ ಬ್ಯಾಂಕ್‌ ಒಂದೇ ಕಾರಣವಾಗಿರಲಿಲ್ಲ. 2014ರಲ್ಲಿ ನರೇಂದ್ರ ಮೋದಿ ಅವರು ಪ್ರಧಾನಿ ಆದಾಗ ಮತ್ತು ಉತ್ತಮ ಸಾಧನೆ ತೋರಿದ ಕೆಲ ರಾಜ್ಯಗಳ ಮುಖ್ಯಮಂತ್ರಿಗಳು ಮರುಆಯ್ಕೆಯಾದಾಗ ಎಲ್ಲೆಡೆ ಉತ್ಸಾಹ ಗರಿಗೆದರಿತ್ತು.  ಅಂತಹ ಉತ್ಸಾಹ ಸದ್ಯಕ್ಕೆ ಸಂಪೂರ್ಣವಾಗಿ ಉಡುಗಿ ಹೋಗಿದೆ ಎಂದರ್ಥವಲ್ಲ. ಆದರೆ, ಈ ಎಲ್ಲ ರಾಜಕೀಯ ಮುಖಂಡರ ಬಗ್ಗೆ ಮತದಾರರಲ್ಲಿ ಇದ್ದ ನಿರೀಕ್ಷೆಗಳು ಈಗ ತಲೆಕೆಳಗಾಗಿ ಹತಾಶ ಭಾವನೆಗೆ ಎಡೆಮಾಡಿಕೊಟ್ಟಿವೆ.

ಹಿಂದಿನ ವೇಗಕ್ಕೆ ಹೋಲಿಸಿದರೆ, ನಾಲ್ಕು ವರ್ಷಗಳಲ್ಲಿನ ಆರ್ಥಿಕ ಪ್ರಗತಿಯು ಈಗ ಕುಂಠಿತಗೊಂಡಿದೆ. ಆರ್ಥಿಕ ವೃದ್ಧಿ ದರ (ಜಿಡಿಪಿ) ಶೇ 6ರ ಮಟ್ಟದಲ್ಲಿ ಇದೆ. ಉತ್ತರ ಪ್ರದೇಶದ ಚುನಾವಣೆಯಲ್ಲಿಯೂ ಇದೇ ಬಗೆಯ ಚಿತ್ರಣ ಕಂಡು ಬರುತ್ತಿದೆ. ಅನೇಕರಲ್ಲಿ, ಅದರಲ್ಲೂ ವಿಶೇಷವಾಗಿ ಯುವಜನರಲ್ಲಿ ಆಶಾವಾದ ಕಂಡು ಬರುತ್ತಿದೆ. ಆದರೆ, ಜಾತಿ ಅಥವಾ ನಂಬಿಕೆಯ ಕೋಟೆಯಿಂದ ಹೊರಬರುವ ಉತ್ಸಾಹ ಮತ್ತು ದಿಟ್ಟತನ ಮಾತ್ರ ಅಷ್ಟಾಗಿ ಕಾಣುತ್ತಿಲ್ಲ. ಹೀಗಾಗಿ ಈ ಬಾರಿಯ ಚುನಾವಣೆಯು ಜನರಲ್ಲಿ ಕಂದಕ ಮೂಡಿಸುವ ಹಳೆಯ ತಂತ್ರವನ್ನೇ ನೆನಪಿಸುತ್ತಿದೆ. ಇಂತಹ ಬಿಕ್ಕಟ್ಟನ್ನು ದೂರ ಮಾಡುವ ಏಕೈಕ ಆಶಾಕಿರಣವಾಗಿ ನರೇಂದ್ರ ಮೋದಿ ಕಂಡು ಬರುತ್ತಿದ್ದಾರೆ.

ಈ ಬದಲಾವಣೆಯ ಮನಸ್ಥಿತಿಯ ಸ್ಪಷ್ಟ ಚಿತ್ರಣಕ್ಕೆ ಇನ್ನಷ್ಟು ಸಾಕ್ಷ್ಯಗಳನ್ನು ಪಡೆಯುವ ಉದ್ದೇಶದಿಂದಲೇ ದೆಹಲಿಯಿಂದ ರಸ್ತೆ ಮಾರ್ಗದ ಮೂಲಕ ಉತ್ತರ ಪ್ರದೇಶದಲ್ಲಿ ಸುತ್ತಾಡಿದಾಗ ಅನೇಕ ವಾಸ್ತವ ಸಂಗತಿಗಳು ನನ್ನ ಅನುಭವಕ್ಕೆ ಬಂದವು.

ಪಶ್ಚಿಮದಲ್ಲಿನ ಜಾಟ್‌ ಸಮುದಾಯದ ಪ್ರಾಬಲ್ಯವಿರುವ ಬುಂದೇಲ್‌ಖಂಡ, ಯಾದವ್‌ರ ಇಟಾವಾ, ಕಾನ್ಪುರ, ಲಖನೌ ಮೂಲಕ ನಾನು ರಾಜ್ಯದ ವಿವಿಧ ಭಾಗಗಳಿಗೆ ಭೇಟಿ ನೀಡಿದ್ದೆ. ಬಾರಾಬಂಕಿ ಸಮೀಪದ ಜೈದ್‌ಪುರ ಗ್ರಾಮದಲ್ಲಿನ ಸ್ಟಾರ್ ಆನ್‌ಲೈನ್‌ ಸೆಂಟರ್‌ ನನ್ನ ಗಮನ ಸೆಳೆದಿತ್ತು. ಈ ಕೇಂದ್ರದ ಮಾಲೀಕ 23 ವರ್ಷದ ಅತಾವುರ್‌ ರೆಹಮಾನ್‌ ಅನ್ಸಾರಿ ಒಂದು ತಿಂಗಳ ಹಿಂದಷ್ಟೇ ಈ ಜನ ಸೇವಾ ಕೇಂದ್ರದ ವಹಿವಾಟಿಗೆ ಚಾಲನೆ ನೀಡಿದ್ದ. ಈ ದಿನಸಿ ಅಂಗಡಿಯಲ್ಲಿ ರೈಲು ಹಾಗೂ ವಿಮಾನದ ಟಿಕೆಟ್‌, ಪ್ಯಾನ್‌ – ಆಧಾರ್‌ ಕಾರ್ಡ್‌ , ಇ ಪಾವತಿ, ಜನನ– ಮರಣ ಪತ್ರ, ಭೂ ಮಾಲೀಕತ್ವದ ದಾಖಲೆ, ಜೀವ ವಿಮೆ, ಪಾಸ್‌ಪೋರ್ಟ್‌, ವಿಶ್ವವಿದ್ಯಾಲಯಗಳ ಪ್ರವೇಶ ಮತ್ತು ಉದ್ಯೋಗ ಅವಕಾಶಗಳ ಅರ್ಜಿ ನಮೂನೆ, ಮೊಬೈಲ್‌ ರೀಚಾರ್ಜ್‌, ಮೊಬೈಲ್‌ಗಳಲ್ಲಿ ಇ–ವಾಲೆಟ್‌ ಅಳವಡಿಕೆ ಹೀಗೆ ವೈವಿಧ್ಯಮಯ ಸೇವೆಗಳು ಒಂದೇ ಚಾವಣಿಯಡಿ ಲಭ್ಯ ಇದ್ದವು. ಬಹುತೇಕ ಸೇವೆಗಳು ಇಂಟರ್‌ನೆಟ್‌ ಆಧಾರಿತವಾಗಿದ್ದವು. 
ರೆಹಮಾನ್‌, ಬಿಎಸ್ಸಿ ದ್ವಿತೀಯ ವರ್ಷದ ವಿದ್ಯಾರ್ಥಿ. ಅನ್ಸಾರಿಗಳು ವೃತ್ತಿಯಲ್ಲಿ ನೇಕಾರರಾಗಿದ್ದು, ಹತ್ತಿ, ರೇಷ್ಮೆಯ ಕಂಠವಸ್ತ್ರಗಳನ್ನು ನೇಯುವುದು ಕುಟುಂಬದ ಉದ್ಯೋಗವಾಗಿದೆ. ಮಧ್ಯಪ್ರಾಚ್ಯ ದೇಶಗಳಿಗೆ ರಫ್ತು ಮಾಡುವ ಕಂಠವಸ್ತ್ರಗಳ ವಹಿವಾಟು ನೋಟು ರದ್ದತಿಯಿಂದಾಗಿ ತಾತ್ಕಾಲಿಕವಾಗಿ ಕುಸಿದಿದೆ. ನೋಟು ರದ್ದತಿ ಸೃಷ್ಟಿಸಿದ ಬಿಕ್ಕಟ್ಟು ಮತ್ತು ಅದರಿಂದ ನಗದು ರಹಿತ ವಹಿವಾಟಿನಲ್ಲಿ ತೆರೆದುಕೊಂಡಿರುವ ಹೊಸ ಅವಕಾಶಗಳನ್ನು ಬಳಸಿಕೊಳ್ಳಲು ರೆಹಮಾನ್‌ ಮುಂದಾಗಿದ್ದ. ಇದೇ ಕಾರಣಕ್ಕೆ ಸ್ಟಾರ್‌ ಆನ್‌ಲೈನ್‌ ಸೆಂಟರ್‌ ಆರಂಭಿಸಿದ್ದಾನೆ. 

ಈ ಸೇವಾ ಕೇಂದ್ರವು ರಿಲಯನ್ಸ್‌ ಜಿಯೊ ಬಳಸುತ್ತಿದ್ದು, ಮಳಿಗೆಯ ಒಳಗೆಲ್ಲ ಆನ್‌ಲೈನ್‌ ಪಾವತಿ ಮತ್ತು ಇ–ವಾಲೆಟ್‌ ಸಂಸ್ಥೆಗಳ ಜಾಹೀರಾತುಗಳು ತುಂಬಿಕೊಂಡಿದ್ದವು. ನಿರಂತರ ವಿದ್ಯುತ್ ಪೂರೈಕೆ ಸಮಸ್ಯೆಗೂ ರೆಹಮಾನ್‌ ತನ್ನದೇ ಪರಿಹಾರ ಕಂಡುಕೊಂಡಿದ್ದ. ಮಳಿಗೆಯ ಮುಂಭಾಗದಲ್ಲಿಯೇ ಸೋಲಾರ್‌ ವಿದ್ಯುತ್ ಘಟಕದಿಂದ ಪಡೆಯುತ್ತಿದ್ದ 300 ವಾಟ್‌ಗಳಷ್ಟು ವಿದ್ಯುತ್‌ ಆತನ ಮಳಿಗೆಯ ಅಗತ್ಯಗಳನ್ನೆಲ್ಲ ಪೂರೈಸುತ್ತಿತ್ತು.

ರಾಜ್ಯದ ವಿದ್ಯುತ್ ಹಸಿವನ್ನು ವೈಯಕ್ತಿಕ ನೆಲೆಯಲ್ಲಿ ತಕ್ಕಮಟ್ಟಿಗೆ ಈಡೇರಿಸುವ ಸಾಮರ್ಥ್ಯ ಆ ಪುಟ್ಟ ಸೌರಶಕ್ತಿ ಘಟಕಕ್ಕೆ ಇದೆ. ಫೋನ್‌ ರೀಚಾರ್ಜ್‌, ಮೋಟಾರ್‌ ದುರಸ್ತಿ, ಕ್ಷೌರದ ಅಂಗಡಿಗಳಲ್ಲೂ  ಇದೇ ಬಗೆಯ ಸೌರಶಕ್ತಿ ಬಳಕೆಯಾಗುತ್ತಿರುವುದು ಸಾಮಾನ್ಯ ನೋಟವಾಗಿದೆ. ನಿರುತ್ಸಾಹಗೊಳಿಸಿದ ಮಾನವ ನಿರ್ಮಿತ ಅನಾನುಕೂಲಗಳನ್ನು ಜನ ತಮ್ಮ ಅನುಕೂಲಕ್ಕೆ ಪರಿವರ್ತಿಸಿಕೊಂಡಿರುವುದು ನನಗೆ ಇಲ್ಲಿ ಅನುಭವಕ್ಕೆ  ಬಂದಿತು.
ರಾಜ್ಯದ ಹೃದಯ ಭಾಗದಲ್ಲಿ ಇರುವ ಸಮಸ್ಯೆಯ ತೀವ್ರತೆಗೂ ಈ ಸೇವಾ ಕೇಂದ್ರ ಕನ್ನಡಿ ಹಿಡಿಯುತ್ತದೆ. ಗಬ್ಬೆದ್ದು ಹೋಗಿರುವ ಆಡಳಿತ, ಆರ್ಥಿಕ ಪ್ರಗತಿಯ ಕೊರತೆ, ನಿರುದ್ಯೋಗ, ಜನರಲ್ಲಿ ಮನೆ ಮಾಡಿರುವ ಹತಾಶೆ ಮತ್ತು ಅವರಲ್ಲಿನ ಆಶಾವಾದ ಕಾಣೆಯಾಗಿರುವುದು ಈ ಭಾಗದಲ್ಲಿ ಸಾಮಾನ್ಯವಾಗಿ ಕಂಡು ಬರುತ್ತಿರುವ ಚಿತ್ರಣವಾಗಿದೆ.

ಭ್ರಮನಿರಸನಗೊಂಡ ಸಾವಿರಾರು ಜನರ ಪೈಕಿ ಸುಶಿಕ್ಷಿತ ರೆಹಮಾನ್‌ ನಂತೆ, ಪ್ರತಿಕೂಲ ಪರಿಸ್ಥಿತಿಯನ್ನೇ ಸದ್ಬಳಕೆ ಮಾಡಿಕೊಂಡವರ ಸಂಖ್ಯೆ ತೀರಾ ಕಡಿಮೆ ಇದೆ.

ರಾಜ್ಯದ ಹೃದಯಭಾಗದ ಎಲ್ಲೆಡೆ ಅನಕ್ಷರತೆ, ಬಡತನ ತಾಂಡವವಾಡುತ್ತಿದೆ.  ತಮ್ಮೆಲ್ಲ ಸಂಕಷ್ಟಗಳಿಗೆ ಶಿಕ್ಷಣದಿಂದ ಪರಿಹಾರ ಸಿಗಬಹುದು ಎನ್ನುವ ಆಶಾವಾದ ಅವರಲ್ಲಿ ಈಗಲೂ ಕಂಡು ಬರುತ್ತಿದೆ. ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಏಕೈಕ ಉದ್ದೇಶದಿಂದ ಜನ ಸಾಲ ಮಾಡಿದ್ದಾರೆ ಇಲ್ಲವೇ ತಮ್ಮ ಭೂಮಿಯ ಕೆಲ ಭಾಗವನ್ನು ಮಾರಾಟ ಮಾಡಿದ್ದಾರೆ. ಸರ್ಕಾರಿ ಶಿಕ್ಷಣ ವ್ಯವಸ್ಥೆಯಿಂದ ಬೇಸತ್ತಿರುವ ಜನ ಮಕ್ಕಳನ್ನು ಹೆಚ್ಚಾಗಿ ಖಾಸಗಿ ಶಾಲೆ, ಕಾಲೇಜುಗಳಿಗೆ ಸೇರಿಸುತ್ತಿದ್ದಾರೆ.

ಆದರೆ, ಆಕರ್ಷಕ ಪದವಿ ಪಡೆದುಕೊಂಡು ಕಾಲೇಜುಗಳಿಂದ ಹೊರ ಬರುವವರು ತಮ್ಮ ವಿದ್ಯೆಗೆ ತಕ್ಕುದಾದ ಉದ್ಯೋಗ ಸಿಗದೆ ಹತಾಶರಾಗುತ್ತಿದ್ದಾರೆ. ಪಾಲಕರು ಈಗಲೂ ಸಾಲದಲ್ಲಿ ಮುಳುಗಿದ್ದಾರೆ. ತೀರದ ಸಾಲ, ಮಕ್ಕಳಿಗೆ ಸಿಗದ ಉದ್ಯೋಗ ಕಂಡು ಅವರಲ್ಲಿ ಒಟ್ಟಾರೆ ವ್ಯವಸ್ಥೆ ಬಗ್ಗೆಯೇ ತೀವ್ರ ಅತೃಪ್ತಿ ಮಡುಗಟ್ಟಿದೆ.

ಕೆಲ ಸುಶಿಕ್ಷಿತರು ಹೊಲ ಗದ್ದೆಗಳಲ್ಲಿ ತಮ್ಮ ಪಾಲಕರು ಮಾಡುತ್ತಿದ್ದ ಕೆಲಸವನ್ನೇ ಮಾಡುತ್ತಿದ್ದಾರೆ. ಕಲಿಕೆ ಪೂರ್ಣಗೊಳಿಸಿ ಹಳ್ಳಿಗೆ ಮರಳಿರುವ ಯುವಕರು ಹೊಲಗಳಲ್ಲಿ ಕೆಲಸ ಮಾಡುವುದನ್ನು ದ್ವೇಷಿಸುತ್ತಿದ್ದಾರೆ. ಶಹಜಾದ್‌ಪುರ ಗ್ರಾಮದ, ಬಿಎಸ್ಸಿ ಓದಿರುವ ದಲಿತ ರಾಮ್‌ ಸರಣ್‌, ಕೆಲಸ ಸಿಗದೆ ಆಲೂಗೆಡ್ಡೆ ಕೀಳುತ್ತಿದ್ದ ದೃಶ್ಯ ಎನ್‌ಡಿಟಿವಿ ವಿಡಿಯೊದಲ್ಲಿ ವ್ಯಾಪಕ ಪ್ರಚಾರ ಪಡೆದಿತ್ತು. ಆತನನ್ನು ಮಾತಿಗೆ ಎಳೆದಾಗ, ಆತ ನರೇಂದ್ರ ಮೋದಿ ಅವರ ಕಾರ್ಯವೈಖರಿ ಮತ್ತು ಕೈಗೊಂಡ ನಿರ್ಧಾರಗಳ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದ. ತನಗೆ ಬಹುಶಃ ಶಾಲಾ ಶಿಕ್ಷಕ ಹುದ್ದೆ  ದೊರೆಯಲಿದೆ ಎನ್ನುವ ನಿರೀಕ್ಷೆ ಆತನಲ್ಲಿ ಇತ್ತು. ಬಿ.ಇಡಿ ಓದುವ ಸಹನೆಯೂ ಆತನಲ್ಲಿ ಇದ್ದಿರಲಿಲ್ಲ.

ಏಳು ತರುಣಿಯರು ದಿನಗೂಲಿ ಮೇಲೆ ಸರಣ್‌ ಜತೆ ಹೊಲದಲ್ಲಿಯೇ ಕೆಲಸ ಮಾಡುತ್ತಿದ್ದರು. ಬರಿಗೈಯಲ್ಲಿ ಆಲೂಗೆಡ್ಡೆಗಳನ್ನು ಹೊರ ತೆಗೆಯುವ ಕೆಲಸದಲ್ಲಿ ಅವರೆಲ್ಲ ನಿರತರಾಗಿದ್ದರು. ಶಾಲೆಯ ಬಿಡುವಿನ ಸಮಯದಲ್ಲಿ ಅವರು ಈ ಕೆಲಸ ಮಾಡುತ್ತಿದ್ದರು. ಅವರೆಲ್ಲ ದಲಿತ ಪಾಸಿ ಜನಾಂಗಕ್ಕೆ ಸೇರಿದವರಾಗಿದ್ದರು. ಅವರಿಗಿನ್ನೂ ಮತ ಚಲಾಯಿಸುವ ಹಕ್ಕು ದೊರೆತಿರಲಿಲ್ಲ. ಆದರೂ ‘ನೀವು ಯಾರಿಗೆ ವೋಟ್‌ ಹಾಕಲು ಇಚ್ಛಿಸುವಿರಿ’ ಎಂದು ಕೇಳಿದಾಗ, ಅವರೆಲ್ಲ ಕಣ್ಣರಳಿಸಿ ಒಕ್ಕೊರಲಿನಿಂದ ‘ನರೇಂದ್ರ ಮೋದಿ’ ಎಂದು ಹೇಳಿದ್ದರು. ಹೀಗಾಗಿ 2019ರವರೆಗೆ ಕಾಯಿರಿ. ಭ್ರಮನಿರಸನಗೊಂಡಿರುವ, ವ್ಯವಸ್ಥೆ ಬಗ್ಗೆ ರೋಸಿ ಹೋಗಿರುವ, ಸಿಟ್ಟಿನಿಂದ ಕುದಿಯುತ್ತಿರುವ ಈ ತರುಣ– ತರುಣಿಯರು ಬಂಡಾಯ ಏಳಲಿದ್ದಾರೆ.

ಠಾಕೂರ್‌ (ರಜಪೂತ್‌) ಪ್ರಾಬಲ್ಯದ ಇನ್ನೊಂದು ಗ್ರಾಮದ ಜನಕ್‌ ಸಿಂಗ್‌ನ ಕಥೆ ಇನ್ನೊಂದು ಬಗೆಯದು. ದೈಹಿಕ ಶಿಕ್ಷಣದಲ್ಲಿ ಸ್ನಾತಕೋತ್ತರ ಪದವಿ ಪಡೆದಿರುವ ಈತನೂ ನಿರುದ್ಯೋಗಿಯಾಗಿದ್ದಾನೆ. ಹೊಲ ಗದ್ದೆ  ನೋಡಿಕೊಳ್ಳುತ್ತಿರುವ ಜನಕ್‌, ಪಡಿತರ ಅಂಗಡಿ ಹೊಂದಿದ್ದಾನೆ. ಸೇನೆಯ ನೇಮಕಾತಿಯಲ್ಲಿ ಮೂರು ಬಾರಿ ಭಾಗಿಯಾಗಿದ್ದರೂ ಉತ್ತೀರ್ಣಗೊಂಡಿಲ್ಲ. ಕೆಲ ನೂರು ಸಂಖ್ಯೆಯಲ್ಲಿ ಇರುವ ಕಚೇರಿ ಜವಾನ ಅಥವಾ ಭದ್ರತಾ ಸಿಬ್ಬಂದಿ ಕೆಲಸಕ್ಕೆ 20 ಲಕ್ಷಕ್ಕೂ ಹೆಚ್ಚು ಜನ ಅರ್ಜಿ ಹಾಕುವ  ಬಹುಸಂಖ್ಯಾತರಲ್ಲಿ ಸ್ನಾತಕೋತ್ತರ ಮತ್ತು ಪಿಎಚ್.ಡಿ ಪದವಿ ಪಡೆದವರೂ ಇರುವುದು ಈ ರಾಜ್ಯದ ವಿಶೇಷವಾಗಿದೆ.

ಕುಂಠಿತ ಆರ್ಥಿಕ ವೃದ್ಧಿ ದರ ಮತ್ತು ಶಿಕ್ಷಣದ ಕಳಪೆ ಗುಣಮಟ್ಟದಿಂದಾಗಿ ಸುಶಿಕ್ಷಿತರು ಉದ್ಯೋಗ ಸಿಗದೆ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಒಂದು ವೇಳೆ ನಿಮಗೆ ಅನುಮಾನಗಳು ಮೂಡಿದ್ದರೆ, ನೀವು ನನ್ನೊಂದಿಗೆ ಉತ್ತರ ಪ್ರದೇಶದಲ್ಲಿ ಪ್ರವಾಸ ಮಾಡಿದರೆ ನಿಮಗೆ ಗೋಡೆಯ ಮೇಲಿನ ಬರಹ ಸ್ಪಷ್ಟಗೊಳ್ಳುತ್ತದೆ.

ರಾಜ್ಯದ ಎಲ್ಲೆಡೆ ಬಹುತೇಕ ಇದೇ ಬಗೆಯ ಕಥೆಗಳಿವೆ. ಅಖಿಲೇಶ್ ಯಾದವ್‌ ಅವರ  ಚುನಾವಣಾ ಪ್ರಚಾರ ಕಾರ್ಯಕ್ರಮ ನಿರ್ವಹಿಸುವ ತಂಡಕ್ಕೆ ಸೇರಿದ ಕರೆ ಕೇಂದ್ರದ ಮುಖ್ಯಸ್ಥೆ ಬ್ಯೂಟಿ ಸಿಂಗ್‌, ಅಮೇಠಿಯ ರಜಪೂತ್‌ ಕುಟುಂಬಕ್ಕೆ ಸೇರಿದವಳು.  ಆತ್ಮವಿಶ್ವಾಸದ ಪ್ರತೀಕದಂತಿದ್ದ ಈಕೆಯಲ್ಲಿ ಇತರರ ಬಗ್ಗೆ ಕಾಳಜಿ ತೋರುವ ವಿಶಿಷ್ಟ ಮನೋಭಾವವೂ ಇತ್ತು. ಈ ತಾತ್ಕಾಲಿಕ ಕೆಲಸಕ್ಕೆ ಆಕೆಗೆ ತಿಂಗಳಿಗೆ 11 ಸಾವಿರ ರೂಪಾಯಿ ವೇತನ ನೀಡಲಾಗುತ್ತಿದೆ. ಆಕೆ ಸ್ನಾತಕೋತ್ತರ ಪದವೀಧರಳಾಗಿದ್ದರೂ ಅದು ಇಲ್ಲಿ ಲೆಕ್ಕಕ್ಕೆ ಇಲ್ಲ.

ಉನ್ನತ ಶಿಕ್ಷಣಕ್ಕೇನೂ ಕೊರತೆ ಇಲ್ಲ. ಆದರೆ, ಉದ್ಯೋಗ ಅವಕಾಶಗಳಿಲ್ಲ. ಪದವಿಗಳು ಯುವ ಸಮುದಾಯದಲ್ಲಿ ಆಸೆ ಆಕಾಂಕ್ಷೆಗಳನ್ನು ಗರಿಗೆದರಿಸಿದರೂ, ಅರ್ಹ ಉದ್ಯೋಗ ಅವಕಾಶಗಳು ಸಿಗದೆ ತರುಣ – ತರುಣಿಯರು ಹತಾಶರಾಗಿದ್ದಾರೆ.

ಯಾವುದೇ ಹೊಸ ಉದ್ಯಮವೂ ತಲೆ ಎತ್ತುತ್ತಿಲ್ಲ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿನ ಗುಡಿ ಕೈಗಾರಿಕೆಗಳು ಈಗ ನೋಟು ರದ್ದತಿಯಿಂದಾಗಿ ತಮ್ಮ ಮಹತ್ವ ಕಳೆದುಕೊಂಡಿವೆ. ಸಾಂಪ್ರದಾಯಿಕ ತಯಾರಿಕೆಗಳಾದ ಹಿತ್ತಾಳೆಯ ಉತ್ಪನ್ನ, ಬಳೆ, ಚರ್ಮದ ಉತ್ಪನ್ನ, ಬೀಗ, ರೇಷ್ಮೆ, ನೇಕಾರಿಕೆ, ಕುಂಬಾರಿಕೆ ನೆಚ್ಚಿಕೊಂಡವರು ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಸದ್ಯಕ್ಕಂತೂ ಅವರ ಬದುಕಿನಲ್ಲಿ ಹೊಸ ಭರವಸೆಯೇನೂ ಕಾಣಿಸುತ್ತಿಲ್ಲ.

ಜನರಲ್ಲಿ ಮಡುಗಟ್ಟಿರುವ ಸಿಟ್ಟು, ಆಕ್ರೋಶದಿಂದ ಕುದಿಯುತ್ತಿರುವ ಯುವ ಜನಾಂಗ ನಗರಗಳಲ್ಲಿ ಹಿಂಸಾಕೃತ್ಯದಲ್ಲೇನೂ ತೊಡಗಿಲ್ಲ. ನಕ್ಸಲೀಯರಾಗಿ ಬಂದೂಕನ್ನೂ ಕೈಗೆತ್ತಿಕೊಂಡಿಲ್ಲ ಅಥವಾ ಪಂಜಾಬ್‌ನಂತೆ ಮಾದಕ ದ್ರವ್ಯಗಳ ವ್ಯಸನಕ್ಕೂ ತುತ್ತಾಗಿಲ್ಲ.  ಸುತ್ತಲೂ ನಿರಾಶೆಯ ಕಾರ್ಮೋಡಗಳೇ ಕವಿದಿದ್ದರೂ ಜನ ವ್ಯವಸ್ಥೆ ಬಗ್ಗೆ ನಂಬಿಕೆಯನ್ನು ಕಳೆದುಕೊಂಡಿಲ್ಲ. ಸಾಮಾಜಿಕ– ಆರ್ಥಿಕ ಮಾನದಂಡಗಳ ದೃಷ್ಟಿಯಲ್ಲಿ ಜನರ ಜೀವನಮಟ್ಟ ಕಳಪೆಯಾಗಿದೆ. ಆದರೂ ಅವರು ಪ್ರಜಾಸತ್ತಾತ್ಮಕ ಪ್ರಕ್ರಿಯೆಯಲ್ಲಿ ಮತ್ತು ಚುನಾವಣೆಗಳಲ್ಲಿ ನಂಬಿಕೆ ಇರಿಸಿದ್ದಾರೆ.

ಈ ಚುನಾವಣೆಗೆ ಮೂರು ಮುಖ್ಯ ಲಕ್ಷಣಗಳು ಇರುವುದು ನನ್ನ ಅನುಭವಕ್ಕೆ ಬಂದಿದೆ. ಮೊದಲನೆಯದಾಗಿ– ಯಾರೊಬ್ಬರೂ, ಯಾರಿಂದಲೂ ಹೆಚ್ಚಿನದನ್ನು ನಿರೀಕ್ಷಿಸಿಲ್ಲ. ಎರಡನೆಯದಾಗಿ–  ಬಹುತೇಕ ಜಾತಿ ಆಧಾರಿತ ಸಾಂಪ್ರದಾಯಿಕ ಮತ ಚಲಾಯಿಸುವ ಪದ್ಧತಿಯಲ್ಲಿ ಬದಲಾವಣೆ ತರುವ ಉದ್ದೇಶವನ್ನೇನೂ ಇಲ್ಲಿನ ಬಹುತೇಕ ಜನ ಹೊಂದಿಲ್ಲ. ಮೂರನೆಯದಾಗಿ– ಹೊಸ ಮತದಾರರು ಕಿರಿಯರಾದ ಅಖಿಲೇಶ್‌, ರಾಹುಲ್ ಅಥವಾ ಮಾಯಾವತಿ ಅವರಿಗಿಂತ ಮೋದಿ ಅವರತ್ತ ಆಶಾವಾದದಿಂದ ನೋಡುತ್ತಿರುವುದು ಕಂಡು ಬರುತ್ತಿದೆ.

ಈ ಬಾರಿಯ ಚುನಾವಣಾ ಫಲಿತಾಂಶವನ್ನು ಏರುಪೇರು ಮಾಡುವವರ ಸಂಖ್ಯೆ ದೊಡ್ಡ ಪ್ರಮಾಣದಲ್ಲಿ ಇದೆಯೇ ಎನ್ನುವುದು ಸದ್ಯಕ್ಕಂತೂ ಎಣಿಕೆಗೆ ಸಿಗುತ್ತಿಲ್ಲ. ಫಲಿತಾಂಶ ಬದಲಿಸುವ ಚಿಂತನೆ ಹೊಂದಿರುವವರು ಈ ಬಾರಿ ಮತದಾನಕ್ಕೆ ಅರ್ಹತೆಯನ್ನೂ ಪಡೆದಿರಲಿಕ್ಕಿಲ್ಲ. ಇವರು 2019ರಲ್ಲಿ ಮತದಾನ ಮಾಡುವ ಅರ್ಹತೆ ಪಡೆದುಕೊಂಡಾಗ ಈ ಅನಿಶ್ಚಿತತೆಯ ಬಿಕ್ಕಟ್ಟು ದೂರವಾಗಬಹುದೇನೋ. 

 (ಲೇಖಕ ಮೀಡಿಯಾಸ್ಕೇಪ್ ಪ್ರೈ.ಲಿ. ಸಂಸ್ಥಾಪಕ ಸಂಪಾದಕ ಹಾಗೂ ಅಧ್ಯಕ್ಷ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT