ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನಮೋಹನ ಯುಗ ಅಂತ್ಯಗೊಳ್ಳುತ್ತಿದೆಯೇ?

Last Updated 27 ಡಿಸೆಂಬರ್ 2010, 9:55 IST
ಅಕ್ಷರ ಗಾತ್ರ

‘ಮನಮೋಹನ ಯುಗ’ ಅಂತ್ಯಗೊಳ್ಳುತ್ತಿದೆ ಎನ್ನುವ ಭವಿಷ್ಯವಾಣಿ ವರ್ಷದ ಕೊನೆಯಲ್ಲಿ ಪಿಸುದನಿಯಲ್ಲಿ ಕೇಳತೊಡಗಿದೆ.ಮನಮೋಹನ್ ಸಿಂಗ್ ಪ್ರಧಾನಿಯಾದ ಆರೇ ತಿಂಗಳಲ್ಲಿ ಇಂತಹದ್ದೊಂದು ಭವಿಷ್ಯವಾಣಿ ಕೇಳಿತ್ತು. ಅದನ್ನು ನುಡಿದಿದ್ದವರು ದೆಹಲಿ ಬಿಜೆಪಿ ಪರಿವಾರದ ಜೋತಿಷಿ ಲಚಮನ್‌ದಾಸ್. ಆತನ ಬಡಾಯಿಯನ್ನು ನಂಬಿ ಎನ್‌ಡಿಎ ನಾಯಕರು ಕೂಡಾ ಹಳ್ಳಕ್ಕೆ ಬಿದ್ದುಬಿಟ್ಟಿದ್ದರು. ಅದರ ನಂತರ ಲಚಮನ್‌ದಾಸ್ ಬಾಯಿಬಿಟ್ಟಿಲ್ಲ. ಆದರೆ ಈ ಬಾರಿ ಪತನಪೂರ್ವದ ಶಕುನಗಳು ರಾಜಕೀಯದ ಆಗಸದಲ್ಲಿ ಅಲ್ಲಲ್ಲಿ ಕಾಣಿಸತೊಡಗಿವೆ. ಇದರ ಅರ್ಥ ಇನ್ನು ಕೆಲವೇ ದಿನಗಳಲ್ಲಿ ಯುಪಿಎ ಸರ್ಕಾರ ಉರುಳಿಬೀಳುತ್ತದೆ ಎಂದೇನಲ್ಲ.

ಯುಪಿಎ ಎರಡನೇ ಅವಧಿಯನ್ನು ಪೂರ್ಣಗೊಳಿಸುವ ಸಾಧ್ಯತೆ ಈಗಲೂ ಇದೆ. ಆದರೆ ಇದಕ್ಕೆ ಕಾರಣ ರಾಜಕೀಯವಾಗಿ ಮತ್ತು ನೈತಿಕವಾಗಿ ಆಡಳಿತ ಪಕ್ಷಕ್ಕಿಂತಲೂ ಹೆಚ್ಚು ದಿವಾಳಿಯಾಗಿರುವ ವಿರೋಧಪಕ್ಷಗಳ ನಿಶ್ಯಕ್ತಿಯೇ ಹೊರತು ಯುಪಿಎ ಸರ್ಕಾರದ ಸಾಧನೆಯ ಶಕ್ತಿ ಅಲ್ಲ. ಒಮ್ಮೊಮ್ಮೆ ಸತ್ತುಹೋದ ಮರ ಕೂಡಾ ಬಹಳ ದಿನ ನೆಟ್ಟಗೆ ನಿಂತಿರುತ್ತದೆ, ಒಂದು ಸಣ್ಣಗಾಳಿ ಬೀಸಿದರೂ ಅದು ಉರುಳಿಬಿಡುತ್ತದೆ. ದೇಶದ ವಿರೋಧಪಕ್ಷಗಳು ಎಷ್ಟೊಂದು ದುರ್ಬಲವಾಗಿದೆ ಎಂದರೆ ಅಂತಹದ್ದೊಂದು ಸಣ್ಣಗಾಳಿ ಹೊರಡಿಸುವ ಶಕ್ತಿಯೂ ಅವುಗಳಿಗಿಲ್ಲದಂತಾಗಿದೆ.

ಈ ಬೆಳವಣಿಗೆಯಿಂದ ಬಹುಶಃ ಹೆಚ್ಚು ಚಿಂತೆಗೀಡಾಗಿರುವವರು ಸೋನಿಯಾಗಾಂಧಿ. ಇದು ಕಾಂಗ್ರೆಸ್ ಅಧ್ಯಕ್ಷರಿಗಿಂತಲೂ ಹೆಚ್ಚಾಗಿ ಒಬ್ಬ ತಾಯಿಯ ಚಿಂತೆ. ಈಗಾಗಲೇ ವಿಳಂಬವಾಗಿ ಹೋಗಿರುವ ಮಗನ ಪಟ್ಟಾಭಿಷೇಕ 2014ರ ಲೋಕಸಭಾ ಚುನಾವಣೆಯ ನಂತರವಾದರೂ ನಡೆಯಬಹುದೆಂಬ ನಿರೀಕ್ಷೆಯಲ್ಲಿ ಅವರಿದ್ದರು. ಆದರೆ ಸೋನಿಯಾಗಾಂಧಿ ನಂಬಿರುವ ಕುದುರೆ ಕುಂಟತೊಡಗಿದೆ.

ಕಾಂಗ್ರೆಸ್ ಗೆಲುವಿನ ಓಟಕ್ಕೆ ಸರ್ಕಾರದ ಸಾಧನೆಯ ಬಲವನ್ನು ತುಂಬುವ ಸ್ಥಿತಿಯಲ್ಲಿ ಪ್ರಧಾನಿ ಮನಮೋಹನ್‌ಸಿಂಗ್ ಇಲ್ಲ. ಕಳೆದ 25 ವರ್ಷಗಳ ಅವಧಿಯಲ್ಲಿ ಅತ್ಯಂತ ದೀರ್ಘ ಕಾಲ ಪ್ರಧಾನಿ ಪಟ್ಟದಲ್ಲಿ ಉಳಿದುಕೊಂಡವರು ಎಂಬ ಖ್ಯಾತಿಯ ಮನಮೋಹನ್‌ಸಿಂಗ್ ಎರಡನೇ ಅವಧಿಯಲ್ಲಿ ಒಂದುವರೆ ವರ್ಷ ಕಳೆಯುವುದರೊಳಗೆಯೇ ಏದುಸಿರುಬಿಡತೊಡಗಿದ್ದಾರೆ. ಪ್ರಾಮಾಣಿಕರು ಮತ್ತು ಆರ್ಥಿಕ ತಜ್ಞರು ಎಂಬ ಅವರ ಪ್ರಭಾವಳಿ ಮಂಕಾಗುತ್ತಿದೆ.

ಪ್ರಧಾನಿಯವರ ಉದ್ದೇಶ ಪ್ರಾಮಾಣಿಕವಾದುದು ಎನ್ನುವುದನ್ನು ಒಂದು ಹಂತದ ವರೆಗೆ ಒಪ್ಪಿಕೊಳ್ಳಲೂಬಹುದು. ಆದರೆ ಅನುಷ್ಠಾನ? ಜಾರಿಗೆ ಬಂದಿರುವ ಶಿಕ್ಷಣದ ಹಕ್ಕು ಕಾಯಿದೆ ಮತ್ತು ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಶೇಕಡಾ 50ರಷ್ಟು ಮೀಸಲಾತಿ ನೀಡುವ ಕಾಯಿದೆ, ರಾಜ್ಯಸಭೆಯಲ್ಲಿ ಅಂಗೀಕಾರ ಪಡೆದ ಮಹಿಳಾ ಮೀಸಲಾತಿ ಮಸೂದೆ... ಇಷ್ಟಕ್ಕೆ ಯುಪಿಎ ಸಾಧನೆಯ ಪಟ್ಟಿ ನಿಂತುಬಿಡುತ್ತದೆ. ಕಳೆದ ಅವಧಿಯಲ್ಲಿಯೇ ಜಾರಿಗೆ ಬಂದಿದ್ದ ಎನ್‌ಆರ್‌ಇಜಿ ಕಾರ್ಯಕ್ರಮಕ್ಕೆ ಒಂದು ಲಕ್ಷ ಕೋಟಿ ಹಣ ನೀಡಿದ್ದರೂ ಅದು ಅನುಷ್ಠಾನದಲ್ಲಿ ಕುಂಟುತ್ತಾ ಸಾಗಿದೆ. ಹೌದು ಹಣದುಬ್ಬರದ ಹೊರತಾಗಿಯೂ ನಮ್ಮ ಆರ್ಥಿಕತೆ ವಿಸ್ತಾರವಾಗಿ ಬೆಳೆಯುತ್ತಿದೆ.

ಆರು ವರ್ಷಗಳ ಹಿಂದೆ 125 ದಶಲಕ್ಷ ಡಾಲರ್‌ಗಳಷ್ಟಿದ್ದ ವಿದೇಶಿ ವಿನಿಮಯ ನಿಧಿಯ ಮೊತ್ತ ಹೆಚ್ಚುಕಡಿಮೆ 300 ದಶಲಕ್ಷ ಡಾಲರ್‌ಗಳಿಗೆ ಏರಿದೆ. ಜಗತ್ತನ್ನೆಲ್ಲ ಕಾಡಿದ ಆರ್ಥಿಕ ಹಿಂಜರಿತ ಇಲ್ಲಿ ದೊಡ್ಡ ಹಾನಿ ಮಾಡಿಲ್ಲ. ಸಾಧನೆಗೆ ಹೋಲಿಸಿದರೆ ವೈಫಲ್ಯದ ಪಟ್ಟಿ ದೊಡ್ಡದು. ಗಗನಕ್ಕೇರುತ್ತಿರುವ ಆಹಾರ ವಸ್ತುಗಳ ಬೆಲೆಯಿಂದ ಹೈರಾಣಾಗಿರುವ ಜನ ಮನೆಮನೆಯಲ್ಲಿ ಸರ್ಕಾರವನ್ನು ಶಪಿಸುತ್ತಿದ್ದಾರೆ. ಐಪಿಎಲ್, ಕಾಮನ್‌ವೆಲ್ತ್ ಮತ್ತು ಆದರ್ಶ ಸೊಸೈಟಿ ಹಗರಣಗಳು ಯಾವ ಸೀಸರನ ಹೆಂಡತಿ ಕೂಡಾ ಸಂಶಯಾತೀತರಲ್ಲ ಎಂದು ಹೇಳುವಂತಿದೆ. ಶಶಿ ತರೂರು, ಸುರೇಶ್ ಕಲ್ಮಾಡಿ, ಅಶೋಕ್ ಚವ್ಹಾಣ್... ಉರುಳುತ್ತಿರುವ ತಲೆಗಳ ಲೆಕ್ಕ ನಿಂತಿಲ್ಲ. ಇತ್ತೀಚಿನ ವರ್ಷಗಳಲ್ಲಿ ಈಗಿನದ್ದು ಅತ್ಯಂತ ಅನುಭವಿ ಸಚಿವ ಸಂಪುಟ, ಒಂಬತ್ತು ಮಾಜಿ ಮುಖ್ಯಮಂತ್ರಿಗಳೇ ಸಚಿವರಾಗಿದ್ದಾರೆ. ಆದರೆ ಉತ್ತಮ ಸಾಧನೆಯ ಸಚಿವರನ್ನು ಆಯ್ಕೆ ಮಾಡಲು ಹೊರಟರೆ ಒಬ್ಬರ ಹೆಸರು ಸಿಗುವುದಿಲ್ಲ. ಎದ್ದುಕಾಣುವ ಮೂರು ಹೆಸರುಗಳಲ್ಲೊಂದಾದ ಹಣಕಾಸು ಸಚಿವ ಪ್ರಣಬ್‌ಮುಖರ್ಜಿ ಅವರಿಗೆ ಹಣದುಬ್ಬರ ಮತ್ತು ಬೆಲೆನಿಯಂತ್ರಣ ಸಾಧ್ಯವಾಗುತ್ತಿಲ್ಲ,
ಗೃಹಸಚಿವ ಪಿ. ಚಿದಂಬರಂ ನಕ್ಸಲೀಯರ ಸವಾಲನ್ನು ಎದುರಿಸಲಾಗದೆ ಸೋತಿದ್ದಾರೆ. ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಕಪಿಲ್ ಸಿಬಲ್ ಅವರಿಗೆ ಖಾತೆ ನಿರ್ವಹಣೆಗಿಂತ ಸರ್ಕಾರವನ್ನು ಸಮರ್ಥಿಸುವುದರಲ್ಲಿಯೇ ಸುಸ್ತಾಗಿ ಹೋಗಿದ್ದಾರೆ. ಪಕ್ಷ ಮತ್ತು ಸರ್ಕಾರದ ನಡುವೆ ಕೂಡಾ ಸಮನ್ವಯವೇ ಇಲ್ಲದಂತಾಗಿದೆ. ನಕ್ಸಲೀಯರ ಬಗ್ಗೆ ಚಿದಂಬರಂ ಅಭಿಪ್ರಾಯವನ್ನು ದಿಗ್ವಿಜಯ್ ಸಿಂಗ್ ಒಪ್ಪುವುದಿಲ್ಲ, ಜೈವಿಕ ಬದನೆಕಾಯಿಯನ್ನು ಜೈರಾಮ್ ರಮೇಶ್ ಬೇಡ ಎನ್ನುತ್ತಿದ್ದರೆ ಶರದ್ ಪವಾರ್, ಕಪಿಲ್ ಸಿಬಲ್ ಮತ್ತು ಪ್ರಥ್ವಿರಾಜ್ ಚವ್ಹಾಣ್ ಬೇಕು ಎನ್ನುತ್ತಿದ್ದಾರೆ. ಸೋನಿಯಾ ಗಾಂಧಿ ಅವರ ಮಹತ್ವಾಕಾಂಕ್ಷೆಯ ಆಹಾರ ಭದ್ರತಾ ಮಸೂದೆಗೆ ಹಣಕಾಸು ಸಚಿವರೇ ದುಡ್ಡು ಇಲ್ಲ ಎನ್ನುತ್ತಿದ್ದಾರೆ. ಕಾಶ್ಮೆರ ಉಗ್ರಗಾಮಿಗಳಿಗೆ ಕ್ಷಮಾದಾನ ನೀಡಲು ಒಪ್ಪದ ಚಿದಂಬರಂ. ಅವರ ನಿಲುವಿಗೆ ಗುಲಾಂ ನಬಿ ಆಜಾದ್ ಸಹಮತ ಇಲ್ಲ.

ರಾಜಕೀಯ ಪಕ್ಷವಾಗಿ ಕೂಡಾ ಕಾಂಗ್ರೆಸ್ ಸಾಧನೆ ಭವಿಷ್ಯದಲ್ಲಿಯೂ ಭರವಸೆ ಹುಟ್ಟಿಸುವಂತಿಲ್ಲ. ವೈ.ಎಸ್.ರಾಜಶೇಖರ ರೆಡ್ಡಿ ಅಕಾಲಿಕ ಸಾವಿನ ನಂತರ ಬಂಡೆದ್ದಿರುವ ಜಗನ್‌ಮೋಹನ್ ರೆಡ್ಡಿಯವರಿಂದಾಗಿ ಅಲ್ಲಿನ ಆಡಳಿತಾರೂಢ ಕಾಂಗ್ರೆಸ್ ಪಕ್ಷ ದಿನದಿಂದ ದಿನಕ್ಕೆ ದುರ್ಬಲಗೊಳ್ಳುತ್ತಿದೆ. ಹಗರಣದಲ್ಲಿ ಸಿಕ್ಕಿಹಾಕಿಕೊಂಡು ಮಹಾರಾಷ್ಟ್ರದ ಮುಖ್ಯಮಂತ್ರಿ ಅಶೋಕ್ ಚವ್ಹಾಣ್ ರಾಜೀನಾಮೆ ನೀಡಿದ್ದಾರೆ.

ಕರ್ನಾಟಕದಲ್ಲಿ ಭ್ರಷ್ಟ ಬಿಜೆಪಿ ಸರ್ಕಾರ ಇದ್ದರೂ ಕಾಂಗ್ರೆಸ್ ಪಕ್ಷದಲ್ಲಿ ಚೇತರಿಕೆ ಕಾಣುತ್ತಿಲ್ಲ. ಗುಜರಾತ್‌ನಲ್ಲಿ ಕಾಂಗ್ರೆಸ್ ಪಕ್ಷದ ಸೋಲಿನಯಾತ್ರೆ ಮತ್ತು ನರೇಂದ್ರ ಮೋದಿ ಗೆಲುವಿನ ಯಾತ್ರೆ ಮುಂದುವರಿದಿದೆ. ಕೊನೆಯದಾಗಿ ಬಿಹಾರದಲ್ಲಿ ರಾಹುಲ್‌ಗಾಂಧಿಯವರ ಪ್ರಚಾರ ವೈಭವದ ಹೊರತಾಗಿಯೂ ಕಾಂಗ್ರೆಸ್ ನೆಲಕಚ್ಚಿದೆ. ಮುಂದಿನ ವರ್ಷ ವಿಧಾನಸಭಾ ಚುನಾವಣೆ ನಡೆಯಲಿರುವ ಐದು ರಾಜ್ಯಗಳ ಪೈಕಿ ಕೇರಳ ರಾಜ್ಯವೊಂದನ್ನು ಹೊರತುಪಡಿಸಿ ಬೇರೆಲ್ಲೂ ಗೆಲುವಿನ ಅವಕಾಶ ಇಲ್ಲ.

ಪಶ್ಚಿಮಬಂಗಾಳ, ತಮಿಳುನಾಡು ಮತ್ತು ಪುದುಚೇರಿಗಳಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಹೇಳಿಕೊಳ್ಳುವಂತಹ ನೆಲೆ ಇಲ್ಲ. ಹತ್ತು ವರ್ಷಗಳ ಅಧಿಕಾರದಿಂದಾಗಿ ಅಸ್ಸಾಂನಲ್ಲಿ ಕಾಂಗ್ರೆಸ್ ಆಡಳಿತ ವಿರೋಧಿ ಅಲೆ ಎದುರಿಸುತ್ತಿದೆ. ಅಷ್ಟರಲ್ಲಿ 2012 ಎದುರಾಗುತ್ತದೆ. ಆ  ವರ್ಷ ಚುನಾವಣೆ ನಡೆಯಲಿರುವ ಐದು ರಾಜ್ಯಗಳ ಪೈಕಿ ಉತ್ತರ ಪ್ರದೇಶದ ಚುನಾವಣೆ ಯುಪಿಎ ಸರ್ಕಾರಕ್ಕೆ ಮಾತ್ರವಲ್ಲ, ರಾಹುಲ್‌ಗಾಂಧಿ ರಾಜಕೀಯ ಭವಿಷ್ಯದ ದೃಷ್ಟಿಯಿಂದಲೂ ನಿರ್ಣಾಯಕ.

ಪ್ರಧಾನಿ ಮನಮೋಹನ್‌ಸಿಂಗ್ ಮತ್ತು ಕಾಂಗ್ರೆಸ್ ಪಕ್ಷದ ಅಧ್ಯಕ್ಷೆ ಸೋನಿಯಾಗಾಂಧಿ -ಇವರಿಬ್ಬರ ನಡುವೆ ಯುಪಿಎ- 2ರ ವೈಫಲ್ಯಕ್ಕೆ ಕಾರಣಕರ್ತರು ಯಾರು ಎನ್ನುವುದರ ಬಗ್ಗೆ ಭಿನ್ನ ಅಭಿಪ್ರಾಯಗಳಿವೆ. ಮನಮೋಹನ್ ಸಿಂಗ್ ಪ್ರಧಾನಿ ಪಟ್ಟದಲ್ಲಿ ಕೂತಿದ್ದರೂ ರಾಜಕೀಯ ಅಧಿಕಾರ ಕಾಂಗ್ರೆಸ್ ಅಧ್ಯಕ್ಷರ ಕೈಯ್ಯಲ್ಲಿಯೇ ಇರುವುದರಿಂದ ಯುಪಿಎ ಸರ್ಕಾರದ ಇಂದಿನ ಸ್ಥಿತಿಗೆ ಸೋನಿಯಾಗಾಂಧಿಯವರೇ ಕಾರಣ ಎನ್ನುವವರಿದ್ದಾರೆ. ಈ ಅಭಿಪ್ರಾಯದಲ್ಲಿರುವ ನಿಜಾಂಶವನ್ನು ತಳ್ಳಿಹಾಕಲಾಗದು. ಯುಪಿಎ ಸರ್ಕಾರದ ಒಳರಚನೆ ವಿಲಕ್ಷಣ ಸ್ವರೂಪದ್ದು. ಮನಮೋಹನ್‌ಸಿಂಗ್ ಮತ್ತು ಸೋನಿಯಾಗಾಂಧಿ ನಡುವೆ ಹೊರನೋಟಕ್ಕೆ ಕಾಣುವಂತಹ ಶ್ರಮವಿಭಜನೆ ಇದೆ. ಆಡಳಿತ ಪ್ರಧಾನಿಯವರದ್ದಾದರೆ, ರಾಜಕೀಯ ನಿರ್ವಹಣೆ ಕಾಂಗ್ರೆಸ್ ಅಧ್ಯಕ್ಷರದ್ದು. ಸಚಿವರ ನೇಮಕದಿಂದ ಹಿಡಿದು ಮಿತ್ರಪಕ್ಷಗಳ ಕುಂದುಕೊರತೆಗಳ ಪರಿಶೀಲನೆ ವರೆಗೆ ರಾಜಕೀಯ ಸಂಬಂಧಿ ನಿರ್ಧಾರಗಳು ಜನಪಥ ರಸ್ತೆಯ ಹತ್ತನೇ ನಂಬರಿನ ಬಂಗಲೆಯಿಂದಲೇ ಹೊರಬೀಳುತ್ತಿರುವುದು.

ಇದರಿಂದಾಗಿ ಆಹಾರ ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದರೂ ಸಚಿವ ಶರದ್ ಪವಾರ್ ವಿರುದ್ಧ ಪ್ರಧಾನಿ ಸೊಲ್ಲೆತ್ತುವಂತಿಲ್ಲ.ತನ್ನ ಆದೇಶವನ್ನು ಸಚಿವ ಎ.ರಾಜಾ ಮೀರಿದರೂ ಅವರನ್ನು ಸಂಪುಟದಿಂದ ಕೈಬಿಡುವಂತಿಲ್ಲ, ರೈಲ್ವೆ ಇಲಾಖೆಯನ್ನು ಪಶ್ಚಿಮಬಂಗಾಳಕ್ಕಷ್ಟೇ ಸೀಮಿತಗೊಳಿಸುತ್ತಿರುವ ಮಮತಾ ಬ್ಯಾನರ್ಜಿ ಅವರ ಖಾತೆಯನ್ನೂ ಬದಲಾಯಿಸುವಂತಿಲ್ಲ. ಇದು ಸಮ್ಮಿಶ್ರ ಸರ್ಕಾರದ  ಅಸಹಾಯಕತೆಯ ಸವಾಲುಗಳು. ಈ ಸವಾಲುಗಳನ್ನು ಎದುರಿಸಲು ಸೋನಿಯಾಗಾಂಧಿ ವಿಫಲರಾಗಿರುವ ಕಾರಣದಿಂದಾಗಿಯೇ ಪ್ರಧಾನಿ ಕುರ್ಚಿ ಅಲುಗಾಡುತ್ತಿರುವುದು ಎನ್ನುತ್ತಾರೆ ಮನಮೋಹನ್‌ಸಿಂಗ್ ಅಭಿಮಾನಿಗಳು.

ಆದರೆ ಇಷ್ಟೊಂದು ಸುಲಭದಲ್ಲಿ ಮನಮೋಹನ್‌ಸಿಂಗ್ ಅವರನ್ನು ನಿರಪರಾಧಿ ಎಂದು ಘೋಷಿಸಿಬಿಡಬಹುದೇ? ಪ್ರಧಾನಿಯಾದ ಮೊದಲ ಅವಧಿಯಲ್ಲಿ ರಾಜಕಾರಣಿಯಾಗದೆ ರಾಜಕಾರಣ ಮಾಡುವುದೆಂದರೆ ಹೇಗೆ ಎಂದು ತೋರಿಸಿಕೊಟ್ಟವರು ಇದೇ ಮನಮೋಹನ್‌ಸಿಂಗ್ ಅಲ್ಲವೇ? ಆ ಸಮಯದಲ್ಲಿ ಯುಪಿಎ ಸರ್ಕಾರದ ಬೆಂಬಲಕ್ಕೆ ನಿಂತಿದ್ದ ಎಡಪಕ್ಷಗಳು ನಾಗರಿಕ ಪರಮಾಣು ಒಪ್ಪಂದವನ್ನು ವಿರೋಧಿಸುತ್ತಿದ್ದದ್ದು ತಾತ್ವಿಕ ಕಾರಣಕ್ಕಾಗಿ. ದೇಶದ ಖಜಾನೆಗೆ ಕನ್ನ ಹಾಕುವಂತಹ ದಂಧೆಗೇನು ಅವುಗಳು ಇಳಿದಿರಲಿಲ್ಲ. ಹೀಗಿದ್ದರೂ ಎಡಪಕ್ಷಗಳು ಒಡ್ಡಿದ್ದ ಸವಾಲನ್ನು ಪ್ರತಿಷ್ಠೆಯಾಗಿ ಸ್ವೀಕರಿಸಿದ ಮನಮೋಹನ್‌ಸಿಂಗ್ ಯುಪಿಎ  ಸರ್ಕಾರವನ್ನು ಪತನದ ಅಂಚಿಗೆ ತಂದು ನಿಲ್ಲಿಸಿದ್ದರು. ಅವಿಶ್ವಾಸ ಮತಯಾಚನೆಯಲ್ಲಿ ಗೆಲ್ಲಲು ಎಲ್ಲ ಬಗೆಯ ಅಡ್ಡದಾರಿಗಳನ್ನು ತುಳಿದು ಆ ವರೆಗಿನ ತಮ್ಮ ಶುಭ್ರವ್ಯಕ್ತಿತ್ವಕ್ಕೆ ಕಳಂಕ ಹಚ್ಚಿಕೊಂಡರು. ಎಡಪಕ್ಷಗಳನ್ನು ನಿವಾರಿಸಿಕೊಳ್ಳಲು ಅಷ್ಟೊಂದು ಅಪಾಯದ ಹಾದಿ ತುಳಿದ ಮನಮೋಹನ್‌ಸಿಂಗ್ ದೇಶದ ಖಜಾನೆಯನ್ನೇ ಲೂಟಿ ಹೊಡೆಯಲು ಹೊರಟಿರುವ ಡಿಎಂಕೆಯನ್ನು ನಿಯಂತ್ರಿಸಲು ಯಾಕೆ ಪ್ರಧಾನಿ ಪಟ್ಟವನ್ನು ಪಣವಾಗಿ ಇಡಲಿಲ್ಲ? ಹಿಂದಿನ ಅವಧಿಯ ‘ಸಾಹಸ’ಕ್ಕೆ ಸೋನಿಯಾಗಾಂಧಿ ಅಡ್ಡಿಪಡಿಸಲಿಲ್ಲ ಎಂದಾದರೆ ಈ ಬಾರಿ ಅಡ್ಡಬರುತ್ತಿದ್ದರೇ?

ಈಗಿನ ಪರಿಸ್ಥಿತಿಯಲ್ಲಿ ಸೋನಿಯಾ ಗಾಂಧಿಯವರ ಬಳಿಯೂ ಬಹಳ ಆಯ್ಕೆಗಳಿಲ್ಲ. ನಡುಹಾದಿಯಲ್ಲಿ ನಾಯಕನನ್ನು ಬದಲಾವಣೆ ಮಾಡುವ ಧೈರ್ಯವನ್ನು ಅವರು ತೋರಲಾರರು. ಸಮರ್ಥರಿಗೇನು ಕಾಂಗ್ರೆಸ್ ಪಕ್ಷದಲ್ಲಿ ಕೊರತೆ ಇಲ್ಲ. ಉಳಿದೆಲ್ಲ ರಾಜಕೀಯ ಪಕ್ಷಗಳಿಗೆ ಹೋಲಿಸಿದರೆ ಹೆಚ್ಚಿನ ಸಂಖ್ಯೆಯಲ್ಲಿ ಅನುಭವಿಗಳು, ಸಮರ್ಥರು ಕಾಂಗ್ರೆಸ್ ಪಕ್ಷದಲ್ಲಿಯೇ ಇರುವುದು. ಪ್ರಣಬ್ ಮುಖರ್ಜಿ, ಚಿದಂಬರಂ, ಎ.ಕೆ.ಆಂಟನಿ ಹೀಗೆ ಥಟ್ಟನೆ ಮೂರು ಹೆಸರುಗಳನ್ನು ಹೇಳಿಬಿಡಬಹುದು. ಇವರಿಗೆ ಪ್ರಧಾನಿಯಾಗುವ ಸಾಮರ್ಥ್ಯ ಇಲ್ಲ ಎಂದು ಅವರ ವಿರೋಧಿಗಳೂ ಹೇಳಲಾರರು.

ರುಗ್ಣಶಯ್ಯೆಯಲ್ಲಿರುವ ವಾಜಪೇಯಿ ಮತ್ತು ಸ್ವಯಂನಿವೃತ್ತಿ ಪಡೆದುಕೊಂಡಿರುವ ಅಡ್ವಾಣಿಯವರನ್ನು ಹೊರತುಪಡಿಸಿ ಪ್ರಧಾನಿ ಅಭ್ಯರ್ಥಿಯಾಗುವ ಇನ್ನೊಬ್ಬ ಅಭ್ಯರ್ಥಿ ಬಿಜೆಪಿಯಲ್ಲಿ ಕಣ್ಣಿಗೆ ಬೀಳುತ್ತಿಲ್ಲ. (ನರೇಂದ್ರಮೋದಿ ಎಂದೂ ಪ್ರಧಾನಿಯಾಗುವುದಿಲ್ಲ ಬಿಡಿ) ಆದರೆ ಕಾಂಗ್ರೆಸ್ ಪಕ್ಷದಲ್ಲಿ ಪ್ರಧಾನಿಯಾಗಲೂ ಅನುಭವ, ಹಿರಿತನ, ಆಡಳಿತ ಕೌಶಲ, ಪಕ್ಷನಿಷ್ಠೆಯಷ್ಟೇ ಸಾಲದು, ಜತೆಗೆ ನೆಹರೂ ಕುಟುಂಬನಿಷ್ಠೆ  ಮುಖ್ಯ. ಪ್ರಣಬ್ ಮುಖರ್ಜಿ ಮತ್ತು ಚಿದಂಬರಂ ಅವರಿಬ್ಬರೂ ಹೊಸ್ತಿಲು  ದಾಟಿ ಹೋಗಿ ಮರಳಿ ಬಂದವರು. ಇವರ ನೆಹರೂ ಕುಟುಂಬ ನಿಷ್ಠೆ ಪ್ರಶ್ನಾತೀತವಲ್ಲ. ಆಂಟನಿಯವರು ಕಾಂಗ್ರೆಸ್ ಅಧ್ಯಕ್ಷೆಯ ಧರ್ಮಕ್ಕೆ ಸೇರಿರುವುದೇ ಅನರ್ಹತೆ. ಆದ್ದರಿಂದ ಸದ್ಯಕ್ಕೆ ರಾಹುಲ್ ಗಾಂಧಿ ಪಟ್ಟ ಏರುವ ವರೆಗೆ ಮನಮೋಹನ್‌ಸಿಂಗ್ ಪಾದವೇ ಗತಿ. 

 ‘ಕೆಲವೊಮ್ಮೆ ನಿರಾಶೆಯೊಂದಿಗೆ ಬದುಕಬೇಕಾಗುತ್ತದೆ’ ಎಂದು ಎರಡುವರೆ ವರ್ಷಗಳ ಹಿಂದೆ ಪ್ರಧಾನಿ ಮನಮೋಹನ್‌ಸಿಂಗ್ ನೋವಿನ ದನಿಯಲ್ಲಿ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದರು. ನಾಗರಿಕ ಪರಮಾಣು ಒಪ್ಪಂದವನ್ನು ವಿರೋಧಿಸುತ್ತಿದ್ದ ಎಡಪಕ್ಷಗಳಿಗೆ ‘ತಮ್ಮ ದಾರಿ ನೋಡಿಕೊಳ್ಳಬಹುದು’ ಎಂದು ಸವಾಲು ಹಾಕಿದ್ದ ಮನಮೋಹನ್ ಸಿಂಗ್ ಒತ್ತಡಕ್ಕೆ ಮಣಿದು ಎಡಪಕ್ಷಗಳ ಜತೆ ಹೊಂದಿಕೊಳ್ಳಬೇಕಾಗಿಬಂದ ಸಂದರ್ಭ ಅದು. ಕೊನೆಗೆ ಎಡಪಕ್ಷಗಳನ್ನೇ ಅವರು ನಿವಾರಿಸಿಕೊಂಡ ಕಾರಣ ನಿರಾಶೆಯೊಂದಿಗೆ ಬದುಕುವ ಅಗತ್ಯ ಅವರಿಗೆ ಬರಲಿಲ್ಲ. ಆದರೆ ಈಗಿನ ಪ್ರಧಾನಿ ಪಟ್ಟ ತೊರೆದ ನಂತರ ನಿರಾಶೆಯೊಂದಿಗೆ ಬದುಕುವುದು ಮನಮೋಹನ್ ಸಿಂಗ್ ಅವರಿಗೆ ಅನಿವಾರ್ಯವಾಗಬಹುದೇನೋ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT