ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಸುಕಾದ ಗಡಿ ನಿಯಂತ್ರಣ ರೇಖೆ

Last Updated 2 ಅಕ್ಟೋಬರ್ 2016, 5:19 IST
ಅಕ್ಷರ ಗಾತ್ರ

ಪಾಕಿಸ್ತಾನದ ಜನರಲ್‌ ಪರ್ವೇಜ್‌ ಮುಷರಫ್‌ ಅವರು ಆಗ್ರಾ ಶೃಂಗಸಭೆಗೆ ಬಂದಿದ್ದ ಸಂದರ್ಭದಲ್ಲಿ ನಡೆದ ವಿಶಿಷ್ಟ ಘಟನೆ­ಯೊಂದನ್ನು ಎಲ್‌.ಕೆ.ಅಡ್ವಾಣಿ ಅವರು ನನ್ನ ಜತೆಗಿನ ಸಂದರ್ಶನ­ವೊಂದರಲ್ಲಿ ಹಂಚಿಕೊಳ್ಳುವ ಮೂಲಕ ಉಪಯುಕ್ತ ಮಾಹಿತಿ­ಯೊಂದನ್ನು ನೀಡಿದ್ದರು. ‘ಎರಡೂ ದೇಶಗಳ ಬಾಂಧವ್ಯದ ವಿಷಯ­ದಲ್ಲಿ ವಿಶ್ವಾಸ ಮರಳುವಂತಾಗಲು ನಾನು ಏನು ಮಾಡ­ಬೇಕಾ­ಗಿದೆ ಹೇಳಿ’ ಎಂದು  ಮುಷರಫ್ ಅವರು ದೊಡ್ಡಸ್ತಿಕೆಯಿಂದ ಪ್ರಶ್ನಿಸಿ­ದ್ದರಂತೆ.

ಅದಕ್ಕೆ ಅಡ್ವಾಣಿ ಅವರು, ‘ಭಾರತದ ಜತೆ ಹಸ್ತಾಂತರ ಒಪ್ಪಂದಕ್ಕೆ ಸಹಿ ಹಾಕಿ, ದಾವೂದ್‌ ಇಬ್ರಾಹಿಂನನ್ನು ನಮ್ಮ ವಶಕ್ಕೆ ನೀಡಿ’ ಎಂದು ತಣ್ಣಗೆ ಉತ್ತರಿಸಿದ್ದರಂತೆ. ಇದಕ್ಕೆ ಮುಷರಫ್‌ ಅವರು ತುಂಬ ಬುದ್ಧಿವಂತಿಕೆಯಿಂದ ನಾಜೂಕಿನ ಉತ್ತರ ನೀಡಿ ನುಣುಚಿ­ಕೊಂಡಿ­ದ್ದರಂತೆ.  ‘ಸೇನೆಯಲ್ಲಿ ಕೆಲವೊಮ್ಮೆ ಸಣ್ಣ ಮಟ್ಟದ ಕಾರ್ಯ­ತಂತ್ರ ಹೆಣೆಯಲಾಗುತ್ತದೆ. ಅದನ್ನೆಲ್ಲ  ಸೇನೆಯ ಕೆಳಹಂತದ ಅಧಿಕಾರಿ­ಗಳು ನೋಡಿಕೊಳ್ಳುತ್ತಾರೆ. ಆ ಬಗೆಯಲ್ಲಿ ಇಲ್ಲಿ ನಾವು ಕೂಡ ಸಣ್ಣ, ಪ್ಲಟೂನ್‌ ಮಟ್ಟದ ಕಾರ್ಯತಂತ್ರಗಳ ಬಗ್ಗೆ ಮಾತನಾಡುವುದನ್ನು ನಮ­ಗಿಂತ ಕೆಳಗಿನವರಿಗೆ ಬಿಟ್ಟುಕೊಡೋಣ. ನಾವು ಇನ್ನೂ ಹೆಚ್ಚು ಮಹತ್ವದ ಮತ್ತು ವಿಶಾಲ ತಳಹದಿಯ ರಾಜಕೀಯ ಹಾಗೂ ರಾಜ­ತಾಂತ್ರಿಕ­ವಾಗಿ ಮಹತ್ವದ ವಿಷಯಗಳನ್ನಷ್ಟೇ ಚರ್ಚಿಸೋಣ’ ಎಂಬ ಅರ್ಥದಲ್ಲಿ ಮುಷರಫ್‌ ಹೇಳಿದ್ದರಂತೆ.

ಮುಷರಫ್‌ ಅವರ ಈ ನಿಲುವು ಕನಿಷ್ಠ ಭಾರತದ ದೃಷ್ಟಿಕೋನ­ದಿಂದ­ಲಾದರೂ ತಪ್ಪಾಗಿತ್ತು. ಸೀಮಿತ ವ್ಯಾಪ್ತಿಯ ಕಾರ್ಯತಂತ್ರ ಮತ್ತು ವ್ಯಾಪಕ ಸ್ವರೂಪದ ಯುದ್ಧ ತಂತ್ರದ ಮಧ್ಯೆ ಹಾಗೂ ತಾತ್ಕಾಲಿಕ, ವಿಶಾಲ ತಳಹದಿಯ ಸಂಗತಿಗಳ ಮಧ್ಯೆ ವ್ಯಾಪಕ ಅಂತರ ಇರುವುದರ ಬಗ್ಗೆ ಅವರು ಪ್ರಮುಖವಾಗಿ ಗಮನ ಸೆಳೆದಿದ್ದರು. 

ಕಾಶ್ಮೀರದಲ್ಲಿನ ಗಡಿ ನಿಯಂತ್ರಣ ರೇಖೆಗುಂಟ ಭಾರತದ ಸೇನೆ ಯಶಸ್ವಿ­ಯಾಗಿ ‘ನಿರ್ದಿಷ್ಟ ದಾಳಿ’ ನಡೆಸಿರುವುದರಿಂದ ಭಾರತ ಮತ್ತು ಪಾಕಿ­ಸ್ತಾನ ಸಂಬಂಧವು ಹೊಸ ತಿರುವು ಪಡೆದಿರುವ ಸದ್ಯದ ಸಂದರ್ಭ­ದಲ್ಲಿ ಮುಷರಫ್‌ ಅವರಾಡಿದ್ದ ಈ ಮಾತನ್ನು ವಿಶ್ಲೇಷಿಸಬೇಕಾಗಿದೆ.

ಸೆಪ್ಟೆಂಬರ್‌ 28 ಮತ್ತು 29ರ ಮಧ್ಯರಾತ್ರಿಯಲ್ಲಿ ನಡೆದ ಸೇನಾ ಕಾರ್ಯಾ­ಚರಣೆ ವೇಳೆಯಲ್ಲಿ, ಭಾರತದ ಸೈನಿಕರು ಪಾಕಿಸ್ತಾನದ ಗಡಿ­ಯೊಳಗೆ ಎಷ್ಟು ದೂರದವರೆಗೆ ಹೋಗಿದ್ದರು, ಸಾವು ನೋವು ಮತ್ತಿ­ತರ ವಿಷಯಗಳಲ್ಲಿ ನಮ್ಮ ಸೈನಿಕರು ಅದೆಷ್ಟರ ಮಟ್ಟಿಗೆ ಯಶಸ್ಸು ಸಾಧಿಸಿ­ದ್ದಾರೆ ಎನ್ನುವ ಪ್ರಶ್ನೆಗಳೂ ಇಲ್ಲಿ ಏಳುತ್ತಿವೆ. ಈ ಬಗ್ಗೆ ಪಾಕಿಸ್ತಾನ­ದವರನ್ನು ಕೇಳಿದರೆ, ‘ಭಾರತದ ಸೇನೆ ಸಣ್ಣ ಪ್ರಮಾಣದಲ್ಲಿ ಗುಂಡು ಹಾರಿಸಿ­ದ್ದ­ರಿಂದ ನಮ್ಮ ಕಡೆಯ ಇಬ್ಬರು ಸೈನಿಕರು ಮೃತಪಟ್ಟಿದ್ದಾರೆ’ ಎಂದಷ್ಟೇ ಉತ್ತರಿಸಿದ್ದಾರೆ. ಅವರ ಮಾತುಗಳನ್ನಷ್ಟೇ ನಂಬಬಹು­ದಾದರೆ ಅದೊಂದು ಸಣ್ಣ ಪ್ರಮಾಣದ ಸೇನಾ ಕಾರ್ಯತಂತ್ರವಾಗಿತ್ತು ಎನ್ನುವ ನಿಲುವಿಗೆ ಬರಬೇಕಾಗುತ್ತದೆ.

ಭಾರತವು ತಾನು ಕೈಗೊಂಡ ದಾಳಿಯ ಬಗ್ಗೆ ನೀಡಿರುವ ಮಾಹಿತಿ ನೋಡಿ­ದರೆ,  ಗಮನಾರ್ಹವಾದ ಮತ್ತು ವ್ಯಾಪಕ ಸ್ವರೂಪದ ಸೇನಾ ಕಾರ್ಯಾ­ಚರಣೆ ಅದಾಗಿತ್ತು. ಈ ಬೆಳವಣಿಗೆಯು ಇನ್ನು ಮುಂದೆ ಭಾರತ ಮತ್ತು ಪಾಕಿಸ್ತಾನದ ನಡುವಣ ಬಾಂಧವ್ಯಕ್ಕೆ ಹೊಸ ಭಾಷ್ಯ ಬರೆ­ಯ­ಲಿದೆ. ಇದುವರೆಗೆ ಭಾರತ ಅನುಸರಿಸಿಕೊಂಡು ಬರುತ್ತಿದ್ದ ಸಂಯಮದ ಧೋರಣೆ ಅಂತ್ಯವಾಗಿದೆ ಎನ್ನುವ ಸ್ಪಷ್ಟ ಸಂಕೇತವನ್ನೂ ಈ ಕಾರ್ಯಾಚರಣೆ ನೀಡಿದೆ.

ಕಾಶ್ಮೀರ ಕಣಿವೆಯಲ್ಲಿ 1989ರಲ್ಲಿ ಅಶಾಂತಿ ಮರುಕಳಿಸಿದ ದಿನ­ದಿಂದ ಮತ್ತು  1993ರಲ್ಲಿ ಮುಂಬೈನಲ್ಲಿ ನಡೆದ ಸರಣಿ ಬಾಂಬ್‌ ಸ್ಫೋಟ ಘಟನೆಗಳ ನಂತರ ಕೆಲ  ಮೂಲಭೂತ ನಿಯಮಗಳು ವರ್ಷ­ಗಳ ಉದ್ದಕ್ಕೂ ಭಾರತ ಸರ್ಕಾರದ ಪ್ರತಿಕ್ರಿಯೆಯನ್ನು ರೂಪಿಸುತ್ತ ಬಂದಿವೆ.

ಕಾಶ್ಮೀರ ವಿವಾದವನ್ನು ಅಂತರರಾಷ್ಟ್ರೀಕರಣಗೊಳಿಸುವ ಪಾಕಿ­ಸ್ತಾನದ ಯಾವುದೇ ಪ್ರಯತ್ನವನ್ನು ಭಾರತವು ಚಿತ್ತವಿಕೃತಿಯ, ಜುಗುಪ್ಸೆ ಮೂಡಿಸುವ ಹತಾಶ ಯತ್ನ ಎಂದೇ ಪರಿಗಣಿಸುತ್ತಾ ಬಂದಿದೆ. ಕಾಶ್ಮೀರ ಸಮಸ್ಯೆ ತುಂಬ ಹಳೆಯದು. 1972ರ ಶಿಮ್ಲಾ ಒಪ್ಪಂದ­ದಲ್ಲಿಯೇ ಈ ಸಮಸ್ಯೆಯ ಬೇರುಗಳು ಇವೆ. ಹಳೆಯ ಕದನ ವಿರಾಮ ರೇಖೆಯನ್ನು (ಸಿಎಫ್‌ಎಲ್‌), ಗಡಿ ನಿಯಂತ್ರಣ ರೇಖೆ (ಎಲ್‌ಒಸಿ) ಎಂದು  ಮರುನಾಮಕರಣ ಮಾಡಿ ಸಮಸ್ಯೆಗೆ ಎರಡ­ನೆಯ ತತ್ವವನ್ನು ಸೇರ್ಪಡೆ ಮಾಡಲಾಯಿತು. ಹೀಗೆ ಮಾಡುವುದರ ಮೂಲಕ ‘ಎಲ್‌ಒಸಿ’ಯನ್ನು ವಾಸ್ತವ ಗಡಿ ರೇಖೆ ಎಂದೇ ಮಾನ್ಯ ಮಾಡಲಾ­ಯಿತು. ಜತೆಗೆ ಕಾಶ್ಮೀರವನ್ನು ಗಡಿ ರೇಖೆಗುಂಟ ವಿಭಜಿಸಿ­ರುವು­ದನ್ನು ದೃಢಪಡಿಸಲಾಯಿತು.

ಸಮಯ ಸಿಕ್ಕಾಗಲೆಲ್ಲ ಎರಡೂ ದೇಶ­ಗಳು ಈ ವಿಭಜನೆಯನ್ನು ಔಪಚಾರಿಕಗೊಳಿಸಿದವು. 1989ರ­ವರೆಗೆ ಉಭಯ ದೇಶಗಳು ಈ ವಾಸ್ತವ ಗಡಿ ನಿಯಂತ್ರಣ ರೇಖೆಯನ್ನು ಗೌರವಿಸುತ್ತಲೇ ಬಂದಿದ್ದವು.

1984ರ ವಸಂತ ಋತುವಿನಲ್ಲಿ ಭಾರತದ ಸೇನಾ ಪಡೆಗಳು, ‘ಎಲ್‌ಒಸಿ’ಯಲ್ಲಿ ಗುರುತಿಸದ ಸಿಯಾಚಿನ್‌ ನೀರ್ಗಲ್ಲು (ಗ್ಲೇಸಿಯರ್‌) ಪ್ರದೇಶಕ್ಕೆ ನುಗ್ಗಿದ್ದವು.  ಎಲ್‌ಒಸಿಯ ಎನ್‌ಜೆ9842 ಎಂದೇ ಕರೆಯ­ಲಾಗುವ ಗ್ಲೇಸಿಯರ್‌ನತ್ತ ಉತ್ತರದ ದಿಕ್ಕಿನಲ್ಲಿ ಚಾಚಿರುವ ಈ ಕಾಲ್ಪನಿಕ ಗಡಿ ರೇಖೆಗುಂಟ ಭಾರತದ ಸೇನಾಪಡೆಗಳ ಉಪಸ್ಥಿತಿ ಸಾಬೀತು­ಪಡಿಸುವ ಉದ್ದೇಶದಿಂದ ಈ ಕಾರ್ಯಾಚರಣೆ ನಡೆಸ­ಲಾಗಿತ್ತು. ಭಾರತದ ಸೇನಾಪಡೆಗಳನ್ನು ಅಲ್ಲಿಂದ ಹಿಮ್ಮೆಟ್ಟಿಸಲು ಪಾಕಿಸ್ತಾ­ನವು ತೀವ್ರ ಪ್ರತಿರೋಧ ತೋರಿತ್ತು.

ಭಾರಿ ನಷ್ಟಕ್ಕೆ ಗುರಿಯಾಗುವುದರ ಜತೆಗೆ ತನ್ನ ಪ್ರಯತ್ನದಲ್ಲಿ ಸಂಪೂರ್ಣವಾಗಿ ವಿಫಲ­ಗೊಂಡಿತು. ಈ ವಾಸ್ತವ ಗಡಿ ರೇಖೆಯೇ (ಎಲ್‌ಒಸಿ),  ಕಾರ್ಗಿಲ್‌ ಯುದ್ಧದ ಸಂದರ್ಭದಲ್ಲಿ ಭಾರತ ತಳೆದ ನಿಲುವಿನ ಬೆನ್ನೆ­ಲುಬು ಆಗಿತ್ತು. ಕಾರ್ಗಿಲ್‌ ಯುದ್ಧದಿಂದಾಗಿ ‘ಎಲ್‌ಒಸಿ’ಯ ಪಾವಿತ್ರ್ಯ­ವನ್ನು ಇಡೀ ವಿಶ್ವ ಬೆಂಬಲಿಸಿತ್ತು.   ಭಾರತದ ಕಾರ್ಯತಂತ್ರಕ್ಕೆ ಸಿಕ್ಕ ಗೆಲುವು ಎಂದೂ ಇದನ್ನು ಪರಿಗಣಿಸಲಾಗಿತ್ತು.

ಇದೇ ಕಾರಣಕ್ಕೆ ಭಾರತದ ಸೇನಾ ಪಡೆಗಳು ಹಲವಾರು ಬಾರಿ ‘ಎಲ್‌ಒಸಿ’ ದಾಟಿ ಹೋಗಿ ಆ ಪ್ರದೇಶದಲ್ಲಿ ಬೀಡುಬಿಟ್ಟಿರುವ ವಿಧ್ವಂಸ­ಕ­ರನ್ನು ಸದೆಬಡಿಯಲು ಮತ್ತು ಈ ಭೂ ಪ್ರದೇಶಕ್ಕೆ ಸಂಬಂಧಿ­ಸಿದ ಕಾರ್ಯತಂತ್ರದ ಭಾಗವಾಗಿ ಈ ಬಗೆಯ ಕಾರ್ಯಾಚರಣೆ ನಡೆ­ಸುತ್ತ ಬಂದಿವೆ. ಪಾಕಿಸ್ತಾನವು ಈ ಪ್ರದೇಶದಲ್ಲಿ ನೆಲೆಯೂರಲು ನಡೆ­ಸಿದ ಪ್ರಯತ್ನಗಳನ್ನು ವಿಫಲಗೊಳಿಸಲು ಅಥವಾ ಸೇಡು ತೀರಿಸಿ­ಕೊಳ್ಳಲು  ನಡೆಸಿದ ಕಾರ್ಯಾಚರಣೆಗಳನ್ನು ಭಾರತವು ಮುಚ್ಚಿಟ್ಟಿದೆ. ಸಾಕ್ಷ್ಯಾಧಾ­ರಗಳ ಕೊರತೆ ಮತ್ತಿತರ ಕಾರಣಗಳಿಗೆ ಹಿರಿಯ ಸೇನಾ ಅಧಿಕಾರಿ­ಗಳು ಇಂತಹ ಕಾರ್ಯಾಚರಣೆಗಳ ಬಗ್ಗೆ ಬಾಯಿ ಬಿಡುವುದೂ ಇಲ್ಲ.

2013ರಲ್ಲಿ ಪಾಕಿಸ್ತಾನ ಪಡೆಗಳು ‘ಎಲ್‌ಒಸಿ’ಯಲ್ಲಿ ಭಾರತದ ಇಬ್ಬರು ಸೈನಿಕರ ಶಿರಚ್ಛೇದ ಮಾಡಿದ್ದಕ್ಕೆ ಪ್ರತೀಕಾರಾರ್ಥವಾಗಿ ಸೇನೆಯು ಸೇಡು ತೀರಿಸಿಕೊಂಡಿದ್ದರೂ ಆ ಬಗ್ಗೆ ಬಹಿರಂಗವಾಗಿ ಯಾವುದೇ ವಿವರ ನೀಡಿರಲಿಲ್ಲ ಎಂದು ಸೇನಾಪಡೆಯ ನಿವೃತ್ತ ಮುಖ್ಯಸ್ಥ ಜನರಲ್‌ ವಿಕ್ರಮ್‌ ಸಿಂಗ್ ಅವರು ಈ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ್ದಾರೆ.

ಕಾರ್ಗಿಲ್‌ ಯುದ್ಧದ ನಂತರವೂ, ಭಾರತದ ವಾಯುಪಡೆಯು ನಾಲ್ಕು ಮಿರಾಜ್‌–2000 ಯುದ್ಧ ವಿಮಾನಗಳ ನೆರವಿನಿಂದ ಲೇಸರ್‌ ನಿರ್ದೇಶಿತ ನಿಖರ ದಾಳಿ ನಡೆಸಿ, ಭಾರತದ ಭದ್ರತೆಗೆ ಕಂಟಕವಾಗಿ ಪರಿಣ­ಮಿ­ಸಿದ್ದ, ಪಾಕಿಸ್ತಾನವು ನಿರ್ಮಿಸಿಕೊಂಡಿದ್ದ ಆಶ್ರಯ ತಾಣ­ಗಳನ್ನು ಧ್ವಂಸಗೊಳಿಸಿತ್ತು. ಈ ಘಟನೆ ಬಗ್ಗೆಯೂ ಈವರೆಗೂ ಯಾರೊ­ಬ್ಬರೂ ಮಾಹಿತಿ ನೀಡಿಲ್ಲ. ಮಿರಾಜ್‌ ಯುದ್ಧ ವಿಮಾನಗಳು ಈ ಕಾರ್ಯಾಚರಣೆಯ ಗೋಪ್ಯತೆ ಕಾಯ್ದುಕೊಳ್ಳಲು ಶಿವಾಲಿಕ್‌ ಪರ್ವತ ಪ್ರದೇಶದಲ್ಲಿ ತಾಲೀಮು ನಡೆಸಿದ್ದವು.

ಪಾಕಿಸ್ತಾನವೂ ಈ ಬಗ್ಗೆ ಬಾಯಿಬಿಡದಿರುವುದು ಮಹತ್ವದ ಸಂಗತಿಯಾಗಿದೆ. ಪಾಕ್‌ ಪಡೆಗಳು ಪ್ರತೀಕಾರ ಕೈಗೊಳ್ಳಲು ತಮ್ಮದೇ ಆದ ಸೂಕ್ತ ಸಮಯಕ್ಕಾಗಿ ಬಹುಶಃ ಎದುರು ನೋಡುತ್ತಿರಬಹುದು. ಭಾರತ ಇತ್ತೀಚೆಗೆ ನಡೆಸಿ­ರುವ ‘ನಿರ್ದಿಷ್ಟ ದಾಳಿ’ಯು ಇಂತಹ ಲೆಕ್ಕಾಚಾರಗಳನ್ನು ಬುಡಮೇಲು ಮಾಡಿಬಿಟ್ಟಿದೆ.

ಅಂತರರಾಷ್ಟ್ರೀಯ ಗಡಿಯಂತೆ, ‘ಎಲ್‌ಒಸಿ’ಯ ಪಾವಿತ್ರ್ಯವನ್ನೂ ಗೌರವಿ­ಸುವಂತೆ ಪಾಕಿಸ್ತಾನದ ಮೇಲೆ ಒತ್ತಡ ಹೇರುವ ಬದಲಿಗೆ, ಭಾರತ ಈಗ ಅದರ ಪಾವಿತ್ರ್ಯವನ್ನೇ ಪ್ರಶ್ನಿಸಲು ಹೊರಟಿದೆ. ಬದಲಾದ ನಿಲು­ವನ್ನು ಪರೋಕ್ಷವಾಗಿ ಬಿಂಬಿಸಲು ಎನ್‌ಡಿಎ ಸರ್ಕಾರವು ಬಹುಶಃ ಕಿರಿಯ ಸಚಿವರೊಬ್ಬರನ್ನು ಛೂಬಿಟ್ಟಿರುವಂತೆ ಕಾಣುತ್ತಿದೆ.  ‘ಇಡೀ ಕಾಶ್ಮೀರ ನಮ್ಮ ಭೂ ಭಾಗವಾಗಿರುವಾಗ, ಅದರಲ್ಲಿನ ಯಾವುದೇ ಭಾಗಕ್ಕೆ ಹೋಗುವುದು ಎಂದರೆ ಗಡಿ ಉಲ್ಲಂಘನೆ ಆಗಲಾರದು’ ಎಂದು  ವಾರ್ತಾ ಮತ್ತು  ಪ್ರಸಾರ ರಾಜ್ಯ ಸಚಿವ ರಾಜ್ಯ­ವರ್ಧನ್‌ ಸಿಂಗ್‌ ರಾಥೋಡ್‌ ಅವರು ಹೇಳಿರುವುದು ಮಹತ್ವದ ವಿದ್ಯ­ಮಾನ­ವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರು ಪಾಕ್‌ ಆಕ್ರ­ಮಿತ ಕಾಶ್ಮೀರ (ಪಿಒಕೆ), ಗಿಲ್ಗಿಟ್‌ ಮತ್ತು ಬಾಲ್ಟಿಸ್ತಾನ ವಿಷಯಗಳನ್ನು ಕೆದಕುತ್ತಿರುವ ಹಿನ್ನೆಲೆಯಲ್ಲಿ ಈ ಹೇಳಿಕೆಯನ್ನು ವಿಶ್ಲೇಷಿಸಬೇಕು.

‘ಎಲ್‌ಒಸಿ’ಯನ್ನೇ ಗಡಿ ಎಂದು ಗುರುತಿಸುವ ಮೂಲಕ ಕಾಶ್ಮೀರ ಸಮ­ಸ್ಯೆಗೆ ಅಂತಿಮ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಲಿದೆ ಎನ್ನು­ವುದು ನ್ಯಾಯಸಮ್ಮತ ಒಮ್ಮತಾಭಿಪ್ರಾಯವಾಗಿದೆ. ಶಿಮ್ಲಾ ಒಪ್ಪಂದ ಮತ್ತು ನಂತರ ಅಟಲ್‌ ಬಿಹಾರಿ ವಾಜಪೇಯಿ, ಮುಷರಫ್‌ ಹಾಗೂ ನವಾಜ್‌ ಷರೀಫ್‌ ಅವರ ಮಧ್ಯೆ ನಡೆದ ಮಾತುಕತೆಯ ಮುಖ್ಯ ಆಶಯವೂ ಇದೇ ಆಗಿತ್ತು.

ಮುಷರಫ್‌ ಮತ್ತು ಮನಮೋಹನ್‌ ಸಿಂಗ್ ಅವರ ಮಧ್ಯೆ ನಡೆದ ಮಾತು­ಕತೆ ಬಗ್ಗೆ  ಪಾಕಿಸ್ತಾನದ ವಿದೇಶಾಂಗ ವ್ಯವಹಾರ ಸಚಿವರಾಗಿದ್ದ ಖುರ್ಷಿದ್ ಕಸೂರಿ ಅವರು ಸುದೀರ್ಘವಾಗಿ ಬರೆದಿದ್ದಾರೆ. ಅದೀಗ ಇತಿಹಾಸ.

1989ರಲ್ಲಿ ನಡೆದ ಬಂಡಾಯವನ್ನು ಪಾಕಿಸ್ತಾನವು ಶಿಮ್ಲಾ ಒಪ್ಪಂದ­ವನ್ನು ಕಸದ ಬುಟ್ಟಿಗೆ ಎಸೆಯಲು ಬಳಸಿಕೊಂಡಿದ್ದರೆ, ಭಾರತವೂ ಈಗ ಅದನ್ನೇ ಮಾಡಲು ಹೊರಟಿದೆ. ಪಾಕಿಸ್ತಾನವು ಶಿಮ್ಲಾ ಒಪ್ಪಂದದ ಆಶಯವನ್ನು ಗೌರವಿಸುವಂತೆ ಒತ್ತಾಯಿಸುವುದರ ಬದಲಿಗೆ, ಮೋದಿ ಅವರು ಸಂಪೂರ್ಣವಾಗಿ ವಿಭಿನ್ನ ದಾರಿಯಲ್ಲಿ ಮುನ್ನಡೆದಿದ್ದಾರೆ.

ನರೇಂದ್ರ ಮೋದಿ ಅವರ ಅಭಿಪ್ರಾಯದಲ್ಲಿ, ಪಾಕಿಸ್ತಾನವು ಶಿಮ್ಲಾ ಒಪ್ಪಂದದ ಪ್ರಕಾರ ತನ್ನ ಪಾಲಿನದನ್ನು ಪಡೆಯಬಹುದು. ಆದರೆ, ಅದು ಈಗ ಒಪ್ಪಂದಕ್ಕೆ ವಿರುದ್ಧವಾಗಿ ಹೆಚ್ಚಿನ ಭೂಭಾಗಕ್ಕಾಗಿ ಹೋರಾ­ಡುವ ಆಯ್ಕೆಯನ್ನು ಮುಕ್ತವಾಗಿ ಇರಿಸಿಕೊಂಡಿದೆ. ಹೀಗಾಗಿ ಮೋದಿ ಅವರು ತಮ್ಮ ರಾಜಕೀಯ, ಸೇನಾ ಮತ್ತು ರಾಜ­ತಾಂತ್ರಿಕ ನಡೆಗಳ ಮೂಲಕ ಪಾಕಿಸ್ತಾನದ ದುರಹಂಕಾರಕ್ಕೆ ಪೆಟ್ಟು ನೀಡುತ್ತಿದ್ದಾರೆ.

ಶಿಮ್ಲಾ ಒಪ್ಪಂದ ನಡೆದು ನಾಲ್ಕು ದಶಕಗಳ ನಂತರವೂ ಪಾಕಿ­ಸ್ತಾನವು, ಕಾಶ್ಮೀರ ವಿವಾದವನ್ನು ದೇಶ ವಿಭಜನೆಯ ಪೂರ್ಣ­ಗೊಳ್ಳದ ಕಾರ್ಯಸೂಚಿ ಎಂದು ಪರಿಗಣಿಸುತ್ತಿರುವಾಗ, ಭಾರತ ಅದನ್ನು ಶಿಮ್ಲಾ ಒಪ್ಪಂದದ ಇತ್ಯರ್ಥಗೊಳ್ಳದ   ವಿಷಯ ಎಂದು ಪ್ರತಿ­ಯಾಗಿ ಪ್ರಚಾರ ಕೈಗೊಳ್ಳಬಾರದೇಕೆ? ಇಂತಹ ವಾದ ತುಂಬ ಒರಟಾ­ಗಿದೆ ಎಂದೂ ಅನೇಕರಿಗೆ ಅನಿಸಬಹುದಲ್ಲವೆ? ಭಾರತ ಸರ್ಕಾರವು ಸದ್ಯಕ್ಕೆ ತನ್ನ ಪರವಾಗಿರುವ ಯಥಾಸ್ಥಿತಿ ಕಾಯ್ದುಕೊಳ್ಳಲು ಬಯಸಿಲ್ಲ.

ಯಥಾ­ಸ್ಥಿತಿಗೆ ಧಕ್ಕೆ ತರುವ ಮೂಲಕ ರಾಷ್ಟ್ರೀಯ ಪ್ರಯೋಜನ ಪಡೆದುಕೊಳ್ಳುವುದು ಅದರ ಉದ್ದೇಶವಾಗಿದೆ. ಈ ವಿಷಯವನ್ನೇ ಪ್ರಧಾನ­ವಾಗಿಟ್ಟುಕೊಂಡು ಒಟ್ಟಾರೆ ಕಾಶ್ಮೀರ ವಿವಾದ ಕುರಿತು ಹೊಸ ನೀತಿಯನ್ನೇ ರೂಪಿಸಬಹುದಾಗಿದೆ.

ಭಾರತವು ವರ್ಷಗಳ ಉದ್ದಕ್ಕೂ ಪಾಕಿಸ್ತಾನದ ಅಣ್ವಸ್ತ್ರಗಳ ಪ್ರಯೋಗದ ಬೆದರಿಕೆಯಡಿ ಇರಲು ಸಾಧ್ಯವಿಲ್ಲ. ಕಾಶ್ಮೀರ ವಿವಾದಕ್ಕೆ ಸಂಬಂಧಿಸಿದಂತೆ ಮೂಲಭೂತ ಧೋರಣೆಯಲ್ಲಿ ಆಗಿರುವ ಈ ಬದಲಾ­ವಣೆಯ ಫಲವಾಗಿ ಭಾರತ ಇನ್ನು ಮುಂದೆ ಸಂಯಮ ಧೋರಣೆ ತಳೆಯುವ ಬದಲಿಗೆ ಪ್ರತೀಕಾರಕ್ಕೆ ಮುಂದಾಗಬಹುದು.

ವಿಚಾರವೊಂದರ ದೃಷ್ಟಿಕೋನವನ್ನೇ ಅಭಿಪ್ರಾಯ ಎಂದು ಗೊಂದಲಕ್ಕೆ ಆಸ್ಪದ ಮಾಡಿಕೊಡುವ, 10 ಸೆಕೆಂಡುಗಳ ಟಿವಿ ಬೈಟ್‌ ಅಥವಾ 140 ಅಕ್ಷರಗಳ ಟ್ವೀಟ್‌ಗಳೇ ಸುದೀರ್ಘ ಚರ್ಚೆಗೆ ಆಸ್ಪದ ಮಾಡಿ­ಕೊಡುವ ಈ ಕಾಲಘಟ್ಟದಲ್ಲಿ, ಯಾವುದೇ ವಿಷಯದ ಬಗ್ಗೆ ಬರೆಯುವುದೇ ಒಂದು ಸವಾಲಾಗಿ ಪರಿಣಮಿಸಿದೆ.

ಸೆಪ್ಟೆಂಬರ್‌ 18ರ ಬೆಳಿಗ್ಗೆ, ಉರಿ ಸೇನಾ ನೆಲೆ ಮೇಲೆ ನಡೆದ ಭಯೋ­ತ್ಪಾದಕರ ದಾಳಿ ಘಟನೆ ವರದಿಯಾದ ಕೆಲವೇ ನಿಮಿಷಗಳಲ್ಲಿ, ‘ಈ ಘಟನೆಯನ್ನೂ ಭಾರತವು  ಹಗುರವಾಗಿ ಪರಿಗಣಿಸಲಿದೆ ಎಂದು ಪಾಕಿ­ಸ್ತಾನ­ದವರು ಭಾವಿಸಿದ್ದರೆ ಅದೊಂದು ಪ್ರಮಾದವಾಗಿರಲಿದೆ. ಭಾರತ ಈಗ ತನ್ನ ಹಳೆಯ ಸಂಯಮದ ಕಾರ್ಯತಂತ್ರದಿಂದ ದೂರ ಬಂದಿದೆ. ಭಾರತವು ಈಗಲೂ ಸಂಯಮದ ನಿಲುವನ್ನೇ ತಳೆದಿದ್ದರೆ ಭಾರತಕ್ಕೆ ಪ್ರಯೋಜನವಾಗುತ್ತಿತ್ತು’ ಎಂದು ನಾನು ಹೇಳಿದ್ದೆ. 

ಇಲ್ಲಿ ಅನೇಕರು ನನ್ನ ನಿಲುವಿನಲ್ಲಿನ ವಿರೋಧಾಭಾಸ ಗುರುತಿಸಿ­ರ­ಬ­ಹುದು.  ಯಾವುದೇ ವಿಷಯದ ಬಗ್ಗೆ ಗಮನ ಹರಿಸಲು ಹೆಚ್ಚಿನ ವ್ಯವ­ಧಾನ ಇರದ ಈ ದಿನಗಳಲ್ಲಿ, ವಾಸ್ತವ ಸಂಗತಿಯನ್ನು ವಸ್ತು­ನಿಷ್ಠವಾಗಿ ವಿಶ್ಲೇಷಿಸುವ ಮತ್ತು ಮತ್ತೊಬ್ಬರ ಮೇಲೆ ಹೇರುವಂತಹ ಅಭಿಪ್ರಾಯದ ಮಧ್ಯೆ ಇರುವ ಅಂತರ ಮತ್ತು ಇವೆರಡೂ ಹೇಗೆ ವಿರೋಧಾಭಾಸದಿಂದ ಕೂಡಿವೆ ಎನ್ನುವುದನ್ನು ವಿವರಿಸುವುದು ಅಷ್ಟು ಸುಲಭವಾಗಿಲ್ಲ.

ಹೊಸ ವಸ್ತುನಿಷ್ಠ ವಾಸ್ತವ ಆಧರಿಸಿದ ಹೊಸದಾದ ಅಭಿಪ್ರಾಯಕ್ಕೆ ಬರುವುದು ಮತ್ತು ವಿಶ್ಲೇಷಣೆ ಮಾಡುವುದು ಸದ್ಯದ ಅಗತ್ಯವಾಗಿದೆ. ಇದು ವಿವೇಕತನದಿಂದ ಕೂಡಿದೆಯೇ ಅಥವಾ ಅಜಾಗರೂಕತೆಯ ಧೋರಣೆಯೇ, ಇಲ್ಲವೇ ಈ ನಿಲುವಿನ ಸರಿ ತಪ್ಪುಗಳ  ಬಗ್ಗೆ ಇನ್ನೊಂದು ಸಂದರ್ಭದಲ್ಲಿ ವಾದಿಸಬಹುದು.


ಭಾರತ ಸರ್ಕಾರವು ಈಗ ಹಳೆಯ ಸಂಧಾನ ಮಾರ್ಗಕ್ಕೆ ಎಳ್ಳುನೀರು ಬಿಟ್ಟು ‘ಎಲ್‌ಒಸಿ’ಯ ಪಾವಿತ್ರ್ಯ ಕಾಯ್ದುಕೊಳ್ಳುವ, ಸಂಯಮದ ಕಾರ್ಯತಂತ್ರ ಪಾಲಿಸುವ ಮತ್ತು ಹಳೆಯ ಅಣ್ವಸ್ತ್ರ ಹೊಸ್ತಿಲು ದಾಟದ ನಿಲುವಿಗೆ ತಿಲಾಂಜಲಿ ನೀಡಿ, ಹೊಸ ಧೋರಣೆ ಅನುಸರಿಸುತ್ತಿದೆ ಎನ್ನುವ ಕಟು ವಾಸ್ತವವನ್ನು ನಾವು ಮನಗಾಣಬೇಕಾಗಿದೆ.

ನಿಮಗೆ ಇಷ್ಟವಿರಲಿ ಬಿಡಲಿ, ಈಗ ಕಳೆದುಕೊಂಡಿದ್ದಕ್ಕೆ ಮರುಗುತ್ತ ಕೂರದೇ ನೀವು ಈ ಹೊಸ ವಾಸ್ತವಕ್ಕೆ ಪ್ರತಿಕ್ರಿಯಿಸಬೇಕಾಗಿದೆ. ಇದು ಭಾರತದ ವಿಶ್ಲೇಷಕರಿಗೆ ಮಹತ್ವ ಆಗಿರುವಂತೆ, ಪಾಕಿಸ್ತಾನದ ನೀತಿ ನಿರೂಪಕರಿಗೂ ಇನ್ನೂ ಹೆಚ್ಚು ಮಹತ್ವದ ಸಂಗತಿಯಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT