ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾನ್‌ ರಾಷ್ಟ್ರ ಆಗಿಸುವವರಿಗೆ ಮೂಲ ತಿಳಿದಿಲ್ಲ

Last Updated 5 ಫೆಬ್ರುವರಿ 2017, 19:31 IST
ಅಕ್ಷರ ಗಾತ್ರ

ಹೊಸದಾಗಿ ಆಯ್ಕೆಯಾದ ತಮ್ಮ ಅಧ್ಯಕ್ಷರು ಏಳು ದೇಶಗಳಿಗೆ ಸೇರಿದ ವಲಸಿಗರನ್ನು ನಿರ್ಬಂಧಿಸುವ ಆದೇಶ ಹೊರಡಿಸಿದ್ದು ಬಹುತೇಕ ಅಮೆರಿಕನ್ನರಿಗೆ ನೋವು ತಂದಿತು. ಮುಸ್ಲಿಮರು ಅಮೆರಿಕ ಪ್ರವೇಶಿಸುವುದನ್ನು ತಡೆದು, ಭಯೋತ್ಪಾದನೆ ಕೊನೆಗಾಣಿಸುವುದಾಗಿ ಡೊನಾಲ್ಡ್‌ ಟ್ರಂಪ್ ಅವರು ಚುನಾವಣಾ ಪ್ರಚಾರದಲ್ಲಿ ಹೇಳಿದ್ದರು.

ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ನಂತರ ಟ್ರಂಪ್‌ ಅವರು ಏಳು ದೇಶಗಳ ವಿರುದ್ಧ ಈ ನಿರ್ಬಂಧ ಜಾರಿಗೊಳಿಸಿದ್ದರು. ಇರಾನ್ ಮೂಲದ ಲಕ್ಷಾಂತರ ಅಮೆರಿಕನ್ನರ ಜೊತೆ ಸಂಬಂಧ ಹೊಂದಿರುವ ಇರಾನಿ ಪ್ರಜೆಗಳಿಗೆ, ತಮ್ಮದೇ ದೇಶದ ವಿರುದ್ಧ ಅಮೆರಿಕ ಯುದ್ಧ ಸಾರಿದಾಗ ಅಮೆರಿಕದ ಪರ ನಿಂತಿದ್ದ ಇರಾಕಿ ಪ್ರಜೆಗಳಿಗೆ ಕೂಡ ಈ ನಿರ್ಬಂಧ ಅನ್ವಯವಾಗುತ್ತಿತ್ತು. ಸಿರಿಯಾದಲ್ಲಿ ಹಿಂಸಾಚಾರದ ಕಾರಣ ಲಕ್ಷಾಂತರ ಜನ ದೇಶ ತೊರೆಯುತ್ತಿದ್ದಾರೆ.

ಆ ದೇಶಕ್ಕೂ ನಿರ್ಬಂಧ ಅನ್ವಯವಾಗುತ್ತಿತ್ತು. ಟ್ರಂಪ್‌ ಆದೇಶ ಹೊರಡಿಸುವ ಮುನ್ನ ಅದನ್ನು ತಜ್ಞರು ಸರಿಯಾಗಿ ಪರಿಶೀಲಿಸಿರಲಿಲ್ಲ ಅನಿಸುತ್ತಿದೆ. ಅಮೆರಿಕದಲ್ಲಿ ಶಾಶ್ವತವಾಗಿ ನೆಲೆಸಲು ಅನುಮತಿ ಪಡೆದಿರುವ (ಅಂದರೆ ಗ್ರೀನ್ ಕಾರ್ಡ್ ಹೊಂದಿರುವ) ಏಳು ದೇಶಗಳ ಪ್ರಜೆಗಳಿಗೂ ಅನ್ವಯವಾಗುವಂತಹ ಆದೇಶವನ್ನು ಮೊದಲು ಹೊರಡಿಸಲಾಗಿತ್ತು.

ಕ್ರಮಬದ್ಧವಾದ ಪ್ರವಾಸಿ ಹಾಗೂ ವಾಣಿಜ್ಯ ಉದ್ದೇಶದ ವೀಸಾ ಹೊಂದಿದ ಏಳು ದೇಶಗಳ ಜನರಿಗೂ ನಿರ್ಬಂಧ ವಿಧಿಸಲಾಗಿತ್ತು. ಇದರಿಂದಾಗಿ ಅಮೆರಿಕದ ವಿಮಾನ ನಿಲ್ದಾಣಗಳಲ್ಲಿ ಗೊಂದಲ ಸೃಷ್ಟಿಯಾಗಿತ್ತು. ಆದರೆ, ಟ್ರಂಪ್‌ ಅವರು ವಾಣಿಜ್ಯ ಹಿತಾಸಕ್ತಿ ಹೊಂದಿರುವ ಸೌದಿ ಅರೇಬಿಯಾದಂತಹ (ಅಮೆರಿಕದ ಅವಳಿ ಗೋಪುರಗಳ ಮೇಲಿನ ದಾಳಿಯಲ್ಲಿ ಇದೇ ದೇಶದ ಜನ ಪಾಲ್ಗೊಂಡಿದ್ದರು) ದೇಶಗಳಿಗೆ ನಿರ್ಬಂಧ ಅನ್ವಯವಾಗುತ್ತಿರಲಿಲ್ಲ. ಇಂಥ ಆದೇಶದ ಹಿಂದಿನ ಆಷಾಢಭೂತಿತನಕ್ಕಿಂತ ಹೆಚ್ಚಾಗಿ, ಇದು ಮಾನವ ಹಕ್ಕುಗಳನ್ನು ಉಲ್ಲಂಘಿಸುತ್ತದೆ ಎಂಬುದು ಅಮೆರಿಕನ್ನರನ್ನು ನೋಯಿಸಿತು. ತಮ್ಮ ದೇಶ ಕಾನೂನಿಗೆ ಬದ್ಧವಾಗಿ ನಡೆಯಬೇಕು, ಕಾನೂನುಗಳು ಮುಕ್ತವಾಗಿರಬೇಕು, ನ್ಯಾಯಸಮ್ಮತವಾಗಿರಬೇಕು ಎಂದು ಹಲವು ಅಮೆರಿಕನ್ನರು ಬಯಸುತ್ತಾರೆ.

ತಾವು ಈ ಹಂತದಲ್ಲಿ ಏನಾದರೂ ಮಾಡಬೇಕು ಎಂದು ಅವರಿಗೆ ಅನಿಸಿತು. ಹಾಗಾಗಿ ಅವರು ಅಮೆರಿಕದ ನಾಗರಿಕ ಹಕ್ಕುಗಳ ಸಂಘಟನೆಯನ್ನು (ಎಸಿಎಲ್‌ಯು) ಬೆಂಬಲಿಸಿದರು. ತಾನು ‘ಲಾಭದ ಉದ್ದೇಶ ಹೊಂದಿಲ್ಲದ, ಪಕ್ಷಪಾತ ಧೋರಣೆ ಇರದ, ಅಮೆರಿಕದಲ್ಲಿನ ಪ್ರತಿ ವ್ಯಕ್ತಿಯ ಹಕ್ಕುಗಳನ್ನು ರಕ್ಷಿಸುವ ಉದ್ದೇಶದ ವಕೀಲಿ ಸಂಘಟನೆ’ ಎಂದು ಎಸಿಎಲ್‌ಯು ಹೇಳಿಕೊಳ್ಳುತ್ತದೆ. ಟ್ರಂಪ್‌ ಆದೇಶ ವಿರೋಧಿಸಿರುವುದಕ್ಕೆ ಸಂಘಟನೆ ತನ್ನ ವೆಬ್‌ಸೈಟ್‌ನಲ್ಲಿ ಸರಳ ಪದಗಳನ್ನು ಬಳಸಿ ವಿವರಣೆ ನೀಡಿದೆ: ‘ಅವರು ತಾರತಮ್ಯ ಎಸಗಿದರು, ನಾವು ನ್ಯಾಯಾಲಯದ ಮೊರೆ ಹೋದೆವು’.

ಟ್ರಂಪ್‌ ಆದೇಶಕ್ಕೆ ನ್ಯಾಯಾಧೀಶರೊಬ್ಬರು ತಡೆ ನೀಡಿದರು. ಈ ಆದೇಶ ಪ್ರಶ್ನಿಸಿ ಹಲವು ಅರ್ಜಿಗಳು ಸಲ್ಲಿಕೆಯಾಗಿರುವ ಕಾರಣ, ಆದೇಶ ಅನುಷ್ಠಾನಕ್ಕೆ ತರುವುದು ಕಷ್ಟ. ‘ಗ್ರೀನ್‌ ಕಾರ್ಡ್‌’ ಹೊಂದಿರುವವರಿಗೆ ನಿರ್ಬಂಧ ವಿಧಿಸಿದ್ದು ಸೇರಿದಂತೆ ಕೆಲವು ನಿರ್ಬಂಧಗಳನ್ನು ವಿರೋಧಕ್ಕೆ ಮಣಿದು ಹಿಂಪಡೆಯಲಾಗಿದೆ.

ಸಾರ್ವಜನಿಕರ, ಮಾಧ್ಯಮಗಳ, ಸ್ವಯಂಸೇವಕರ ಹಾಗೂ ಆರ್ಥಿಕ ಬೆಂಬಲ ಹೊಂದಿರುವ ಗಟ್ಟಿ ಎನ್‌ಜಿಒ ವ್ಯವಸ್ಥೆಯು ಅಮೆರಿಕಕ್ಕೆ ಇಂಥ ಸಂದರ್ಭಗಳಲ್ಲಿ ಪ್ರಯೋಜನಕ್ಕೆ ಬರುತ್ತದೆ. ಟ್ರಂಪ್‌ ಆದೇಶದ ವಿರುದ್ಧ ಅರ್ಜಿ ಸಲ್ಲಿಸಿದ ಕೆಲವೇ ದಿನಗಳಲ್ಲಿ ಎಸಿಎಲ್‌ಯು ಸಂಸ್ಥೆ ₹ 150 ಕೋಟಿಗಿಂತ ಹೆಚ್ಚಿನ ದೇಣಿಗೆ ಸಂಗ್ರಹಿಸಿತು. ಈ ಮೊತ್ತದಲ್ಲಿ ದೊಡ್ಡ ಭಾಗ ಸಣ್ಣ ದೇಣಿಗೆಗಳಿಂದ ಬಂತು. ನಾನು ಕೆಲಸ ಮಾಡುವ ಸಂಸ್ಥೆಯಂತೆಯೇ, ಎಸಿಎಲ್‌ಯು ಕೂಡ ತನಗೆ ಅಗತ್ಯವಿರುವ ಹಣವನ್ನು ಸದಸ್ಯರು ನೀಡುವ ತಿಂಗಳ ದೇಣಿಗೆ ಮೂಲಕ ಸಂಗ್ರಹಿಸುತ್ತದೆ.

ಮುಸ್ಲಿಮರ ಮೇಲಿನ ನಿಷೇಧದ ವಿರುದ್ಧ ವ್ಯಕ್ತವಾದ ಆಕ್ರೋಶದ ಕಾರಣದಿಂದ, ಎಸಿಎಲ್‌ಯು ಸಂಸ್ಥೆಗೆ ಇತರರು ನೀಡಿದಷ್ಟೇ ದೇಣಿಗೆಯನ್ನು ಅಲ್ಲಿನ ಸೆಲೆಬ್ರಿಟಿಗಳೂ ನೀಡಿದರು. 200 ಜನ ಸೇರಿ ಎಸಿಎಲ್‌ಯು ಸಂಸ್ಥೆಗೆ  ₹ 10 ಲಕ್ಷ ನೀಡಿದರೆ, ಅಷ್ಟೇ ಮೊತ್ತವನ್ನು ಸೆಲೆಬ್ರಿಟಿಯೊಬ್ಬ ನೀಡಿ, ಸಂಸ್ಥೆಗೆ ಒಟ್ಟು ₹ 20 ಲಕ್ಷ ಬರುವಂತೆ ಮಾಡಲಾಯಿತು. ಎಸಿಎಲ್‌ಯು ಸಂಸ್ಥೆ ಟ್ವಿಟರ್‌ನಲ್ಲಿ ಹೊಂದಿರುವ ಬೆಂಬಲಿಗರ ಸಂಖ್ಯೆಯನ್ನು 10 ಲಕ್ಷಕ್ಕೆ ಹೆಚ್ಚಿಸಲು ಕೆಲವರು ಸಹಾಯ ಮಾಡಿದರು. ಒಂದು ವಾರದ ಅವಧಿಯಲ್ಲಿ ಟ್ವಿಟರ್‌ನಲ್ಲಿನ ಬೆಂಬಲಿಗರ ಸಂಖ್ಯೆ 2 ಲಕ್ಷದಷ್ಟು ಹೆಚ್ಚಾಯಿತು. ಈ ಲೇಖನ ಓದುವ ವೇಳೆಗೆ ಅದು 10 ಲಕ್ಷ ದಾಟಿರಬಹುದು.

ಟ್ರಂಪ್‌ ಆದೇಶವು 1940ರ ದಶಕದಲ್ಲಿ ನಡೆದ ಘಟನೆಯೊಂದರ ರೀತಿಯಲ್ಲೇ ಇದೆ ಎಂದು ಹಲವು ಅಮೆರಿಕನ್ನರು ಭಾವಿಸಿದರು. ಎರಡನೆಯ ವಿಶ್ವಯುದ್ಧದ ಸಂದರ್ಭದಲ್ಲಿ ಹವಾಯಿ ದ್ವೀಪದಲ್ಲಿನ ಅಮೆರಿಕದ ನೌಕಾನೆಲೆ ಪರ್ಲ್‌ ಹಾರ್ಬರ್‌ ಮೇಲೆ ಜಪಾನ್‌ ದಾಳಿ ನಡೆಸಿತು. ಇದಾದ ನಂತರ, ಜಪಾನ್‌ ಮೂಲದ ಸಾವಿರಾರು ಅಮೆರಿಕನ್ನರನ್ನು ದೇಶದ್ರೋಹದ ಗುಮಾನಿ ಅಡಿ ಶಿಬಿರಗಳಲ್ಲಿ ಬಂಧಿಸಿಡಲಾಯಿತು. ಇದು ನಂತರದ ದಿನಗಳಲ್ಲಿ ರಾಷ್ಟ್ರೀಯ ಅವಮಾನದ ಸಂಗತಿಯಾಯಿತು.

ಇಂತಹ ಐತಿಹಾಸಿಕ ತಪ್ಪುಗಳ ಸ್ಮರಣೆ, ತಮ್ಮ ಸರ್ಕಾರಗಳು ಎಲ್ಲ ಕಾಲಕ್ಕೂ ದೋಷಾತೀತವಾಗಿ ಇರುವುದಿಲ್ಲ ಎಂಬ ಅರಿವು, ವ್ಯಕ್ತಿಯ ಹಕ್ಕುಗಳನ್ನು ಸರ್ಕಾರ ಉಲ್ಲಂಘಿಸಿದಾಗ ಅದನ್ನು ಪ್ರಶ್ನಿಸಬೇಕು ಎಂಬ ಪ್ರಜ್ಞೆ ಅಮೆರಿಕವನ್ನು ಮಹಾನ್‌ ಆಗಿ ಇರಿಸುತ್ತದೆ. ‘ಅಮೆರಿಕವನ್ನು ಮತ್ತೆ ಮಹಾನ್‌ ಆಗಿಸುತ್ತೇನೆ’ ಎಂದು ಹೇಳುತ್ತಿರುವ ಟ್ರಂಪ್‌ ಅವರಿಗೆ ಮಹಾನ್‌ ಎಂಬುದರ ಮೂಲ ಏನೆಂಬುದು ಗೊತ್ತಿರಲಿಕ್ಕಿಲ್ಲ.

‘ಅಮೆರಿಕದಲ್ಲಿನ ಪ್ರತಿ ವ್ಯಕ್ತಿಯ ಹಕ್ಕುಗಳನ್ನು ರಕ್ಷಿಸುವ’ ಎಸಿಎಲ್‌ಯು ಮತ್ತು ಅದರಂತಹ ಸಂಘಟನೆಗಳನ್ನು ಹೊಂದಿರುವ ಅದೃಷ್ಟ ಅಮೆರಿಕದ್ದು. ಭಾರತದಲ್ಲೂ ಅಂತಹ ಸಂಘಟನೆಗಳು ಇರಬೇಕು. ಸಂಘಟನೆಗಳಿಗೆ ರಾಜಕೀಯ, ನ್ಯಾಯಾಂಗ ಸೇರಿದಂತೆ ಎಲ್ಲ ಕಡೆಗಳಿಂದ ಬೆಂಬಲ ವ್ಯಕ್ತವಾಗಬೇಕು. ಆಗ ನಾವು ನಮ್ಮ ದೇಶವನ್ನು ಕಾನೂನಿಗೆ ಅನುಗುಣವಾಗಿ ನಡೆಯುವ, ವ್ಯಕ್ತಿಯ ಹಕ್ಕುಗಳನ್ನು ಗೌರವಿಸುವ ನಾಡನ್ನಾಗಿಸಬಹುದು.

1962ರಲ್ಲಿ ನಡೆದ ಭಾರತ–ಚೀನಾ ಯುದ್ಧದ ವೇಳೆ ಪ್ರಧಾನಿ ನೆಹರೂ ಅವರು ಚೀನಾ ಮೂಲದ ಸಾವಿರಾರು ಭಾರತೀಯರನ್ನು ಜೈಲಿಗೆ ತಳ್ಳಿದರು. ಯುದ್ಧ ನಡೆದಿದ್ದು ಕೆಲವು ವಾರಗಳವರೆಗೆ ಮಾತ್ರ. ಆದರೆ, ಕೋಲ್ಕತ್ತದ ಮನೆಗಳಿಂದ ಈ ಜನರನ್ನು ಬಲವಂತವಾಗಿ ಹೊತ್ತೊಯ್ದು ರಾಜಸ್ತಾನದ ಜೈಲಿನಲ್ಲಿ ಸುಮಾರು ಎರಡು ವರ್ಷಗಳವರೆಗೆ ಇರಿಸಲಾಗಿತ್ತು. ಆದರೆ, ನೆಹರೂ ಎಸಗಿದ ಈ ಕೃತ್ಯವನ್ನು ನಾವು ಸರಿಯಾಗಿ ಗಮನಿಸದೆ ಇರುವುದು
ನಾಚಿಕೆಯ ಸಂಗತಿ.

ದಲಿತ, ಮುಸ್ಲಿಂ ಮತ್ತು ಆದಿವಾಸಿ ಎಂಬ ದುರ್ಬಲ ಭಾರತೀಯನ ಮೇಲೆ ದೌರ್ಜನ್ಯ ಆಗಾಗ ನಡೆಯುತ್ತಲೇ ಇರುತ್ತದೆ. ನಮ್ಮ ನಾಗರಿಕ ಸಮಾಜದಲ್ಲಿ ಎಸಿಎಲ್‌ಯುನಂತಹ ಪ್ರಭಾವಿ ಸಂಸ್ಥೆಯನ್ನು ಹೊಂದುವ ದಿನ ಶುಭದಿನವೂ ಆಗುತ್ತದೆ. ಎಸಿಎಲ್‌ಯು ಪ್ರತಿಪಾದಿಸುವ ಮೌಲ್ಯಗಳನ್ನು ಲಕ್ಷಾಂತರ ಅಮೆರಿಕನ್ನರು ಗೌರವಿಸುವ ಕಾರಣ ಆ ಸಂಸ್ಥೆ ಬಲಿಷ್ಠವಾಗಿದೆ.

ಇನ್ನೊಬ್ಬ ಭಾರತೀಯನನ್ನು ಸರಿಯಾಗಿ ನೋಡಿಕೊಳ್ಳದಿದ್ದಾಗ ನಮಗೆ ನೋವಾದರೆ, ಇನ್ನೊಬ್ಬರಿಗೆ ಆಗುವ ಅನ್ಯಾಯವನ್ನು ನಮ್ಮದೆಂದು ಭಾವಿಸಲು ಆರಂಭಿಸಿದಾಗ ನಾವು ಮಹಾನ್‌ ಭಾರತ ಕಟ್ಟುವ ಪ್ರಕ್ರಿಯೆ ಆರಂಭಿಸಿದಂತೆ ಆಗುತ್ತದೆ.
(ಲೇಖಕ ಅಂಕಣಕಾರ ಹಾಗೂ ಆಮ್ನೆಸ್ಟಿ ಇಂಟರ್ ನ್ಯಾಷನಲ್ ಇಂಡಿಯಾದ ಕಾರ್ಯನಿರ್ವಾಹಕ ನಿರ್ದೇಶಕ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT