ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂರು ಕವಲಿನ ತೊರೆ

Last Updated 2 ಜುಲೈ 2011, 19:30 IST
ಅಕ್ಷರ ಗಾತ್ರ

ಬಿಡಿ ಹೂಗಳು

ಪಾರ್ವತಿ ಉವಾಚ
ಅವತ್ತು  ಶಿವನಿಗೆ ಹೂವೇರಿಸುವಾಗ
ಜಟೆ ಹಿಂದಿನಿಂದವಳು
ಅಕ್ಕಾ ಎನಬೇಕೆ?
ಹೂವೇರಿಸುವ ಕೈ-
ಗಕ್ಕ
ನಿಂತಿತು

ಗೂಡಿನ  ವಿದ್ಯಮಾನ
ನಕ್ಷತ್ರ ಹೊದ್ದು ಆಕಾಶ ಮಲಗಿದೆ
ರಾತ್ರಿ  ಅದು
ಮಾಯೆ ಮೀಯುವ ಹೊತ್ತು
ಒಲೆ ಮೇಲೆ ಬೆಳಗಿಂದ
ಕುದಿಯುತಿದೆ ಎಸರು ಬರಿದೆ,
ಗಾಯ ಮಾಯದ ಉರಿಯ ಮರೆಸಿ
ಮಲಗಿಹುದು ಹಕ್ಕಿಯೂ
ಹೃದಯ ಕಂಬನಿ ಗೂಡು
ರೆಕ್ಕೆ ಮಡಚಿ

ಇಷ್ಟೇ
ಇದಿಷ್ಟೇ ಗುಳಿಗೆ
(ಕಹಿ ಇದ್ದರೇನು) ನುಂಗಿಬಿಡು
ಇದಿಷ್ಟೇ ಕಷಾಯ
(ವಾಂತಿಯಾದರೂ ಸರಿ) ಕುಡಿದುಬಿಡು
ಇದಿಷ್ಟೇ ದಾರಿ
(ನೆರಳಿಲ್ಲ ನಿಜ) ಸವೆಸಿ ಬಿಡು
ಇದಿಷ್ಟೇ ಬದುಕು
(ಇನ್ನೇನು ಮುಗಿಯಿತು) ಕಳೆದುಬಿಡು

ಗೋಪಿಕೀರ್ತನ
ಕರೆವ ಕೊಳಲಿಗೆ ಮನ
ಉರಿವ ಒಲೆ ಕಡೆ ಗಮನ
ಹೊರಟು ಒಳ ನಿಂತಿರುವ
ಆಪ್ಯಾಯಮಾನ ಗೋಪಿಕೀರ್ತನ
ಗೊತ್ತೆ?
ಆಕೆಯನೆ ಕೇಳಿ
ಯಮುನಾ ತೀರದಲಿ
ಅಲೆವವನೇ ಶುಭಮಸ್ತು
ಎನ್ನುತ್ತ ಒಗ್ಗರಣೆ ಮೆಣಸು
ರುಂಯ್ಞ ಚಿವುಟಿದಳು
ಪ್ರಾಣಸಖ ಕ್ಷಮಿಸೆಂದಳು

ಕರುಣ ಕತೆ
ಕರ್ಣ ಕುಂಡಲ ತೊಡಿಸಿ
ಪಟ್ಟೆ ಪೀತಾಂಬರವ ನಿರಿಗೆ ಹಿಡಿದುಡಿಸಿ
ಶಂಖ ಚಕ್ರವ ಕೊಟ್ಟು
ಅಭಯ ಹಸ್ತದಿ ನಿನ್ನ ನಿಲ್ಲಿಸಿದವರು
ಎಳೆದರಲ್ಲೊ ಬಿಳಿಯ ನಾಮ
ಹಣೆಗಣ್ಣ ಮೇಲೆಯೇ ಪಟ್ಟಿ ಕಟ್ಟಿದಂತೆ
ಕುರುಡನೇ ನೀ ಕಾಂಬವನೇ?
ತಿರುಪತಿ ವೆಂಕಟರಮಣಾ
ನಿನದೆಂಥಾ ಕತೆಯಿದು ಕರುಣ

ರಂಗ ಪೂಜೆ
ಗೋಪಿ ಗುಡಿಸಲಿನಲಿ ಅಂದು
ವಿಶೇಷ  ಪೂಜೆ
`ವಾಚಾಲಿಯನ್ನು ಮೂಗಿಯಾಗಿಸಿದ
ಕೃಷ್ಣಾಯ ತುಭ್ಯಂ ನಮಃ~ ಮಂತ್ರ
ಅಚ್ಯುತಾಷ್ಟಕ ಜೊತೆಗೆ ಮಂದಾರ ತುಲಸಿ
ರತ್ನಗಂಧಿ ಧೂಪ ದೀಪ ನೈವೇದ್ಯ
ಏಕಾನೇಕಾರತಿ
ನಡೆಯುತಿದೆ, ಅಹೊಅಹೋ
ಎಲ್ಲಿಂದಲೋ  ಮುರಲಿ
ಮೋಹನ ರಾಗ ಬರುತಿದೆ ತೇಲಿ 
ತಕ್ಷಣವೆ ಆವರಿಸಿ ಪರವಶತೆ ಅಕಟಾ
ಬಾಷ್ಪವಾರಿಯ ಚಿಮುಚಿಮುಕಿಸಿ
ತೊಳೆಯಬಹುದೇ ವಿರಹ
ಕೃಷ್ಣಾರ್ಪಣವೆನುತ ಕೈಯ
ಮುಗಿಯ ಬಹುದೇ ಆ
ಮಂತ್ರ-ಮುಗ್ಧ ಮರುಳಿ?

ಮುಗಿದ ಅಧ್ಯಾಯ
ಅದು ಆಯಿತು
ಅದು ಮುಗಿಯಿತು
ಸಿಕ್ಕಿದ್ದು ನೆನಪಿನ ಆಸ್ತಿ, ಅರಿವಾಯಿತು
ಆ ಊರ ದಾರಿ ಬಿಟ್ಟು ಬಂದಳು ಹುಡುಗಿ
ಏಕಾಂಗಿ- ಸತ್ಯವನು ತಬ್ಬಿಕೊಂಡು
ಗದ್ಗದದ ಬಿಗಿದು ಕಟ್ಟಿಕೊಂಡು
ನಗೆರೂಜ ಕೆನ್ನೆಗೆ ಹಚ್ಚಿಕೊಂಡು

ವಾನಪ್ರಸ್ಥದ  ಸಮಯ
ಪ್ರಸ್ಥದೂಟವು ಮುಗಿದು ವರ್ಷವೆಷ್ಟಾಯ್ತು
ವನಗಮನ ಸಮಯವಿದು ಹೊರಡಬೇಕು
ಮುನಿಗಳಾಶ್ರಮ ಕರೆಯುತಿದೆ ಬಾ ಪ್ರಿಯ
ಧ್ಯಾನದಲಿ ಕಾಯ ಮಾಯೆ ಸುಡಬೇಕು
ಮೊದಲು, 
ಕಾನನವ  ಹುಡುಕಬೇಕು

ಆಶಯಕಟ್ಟು
ಜಲಾಶಯದಲ್ಲಿ
ನೀರೇ ನೀರು
ನಟ್ಟ ನಡುವೆ ತಟಸ್ಥ
ಹಡಗು
ಕಟ್ಟಿಹಾಕಿದ
ಆಶಯ

ಸಿಕ್ಕಿ ಬಿದ್ದ ಮೀನಾಕ್ಷಿ
ಗುಡುಗುಡೇ  ಪಕ್ಷೀ ಯಾರೇ ಪಕ್ಷೀ
ಎಲ್ಲಡಗಿದೆಯೇ ಮೀನಾಕ್ಷೀ...
ಮುಚ್ಚೇ ಕಣ್ಣ ಬಿಟ್ಟರೆ ಬಣ್ಣ
ಗುಡುಗುಡೇ  ಪಕ್ಷೀ... ತಡಿ  `ಆಕ್ಷೀ~
ಸಿಕ್ಕೇ  ಬಿದ್ದಳು ಮೀನಾಕ್ಷಿ

ಬುದ್ಧನ ಕಿವಿ ಎಷ್ಟು ಉದ್ದ!

ಅವರಿಗೇಕೆ ನಾವೆ?
ಓಹೋ ಈ ಚೋಟುದ್ದ ಹಾಳೆನಾವೆಯನೇರಿ
ಈ ಚಿಕಣಿ  ಹಾಳೆ ಚಪ್ಪಲಿ ಮೆಟ್ಟಿ
ಈ ಮಿಣುಕುಟಿ ಹಾಳೆಕೊಡೆಯ ಹಿಡಿದು
ದಾಟುವರೆ ಯಾರಾದರೂ ವೈತರಣೀ?
ಭಟ್ಟರೆ ನೋಡುತಿರಿ, ಅಪ್ಪಯ್ಯ ನಕ್ಕು
ನಮಗೆ ಆಡಲು ಇವನೆಲ್ಲ ಕೊಟ್ಟು
ನದಿಗಿಳಿದು ಆಚೆ ದಡ ಸೇರುವರು,
ದೋಣಿ ಯಾತಕೆ ಅವರು
ಈಸಿ ಗೆದ್ದವರು

ಇಂದಿನ  ಪಾಠ
ಕಣ್ಮುಚ್ಚಿದರೆ ಸಾವು
ತೆರೆದರೆ ಬದುಕು
ಪಾಠ ಇಷ್ಟೆ
ಧ್ಯಾನಿಸು

ಬುದ್ಧ ಉವಾಚ
ಸಕಲರನೂ ಸಾವು
ಹುಡುಕುವುದೆ?
ನಾವು
ಬದುಕು ಹುಡುಕೋಣ ನಡೆ
ನನ್ನ ಚನ್ನ

ಬಾ ಬದುಕು
ಈ ಹಾಸಿಗೆ ದರ್ಬೆಯದು
ಹಾಸಿಗೆಗೆ ಮೂಲ
ಈ ವಾಹನ ಬಿದಿರಿನದು
ವಾಹನಕೆ ಮೂಲ
ಈ ಚಿತೆ  ಮರಮಟ್ಟಿನ
ಪಲ್ಲಂಗಕೆ ಮೂಲ
ಇಲ್ಲವೆಂದುಕೊ ಈ ಕತ್ತಲು
ಎಲ್ಲಿರುತಿತ್ತು ದೀಪ? 
ಎಲ್ಲ ಕಡೆ ಪಡೆ ಎಲ್ಲ
ಕಳೆಯುತ - ಬಾ - ಬದುಕು

ಮುಚ್ಚಿದ ಬಾಗಿಲು ಮುಚ್ಚಿದಂತೆಯೇ!
ಚಳಿ ನೆಲ
ದರ್ಬೆ ಹಾಸಿಗೆ
ಮರಗಟ್ಟಿದ ದೇಹ
ಒಮ್ಮೆ ನಡುಗು
ಯಃಕಶ್ಚಿತ್ ನೊಣ
ಹತ್ತಿಯೂ ಅಲ್ಲಾಡುತ್ತಿಲ್ಲ
ಮೂಗಿನ ತುದಿ
ಹೋದೆ ಎಲ್ಲಿಗೆ  ಹೇಗೆ
ಯಾವ ಬಾಗಿಲೂ ತೆರೆಯದೆ
ಮುಚ್ಚಿಕೊಂಡು
ಸಾವಿನ ಮನೆ
ಮಂದ್ರ ದೀಪ

ಕಾಯುವ ನೀರು
ಬೆಳಗಿನ ಶಬ್ದ
ನಿಶಬ್ದ ಕಸಿದು
ಎದ್ದು  ಕುಳಿತಿದೆ ಸಾವು
ಹುರಿದಿಟ್ಟ ರವೆ
ಅರೆ ಕುದಿದ ನೀರು
ಗಕ್ಕನೆ ಸ್ಟೌ ನಂದಿದೆ
ಹನಿಯುತಿದೆ ಕಾಪಿ ಕಣ್ಣು
ಹಂಡೆ ಒಲೆ ಉರಿಯುತಿದೆ
ಗಳಗಳನೆ
ಕಾಯುತಿದೆ ನೀರು
ಸ್ಮಶಾನದಿಂದ ಯಾರು 
ಮರಳುವರು?

ಸ್ಥಿತಪ್ರಜ್ಞ
ಹೋಗಿದ್ದೆ ಮತ್ತೊಂದು ದಿನ
ಮಟಮಟ ಮಧ್ಯಾಹ್ನ
ಇನ್ನೊಂದು ಹೆಣ ಉರಿಯುತಿತ್ತು
ಸುತ್ತಾ ಜನ
ಸ್ಮಶಾನ
ಸ್ಥಿತಪ್ರಜ್ಞ

ಎಣ್ಣೆ ಇದ್ದರೂ 
ಎಣ್ಣೆ ಇದ್ದರೂ
ತಣ್ಣಗೆ ಉರಿಯುವ ದೀಪ
ಹೊಮ್ಮಲಾರದ ಶೋಕ
ಸುಯ್ದಂತೆ ಒಳಗೇ
ಗುಟ್ಟಿನಲ್ಲಿ

ನಿಗೂಢ
ಬಳೆಗಳಿವೆ, ಕೈಗಳೆಲ್ಲಿ?
ಮೂಗುತಿಗೆ ಮೂಗು ಎಲ್ಲಿ?
ಉಂಗುರವಿದೆ, ಬೆರಳೆಲ್ಲಿ?
ಉರಿಸುತ್ತಿದೆ ದೇಹ ಚಿತೆಯ
ಉಸಿರಿನಾಟ- ಎಲ್ಲಿ?

ಲೆಕ್ಕದ ಅವಾಕ್ಕು
ಜಡಿ ಮಳೆಯ ಆ ಕಪ್ಪು ರಾತ್ರಿ
ದೇಹ ಕಳೆದ ಸೀರೆ ಕುಪ್ಪಸದ ಲೆಕ್ಕ
ಪಾತ್ರೆ ಪರಡಿ ಲೋಟ ಜರಡಿ
ಬಾಯಿ ಕಳೆದು ಅವಾಕ್ಕು
ನೋಡುತಿವೆ.

ವಿಜ್ಞಾನ ಪಾಠ 
ಅರ್ಥವಂತ ವಸ್ತುವೊಂದು
ಮಾರ್ಪಾಡು ಆಡುವಾಗ
ಶಾಖ ಬಿಡುಗಡೆಯಾಗಿ
ಶೀತಲವಾಯಿತು
ಸತ್ಯಗಳು ಹೀಗೇ,
ನಂಬದಿರೆ ಹೋಗಲಿ
ನುಂಗಬೇಕು

ಇನ್ನೆಷ್ಟು ಹೊತ್ತು?
ಸೂರ್ಯ ಬರುತಿದ್ದಂತೆ
ದೀಪ ಆರಿದೆ
ಸಾವಿನ ಮನೆ ಬಾಗಿಲು
ಮುಚ್ಚುವುದಿಲ್ಲ
ಜನಜನಜನ
ಬರುವರು ಹೋಗುವರು
ದುಃಖಕ್ಕೆ ಲೆಕ್ಕವಿಲ್ಲ
ಸಮಾಧಾನ
ಅರಳಿದವೇ ಈ ಹೂಗಳು
ಮಾಲೆಯಾಗಿ ಹೆಣದ ಮೇಲೆ
ನಗಲು?
ಆ ಗುಲಾಬಿ
ಎಷ್ಟು ಚೆನ್ನಾಗಿದೆ
ಎಲ್ಲಿತ್ತೋ ಈ ಬಿದಿರು
ಅಂಗಳದಲಿ ಮೈ ಮುರಿಯುತ್ತಿದೆ
ಹೆಣ ನೋಡುತ್ತಿದೆ
ಅದರ ಕಾರುಬಾರು
ಕಣ್ಣೀರು ಬೋರಲು ಕವುಚಿ
ಮುಗಿದಿದೆ
ಒಳಕೋಣೆ ತುಂಬ
ಪಿಸುಮಾತು - ಎಲ್ಲೆಲ್ಲಿನವರು
ಆರಾಮಾ?
ಚೆನ್ನಾಗಿತ್ತಾ ನಿನ್ನೆ ಸಿನೆಮಾ?
ಕರಿಮಣಿ ಹಳತಾಗಿದೆ,
ಮಾಡಿಸಬೇಕು ಹೊಸತು
ಹಸಿವೆ- ಗುರುಗುರು
ಆಗಿಲ್ಲವೆ... ಗಂಟೆ ಎಷ್ಟು?
ಓ ಇನ್ನೆಷ್ಟು ಹೊತ್ತು

ಭಯ
ನಡುರಾತ್ರಿ
ಬರೆಯುತಿದ್ದೇನೆ,
ಸಾವಿನ ಕವನ
ನಾಯಿ ಊಳಿಡುತ್ತಿದೆ
ಥಟ್ಟನೆದ್ದು ಕಿಟಿಕಿ ಮುಚ್ಚಿದೆ

ನಕ್ಷತ್ರ ಹಾರಿತು
ದಣಿದ ದಿವ
ಗಾಢ  ನಿದ್ದೆಯಲಿತ್ತು ಆ ರಾತ್ರಿ
ಸುದ್ದಿಲ್ಲದೆ ಒಂದು ನೆಲದ ನಕ್ಷತ್ರ
ಕಣ್ಣು ತಪ್ಪಿಸಿ ದೂರ ನಭಕೆ   
ಪಯಣಿಸಿತು
ಜಾಗ ಖಾಲಿ ಬಿತ್ತು
ಖಾಲಿ ಬಿತ್ತದು ಖಾಲಿ
ಖಾಲಿ ಖಾಲಿ
ಖಾಲಿಯೇ ಇತ್ತು ಯಾವ
ಸಂಪತ್ತೂ
ತುಂಬಲಾಗದೆ
ಖಾಲಿ-ಖಾಲಿಯೇ
ಬಿತ್ತು
***
ಹೋದಳೆಲ್ಲಿಗೆ?
ಮನೆಯೆಲ್ಲವು ಶೋಕ ಮಲಗಿದೆ
ಶಬ್ದ ಶಬ್ದವೂ ಶಬ್ದ ಕಳೆದಿದೆ
ಹೊರಟೆ ಹೋದಳು ಅಮ್ಮ
ಹೇಳಕೇಳದೆ
ನೋವು ವೇದನೆ ನೆನಪು
ಒದ್ದೆದ್ದು ಬಳಿ ಸಾರಿ
ಮುಖವನೇ ನೋಡುತಿವೆ
ಹನಿಗೂಡಿದೆ ಹೃದಯ
ಮುಳುಗಿದೆ ಸೂರ್ಯೋದಯ
ಹೋದಳೆಂದರೆ ಅಮ್ಮ
ಹೋದಳೆಲ್ಲಿಗೆ ಪ್ರಿಯ
ಹಾಕಿದ ಅಗಳಿ ಹಾಕಿದಂತೆಯೇ
***
ಇಬ್ಬನಿ ಕಣ್ಣು
ಅಮ್ಮನಂಥವರಿಗೆ ಮುಕ್ತಿ ಸಿಗಬಾರದು
ಭೂಮಿ ಬರಡಾಗುತ್ತದೆ
ಅಮ್ಮನಂಥವರು ಮರುಹುಟ್ಟಕೂಡದು
ಸ್ವರ್ಗ ಬರಡಾಗುತ್ತದೆ
ಅಮ್ಮನಂಥ ಈ ಇರುವಂತಿಗೆ
ನೋಡೇ ಗುಲಾಬಿ, ಅರಳಿದೆ, ಮುಳ್ಳಿಗೆ!
ನೇಯೋಣ ಬಾ ಗೊಂಡೆ, ಮಲ್ಲಿಗೆ
ಇದು  ಭೂಮಿ ಇದೇ ಸ್ವರ್ಗ  ನಮ್ಮ
ಅಮ್ಮ ಇದ್ದಾಳೀಗ ಹೀಗೆ ಹೀಗೆ
ನೋಡಲ್ಲಿ ಅಮ್ಮನದೇ ಕಣ್ಣು
ಇಬ್ಬನಿಗೆ
***
ಮರಣಕೂ ಮದುವೆಗೂ
ಬಾಬಣ್ಣ ಭಟ್ಟರು ಬಂದಿರುವರು
ನೆನಪು ಕೆದರುತ್ತ ಕಾಯಿ ತುರಿಯುತಿಹರು
ವರ ಲಗ್ನಕೂ ಆಗ ನಮ್ಮದೇ ಟೀಮು
ಅವತ್ತು ಏನಂತ್ರಿ, ಕಪ್ಪೋಕಪ್ಪು ರಾತ್ರಿ
ಇದ್ದಕಿದ್ದಂತೆ ಝೋರು ಗಾಳಿ ಬೀಸಿ
ಮಳೆ ಬಂದು ಒಲೆ ಮೇಲೆ ಟಾರ್ಪಾಲು ಹಾಸಿ
ಠಪ್ಪಂತ ಲೈಟ್ ಹೋಗಿ ಗ್ಯಾಸ್ ಲೈಟು ಹಚ್ಚಿ
ಪೋಡಿ ಪಾಯಸ ಅಡಿಗೆ ಹೋಳಿಗೆ ಅಂತು ಮುಗಿಸಿ
ಬೆನ್ನೆತ್ತುವುದರಲ್ಲಿ ದಿಬ್ಬಣ ಬಂದಾಯ್ತು~ - ಎನ್ನುತ್ತ
ವೈಕುಂಠದಡುಗೆಯಲ್ಲಿಹರು.
***

ಅಸ್ತಮಾನದ ಕವಿತೆಗಳು
ಚಿತ್ರ  ಬಿಡಿಸುವೆ 
ಆರ್ಯ, ನಿನ್ನ ಚಿತ್ರ ಬಿಡಿಸುವೆ
- ಅಪೇಕ್ಷೆ ಕೇಳಿದ್ದೇ ಮೈತುಂಬ ಹೊದೆದ
ಮುಗಿಲ ಶಾಲು
ಶಾಲು ತೆಗೆಯೋ ಎಂದೆ
ಸಾಲು ಸಾಲು ಮಿಗಿಲು ಸೂರ್ಯರಿದ್ದಾರೆ
ಎಂದ ಈತನೀಗ ನಿಜಕ್ಕೂ
ನಿಜದ ಸೂರ್ಯ.
ಹಿಂಬಾಲಿಸಿದೆ ದುಂಬಾಲಿಸಿದೆ
ಸಮುದ್ರ ಹೊಕ್ಕು ತೆರೆ ಮುಚ್ಚಿಕೊಂಡ
ಎಲ್ಲಿ ಹೋಗುವೆ ನೀನು ನೋಡುವೆ
ಮುಚ್ಚಿಕೊಂಡಿರುವ ತೆರೆ ತೆರೆಯದೆ. 
ಬೆಟ್ಟ ದಾರಿಗೆ ಹೋಗಿ ಗುಟ್ಟಾಗಿ ಇರಬೇಕು
ಕಷ್ಟದಲಿ ಇರುಳು ಕಳೆಯಬೇಕು
ಮತ್ತೆ ಬೆಳಗಾಮುಂಚೆ ಮೆಟ್ಟಿಲು ಹತ್ತಿ ಬರುವಾಗ
ಗಪ್ಪಂತ ಗಟ್ಟಿ ಹಿಡಿಯಬೇಕು
ಒಲವಿನ ಗ್ರಹ ಬಲನೆ, ಕೈ ಜೋಡಿಸುವೆ
ಬಯಲಾಗು - ತಂತ್ರ ಅರಿಯೆ ಮಂತ್ರ ತಿಳಿಯೆ.
ಸತ್ಯ ಹೇಳಬೇಕು
ಚಿತ್ರ  ಬಿಡಿಸಬೇಕು.

ಸುಡುವ ಕಾಯಕ
ಸೂರ್ಯನಲ್ಲೇ ಕಣ್ಣು ನೆಟ್ಟೆ
ದೃಷ್ಟಿ ಸುಟ್ಟಿತು
ಸೂರ್ಯನಲ್ಲೇ ಮನವ ನೆಟ್ಟೆ
ಕಾಯ ಸುಟ್ಟಿತು!
ಸೂರ್ಯನನ್ನೇ ಕರೆದೆ ಕರೆದೆ
ದನಿಯು ಸುಟ್ಟಿತು
ಸೂರ್ಯನಿಗೇ ದೂರು ಕೊಟ್ಟೆ
ಉಸಿರು ಸುಟ್ಟಿತು
ಸುಟ್ಟ ಕರಿಯ ಕದಡಿ ಕುಡಿದೆ
ನಾನು ಎಂಬುವ ನಾನು ಸುಟ್ಟು
ಸುಡುವ ಬೆಳಕನೆ ಮಿಂದು ಸ್ವತಃ
ಸೂರ್ಯೆ ಆಗಿಹೆನು!
ನಿತ್ಯ ಮೂಡುತ ನಿತ್ಯ ಮುಳುಗುತ
ಕಷ್ಟಸುಖಗಳ ಬೆಟ್ಟ ಕಡಲಲಿ
ನಿತ್ಯ ಸುಡುತಿಹೆನು.

ಚೋದ್ಯ
ಆಕಾಶದಲ್ಲಿನ ಸೂರ್ಯ
ನನ್ನ ಗಡಿಯಾರ ಗಾಜಿನೊಳಗೆ
ಹೊಕ್ಕ ಹೇಗೆ ಎಷ್ಟೊತ್ತಿಗೆ!
ಹೊಳೆಸುತ್ತಿದ್ದಾನೆ
ದುಃಖ ತೊಳೆವ ನಗೆ!

ನಾ ಕವಿ ತಿಳಕೊ
ಸೂರ್ಯ,
ನಾ ಕವಿ ತಿಳಕೊ
ನಿನಗೆ ಕಾಣದ ನೀನೂ
ಕಂಡರೂ ನನಗೆ
ಮಿತ್ರ ನೀನಾಗಿ
ಕಾಣದಂತಿರುವೆ

ಹುಡುಗಿ ಹೇಳಿದ ಕಥೆ
ಎದ್ದಾಗ ಕೇಳಿದರು
ನಿನಗೇನು ಬೇಕು?
-ಸೂರ್ಯ
ಮಧ್ಯಾಹ್ನ ಕೇಳಿದರು
ಏನು, ಏನು ಬೇಕು?
-ಸೂರ್ಯ
ಗಂಟೆಗಂಟೆಗೂ ಕಡೆಗೆ
ನಿಮಿಷ ನಿಮಿಷಕೂ
ಮತ್ತದೇ ಕೇಳಿದರು
ಉತ್ತರ -ಸೂರ್ಯ
ಕತ್ತಲಾಯಿತು ಎಂದರೆ
ಸೂರ್ಯ ಮುಳುಗಿದ ಎಂದಲ್ಲ
ಜಗ ಮಲಗಿತೆಂದೂ ಅಲ್ಲ
ಕೆನ್ನೆಕೆನ್ನೆಗೆ ಹೊಡೆದು ಪುನಪುನಾ ಕೇಳಿದರು
ಏನು ಬೇಕೆಂದೆ?
-ಸೂರ್ಯ
ಅಗೋ ಬಾನು ದೊಡ್ಡದು
ಭೂಮಿ ದೊಡ್ಡದು
ಅವನೇನು ಮಹಾ, ಇದು ತಗೋ
ಬ್ರಹ್ಮಾಂಡವೇ ನಿನಗೆಂದರು
ಮರುಳು ಜನರು
ಸೂರ್ಯನ ಬೆಲೆ ಅರಿಯರು
ಮರುಳು  ಸೂರ್ಯ
ನನ್ನ ಬೆಲೆ ಅರಿಯ

ಕ್ಷಮಾಯಾಚನೆ 
ಬಂದುಹೋದರೂ ನೀನು
ಕಳ್ಳನಂತೆ
ಕಿರಣಗಳೇ ಸುದ್ದಿ ಪಿಸುವಿಸಿದವು
ಪಿಸುವಿಸಿದ ಸುದ್ದಿ ಸೂತ್ರ ಹಿಡಿದು
ನಿನ್ನ ಕಂಡೆನು ಸೂರ್ಯ ಕ್ಷಮಿಸು
ನಿನ್ನದೇ ಕಿರಣಗುಣ
ಎಚ್ಚರಿಕೆ ವಹಿಸು

**
ಒಂದು  ದಿನವಾದರೂ
ಸೂರ್ಯನಿಗೆ ಒಂದು ದಿನ
ರಜೆ ಕೊಡಿ - ಎಂದೆ
ರಜೆಯ ದಿನ ಬದಲಿಗೆ
ಜನ ಕೊಡಿ - ಎಂದರು
ಸಿಗಲಿಲ್ಲ ಮೂಲೋಕ
ಜಾಲಾಡಿದರೂ.  
***
ತಣ್ಣನೆಯ ನಗು
ಸೂರ್ಯನನು ನೋಡೇ
ಎಷ್ಟು ಚಂದ!
ಉರುಟಾಗಿ ಚಂದ್ರನಂತೆ!
ಈ ಉಪಮೆ ಕೇಳಿ
ಹೊರಗೆ ಹುಣ್ಣಿಮೆ ಚಂದ್ರ
ಬಾಡಿಗೆಯ ಬೆಳಗಲ್ಲಿ
ಉರುಟಾಗಿ ನಕ್ಕನಂತೆ.
***
ಆ ರಾತ್ರಿ
ಅವತ್ತು ಸೂರ್ಯ
ಕತ್ತಲಲ್ಲಿ ಹೊಳೆದ
ರಾತ್ರಿ
ಆಕಾಶದಲ್ಲಿ
ನಕ್ಷತ್ರಗಳಿರಲಿಲ್ಲ
***
ಮಹಾ ಸುಳ್ಳ
ಕೊಳದ ಕಮಲಕ್ಕಾಗಿ
ಬರುವ ಸೂರ್ಯ
`ನಿಮ್ಮ ನೋಡಲು ಬಂದೆ~ 
ಎಂದು
ಲೋಕದೆದುರು
ನಾಟಕವಾಡುವ
ಸುಳ್ಳ!
ಎಂಬುದನ್ನು ಜನ
ಎಂದೋ ತಿಳಿದಿರುವ
ಅರಿವಿಲ್ಲದೆ ಆತ
ಬರುಬರುತ್ತಲೇ
ಅದೇ ಪದ ಹಾಡುತ್ತಾನೆ!
***
ಈತನೂ ಇಷ್ಟೇ!
ಆ ಸೂರ್ಯನೇ - ಬಿಡು
ಒಂದು ಸಣ್ಣ ಅಲೆಯ
ಕಣ್ಣ ಕುಣಿತಕ್ಕೆ
ವಿಲಿವಿಲಿಯಾಗಿ
ತೇಕಿ ಮುಳುಗಿ
ಆಕಾರ ಕಳೆದುಕೊಂಡು
ಓರೆಯಾಗಿ ಕೋರೆಯಾಗಿ
ಮುಳುಗಿ ಹೋಗುತ್ತಾನೆ!
ಯಃಕಶ್ಚಿತ್ ಪುರುಷನಂತೆ!
***
ಹೇಳಲಸದಳ
ಸೂರ್ಯನ ಕುರಿತು
ಹೇಳೆಂದೆಯ ಗೆಳತಿ?
ಹೇಳ ಹೊರಟರೆ ತುಂಟ
ಶಬ್ದ ನಿಷ್ಪತ್ತಿ
ಮರೆಯಾಟ ಆಡುವವು
ಮರೆವಿನ ಮರ ಹತ್ತಿ
***
ಸೂರ್ಯನೆಂದರೆ?
ಮಗು ಕೇಳಿತು
“ಅಮ್ಮ ಸೂರ್ಯನೆಂದರೆ?”
“ಛಿ, ನಡೆಯಾಚೆ ಕಿರಿಕಿರಿ”
ಒಂದು ಬಾರಿಸಿದಳು ತಾಯಿ
“ಉರಿ!” ತಡೆಯಲಾರದೆ ಕೂಗಿ
ಕೂಗಿ ಅತ್ತಿತು ಮಗು
“ತಿಳಿಯಿತೆ ಈಗ ಸೂರ್ಯನೆಂದರೆ?”
ಎಂಬ ತಾಯಿಯ ಕಣ್ಣಲ್ಲಿ ನೀರೇಕೆ?
ಕೇಳಲಾರದ ಮಗುವನ್ನು
ಝೆನ್ ಗುರು ಎತ್ತಿಕೊಂಡ.
***
ಏಳು ಕತ್ತಲ ಹರಿದು
ನೋಡಲ್ಲಿ ಸೂರ್ಯ ಬಾನ ಅಂಗಳದಲ್ಲಿ
ನಿನಗಾಗಿಯೇ ನಿಂತು ಕಾಯುತಿರುವ
ಎಷ್ಟು ಬೆಡಗಿನ ಬೆಳಗು, ಹೊಳೆವ ಹೊಳೆ ಬೆರಗು
ಗಿಡಮರಗಳಂಗಣದಿ ಕೋರಸದ ಹಾಡು
ಇರುಳು ಹೋಯಿತು ಹೊರಗೆ ಹಗಲ ಕದ ತೆರೆದು
ಏಳು ಮನವೇ ಏಳು ಕತ್ತಲಿಂದ
***
ಅವನಂತೆ
ಬುದ್ಧನಾಗುವುದು
ಹೇಗೆ ಜೀವಂತಿಕಾ
ಬೇಕೆಬೇಕಿಲ್ಲ ಬೋಧಿವಕ್ಷದ ನೆರಳು
ಎಲ್ಲಿ ಇರುವೆಯೋ ಅಲ್ಲಿ
ಇದ್ದೇ ಬಿಡು
ಅಕೋ,
ಸೂರ್ಯ!
***
ಗಾಯ ಮಾಯ
ಬಾ ಮಗೂ,
ಬಾ, ನನ್ನ ಹೆಗಲಿದೆ ಒರಗು,
ನೋವೆ, ಎಲ್ಲಿ, ಹಚ್ಚುವೆ ಬೇವಿನೆಣ್ಣೆ
ಇರು ಹಾಗೇ, ಅಲುಗಾಡದೆ
ಅಳದಿರು ಛೇಛೆ ಅಳಿಸದಿರು ಎಲ್ಲ
ಮತ್ತೆ ಬರೆ,
ಅಕೋ ಹೊಚ್ಚ ಹೊಸ
ಮೂಡಲ ಪಾಯ
ಬೆಚ್ಚಗೆ ಸೂರ್ಯ 
ಇನ್ನೇನು, ಶೀಘ್ರ ಮಾಯ
ಗಾಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT