ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೃತ ಸಮುದ್ರ

Last Updated 2 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನಾನು ಶಾಲೆಯಲ್ಲಿ ಓದುವಾಗ ಭೂಗೋಲ ಶಾಸ್ತ್ರ ನನಗೆ ಪ್ರಿಯವಾಗಿತ್ತು. ಅದರಲ್ಲಿ ಬರುವ ಭೂ ವಿಶೇಷಗಳು, ಪ್ರದೇಶಗಳ ಲಕ್ಷಣಗಳು, ಜನರ ಜೀವನ ವಿಧಾನಗಳು ನನ್ನಲ್ಲಿ ಬೆರಗು ಹುಟ್ಟಿಸುತ್ತಿದ್ದವು. ನಂತರ ಆ ವಿಷಯಗಳ ಬಗ್ಗೆ ಆಳವಾಗಿ ಚಿಂತಿಸುತ್ತಿದ್ದಾಗ ಆ ಬೆರಗಿನ ಅಂಚಿನಲ್ಲೇ ಬೆಳಕು ಮೊಳೆಯುತ್ತಿತ್ತು. ಅಂಥದೊಂದು ವಿಷಯ ನನಗೆ ಹೊಳೆದದ್ದು ಶಿಕ್ಷಕರು ಡೆಡ್ ಸೀ  ಬಗ್ಗೆ ಹೇಳಿದಾಗ. 

`ಡೆಡ್ ಸೀ'  ಎಂದರೆ ಮೃತ ಸಮುದ್ರ. ಇದು ನಿಜವಾಗಿಯೂ ಸಮುದ್ರವೇ ಅಲ್ಲ. ಅದೊಂದು ಅತ್ಯಂತ ವಿಶಾಲವಾದ ಕೆರೆ. ಪೂರ್ವದಲ್ಲಿ ಜೋರ್ಡಾನಿಗೆ ಮತ್ತು ಪಶ್ಚಿಮದಲ್ಲಿ ಇಸ್ರೇಲ್ ಮತ್ತು ಪ್ಯಾಲೆಸ್ಟೇನಿಗೆ ಹೊಂದಿಕೊಂಡಿರುವ ಕೆರೆ. ಸುಮಾರು ಎಂಟುನೂರಾ ಹತ್ತು ಚದರ ಕಿಲೋಮೀಟರುಗಳ ವಿಸ್ತಾರ ಹೊಂದಿರುವ ನೀರಿನ ರಾಶಿಗೆ `ಮೃತ ಸಮುದ್ರ' ಎಂದು ಹೆಸರು ಬಂದಿರುವುದಕ್ಕೆ ವಿಶೇಷತೆ ಇದೆ.

ಈ ನೀರಿನಲ್ಲಿ ಉಪ್ಪಿನ ಅಂಶ ಪ್ರತಿಶತ ಸುಮಾರು 34 ರಷ್ಟಿದೆ. ಅಂದರೆ ಉಳಿದ ಸಮುದ್ರಗಳ ನೀರಿನಲ್ಲಿ ಇರುವ ಉಪ್ಪಿನ ಅಂಶದ ಹತ್ತು ಪಟ್ಟು. ಅದರ ಸಾಂದ್ರತೆ ತುಂಬ ಹೆಚ್ಚಾಗಿ ಅದರಲ್ಲಿ ಮುಳುಗುವದೇ ಕಷ್ಟ. ನೀವು ಆ ನೀರಿನ ಮೇಲೆ ಆರಾಮವಾಗಿ ಮಲಗಿಕೊಂಡು ಪುಸ್ತಕ ಓದಬಹುದು, ಮುಳುಗುವ ಚಿಂತೆಯಿಲ್ಲ. ಇದೇಕೆ ಹೀಗಾಯಿತು? ಈ ಮೃತ ಸಮುದ್ರಕ್ಕೆ ನೀರು ಬಂದು ಸೇರುವುದು ಜೋರ್ಡಾನ್ ನದಿಯಿಂದ. ಆದರೆ ಈ ಸಮುದ್ರದಿಂದ ನೀರು ಹೊರಗೆ ಹೋಗುವುದಕ್ಕೆ ಬೇರೆ ದಾರಿಯೇ ಇಲ್ಲ. ಜೋರ್ಡಾನ್ ನದಿ ತನ್ನೊಂದಿಗೆ ಅಪಾರವಾದ ಖನಿಜಗಳನ್ನು ಹೊತ್ತುಕೊಂಡು ಬಂದು ಸೇರುತ್ತದೆ. ಸಮುದ್ರದ ನೀರು ಆವಿಯಾಗಿ ಹಾರಿ ಹೋದಾಗ ಉಳಿದ ನೀರಿನಲ್ಲಿ ಉಪ್ಪಿನ ಪ್ರಮಾಣ ಹೆಚ್ಚಾಗುತ್ತಲೇ ಹೋಗುತ್ತದೆ. ಅಷ್ಟೊಂದು ಉಪ್ಪಿನ ನೀರಿನಲ್ಲಿ ಜೀವಿಗಳು ಬದುಕುವುದು ಹೇಗೆ? ಅದಕ್ಕೇ ಈ ಸಮುದ್ರದಲ್ಲಿ ಒಂದೂ ಮೀನಾಗಲೀ ಮತ್ತಾವುದೇ ಜಲಚರವಾಗಲೀ ಇಲ್ಲ. ಬೆಳೆಯುವಂತಿಲ್ಲ. ಈ ಸಮುಯಾವ ಸಸ್ಯವೂ ದ್ರದಲ್ಲಿ ಯಾವ ಜೀವಿಯೂ ಬದುಕಲಾರದು. ಅದಕ್ಕೇ ಅದು ಮೃತ ಸಮುದ್ರ.

ಈ `ಮೃತ ಸಮುದ್ರ'ದ ಮೇಲ್ಭಾಗದಲ್ಲಿ ಉತ್ತರಕ್ಕಿರುವುದೇ  `ಸೀ ಆಫ್ ಗೆಲಿಲೀ'  ಅಂದರೆ  ಗೆಲಿಲೀ ಸಮುದ್ರ. ಅದೂ ಒಂದು ಬೃಹತ್ ಸರೋವರವೇ. ಅಲ್ಲಿಗೆ ಸೇರುವುದೂ ಜೋರ್ಡಾನ್ ನದಿಯ ನೀರೇ. ಆದರೆ ಅದೊಂದು ಶುದ್ಧ ನೀರಿನ ಕೊಳ. ಅದೂ ಸುಮಾರು 166 ಚದರ ಕಿಲೋಮೀಟರ್ ಆವರಿಸಿದ ಕೊಳ. ಅದರ ನೀರು ಸಿಹಿ. ಆದ್ದರಿಂದ ಅದರಲ್ಲಿ ಸಕಲ ಜೀವರಾಶಿ ಮೈದೋರಿದೆ.

ಏಸು ಕ್ರಿಸ್ತನ ಜೀವನದ ಬಹಳಷ್ಟು ಘಟನೆಗಳು ನಡೆದದ್ದು ಈ ಗೆಲಿಲೀ ಸಮುದ್ರದ ತೀರದಲ್ಲೇ. ಆತ ನೀರ ಮೇಲೆ ನಡೆದು ಹೋದದ್ದೂ ಇದರ ಮೇಲೆಯೇ. ಐದು ಸಾವಿರ ಜನರಿಗೆ ಊಟಕ್ಕೇ ಹಾಕಿದ್ದು ಇದರ ತೀರದಲ್ಲಿ. ಈ ಸಮುದ್ರದ ನೀರು ಸಿಹಿಯಾಗಿರುವುದಕ್ಕೆ ಕಾರಣವೆಂದರೆ ಮೇಲಿನಿಂದ ಜೋರ್ಡಾನ್ ನದಿಯ ನೀರು ಹರಿದು ಬಂದರೆ ಕೆಳಗಡೆಯಿಂದ ಹರಿದು ನೀರು ಮತ್ತೆ ಜೋರ್ಡಾನ್ ನದಿ ಸೇರಿ ಹೊರಗೆ ಹೋಗುತ್ತದೆ. ಅಂತೂ ಎಲ್ಲ ನೀರನ್ನು ತನ್ನೊಳಗೇ ಇಟ್ಟುಕೊಳ್ಳುವುದಿಲ್ಲ ಗೆಲಿಲೀ ಸಮುದ್ರ. ಹೆಚ್ಚಾಗಿ ಬಂದದ್ದನ್ನು ಹೊರಗೆ ಕೊಟ್ಟುಬಿಡುತ್ತದೆ.

ಬಂದ ನೀರನ್ನೆಲ್ಲ ತನ್ನೊಳಗೇ ಇಟ್ಟುಕೊಳ್ಳುವ ಸಮುದ್ರ ಮೃತವಾಗಿದೆ. ತನ್ನೊಳಗೆ ಏನನ್ನೂ ಇಟ್ಟುಕೊಳ್ಳದೇ ಹೊರಗೆ ನೀಡಿಬಿಡುವ ಗೆಲಿಲೀ ಸಮುದ್ರ ಜೀವಂತವಾಗಿದೆ. ಏನಿದರ ಅರ್ಥ? ನಾವೂ ಬದುಕಿನಲ್ಲಿ ಹಣ, ಮರ್ಯಾದೆ, ಸ್ಥಾನ, ಪ್ರೀತಿ ಎಲ್ಲವನ್ನೂ ಪಡೆಯುತ್ತೇವೆ. ಆದರೆ ನಾವು ಅವನ್ನು ಪ್ರಪಂಚಕ್ಕೆ ನೀಡುವುದನ್ನು ಕಲಿಯದಿದ್ದರೆ ಬಂದದ್ದೆಲ್ಲ ಆವಿಯಾಗಿ ಹೋಗಿ ಒಣ ಜೀವನದ ಉಪ್ಪು ಮಾತ್ರ ಉಳಿದುಬಿಡುತ್ತದೆ ಮೃತ ಸಮುದ್ರದಂತೆ.

ನಮ್ಮ ಬದುಕಿನ ಸಮುದ್ರಕ್ಕೆ ಹೊರದಾರಿಗಳನ್ನು ನಾವೇ ಕಂಡುಕೊಳ್ಳಬೇಕು. ಅವುಗಳ ಮೂಲಕ ನೀಡುವ ಪ್ರಕ್ರಿಯೆ ನಡೆಯಬೇಕು. ಆಗ ನಮ್ಮ ಜೀವನವೂ ಗೆಲಿಲೀ ಸಮುದ್ರದಂತೆ ಬಣ್ಣಬಣ್ಣದ ಜಲಚರಗಳು, ಸಸ್ಯರಾಶಿಯಿಂದ, ತುಂಬಿ ಸಂಭ್ರಮದ ಕಾರಂಜಿ ಚಿಮ್ಮಿಸುತ್ತದೆ. ಹಾಗಾದರೆ ನಮ್ಮ ಜೀವನ ಹೇಗಾಗಬೇಕು? ಜಗತ್ತಿಗೆ ಏನನ್ನೂ ನೀಡದೇ ಹೊಟ್ಟೆಯಲ್ಲಿ ಉಪ್ಪು ತುಂಬಿಕೊಂಡು ಮೃತಸಮುದ್ರದಂತೆಯೇ ಇಲ್ಲ. ತುಂಬ ಸ್ವಾರ್ಥಿಯಾಗದೇ ತನ್ನ ಮಿತಿಯಲ್ಲಿ ಪ್ರಪಂಚಕ್ಕೂ ಹಂಚುತ್ತ ಸಿಹಿ ನೀರು ತುಂಬಿಕೊಂಡ ಗೆಲಿಲೀ ಸಮುದ್ರದಂತೆಯೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT