ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಜ್ಞಾಗ್ನಿಗೆ ಕಾಡ್ಗಿಚ್ಚಾಗುವ ರುದ್ರಬಯಕೆ

Last Updated 17 ಸೆಪ್ಟೆಂಬರ್ 2016, 19:30 IST
ಅಕ್ಷರ ಗಾತ್ರ

ಮಹಾಭಾರತವನ್ನು ಮೊದಲಬಾರಿಗೆ ವ್ಯಾಸಶಿಷ್ಯರಾದ ವೈಶಾಂಪಾಯನರು ಸಾಮಾಜಿಕ–ಸಾರ್ವಜನಿಕರಿಗೆ ಕೇಳಿಸಿದರು. ಅದು ಭಯಾನಕವಾದ ಸರ್ಪಯಾಗದ ಉಲ್ಲೋಲ–ಕಲ್ಲೋಲಗಳ ನಡುವೆಯೇ. ಇದು ಮಹಾಭಾರತದ ಎರಡನೆಯ ಆವೃತ್ತಿ. ವ್ಯಾಸರು ಶಿಷ್ಯ ವೈಶಾಂಪಾಯನನಿಗೆ ಮಹಾಭಾರತವನ್ನು ಮೊದಲು ಹೇಳಿದ್ದರು.

ಅದಾದರೋ ಗುರು–ಶಿಷ್ಯ ಸಂದರ್ಭ; ಅಧ್ಯಯನ ಸಂದರ್ಭ. ಈಗಲಾದರೋ ಸರ್ಪಯಾಗದ ಸಾಮಾಜಿಕ ಸಂದರ್ಭದಲ್ಲಿ, ಯಾಗದ ನಡುವಣ ಬಿಡುವಿನ ಹೊತ್ತಿನಲ್ಲಿ ಲೋಕಕ್ಕೆ ಮಹಾಭಾರತ ಶ್ರವಣವಾಯಿತು. ಈ ಬಿಡುವಿನ ಹೊತ್ತು ಇತಿಹಾಸ–ಪುರಾಣಗಳ ಶ್ರವಣ–ಮನನಗಳಿಗೆ ಮೀಸಲಾದ ಹೊತ್ತು. ‘ಬಿಡುವು’ ಎನ್ನುವುದು ತನ್ನ ಸಹಜತೆಯಿಂದಲೇ ತನ್ನ ಮುಂದೆ ನಡೆಯುತ್ತಿರುವ ಎಲ್ಲವನ್ನೂ ಒಂದು ವಿಶ್ರಾಂತಿಯ ಕಣ್ಣಿನಿಂದ ನೋಡುವುದು.

ಒಂದು ನಿರ್ಲಿಪ್ತಿಯ ಕಣ್ಣಿನಿಂದ ನೋಡುವುದು. ಇಷ್ಟೆಲ್ಲ ದುಡಿಮೆ; ಈ ಕರ್ಮಕಾಂಡ ನಿಜಕ್ಕೂ ಬದುಕಿಗೆ ಅಗತ್ಯವೆ? ಎಂಬಂಥ ವಿಮರ್ಶೆಯ ಕಣ್ಣಿನಿಂದ ಕೂಡ ನೋಡಬಲ್ಲುದಾಗಿದೆ. ಆದುದರಿಂದಲೇ ಯಾವ ಯಜ್ಞಯಾಗಾದಿ ಸಂರಂಭಗಳ ನಡುವೆಯೇ ಕೇಳಿಸಿಕೊಳ್ಳುವ ಯೋಗವಿರುವ ಇತಿಹಾಸ ಪುರಾಣಗಳು ಯಜ್ಞಯಾಗಗಳನ್ನು ಇಡಿಯಾಗಿ ಸಮರ್ಥಿಸುತ್ತವೆ ಎಂದೇನೂ ಇಲ್ಲ.

ದೊಡ್ಡ ಸಂಸ್ಕೃತಿಯೊಂದರ ಭಾಗವಾಗಿ ಕರ್ಮಕಾಂಡವನ್ನು ಅವು ಒಪ್ಪಿದ್ದರೂ ಇತಿಹಾಸ ಪುರಾಣಗಳಿಗೆ ತಮ್ಮದೇ ಆದ ನಿಲುವುಗಳೂ ಇವೆ! ‘ಭಾಗವತ’ದಲ್ಲಿ – ಅದೂ ಹೀಗೆಯೇ ದೀರ್ಘಸತ್ರವೊಂದರ ಬಿಡುವಿನಲ್ಲಿ ಮೂಡಿ ಬಂದ ಪ್ರವಚನ – ಭಗವತ್ಪರವಲ್ಲದ, ಅಂದರೆ ಭಕ್ತಿಜ್ಞಾನಗಳ ಗುರಿಯನ್ನು ಹೊಂದಿರದ ಯಜ್ಞಯಾಗಾದಿಗಳ ಟೀಕೆಯೇ ಇದೆ. ಯಜ್ಞಗಳಲ್ಲಿ ನಡೆವ ಪಶುಹಿಂಸೆಯನ್ನಂತೂ ಅಲ್ಲಿ ಕಟುವಾಗಿ ನಿರಾಕರಿಸಲಾಗಿದೆ!

ಮಹಾಭಾರತದಲ್ಲಿಯೂ ಕೃಷ್ಣನೇ ಗೀತೆಯ ಸಂದರ್ಭದಲ್ಲಿ, ಬಿಡುಗಡೆಯ ಗೊಡವೆ ಇಲ್ಲದೆ ಸುಖಸ್ವರ್ಗಕ್ಕೆ ಮಾತ್ರ ಹಂಬಲಿಸುವ ಕರ್ಮಠ ವೇದವಾದಿಗಳನ್ನು ಬಾಯ್ತುಂಬ ಹಳಿದಿದ್ದಾನೆ. ಅಂದರೆ ಬಿಡುವಿನ ಹೊತ್ತು ಎನ್ನುವುದು ವ್ಯಾವಹಾರಿಕವಾದ ಬಿಡುವು ಮಾತ್ರವಲ್ಲ, ಅದು ಮಾನಸಿಕ ಆಯಾಮವನ್ನು ಪಡೆದ ‘ಬಿಡುವು’ ಕೂಡ ಆಗಿ ಕಾಣಿಸುತ್ತದೆ.

ಸರ್ಪಯಾಗದ ನಡುವೆ ಮಹಾಭಾರತ ಹೇಳಲ್ಪಟ್ಟಿತು. ಇದು ನಮಗೆ ತಿಳಿದು ಬರುವುದೂ ಮಹಾಭಾರತದಿಂದಲೇ. ಇದೇ ಮಹಾಭಾರತದಲ್ಲಿ ಸರ್ಪಯಾಗದ ಕಥೆ ಕೂಡ ಇರುವುದು! ಅಂದರೆ ಒಳಗಿರುವುದೇ ಹೊರಗೂ ಇರುವುದು.

ಹೊರಗೆ ನಡೆಯುತ್ತಿರುವುದೇ ಒಳಗೂ ನಡೆಯುತ್ತಿರುವುದು. ಕಥೆ ಹೊರಗೂ ನಡೆಯುತ್ತಿದೆ. ‘ಯದಿಹಾಸ್ತಿ ತದನ್ಯತ್ರ’ – ಇಲ್ಲಿರುವುದೇ ಬೇರೆಡೆಯೂ ಇರುವುದು ಎಂದು ತನ್ನ ವ್ಯಾಪ್ತಿಯ ಬಗ್ಗೆಯೇ ಮಹಾಭಾರತ ಹೇಳಿಕೊಂಡ ಮಾತಿಗೆ ಈ ಅರ್ಥವೂ ಇರಬಹುದು. ಇತಿಹಾಸವು ಗತವನ್ನು ಮಾತ್ರವಲ್ಲ, ವರ್ತಮಾನವನ್ನೂ ಒಳಗೊಳ್ಳುತ್ತದೆ.

ವಿಶೇಷವೆಂದರೆ ಮನುಷ್ಯರ ಉತ್ಕಟವಾದ ನಡವಳಿಕೆಗಳು, ತೀವ್ರವಾದ ರಾಗ–ದ್ವೇಷಗಳು ಅವು ವರ್ತಮಾನದಲ್ಲೇ ನಡೆಯುತ್ತಿದ್ದರೂ ನೇರವಾಗಿ ಇತಿಹಾಸವಾಗಿಬಿಡುತ್ತವೆ! ಒಂದು ಸಮಸ್ಥಿತಿಯಲ್ಲಿ ಸಾಗುವ ಮೆಲುನಡೆಯ ಏಕತಾನದ ಉಗುರು ಬಿಸಿಯಜೀವನಕ್ಕೆ ಹೀಗೆ ಇತಿಹಾಸವಾಗುವ ಯೋಗವಿಲ್ಲವೇನೋ.

ಸರ್ಪಯಾಗದ ಕಥೆ ಆಮೇಲೆ ಮಹಾಭಾರತಕ್ಕೆ ಸೇರಿರಬಹುದು. ಅದೇ ಹೆಚ್ಚು ಸಂಭಾವ್ಯ. ಆದರೆ ಸರ್ಪಯಾಗದ ಕಥೆಯ ಬೀಜ ಬಹು ಹಿಂದಿನಿಂದಲೇ ಮೆಲ್ಲನೆ ಮೊಳಕೆಯೊಡೆಯುತ್ತ ಬಂದಿತ್ತು. ಮಹಾಭಾರತ, ಇತಿಹಾಸವಾಗಿ, ಇದನ್ನು ಗುರುತಿಸಲೇಬೇಕಿತ್ತು.

ಈಗ ಸರ್ಪಯಾಗದ ನೈಜ ಸಂದರ್ಭದಲ್ಲಿ ಈ ಗುರುತಿಸುವಿಕೆ ಪೂರ್ಣವಾಗಿತ್ತಷ್ಟೆ. ‘ಇತಿಹಾಸ’ ನಡೆಯುತ್ತಿದ್ದಂತೆ ಇತಿಹಾಸಕಥನವೂ ನಡೆಯುತ್ತಿದೆ! ‘ಕಾಲಃ ಸುಪ್ತೇಷು ಜಾಗರ್ತಿ’ ಎನ್ನುವುದು ಮಹಾಭಾರತದ ಮಾತು.

ಲೋಕವೇನೋ ತನ್ನ ಬದುಕಿನ ಸಂಭ್ರಮದಲ್ಲಿ ತಾನು ಬದುಕುತ್ತಿರುವ ಕಾಲದ ಕುರಿತು ಗಮನವೇ ಇಲ್ಲದೆ ಬದುಕುತ್ತಿರಬಹುದು. ಆದರೆ ‘ಕಾಲ’, ಲೋಕದ ಕುರಿತು ನಿರಂತರ ಎಚ್ಚರದಲ್ಲಿದೆಯಂತೆ. ‘ಕಾಲ’ ಮತ್ತು ‘ಇತಿಹಾಸ’ – ಹತ್ತಿರ ಇವೆ. ‘ಕಾಲ’ ಎಂದಾಗ ಅದು ಇತಿಹಾಸದ ಆಧ್ಯಾತ್ಮಿಕ ರೂಪ. ‘ಇತಿಹಾಸ’ವೆಂದಾಗ ಅದು ಕಾಲದ ಲೌಕಿಕ ರೂಪ. ಮಹಾಭಾರತದಲ್ಲಿ ಕಾಲ, ಇತಿಹಾಸ ಪರಸ್ಪರ ಬೆರೆತುಬಿಟ್ಟಿವೆ!

ಉಪ ಜೀವ್ಯವಾಙ್ಮಯಗಳೆಂದು ಮಹಾಭಾರತ, ರಾಮಾಯಣಗಳಿಗೆ ಪ್ರಸಿದ್ಧಿ. ಉಪಜೀವ್ಯವೆಂದರೆ – ಇವುಗಳನ್ನು ಉಪಜೀವಿಸಿಕೊಂಡು, ಆಧರಿಸಿಕೊಂಡು, ಜೀವಸಾರವನ್ನು ಇವುಗಳಿಂದ ಪಡೆದುಕೊಂಡು ಮುಂದಿನ ವಾಙ್ಮಯಗಳು ಬೆಳೆಯುವವು ಎಂದು.

ಒಂದು ವಾಙ್ಮಯ ಪರಂಪರೆಯನ್ನು ಸೃಷ್ಟಿಸುವ, ಪೊರೆಯುವ ‘ಸೃಷ್ಟಿ–ಗರ್ಭ’ – ಮಹಾಭಾರತದ ಒಡಲು ಎಂದು. ಇದು ಸಿದ್ಧವಾದ ಸಂಗತಿಯೇ ಆಗಿದೆ. ಮಹಾಭಾರತದ ಕಥಾಭಿತ್ತಿ ಬಹಳ ವಿಸ್ತಾರವಾಗಿರುವುದರಿಂದ ಇದರೊಳಗಡೆಯೇ ಹರಡಿರುವ ಅನೇಕ ಕಥೆಗಳಲ್ಲಿ ಪರಸ್ಪರ ಉಪಜೀವ್ಯ–ಉಪಜೀವಕ ಸಂಬಂಧವನ್ನು ಕೂಡ ಕಾಣಬಹುದು.

ಅಂದರೆ ಒಂದು ಕಡೆಯ ಬೀಜ ಇನ್ನೆಲ್ಲಿಯೋ ಇರುತ್ತದೆ! ಕಥೆ ಮುಂದುವರಿಯುವುದೆಂದರೆ ಅದು ನೇರವಾಗಿ ಮುಂದೆ ಸಾಗುವುದಲ್ಲ, ಅದು ರೂಪಾಂತರವನ್ನು ತಾಳುತ್ತ ಪ್ರಚ್ಛನ್ನವಾಗಿ ಹರಿಯುವುದುಂಟು. ಸರ್ಪಯಾಗದ ಸಂದರ್ಭಕ್ಕೂ ಅರಗಿನ ಮನೆಯಲ್ಲಿ ಪಾಂಡವರನ್ನು ಸುಡಬೇಕೆಂದುಕೊಂಡಿರುವುದಕ್ಕೂ ಒಂದು ಸಂಬಂಧ ಕಾಣುವುದಿಲ್ಲವೆ? ಇನ್ನಷ್ಟು ಸ್ಪಷ್ಟವಾಗಿ, ಸರ್ಪಯಾಗವನ್ನು ನಡೆಸಬೇಕೆನ್ನುವ ಭೀಕರ ಉಪಕ್ರಮದ ಬೀಜ ಎಲ್ಲಿದೆ ಎಂದು ನೋಡಿದರೆ ಅದು ಖಾಂಡವದಹನದ ದಳ್ಳುರಿಯಲ್ಲಿ ಅಡಗಿದೆ!

ಖಾಂಡವದಹನದ ಕಥೆಯೇ ತುಸು ವಿಲಕ್ಷಣವಾಗಿದೆ. ಪಾಂಡವರು ಇಂದ್ರಪ್ರಸ್ಥದಲ್ಲಿ ಆಳುತ್ತಿದ್ದರು. ಅರ್ಜುನ–ಸುಭದ್ರೆಯರಿಗೆ ಅಭಿಮನ್ಯು ಹುಟ್ಟಿದ್ದ. ಎಲ್ಲರೂ ಒಂದು ಸಂಭ್ರಮದಲ್ಲಿದ್ದರು. ಒಮ್ಮೆ ಕೃಷ್ಣ–ಅರ್ಜುನರು ದ್ರೌಪದೀ ಸುಭದ್ರೆಯರೊಡಗೂಡಿ ಆಪ್ತಪರಿವಾರದೊಂದಿಗೆ ಯಮುನೆಗೆ ವಿಹಾರಕ್ಕೆ ತೆರಳಿದ್ದರು.

ಹರಿವ ಯಮುನೆಯ ಪಕ್ಕದಲ್ಲೇ ಇತ್ತು ಖಾಂಡವವೆಂಬ ಅಗಾಧವಾದ ಕಾಡು. ಕಾಡು ಎಷ್ಟು ನಿಬಿಡವಾಗಿತ್ತೋ ಅದರೊಳಗೆ ಬದುಕುತ್ತಿರುವ ಪಶು–ಪಕ್ಷಿ ಜೀವಸಮೂಹವೂ ಅಷ್ಟೇ ಅಗಾಧವಾಗಿತ್ತು. ಪರಿವಾರವೆಲ್ಲ ವಿಹರಿಸುತ್ತಿದ್ದಂತೆ ಕೃಷ್ಣ, ಅರ್ಜುನ ಅಲ್ಲೇ ಒಂದೆಡೆ ಕುಳಿತು ಹರಟುತ್ತಿದ್ದರು. ಆಗ ಅವರ ಬಳಿ ಯಾಚಕನಂತೆ ಬಂದನಂತೆ ಓರ್ವ ಬ್ರಾಹ್ಮಣ. ಬಂದವನು ‘ಅಗ್ನಿ’.

ಸಮಸ್ಯೆ ಏನೆಂದರೆ ಅಗ್ನಿಗೇ – ಸರ್ವಭಕ್ಷಕನೆಂಬ ಅಗ್ನಿಗೇ ಮಂದಾಗ್ನಿಯಾಗಿಬಿಟ್ಟಿತು. ಎಲ್ಲವನ್ನೂ ಜೀರ್ಣಿಸಿಕೊಳ್ಳಬಲ್ಲವನಿಗೇ ಜೀರ್ಣಶಕ್ತಿ ಉಡುಗಿತ್ತು. ಏಕೆ ಹೀಗಾಗಿಬಿಟ್ಟಿತೆಂದರೆ – ಯಜ್ಞಸಂಸ್ಕೃತಿಯ ಪ್ರಾಚುರ್ಯದಿಂದಾಗಿ, ಕ್ಷತ್ರಿಯ ರಾಜರುಗಳೆಲ್ಲ ನಿರಂತರ ಯಜ್ಞ–ಯಾಗಗಳಲ್ಲಿ ತೊಡಗಿರುತ್ತ, ಯಜ್ಞಕಲಾಪಗಳಲ್ಲಿ ಯಜ್ಞಾಗ್ನಿಗೆ ನಿರಂತರವಾಗಿ ತುಪ್ಪ ಸುರಿಯುತ್ತ, ತುಪ್ಪವನ್ನು ಸತತ ಉಣ್ಣುತ್ತಿದ್ದಂತೆ, ಸ್ವಯಂ ಅಗ್ನಿಗೇ ತುಪ್ಪವನ್ನರಗಿಸಿಕೊಳ್ಳುವ ಶಕ್ತಿ ಊನವಾಗುತ್ತ ಬಂದಿತ್ತು.

‘ಬೆಂಕಿಗೆ ತುಪ್ಪ ಸುರಿದಂತೆ’ ಎಂಬ ನುಡಿಗಟ್ಟಿಗೇ ಪ್ರಚಲಿತವಾದ ಅರ್ಥ ಕಳೆದುಹೋಗಿ, ಬೇರೆಯೇ ಒಂದು ಅನೂಹ್ಯವಾದ ಅರ್ಥ ಒದಗಿ ಬಂದಿರುವುದು ಅಗ್ನಿಗೆ ತನ್ನಲ್ಲೇ ಅನುಭವವಾಗುತ್ತಿತ್ತು! ಅಗ್ನಿಗೇ ಹೀಗಾದರೆ ಏನು ಪಾಡು? ಏನು ದಾರಿ? ಯಜ್ಞಸಂಸ್ಕೃತಿಯಲ್ಲಿ ತಪ್ಪಾದುದೆಲ್ಲಿ? ಸಂಸ್ಕೃತಿಯೂ ತಪ್ಪೇ? ಅಥವಾ ತಪ್ಪಾಗುವ ಸಂಭವವಿದೆಯೆ? ಸಂಸ್ಕೃತಿಯೂ ಅಸಹಜವೆಂದು ಅನಿಸುವ ಸಂದರ್ಭ ವ್ಯಕ್ತಿಯ; ಸಮಾಜದ ಬದುಕಿನಲ್ಲಿ ಬಂದೇ ಬರಲಿದೆಯೆ?

ಆದರೆ ಅಗ್ನಿಗೆ ತಿಳಿದುಬಿಟ್ಟಿತ್ತು. ಇದು ತನ್ನ ಸಹಜ ಆಹಾರವಲ್ಲ. ತನ್ನ ಸಹಜ ಆಹಾರ ಅಲ್ಲಿ ಖಾಂಡವದ ಕಾಡಿನಲ್ಲಿದೆ. ಅಲ್ಲಿನ ಮೃಗ–ಪಕ್ಷಿಗಳು, ಅವುಗಳ ಮಾಂಸ ಮೇದಸ್ಸು, ಕಾಡಿನ ಸಸ್ಯಗಳು, ಮೂಲಿಕೆಗಳು, ಜೀವ ಜಂತುಗಳು – ಇವುಗಳನ್ನೆಲ್ಲ ಮೆಲ್ಲುವಾಗ ಆಹಾರವೂ ಹೌದು; ಔಷಧವೂ ಹೌದು ಎಂಬ ಇಬ್ಬಗೆಯ ತೃಪ್ತಿ.

ಅಗ್ನಿಗೆ ಏಳು ನಾಲಿಗೆಗಳಂತೆ! ಒಂದೊಂದು ನಾಲಿಗೆಯ ರುಚಿಯೂ ಬೇರೆ ಬೇರೆ ಇದೆ ಏನು! ಮಾಂಸ–ಮೂಲಿಕೆಗಳನ್ನು ಯಜ್ಞಾಗ್ನಿಗೇ ಹಾಕಿರಿ ಎಂದು ಅಗ್ನಿ ಹೇಳಬಾರದೆ? ಹೇಳಬಹುದು. ಆದರೆ ಜನ ತಮ್ಮ ಅಭ್ಯಾಸವನ್ನು ಸುಲಭದಲ್ಲಿ ಬಿಟ್ಟುಕೊಡಲಾರರು. ಅಲ್ಲದೆ ಆಹಾರವನ್ನು ಬೆರೆಸದೆ ಅದರದರ ಪರಿಸರದಲ್ಲೇ ಉಣ್ಣಬೇಕು. ಆದುದರಿಂದ ಖಾಂಡವವನ್ನೇ ಮೆಲ್ಲಬೇಕು.

ಯಜ್ಞಾಗ್ನಿಗೆ ತಾನು ಪ್ರಚಂಡ ಕಾಡ್ಗಿಚ್ಚಾಗುವ ನೈಸರ್ಗಿಕ ಪ್ರೇರಣೆಯೊಂದು ಅದಮ್ಯವಾಗಿ ಉಂಟಾಗುತ್ತಿತ್ತು. ಸಂಸ್ಕೃತಿಯ ನಡುವಿನಿಂದಲೇ ಪ್ರಕೃತಿ, ಎಲ್ಲ ಹೇರಿಕೆಗಳನ್ನೂ ಮುರಿದು, ತಾನು ಮತ್ತೊಮ್ಮೆ ಪುಟಿದೇಳಲು ತನ್ನೆಲ್ಲ ಶಕ್ತಿಯನ್ನೂ ಕ್ರೋಡೀಕರಿಸಿಕೊಳ್ಳುತ್ತಿತ್ತು. ಯಾವ ಶಿಕ್ಷಣ; ಯಾವ ತರಬೇತಿ; ಯಾವ ತಪಸ್ಸಿಗೂ ಬಗ್ಗದ, ಒಗ್ಗದ ತನ್ನ ಆಳದ ಶಕ್ತಿಯನ್ನು ಪ್ರಕೃತಿಗೆ ಈಗ ತೋರಿಸಲೇಬೇಕಿತ್ತು. ಅಂಥದೊಂದು ಕ್ಷಣ ಎದುರಾಗುತ್ತಿತ್ತು.

ಅಗ್ನಿ, ಖಾಂಡವವನ್ನು ತಾನೇ ಸುಡಬಹುದಲ್ಲ, ಏನಡ್ಡಿ ಎಂದರೆ, ಕಾಡಿನಲ್ಲಿ ಓಡುತ್ತಿರುವ ಪ್ರಾಣಿಗಳ ಗೊರಸು ಬಂಡೆಗಳಿಗೆ ತಿಕ್ಕಿ ಕಿಡಿಗೆದರಿ – ಅರಣಿ ಮಥನ ಮಾಡಿ ಯಜ್ಞಾಗ್ನಿಯನ್ನುಂಟುಮಾಡುವ ಸಾಂಸ್ಕೃತಿಕ ಪ್ರಕ್ರಿಯೆಯ ಪ್ರಾಕೃತಿಕ ರೂಪವೆಂಬಂತೆ – ಕಾಡ್ಗಿಚ್ಚು ಹಬ್ಬಬಹುದಲ್ಲ; ಏನಡ್ಡಿ ಎಂದರೆ, ಖಾಂಡವದ ಕಾಡು ದೇವತೆಗಳ ಒಡೆಯನಾದ ಇಂದ್ರನ ರಕ್ಷಣೆಯಲ್ಲಿತ್ತು.

ಇಂದ್ರನಿಗೆ ಪ್ರಿಯವಾದುದಾಗಿತ್ತು. ಈ ಕಾರಣದಿಂದಲೇ ತಕ್ಷಕನೆಂಬ ಮಹಾನಾಗ ಇಲ್ಲಿ ಸಪರಿವಾರ ವಾಸವಾಗಿದ್ದ. ಖಾಂಡವ, ನಾಗಗಳ ಇನ್ನೊಂದು ನೆಲೆ ಎಂಬಂತೆ ಇತ್ತು. ತಕ್ಷಕನ ಕಾರಣದಿಂದಲೇ ಯಾರೂ ಕಾಲಿಡದೆ, ಕಾಡು; ಪ್ರಾಣಿಗಳಿಗೆ ದೊಡ್ಡ ಆಸರೆಯಾಗಿತ್ತು ಕೂಡ. ಅಗ್ನಿಯೇನೋ ಆಸೆಯನ್ನು ತಡೆಯಲಾರದೆ, ಕಾಡು ಕಬಳಿಸಲು ಏಳು ಸಲ ನಾಲಿಗೆ ಚಾಚಿದ್ದುಂಟು. ಆದರೆ ಇಂದ್ರ, ದೊಡ್ಡ ಹನಿಗಳ ಧಾರಾಕಾರ ಮಳೆಗರೆದು ಅಗ್ನಿಯನ್ನು ನಿರಾಸೆಗೊಳಿಸಿದ್ದ.

ದೊಡ್ಡಶಕ್ತಿಗಳ  ಸಹಕಾರವಿಲ್ಲದೆ ಖಾಂಡವಕ್ಕೆ ತಾನು ಕಾಡ್ಗಿಚ್ಚಾಗಲಾರೆನೆಂದು ಅಗ್ನಿಗೆ ತಿಳಿದುಬಿಟ್ಟಿತ್ತು. ಕಾಡು ಸುಡದೆ ತಾನು ಆರೋಗ್ಯ ಗಳಿಸಲಾರೆ, ಸುಡುವುದಕ್ಕೆ ನಿಮ್ಮ ಸಹಕಾರ ಬೇಕು ಎಂದು ಆ ಕಾಲದ ದೊಡ್ಡ ನಾಯಕರಾದ ಕೃಷ್ಣ–ಅರ್ಜುನರ ಬಳಿ ಸಹಾಯ ಬೇಡಲು ಅಗ್ನಿ ಬಂದಿದ್ದ.

ಅಗ್ನಿಯ ಯಾಚನೆಯನ್ನು ಕೇಳಿಯೇ ಕಾಲ, ಇತಿಹಾಸ ಯಾವ ದಿಕ್ಕಿಗೆ ಸಾಗುತ್ತಿದೆ ಎಂದು ಕೃಷ್ಣಾರ್ಜುನರಿಗೆ ಹೊಳೆದುಬಿಟ್ಟಿತು. ಕೃಷ್ಣನಂತೂ ಉಂಡ ಅನ್ನವನ್ನು ಪಚನ ಮಾಡಿ ಜೀವವನ್ನು ಪೋಷಿಸುವ ಜೀವಿಯ ಒಡಲೊಳಗಣ ಕಿಚ್ಚೇ ತಾನು ಎಂದುಕೊಂಡಿದ್ದವನು.

ಅಂದರೆ ‘ಹಸಿವು’ ಎನ್ನುವುದು ಒಡಲೊಳಗಣ ಕಿಚ್ಚಿನ ಅನುಭವ. ಆ ಕಚ್ಚಿಗೆ – ‘ವ್ವೆಶ್ವಾನರಾಗ್ನಿ’ ಎನ್ನುವರು. ಆಮೇಲೆ ‘ಗೀತೆ’ಯ ಸಂದರ್ಭದಲ್ಲಿ, ಅರ್ಜುನನಿಗೆ, ತಾನು ವ್ವೆಶ್ವಾನರಾಗ್ನಿ ಎನ್ನುವ ಮಾತನ್ನು ಕೃಷ್ಣ ಸ್ಪಷ್ಟವಾಗಿ ಹೇಳುತ್ತಾನೆ ಕೂಡ. ನಮ್ಮ ಕನ್ನಡದ ದಾಸಿಮಯ್ಯ, ‘ನನ್ನಂತೆ ಹಸಿದು ನೋಡು; ನನ್ನಂತೆ ಒಡಲುಗೊಂಡು ನೋಡು’ ಎಂದು ತನ್ನ ಇಷ್ಟದೈವದಲ್ಲಿ ಒಂದು ಸವಾಲಿನಂತೆ ಅದ್ಭುತವಾಗಿ ಕೇಳುತ್ತಾನೆ. ದಾಸಿಮಯ್ಯನ ಮಾತು ಭಕ್ತನ ಮಾತು.

ನಿನ್ನೊಳಗಣ ಹಸಿವು ನನ್ನದೇ ಅನುಭವ ಕೂಡ ಎನ್ನುವ ಕೃಷ್ಣನ ಮಾತು ಭಕ್ತನ ಮಾತಿನದೇ ಇನ್ನೊಂದು ಮುಖ. ಇಂಥ ಕೃಷ್ಣ, ಕಾಲದ ಹಸಿವು ಎಂದರೇನೆಂದು ಬಲ್ಲವನಿದ್ದ! ಹಸಿವಿನ ಕಾಡ್ಗಿಚ್ಚೆಂದರೇನೆಂದು ತಾನು ಬಲ್ಲವನಿದ್ದ! ಕೃಷ್ಣ, ಅರ್ಜುನ, ಅಗ್ನಿಗೆ ತಥಾಸ್ತು ಎಂದರು. ಮತ್ತು ತಾವು ಸಜ್ಜುಗೊಳ್ಳುವುದಕ್ಕೆ ವಿಶೇಷವಾದ ಆಯುಧಗಳನ್ನು ಬಯಸಿದರು.

ಹಾಗೆ ಅರ್ಜುನನಿಗೆ ‘ಗಾಂಡೀವ’ – ಎಂಬ ಮಹಾಧನುಸ್ಸು,  ಎಸೆದಷ್ಟೂ ಮುಗಿಯದ  ಬಾಣಗಳನ್ನು ಹೊತ್ತ ಬತ್ತಳಿಕೆ – ಅಕ್ಷಯ ತೂಣೀರ – ಮತ್ತು ಕೃಷ್ಣನಿಗೆ ಚಕ್ರ ಅಗ್ನಿಯಿಂದಲೇ ದೊರೆಕೊಂಡವು.

ಅಲ್ಲಿಗೆ ಖಾಂಡವದ ಕಾಡು ಸುಡುವುದಕ್ಕೂ ಕುರುಕ್ಷೇತ್ರದಲ್ಲಿ ನಡೆಯಲಿರುವ ಮಹಾಯುದ್ಧಕ್ಕೂ ಅಗೋಚರ ಸಂಬಂಧವೊಂದು ಹೆಣೆದುಕೊಂಡಿತು. ಯಜ್ಞಾಗ್ನಿಯು ಕಾಡ್ಗಿಚ್ಚಾಗಬೇಕೆಂದು ತಾನು ಬಯಸುವುದಕ್ಕೂ ಮನುಷ್ಯರ ಒಳಗಿರುವ ಯುದ್ಧದ ದಾಹಕ್ಕೂ ಅಗೋಚರ ಸಂಬಂಧವೊಂದು ಹೆಣೆದುಕೊಂಡಿತು.

ಮುಂದಿನ ಕಥೆಯನ್ನು ಯಾರೂ ಊಹಿಸಬಹುದು. ಎಂಥ ಮಳೆಗರೆದರೂ ಇಂದ್ರನಿಗೂ ಕೂಡ ಖಾಂಡವದಾಹವನ್ನು ತಡೆಯಲಾಗಲಿಲ್ಲ. ಒಟ್ಟು ಆರು ಜೀವಿಗಳನ್ನುಳಿದು, ಉಳಿದಂತೆ ಒಂದು ಹಾವು, ಒಂದು ಹಕ್ಕಿ, ಒಂದು ಪಶು, ಉರಿಯಿಂದ ತಪ್ಪಿಸಿಕೊಳ್ಳದಂತೆ ಕೃಷ್ಣಾರ್ಜುನರು ನೋಡಿಕೊಂಡರು.

ತಮ್ಮ ಸಾಹಸವನ್ನು ಮೆರೆದರು. ಆದರೆ ಖಾಂಡವವಾಸಿಯಾಗಿದ್ದ ನಾಗ ತಕ್ಷಕ, ಈ ಕಾಲಕ್ಕೆ, ಖಾಂಡವದಲ್ಲಿರಲಿಲ್ಲ. ಅವನು ಕುರುಕ್ಷೇತ್ರಕ್ಕೆ ಹೋಗಿದ್ದ. ಆದ್ದರಿಂದ ಉಳಿದುಕೊಂಡ. ಖಾಂಡವದಹನವನ್ನು ಸರ್ಪಯಾಗದ  ಮೊದಲ ಕಂತು ಎನ್ನಬಹುದು. ತಕ್ಷಕ ಉಳಿದುಕೊಂಡದ್ದು ಜನಮೇಜಯನು ನಡೆಸಲಿರುವ ಮುಂದಿನ ಸರ್ಪಯಾಗಕ್ಕೆ ಕಾರಣವಾಯಿತು. ಉಳಿದಂತೆ ಖಾಂಡವದಲ್ಲಿದ್ದ ನಾಗಗಳೆಲ್ಲ ಆಹುತಿಯಾದವು.

‘ಹೆಡೆಯ ಮಣಿಗಳ ಕಂಡು ಸೂಸಿದ ಕಿಡಿಗಳಹಹಾ ಎನುತ ಮರುಗಿದರುರಗಿಯರು ಮರಿಗಳಿಗೆ ಮೈ ಚಾಚಿ’ ಎಂದು ಎದೆಕಲಕುವಂತೆ ಕುಮಾರವ್ಯಾಸ ಬಣ್ಣಿಸುತ್ತಾನೆ. ತಮ್ಮ ಹೆಡೆಯ ಮಣಿಗಳನ್ನು ಬೆಂಕಿಯ ಕಿಡಿಗಳೆಂಬಂತೆ ಭಾವಿಸಿ ತಮ್ಮ ಮೈಗೆ ತಾವೇ ಅಂಜುತ್ತ, ಮರಿಗಳನ್ನಾದರೂ ಕಾಪಾಡಲೆಂದು ಅವುಗಳ ಮೇಲೆ ಮೈ ಚಾಚಿಕೊಂಡರಂತೆ ಉರಗಿಯರು!

ಇಂಥದೇ ಹೃದಯದ್ರಾವಕ ಸನ್ನವೇಶವೊಂದು ಮಹಾಭಾರತದಲ್ಲಿ ಅರಣ್ಯಪರ್ವದಲ್ಲಿದೆ. ವನವಾಸದಲ್ಲಿ ದ್ವೈತವನದಲ್ಲಿ ಪಾಂಡವರು ಇದ್ದಾಗ ಒಂದಿರಳು ಧರ್ಮಜನಿಗೆ ಒಂದು ಕನಸಾಗುತ್ತೆ. ಆ ಕನಸಿನಲ್ಲಿ ಕೆಲ ಜಿಂಕೆಗಳು ಕಾಣಿಸಿಕೊಂಡು, ನಿನ್ನ ತಮ್ಮಂದಿರಿಂದ ನಮ್ಮ ದೊಡ್ಡ ಹಿಂಡೆಲ್ಲ ಕರಗಿದೆ. ನಾವು ಕೆಲವೇ ಜೀವಿಗಳು ಉಳಿದುಕೊಂಡಿದ್ದೇವೆ. ನಾವು ಈಗ ಬಸುರಿಯರು. ನಾವೆಲ್ಲಿಗೆ ಹೋಗಬೇಕು ಎಂದು ಅಳುತ್ತ ಕಣ್ಣೀರ್ಗರೆಯುತ್ತ ಕೇಳುತ್ತವೆ.

ಕನಸು ಬಂದ ಧರ್ಮಜನಿಗೆ ಹೇಳಲಾಗದ ವ್ಯಾಕುಲತೆ ಉಂಟಾಗುತ್ತದೆ. ಮರುದಿನ ಧರ್ಮಜನ ಹೇಳಿಕೆಯಂತೆ ದ್ವೈತವನವನ್ನು ಬಿಟ್ಟು ಕಾಮ್ಯಕವನಕ್ಕೆ ಪಾಂಡವರು ತೆರಳುತ್ತಾರೆ. ಇಂಥ ಕನಸು ಕಾಣುವ ಸಾಧ್ಯತೆ ಇರುವುದು ಧರ್ಮಜನಿಗೆ ಮಾತ್ರ! ಖಾಂಡವದಾಹದ ಸಂದರ್ಭದಲ್ಲಾದರೋ ಯಾರಿಗೂ ಕನಸೂ ಬೀಳದೇಹೋಯಿತು! ಖಾಂಡವದಾಹವೇ ಅಗ್ನಿಯ ಕನಸಾಗಿತ್ತೆನ್ನಬೇಕು!

ಈ ಕಾಡ್ಗಿಚ್ಚಿನ ಉರಿಯಲ್ಲಿ ಒಟ್ಟು ಆರು ಜೀವಗಳು ಉಳಿದುಕೊಂಡುವಂತೆ. ತಕ್ಷಕನ ಗೆಳೆಯನಾಗಿದ್ದ ‘ಮಯ’ನೆಂಬ ದಾನವಶಿಲ್ಪಿ ಕೃಷ್ಣಾರ್ಜುನರಲ್ಲಿ ಶರಣಾಗತನಾಗಿ ಜೀವ ಉಳಿಸಿಕೊಂಡ. ಆಮೇಲೆ, ಕೃಷ್ಣನ ಸೂಚನೆಯಂತೆ, ಪಾಂಡವರು ನಡೆಯಿಸಿದ ರಾಜಸೂಯಕ್ಕೆ ಉಚಿತವಾದ ಅದ್ಭುತವಾದ ಸಭಾಗೃಹವೊಂದನ್ನು ಈ ದಾನವಶಿಲ್ಪಿಯೇ ರಚಿಸಿಕೊಟ್ಟನು. ಅದೊಂದು ಕನಸಿನ ಕಟ್ಟಡದಂತೆ ಇತ್ತು. ಮಾಯೆಯ ಮಹಲಿನಂತೆ ಇತ್ತು.

ನೆಲ–ನೀರುಗಳ ವ್ಯತ್ಯಾಸವೇ ಅಲ್ಲಿ ತಿಳಿಯದಂತಿತ್ತು. ಈ ವ್ಯತ್ಯಾಸ ತಿಳಿಯದೆ, ರಾಜಸೂಯಕ್ಕೆ ಬಂದಿದ್ದ ದುರ್ಯೋಧನ ದ್ರೌಪದಿಯ ಮುಂದೆ ನಗೆಗೀಡಾಗಿ ಹೋದದ್ದು; ಈ ಕಹಿಯನ್ನು ಆತ ಮರೆಯದೇ ಇದೇ ಮುಂದಿನ ಮಹಾಯುದ್ಧಕ್ಕೆ ನಾಂದಿಯಾದದ್ದನ್ನು ನೋಡಿದರೆ, ಖಾಂಡವದಹನದ ಮುಂಚಾಚಿದ ಜ್ವಾಲೆಯಂತೆ ಕುರುಕ್ಷೇತ್ರಯುದ್ಧವು ಕಂಡು ಬರುವುದು!

‘ಆಶ್ವಸೇನ’ನೆಂಬ ನಾಗ – ತಕ್ಷಕನ ಮಗ. ಇನ್ನೂ ಹುಡುಗ. ಉರಿಯಲ್ಲಿ ಬೆಂದುಹೋಗುವುದರಲ್ಲಿದ್ದ. ಅಶ್ವಸೇನನ ತಾಯಿ, ಮಗನನ್ನು ಉಳಿಸಿಕೊಳ್ಳಲೆಂದು, ಅವನನ್ನು ಕತ್ತು ಮುಂದಾಗಿ ನುಂಗಿ ತನ್ನೊಡಲಲ್ಲಿ ಅಡಗಿಸಿಕೊಂಡು ಉರಿಯನಾಲಗೆಯಾಚೆ ಹಾರಿದಳು. ನೋಡುತ್ತಿದ್ದ ಅರ್ಜುನ ಬಾಣವನ್ನೆಸೆದು ಇಕ್ಕಡಿ ಮಾಡಿದ. ತಾಯಿಯ ತಲೆ, ಮಗನ ಬಾಲದ ಜೊತೆ ತುಂಡರಿಸಲ್ಪಟ್ಟು ಬೆಂಕಿಗೆ ಬಿತ್ತು. ಅಶ್ವಸೇನ ತಾಯದೇಹದ ಜೊತೆ ಹೊರ ಹಾರಿ ಬದುಕುಳಿದ.

ಅವನಿಗೆ ಅರ್ಜುನನ ಮೇಲೆ ದ್ವೇಷ ಮಸಗುತ್ತಿತ್ತು. ಆತ, ಮೆತ್ತಗೆ ಕರ್ಣನ ಬತ್ತಳಿಕೆಯನ್ನು ಸೇರಿ ಅಡಗಿ ಕುಳಿತು ಸಮಯವನ್ನು ಹೊಂಚುತ್ತಿದ್ದನಂತೆ. ತಾಯಿ ತನ್ನನ್ನು ನೀಗಿಕೊಂಡು ಉಳಿಸಿದ ಮಗು ಈ ಅಶ್ವಸೇನ! ಕರ್ಣನಾದರೋ ತಾಯಿ ಕೈಬಿಟ್ಟ ಮಗು! ತನಗೇ ತಿಳಿಯದೇ, ಅಪ್ರಜ್ಞಾಪೂರ್ವಕವಾಗಿ, ಅರ್ಜುನನ ಮೇಲೆ ದ್ವೇಷಭಾವವೊಂದು ಕರ್ಣನಲ್ಲಿ ಅಡಗಿತ್ತೆನ್ನುವಂತೆ, ಅಶ್ವಸೇನ, ಕರ್ಣನ ಬತ್ತಳಿಕೆಯಲ್ಲಿ ಕರ್ಣನಿಗೇ ತಿಳಿಯದಂತೆ ಅಡಗಿದ್ದ.

ಖಾಂಡವದ ಕಿಡಿಯೊಂದು ಕರ್ಣನ ಬತ್ತಳಿಕೆಯಲ್ಲಿ ಜೀವಂತವಾಗಿತ್ತು! ಈ ಕಾಡ್ಗಿಚ್ಚಿನ ನಡುವೆಯೂ ನಾಲ್ಕು ಶಾರ್ಙ್ಗಪಕ್ಷಿಗಳು ಜೀವಂತವಾಗಿ ಉಳಿದುವಂತೆ. ಅವು ಹೇಗೆ ಉಳಿದುಕೊಂಡುವು? ಹಕ್ಕಿಗಳು ಅಗ್ನಿಯನ್ನು ಸ್ತುತಿಸಿದುವಂತೆ.

‘ಸ್ತುತಿ’ ಎಂದರೆ, ಈಗ ಯಾವ ಭಯಾನಕವಾದ ಎಲ್ಲವನ್ನೂ ಸುಡುವ ಕಂಗೆಡಿಸುವ ರೂಪ ಕಾಣಿಸುತ್ತಿದೆಯೋ ಅದಕ್ಕಿಂತ ಭಿನ್ನವಾಗಿ ಚೇತೋಹಾರಿಯಾದ ಸೌಮ್ಯರೂಪವೊಂದು ನಿನಗೆ ಇದ್ದೇ ಇದೆ ಎಂದು ಅಗ್ನಿಗೇ ಮನಗಾಣಿಸುವ ರೀತಿ. ವಿಶೇಷವೆಂದರೆ ಮಹಾಭಾರತದಲ್ಲಿ ಕಾಣಿಸುವ ಈ ಸ್ತುತಿಗಳ ಮೂಲರೂಪ ಋಗ್ವೇದದಲ್ಲಿ ಕಂಡುಬರುತ್ತದೆ. ಅಲ್ಲಿ ಈ ನಾಲ್ಕು ಪಕ್ಷಿಗಳನ್ನು ಋಷಿಗಳೆಂದೇ ಹೆಸರಿಸಿದ್ದಾರೆ! ವೇದದ ಈ  ಸಂದರ್ಭದ ಒಂದು ಸ್ತುತಿಯನ್ನು  ನೋಡಿ:

‘ಆಯಾನೇ ತೇ ಪರಾಯಣೇ ದುರ್ವಾರೋಹಂತು ಪುಷ್ಪಿಣೀಃ
ಹೃದಾಶ್ಚ ಪುಂಡರೀಕಾಣಿ ಸಮುದ್ರಸ್ಯ ಗೃಹಾ ಇಮೇ’


ಇದು ಅಗ್ನಿಗೆ ಪ್ರಾರ್ಥನೆ. ‘ದುರ್ವಾಗರಿಕೆಗಳು ಮೊಳೆತು ಬರಲಿ, ಚಿಗುರಲಿ. ಬಳ್ಳಿಗಳಲ್ಲಿ ಹೂಗಳು ಅರಳಲಿ. ಕೊಳಗಳಲ್ಲಿ ನೀರ್ದುಂಬಿ ತಾವರೆಗಳು ಕಂಗೊಳಿಸಲಿ. ಇವೆಲ್ಲ ಸಮುದ್ರಿಕ್ತನಾದ ಅಂದರೆ ಚೈತನ್ಯದಿಂದ ತೊನೆಯುತ್ತಿರುವ ಭಗವಂತನ ನೆಲೆಯಾಗಲಿ’.

ಈ ಮಾತಿಗೆ ನೇರಸಂವಾದಿಯಾಗಿರುವ ಮಾತು ಹಕ್ಕಿಗಳ ಮಾತಾಗಿ ಮಹಾಭಾರತದಲ್ಲಿ ಬಂದಿದೆ. ಅಂದರೆ ಏನೆಂದ ಹಾಗಾಯಿತು? ಖಾಂಡವದ ಒಡಲಿನಿಂದಲೇ ಹುಟ್ಟುವ ಜೀವದ ಇಚ್ಛೆಯನ್ನು ಸೂಚಿಸಿದಂತೆ ಆಯಿತು. ಬೆಂಕಿಯ ಉರಿನಾಲಗೆಗಳ ನಡುವೆ ಚಿಗುರಹಸಿರು ಕನಸನ್ನು  ನೆನೆದಂತೆ ಆಯಿತು.

ದುರಂತದ ನಡುವೆ ಶುಭಾಶಯವನ್ನು ಮರೆಯದಂತೆ ಆಯಿತು. ಶುಭಾಶಯಗಳು ಅರ್ಥಪೂರ್ಣವಾಗುವುದು ದುರಂತದ ನಡುವೆಯೇ ಇರಬಹುದು. ಎಲ್ಲವೂ ಅರ್ಥಶೂನ್ಯವೆಂದು ಕಂಡಾಗಲೇ ನಿಜಕ್ಕೂ ಅರ್ಥಪೂರ್ಣವಾದುದು ಯಾವುದು ಎಂಬುದರ ಕಡೆಗೆ ಹೃದಯ ಹೊರಳುವುದಿರಬೇಕು! ಆಸ್ತೀಕಪರ್ವದಲ್ಲಿ, ಸರ್ಪಗಳ ಕುಲಕ್ಷಯವನ್ನು ತಡೆಯುವ ಯತ್ನವಾಗಿ ಈ ಶುಭಾಕಾಂಕ್ಷೆಯೇ ಇದೆ!

ಇತಿಹಾಸ, ವೇದವಾಕ್ಯಗಳನ್ನು ಹೇಗೆ ನೆನಪು ಮಾಡಿಕೊಳ್ಳುತ್ತಿದೆ ನೋಡಿ. ವಿಕಟ ಸನ್ನಿವೇಶದಲ್ಲಿ, ದುರಂತದ ನಡುವೆ ನೆನಪು ಮಾಡಿಕೊಳ್ಳುತ್ತಿದೆ. ವೇದವಾಕ್ಯಗಳನ್ನು ತಮಗೆ ಬೇಕಾದಂತೆ ತಮ್ಮ ಅನುಕೂಲದ ಅರ್ಥಹಚ್ಚಿ ಬಳಸುವುದನ್ನು – ವಿನಿಯೋಗ ಎನ್ನುತ್ತಾರೆ.

ನಮಗಂತ ಮೊದಲೇ ಇದ್ದ, ನಮ್ಮ ಪೂರ್ವದ ನುಡಿಗಳನ್ನು ನಾವು ಬಳಸುವುದು, ವಿನಿಯೋಗಿಸುವುದು ಸಹಜ. ಕರ್ಮಕಾಂಡದಲ್ಲಿ, ವೇದಮಂತ್ರಗಳನ್ನು, ತಮ್ಮ ಲೌಕಿಕ, ಪಾರಲೌಕಿಕ ಸುಖಕ್ಕಾಗಿ ವಿನಿಯೋಗ ಮಾಡುತ್ತಾರೆ. ಜ್ಞಾನಕಾಂಡದಲ್ಲಿ ಆತ್ಯಂತಿಕ ಸ್ಥಿತಿಯನ್ನು ಪಡೆಯುವುದಕ್ಕಾಗಿ ವೇದಮಂತ್ರಗಳನ್ನು ವಿನಿಯೋಗ ಮಾಡುತ್ತಾರೆ.

ಆದರೆ ಇತಿಹಾಸ, ಪುರಾಣಗಳ ನಡುವೆ ವೇದವಾಕ್ಯಗಳನ್ನು ನೆನೆಯುವುದು, ಕರ್ಮಕಾಂಡ ಜ್ಞಾನಕಾಂಡಗಳೆರಡಕ್ಕಿಂತಲೂ ಬೇರೆಯಾದ, ಬೇರೆಯೇ ಒಂದು ರೀತಿಯ ವಿನಿಯೋಗವಾಗಿದೆ.

ಇದು ಯಾತನೆಯ ನಡುವೆ ಹುಟ್ಟಿಕೊಳ್ಳುವ ನೆನಪು! ನಮ್ಮ ನೋವು ನಿನಗೆ ಅರ್ಥವಾಗುವುದು ಸಾಧ್ಯವೇ ಎಂದು ಕೇಳುವುದಕ್ಕಾಗಿಯೇ ಹುಟ್ಟಿಕೊಳ್ಳುವ ನೆನಪು. ನನ್ನಂತೆ ಒಡಲುಗೊಂಡು ನೋಡು ಎಂದು ಭಕ್ತ, ದೇವರನ್ನು ಕೇಳಿದಂತೆ. ಇದಕ್ಕೆ ಓಗೊಡುವುದು ದೇವರಿಗೂ ಸುಲಭವಲ್ಲ. ಶುಭಾಕಾಂಕ್ಷೆ ಹುಸಿಯಾಗದಂತೆ ಅದನ್ನು ವಿಕಟಸನ್ನಿವೇಶದ ನಡುವೆ ಇಟ್ಟುನೋಡುವುದು ಮಹಾಭಾರತದ ದಾರಿಯಾಗಿರುವಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT