ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾರು ಲಕ್ಷಿಸುವರು?

Last Updated 17 ಡಿಸೆಂಬರ್ 2011, 19:30 IST
ಅಕ್ಷರ ಗಾತ್ರ

`ಆಕೆ~ಯನ್ನು ಬಗ್ಗು ಬಡಿಯುವಲ್ಲಿ ಆ್ಯಸಿಡ್ ಎರಚಿ ಅವಳನ್ನು `ಮುಖಹೀನ~ಗೊಳಿಸುವ ಘೋರ ದಾರಿಯೂ ಒಂದಷ್ಟೇ? ಅವಳು ತನ್ನ ಕಂಪೆನಿ ಬಿಟ್ಟು ಬೇರೆ ಕಂಪೆನಿ ಸೇರಿದಳೆಂಬ ಸಿಟ್ಟು ತಡೆಯಲಾರದೆ ಆ್ಯಸಿಡ್ ಎರಚಿದ ಬಾಸ್, ವರದಕ್ಷಿಣೆಯ ಹಿಂಸೆ ತಡೆಯದೆ ಪತಿಯಿಂದ ಬೇರೆಯಾಗಿ ದುಡಿದು ಮಕ್ಕಳನ್ನು ಸಾಕುತ್ತ ತನ್ನಷ್ಟಕ್ಕೆ ಬದುಕುತಿದ್ದ ಹೆಂಡತಿಯ ಸಮಾಧಾನ ನೋಡಲಾರದೆ ಪಶ್ಚಾತ್ತಾಪದ ಉಪಾಯದಲ್ಲಿ ಬಳಿಸಾರಿ ಮುಖಕ್ಕೆ ಆ್ಯಸಿಡ್ ಎರಚಿದ ಪತಿ, ಮದುವೆಯಾಗೆಂದು ಒತ್ತಾಯಿಸಿ, ಒಪ್ಪದಾಗ ತನ್ನನ್ನು ಬಿಟ್ಟು ಯಾರನ್ನು ಆಗುತ್ತೀ ನೋಡಿಯೇ ನೋಡುತ್ತೇನೆ ಎಂದು ಹದಿಹರಯದ ಹುಡುಗಿಯ ಮೇಲೆ ಆ್ಯಸಿಡ್ ಎರಚಿದ ಹುಡುಗ, ತವರಿನಿಂದ ಕಾರು ತಾ ಹೊನ್ನು ತಾ `ಮಣ್ಣು~ ತಾ - ತಾರದ್ದಕ್ಕೆ ಹೆಂಡತಿಯ ಮೇಲೆ ಆ್ಯಸಿಡ್ ಎಸೆದು, ಸೀಮೆಎಣ್ಣೆ ಸುರಿದು ಕಡ್ಡಿಗೀರಿ ಕೇಕೆ ಹಾಕುವ ಶೂರರು; ಬೆದರಿಕೆ, ಹಿಂಬಾಲಿಕೆ, ಹೀಯಾಳಿಕೆ, ಹಿಲುಗಾರಿಕೆಗಳು ಹೊಸಿಲೊಳಗೇ ಇರುವ, ಹೊಸಿಲಾಚೆ ಹೊರಟ ಹೆಣ್ಣುಗಳಿಬ್ಬರನ್ನೂ ಅಧೀರಗೊಳಿಸುವಲ್ಲಿ ಮಾರ್ಕೆಟಿನಲ್ಲಿ ಸುಲಭವಾಗಿ ಸಿಗುವ ಸೀಮೆಎಣ್ಣೆ ಮತ್ತು ಆ್ಯಸಿಡ್‌ಗಳು ಆಯುಧಗಳಾಗಿ ಮಾರ್ಪಟ್ಟ ದಿನಗಳಿವು.

ಒಳಿತಿಗಾಗಿ ಕಂಡುಹಿಡಿದ ಎಲ್ಲವನ್ನೂ ಕೇಡುಗೊಳಿಸಿ ಅವುಗಳ ಮೂಲಗುಣವನ್ನು ಅವಗುಣವಾಗಿಸುವುದರಲ್ಲಿಯೇ, ಉಪಯೋಗವನ್ನು ಕುರುಪಯೋಗಿಸುವುದರಲ್ಲಿಯೇ ಇಡೀ ಪುರುಷ ಕುಲವನ್ನೇ ಗುಮಾನಿಗೆ ಈಡು ಮಾಡಿಬಿಡುವ ಕುಠಾರಪ್ರಾಯ ಕಾಪುರುಷರ ಮೂಲಗುಣ ಪ್ರಕಟವಾಗಿ ಬಿಡುತ್ತದೆಯೇ! ಧರ್ಮ ದೇವರು ದೈವ ಔಷಧ ಅನಿಲ ಅನಲಗಳಿಂದ ಹಿಡಿದು ಅಣುವಿನವರೆಗೂ ಎಲ್ಲವೂ ಅವುಗಳ ಬಳಕೆಯೇ ಒಂದಾಗಿ, ಬಳಸುವುದೇ ಇನ್ನೊಂದಾಗಿ ಪರಿಣಮಿಸುವ ಅಮಾನುಷ ದುರಂತಗಳು. ಆಕೆಯ ವಿದ್ಯೆಯೂ ಬುದ್ಧಿಯೂ ಉದ್ಯೋಗವೂ ನಗಣ್ಯ, ಪ್ರಧಾನವಾಗುವುದು ಆಕೆ ಹೆಣ್ಣು ಎಂಬುದೊಂದೆ. ದೇಹವೇ ಆಕೆಯನ್ನು ಮಣಿಸುವ ಪ್ರಮುಖ ಮಾಧ್ಯಮವಾದಾಗ ತನ್ನನ್ನವಳು ಕಾಪಾಡಿಕೊಳ್ಳುವ ಮಾರ್ಗ ಯಾವುದು? ಸರಿ, ಆಗಿದ್ದು ಆಯಿತು, ಮುಂದೇನು ಎಂದರೆ ಸಿಗುವ ಉತ್ತರ ಯಾವುದು?

ತನಗಾದ ದುರಂತಕ್ಕೆ ಸಡ್ಡುಹೊಡೆದು ಮುಖಾಮುಖಿಯಾಗಿದ್ದಷ್ಟೇ ಅಲ್ಲ, ಇಂಥ ಹೆಣ್ಣುಮಕ್ಕಳಿಗೆ ಮುಚ್ಚಿಹೋಗುವ ಜಗತ್ತನ್ನು ಮತ್ತೆ ತೆರೆಯಲಿಕ್ಕಾಗಿ ತನ್ನನ್ನು ಮೀಸಲಿಟ್ಟವಳು ಶಿರೀನ್ ಜುವಾಲೆ ಎಂಬ ಮಹಿಳೆ. ಹೆಸರೆತ್ತಿದರೆ ಸಾಕು ಅವಳ ಮದುವೆ ಮೊದಲಿನ ಸರಳ ಮುಗ್ಧ ಮುಖ ಮತ್ತು ಮದುವೆ ನಂತರದ, ಬಾಹ್ಯ ವಿರೂಪಕ್ಕೊಳಗಾಗಿಯೂ ಒಳಗೆ ಅರಳಿದ, ಧೀರ ಅಸಾಮಾನ್ಯ ಮುಖ ಕಣ್ಮುಂದೆ ಕಟ್ಟುವುದು. ಆ್ಯಸಿಡ್ ಜೊತೆ ಕೂಡಿಯೇ ಇರುವ ಅನೇಕ ಹೆಸರುಗಳಲ್ಲೊಂದಾಗಿಯೂ ವಿಶಿಷ್ಟವಾಗಿರುವ ಅವಳನ್ನಿಲ್ಲಿ ನೆನೆಯುತಿರುವೆ.
*
ಆತ ಮನೆಗೆ ಬಂದವರೆದುರು ನಮ್ಮ ಖಾಸಗೀ ಕೋಣೆಯ ವಿಚಾರವನ್ನು ಮಾತಾಡುತ್ತಿದ್ದ. ಅದು ಕೂಡದೆಂದು ಹೇಳಿದೆ, ಕೇಳಿಕೊಂಡೆ, ಬೇಡಿಕೊಂಡೆ. ಆತ ಅದನ್ನು ನಿಲ್ಲಿಸಲಿಲ್ಲ, ಇದು ಕೇವಲ ಸಂಕೋಚದ ಮಾತಲ್ಲ. ನನ್ನ ಆತ್ಮಗೌರವದ ಪ್ರಶ್ನೆ. ಮರ್ಯಾದೆಯ ಪ್ರಶ್ನೆ. ಅಷ್ಟು ಅರ್ಥವಾಗುತ್ತಿಲ್ಲವೆಂದರೆ ಜತೆಗೆ ಬಾಳುವುದರಲ್ಲಿ ಏನಿದೆ? ಸೀದಾ ತವರಿಗೆ ಬಂದೆ. ನನಗಿನ್ನು ಅವನೊಂದಿಗೆ ಬದುಕಲು ಸಾಧ್ಯವಿಲ್ಲ ಅಂತ ಖಡಾಖಂಡಿತ ಅನಿಸಿದಾಗ ವಿಚ್ಛೇದನ ಕೇಳಿದೆ. 

ಆತ ಒಪ್ಪಿದ. ಆದರೆ  ಮೊದಲೇ ವಿಕೃತ ಮನಸಿನವ, ಅಷ್ಟು ಸುಲಭದಲ್ಲಿ ವಿಚ್ಛೇದನ ನೀಡುವನೆ? ಒಂದು ಲಕ್ಷ ಕೊಡು ಅಂದ. ದುಡ್ಡು ದಕ್ಕುವುದಿಲ್ಲವೆಂದು ಖಾತ್ರಿಯಾದಾಗ ತನ್ನೊಂದಿಗೆ ಬಾಳಲಾರದ ಅವಳು ಯಾರೊಡನೆಯೂ ಬಾಳಬಾರದು. ಅಷ್ಟೇ ಅಲ್ಲ, ಅವಳ ಬದುಕೇ ಮುರುಟಿ ಹೋಗಬೇಕು ಎಂದು ಬಯಸಿದ. ಒಂದು ರಾತ್ರಿ ಎಂಟರ ಸುಮಾರಿಗೆ, ಆಕೆ ಕೆಲಸದಿಂದ ಹಿಂದಿರುಗಿ ತಾಯಿ ಮನೆಯ ಮೆಟ್ಟಿಲು ಹತ್ತುತಿದ್ದಾಳೆ. ಅಲ್ಲೇ ಅಡಗಿದ್ದ ಆತ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿ, ಏನು ಎತ್ತ ನೋಡುವಷ್ಟರಲ್ಲಿ ಆಕೆಯ ಮುಖದ ಮೇಲೆ ಆ್ಯಸಿಡ್ ಎರಚಿ ಪರಾರಿಯಾದ. ಕ್ಷಣದಲ್ಲಿ ಮುಖ ಬೆಂದು ಹೊಗೆಯಾಡಿ ಉಸಿರುಕಟ್ಟಿದಂತಾಗಿ ಕಿರುಚುತ್ತ ಆಕೆ ಬಾಗಿಲು ಬಡಿದಳು. ಕದ ತೆರೆದ ತಾಯಿ ಕಂಡದ್ದೇನು. ಮಗಳ ಮುಖ ಉರಿ ಹಬೆಯಲ್ಲಿ ಕರಗುತ್ತಿದೆ. ಯಾಕೆ, ಏನು, ಏನಾಯಿತು, ಕೇಳುವುದರೊಳಗೆ ಬೊಬ್ಬಿಡುತ್ತ ಮಗಳು ಬಚ್ಚಲಿಗೆ ಓಡಿ ನಲ್ಲಿ ನೀರಿಗೆ ಮುಖವೊಡ್ಡಿದ್ದಾಳೆ. ಅಲ್ಲಿಗೆ ತಾಯಿಯ ಎದೆಬಡಿತ ನಿಂತೇ ಹೋದಂತಾಗಿದೆ. ಮಗಳ ಭವಿಷ್ಯವೂ.

ಚರ್ಮ ಸುಟ್ಟುಹೋದ ಮಾಂಸ ಬೆಂದು ಕರಗಿದ ಯಮಯಾತನೆ, ಡ್ರೆಸಿಂಗ್ ಮಾಡುವಾಗಿನ ದಾರುಣ ನೋವು, ಆಚೀಚಿನ ವಾರ್ಡುಗಳಿಂದ ಕೇಳುತಿದ್ದ ಸುಟ್ಟಗಾಯದ ರೋಗಿಗಳ ಕೂಗು, ತನ್ನ ಗುರುತು ತನಗೇ ಸಿಗದಂತಹ ವಿರೂಪ- ಶಿರೀನ್ ಚೇತನ ತತ್ತರಿಸಿತು.
ಮೂಗು ಕರಗಿ ಬರೀ ಹೊಳ್ಳೆಗಳಷ್ಟೇ ಇರುವ, ಪ್ಲಗ್ಗು ಸಿಕ್ಕಿಸಿ ಉಸಿರಾಡುವ, (ಅದೃಷ್ಟವಶಾತ್ ದೃಷ್ಟಿ ಉಳಿದು) ರೆಪ್ಪೆಯೆಲ್ಲ ಕರಟಿದ, ನೋಡಿದ ಜನ ಹೆದರಿ ಹಾರುವ, ಮಕ್ಕಳು ನೋಡಿದರೆ ಕಿಟ್ಟನೆ ಕಿರಿಚಿ ದೂರ ಓಡುವ, ಅತಿ ಹತ್ತಿರದವರಿಗೂ ಪತ್ತೆ ಸಿಗದಷ್ಟು ವಿಕರಾಳ ಮುಖದವಳಾಗಿ ಶಿರೀನ್ ಇದ್ದೂ ಇಲ್ಲದಂತಾದ ಭವಿಷ್ಯದೆದುರು ಅಸಹಾಯಕ ಮೂಕ ಸ್ತಬ್ಧ ನಿಂತುಬಿಟ್ಟಳು. ಹತ್ತು ಹದಿನಾರು ಶಸ್ತ್ರಚಿಕಿತ್ಸೆಗಳೇನೋ ನಡೆದುವು. ಉರಿಯೂ ಕ್ರಮೇಣ ಮಾಯವಾಯಿತು ಆದರೆ ಚಿಂದಿಚೂರಾದ ಗುರುತು? ಆ ವಿರೂಪ? ಮನಸ್ಸಿಗೇ ಹತ್ತಿದ ಉರಿಯ ಬೇಗೆ? ಮಾಯುವುದಾದರೂ ಎಂತು? 

ಟೀವಿ, ಊಟ, ತಿಂಡಿ, ಟೀವಿ. ನಡುವೆ ಶಿರೀನ್ ಎರಡು ವರ್ಷ ತನಗೆ ತಾನೇ ವಿಧಿಸಿಕೊಂಡ ಗೃಹಬಂಧನದಲ್ಲಿ ತನ್ನ ಕೋಣೆಯಲ್ಲೇ ಜ್ಞಾತ-ಅಜ್ಞಾತವಾಗಿ ದಿನಗಳೆದಳು. ತಾಯಿ, ಒಡಲ ಭುಗಿಲನ್ನು ಹತೋಟಿಗೆ ತಂದುಕೊಂಡು ಮಗಳನ್ನು ಮರಿಗಿಣಿಯಂತೆ ನೋಡಿಕೊಂಡಳು. ಬಂದವರು ಬಂಧುಬಾಂಧವರು ಪರಿಚಿತರು ನೋಡುವ ಕುತೂಹಲವೋ, ಒಂದು ಶಾಸ್ತ್ರವೋ ಒಂದು ದೃಶ್ಯವೋ ಎಂಬಂತೆ ದೂರದಿಂದಲೇ ನೋಡಿ, ಮರುಕದ ಮಾತಾಡಿ ಹೊರಡುತಿದ್ದರು. ಯಾರೂ ಹತ್ತಿರ ಬರಲಾರರು. ಸಾಚಾ ಸಾಂತ್ವನದ ತಂಪು ನೀಡಲಾರರು. ಅರೆ, ಇಂಥ ಕ್ಷುದ್ರತೆಯನ್ನು ಎದುರಿಸಲಾಗದೆ ಮನೆಯೊಳಗೆ ಉಳಿದೆನೆ ತಾನು? ಇನ್ನೆಷ್ಟು ದಿನ ಹೀಗೆ? ಎಲ್ಲರಂತೆ ಬದುಕುವ ಹಕ್ಕು ತನಗಿದೆ ಎಂಬುದನ್ನೇ ಮರೆತೆನೆ! ಅವರಲ್ಲನೇಕರು `ಗಂಡನ್ನ ಬಿಟ್ಟು ಬಂದವಳು~ ಎಂದು ಮಾತಿನಕಣೆ ಕಣ್ಣಮೊನೆಯಲ್ಲೆಲ್ಲ ತನ್ನ ಹೊಸಬದುಕನ್ನೂ ಸೀಳುತಿದ್ದವರು. ಕೆಲಮಂದಿಯೋ, ಸಹಾಯ ಮಾಡಬಯಸುವರು. ಆದರದು ಅವರಿಗೆ ತಮ್ಮ ಅಹಂಕಾರವನ್ನು ತಣಿಸಿಕೊಳ್ಳುವ ಒಂದು ವಿಧಾನ ಮಾತ್ರ. ಅವರು ನೇರ ಸಂಪರ್ಕಕ್ಕೆ ಬಾರರು, ಮುಖ ಕಾಣಲೊಪ್ಪರು, ಎರಡು ಮಾತಿನ ವಿನಿಮಯಕ್ಕೂ ಸಿಗರು, ಉದ್ಯೋಗ ನೀಡಲು, ಸ್ನೇಹ ಬೆಳೆಸಲಂತೂ ಎಂದೂ ಮುಂದಾಗರು. ಆತ್ಮವಿಶ್ವಾಸವನ್ನು ಇನ್ನಷ್ಟು ನಲುಗಿಸುವ ಇಂಥ ಭಣಭಣ ನಿರಾಸಕ್ತ ಸಹಾಯ ಟೊಳ್ಳು ಸಹಾನುಭೂತಿ ಬೇಕೆ ತನಗೆ?... ತಾನಷ್ಟು ದುರ್ಬಲಳೇ? ಹೇಳಿಕೇಳಿ ಇಂಥ ಜನರಿಂದ ತಪ್ಪಿಸಿಕೊಳ್ಳಲು ತನ್ನ ಅಮೂಲ್ಯ ದಿನಗಳನ್ನು ದಂಡಮಾಡುತಿರುವೆನೆ!

ಹೌದೆಂದು ಖಾತ್ರಿಯಾಗಿದ್ದೇ ಮತ್ತೆ ಕ್ಷಣವೂ ತಡಮಾಡಲಿಲ್ಲ ಆಕೆ, ಕೋಣೆಯ ಬಾಗಿಲನ್ನು ಸ್ವತಃ ತೆರೆದು ಹೊರಬಂದಳು. ತಾಯಿಯ ಒತ್ತಾಸೆ ಇತ್ತು. ಒಳ್ಳೆಯ ಗೆಳತಿಯರೂ ಇದ್ದರು. ಅವರೆಲ್ಲರ ನೆರವಿನೊಂದಿಗೆ `ಸದ್ಯ, ಕಣ್ಣು ಉಳಿದಿದೆಯಲ್ಲ, ಮೂಗಿನ ಹೊಳ್ಳೆಗಳು ಉಳಿದಿವೆಯಲ್ಲ~ ಅಂತೆಲ್ಲ ಇರುವುದನ್ನೇ ನೆನೆದು ಇದ್ದಬದ್ದ ಸ್ಥೈರ್ಯ ಸ್ಥಾಪಿಸಿಕೊಂಡೂ, ನೇರವಾಗಿ ಎದುರು ಬರಲು ಹಿಂಜರಿದು, ಬುರ್ಕಾ ಧರಿಸಿ ಹೊರಜಗತ್ತಿಗೆ ಕಾಲಿಟ್ಟಳು. ಬುರ್ಕಾ ಧರಿಸಿದರೂ ಜನ ತನ್ನ ಕೈ ಮೇಲಿನ ಸುಟ್ಟಗಾಯದ ಮೇಲೆ ವಿಚಿತ್ರವಾಗಿ ಕಣ್ಣಾಡಿಸುವುದನ್ನು, ಅವರ ಆ ದೃಷ್ಟಿಯೊಳಗಿನ ಅಸಹ್ಯವನ್ನು ಪರದೆಯ ಮರೆಯಿಂದಲೇ ಕಂಡು ಗದಗುಟ್ಟಿದಳು. ಆದರೆ ದುಷ್ಟರಷ್ಟೇ ಅಲ್ಲ, ಅನೇಕ ಹೃದಯವಂತ ಮಂದಿಯೂ ಇರುವರೆಂಬ ಭರವಸೆ ದೀಪವಾಯಿತು. ಒಳಗೆ ಕುಳಿತೂಕುಳಿತೂ ಕಹಿಯಾಗುತ್ತ ಹೋಗಿದ್ದ ಮನಸ್ಸು ನಿಧಾನವಾಗಿ ತಿಳಿಯಾಗುತಿದ್ದಂತೆ ವಿವಿಧ ಕೋರ್ಸುಗಳಿಗೆ ಸೇರಿಕೊಂಡಳು.
ಆ ಕೆಲಸಮಯದಲ್ಲೇ ಅಮೆರಿಕಾದಲ್ಲಿ ಸುಟ್ಟಗಾಯಕ್ಕೆ ಬಲಿಯಾದವರ ಒಂದು ಸಮ್ಮೇಳನ. ಅದರಲ್ಲಿ ಭಾಗವಹಿಸುವ ಅವಕಾಶ ಸಿಕ್ಕಿದ ಶಿರೀನ್‌ಳಿಗೆ ಅಲ್ಲಿ  ತನಗಿಂತ ಹೆಚ್ಚು ನರಳಿದವರೂ ತಾವು ಹೇಗಿರುವವೋ ಅಂತೆಯೇ ಧೈರ್ಯವಾಗಿರುವುದನ್ನು ಕಂಡು ಅಚ್ಚರಿ. ಅಲ್ಲಿಂದ ಮರಳಿದವಳೇ ಬುರ್ಕಾ ಕಳಚಿದಳು ಶಿರೀನ್, ಮೂಲೆಗೆಸೆದು ಹೇಗಿರುವಳೋ ಹಾಗೆಯೇ ಹೊರಬರತೊಡಗಿದಳು. ಸುಮಾರು ಹತ್ತುವರ್ಷಗಳ ಬಳಿಕ ಇಂಗ್ಲೆಂಡಿನ ಒಂದು ವಿಶ್ವವಿದ್ಯಾಲಯದಿಂದ ಮಾನವ ಹಕ್ಕುಗಳು ಮತ್ತು ಅಭಿವೃದ್ಧಿಯ ವಿಷಯದಲ್ಲಿ ಸ್ನಾತಕೋತ್ತರ ಪದವಿ ಗಳಿಸಿ ಅಲ್ಲಿನ `ಗ್ಲೋಬಲ್ ಛೇಂಜಿಂಗ್ ಫೇಸಸ್~ ಸಂಸ್ಥೆಯಿಂದ ಪ್ರೇರಣೆ ಪಡೆದು ತನ್ನದೇ ಸಂಸ್ಥೆಯೊಂದನ್ನು ಸ್ಥಾಪಿಸುವ ಕನಸು ಕಂಡಳು. ವಿವಿಧ ಸಮಾಜಕಾರ್ಯಾಸಕ್ತ ಸಂಸ್ಥೆಗಳ, ಆಸ್ಪತ್ರೆಗಳ ಸಹಕಾರದಿಂದ `ಪಲಾಶ್ ಫೌಂಡೇಶನ್~ ಸ್ಥಾಪನೆಯಾಗಿಯೇ ಬಿಟ್ಟಿತು. ಧೈರ್ಯ, ಸಾಹಸ ಎಂಬುದರ ನಿಜವಾದ ಅರ್ಥವೇನು ಎಂಬುದಕ್ಕೆ ತನ್ನಂತಹ ಜನರ ಪಾಲಿಗೆ ಪ್ರಪಂಚ ಕವುಚಿ ಹೋಗುವುದನ್ನು ತಡೆಯುವ ಛಲ ಹೊತ್ತ ಶಿರೀನ್‌ಳ ಈ `ಪಲಾಶ್ ಸಂಸ್ಥೆ~ ಒಂದು ಜವಾಬಿನಂತಿದೆ.

ತನ್ನ ನೆಲೆಯನ್ನು ಅರಳಿಸಿಕೊಳ್ಳುವುದಷ್ಟೇ ಅಲ್ಲ, ಪ್ರಾಯಶಃ ಸಮಾಜ ಬಾಹ್ಯರೂಪಕ್ಕೆ ನೀಡುವ ಮನ್ನಣೆಯ ನೆಲೆಯನ್ನೇ ಪ್ರಶ್ನಿಸುವ ತುರ್ತೂ ಆಕೆಗಿತ್ತು ಅಲ್ಲವೆ. ಸೌಂದರ್ಯ ಎಂದರೇನು? ಕೇಳುತ್ತಾಳೆ ಶಿರೀನ್. ಅದು ಕೇವಲ ಬಾಹ್ಯರೂಪವಲ್ಲ ಎಂದು ತಿಳಿದೂ ರೂಪ ನೋಡಿ ಮಣೆ ಇಡುವವರ ನೆನೆದು ಕನಿಕರಿಸುತ್ತಾಳೆ. ತನ್ನಂತೆ ರೂಪಾಂತರಕೆ ಈಡಾಗುವವರನ್ನು ಗ್ರಹಿಸಲು ಸಂವೇದನೆಯಲ್ಲೇ ಬದಲಾವಣೆಯಾಗಬೇಕು.

ಶರೀರಾಕೃತಿಯ ಬಗ್ಗೆ ಸಮಾಜಕ್ಕೆ ಸ್ಥಾಪಿತ ಅಭಿಮತವಿದೆ. ಅದು ಬದಲಾಗಬೇಕು, ಕ್ರೂರ ಕಾಹಿಲೆಗಳಿಗೆ ಮಾನವನ ಪೈಶಾಚಿಕ ಮನೋವೃತ್ತಿಗೆ, ರೂಪವೇ ಸುರುಟಿಹೋಗುವಂಥ ಹೃದಯವಿದ್ರಾವಕ ಕೃತ್ಯಗಳಿಗೆ ಬಲಿಯಾಗುವವರನ್ನು ದೂರ ತಳ್ಳದೆ ಮುಖ್ಯವಾಹಿನಿಯಲ್ಲಿ ಸೇರಿಸಿಕೊಳ್ಳಬೇಕು. ಅವರ ಆತ್ಮಸಮ್ಮೋನವನ್ನು ಮರಳಿಸುವುದು ನಾಗರಿಕ ಕರ್ತವ್ಯ ಕೂಡ ಎನ್ನುವ `ಪಲಾಶ್ ಸಂಸ್ಥೆ~ ಸಂತಪ್ತರು ತಮ್ಮ ಊನವನ್ನು ಮನಸ್ಸಿಗೇ ತಂದುಕೊಳ್ಳದೆ, ಯಾವ ತಡವರಿಕೆ ಸಂಕೋಚ ಹಿಂಜರಿಕೆ ಕೀಳರಿಮೆಗಳಿಲ್ಲದೆ ತಮ್ಮ ನೋವು ಆತಂಕಗಳನ್ನು ಮುಕ್ತವಾಗಿ ಹೇಳಿಕೊಳ್ಳಲು, ತಮ್ಮ ಹಿತೈಷಿಗಳೊಂದಿಗೆ ಅಷ್ಟೇ ಅಲ್ಲ, ಇತರ ಜನರೊಂದಿಗೂ ಬೆರೆಯಲು ಅವಕಾಶ ಒದಗಿಸುತ್ತದೆ. ಜೀವನ ಪ್ರೀತಿ ಕಮರಿಹೋಗದಂತೆ ಅಥವಾ ಮತ್ತೆ ಕೊನರುವಂತೆ ವಿಪುಲ ಕಾರ್ಯಕ್ರಮಗಳನ್ನು ಯೋಜಿಸುತ್ತದೆ. ವಿವಿಧ ಕಾರ್ಯಾಗಾರ ನಡೆಸುತ್ತ ಇಂತಹ ಮಂದಿಯೊಂದಿಗೆ ಬೆರೆಯಲು ಒಲ್ಲೆನೆನುವ ಜನರ ಮನೋಭಾವವನ್ನೂ ನಿಧಾನವಾಗಿ ಬದಲಿಸುತ್ತಿದೆ. ಅದೇನು ಸುಲಭವಲ್ಲವಷ್ಟೆ? ಒಮ್ಮೆ ಅದು ವಿದ್ಯಾರ್ಥಿನಿಯರೊಂದಿಗೆ ಸಂವಾದ ನಡೆಸಲು ಒಂದು ಕಾಲೇಜಿನ ಪ್ರಿನ್ಸಿಪಾಲೆಯನ್ನು ಕೋರಿದಾಗ ಅವರು ಸೀದಾ ಬಾಗಿಲು ತೋರಿಸಿದರಂತೆ. `ನಮ್ಮ ವಿದ್ಯಾರ್ಥಿನಿಯರು ವಿವಾಹ ವಿಮುಖರಾಗುವ ಅಪಾಯವಿದೆ, ನಮಗೆ ಹೀರೋಗಳು ಬೇಕು, ಸಂತ್ರಸ್ತರಲ್ಲ~ ಎಂದರಂತೆ. ಕಾಲೇಜಿನ ಉಪನ್ಯಾಸಕರ ಪಡೆಯೇ `ಪಲಾಶ್~ ಪರ ನಿಂತರೂ!

ಆದರೆ ಇಂತಹ ನಿರಾಸೆಗಳ ಜೊತೆಗೆ ಮುಂಬಯಿಯ ಪ್ರಸಿದ್ಧ ಸಪ್ನಾ ಭವನಾನಿ ಬ್ಯೂಟಿಸೆಲೂನ್ ತನ್ನ `ಬ್ರಾಂಡ್ ಅಂಬಾಸಡರ್~ ಆಗಿ ಶಿರೀನ್‌ಳನ್ನು ಆಯ್ಕೆ ಮಾಡಿಕೊಂಡದ್ದನ್ನೂ ಅಗತ್ಯ ನೆನೆಯಬೇಕಲ್ಲವೆ.
*
ಮನೆ ಮತ್ತು ಶಾಲೆಯ ನಡುವಿನ ಕಾಡುದಾರಿ, ಕತ್ತಲದಾರಿ, ಹಗಲುಹೊತ್ತಿನ ನಿರ್ಜನ ದಾರಿ, ಒಂಟಿ ಓಡಾಟದ ದಾರಿ, ಒಂಟಿ ಜೀವನದ ಹಾದಿ- ಎಲ್ಲವೂ ಒಂದಿಷ್ಟೂ ಬದಲಾಗದೆ ಇಂದಿಗೂ ಮಹಿಳೆಯ ಸತತ ಭಯದ ದಾರಿಗಳೇ ಆಗಿವೆ. ಮೂರ್ತ ದೇಹದ ಮೂಲಕ ಅಮೂರ್ತ ಮನಸ್ಸಿನ ಮೇಲೆ ಮಾಡುವ ಆಕ್ರಮಣಗಳು, ಕುರಿತಾಗಿ ಅವಳ ಚೇತನವನ್ನೇ ಹನನ ಮಾಡುವ ಪ್ರಯತ್ನಗಳು ದಿನನಿತ್ಯದ ದಾರುಣ ಸುದ್ದಿಗಳಾಗಿ ಪತ್ರಿಕೆಗಳಲ್ಲಿ ಪ್ರತ್ಯೇಕವಾಗಿ ಸೇರಿಹೋಗುತ್ತವೆ. ಕಾನೂನುಗಳು ಎಷ್ಟೇ ಸುಧಾರಿಸಿದಂತೆ, ಮಹಿಳಾಪರವಾಗಿರುವಂತೆ ಕಂಡರೂ ಅದು ಕಾಣುವುದು ಮಾತ್ರ. ಇನ್ನು ಅವುಗಳ ನಿರ್ವಚನಗಳೋ; ಎಷ್ಟೋ ಬಾರಿ ಎತ್ತಿದವರ ಕೈಗೂಸುಗಳು. ಹೇಗೆ ಅಂದರೆ ಹಾಗೆ ತಿರುಗುವ ತಿರುಗುಕುರ್ಚಿಗಳು. ಬುಗುರಿಯಂತೆ ತಿರುಗುಣದ ನುಡಿಗಟ್ಟುಗಳು. ಅವು ಅಡಗಿರುವುದೇ ಶಬ್ದಗಳೆಂಬೋ ಕೋಶದಲ್ಲಿ. ಅವನ್ನು ಹೇಗೆ ಬೇಕಾದರೂ ತಿರುಚುವ ವಿದ್ಯೆಯೂ ಅವುಗಳ ಜೊತೆಗೇ ಹೊಳೆಯುತ್ತದಷ್ಟೇ? ಹೇಳಿಕೇಳಿ ಶಬ್ದಕೋಶಕ್ಕೆ ಯಾವತ್ತೂ ಒಂದೇ ಬಾಗಿಲಲ್ಲ, ತೆರೆವ ಚಾಲಾಕು ಬಲ್ಲವರ ಮುಷ್ಟಿಗೆ ಅದು ಸಿಕ್ಕಿತೆಂದರೆ ಇಲ್ಲಿ ತೆರೆದರೆ ಈ ಅರ್ಥ ಅಲ್ಲಿ ತೆರೆದರೆ ಆ ಅರ್ಥವೆಂಬ ಬಹ್ವರ್ಥಗಳ ಭಂಡಾರವದು. ಹೀಗಾಗಿ ತ್ರಸ್ತ ಮಹಿಳಾ ಬದುಕು ನರಳುತ್ತಲೇ ಇರುತ್ತದೆ. ಉತ್ತರಿಸಿದಷ್ಟೂ ಮತ್ತೆ ಅವೇ ಪ್ರಶ್ನೆಗಳು, ಅವೇ ತನಿಖೆಗಳು, ಅಂತ್ಯದಲ್ಲಿ ತಾನೇ ಅಪರಾಧಿಯೋ ಹೇಗೆ? ಎಂದು ಆಕೆಗನಿಸಬೇಕು, ತನಿಖಾಕ್ರಮಕ್ಕೆ ಹೆದರಿ ಅವಳ ಬಾಯಿ ಮಾತು ಕಳೆಯಬೇಕು ಹಾಗೆ... ಯಾರಿಂದ ಏನಾಯಿತು? ಬಲಾತ್ಕಾರವೆ? ಹೇಗಾಯಿತು? ಮತ್ತೆ? ಇನ್ನೂ ವಿವರ ಹೇಳಮ್ಮ- ಮಹಿಳೆಗಾಗಿ ಮಹಿಳೆಯರಿಂದ ಕಾನೂನುರಚನೆಯ ಆಶಯ ಚಿಗುರೊಡೆಯುವುದು ಇಂಥ ಕಾರಣಗಳಿಂದಲೇ. ಇನ್ನು ಪ್ರಕರಣಗಳನ್ನು ಕೇಳಿ ತಮ್ಮದೇ ತೀರ್ಮಾನ ಹೇಳುವವರು ಸೃಷ್ಟಿಸುವ ಸಾಮಾಜಿಕ, ವಾಚಿಕ ಹಿಂಸೆಯ ಹಾಗೂ ಆಕ್ರಮಣದ ಪುಟಗಳೋ! ಎಲ್ಲ ಬಿಟ್ಟು ಆ್ಯಸಿಡ್ ಎರಚಬೇಕಾದರೆ ಪಾಪ, ಅವನಿಗೆ ಅವಳು ಎಂತಹ ಸಿಟ್ಟು ಬರಿಸಿರಬಹುದು? ಏನೋ ಅಲ್ಲದ್ದೇ ನಡೆದಿದೆ, ಹೊರಗೆ ಬಂದಿಲ್ಲ, ಇಲ್ಲವಾದರೆ ಸುಟ್ಟು ಬಿಡುವಷ್ಟು ಸಿಟ್ಟು ಬರಲು ಸಾಧ್ಯವೇ? ಸುಖಾಸುಮ್ಮನೆ ಅಷ್ಟು ಅತಿಗೆ ಹೋಗುವ ಪ್ರಮೇಯ ಬರುವುದೆ?- ಎಂಬಲ್ಲಿವರೆಗೂ-

ಎಂದರೆ, ಅರ್ಥವೇನು? ಪ್ರಮೇಯ ಬಂತು ಎಂದರೆ ಹಾಗೆ ಮಾಡುವುದು ಸರಿಯೆಂತಲೆ? ಆಧುನಿಕತೆಯ ವ್ಯಾಖ್ಯಾನದ ಕರಾಳ ಮಗ್ಗುಲುಗಳಿವು, ಇಂಥ ತೀರ್ಮಾನಗಳು.
... ಆಧುನಿಕ ಎನ್ನಲೇಕೆ?

ಕಾಲವೆಂಬುದು ಅಂದಿಂದಲೂ ನಡೆದು ಬಂದ ದಾರಿಯೇ ಹೀಗಿದೆ. ನಮ್ಮ ಪ್ರಪ್ರಥಮ ಕಾವ್ಯದಲ್ಲೆೀ ಅದರ ಶುರುವಾತು ಆಗಿಬಿಟ್ಟಿದೆ. ಶೂರ್ಪನಖಿಯ ಮೂಗಿನ ಕತೆ ಕೇಳುವಾಗೆಲ್ಲ ಅನಿಸುವುದು- ಸರೀಯಾಯಿತು, ಆಕೆಗೆ ತಕ್ಕ ಶಾಸ್ತಿಯಾಯಿತು ಅಂತಲೇ. ಕತ್ತರಿಸಿದ ಮೊಂಡು ಮೂಗಿನ ಅವಳ ರಾಕ್ಷಸೀರೂಪ ಕಂಡಂತೆಲ್ಲ ನಮಗೆ ಏನು ನಗೆ, ನಗೆಯೋ ನಗೆ. ಎಲ್ಲಿಂದ ಬಂತು ಆ ನಗೆ? ಹೇಗೆ? ಕ್ರೌರ್ಯ ನಮಗೇ ತಿಳಿಯದ ಹಾಗೆ ನಮ್ಮಳಗೇ ಬಾಲ್ಯದಿಂದಲೇ ಎಂತು ಇದ್ದು ಬಿಡುತ್ತದೆ! ನಿರೂಪಣೆಯ ಕ್ರಮದಲ್ಲಿಯೇ ಒಳನುಗ್ಗಿ; ಎಂದಾದರೊಂದು ದಿನ `ಅದೃಷ್ಟವಶಾತ್~ ಎಚ್ಚರಾಗಿ ನಾವಾಗಿ ಕಿತ್ತು ಬಿಸುಡುವವರೆಗೂ ಬೆಚ್ಚಗೆ, ಕ್ರೌರ್ಯವೆಂದೇ ಅನಿಸದಂತೆ! ಪುರಾಣ ಪುಣ್ಯ ಕಥಾವಾಚನ-ಶ್ರವಣ ಎಂದರೆ ಹೆಣ್ಣಿನ ಮನಸ್ಸನ್ನು ಇರಿದು, ಆತ್ಮವಿಶ್ವಾಸವನ್ನೇ ಘಾಸಿಗೊಳಿಸಿ ಅಧೀನಗೊಳಿಸಲು ಅವಳ ರೂಪ ಕೇಶ ಉಡುಗೆ ಚರಿತ್ರ ಶೀಲಗಳು ಧರ್ಮಾರ್ಥ ಒದಗಿ ಬಿಡುವ, ಅವಳ `ಪಾವಿತ್ರ್ಯ ಪರೀಕ್ಷೆ~ಯ ವಿವಿಧ ಕಥಾಪ್ರಸಂಗಗಳ ವಾಚನವೂ ಶ್ರವಣವೂ ಹೌದಷ್ಟೆ?
ಯುಗಧರ್ಮಗಳೇ ಹಾಗೆ ಎನ್ನುತ್ತಾರೆ.

ಧರೆಯನ್ನೇ ಹೊತ್ತಿಸಿ ಆ ಉರಿಯಲ್ಲಿ ಮೈಕಾಯಿಸುವಂಥವು. ಧರೆ ಹೊತ್ತಿ ಉರಿದರೆ ಉರಿಸಿದವರೂ ಉರಿದುಹೋಗುತ್ತಾರೆ ಎಂಬುದು ಮತ್ತೆಮತ್ತೆ ದೃಢವಾದರೂ ಅದು ವಿಸ್ಮರಣೆಗೆ ಸಂದು ಮತ್ತೆಮತ್ತೆ ಹೊಸವೇಷ ಪರಿಕರದಲ್ಲಿ ಮರುಕೊಳಿಸುವ ಕ್ರಮ.
`ನಡೆದು ಬಂದ ದಾರಿಯನ್ನು ತಿರುಗಿ ನೋಡಬೇಡ~ವೆಂದರೂ ನಿತ್ಯ ಏಳುವ ಪ್ರಸಂಗಗಳು ಆ ದಾರಿ ಮಸಳಿಸದ ಹಾಗೆ ಸ್ಮೃತಿಪಟಲದಲ್ಲಿ ತಿರುತಿರುಗಿ ಅಚ್ಚೊತ್ತುತ್ತಲೇ ಇರುತ್ತವೆ. 
*
ಶಿರೀನ್‌ಳ ಪತಿ ಪೋಲಿಸರ ಕೈಗೆ ಸಿಗದೆ ಗಲ್ಫ್‌ದೇಶಕ್ಕೆ ಓಡಿಹೋಗಿ ಅಲ್ಲಿ ಇನ್ನೊಂದು ಮದುವೆಯಾಗಿ ಮಕ್ಕಳೊಂದಿಗೆ ಸುಖವಾಗಿದ್ದಾನೆ. ಒಳ್ಳೆಯ ಗಂಡ ಬೇಕು ತನಗೆ, ಮಕ್ಕಳು ಬೇಕು ಎಂದು ಈಗಲೂ ತೀವ್ರ ಹಂಬಲಿಸುವ ಮೂವತ್ತೈದರ ಹರಯದ ಶಿರೀನ್ ಈ ವ್ಯಂಗ್ಯ ನೆನೆದು ರೈಲಿನಲ್ಲಿ ಸಂಚರಿಸುವಾಗ ತನ್ನನ್ನು ನೋಡಿ ಚಿಟಾರನೆ ಚೀರುವ ಮಕ್ಕಳು, ಅವರನ್ನು ಸೆಳೆದು ಸೆರಗಲ್ಲಿ ಅವರ ಕಣ್ಮುಚ್ಚಿ ತಾವು ಮುಖತಿರುಗಿಸಿ ನಿಲ್ಲುವ  ತಾಯಂದಿರ ಕುರಿತು ಹೇಳುತ್ತ ನಗೆಯಲ್ಲದ ನಗೆಯಲ್ಲಿ ನನ್ನಂಥವರನ್ನು ಮದುವೆಯಾಗುವವ ಇರುವನೆ ಈ ಜಗತ್ತಿನಲ್ಲಿ? - ಪ್ರಶ್ನಿಸುತಿದ್ದಾಳೆ.
*
(ನವೆಂಬರ್ ದಿನಾಂಕ 29ರಂದು ಮಹಿಳಾಹಿಂಸೆಯ ವಿರುದ್ಧ ನಡೆದ ರಾಷ್ಟ್ರೀಯ ಸಮಾವೇಶದಲ್ಲಿ ಆ್ಯಸಿಡ್ ದಾಳಿ ಕುರಿತಂತೆ ಮಾಡಿದ ಉಪನ್ಯಾಸದ ಸಾರಾಂಶ)

`ಹರಿವ ನೀರು~ ಅಂಕಣ ಇಲ್ಲಿಗೆ ಮುಗಿಸುವೆ. ಪ್ರೀತಿಯಿಂದ ಓದಿದ, ಪ್ರತಿಕ್ರಿಯಿಸಿದ ಎಲ್ಲರಿಗೂ ಹೃತ್ಪೂರ್ವಕ ವಂದನೆಗಳು
- ವೈದೇಹಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT