ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್‌ಕುಮಾರ್ ಕಾಲ್‌ಷೀಟ್ ಸಿಗಲೇ ಇಲ್ಲ...

Last Updated 14 ಜುಲೈ 2012, 19:30 IST
ಅಕ್ಷರ ಗಾತ್ರ

ಮೇಯರ್ ಮುತ್ತಣ್ಣ ಚಿತ್ರವನ್ನು ನಾನು ಮಾರಿದ್ದಕ್ಕೆ ಹಲವು ಕಾರಣಗಳಿದ್ದವು. ಅಣ್ಣನ ಮುಂದೆ ಐವತ್ತು ಸಾವಿರ ರೂಪಾಯಿ ಲಾಭವನ್ನು ಇಡಬಹುದಲ್ಲ ಎನ್ನುವ ಆಸೆಯಿಂದ ನಾನು ಬಲು ಬೇಗ ಅಷ್ಟೇ ಲಾಭಕ್ಕೆ ಚಿತ್ರವನ್ನು ಮಾರಿ ಬಿಡುವ ತೀರ್ಮಾನಕ್ಕೆ ಬಂದಿದ್ದೆ.
ನಾನು ಏನೋ ಸಾಧಿಸಿದೆ ಎಂಬ ಭಾವದಲ್ಲಿ ಮದಣ್ಣನ ಎದುರು ಆ ಐವತ್ತು ಸಾವಿರ ರೂಪಾಯಿ ಲಾಭವನ್ನು ಇಟ್ಟೆ. ಅವನು ಸಂತೋಷಪಟ್ಟ. ಮೈಸೂರಿನ ರಾಜಕಮಲ್ ಟಾಕೀಸಿನಲ್ಲಿ ನನ್ನ ಇನ್ನೊಬ್ಬ ಅಣ್ಣನಾದ ನಾಗಣ್ಣನ ಜೊತೆ ಅವನು ಆ ಸಿನಿಮಾ ನೋಡಿದ್ದ.
 
`ನನ್ನ ತಮ್ಮ ಕಾಡಿನಲ್ಲಿ ಬಿಟ್ಟರೂ ಬದುಕುತ್ತಾನೆ~ ಎಂದು ಆಗ ಅವನು ಹೇಳಿದ್ದನಂತೆ. ನನ್ನ ಸಿನಿಮಾ ನನ್ನ ಇಬ್ಬರೂ ಅಣ್ಣಂದಿರಿಗೆ ಇಷ್ಟವಾಗಿತ್ತು. ಆ ವಿಷಯ ಗೊತ್ತಾದ ಮೇಲೆ ನನ್ನ ಹೃದಯ ತುಂಬಿಬಂದಿತ್ತು.

ಆ ಸಂತೋಷದ ಸಂದರ್ಭದಲ್ಲೇ ನನ್ನ ಆ ಅಣ್ಣ ಏಳು ಸಾವಿರ ರೂಪಾಯಿ ಕೊಟ್ಟು ನನಗೆ ಫಿಯೆಟ್ ಕಾರು ಕೊಡಿಸಿದ. ಅದು ನನ್ನ ಒಡೆತನದ ಮೊದಲ ಕಾರು. ಆಮೇಲೆ ಚಿತ್ರೋದ್ಯಮದಲ್ಲಿ ಅನೇಕ ಕಾರುಗಳನ್ನು ಹತ್ತಿದ್ದೇನೆ, ಇಳಿದಿದ್ದೇನೆ. 1978ರಲ್ಲಿ 12 ಲಕ್ಷ ರೂಪಾಯಿ ಕೊಟ್ಟು ಮದ್ರಾಸ್ ಹಾರ್ಬರ್‌ನಲ್ಲಿ ಇಂಪೋರ್ಟೆಡ್ ಹೋಂಡಾ ಕಾರನ್ನು ಇಳಿಸಿದೆ. ಬಹುಶಃ ಕನ್ನಡದ ಹಾಸ್ಯನಟರಲ್ಲಿ ಇಂಪೋರ್ಟೆಡ್ ಕಾರು ಕೊಂಡ ಮೊದಲ ನಟ ನಾನೇ ಇರಬೇಕು. ಇಂಥ ಖುಷಿ, ಹೆಮ್ಮೆಗಳು ನಮ್ಮ ನೋವನ್ನು ಮರೆಸುವಂಥವು.

`ಮೇಯರ್ ಮುತ್ತಣ್ಣ~ ಚಿತ್ರವನ್ನು ಬಿಡುಗಡೆಗೆ ಮೊದಲೇ ಮದ್ರಾಸ್ ಫಿಲ್ಮ್ ಚೇಂಬರ್ ಥಿಯೇಟರ್‌ನಲ್ಲಿ ಕೆಲವು ನಿರ್ದೇಶಕರಿಗೂ ತೋರಿಸಿದ್ದೆವು. ಕೆಲವರು `ಇದು ಈ ಸಿನಿಮಾಗಿಂತ 50 ಪರ್ಸೆಂಟ್ ಇದೆ, ಆ ಸಿನಿಮಾಗಿಂತ 60 ಪರ್ಸೆಂಟ್ ಇದೆ~ ಅಂತ ಮಾತಾಡಿಕೊಂಡಿದ್ದು ನನ್ನ ಕಿವಿಮೇಲೆ ಬಿತ್ತು.

ಆದರೆ ಆ ಸಿನಿಮಾ ಅವರು ಹೋಲಿಕೆ ಕೊಟ್ಟಿದ್ದ ಚಿತ್ರಗಳಿಗಿಂತ 100 ಪರ್ಸೆಂಟ್ ಚೆನ್ನಾಗಿ ಓಡಿತು. ಸಿದ್ದಲಿಂಗಯ್ಯ ದೊಡ್ಡ ನಿರ್ದೇಶಕನಾದ. ಅವನಿಗೆ ಫೈಲೇ ಹಿಡಿಯೋಕೆ ಬರುವುದಿಲ್ಲ ಎಂದು ಗೇಲಿ ಮಾಡಿದ್ದವರೆಲ್ಲಾ ಬಾಯಿ ಮುಚ್ಚಿಕೊಂಡರು.

ಕನ್ನಡ ಚಿತ್ರರಂಗಕ್ಕೆ ಅಂಥ ಒಬ್ಬ ನಿರ್ದೇಶಕನನ್ನು ಕೊಟ್ಟ ಹೆಮ್ಮೆ ನನಗೆ ಈಗಲೂ ಇದೆ. ಸಿದ್ದಲಿಂಗಯ್ಯ ಎಂಥ ಸಮರ್ಥ ಎಂಬುದು ಆ ಕಾಲದಲ್ಲಿ ಅನಾವರಣಗೊಂಡಿತು.
ನಟನಾಗಿ ನನ್ನ, ರಾಜ್‌ಕುಮಾರ್ ಜೋಡಿ ದೇವರಾಣೆಗೂ ಅತ್ಯಂತ ಜನಪ್ರಿಯವಾಗಿತ್ತು.

ಮೊನ್ನೆ ಮೊನ್ನೆ ಎಂಬತ್ತು ವರ್ಷದ ಮುದುಕಿಯೊಬ್ಬರು ನನ್ನನ್ನು ನೋಡಿ, `ನಿಂದು, ರಾಜ್‌ಕುಮಾರ್‌ದು ಜೋಡಿ ಎಷ್ಟು ಪಸಂದಾಗಿತ್ತು. ಆಮ್ಯಾಕೆ ಯಾಕೆ ಇಬ್ಬರೂ ಜತೆಯಾಗಿ ಪಾರ್ಟ್ ಮಾಡ್ಲಿಲ್ಲ~ ಅಂತ ಕೇಳಿದರು. ಆಗ ನನಗೆ ಏನು ಉತ್ತರ ಕೊಡಬೇಕೆಂದು ಗೊತ್ತಾಗಲಿಲ್ಲ.

ನನ್ನ, ರಾಜ್‌ಕುಮಾರ್ ಜೋಡಿಯನ್ನು ದೂರ ಮಾಡಿದವರು ಯಾರೋ? ಯಾಕೋ? ನನಗೆ ಈಗಲೂ ಗೊತ್ತಿಲ್ಲ. ಆ ಪ್ರಶ್ನೆಗಳೆಲ್ಲಾ ಪ್ರಶ್ನೆಗಳಾಗಿಯೇ ಉಳಿದಿವೆ. ನಮ್ಮಿಬ್ಬರ ಜೋಡಿ ಇನ್ನಷ್ಟು ಕಾಲ ಮುಂದುವರಿದಿದ್ದರೆ ಕನ್ನಡ ಚಿತ್ರರಂಗದಲ್ಲೇ ಅತ್ಯಂತ ದೊಡ್ಡ ದಾಖಲೆಯಾಗುತ್ತಿತ್ತೇನೋ? ಅಂಥ ಮಹಾನ್‌ನಟನ ಜೊತೆಗೆ ದೀರ್ಘ ಕಾಲ ನಟಿಸಲು ಆಗಲಿಲ್ಲ ಎಂಬ ನೋವು ನನಗೆ ಈಗಲೂ ಇದೆ.

`ಲಗ್ನಪತ್ರಿಕೆ~, `ತಾಯಿ ದೇವರು~, `ಸಿಐಡಿ ರಾಜಣ್ಣ~, `ಮಿಸ್ಟರ್ ರಾಜ್‌ಕುಮಾರ್~, `ಬಾಳು ಬೆಳಗಿತು~, `ಭಕ್ತ ಕುಂಬಾರ~, `ಬಂಗಾರದ ಮನುಷ್ಯ~ ಹೀಗೆ ಸುಮಾರು ಚಿತ್ರಗಳಲ್ಲಿ ನಮ್ಮ ಜೋಡಿ ಹೆಸರಾಗಿತ್ತು. ನಮ್ಮಿಬ್ಬರ ಕಾಂಬಿನೇಷನ್ ಬಗ್ಗೆ ಚಿತ್ರೋದ್ಯಮದ ವಿವಿಧ ವಲಯಗಳಲ್ಲೂ ಚರ್ಚೆಗಳಾಗುತ್ತಿದ್ದವು. ನಮ್ಮ ಜೋಡಿ ಕ್ಲಿಕ್ ಆಗುತ್ತದೆಂಬುದು ಪದೇಪದೇ ಸಾಬೀತಾಗಿತ್ತು.

ರಾಜ್‌ಕುಮಾರ್ ವಿಷಯ ಮಾತನಾಡುತ್ತಾ ಕಲ್ಯಾಣ್‌ಕುಮಾರ್ ಬಗೆಗೂ ಮಾತನಾಡಲೇಬೇಕು. ಅವರ ಜತೆಯಲ್ಲೂ ನಾನು ಅನೇಕ ಚಿತ್ರಗಳನ್ನು ಮಾಡಿದೆ. ಅವರ ಸ್ವಂತ ಚಿತ್ರಗಳಲ್ಲೂ ನನಗೆ ಪಾತ್ರ ಮಾಡುವ ಅವಕಾಶಗಳು ಸಿಕ್ಕವು. ನನಗೆ ಚಿತ್ರ ಮಾಡುವುದನ್ನು ಬಿಟ್ಟರೆ ಬೇರೇನೂ ಆಕರ್ಷಣೆಗಳೇ ಇರಲಿಲ್ಲ.

ಕಲ್ಯಾಣ್‌ಕುಮಾರ್ ಅಭಿನಯದ `ನಟಶೇಖರ~ ಚಿತ್ರದಿಂದ ಸ್ಫೂರ್ತಿ ಪಡೆದಿದ್ದವನು ನಾನು. ನಾನು ಚಿತ್ರರಂಗದಲ್ಲಿ ಒಂದಿಷ್ಟು ವರ್ಷ ಅನುಭವ ಪಡೆದುಕೊಂಡ ಮೇಲೆ ಬೇರೆ ವ್ಯಾಪಾರ ಮಾಡುವಂತೆ ಅನೇಕರು ಸಲಹೆ ಕೊಟ್ಟರು. ನಾನು ಆ ಸಲಹೆಗಳಿಗೆ ಕಿವಿಗೊಡಲಿಲ್ಲ. ಇದ್ದ ದೊಡ್ಡ ವ್ಯಾಪಾರವನ್ನೇ ಬಿಟ್ಟು ಚಿತ್ರರಂಗಕ್ಕೆ ಬಂದವನು ನಾನು. ನನಗ್ಯಾಕೆ ಬೇರೆ ವ್ಯಾಪಾರ ಎಂಬುದು ನನ್ನ ಧೋರಣೆಯಾಗಿತ್ತು.

ಕನ್ನಡ ಚಿತ್ರರಂಗ ಕಂಡ ಅತ್ಯಂತ ಮುದ್ದಾದ ನಟರಲ್ಲಿ ಕಲ್ಯಾಣ್‌ಕುಮಾರ್ ಒಬ್ಬರು. ಅವರು ಮಾಡಿದ `ಬದುಕುವ ದಾರಿ~, `ಮಾವನ ಮಗಳು~, `ಮನೆ ಅಳಿಯ~ ಚಿತ್ರಗಳು ಸಿಲ್ವರ್ ಜೂಬಿಲಿ ಸಂಭ್ರಮ ಕಂಡಿದ್ದವು. ಆ ಮೂರೂ ಚಿತ್ರಗಳ ನಾಯಕಿ ಜಯಲಲಿತಾ. ಕನ್ನಡದಲ್ಲಿ ಜಯಲಲಿತಾ ಮತ್ಯಾವ ನಾಯಕರ ಜೊತೆಗೂ ಅಭಿನಯಿಸಲೇ ಇಲ್ಲ ಎಂಬುದು ವಿಶೇಷ. ಸಾಕಷ್ಟು ಹೆಸರು ಮಾಡಿದ್ದ ಅನಂತಾಚಾರ್ ಆ ಮೂರೂ ಚಿತ್ರಗಳನ್ನು ನಿರ್ದೇಶಿಸಿದ್ದರು.

ಕಲ್ಯಾಣ್‌ಕುಮಾರ್ ಆ ಕಾಲದಲ್ಲಿ ಕನ್ನಡ ನಟನಾಗಿದ್ದರೂ ತಮಿಳು ಚಿತ್ರಗಳ್ಲ್ಲಲಿ ಪಾತ್ರ ಮಾಡಿ ಸಾಕಷ್ಟು ಹೆಸರು ಮಾಡಿದರು. ಅವರ ಅಭಿನಯದ ಮೊದಲ ತಮಿಳು ಚಿತ್ರ `ನೆಂಜಿಲ್ ಒರು ಆಲಯಂ~. ಅದು ಅತ್ಯಂತ ಯಶಸ್ವಿ ಚಿತ್ರ. ಆ ಚಿತ್ರ ಬಿಡುಗಡೆಯಾದ ಒಂದೇ ವಾರದಲ್ಲಿ ಕಲ್ಯಾಣ್‌ಕುಮಾರ್ ಹದಿನೆಂಟು ತಮಿಳು ಚಿತ್ರಗಳಿಗೆ ಸಹಿ ಹಾಕಿದರು ಎಂದು ತಮಿಳುನಾಡಿನಲ್ಲಿ ಆಗ ದೊಡ್ಡ ಸುದ್ದಿಯಾಗಿತ್ತು.

ಮದ್ರಾಸ್‌ನ ಸಿಬಿಐ ಕಾಲೋನಿಯಲ್ಲಿದ್ದ ಅವರ ಮನೆಯ ಎದುರು ನೂರಾರು ಕಾರುಗಳು ನಿಲ್ಲುತ್ತಿದ್ದವು. ಹತ್ತಾರು ನಿರ್ಮಾಪಕರು ಅವರ ಕಾಲ್‌ಷೀಟ್‌ಗೆ ಕಾಯುತ್ತಿದ್ದರು. ಆ ಸಂಭ್ರಮದ ದಿನಗಳನ್ನು ನಾನು ಕೂಡ ಹತ್ತಿರದಿಂದ ಕಂಡಿದ್ದೇನೆ. ಕನ್ನಡದ ನಟನೊಬ್ಬನಿಗೆ ತಮಿಳಿನಲ್ಲಿ ಆಗ ಆ ಪರಿಯಾದ ಬೇಡಿಕೆ ಇದ್ದಿದ್ದು ಕೂಡ ವಿಶೇಷ ಸಂಗತಿ.

ನನಗೆ ಹೃದಯದ ಬೈಪಾಸ್ ಸರ್ಜರಿಯಾದಾಗ ಮೊದಲು ನೋಡಲು ಬಂದ ಬೆರಳೆಣಿಕೆಯಷ್ಟು ಕಲಾವಿದರಲ್ಲಿ ಕಲ್ಯಾಣ್‌ಕುಮಾರ್, ಬಿ.ಸರೋಜಾದೇವಿ ಮೊದಲಿಗರು. ಸರೋಜಾದೇವಿಯವರಂತೂ ನನ್ನ ವಿಳಾಸ ಹುಡುಕಿಕೊಂಡು ಬಂದು ನನಗೂ, ಅಂಬುಜಾಗೂ ಗಂಟೆಗಟ್ಟಲೆ ಧೈರ್ಯ ಹೇಳಿ ಹೋಗಿದ್ದರು.

ಕಲ್ಯಾಣ್‌ಕುಮಾರ್ ಕೂಡ ತುಂಬಾ ಪ್ರೀತಿಯಿಂದ ಮಾತನಾಡಿದ್ದರು. ಮಾನವೀಯತೆ ಅಂದರೆ ಅದು. `ಏನಾದರೂ ಆಗು ಮೊದಲು ಮಾನವನಾಗು~ ಎಂಬ ಮಾತು ನನ್ನ ಮನದಲ್ಲಿ ಆಗ ಅನುರಣಿಸುತ್ತಿತ್ತು. ನಟರನ್ನು ಸ್ಮರಿಸುವಾಗ ಮಾನವೀಯತೆ ಇರುವವರು ಹೀಗೆ ನೆನಪಾಗುತ್ತಲೇ ಇರುತ್ತಾರೆ.

ನಾನು ಸುಮಾರು ನಾಯಕರನ್ನಿಟ್ಟು ಸಿನಿಮಾಗಳನ್ನು ಮಾಡಿದ್ದೆ. ಯಾರೂ ಆಗ ನನಗಿದ್ದಾರೆ ಅನ್ನಿಸಲಿಲ್ಲ. ಇದು ಚಿತ್ರರಂಗದ ಬಣ್ಣದ ಬದುಕು. ಪ್ರತಿನಿತ್ಯ ಪಾತ್ರ ಮಾಡುವವರು ನಾವು. ಎಲ್ಲರೂ ನಮ್ಮವರೇ ಎಂದು ತಿಳಿದಿದ್ದ ನನಗೆ ಬೈಪಾಸ್ ಸರ್ಜರಿಯಾದಾಗ ಅವರೆಲ್ಲಾ ದೂರದಿಂದಲೇ `ಪಾಸ್ ಪಾಸ್~ ಆದಂತೆ ಭಾಸವಾಯಿತು.
 
ಒಟ್ಟಾಗಿ ಕೆಲಸ ಮಾಡಿ ಬಣ್ಣದ ಬದುಕಿನಲ್ಲಿ ಏನೆಲ್ಲಾ ಕಾಣುವ ಜನರಿಗೆ ಮಾನವೀಯತೆ ಯಾಕೆ ಇರುವುದಿಲ್ಲ ಎಂಬ ಪ್ರಶ್ನೆ ನನ್ನನ್ನು ಕಾಡುತ್ತಲೇ ಇರುತ್ತದೆ.
ನನ್ನ ಜಮಾನದಲ್ಲಿ ಬಹುತೇಕ ನಾಯಕನಟರ ಜೊತೆ ನಾನು ನಟಿಸಿದೆ.

ರಾಜ್‌ಕುಮಾರ್, ಕಲ್ಯಾಣ್‌ಕುಮಾರ್, ಉದಯ್‌ಕುಮಾರ್, ಅರುಣ್‌ಕುಮಾರ್, ಸೂರ್ಯಕುಮಾರ್, ಶ್ರೀನಾಥ್, ರಾಜೇಶ್, ವಿಷ್ಣುವರ್ಧನ್, ಗಂಗಾಧರ್, ಶಂಕರ್‌ನಾಗ್, ಅನಂತನಾಗ್, ಅಂಬರೀಷ್, ರಜನೀಕಾಂತ್ ಹೀಗೆ. ನಾನೇ ನಾಯಕನಾಗಿ ಬೇರೆ ಕಂಪೆನಿಗಳ ಚಿತ್ರಗಳಲ್ಲೂ ಅಭಿನಯಿಸಿದೆ. ಆದರೆ ಕ್ಲಿಕ್ ಆಗಿದ್ದು ಮಾತ್ರ ಇಬ್ಬರ ಜೊತೆ. ಒಬ್ಬರು-ರಾಜ್‌ಕುಮಾರ್. ಇನ್ನೊಬ್ಬರು- ವಿಷ್ಣುವರ್ಧನ್.

`ಮೇಯರ್ ಮುತ್ತಣ್ಣ~ ಚಿತ್ರಕ್ಕೆ ಒಳ್ಳೆಯ ಪ್ರತಿಕ್ರಿಯೆ ಸಿಕ್ಕರೂ ಆಮೇಲೆ ನನ್ನ ಹಾದಿ ಸುಲಭವಾಗಿಯೇನೂ ಇರಲಿಲ್ಲ. ಮುಂದೆ ಯಾವ ಸಿನಿಮಾ ಮಾಡಬೇಕು, ಯಾರ ಕಾಲ್‌ಷೀಟ್ ಸಿಗಬಹುದು ಎಂಬೆಲ್ಲಾ ಯೋಚನೆಗಳು ನನ್ನ ತಲೆಯಲ್ಲಿ ಹುಟ್ಟಿದವು. ಆದರೆ, ರಾಜ್‌ಕುಮಾರ್ ಕಾಲ್‌ಷೀಟ್ ನನಗೆ ಮತ್ತೆ ಸಿಗಲಿಲ್ಲ. ರಾಜ್‌ಕುಮಾರ್ ಇಲ್ಲದೆಯೇ ಅವರು ಮಾಡಬೇಕಿದ್ದ ಸಿನಿಮಾ ಮಾಡುವುದು ಹೇಗೆ ಎಂಬ ಹಟ ಹುಟ್ಟಿತು.

ಮುಂದಿನ ವಾರ: ಕುಳ್ಳ ಏಜೆಂಟ್ ಮಾಡಿದ್ದೇಕೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT