ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಿಕವರಿ ಏಜೆಂಟ್‌ಕಾಟದ ತಿಂಗಳು

Last Updated 24 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ಮಾರ್ಚ್ ತಿಂಗಳಲ್ಲಿ ಖರ್ಚು ಹೆಚ್ಚು. ತೆರಿಗೆ, ಮಕ್ಕಳ ಸ್ಕೂಲ್ ಫೀಸ್, ವಿಮಾ ಪ್ರೀಮಿಯಂ ಕಟ್ಟುವುದು ಈ ತಿಂಗಳಲ್ಲೇ. ಹಾಗಾಗಿ ಕ್ರೆಡಿಟ್ ಕಾರ್ಡ್ ಸಾಲ ವಸೂಲಿ ಮಾಡಲು ಬ್ಯಾಂಕ್‌ಗಳು ಹೊರಡುವುದೂ ಇದೇ ಸಮಯದಲ್ಲಿ. ಏಜೆಂಟರು ಫೋನ್ ಮಾಡಿ, ಮನೆಗೆ ನುಗ್ಗಿ, ಹೆದರಿಸಿ ದುಡ್ಡು ಕೇಳುವ ಪ್ರಕರಣಗಳು ಈ ಸೀಸನ್‌ನಲ್ಲಿ ಹೆಚ್ಚು.

ಇವರ ಕಾಟ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡವರ ಬಗ್ಗೆ ನೀವು ಕೇಳಿರಬಹುದು. ಆದರೆ ಇಷ್ಟೆಲ್ಲ ಹೆದರುವ ಅಗತ್ಯ ಇಲ್ಲ. ಕಾರ್ಡ್ ಬಳಕೆದಾರರಿಗೆ ಕಾನೂನಿನ ರಕ್ಷಣೆ ಇರುತ್ತದೆ. ಏಜೆಂಟರ ಉಪಟಳ ಸಮರ್ಥವಾಗಿ ಎದುರಿಸಲು `ಕ್ರೆಡಿಟ್ ಕಾರ್ಡ್ ಹೋಲ್ಡರ್ಸ್ ಅಸೋಸಿಯೇಷನ್' ಎಂಬ ಸಂಸ್ಥೆ ಸಹಾಯ ಮಾಡುತ್ತದೆ.

ಸಿ.ವಿ.ಗಿಡ್ಡಪ್ಪ ಎಂಬ ವಕೀಲರು ಪ್ರಾರಂಭಿಸಿದ ಬೆಂಗಳೂರಿನ ಈ ಸಂಸ್ಥೆಯನ್ನು ಅವರ ಮಗ ನವೀನ್ ಗಿಡ್ಡಪ್ಪ ಈಗ ನಡೆಸಿಕೊಂಡು ಹೋಗುತ್ತಿದ್ದಾರೆ. ಸಾಲ ಮಾಡುವುದರ ಬಗ್ಗೆಯೇ ಅನುಮಾನವಿದ್ದ ಗಿಡ್ಡಪ್ಪನವರು ಹಲವರಿಗೆ ಸಲಹೆ, ಸಾಂತ್ವನ ನೀಡುತ್ತಿದ್ದರು. ಹೋದ ವರ್ಷ ಫೆಬ್ರುವರಿಯಲ್ಲಿ ಅವರು ತೀರಿಕೊಂಡ ಮೇಲೆ ಅವರ ಕೆಲಸ ನವೀನರ ಪ್ರಯತ್ನದಿಂದ ಮುಂದುವರೆದಿದೆ. 

ರಿಸರ್ವ್ ಬ್ಯಾಂಕ್‌ನ ಪ್ರಕಾರ ರಿಕವರಿ ಏಜೆಂಟ್ ನಿಮ್ಮ ಮನೆಗೆ ಬರುವ ಮುನ್ನ ಬ್ಯಾಂಕ್ ನಿಮಗೆ ಪತ್ರ ಬರೆದು ಆತನ ಹೆಸರು, ಫೋಟೋ ಕಳಿಸಬೇಕು. ವಸೂಲಿಗೆ ಬರುವಾಗ ಆ ಪತ್ರದ ಪ್ರತಿಯನ್ನು ಏಜೆಂಟ್ ತರಬೇಕು. ಇಂಥ ಕಾಗದ ಇಲ್ಲದಿದ್ದರೆ ನೀವು 100ಗೆ ಫೋನ್ ಮಾಡಿ ಪೊಲೀಸರಿಗೆ ದೂರು ಕೊಡಬಹುದು. ಸಾಲ ಸರಿಯಾಗಿ ತೀರಿಸಬೇಕು ಎಂಬ ಮಾತಿಗೆ ಯಾರದ್ದೂ ಆಕ್ಷೇಪವಿರುವುದಿಲ್ಲ.

ಆದರೆ, ಕ್ರೆಡಿಟ್ ಕಾರ್ಡ್ ಸಂಸ್ಥೆಗಳ ಕಳ್ಳ ಲೆಕ್ಕ, ಕಣ್ಕಟ್ಟಿಗೆ ಸಿಲುಕಿದ ಗ್ರಾಹಕ ಏನು ಮಾಡಬೇಕು? ಇದಕ್ಕೆ ಉತ್ತರ ಗಿಡ್ಡಪ್ಪನವರ ಸಂಸ್ಥೆ ಒದಗಿಸುತ್ತಿದೆ. ಗ್ರಾಹಕರು ಹೇಗೆ ಕಾನೂನಿನ ಸಹಾಯ ಪಡೆಯಬಹುದು ಎಂದು ತೋರಿಸಿಕೊಡುತ್ತಿದೆ. ಬೆಂಗಳೂರು ಮಹಾನಗರ ಪಾಲಿಕೆಯ ಕೇಂದ್ರ ಕಚೇರಿಯ ಹತ್ತಿರವಿರುವ ಸಂಸ್ಥೆಯ ಫೋನ್ ನಂಬರ್ 2212 9894. 
     
ವಾಚಾಳಿತನದ ಸಿನಿಮಾ
ಚೆನ್ನಾಗಿ ಓಡುತ್ತಿರುವ ಸಿನಿಮಾ `ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ನೀವು ನೋಡಿರಬಹುದು. ವ್ಯಾಪಾರ ಕುಂದಿ ವ್ಯಾಕುಲ ಅನುಭವಿಸುತ್ತಿರುವ ಕನ್ನಡ ಸಿನಿಮಾ ಉದ್ಯಮದವರಿಗೆ ಇದು ಮತ್ತು ಈಚೆಗೆ ಬಿಡುಗಡೆಯಾದ ಇನ್ನೊಂದೆರಡು ಚಿತ್ರಗಳು ಸಂತಸ ತಂದಿವೆ. ದೊಡ್ಡ ಸ್ಟಾರ್ ಇಲ್ಲದ, ಕಡಿಮೆ ಖರ್ಚಿನಲ್ಲಿ ತಯಾರಿಸಿದ ಈ ಚಿತ್ರದ ಸಂಭಾಷಣೆ ಪ್ರೇಕ್ಷಕರಿಗೆ ಕಚಗುಳಿ ಇಡುತ್ತಿದೆ.

ಮುಂಗಾರು ಮಳೆಯ ನಂತರ ಯೋಗರಾಜ ಭಟ್ಟರು ಒಂದು ಪೀಳಿಗೆಯ ಕನ್ನಡ ಚಿತ್ರ ನಿರ್ದೇಶಕರ ಮೇಲೆ ಎಷ್ಟು ದಟ್ಟ ಪ್ರಭಾವ ಬೀರಿದ್ದಾರೆ ಎಂದು ಅರ್ಥ ಮಾಡಿಕೊಳ್ಳಬೇಕಾದರೆ ಈ ಚಿತ್ರ ನೋಡಬೇಕು. ಅವರ ಮಾತಿನ ಮಿಂಚು ಇತರ ನಿರ್ದೇಶಕರ ಚಿತ್ರಗಳಲ್ಲಿಯೂ ಕಾಣುತ್ತಿದೆ. ತುಂಟತನ, ತಲೆಹರಟೆಯೇ `ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ' ಚಿತ್ರದ ಮುಖ್ಯ ಆಕರ್ಷಣೆ. 

ರೇಡಿಯೊ ಸಿಟಿಯಲ್ಲಿ ಕೆಲಸ ಮಾಡುವ ಆರ್‌ಜೆ ರಚನಾ ಈ ಚಿತ್ರದ ಒಂದು ಮುಖ್ಯ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರದಲ್ಲಿಯೂ ಆಕೆ ರೇಡಿಯೊ ಜಾಕಿಯೇ ಆಗಿರುವುದರಿಂದ ಅವರ ಮಾತು ಕಥೆ ಸಹಜವಾಗಿ ಮೂಡಿಬಂದಿದೆ. ರಚನಾ ರೇಡಿಯೊದಲ್ಲಿ ಮಾತಾಡುತ್ತಿದ್ದಂತೆಯೇ ಆಕೆಯ ಅಣ್ಣನ ಪ್ರೇಮ ಕಥೆ ಕೊಡಗಿನ ತೋಟವೊಂದರಲ್ಲಿ ಜರುಗುತ್ತದೆ.

ಬೆಂಗಳೂರಿನ ಖಾಸಗಿ ರೇಡಿಯೊ ವಾಹಿನಿಗಳು ಬಳಸುವ ವರಸೆ ರೇಡಿಯೊ ಕೇಳುಗರೆಲ್ಲರಿಗೂ ಗೊತ್ತಿರುತ್ತದೆ. ಇದೇ ಥರ ಪಟಪಟ ಮಾತಾಡುವ, ವಿಷಾದವನ್ನೂ ಸೇರಿಸಿ ಎಲ್ಲವನ್ನೂ ತಮಾಷೆಯಾಗಿ ಪರಿವರ್ತಿಸುವ ಮಾತುಗಾರಿಕೆ ಚಿತ್ರದ ನಾಯಕ-ನಾಯಕಿಯ ಸಂಭಾಷಣೆಯಲ್ಲಿ ಕಾಣಬಹುದು.

ಶ್ರವ್ಯ ಮಾಧ್ಯಮವಾದ ರೇಡಿಯೊದಲ್ಲೇ ಅತಿ ಎನಿಸುವ ಶೈಲಿ ದೃಶ್ಯ ಮಾಧ್ಯಮವಾದ ಸಿನಿಮಾಕ್ಕೆ ನುಸುಳಿದಾಗ ಅದರ ವಾಚಾಳಿತನ ಕಿವಿಗಲ್ಲದೆ ಕಣ್ಣಿಗೂ ರಾಚುತ್ತಿದೆ. ಸಿನಿಮಾದ ಪಾತ್ರಗಳೆಲ್ಲವೂ ಒಂದೇ ದನಿಯಲ್ಲಿ ಹೇಗೆ ಮಾತಾಡಲು ಸಾಧ್ಯ ಎಂಬ ಪ್ರಶ್ನೆ ಬಾಧಿಸುತ್ತದೆ. ಸಂಭಾಷಣೆ ಪಾತ್ರ ವಿಸ್ತರಣೆಗೆ ಅಮೂಲ್ಯ. ಹಾಗಾಗಿ ಎಲ್ಲರೂ ಅಷ್ಟೇ ತಮಾಷೆಯಾಗಿ ಮಾತಾಡಿದರೆ ಎಲ್ಲರ ಮನಸ್ಥಿತಿಯೂ ಒಂದೇ ಎಂಬಂತೆ ಭಾಸವಾಗುತ್ತದೆ.

ಮಾತು ಸ್ವಲ್ಪ ಕಡಿಮೆಯಾಗಿದ್ದಿದ್ದಿದರೆ ಪಾತ್ರಗಳು ಉಸಿರಾಡಲು, ದೃಶ್ಯಗಳು ಒಂದಿಷ್ಟು ಕಥೆ ಹೇಳಲು ಅವಕಾಶವಾಗುತ್ತಿತ್ತೇನೋ. ಯುವಜನರಿಗೆ ಕಥೆ ಇಷ್ಟವಾಗಬೇಕಾದರೆ ಮಾತು ಹೀಗೆಯೇ ಇರಬೇಕು ಎನ್ನುವ ಭಾವನೆ ಬೇರೂರಿ, ಅರ್‌ಜೆ ಮಾತುಗಾರಿಕೆಯ ಸುಳಿಯಲ್ಲಿ ಚಿತ್ರಕಥೆ ತತ್ತರಿಸುವಂತಿದೆ. ಕನ್ನಡ ಸಿನಿಮಾ ಚೆನ್ನಾಗಿ ಓಡುತ್ತಿರುವ ಸಂಭ್ರಮದಲ್ಲಿ ಅದರ ಸಂಭಾಷಣೆ ಆಯಾ ಸಂದರ್ಭ, ಪಾತ್ರಕ್ಕೆ ಅನುಗುಣವಾಗಿ ಇದ್ದರೆ ಚೆನ್ನ ಎಂಬ ಹಂಬಲದಿಂದ ಈ ಟಿಪ್ಪಣಿ.

ಕನ್ನಡ ಚಿತ್ರ `ಭಾರತ್ ಸ್ಟೋರ್ಸ್'ಗೆ ರಾಷ್ಟ್ರೀಯ ಪ್ರಶಸ್ತಿ ಬಂದಿದೆ. ಅದರ ನಿರ್ದೇಶಕರಾದ ಪಿ.ಶೇಷಾದ್ರಿ ಹೇಳುವಂತೆ, ಸುಮಾರು ರೂ.20 ರಿಂದ 30 ಲಕ್ಷ ಇದ್ದರೆ ಕನ್ನಡ ಸಿನಿಮಾ ಮಾಡಬಹುದು. ಅವರ ಹಾಗೆಯೇ `ವಾಣಿಜ್ಯ' ಎನಿಸಿಕೊಳ್ಳುವ ಸಿನಿಮಾ ನಿರ್ಮಾಪಕರೂ ಯೋಚಿಸುತ್ತಿರುವುದು ಈಚಿನ ಒಂದು ಬೆಳವಣಿಗೆ. ಹಾಲಿವುಡ್, ಬಾಲಿವುಡ್‌ಗೆ ಹೋಲಿಸಿಕೊಂಡು, ಕೋಟಿ ಕೋಟಿ ಇದ್ದರೆ ಮಾತ್ರ ಸಿನಿಮಾ ಮಾಡಲು ಸಾಧ್ಯ ಎಂಬ ಸೋಲಿನ ಧೋರಣೆ ತೊಲಗುತ್ತಿರುವುದು ಒಳ್ಳೆಯ ಸೂಚನೆ ಅಲ್ಲವೆ? 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT