ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರುಬೆಲ್ಲಾ ಪಾರ್ಟಿ

Last Updated 23 ಮಾರ್ಚ್ 2013, 19:59 IST
ಅಕ್ಷರ ಗಾತ್ರ

ಅದು 2011ರ ಡಿಸೆಂಬರ್ ತಿಂಗಳ ಮಧ್ಯಭಾಗ. `ಪ್ರಜಾವಾಣಿ'ಯ `ಸಾಪ್ತಾಹಿಕ ಪುರವಣಿ'ಗೆ ಅಂಕಣ ಬರೆಯಿರೆಂದು ಪುರವಣಿ ಬಳಗದಿಂದ ಫೋನ್ ಕರೆ ಬಂತು. ನಾನು ನಿರಾಕರಿಸಲು ಮುಂದಾಗುವ ಮೊದಲೇ ಅವರು ಒತ್ತಾಯದ ಮನವಿ ಸಲ್ಲಿಸಿ ಕರೆ ತುಂಡರಿಸಿದರು. ಸ್ವಲ್ಪ ಸಮಯಕ್ಕೆ ಡಾ. ವಿಜಯಲಕ್ಷ್ಮಿ ವಿಷಯವೊಂದರ ಕುರಿತು ಮಾತನಾಡಲು ಕರೆ ಮಾಡಿದರು. ನಾನು ಅಂಕಣದ ಕುರಿತು ಅವರಿಗೆ ತಿಳಿಸಿದೆ. ಅವರು ನನಗೆ ಪ್ರೋತ್ಸಾಹ ನೀಡಿದ್ದಲ್ಲದೆ ಶೀರ್ಷಿಕೆಯನ್ನೂ ಸೂಚಿಸಿದರು. ಹೀಗೆ `ಅಂತಃಕರಣ' 2011ರ ಜನವರಿ 1ರಂದು ಜನ್ಮತಾಳಿತು. ಕಳೆದ 15 ತಿಂಗಳಿನಿಂದಲೂ ಅಂಕಣದ ಓದುಗರು ನನ್ನ ಬಡ ರೋಗಿಗಳಿಗೆ ದೊಡ್ಡಮಟ್ಟದಲ್ಲಿ ನೆರವು ನೀಡಿದ್ದಾರೆ.

ಓದುಗರ ಅಂತಃಕರಣಕ್ಕೆ  ಕೃತಜ್ಞತೆಯೊಂದನ್ನೇ ನಾನಿಲ್ಲಿ ವ್ಯಕ್ತಪಡಿಸಲು ಸಾಧ್ಯವಾಗುವುದು. ಇಂದಿಗೂ ಶಶಿಕುಮಾರ ಜೀವಂತವಾಗಿರುವುದು (ಆರೋಗ್ಯ ತುಂಬಾ ಹದಗೆಟ್ಟಿದ್ದರೂ) ನನ್ನ ಓದುಗರಿಂದ ಪಡೆದ ಆರ್ಥಿಕ ನೆರವಿನಿಂದ. ಕ್ಯಾನ್ಸರ್ ಮಕ್ಕಳ ಚಾಚಾ ಅಂಕಣದ ಬಳಿಕ, ಅನೇಕ ಮಂದಿ ಕೆಮೊಗ್ಯಾಜೆಟ್ ಪ್ರಾಯೋಜಿಸಲು ಮುಂದೆ ಬರುತ್ತಿದ್ದಾರೆ. ಓರ್ವ ಓದುಗರು ಡಾ. ರುದ್ರ ಪ್ರಸಾದ್ ಅವರ ಮೂಲಕ `ಆಶಾ ಮೇಡಂರ ಬಡ ರೋಗಿಗಾಗಿ' ಒಂದು ಸಾವಿರ ರೂಪಾಯಿ ಕಳುಹಿಸಿದ್ದರು. `ನಮ್ಮ ಅಮೂಲ್ಯ ಸಂಪತ್ತು' ಬರಹ ಓದಿದ ಬಳಿಕ ದಾವಣಗೆರೆಯ ಖ್ಯಾತ ವೈದ್ಯ ಡಾ. ವಿಶ್ವನಾಥ್ ಹಿರಿಯರಿಗಾಗಿ ಚುಚ್ಚುಮದ್ದು ಶಿಬಿರ ಪ್ರಾರಂಭಿಸಿರುವುದು ಕೇಳಿ ಹೃದಯ ತುಂಬಿಬಂತು. ನನ್ನ ವಿದ್ಯಾರ್ಥಿಗಳ ಮೂಲಕ ಸಾಧ್ಯವಾಗುವುದಕ್ಕಿಂತ ಹೆಚ್ಚಿನ ಜನರನ್ನು ಈ ಮೂಲಕ ನಾನು ತಲುಪಿದ್ದೇನೆ ಎನಿಸುತ್ತಿದೆ. ಇತ್ತೀಚೆಗೆ ನಮ್ಮ ಓದುಗರು ಸಾಫ್ಟ್‌ವೇರ್ ಉದ್ಯೋಗಿ ದಂಪತಿ ಮತ್ತು ಅವರ ಒಂಬತ್ತು ತಿಂಗಳ ಮಗುವನ್ನು ನನ್ನ ಕ್ಲಿನಿಕ್‌ಗೆ ಕಳುಹಿಸಿದ್ದರು. ಅದು ನನ್ನನ್ನು ಗತಕಾಲದ ನೆನಪುಗಳತ್ತ ಜಾರುವಂತೆ ಮಾಡಿತು.

1985ರ ಕಾಲ. ಆಗತಾನೆ ಶಿಶುವೈದ್ಯ ವಿಭಾಗ ಸೇರಿಕೊಂಡಿದ್ದೆ. ಅಂಧತ್ವದಿಂದ ಬಳಲುತ್ತಿದ್ದ ಏಳು ತಿಂಗಳ ಹಸುಗೂಸಿನ ಕುರಿತು ಎಲ್ಲರೂ ಮಾತನಾಡುತ್ತಿದ್ದರು. ಡಾ. ಡಿ.ಜಿ. ಬೆನಕಪ್ಪ ಅವರ ರೌಂಡ್ಸ್‌ಗಾಗಿ ನಾವೆಲ್ಲರೂ ಕಾತರದಿಂದ ಕಾಯುತ್ತಿದ್ದೆವು. ಅವರು ಆ ಮಗುವನ್ನು ನೋಡಿದ ಕೂಡಲೇ ಅದು ಜನನ ಪೂರ್ವ ರುಬೆಲ್ಲಾ ಸಿಂಡ್ರೋಮ್‌ಗೆ (ಜರ್ಮನ್ ದಡಾರ ರೋಗ) ತುತ್ತಾಗಿದೆ ಎಂದು ಗುರುತಿಸಿದರು. ಕಣ್ಣಿನ ಪೊರೆ (ಅಂಧತ್ವ), ಕಿವುಡುತನ ಮತ್ತು ಹೃದ್ರೋಗ ಅದರ ಮೂರು ಪರಿಣಾಮಗಳೆಂದು ಅವರು ವಿವರಿಸಿದರು. ಅವರ ರೌಂಡ್ಸ್‌ಗಳು ಇತಿಹಾಸ ಮತ್ತು ಕಥೆಗಳಿಂದಾಗಿ ಸಾಕಷ್ಟು ಆಸಕ್ತಿಕರವಾಗಿರುತ್ತಿತ್ತು.

ಆ ಕಾಲದಲ್ಲಿ ಕಾಯಿಲೆಯನ್ನು ಅರ್ಥಮಾಡಿಕೊಳ್ಳುವ ಮತ್ತು ಲಸಿಕೆಯನ್ನು ಸಿದ್ಧಪಡಿಸುವ ಮುನ್ನವೇ ಆ ಪ್ರಕ್ರಿಯೆಯಲ್ಲಿ ಎಷ್ಟೋ ಮಂದಿ ಜೀವಕಳೆದುಕೊಳ್ಳುತ್ತಿದ್ದರು. ಇಂದಿನ ದಿನಗಳು, ಈ ಲಸಿಕೆ ತೆಗೆದುಕೊಳ್ಳಿ ಮತ್ತು ನಿಮ್ಮನ್ನು ನೀವೇ ರಕ್ಷಿಸಿಕೊಳ್ಳಿ ಎನ್ನುವಷ್ಟು ಸುಲಭ.
1962ರ ಸಮಯದಲ್ಲಿ ಯುರೋಪಿನಾದ್ಯಂತ ರುಬೆಲ್ಲಾ ವ್ಯಾಪಿಸತೊಡಗಿ, 1964ರ ಹೊತ್ತಿಗೆ ಅಮೆರಿಕವನ್ನೂ ಪ್ರವೇಶಿಸಿತು. ಪರಿಣಾಮವಾಗಿ 1944-66ರ ಅವಧಿಯಲ್ಲಿ ಸಾವಿರಾರು ಗರ್ಭಿಣಿಯರು ಇದಕ್ಕೆ ತುತ್ತಾದರು. ಗರ್ಭಪಾತ ಅಥವಾ ಅಸಹಜ ಶಿಶುಗಳು ಜನಿಸುವ ಘಟನೆಗಳು ಸಂಭವಿಸಿದವು.

ಕಂಜೆನಿಟಲ್ ರುಬೆಲ್ಲಾ ಸಿಂಡ್ರೋಮ್ (ಸಿಆರ್‌ಎಸ್) ಸೋಂಕು ತಗುಲಿ ಬದುಕುಳಿದ 2 ಲಕ್ಷ ಶಿಶುಗಳಲ್ಲಿ 11,600 ಮಕ್ಕಳು ಕಿವುಡುತನ, 3850 ಶಿಶುಗಳು ಅಂಧತ್ವ ಮತ್ತು 1800 ಕಂದಮ್ಮಗಳು ಮಾನಸಿಕ ಅಸ್ವಸ್ಥತೆಗೆ ಬಲಿಯಾದವು. ಸೋಂಕು ಮತ್ತು ಅದರ ವ್ಯಾಪಕತೆಯ ಭೀತಿ ಎದುರಾದಾಗ ಅಮೆರಿಕದಲ್ಲಿನ ಜನತೆ ತಮ್ಮ ಹೆಣ್ಣುಮಕ್ಕಳಿಗಾಗಿ ರುಬೆಲ್ಲಾ ಕೂಟ(ಪಾರ್ಟಿ)ಗಳನ್ನು ಆಯೋಜಿಸತೊಡಗಿದರು.

ಏನಿದು ರುಬೆಲ್ಲಾ ಕೂಟ?
ಒಂದು ಮಗು ರುಬೆಲ್ಲಾ ಸೋಂಕಿಗೆ ತುತ್ತಾದರೆ ಪೋಷಕರು ಬೇರೆ ಮಕ್ಕಳನ್ನು, ಅದರಲ್ಲೂ ಪ್ರಾಪ್ತ ವಯಸ್ಸಿಗೆ ಬಂದ ಹೆಣ್ಣುಮಕ್ಕಳನ್ನು ಕೂಟಗಳಿಗೆ ಆಮಂತ್ರಿಸುತ್ತಾರೆ. ಕೂಟಗಳಲ್ಲಿ ಪಾಲ್ಗೊಳ್ಳುವ ಹೆಣ್ಣುಮಕ್ಕಳು ಮುಂದೆ ವಿವಾಹವಾಗಿ ಗರ್ಭಿಣಿಯಾದಾಗ ಅವರಿಗೆ ಸೋಂಕು ತಗುಲುವುದಿಲ್ಲ ಎನ್ನುವುದು ಅವರ ನಂಬಿಕೆಯಾಗಿತ್ತು. `ಮಾಡುವುದು ಮನುಷ್ಯನ ಇಚ್ಛೆ, ನಡೆಯುವುದು ದೈವೇಚ್ಛೆ'. ರುಬೆಲ್ಲಾ ಅನೇಕ ವೈರಲ್ ಸೋಂಕುಗಳನ್ನು ಹೋಲುತ್ತದೆ. ರುಬೆಲ್ಲಾ ಹೊಂದಿದ್ದಾರೆ ಎಂದುಕೊಳ್ಳುವ ಎಷ್ಟೋ ಮಕ್ಕಳು ಅದಕ್ಕೆ ತುತ್ತಾಗಿರುವುದಿಲ್ಲ. ಈ ಕೂಟಗಳಲ್ಲಿ ಭಾಗವಹಿಸುವ ಹೆಣ್ಣುಮಕ್ಕಳು ತಾವು ಸುರಕ್ಷಿತವಾಗಿದ್ದೇವೆ ಎಂದು ಭಾವಿಸುತ್ತಾರೆ. ಆದರೆ ಅದು ನಿಜವಲ್ಲ.

ರುಬೆಲ್ಲಾವನ್ನು ಜರ್ಮನ್ ದಡಾರ ಎಂದೂ ಕರೆಯಲಾಗುತ್ತದೆ. ಮೂರು ದಿನ ಕಾಣಿಸಿಕೊಳ್ಳುವ ದಡಾರ ರುಬೆಲ್ಲಾ ವೈರಾಣುವಿನಿಂದ ಸಂಭವಿಸಿರುತ್ತದೆ. ರುಬೆಲ್ಲಾ ಎಂದರೆ ಚಿಕ್ಕ ಕೆಂಪು. ಜರ್ಮನ್ ವೈದ್ಯರು ಈ ಸೋಂಕಿನ ಕುರಿತು ಮೊದಲು ವಿವರಣೆ ನೀಡಿರುವುದರಿಂದ ಅದಕ್ಕೆ ಜರ್ಮನ್ ದಡಾರ ಎನ್ನುವ ಹೆಸರು. ಮುಖ, ಹಾಗೂ ದೇಹದ ಇತರ ಅವಯವಗಳಲ್ಲಿ ಉರುಬು ಕಾಣಿಸಿಕೊಂಡು ಮೂರು ದಿನಗಳಲ್ಲಿ ಬಾಡಿ ಹೋಗುತ್ತದೆ (ಈ ಕಾರಣಕ್ಕಾಗಿಯೇ ಅದಕ್ಕೆ ಮೂರು ದಿನಗಳ ದಡಾರ ಎನ್ನುವುದು). ರುಬೆಲ್ಲಾ ಅಷ್ಟೇನೂ ತೀವ್ರಕರವಲ್ಲ. ಆದರೆ ಗರ್ಭಿಣಿಯರಿಗೆ ತಗುಲಿದಾಗ, ಅದರಲ್ಲೂ ಗರ್ಭಾವಸ್ಥೆಯ ಮೊದಲ 20 ವಾರಗಳಲ್ಲಿ ಸೋಂಕು ತಗುಲಿದಾಗ ಬಹಳ ಹಾನಿಕಾರಕ ಆಗಬಹುದು. ಕೆಲವು ಮಹಿಳೆಯರಲ್ಲಿ ಗರ್ಭಪಾತವಾದರೆ, ಇನ್ನು ಹಲವರಲ್ಲಿ ಮಗು ಗರ್ಭಕೋಶದಲ್ಲಿಯೇ ಸಾಯುವ ಅಥವಾ ಹುಟ್ಟುವಾಗಲೇ ಸಾಯುವ ಸಾಧ್ಯತೆಗಳಿರುತ್ತವೆ. ಇನ್ನು ಕೆಲವು ಗರ್ಭಿಣಿಯರ ಮಕ್ಕಳು ಸಿಆರ್‌ಎಸ್‌ನೊಂದಿಗೆ ಬದುಕುಳಿಯುತ್ತವೆ.

ಶಿಶುವೈದ್ಯ ವಿಭಾಗದ (1985) ವೈದ್ಯೆ ಡಾ. ಜೆವಿ, ತಮ್ಮ ಎಂ.ಡಿ. ಮುಗಿದ ಬಳಿಕ ವಿವಾಹವಾದರು. ಒಂದು ದಿನ ಊಟದ ವಿರಾಮದಲ್ಲಿ ಕಾಫಿ ಕ್ಲಬ್‌ನಲ್ಲಿ ತಮ್ಮ ಕುಟುಂಬ ದೊಡ್ಡದಾಗುತ್ತಿದೆ ಎಂಬ ಸಂತಸದ ವಿಷಯವನ್ನು ಎಲ್ಲರೊಂದಿಗೆ ಹಂಚಿಕೊಂಡರು. ನಾವೂ ಸಂಭ್ರಮಿಸಿದೆವು. ಅಪ್ಪಾಜಿ ತಮ್ಮ ಅನುಭವಗಳೊಂದಿಗೆ ಮಾತು ಮುಂದುವರಿಸಿದರು- ಡಾ. ಸ್ಟ್ಯಾನ್ಲಿ ಪ್ಲೊಟ್ಕಿನ್ ಪ್ರಕಾರ, ಸಿಆರ್‌ಎಸ್‌ವುಳ್ಳ ಅನೇಕ ಮಕ್ಕಳು ಬದುಕುಳಿಯುತ್ತವೆ. ಈ ಸಾಂಕ್ರಾಮಿಕ ಕಾಯಿಲೆ ಮತ್ತು ಲಸಿಕೆಗಳ ಕುರಿತ ಅಧಿಕೃತ ಪುಸ್ತಕ `ರೆಡ್ ಬುಕ್'ನಲ್ಲಿದ್ದ ಆತನ ಚಿತ್ರವನ್ನೂ ಅವರು ನನಗೆ ತೋರಿಸಿದರು. ಡಾ. ಸ್ಟ್ಯಾನ್ಲಿ ನ್ಯೂಯಾರ್ಕ್ ನಗರದಲ್ಲಿ ಟೆಲಿಗ್ರಾಫ್ ವ್ಯಾಪಾರಿ ತಂದೆ ಮತ್ತು ಗೃಹಿಣಿ ತಾಯಿಗೆ ಜನಿಸಿದರು.

15ನೇ ವಯಸ್ಸಿನಲ್ಲಿ ಈ ಮಾರಕ ಕಾಯಿಲೆಯ ವಿರುದ್ಧ ವಿಜ್ಞಾನಿಗಳ ಹೋರಾಟ ಕುರಿತು ಸಿಂಕ್ಲೇರ್ ಲೂಯಿಸ್‌ರ `ಆರೋಸ್ಮಿತ್' ಮತ್ತು ಪೌಲ್ ಡೆ ಕ್ರುಯಿಫ್‌ರ `ಮೈಕ್ರೋಬ್ ಹಂಟರ್ಸ್' ಕೃತಿಗಳನ್ನು ಓದಿದ ಬಳಿಕ, ತಾನೂ ವೈದ್ಯನಾಗಬೇಕು ಮತ್ತು ಸಂಶೋಧನಾ ವಿಜ್ಞಾನಿ ಆಗಬೇಕೆಂಬ ತುಡಿತ ಅವರಲ್ಲಿ ಮೊಳಕೆಯೊಡೆಯಿತು. ಇಂದಿನವರೆಗೂ ಅವರು ತಡೆಗಟ್ಟಬಹುದಾದ ಸಾಂಕ್ರಾಮಿಕ ಕಾಯಿಲೆಗಳಿಂದ ಮನುಕುಲ ರಕ್ಷಿಸುವ ನಿಟ್ಟಿನಲ್ಲಿ ಅವಿರತ ಕೆಲಸ ಮಾಡಿದ್ದಾರೆ. 1991ರಲ್ಲಿ ಲಸಿಕೆ ಉತ್ಪಾದನಾ ಕಂಪೆನಿಯೊಂದು ಅವರನ್ನು ವೈದ್ಯಕೀಯ ಮತ್ತು ವೈಜ್ಞಾನಿಕ ನಿರ್ದೇಶಕರ ಹುದ್ದೆಗೆ ಆಹ್ವಾನಿಸಿತು. ಆ ಕಂಪೆನಿಯೇ ಇಂದಿನ ಸನಾಫಿ ಪಾಸ್ಟ್ಯೂರ್. ತನ್ನ ತವರಾದ ಅಮೆರಿಕ ತೊರೆಯುವುದು ಅವರ ಮನಸ್ಸಿಗೆ ಕಷ್ಟವಾದರೂ, ಪ್ಯಾರಿಸ್‌ಗೆ ನೀಡಿದ ಒಂದು ದಿನದ ಭೇಟಿ, ತಮ್ಮ ಸಂಶೋಧನೆಗೆ ಪ್ಯಾರಿಸ್ ಪ್ರಶಸ್ತ ಎಂಬ ಭಾವ ಅವರಲ್ಲಿ ಮೂಡಿಸಿತು. ಆದರೆ ಅವರು ಲಸಿಕೆ ಸಿದ್ಧಪಡಿಸುವ ಮುನ್ನವೇ, 1969ರಲ್ಲಿ ರುಬೆಲ್ಲಾ ವ್ಯಾಕ್ಸಿನ್ ಆರ್‌ಎ 27/3 ಪರವಾನಿಗೆ ಪಡೆದುಕೊಂಡಿತ್ತು.

ಊಟದ ವಿರಾಮ ವೇಳೆಯಲ್ಲಿ ನಾವು ಡಿಜಿಬಿ ಅವರ ರೌಂಡ್ಸ್, ರುಬೆಲ್ಲಾ ಮತ್ತು ಡಾ. ಸ್ಟ್ಯಾನ್ಲಿ ಪ್ಲಾಟ್ಕಿನ್ ಕುರಿತು ಮಾತನಾಡುತ್ತಿದ್ದೆವು. ಇದ್ದಕ್ಕಿದ್ದಂತೆ ಡಾ. ಜೆವಿ ಅಳಲಾರಂಭಿಸಿದರು. ಅವರು ಈ ಮಗುವನ್ನು ಕಳೆದ ಒಂದು ವಾರದಲ್ಲಿ ಹಲವು ಬಾರಿ ನೋಡಿದ್ದರು. ಸಿಆರ್‌ಎಸ್‌ವುಳ್ಳ ಮಗು ತನ್ನ ದೇಹದ ಸ್ರವಿಕೆ ಮೂಲಕ ವೈರಸ್ ಅನ್ನು ಹೊರಹಾಕುತ್ತದೆ. ಅದು ಗರ್ಭಿಣಿಯರು ಮತ್ತು ಇತರರಿಗೆ ಹರಡುವ ಸಾಧ್ಯತೆಗಳಿರುತ್ತದೆ. ಡಾ. ಜೆವಿ ತನಗೂ ಸೋಂಕು ತಗುಲಿದರೆ ಏನು ಮಾಡುವುದೆಂದು ಆತಂಕಕ್ಕೆ ಒಳಗಾದರು.

ಒಂದು ವೇಳೆ ತನ್ನ ಗರ್ಭದಲ್ಲಿರುವ ಮಗುವಿಗೆ ಸಿಆರ್‌ಎಸ್ ತಗುಲಿದರೆ? ಶಿಶುವೈದ್ಯ ದಂಪತಿ ಕಳವಳಗೊಂಡಿದ್ದರು. ಆಕೆ ಅದ್ಭುತ ಶಿಶುವೈದ್ಯೆ ಮಾತ್ರವಲ್ಲ, ಅಪ್ಪಾಜಿಯ ನೆಚ್ಚಿನ ವೈದ್ಯೆ ಕೂಡ. ಡಾ. ಡಿಜಿಬಿ ಅವರೊಂದಿಗೆ ಹಲವು ಸುತ್ತು ಚರ್ಚೆ ನಡೆಸಿದ ನಂತರ ಆಕೆ ಸೋಂಕಿಗೆ ತುತ್ತಾಗುವುದಿಲ್ಲ ಎಂದು ನಾವು ಕೆಲವರು ವಾದಿಸಿದರೂ ಆ ದಂಪತಿ ಗರ್ಭವನ್ನು ತೆಗೆಸಲು ನಿರ್ಧರಿಸಿದರು. ಆಕೆಯ ವಯಸ್ಸು ಆಗಲೇ 29 ವರ್ಷ ಮೀರಿದ್ದರಿಂದ ಆ ಗರ್ಭ ಆಕೆಗೆ ಅಮೂಲ್ಯವಾಗಿತ್ತು. ಕೊನೆಗೂ ಅವರು ಗರ್ಭಪಾತ ಮಾಡಿಸಿಕೊಂಡರು. ಆಕೆಯ ರಕ್ತದ ಮಾದರಿಯನ್ನು ಬಾಂಬೆಗೆ ಕಳುಹಿಸಲಾಯಿತು (ಆಗಿನ ದಿನಗಳಲ್ಲಿ ರುಬೆಲ್ಲಾ ರಕ್ತದ ವೈಜ್ಞಾನಿಕ ಅಧ್ಯಯನ ಬೆಂಗಳೂರಿನಲ್ಲಿ ನಡೆಯುತ್ತಿರಲಿಲ್ಲ). ರುಬೆಲ್ಲಾ `ಪಾಸಿಟಿವ್' ಎಂಬ ವರದಿ ಬಂತು.

ಅಂದು ಆ ಯುವದಂಪತಿ ನನ್ನನ್ನು ಭೇಟಿಯಾದಾಗ ತಾಯಿಗೆ ಗರ್ಭಾವಸ್ಥೆಯ 12ನೇ ತಿಂಗಳಿನಲ್ಲಿ ಇದ್ದಾಗ ಗುಳ್ಳೆಗಳ ಸಹಿತ ಕಾಯಿಲೆ ತಗುಲಿತ್ತು ಎಂದು ತಿಳಿಸಿದರು. ಆಕೆಯ ಪ್ರಸೂತಿ ವೈದ್ಯರು ಅದೊಂದು ವೈರಲ್ ಜ್ವರವಷ್ಟೆ ಎಂದು ಹೇಳಿದ್ದರು. ತುಂಬು ಉತ್ಸಾಹದಲ್ಲಿ ದಂಪತಿ ಮಗುವಿನ ನಿರೀಕ್ಷೆಯಲ್ಲಿ ಕಾತರದಿಂದಿದ್ದರು. ಪ್ರಸವಕ್ಕಾಗಿ ಕಾರ್ಪೊರೇಟ್ ಆಸ್ಪತ್ರೆಗೆ ದಾಖಲಾದರು. ಮಗುವಿನ ಆಗಮನದ ಆರಂಭದ ಸಂಭ್ರಮದ ನಂತರ, ತಮ್ಮ ಮುದ್ದಿನ ಮಗಳಲ್ಲಿ ಏನೋ ಸಮಸ್ಯೆ ಇದೆ ಎಂದು ಅವರಿಗನ್ನಿಸಿತು. ಏನು ಮಾಡಿದರೂ ಮಗು ತೂಕ ಹೊಂದುತ್ತಿರಲಿಲ್ಲ. ಇಬ್ಬರಲ್ಲೂ ರುಬೆಲ್ಲಾ ಪಾಸಿಟಿವ್ ಕಾಣಿಸಿಕೊಂಡಿತ್ತು. ಅದರಿಂದ ಎದುರಾಗುವ ಪರಿಣಾಮಗಳನ್ನೆದುರಿಸಲು ಸತತ ಪ್ರಯತ್ನ ನಡೆಸಿದರು. ಆಕೆ ದೃಷ್ಟಿಯನ್ನು ಮರಳಿ ಪಡೆದುಕೊಂಡಳು.

>ಶ್ರವಣ ಸಾಮರ್ಥ್ಯವೂ ಸಹಜವಾಗಿತ್ತು. ಆದರೆ ಹೃದಯದ ಸ್ಕ್ಯಾನ್ (ಎಸಿಎಚ್‌ಓ) ಪೇಟೆಂಟ್ ಡಾಕ್ಟಸ್ ಆರ್ಟಿರಿಯಸ್ ಎಂಬ ಜನ್ಮತಃ ಹೃದಯ ಕಾಯಿಲೆ ಇರುವುದನ್ನು ಬಹಿರಂಗಪಡಿಸಿತು. ಮೊದಲ ಮೂರು ತಿಂಗಳ ಗರ್ಭಾವಧಿಯಲ್ಲಿ ರುಬೆಲ್ಲಾ ಸೋಂಕು ಸಂಭವಿಸಿದಾಗಿನಿಂದಲೂ ಆಕೆಯ ಕಣ್ಣು ಮತ್ತು ಕಿವಿಗಳಿಗೆ ಹಾನಿಯಾಗಿರಲಿಲ್ಲ. ತಾಯಿಯಿಂದ ಇನ್ನೂ ಜನ್ಮತಾಳದ ಮಗುವಿಗೆ ಕಾಯಿಲೆ ವರ್ಗಾವಣೆಯಾಗುವುದೇ ಕಾಂಜೆನಿಟಲ್ ರುಬೆಲ್ಲಾ ಸಿಂಡ್ರೋಮ್ (ಸಿಆರ್‌ಎಸ್). ಈ ಹಿಂದೆ ಕಣ್ಣಿನ ಪೊರೆ, ಕಿವುಡುತನ, ಹುಟ್ಟಿನೊಂದಿಗೆ ಬರುವ ಹೃದಯ ಕಾಯಿಲೆಗಳು ಮಾತ್ರ ಸಿಆರ್‌ಎಸ್ ಗುರುತಿಸಲು ಸಾಧ್ಯವಾಗುವ ಗುಣಗಳಾಗಿದ್ದವು.

1963ರ ನಂತರ ಈ ಸಾಂಕ್ರಾಮಿಕ ಕಾಯಿಲೆಗೆ ಮತ್ತಷ್ಟು ಗುಣಗಳು ಸೇರಿಕೊಂಡವು. ಸಿಆರ್‌ಎಸ್ ಎಲ್ಲಾ ಅಂಗಾಂಗಗಳಿಗೂ ಹಾನಿ ಮಾಡಬಲ್ಲುದು. ಅದು ಮೂರು ಪ್ರಮುಖ ಅಂಗಗಳಾದ ಕಣ್ಣಿನ ಮಸೂರ (ದೃಷ್ಟಿ), ಕರ್ಣಶಂಖ (ಶ್ರವಣ) ಮತ್ತು ಹೃದಯಗಳನ್ನು ಘಾಸಿಮಾಡುತ್ತದೆ. ಈ ವೈರಸ್ ಮಿದುಳಿನ (ಮಸ್ತಿಷ್ಕೋದ್ರೇಕ, ಮಾನಸಿಕ ಅಸ್ವಸ್ಥತೆ) ಮೇಲೂ ದಾಳಿ ಮಾಡುತ್ತದೆ. ಶ್ವಾಸಕೋಶ (ನ್ಯುಮೋನಿಯಾ), ಯಕೃತ್ತು (ಹೆಪಟೈಸಿಸ್), ರಕ್ತ, ಮೂಳೆ ಮದುಮೇಹ ಮತ್ತು ಥೈರಾಯ್ಡ ಸಮಸ್ಯೆಗಳಿಂದ ತೊಂದರೆಗೆ ಒಳಗಾಗುತ್ತವೆ. ಸರಳವಾಗಿ ವಿವರಿಸುವುದೆಂದರೆ ಶುದ್ಧ ನೀರನ್ನು ಕೊಳಕು ನೀರಿನೊಂದಿಗೆ ಬೆರೆಸಿದರೆ- ಆ ನೀರಿನ ಸಂಪರ್ಕ ಹೊಂದಿರುವ ಎಲ್ಲಾ ಮನೆಗಳಿಗೂ ಆ ಕೊಳಕು ನೀರು ಸರಬರಾಜು ಆಗುತ್ತದೆ.

ಒಮ್ಮೆ ವೈರಸ್ ರಕ್ತದ ಹರಿವಿನೊಂದಿಗೆ (ಕೊಳವೆಗಳು) ಪ್ರವೇಶಿಸಿದರೆ, ಅದು ಇಡೀ ದೇಹಕ್ಕೆ (ಮನೆಗಳು) ವೈರಸ್ ಅನ್ನು ಹಂಚಿಕೆ ಮಾಡುತ್ತದೆ. ಗರ್ಭಾವಸ್ಥೆಯ ಮೊದಲ ಮೂರುತಿಂಗಳ ಅವಧಿಯಲ್ಲಿ ದೃಢಪಟ್ಟ ರುಬೆಲ್ಲಾ ಗರ್ಭಕೋಶಕ್ಕೆ ಶೇಕಡಾ 50-90ರಷ್ಟು ಹಾನಿಮಾಡುತ್ತದೆ. ಎರಡು ಮತ್ತು ಮೂರನೇ ಅವಧಿಯಲ್ಲಿ ಇದರ ಶೇಕಡಾವಾರು ಪ್ರಮಾಣ ಕಡಿಮೆಯಾಗುತ್ತದೆ. ಮಾತ್ರವಲ್ಲ ಸಿಆರ್‌ಎಸ್ ತಗುಲಿದ ಮಗು ಒಂದು ವರ್ಷದವರೆಗೂ ವೈರಸ್ ಅನ್ನು ಹೊರಬಿಡುತ್ತಾ ಕಾಯಿಲೆಯನ್ನು ಹರಡುತ್ತಿರುತ್ತದೆ.

ರುಬೆಲ್ಲಾ ಲಸಿಕೆಯ ಸಂಶೋಧನೆಗೂ ಮುನ್ನ- ರುಬೆಲ್ಲಾ ಕೂಟಗಳು ಆಯೋಜಿತವಾಗುತ್ತಿದ್ದವು. ದಡಾರ ಗುಳ್ಳೆಗಳಿಗೆ ಕಾರಣವಾಗುವ ಸಾಮಾನ್ಯ ಸೋಂಕನ್ನು ಹರಡುವ ರುಬೆಲ್ಲಾವನ್ನು ನಿವಾರಿಸಲು ಅಸಾಧ್ಯ ಎಂಬುದು ಅರಿವಾದಂತೆ ಅದು ಜನಪ್ರಿಯತೆ ಕಳೆದುಕೊಂಡಿತು. ಹೀಗೆ ರುಬೆಲ್ಲಾ ತಗುಲಿದ್ದಾರೆ ಎಂದುಕೊಂಡು ಈ ಕೂಟಗಳಲ್ಲಿ ಭಾಗವಹಿಸುವ ಮಕ್ಕಳು ರುಬೆಲ್ಲಾಕ್ಕೆ ನಿಜವಾಗಿಯೂ ಒಳಗಾಗದಿದ್ದ ಸಂದರ್ಭಗಳೇ ಹೆಚ್ಚು. ಸೋಂಕಿಗೆ ತುತ್ತಾದ ಮಕ್ಕಳು ಇನ್ನೂ ಜನಿಸದ ಭ್ರೂಣಗಳನ್ನು ಹೊತ್ತ ಗರ್ಭಿಣಿಯರ ಸಮುದಾಯಕ್ಕೆ ಇರುವ ದೊಡ್ಡ ಬೆದರಿಕೆಯಾಗಿದ್ದರು. ಯಾರೂ ಈ ಬಗೆಯ ಕೂಟಗಳನ್ನು ಮುಂದೆ ಏರ್ಪಡಿಸದಂತೆ ಮತ್ತು ಕಾಯಿಲೆ ಹರಡದಂತೆ ಮಾಡಿದ ಡಾ. ಸ್ಟ್ಯಾನ್ಲಿ ಪ್ಲಾಟ್ಕಿನ್ ಅವರಿಗೆ ಧನ್ಯವಾದಗಳು. ಭಾರತದಲ್ಲಿ ಗರ್ಭಿಣಿಯರ ಸಂಖ್ಯೆ ಸುಮಾರು 22-24 ಮಿಲಿಯನ್ ಇರುತ್ತದೆ.

ಭಾರತೀಯ ಶಿಶುವೈದ್ಯ ಸಂಸ್ಥೆಯ ಪ್ರತಿರಕ್ಷಣಾ ಸಮಿತಿಯು ಹಲವು ಶಿಫಾರಸುಗಳನ್ನು ನೀಡಿದೆ- ರುಬೆಲ್ಲಾ ಲಸಿಕೆಯನ್ನು ಎಂಎಂಆರ್‌ನೊಂದಿಗೆ ಸಂಯೋಜಿತ ಲಸಿಕೆಯಾಗಿ 15 ತಿಂಗಳು ಮತ್ತು ಐದು ವರ್ಷಕ್ಕೆ ನೀಡುವುದು. ರುಬೆಲ್ಲಾ ಲಸಿಕೆ ಕೇವಲ 50 ರೂಪಾಯಿಗೆ ಲಭ್ಯ. ಹೆರುವ ವಯಸ್ಸಿನಲ್ಲಿ ಮಹಿಳೆಗೆ ಇದನ್ನು ನೀಡುವುದು ಸುರಕ್ಷಿತ. ರುಬೆಲ್ಲಾ ಲಸಿಕೆಯು ಹಲವು ಸಂದರ್ಭಗಳಲ್ಲಿ ಪಿಡಿಎ (ಪೇಟೆಂಟ್ ಡಾಕ್ಟಸ್ ಆಟೆರಿಯೊಸಸ್)ನಂಥ ಹುಟ್ಟಿನಿಂದ ಬರುವ ಹೃದಯ ಕಾಯಿಲೆಯನ್ನು ತಡೆಗಟ್ಟುವ ಔಷಧವಾಗಿಯೂ ಕೆಲಸ ಮಾಡುತ್ತದೆ ಎಂದು ಶಿಶು ಹೃದ್ರೋಗ ತಜ್ಞೆ ಡಾ. ವಿಜಯಲಕ್ಷ್ಮಿ ಹೇಳುತ್ತಾರೆ. ಚಿಕಿತ್ಸೆಯ ವೆಚ್ಚ ದೊಡ್ಡದಾಗಿದ್ದರೆ, ಮುನ್ನೆಚ್ಚರಿಕೆಯ ವೆಚ್ಚ ಅತ್ಯಲ್ಪದ್ದು. ಆಗಿರುವ ಹಾನಿಯನ್ನು ಚಿಕಿತ್ಸೆಯಿಂದ ಮತ್ತೆ ಸರಿಪಡಿಸಿಕೊಡಲಾರದು.

ಈ ಯುವ ದಂಪತಿಗೆ ಅವರ ಮಗಳ ಪರಿಸ್ಥಿತಿಯನ್ನು ಮನದಟ್ಟು ಮಾಡುವುದು ಬಹಳ ಕಷ್ಟವಾಯಿತು. ತಮ್ಮ ಮಗಳು ಬೇರೆ ಮಕ್ಕಳಂತೆ ಸಹಜ ಸ್ಥಿತಿಗೆ ಬರುತ್ತಾಳೆ ಎಂದು ಒಬ್ಬ ವೈದ್ಯರಾದರೂ ಹೇಳುತ್ತಾರೆ ಎಂಬ ಭರವಸೆಯೊಂದಿಗೆ ಈ ದಂಪತಿ ಒಬ್ಬರ ನಂತರ ಮತ್ತೊಬ್ಬ ವೈದ್ಯರ ಬಳಿ ಧಾವಿಸುತ್ತಿದ್ದರು. ಈ ಸಮಯದಲ್ಲಿ ಅವರ ಮಗಳು ಇನ್ನೂ ವೈರಸ್ ಅನ್ನು ಹೊರದೂಡುತ್ತಲೇ ಇದ್ದಳು. ಅದು ರಸ್ತೆಯಲ್ಲಿ ಯಾವುದಾದರೂ ಗರ್ಭಿಣಿಗೆ ತಗುಲಲಾರದು ಎಂಬ ಆಶಾಭಾವ ನನ್ನದು. ಈ ಜರ್ಜರಿತಗೊಂಡ ಜೋಡಿಗೆ ನಾನು ಯಾವ ಸಹಾಯವನ್ನೂ ಮಾಡದವಳಂತಾಗಿದ್ದೆ.

ಗರ್ಭಾವಸ್ಥೆಯ ಮೊದಲ ಮೂರು ತಿಂಗಳಲ್ಲಿ ಕಾಣಿಸಿಕೊಂಡ ಗುಳ್ಳೆಗಳು ಮತ್ತು 50 ರೂಪಾಯಿಗೆ ರುಬೆಲ್ಲಾ ಲಸಿಕೆ ಸಿಗುತ್ತದೆ ಎಂಬುದರ ಜ್ಞಾನವಿಲ್ಲದಿರುವುದು ಈ ದಂಪತಿಯ ಮಗುವನ್ನು ಸರಿಪಡಿಸಲಾಗದ ಸ್ಥಿತಿಗೆ ತಂದಿತ್ತು (ಹೃದಯದ ಸಮಸ್ಯೆಯನ್ನು ಬಗೆಹರಿಸಿದ್ದರೂ). ಆಕೆಯ ಮೆದುಳು ಮತ್ತು ಇತರೆ ಅಂಗಗಳು ಸಹಜವಾಗಿ ಆಗುವಂತೆ ಬೆಳವಣಿಗೆ ಆಗಿರಲಿಲ್ಲ.

ಈ ಸುಶಿಕ್ಷಿತ ದಂಪತಿಯ ಸೋಂಕಿಗೆ ತುತ್ತಾದ ಮಗುವಿನ ಮೂಲಕ ಭಾರತದಲ್ಲಿ ಇಂದಿಗೂ ನಾವು ಸಿಆರ್‌ಎಸ್ ಎಂಬ ಐತಿಹಾಸಿಕ ಕಾಯಿಲೆಯನ್ನು ನೋಡುತ್ತಿದ್ದೇವೆ. ರುಬೆಲ್ಲಾದಿಂದಾಗಿ ಗುಳ್ಳೆಗಳು ಕಾಣಿಸಿಕೊಂಡಿದ್ದರೆ ಮಾತ್ರ ಅವರು ಡಾ. ಜೆವಿ ಅವರು ಮಾಡಿದಂತೆ ಗರ್ಭವನ್ನು ತೆಗೆಸಬಹುದು. ಈಗ ಈ ಮಗುವನ್ನು ಬೆಳೆಸುವುದು ಬಹುದೊಡ್ಡ ಸವಾಲು.

ಡಾ. ಸ್ಟ್ಯಾನ್ಲಿ ಹಲವಾರು ಲಸಿಕೆಗಳನ್ನು ಅಭಿವೃದ್ಧಿಪಡಿಸಿದ್ದಾರೆ. `ನಾನು ಸಾಯುವುದರೊಳಗೆ, ಗರ್ಭಿಣಿಯರನ್ನು ಕಾಡುವ ಮತ್ತೊಂದು ಭೀಕರ ಕಾಯಿಲೆ ಸಿಟೊಮೆಗಾಲೊ ವೈರಸ್‌ಗೆ ಪರವಾನಿಗೆಯುತ ಲಸಿಕೆಯನ್ನು ಕಂಡು ಹಿಡಿಯುತ್ತೇನೆ ಎಂಬ ಭರವಸೆ ನನ್ನಲ್ಲಿದೆ' ಎಂದು ಹೇಳ್ದ್ದಿದಾರೆ. ವಿಮಾನ ಹಾರಿಸುವುದನ್ನು ಕಲಿಯಬೇಕೆಂಬ ತಮ್ಮ ಜೀವಮಾನದ ಕನಸನ್ನು 74ನೇ ವಯಸ್ಸಿನಲ್ಲಿ ಡಾ. ಸ್ಟ್ಯಾನ್ಲಿ ಸಾಧಿಸಿದ್ದಾರೆ. ಅವರು ಮತ್ತಷ್ಟು ಕಾಲ ಆರೋಗ್ಯವಂತರಾಗಿ ಬದುಕಲಿ, ಮತ್ತಷ್ಟು ಲಸಿಕೆಗಳನ್ನು ಸಂಶೋಧಿಸಲಿ ಎನ್ನುವುದು ನನ್ನ ಹಾರೈಕೆ. 2009ರಲ್ಲಿ ಬೆಂಗಳೂರಿನಲ್ಲಿ ನಡೆದ ಶಿಶುವೈದ್ಯರ ಸಮಾವೇಶದಲ್ಲಿ ಅವರನ್ನು ಭೇಟಿಮಾಡುವ ಅವಕಾಶ ಸಿಕ್ಕಿದ್ದು ನನ್ನ ಪಾಲಿನ ಅದೃಷ್ಟ.ಆತ್ಮೀಯ ಓದುಗರೇ, ಹತ್ತನೇ ತರಗತಿಯಲ್ಲಿ ಓದುತ್ತಿರುವ ಎಲ್ಲಾ ಹೆಣ್ಣುಮಕ್ಕಳಿಗೆ ರುಬೆಲ್ಲಾ ಲಸಿಕೆ ಒದಗಿಸಲು ಎಲ್ಲರೂ ಸಂಘಟಿತ ಪ್ರಯತ್ನ ಮಾಡೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT