ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೂಪಾಯಿ ಮೌಲ್ಯ ಕುಸಿತಕ್ಕೆ ರಫ್ತು ಹೆಚ್ಚಳವೇ ಮದ್ದು

Last Updated 16 ಜುಲೈ 2013, 19:59 IST
ಅಕ್ಷರ ಗಾತ್ರ

ಅಮೆರಿಕದ ಕೇಂದ್ರೀಯ ಬ್ಯಾಂಕ್ ಅಧ್ಯಕ್ಷ ಬೆನ್ ಬೆರ್ನಂಕೆ ಅವರ ತಾಳಕ್ಕೆ ತಕ್ಕಂತೆಯೇ ವಿಶ್ವದ ಮಾರುಕಟ್ಟೆ ಕುಣಿಯುತ್ತಿದ್ದು, ಇದಕ್ಕೆ ಭಾರತವೂ ಹೊರತಾಗಿಲ್ಲ. ಬೆರ್ನಂಕೆ ಹೇಳಿಕೆಗಳು ವಿಶ್ವದಾದ್ಯಂತ ಹಣಕಾಸು ಮಾರುಕಟ್ಟೆಯಲ್ಲಿ ಆತಂಕ ಮೂಡಿಸಿರುವುದು ಮಾತ್ರ ವಿಲಕ್ಷಣ ವಿದ್ಯಮಾನವಾಗಿದೆ. ಕರೆನ್ಸಿ ವಿನಿಮಯ ಮತ್ತು ಷೇರು ಮಾರುಕಟ್ಟೆಯಲ್ಲಿ ತೀವ್ರ ಏರಿಳಿತ ಕಂಡು ಬರುತ್ತಿದ್ದು, ಹಲವಾರು ದೇಶಗಳ ಕೇಂದ್ರೀಯ ಬ್ಯಾಂಕ್‌ಗಳಿಗೂ ಈ ಬೆಳವಣಿಗೆಗಳ ಬಗ್ಗೆ ದಿಕ್ಕುತೋಚದಂತಾಗಿದೆ.

ಒಂದೂವರೆ ತಿಂಗಳಲ್ಲಿ ದೇಶಿ ಕರೆನ್ಸಿ ರೂಪಾಯಿ ಮೌಲ್ಯವು ಹರಿದು ಚಿಂದಿಚಿಂದಿಯಾಗುತ್ತಿದೆ. ರೂಪಾಯಿಯ ಅಪಮೌಲ್ಯವು ಸಾರ್ವಕಾಲಿಕ ದಾಖಲೆ ಆಗುತ್ತಿರುವುದನ್ನು ಉದ್ಯಮಿಗಳು ಮೂಕಪ್ರೇಕ್ಷಕರಾಗಿ ನೋಡುತ್ತಿದ್ದಾರೆ. ಮಾರುಕಟ್ಟೆ ವಿಶ್ಲೇಷಕರು, ಆರ್ಥಿಕ ತಜ್ಞರು, ಸರ್ಕಾರಿ ಮುಖ್ಯಸ್ಥರು ಗೊಂದಲ ಮತ್ತು ಭಯಾಶ್ಚರ್ಯದಿಂದಲೇ ಉಸಿರು ಬಿಗಿ ಹಿಡಿದು ಈ ವಿದ್ಯಮಾನಕ್ಕೆ ಸಾಕ್ಷಿಯಾಗುತ್ತಿದ್ದಾರೆ.

ರೂಪಾಯಿಯ ದೌರ್ಬಲ್ಯವು ಈಗ ಬಯಲಿಗೆ ಬಂದಿದ್ದು, ಅದರ ಮೌಲ್ಯದ ಬಗ್ಗೆ ಇನ್ನಷ್ಟು ಅನಿಶ್ಚಿತತೆ ತಲೆದೋರಿದೆ. ಅನೇಕ ಪರಿಣತರು ಈ ಬೆಳವಣಿಗೆ ಬಗ್ಗೆ, ರೂಪಾಯಿ ಭವಿಷ್ಯದ ಬಗ್ಗೆ ವಿವಿಧ ಬಗೆಯ ಅಂದಾಜು ಮಾಡಿದ್ದಾರೆ. ಮಾರುಕಟ್ಟೆ ವಿಶ್ಲೇಷಕರ ಅನಿಸಿಕೆಗಳು ಅದೆಷ್ಟರ ಮಟ್ಟಿಗೆ ಭಿನ್ನವಾಗಿವೆ ಎಂದರೆ, ಸಾಮಾನ್ಯ ಓದುಗರಿಗೆ ಅಪಮೌಲ್ಯದ ಲೆಕ್ಕಾಚಾರಗಳು ಸುಲಭವಾಗಿ ಅರ್ಥವಾಗುತ್ತಿಲ್ಲ. ಆರ್ಥಿಕ ತಜ್ಞರ ವಿಶ್ಲೇಷಣೆಗಳನ್ನು ಅರ್ಥೈಸಿಕೊಳ್ಳಲು ಜನಸಾಮಾನ್ಯರೂ ಹೆಣಗಾಡುತ್ತಿದ್ದಾರೆ.

ಹಣಕಾಸು ವಹಿವಾಟಿಗೆ ಸಂಬಂಧಿಸಿದ ದಿನಪತ್ರಿಕೆಯೊಂದು, ಎರಡು ಪ್ರತಿಷ್ಠಿತ ಬ್ಯಾಂಕ್‌ಗಳ ಸಂಶೋಧನಾ ವಿಭಾಗಗಳು ಸಿದ್ಧಪಡಿಸಿದ್ದ ಪ್ರತ್ಯೇಕ ವರದಿಗಳನ್ನು ಇತ್ತೀಚೆಗೆ ಅಕ್ಕಪಕ್ಕದಲ್ಲಿಯೇ ಪ್ರಕಟಿಸಿತ್ತು. ಒಂದು ಲೇಖನವು 2014ರಷ್ಟೊತ್ತಿಗೆ ರೂಪಾಯಿ ಮೌಲ್ಯವು ಪ್ರತಿ ಡಾಲರ್‌ಗೆ ರೂ.65ಗೆ ತಲುಪಲಿದೆ ಎಂದು ಅಂದಾಜಿಸಿದ್ದರೆ, ಇನ್ನೊಂದರಲ್ಲಿ ರೂಪಾಯಿಯು ರೂ.56ರಲ್ಲಿ ಸ್ಥಿರಗೊಳ್ಳಲಿದೆ ಎಂದು ಅಭಿಪ್ರಾಯಪಟ್ಟಿತ್ತು.

ಈ ಮಧ್ಯೆ, ದೇಶದ ವಿದೇಶಿ ವಿನಿಮಯ ಮೀಸಲು ಸಂಗ್ರಹವು 280 ನೂರು ಕೋಟಿ ಡಾಲರ್‌ಗಳಿಗೆ (ರೂ.16,80,000 ಕೋಟಿ) ತಲುಪಿದ್ದು, ಹಿಂದೊಮ್ಮೆ ಗರಿಷ್ಠ ಮಟ್ಟಕ್ಕೆ ತಲುಪಿದ 320 ನೂರು ಕೋಟಿ ಡಾಲರ್‌ಗೆ ಹೋಲಿಸಿದರೆ (ರೂ.19,20,000 ಕೋಟಿ), 45 ನೂರು ಕೋಟಿ ಡಾಲರ್‌ಗಳಷ್ಟು (ರೂ.2,70,000 ಕೋಟಿ) ಕಡಿಮೆಯಾಗಿದೆ.

ರೂಪಾಯಿ ಎದುರು ದಿನೇ ದಿನೇ ತನ್ನ ಮೌಲ್ಯ ವೃದ್ಧಿಸಿಕೊಳ್ಳುತ್ತಲೇ ಸಾಗಿರುವ ಡಾಲರ್ ಮತ್ತು ಅದರಿಂದ ದೇಶದ ಅರ್ಥ ವ್ಯವಸ್ಥೆಗೆ ಆಗಿರುವ ಹಾನಿ  ಯ ಅಂದಾಜು ತಗ್ಗಿಸಲು ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಮತ್ತು ಹಣಕಾಸು ಸಚಿವಾಲಯಗಳು,  ಪರಿಹಾರ ಕ್ರಮಗಳನ್ನು ಕೈಗೊಂಡಿದ್ದರೂ, ಅವು ನಿರೀಕ್ಷಿತ ರೀತಿಯಲ್ಲಿ ಫಲ ನೀಡುತ್ತಿಲ್ಲ. ಪರಿಸ್ಥಿತಿ ನಿಭಾಯಿಸಲು ಕೊನೆ ಮೊದಲಿಲ್ಲದ ಸಲಹೆಗಳ ಮಹಾಪೂರವೇ ಹರಿದು ಬರುತ್ತಿದೆ.

ಭಾರತವು ತಾನು ಗಳಿಸುವ ಡಾಲರ್‌ಗಳಿಗಿಂತ ಹೆಚ್ಚು ಡಾಲರ್‌ಗಳನ್ನು ವೆಚ್ಚ ಮಾಡುತ್ತಿದೆ ಎಂದು ಹೇಳುವುದು ತುಂಬ ಸುಲಭ. ದೇಶದಲ್ಲಿ ಹಣದುಬ್ಬರ ಮಟ್ಟವೂ ಗರಿಷ್ಠ ಮಟ್ಟದಲ್ಲಿ ಇದೆ. ಚಿನ್ನ ಹೊರತುಪಡಿಸಿದರೆ ದೇಶದ ಆಮದು ಪ್ರಮಾಣವು ಹೆಚ್ಚು ಕಡಿಮೆ ಒಂದೇ ಮಟ್ಟದಲ್ಲಿ ಇದೆ. ಋತುಮಾನದ ವ್ಯತ್ಯಾಸ ಹೊರತುಪಡಿಸಿದರೆ ಹೆಚ್ಚಿನ ಏರಿಳಿತವೇನೂ ಕಂಡು ಬರಲಾರದು.

ದೇಶದ ರಫ್ತು ಪ್ರಮಾಣವು ಕಡಿಮೆಯಾಗಿ ವ್ಯಾಪಾರ ಸಮತೋಲನವು ಪ್ರತಿ ವರ್ಷ 200 ನೂರು ಕೋಟಿ ಡಾಲರ್‌ಗಳಷ್ಟು (ರೂ.12,00,000 ಕೋಟಿ) ಕಡಿಮೆಯಾಗುತ್ತಿರುವುದು ನಿಜಕ್ಕೂ ನಿರಾಶಾದಾಯಕ ಸಂಗತಿ. ರಫ್ತು ಪ್ರಮಾಣದ ವಾರ್ಷಿಕ ವೃದ್ಧಿಯು ಗಮನಾರ್ಹವಾಗಿ ಇಳಿಮುಖಗೊಂಡಿರುವುದೇ ನಿಜವಾದ ಕಳವಳಕಾರಿ ವಿದ್ಯಮಾನವಾಗಿದೆ.

ರಫ್ತು ವಹಿವಾಟಿಗೆ ಸಂಬಂಧಿಸಿದ ಇತ್ತೀಚಿನ ಅಂಕಿ ಅಂಶಗಳೂ ನಿರಾಶೆ ಮೂಡಿಸುತ್ತವೆ. ಪ್ರಸಕ್ತ ಹಣಕಾಸು ವರ್ಷದ ಏಪ್ರಿಲ್ - ಜೂನ್ ತ್ರೈಮಾಸಿಕ ಅವಧಿಯಲ್ಲಿ ರಫ್ತು ಪ್ರಮಾಣವು ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ 1.5ರಷ್ಟು ಕಡಿಮೆಯಾಗಿದೆ. ಜತೆಗೆ ವ್ಯಾಪಾರ ಕೊರತೆಯು 50 ಶತಕೋಟಿ ಡಾಲರ್‌ಗಳಿಗಿಂತ (ರೂ.3,00,000 ಕೋಟಿಗಳಷ್ಟು) ಹೆಚ್ಚಾಗಿದೆ.

ಕ್ಷೀಣಿಸಿರುವ ರಫ್ತು ಬೆಳವಣಿಗೆ ಹೆಚ್ಚಿಸುವುದರಿಂದ ದೇಶದೊಳಗೆ ಹರಿದು ಬರುವ ಡಾಲರ್ ಪ್ರಮಾಣ ಏರಿಕೆಯಾಗಲಿದ್ದು, ಅದರಿಂದ ರೂಪಾಯಿ ಮೇಲಿನ ಒತ್ತಡವೂ ಕಡಿಮೆಯಾಗಲಿದೆ. ರಫ್ತು ವಹಿವಾಟಿನಿಂದ ಬರುವ ಗಳಿಕೆಯು ಹೆಚ್ಚು ವಿಶ್ವಾಸಾರ್ಹವಾಗಿದ್ದು ನಿರಂತರವಾಗಿಯೂ ಇರುತ್ತದೆ.

ಅದರೆ, ಹಲವಾರು ಜಾಗತಿಕ ವಿದ್ಯಮಾನಗಳು ರಫ್ತು ವಹಿವಾಟು ಹೆಚ್ಚಿಸಲು ಪ್ರತಿಕೂಲ ಒಡ್ಡುತ್ತಿವೆ. ಅಮೆರಿಕ, ಯೂರೋಪ್ ಒಕ್ಕೂಟದಲ್ಲಿನ ಮಂದಗತಿಯ ಆರ್ಥಿಕ ಚಟುವಟಿಕೆಗಳು ಮತ್ತು ಅನೇಕ ಅಭಿವೃದ್ಧಿಶೀಲ ದೇಶಗಳು ತಮ್ಮ ರಫ್ತು ಸ್ಪರ್ಧಾತ್ಮಕತೆ ಹೆಚ್ಚಿಸಲು ಇನ್ನಿಲ್ಲದಂತೆ ಪ್ರಯತ್ನಿಸಿರುವುದು ದೇಶಿ ರಫ್ತು ವಹಿವಾಟಿಗೆ ಅಡ್ಡಿಯಾಗಿದೆ.

ಅಮೆರಿಕದ ಕರೆನ್ಸಿ ಡಾಲರ್‌ನ ಮೌಲ್ಯವು, ಎಲ್ಲ ಪ್ರಮುಖ ದೇಶಗಳ ಕರೆನ್ಸಿ ಎದುರು ವೃದ್ಧಿಯಾಗುತ್ತಿದೆ. ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿ ಭಾರತವು ತನ್ನ ಸಾಧನೆ ಉತ್ತಮಪಡಿಸಿಕೊಳ್ಳಬೇಕೆಂದರೆ, ರಫ್ತುದಾರರಿಗೆ ನೆರವಾಗಲು ತನ್ನ ಆಂತರಿಕ ಸಂಗತಿಗಳಲ್ಲಿ ಸುಧಾರಣೆ ಮಾಡಬೇಕಾಗಿದೆ. ಇದು ಅನೇಕ ಆರ್ಥಿಕ ತಜ್ಞರ ವಿವೇಕದ ಸಲಹೆಯೂ ಆಗಿದೆ.

ದೇಶಿ ಸರಕು ತಯಾರಿಕಾ ರಂಗದ ಸ್ಪರ್ಧಾತ್ಮಕತೆಯು ನ್ಯಾಯೋಚಿತವಾಗಿ ರಫ್ತುದಾರರ ಸ್ಪರ್ಧಾ ಮಟ್ಟ ಮತ್ತು ಸಾಮರ್ಥ್ಯ ನಿರ್ಧರಿಸುವುದರ ಜೊತೆಗೆ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ವಹಿವಾಟು ಹೆಚ್ಚಿಸಲೂ ನೆರವಾಗಲಿದೆ.

ದೇಶಿ ರಫ್ತು ಉದ್ಯಮವು ಎದುರಿಸುತ್ತಿರುವ ಜಾಗತಿಕ ಮಾರುಕಟ್ಟೆಯ ಸವಾಲುಗಳನ್ನು ತಿಳಿದುಕೊಳ್ಳಲು ವಿಶೇಷ ಜ್ಞಾನವೇನೂ ಬೇಕಾಗಿಲ್ಲ. ರಫ್ತು ವಹಿವಾಟಿನಲ್ಲಿ ಮುಂಚೂಣಿಯಲ್ಲಿ ಇರಲು ಹಲವಾರು ವರ್ಷಗಳೇ ಬೇಕಾಗುತ್ತವೆ. ರಫ್ತಿನಲ್ಲಿ ಶೇ 40ರಷ್ಟು ಕೊಡುಗೆ ನೀಡುವ ಸಣ್ಣ ಮತ್ತು ಮಧ್ಯಮ ಕೈಗಾರಿಕಾ (ಎಸ್‌ಎಂಇ) ವಲಯವು  ಈ ಕಠಿಣ ಸವಾಲು ಎದುರಿಸಲು ಅಗತ್ಯವಾದ  ಉತ್ತೇಜನಗಳಿಲ್ಲದೇ ಸೊರಗಿದೆ.

ದೇಶದ ರಫ್ತು ವಹಿವಾಟಿನ ಸಾಂಪ್ರದಾಯಿಕ ಮಾರುಕಟ್ಟೆಗಳಲ್ಲಿ ಈಗ ವಹಿವಾಟು ವಿಸ್ತರಿಸಲು ಅವಕಾಶಗಳಿಲ್ಲ. ಹೊಸ ಮಾರುಕಟ್ಟೆಗಳನ್ನು ಹುಡುಕಿಕೊಂಡು ಹೋಗುವ ಪ್ರಯತ್ನಗಳೂ ಕಡಿಮೆ ಇವೆ. ಜತೆಗೆ ಇಂತಹ ಹೊಸ ಮಾರುಕಟ್ಟೆಗಳು ಹೆಚ್ಚು ಲಾಭದಾಯಕವೂ ಆಗಿಲ್ಲ.

ಸಂಕೀರ್ಣಮಯ ಮತ್ತು ಪುರಾತನ ಕಾಲದ ನೀತಿ ನಿಯಮಗಳನ್ನು ಪಾಲಿಸುವುದು ಹೊಸ ರಫ್ತುದಾರರಿಂದ ಸಾಧ್ಯವೂ ಇಲ್ಲ. ಒಂದು ಅಧ್ಯಯನದ ಪ್ರಕಾರ, ರಫ್ತುದಾರನೊಬ್ಬ ವಿದೇಶಗಳಿಂದ ಸರಕು ಪೂರೈಕೆಯ ಆದೇಶ ಪಡೆದುಕೊಂಡರೆ, ವಹಿವಾಟು ಪೂರ್ಣಗೊಳಿಸಲು ಆತ 60 ಬಗೆಯ ಅರ್ಜಿ ನಮೂನೆ ಮತ್ತು ನಿಯಮಗಳನ್ನು ಪಾಲಿಸಬೇಕಾಗುತ್ತದೆ.

ಇನ್ನೊಂದೆಡೆ ಅಧಿಕಾರಶಾಹಿಯ ದೊಡ್ಡಸ್ಥಿಕೆಯ ಧೋರಣೆಯು ಕೂಡ ರಫ್ತು ವಹಿವಾಟದಾರರು ರೋಸಿ ಹೋಗುವಂತೆ ಮಾಡುತ್ತದೆ. ಈಗಾಗಲೇ ದುಬಾರಿಯಾಗಿ ಪರಿಣಮಿಸಿರುವ ಮೂಲ ಸೌಕರ್ಯಗಳ ಜತೆಗೆ ಇತರ ವೆಚ್ಚಗಳು, ಪ್ರತ್ಯಕ್ಷ ಹಾಗೂ ಪರೋಕ್ಷ ಒತ್ತಡಗಳೂ ವಹಿವಾಟುದಾರರನ್ನು ನಿರುತ್ಸಾಹಗೊಳಿಸುತ್ತವೆ.

ರಫ್ತುದಾರರಿಗೆ ದೊರೆಯಬೇಕಾದ ವಿತ್ತೀಯ ಉತ್ತೇಜನಾ ಕ್ರಮಗಳೂ ಸಿಗುತ್ತಿಲ್ಲ. ರಫ್ತುದಾರರ ಅಭಿಪ್ರಾಯಕ್ಕೆ ವಿರುದ್ಧವಾಗಿ ಕೇಂದ್ರ ಸರ್ಕಾರವು ಉತ್ತೇಜನಾ ಕ್ರಮಗಳನ್ನು ಕೆಲ ವರ್ಷಗಳ ಹಿಂದೆ ಕೈಬಿಟ್ಟಿತ್ತು. ಈಗ ನಾವು ಅದರ ಪರಿಣಾಮಗಳನ್ನು ಕಾಣುತ್ತಿದ್ದೇವೆ.
ಸರಕುಗಳ ರಫ್ತು ವಹಿವಾಟು ಹೆಚ್ಚಳದಿಂದ ಉದ್ಯೋಗ ಅವಕಾಶ, ಆರ್ಥಿಕ ಬೆಳವಣಿಗೆ, ವಿದೇಶಿ ವಿನಿಮಯದ ಹರಿವು  ಹೆಚ್ಚಳ ಸಾಧ್ಯವಾಗಲಿದೆ ಎನ್ನುವುದು ಕೇಂದ್ರ ಸರ್ಕಾರಕ್ಕೆ ಮನವರಿಕೆಯಾಗಬೇಕಾಗಿದೆ.

ದೇಶಿ ಸರಕು ತಯಾರಿಕಾ ಕೈಗಾರಿಕಾ ವಲಯದ ಸ್ಪರ್ಧಾತ್ಮಕತೆ ಹೆಚ್ಚಿಸಿ ಜಾಗತಿಕ ಮಾರುಕಟ್ಟೆಯಲ್ಲಿ ಮುನ್ನುಗ್ಗುವಂತೆ ಮಾಡುವ ನಿಟ್ಟಿನಲ್ಲಿ ಸರ್ಕಾರ ಕಾರ್ಯಪ್ರವೃತ್ತವಾಗಬೇಕಾಗಿದೆ. ಕಳೆದ ವರ್ಷವೇ ಪ್ರಕಟಿಸಲಾಗಿರುವ ಹೊಸ ಸರಕು ತಯಾರಿಕಾ ನೀತಿಯೂ ಸೇರಿದಂತೆ ಸರ್ಕಾರ ಇದುವರೆಗೆ ಕೈಗೊಂಡಿರುವ ಕ್ರಮಗಳು ರಫ್ತು ಉದ್ಯಮದ ಅಗತ್ಯಗಳನ್ನು ಈಡೇರಿಸಲು ವಿಫಲವಾಗಿವೆ.

ಕೈಗಾರಿಕಾ ಕಾರಿಡಾರ್ ನಿರ್ಮಾಣ ಆಲೋಚನೆಯು ಉತ್ತಮ ಹೆಜ್ಜೆಯಾಗಿದ್ದರೂ, ಇಂತಹ ಯೋಜನೆ ಪೂರ್ಣಗೊಳ್ಳಲು ವರ್ಷಗಳೇ ಹಿಡಿಯಲಿವೆ. ಯೋಜನೆಗಳು ಪೂರ್ಣಗೊಳ್ಳಲು ಎಷ್ಟು ವಿಳಂಬವಾಗುತ್ತದೆ ಎನ್ನುವುದಕ್ಕೆ ನಮ್ಮಲ್ಲಿ ಸಾಕಷ್ಟು ನಿದರ್ಶನಗಳಿವೆ.

ಉದ್ದಿಮೆ ರಂಗಕ್ಕೆ ನೀಡಬೇಕಾಗಿರುವ ಉತ್ತೇಜನಾ ಕ್ರಮಗಳನ್ನು ತಕ್ಷಣಕ್ಕೆ ಮರಳಿ  ಪ್ರಕಟಿಸಬೇಕಾಗಿದೆ. ತ್ವರಿತ ಫಲಿತಾಂಶ ಪಡೆಯಲು ಯೋಜನೆಗಳನ್ನು ವಿಳಂಬ ಇಲ್ಲದೆ ಜಾರಿಗೂ ತರಬೇಕಾಗಿದೆ. ಕೇಂದ್ರ ಸರ್ಕಾರವು  ವಿದೇಶಗಳಲ್ಲಿನ ತನ್ನ ಕಚೇರಿಗಳ ಮೂಲಕ ರಫ್ತು ವಹಿವಾಟು ಹೆಚ್ಚಿಸಲು ಮತ್ತು `ಎಸ್‌ಎಂಇ' ವಲಯದ ರಫ್ತು ಪ್ರಮಾಣ ಹೆಚ್ಚಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ.

ವಿಶೇಷ ಹಕ್ಕುಗಳನ್ನು ಹೊಂದಿರುವ ನಮ್ಮ ಆಡಳಿತಶಾಹಿ ಕೂಡ ಇಂತಹ ಕ್ರಮಗಳನ್ನು ಸ್ವಾಗತಿಸುತ್ತದೆ ಎಂದು ನನಗೆ ಅನಿಸುತ್ತದೆ.
ಕೇಂದ್ರ ಸರ್ಕಾರ ಮತ್ತು ಆರ್‌ಬಿಐ, ಅಲ್ಪಾವಧಿಯಲ್ಲಿ ರೂಪಾಯಿ ಮೌಲ್ಯಕ್ಕೆ ಆಗಿರುವ ನಷ್ಟ ಸರಿಪಡಿಸಲು ಪ್ರಯತ್ನಿಸುತ್ತಿವೆ. ಇದಷ್ಟೇ ಸಾಲದು. ದೀರ್ಘಾವಧಿಯಲ್ಲಿಯೂ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಸರ್ಕಾರ ಮತ್ತು ಕೇಂದ್ರೀಯ ಬ್ಯಾಂಕ್‌ಗಳು  ಕಾರ್ಯಪ್ರವೃತ್ತವಾಗಲಿವೆ  ಎಂದು ನಾನು ಆಶಿಸಿರುವೆ.

ನಿಮ್ಮ ಅನಿಸಿಕೆ ತಿಳಿಸಿ: editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT