ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲೋಕಪಾಲ ಜಪವೊ, ಜೋಕುಪಾಲವೊ..

ಅಕ್ಷರ ಗಾತ್ರ

ಸ್ವಾಮಿ ದೇವನೆ ‘ಲೋಕಪಾಲ’ನೆ
ತೇ ನಮೋಸ್ತು ನಮೋಸ್ತುತೆ...
ದೆಹಲಿಯ ಗಡಗಡ ನಡುಗಿಸುವ ಚಳಿಯಲ್ಲೂ, ಹಲ್ಲು­ಗಳನ್ನು ಕಟಕಟಗೊಳಿಸುತ್ತಾ ಪೆಕರ, ‘ಸ್ವಾಮಿದೇವನೆ’ ಗುನುಗು­ನಿಸುತ್ತಿರುವುದನ್ನು ಕಂಡು ಅವನ ದೆಹಲಿ ಸ್ನೇಹಿತರಿಗೆ ಅಚ್ಚರಿ. ‘ಏನ್ ಪೆಕರ ಅವರೇ,ದೇವರ ಸ್ತುತಿ ಆರಂಭಿಸಿದ್ದೀರಿ. ನಿಜ ಹೇಳಬೇಕಂದ್ರೆ ಅದು ದೇವರ ಸ್ತುತಿ ಅಲ್ಲ. ಸಿನಿಮಾ ಹಾಡು ಎನ್ನುವುದು ನೆನಪಿನಲ್ಲಿರಲಿ’ ಎಂದು ಸ್ನೇಹಿತರು ಪೆಕರನಿಗೆ ಕರೆಕ್ಷನ್ ಹಾಕಿದರು.

‘ಎರಡು ವಾರ ರಾಜ್ಯಸಭೆ, ಲೋಕಸಭೆ ಕಲಾಪಕ್ಕೆಂದು ಹೋಗಿದ್ದೆ, ಪ್ರತಿದಿನ ಅಲ್ಲಿ ಎರಡೂ ಕಡೆ ‘ಭಜನೆ’ ನಡೀತಾ ಇತ್ತು. ಅದನ್ನು ಕೇಳಿ,ಕೇಳಿ ನನಗೂ ಅದೇ ಬಾಯಿಪಾಠ ಆಗಿ ಬಿಟ್ಟಿದೆ. ಬಾಯಿಬಿಟ್ಟರೆ, ’ಲೋಕಪಾಲ’ ಎನ್ನುವ ಪದವೇ ಹೊರಗೆ ಬಂದು ಬೀಳ್ತಾ ಇದೆ’ ಎಂದು ಪೆಕರ ತನ್ನ ತೊಂದರೆ ಹೇಳಿಕೊಂಡ.

‘ನಲವತ್ತಾರು ವರ್ಷದಿಂದ ಇದೇ ಪದ ಹೇಳಿಕೊಂಡು ಬಂದರೂ ಯಾರೂ ಕಿವಿಗೆ ಹಾಕಿಕೊಳ್ಳದ ಲೋಕಪಾಲರನ್ನು, ಈಗ ನಾಮುಂದು, ತಾಮುಂದು ಅಂತ ಓಲೈಸಲು ಪ್ರತಿಪಕ್ಷ­ಗ­ಳಲ್ಲೇ ಕಾಂಪಿಟೇಷನ್ ಆರಂಭವಾಗಿರೋದಕ್ಕೆ ಕಾರಣ ಹುಡು­ಕೋದು ಒಳ್ಳೇದು’ ಪೆಕರನ ಸ್ನೇಹಿತರು ಸಲಹೆ ಕೊಟ್ಟರು. ‘ಎಲ್ಲರೂ ಲೋಕಪಾಲ, ಲೋಕಪಾಲ ಎಂದು ಭಜನೆ ಮಾಡ್ತಾ ಇರೋದು, ಒಂಥರಾ ಭೂತದ ಬಾಯಿಯಲ್ಲಿ ಭಗವದ್ಗೀತೆ ಪಠಣವಾದಂತೆ ಕೇಳ್ತಾ ಇದೆ.

ಭ್ರಷ್ಟರ ಬಂಡವಾಳವನ್ನು ಗುಡಿಸಿಹಾಕಲು ‘ಆಮ್‌ಆದ್ಮಿ’ ಪೊರಕೆ ಹಿಡಿದು ಬರ್ತಾ ಇದ್ದಂಗೇ ತತ್ತರಗುಟ್ಟಿರುವ ಪುಢಾರಿಗಳು ಈ ರೀತಿ ಭಜನೆಗೆ ಗಪ್‌ಚುಪ್ಪಾಗಿ ಬೆಂಬಲ ಕೊಟ್ಟಿದ್ದಾರೆ. ಇದಕ್ಕೆ ಬೇರೆ ಯಾವುದೇ ವಿಶೇಷ ಕಾರಣ ಹುಡುಕೋ ಅಗತ್ಯ ಇಲ್ಲ’ ಎಂದು ಪೆಕರ ವಿಶ್ಲೇಷಣೆ ಮುಂದಿಟ್ಟ. ’ಲೋಕಪಾಲರು ಬಂದಕೂಡಲೇ ಭ್ರಷ್ಟಾಚಾರ ಕಡಿಮೆ ಆಗಿಬಿಡುತ್ತೋ? ಲೋಕಪಾಲ ಬಿಲ್‌ಗೆ ಅಸ್ತು ಎನ್ನುತ್ತಿ­ದ್ದಂತೆಯೇ ‘ಆಡು ಮುಟ್ಟದ ಸೊಪ್ಪಿಲ್ಲ, ಲಾಲೂ ಮೇಯದ ಮೇವಿಲ್ಲ’ ಎಂಬ ಗಾದೆ ಮಾತನ್ನೇ ಹುಟ್ಟು ಹಾಕಿರುವ ಲಾಲೂಸಾಬ್ ಸೆರೆಮನೆಯಿಂದ ನೇರವಾಗಿ ಅವರ ಮನೆಯ ಕಡೆ ಸಲೀಸಾಗಿ ನಡೆದು ಹೊರಟೇ ಬಿಟ್ಟರಂತಲ್ಲಾ.

ದೊಡ್ಡ ಮನುಷ್ಯರ ಮೇಲಿನ ಕೇಸಿನ ಕತೆಯೇ ಹೀಗಲ್ಲವೇ? ಅವರ ವಿರುದ್ಧ ದೂರು ಕೊಟ್ಟರೆ ಮೊದಲನೆಯ ಕೋರ್ಟ್‌ನಿಂದ ಆ ಕೇಸು ಮೇಲಿನ ಕೋರ್ಟ್‌ಗೆ ಮೂವ್ ಆಗಲು ಹದಿನೈದು ವರ್ಷ ಬೇಕಾಯ್ತು. ೧೧೬ ಸಂಸದರು ಕ್ರಿಮಿನಲ್‌ಗಳಿದ್ದಾರೆ. ಹೊಸ ಆಶಾಕಿರಣ ಎಂದು ಜನ ನಂಬಿರುವ ಟೋಪಿವಾಲಾ ಪಕ್ಷದಲ್ಲೂ ಹದಿನಾರು ಕ್ರಿಮಿನಲ್ ಶಾಸಕರಿದ್ದಾರೆ. ಇವರೆಲ್ಲಾ ಸೇರಿ ಲೋಕಪಾಲ,ಲೋಕಪಾಲ ಅಂತ ಹೇಳ್ತಾ ಇರೋದೇ ಕಾಮಿಡಿ ಆಗಿಲ್ಲವಾ? ಇದರಿಂದ ಭ್ರಷ್ಟಾಚಾರ ನಿರ್ಮೂಲನೆ ಆಗಿಯೇ ಬಿಡುತ್ತಾ?’- ಪೆಕರನ ಸ್ನೇಹಿತ ಯ್ಯಾಂಗ್ರೀಯಂಗ್ ಮ್ಯಾನ್ ತರಹ ಪ್ರಶ್ನೆಗಳ ಮಳೆಯನ್ನೇ ಸುರಿಸಿದ.

‘ಓಲ್ಡಾನ್...ಓಲ್ಡಾನ್...ಇದನ್ನೆಲ್ಲಾ ಪ್ರಶ್ನಿಸಲೆಂದೇ ದೇವರು ನಿನ್ನನ್ನು ಸೃಷ್ಟಿಸಿರಬಹುದು. ಲೋಕಪಾಲ ಜಾರಿಗೆ ಬರೋದು ಇನ್ನೂ ತಡವಾಗುತ್ತೆ. ಲೋಕಪಾಲರು ಬಂದ ಕೂಡಲೇ ಎಲ್ಲರೂ ಸತ್ಯಹರಿಶ್ಚಂದ್ರರೂ, ಸತ್ಯಸಂಧ ಪ್ರಾಮಾಣಿಕರೂ ಆಗಿಬಿಡ್ತಾರೆ ಅಂತ ಯಾರೂ ತಿಳಿದುಕೊಂಡಿಲ್ಲ. ಶಿಕ್ಷೆಯ ಭಯವೊಂದಿದ್ದರೆ ಭ್ರಷ್ಟಾಚಾರ ತನಗೆ ತಾನೇ ಕಡಿಮೆಯಾಗುತ್ತೆ. ಲೋಕ ತಿಳೀಬೇಕು, ಲೆಕ್ಕ ಕಲೀಬೇಕು.’ ಪೆಕರ ತನ್ನದೇ ಶೈಲಿಯಲ್ಲಿ ಭಾಷಣ ಆರಂಭಿಸಿದ.

‘ದೆಹಲಿ ಚಳಿಯ ಕೊರೆತವೇ ಸಾಕು. ಭಾಷಣದ ಮೂಲಕ ನೀನೂ ಕೊರೆಯ ಬೇಡ ಮಾರಾಯ, ಲೋಕಪಾಲದ ವಿಷಯದಲ್ಲಿ ದೆಹಲಿಯನ್ನೇ ನಡುಗಿಸಿದ್ದ ಅಣ್ಣಾ ಅವರ ಬೆಂಬಲಕ್ಕೆ ಈಗ ಯುವರಾಜ ರಾಹುಲರಿದ್ದಾರೆ. ಅಣ್ಣಾ ಜೊತೆ ಇದ್ದ ತಮ್ಮುಡು ಕ್ರೇಜಿವಾಲರು ದೂರ ಹೋಗಿದ್ದಾರೆ. ಒಂದೇ ವಿಷಯ, ಒಂದೇ ಹೋರಾಟ, ಈಗ ನೋಡಿದರೆ ಅವನ್‌ಬಿಟ್, ಇವನ್‌ಬಿಟ್ ಅವನ್ಯಾರ್ ಎನ್ನುವಂತಾಗಿದೆ. ಇದೊಳ್ಳೆ ಜೋಕ್‌ಪಾಲ್ ಆಯ್ತುಬಿಡ್ರಿ’ ಎಂದು ಪೆಕರನ ಸ್ನೇಹಿತರು ಉಡಾಯಿಸಿದರು.

‘ಇನ್ನೊಂದಷ್ಟು ಜೋಕ್ ಇದೆ ಕೇಳಿ, ಜನತಾದರ್ಶನದಲ್ಲಿ ನಮ್ ಅಯ್ಯ ಅವರು ಅರ್ಜಿಯೊಂದನ್ನು ನೋಡಿ ಬೆಚ್ಚಿಬೀಳಲಿಲ್ಲವೇ? ಡಿಕುಶಿಮಾರ ಅವರ ಬ್ರದರ್, ಕಲ್ಲುಗಣಿ ಮಣ್ಣು ತೆಗೆದು ಕಂಡವರ ಜಮೀನಿಗೆ ಸುರಿದು ಜನರಿಗೆ ಕಾಟ ಕೊಡ್ತಾ ಇದ್ದಾರೆ. ಕೇಳಿದರೆ, ನಾನು ಎಂಪಿ ಅಂತ ದಬಾಯಿಸ್ತಾರೆ, ಮತ್ತೊಬ್ಬ ಶಾಸಕ ಜಾರಕಿಹೊಳಿ ವಿರುದ್ಧವೂ ನೇರ ದೂರು ಬಂದಿದೆ. ’ಕೈ’ ಪಾರ್ಟಿ ಶಾಸಕರು, ಸಂಸದರ ಮೇಲೆ ಹೀಗೆ ನೇರ ದೂರುಗಳ ಮೇಲೆ ದೂರುಗಳು ಬಂದರೂ, ನಮ್ಮ ಡಿಕುಶಿಮಾರರು ದೆಹಲಿಗೆ ದೌಡಾಯಿಸಿ ಮಂತ್ರಿಗಿರಿಗಾಗಿ ಒತ್ತಡ ಆರಂಭಿಸಲಿಲ್ಲವೇ? ಜನಪ್ರತಿನಿಧಿಗಳೆಲ್ಲಾ ಹೀಗೆ ಜೋಕರ್‌ಗಳ ರೀತಿ ಆಡೋದ್ರಿಂದ ಇದನ್ನು ಜೋಕ್‌ಪಾಲ್ ಎಂದು ಕರೆದಿರುವುದೇ ಸರಿ ತಾನೇ?‘ -ಪೆಕರ ವಿವರಿಸಿದ.

‘ಜನಪ್ರತಿನಿಧಿಗಳ ಆಟ ಜಾಸ್ತಿ ಆಯ್ತು ಸಾರ್, ತಾನು ಕಳ್ಳ ಪರರ ನಂಬ ಎನ್ನುವಂತೆ ಬೀದರ್‌ನಲ್ಲಿ ’ಕಂಡ್ರಾ’ ಏನಾಯ್ತು ಅಂತ? ಎಲ್ಲಾ ಜನಪ್ರತಿನಿಧಿಗಳೂ ಸೇರಿ ಅಧಿಕಾರಿಯೊಬ್ಬರನ್ನು ಜನರೆದುರೇ ಕಂಡಾಪಟ್ಟೆ ನಿಂದಿಸಿ, ಹಿಗ್ಗಾಮುಗ್ಗಾ ಮಾನ ಹರಾಜು ಹಾಕಿದ್ರಂತಲ್ಲಾ? ಸರೀನಾ?’ ‘ಅದಿರಲಿ, ಅದೇ ಸಭೆಯಲ್ಲಿ ನಮ್ಮ ಕನ್ನಡ,ಸಂಸ್ಕೃತಿ ಸಚಿವರೇ ಅಧಿಕಾರಿಗೆ ಡೋಂಟ್ ಟಾಕ್ ಟೂ ಮಚ್, ಶಟಪ್ ಅಂಡ್ ಗೆಟೌಟ್ ಎಂದು ಇಂಗ್ಲಿಷ್‌ನಲ್ಲಿ ಅಬ್ಬರಿಸಿದಾಗ ಇಡೀ ಸಭೆ ಬೆಚ್ಚಿಬಿದ್ದು, ಅವರ ‘ಅಭಿನಯ ಚಾತುರ್ಯ’ಕ್ಕೆ ದಂಗಾಗಿಹೋಯಿತಂತೆ.

ತಪ್ಪನ್ನು ಅಧಿಕಾರಿಗಳ ಮೇಲೆ ಹೊರಿಸೋದು ಶಾಸಕರಿಗೆ ಕಾರಂಜಾ ನೀರು ಕುಡಿದಷ್ಟೇ ಸಲೀಸಾಗಿದೆ. ಶಾಸಕರನ್ನು ಬಲೆಗೆ ಕೆಡವುವುದು ಅಧಿಕಾರಿಗಳಿಗೆ ಅಭ್ಯಾಸವಾಗಿಬಿಟ್ಟಿದೆ. ಭ್ರಷ್ಟಾಚಾರಕ್ಕೆ ಎರಡು ಮುಖ’ ಎಂದು ಪೆಕರ ಮತ್ತಷ್ಟು ವಿವರಣೆ ನೀಡಿದ. ‘ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು ಬೀದರ್‌ನಲ್ಲಿ ಶಟಪ್ ಅಂದಿರಬಹುದು. ಆದರೆ ಇಲಾಖೆಯ ಅಧಿಕಾರವನ್ನೇ ಲೋಕಾಯುಕ್ತ ತನಿಖೆ ಎದುರಿಸುತ್ತಿರುವವರ ಕೈಗೇ ಒಪ್ಪಿಸಿದ್ದಾರಲ್ಲಾ? ಖಜಾನೆಗೆ ಭದ್ರವಾಗಿ ಬೀಗಹಾಕಿ, ಕಳ್ಳನ ಕೈಗೆ ಕೀಲಿ ಕೊಟ್ಟಂತಾಗಿದೆಯಲ್ಲಾ ಸಾರ್ ಕತೆ.

ಅಲ್ಲಿ ರಾಜ್ಯೋತ್ಸವ ಮೆಡಲ್‌ಗಳೇ ನಾಪತ್ತೆ! ಇಲ್ಲದಿರುವ ಸಂಸ್ಥೆಗಳಿಗೇ ಹೇರಳ ಧನಸಹಾಯ! ಇತ್ತೀಚೆಗೆ ತಾನೇ ನಿವೃತ್ತರಾದ ಸದರಿ ಇಲಾಖೆ ಪ್ರಧಾನ ಕಾರ್ಯದರ್ಶಿಗಳ ಮನೆಯನ್ನು ಲೋಕಾಯುಕ್ತರು ರೈಡ್ ಮಾಡಿದಾಗ ಕೇರಳದ ಅನಂತ ಪದ್ಮನಾಭ ದೇವಸ್ಥಾನದ ನೆಲಮಾಳಿಗೆಯನ್ನೇ ಓಪನ್ ಮಾಡಿದಂತಾಯಿತಂತೆ.

ಈ ’ಝಳಕ್’ ನಿಂದ ಜನ ಬೆಚ್ಚಿಬಿದ್ದಿರುವಾಗ ಬೀದರ್‌ನಲ್ಲಿ ಅಧಿಕಾರಿಗಳಿಗೆ ಶಟಪ್ ಅಂದರೆ ಎಲ್ಲವೂ ಸರಿಹೋಗುತ್ತಾ ಸಾರ್?’ ಪೆಕರನ ಸ್ನೇಹಿತರು ಆಮ್ ಆದ್ಮಿ ಕಾರ್ಯಕರ್ತರಂತೆ ಆಕ್ರೋಶ ವ್ಯಕ್ತ ಪಡಿಸಿದರು. ‘ಈ ದೇಶವನ್ನು ದಯಾಮಯನಾದ ಲೋಕಪಾಲನೇ ಕಾಪಾಡಬೇಕು’ ಎಂದು ಹೇಳುತ್ತಾ ಪೆಕರ ರೈಲ್ವೆ ಸ್ಟೇಷನ್ನಿನತ್ತ ಸಾಗಿದ.
-ಜಿಎಮ್ಮಾರ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT