ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಹಿವಾಟು ನಿರ್ಧರಿಸುವ ಜಾಗತಿಕ ವಿದ್ಯಮಾನಗಳು

Last Updated 27 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಷೇರು ಪೇಟೆಯಲ್ಲಿನ ಬದಲಾವಣೆಗಳು ತ್ವರಿತ, ಮತ್ತು ಹರಿತ, ಎಂಬುದು ಕಳೆದ ವಾರದ ವಹಿವಾಟಿನ ಪರಿಯಿಂದ ತಿಳಿಯುತ್ತದೆ. ಜಾಗತೀಕರಣದ ನಂತರದಲ್ಲಿ ಷೇರಿನ ದರಗಳ ಏರಿಳಿತಕ್ಕೆ ಸ್ಥಳೀಯ ಅಂಶಗಳಿಗಿಂತ ಜಾಗತಿಕ ಅಂಶಗಳಿಗೇ ಹೆಚ್ಚಿನ ಆಧ್ಯತೆಯಿರುತ್ತದೆ. ಹಿಂದಿನ ವಾರಗಳಲ್ಲಿ ಸ್ಥಳೀಯ ಅಂಶಗಳಾದ ಹಣದುಬ್ಬರ, ಬಡ್ಡಿ ದರ ಹೆಚ್ಚಳ ಮುಂತಾದ ಅಂಶಗಳು ಚಾಲನೆಗೆ ಬಂದರೆ ಹಿಂದಿನ ವಾರ ಜಾಗತಿಕ ಅಂಶವು ನಕಾರಾತ್ಮಕವಾದ ಪ್ರಭಾವ ಭೀರಿ ಪೇಟೆಯನ್ನು ತಲ್ಲಣಗೊಳಿಸಿತು. ಲಿಬಿಯಾದಲ್ಲಿನ ಅಶಾಂತಿಯ ಕಾರಣ ಕಚ್ಚಾ ತೈಲ ಬೆಲೆಯು ದಿಢೀರ್ ಏರಿಕೆ ಕಂಡು ಇದು ಕೈಗಾರಿಕಾ ಪ್ರಗತಿಗೆ ಕಂಟಕಮಯವೆಂಬ ಕಾರಣಕ್ಕಾಗಿ ಪೇಟೆಯಲ್ಲಿ ಮಾರಾಟದ ಒತ್ತಡವೆನ್ನೆದುರಿಸಬೇಕಾಯಿತು. ಈ ಹಿಂದೆ ಚೀನಾ ದೇಶದಲ್ಲಿ ನಡೆದ ಒಲಿಂಪಿಕ್ ಕ್ರೀಡಾ ಸಮಯದಲ್ಲಿ ಕಚ್ಚಾ ತೈಲವು ಸುಮಾರು 147 ಡಾಲರ್‌ವರೆಗೂ ತಲುಪಿತ್ತು. ಆದರೆ ಈಗ ಆ ಹಂತಕ್ಕೆ ತಲುಪಿಲ್ಲವಾದರೂ ಕದಡಿದ ವಾತಾವರಣದಲ್ಲಿರುವ ಪೇಟೆಗೆ ನಡುಕ ಹುಟ್ಟಿಸಲು ಸಕಾರಣವನ್ನು ಕಲ್ಪಿಸಿತ್ತು.
                             
 ಈ ಮಧ್ಯೆ ಕಾರ್ಪೊರೇಟ್‌ಗಳ ಫಲಿತಾಂಶಗಳು ಮಿಶ್ರಿತವಾಗದ್ದವು. ಕಾರ್ಪೊರೇಟ್ ಫಲಗಳು ಉತ್ತಮವಾಗಿದ್ದರೂ ಸಹ ವಿದೇಶೀ ವಿತ್ತೀಯ ಸಂಸ್ಥೆಗಳ ಮಾರಾಟದ ಒತ್ತಡ ಷೇರಿನ ಬೆಲೆಗಳನ್ನು ಕೆಳ ಜಗ್ಗಿತು. ಗುರುವಾರದಂದು ವಿದೇಶೀ ವಿತ್ತೀಯ ಸಂಸ್ಥೆಗಳು ಸುಮಾರು ರೂ. 2700 ಕೋಟಿ ಮೌಲ್ಯದ ಷೇರುಗಳನ್ನು ಮಾರಾಟ ಮಾಡಿ ಸೂಚ್ಯಂಕವನ್ನು 545 ಪಾಯಿಂಟುಗಳ ಭರ್ಜರಿ ಕುಸಿತಕ್ಕೆ ಕಾರಣವಾಯಿತು. ಸ್ಥಳೀಯ ವಿತ್ತಿಯ ಸಂಸ್ಥೆಗಳ ರೂ. 1029 ಕೋಟಿ ಮೌಲ್ಯದ ಖರೀದಿಯು ಈ ಕುಸಿತಕ್ಕೆ ತಡೆಯೊಡ್ಡಲಾರದಾಯಿತು.

ಒಟ್ಟಾರೆ ಹಿಂದಿನವಾರ 510 ಪಾಯಿಂಟುಗಳ ಇಳಿಕೆ ಕಂಡ ಸಂವೇದಿ ಸೂಚ್ಯಂಕ ತನ್ನೊಂದಿಗೆ ಮಧ್ಯಮ ಶ್ರೇಣಿ ಸೂಚ್ಯಂಕವನ್ನು 308 ಪಾಯಿಂಟುಗಳಷ್ಟು, ಕೆಳಮಧ್ಯಮ ಶ್ರೇಣಿ ಸೂಚ್ಯಂಕವನ್ನು 339 ಪಾಯಿಂಟುಗಳಷ್ಟೂ ಕೆಳಜಗ್ಗಿತು. ವಾರದಲ್ಲಿ ವಿದೇಶೀ ವಿತ್ತೀಯ ಸಂಸ್ಥೆಗಳು ರೂ. 4,469 ಕೋಟಿ ಮೌಲ್ಯದ ಷೇರು ಮಾರಾಟ ಮಾಡಿದರೆ ಸ್ಥಳೀಯ ವಿತ್ತೀಯ ಸಂಸ್ಥೆಗಳು ರೂ.  2,324 ಕೋಟಿ ಮೌಲ್ಯದ ಷೇರು ಖರೀದಿಸಿವೆ. ಷೇರು ಪೇಟೆ ಬಂಡವಾಳೀಕರಣ ಮೌಲ್ಯ ಹಿಂದಿನ ವಾರದ ರೂ.  64.75 ಲಕ್ಷ ಕೋಟಿಯಿಂದ ರೂ.  62.89 ಲಕ್ಷ ಕೋಟಿಗೆ ಇಳಿದಿತ್ತು.

ಲಾಭಾಂಶ ವಿಚಾರ
ಆಲ್ಪಲವಲ್ ಶೇ 300, ಟಾಟಾ ಇಂಡಿಯಾ ಶೆ 40, ಬಿ.ಒ.ಸಿ. ಶೇ 15, ಕ್ಲಾರಿಯಂಟ್ ಕೆಮಿಕಲ್ಸ್ ಶೇ 200, ಕ್ಲಾರೀಸ್ ಲೈಫ್ ಸೈನ್ಸಸ್ ಶೇ 20, ಕ್ಯಾಸ್ಟ್ರಾಲ್ ಇಂಡಿಯಾ ಶೇ 80 (ನಿಗಧಿತ ದಿನಾಂಕ 13-6-11), ಫ್ಯಾಗ್ ಬೇರಿಂಗ್ಸ್ ಶೇ 50 (ನಿಗಧಿತ ದಿನಾಂಕ 1-4-11), ಫುಲ್‌ಫೋರ್ಡ್ ಶೇ 45 ಗುಡ್ ಇಯರ್ ಶೇ 70, (ನಿ. ದಿ. 10-6-11), ಐಟಿಡಿ ಸಿಮೆಂಟೇಷನ್ ಇಂಡಿಯಾ ಲಿ. ಶೇ 15 (ನಿ. ದಿ. 21-4-11), ಕೆ.ಎಸ್.ಬಿ. ಪಂಪ್ಸ್ ಶೇ 80 (ನಿ. ದಿ. 10-3-11), ಆರ್‌ಸಿ ಸ್ಟಂಸ್ ಶೇ 24 ಕಾನಬಕ್ಸಿ ಲ್ಯಾಬ್ ಶೇ 20 (ನಿ. ದಿ. 30-4-11), ರೇನ್ ಕಮಾಡಿಟೀಸ್ ಶೇ 46 ಸ್ಟ್ರೈಡ್ಸ್ ಆರ್ಕೊ ಲ್ಯಾಬ್ ಶೇ 15, ವೆಸುವಿಯಸ್ ಶೇ 40, ಅರೆವಾ ಟಿ ಅಂಡ್ ಡಿ ಲಿ. ಶೇ 90 (ಮುಖ ಬೆಲೆ ರೂ. 2).

ಬೋನಸ್ ಷೇರಿನ ವಿಚಾರ
* ಹಿಂದೂಸ್ಥಾನ್ ಝಿಂಕ್ ಕಂಪೆನಿ ವಿತರಿಸಲಿರುವ 1:1ರ ಅನುಪಾತದ ಬೋನಸ್‌ಗೆ ಮಾರ್ಚ್ 8 ನಿಗದಿತ ದಿನವಾಗಿದೆ. ಮಾರ್ಚ್ 7 ರಿಂದ ವಿನಾ ಬೋನಸ್ ವಹಿವಾಟು ಆರಂಭವಾಗಲಿದೆ.

* ಕೆ.ಎಸ್.ಬಿ. ಪಂಪ್ಸ್ ಕಂಪೆನಿಯು 1:1ರ ಅನುಪಾತದ ಬೋನಸ್ ಪ್ರಕಟಿಸಿದೆ.

* ಎಸಿಐಎಲ್ ಕಾಟನ್ ಇಂಡಸ್ಟ್ರೀಸ್ ಕಂಪೆನಿಯು 1:1ರ ಅನುಪಾತದ ಬೋನಸ್ ಷೇರು ಪ್ರಕಟಿಸಿದೆ.

* ಮಾರ್ಸನ್ಸ್ ಲಿ. ಪ್ರಕಟಿಸಿರುವ 1:4ರ ಅನುಪಾತದ ಬೋನಸ್‌ಗೆ ಮಾರ್ಚ್ 7 ನಿಗಧಿತ ದಿನಾಂಕವಾಗಿದೆ.

ಹಕ್ಕಿನ ಷೇರಿನ ವಿಚಾರ
* ಆರೋ ಟೆಕ್ಸ್‌ಟೈಲ್ಸ್ ಕಂಪೆನಿಯು 2:5ರ ಅನುಪಾತದಲ್ಲಿ ರೂ. 11 ರಂತೆ ಹಕ್ಕಿನ ಷೇರನ್ನು ವಿತರಿಸಲು ಮಾರ್ಚ್ 4 ನಿಗಧಿತ ದಿನವಾಗಿದೆ. ಸಧ್ಯ ಷೇರಿನ ಬೆಲೆ ಪೇಟೆಯಲ್ಲಿ ರೂ.  9.60 ರಲ್ಲಿದೆ.

* ಕ್ರಿಪ್ಟನ್ ಇಂಡಸ್ಟ್ರೀಸ್ ಲಿ. ಕಂಪೆನಿಯು ಪ್ರತಿ ಹತ್ತು ಷೇರಿಗೆ 17 ರಂತೆ ರೂ.  15 ರಂತೆ ಹಕ್ಕಿನ ಷೇರು ವಿತರಿಸಲಿದ್ದು ಇದಕ್ಕಾಗಿ ಮಾರ್ಚ್ 11 ನಿಗಧಿತ ದಿನವಾಗಿದೆ. ಪೇಟೆಯಲ್ಲಿ ಈ ಷೇರಿನ ದರ ರೂ. 21.75 ರಲ್ಲಿದ್ದು ಕಳೆದ ಒಂದು ತಿಂಗಳಲ್ಲಿ ರೂ.  16 ಕನಿಷ್ಠ ದರವಾಗಿದ್ದು ವಿತರಣೆ ಆಕರ್ಷಕವಾಗಿಲ್ಲ.

ಮುಖ ಬೆಲೆ ಸೀಳಿಕೆ ವಿಚಾರ
* ಹಿಂದೂಸ್ಥಾನ್ ಝಿಂಕ್ ಕಂಪೆನಿಯ ಷೇರಿನ ಮುಖಬೆಲೆಯನ್ನು ರೂ.  10 ರಿಂದ ರೂ. 2ಕ್ಕೆ ಸೀಳಲು ಮಾರ್ಚ್ 8, ನಿಗಧಿತ ದಿನವಾಗಿದೆ.

* ರೇನ್ ಕಮಾಡಿಟೀಸ್ ಲಿ. (ಈ ಹಿಂದೆ ಈ ಕಂಪೆನಿಯ ಹೆಸರು ಪ್ರಿಯದರ್ಶನಿ ಸೀಮೆಂಟ್ ಎಂದಿತ್ತು) ಕಂಪೆನಿಯು ಷೇರಿನ ಮುಖಬೆಲೆಯನ್ನು ರೂ. 10 ರಿಂದ ರೂ. 1ಕ್ಕೆ ಸೀಳಲಿದೆ.

* ತಣಿ ಟೆಕ್ಸ್‌ಟೈಲ್ಸ್ ಕಂಪೆನಿಯ ಷೇರಿನ ಮುಖಬೆಲೆಯನ್ನು ರೂ. 10 ರಿಂದ ರೂ.  1ಕ್ಕೆ ಸೀಳಲಿದೆ.

* ಡ್ಯಾಝಲ್ ಕಾನ್‌ಫೀನ್ ಡೈವ್ ಲಿ. ಕಂಪೆನಿಯು ಸಹ ಷೇರಿನ ಮುಖಬೆಲೆಯನ್ನು ರೂ. 10 ರಿಂದ ರೂ. 1ಕ್ಕೆ  ಸೀಳಲಿದೆ.

ಷೇರಿನ ಮುಖಬೆಲೆ ಕ್ರೋಡೀಕರಣ
ಕೋರಲ್ ಹಬ್ ಲಿ. (ಈ ಹಿಂದೆ ಈ ಕಂಪೆನಿಯ ಹೆಸರು ವಿಶಾಲ್ ಇನ್‌ಫರ್ಮೇಷನ್ ಟೆಕ್ನಾಲಜೀಸ್ ಲಿ. ಎಂದಿತ್ತು) ಷೇರಿನ ಮುಖಬೆಲೆಯನ್ನು ರೂ.  1 ರಿಂದ ರೂ. 10ಕ್ಕೆ ಕ್ರೋಡೀಕರಿಸಲಾಗಿದೆ. ಹೀಗಾಗಿ ಪ್ರತಿ 100 ಷೇರನ್ನು 10 ಷೇರಾಗಿ ಪರಿವರ್ತಿಸಲಾಗಿದೆ.

ಈ ಕ್ರಮವು ಫೆಬ್ರುವರಿ 25 ರಿಂದ ಜಾರಿಯಾಗಿದೆ. ಈ ಹಿಂದೆ ಪ್ಯಾನ್ಸ್ ಇಂಡಿಯಾ ಕಾರ್ಪೊರೇಷನ್ (ಈ ಕಂಪೆನಿಯ ಹಿಂದಿನ ಹೆಸರು ಎಸ್.ಆರ್.ಜಿ. ಇನ್‌ಫೊಟೇಶ್ ಲಿ ಎಂದಿತ್ತು) ಹಾಗೂ ಜಿ.ವಿ. ಫಿಲಂಗಳು ಇದೇ ರೀತಿ ಕ್ರಮ ಕೈಗೊಂಡು ಸಂಪೂರ್ಣವಾಗಿ ಹೂಡಿಕೆದಾರರ ನಿರ್ಲಕ್ಷಕ್ಕೆ ಗುರಿಯಾಗಿವೆ.

ಷೇರು ಹಿಂಕೊಳ್ಳುವಿಕೆ
ಬಲರಾಂಪುರ್ ಚಿನಿ ಮಿಲ್ಸ್ ಲಿ. ಕಂಪೆನಿಯು ಸ್ಟಾಕ್ ಎಕ್ಸ್‌ಚೇಂಜ್‌ಗಳ ಮೂಲಕ ಕಂಪೆನಿ ಆ್ಯಕ್ಟ್ 1956ನ ಸೆಕ್ಷ 77ಎ ಪ್ರಕಾರ ಗರಿಷ್ಠ     ರೂ.  85ರ ವರೆಗೂ ಷೇರು ಹಿಂಕೊಳ್ಳಲು ನಿರ್ಧರಿಸಿದ್ದು ಕಂಪೆನಿಯ ಬಂಡವಾಳ ಮತ್ತು ಮೀಸಲು ನಿಧಿಯ ಶೇ 25 ರವರೆಗೂ ಈ ಷೇರು ಹಿಂಕೊಳ್ಳುವಿಕೆಗೆ ವಿನಿಯೋಗಿಸಲಾಗುವುದು. ರೂ.110 ಕೋಟಿವರೆಗೂ ಈ ಹಿಂಕೊಳ್ಳುವಿಕೆಗೆ ಉಪಯೋಗಿಸಬಹುದಾಗಿದೆ.

ವಾರದ ಪ್ರಶ್ನೆ

ಷೇರು ಪೇಟೆಯಲ್ಲಿ ಕ್ರ್ಯಾಶ್ ಆಗಿರುವ ಈ ಸಂಧರ್ಭದಲ್ಲಿ ಹೂಡಿಕೆದಾರರು ಯಾವ ರೀತಿ ಚಟುವಟಿಕೆ ನಡೆಸಬೇಕು ತಿಳಿಸಿರಿ. ಟ್ರೇಡಿಂಗ್‌ನಲ್ಲಿ ಹೆಚ್ಚಾಗಿ ‘ಬಾಸ್’ ಆಗುತ್ತಿದೆ.

ಉತ್ತರ: ಇಲ್ಲಿ ಪ್ರಮುಖವಾಗಿ ನಿರ್ಧರಿಸಬೇಕಾದ್ದು ನೀವು ಟ್ರೇಡಿಂಗ್ ಮಾಡುವವರೋ ಅಥವಾ ಹೂಡಿಕೆದಾರರೊ ಎಂಬುದು. ಟ್ರೇಡಿಂಗ್‌ನಲ್ಲಿ ಪೇಟೆಯ ಏರುಪೇರಿಗೆ ಸರಿಯಾಗಿ ಲಾಭ-ನಷ್ಟಕ್ಕೆ ಗುರಿಯಾಗುವುದು ಸಹಜ. ಆದರೆ ಹೂಡಿಕೆದಾರರು ಲಾಭ ಬರುವವರೆಗೂ ಮಾರಾಟ ಮಾಡುವ ಗೋಜಿಗೆ ಹೋಗಲಾರರು ಹಾಗಾಗಿ ನಷ್ಟವೆಂಬುದಿಲ್ಲ. ಹೂಡಿಕೆ ಮಾಡುವಾಗ ಆ ಕಂಪೆನಿಗಳಲ್ಲಿ ಅಡಕವಾಗಿರುವ ಅಂತರ್ಗತ ಮೌಲ್ಯಗಳು, ಸಾಧನೆಗಳು ಗಣನೆಗೆ ಬರುತ್ತವೆ. ಆದ್ದರಿಂದ ಪೇಟೆಯ ಕುಸಿತದಲ್ಲಿದ್ದಾಗ ಅದು ಅವಕಾಶವೇ ಹೊರತು ಶಾಪವಲ್ಲ. ಇಂದಿನ ದಿನಗಳಲ್ಲಿ ಪೇಟೆಯಲ್ಲಿ ಬಾಹ್ಯಕಾರಣಗಳಿಗೆ ಹೆಚ್ಚಿನ ಮನ್ನಣೆ ನೀಡಿ ಮಣೆ ಹಾಕುವುದರಿಂದ ಏರು-ಪೇರು ಅಸ್ವಾಭಾವಿಕವಾಗಿದೆ. ಹಾಗಾಗಿ ಸಣ್ಣ ಹೂಡಿಕೆದಾರರು ಮಾನಸಿಕ ಒತ್ತಡಕ್ಕೊಳಗಾಗುತ್ತಾರೆ.

ಹಿಂದಿನ ವಾರದ ಚಟುವಟಿಕೆಯನ್ನು ಗಮನಿಸಿದಾಗ ಪೇಟೆಯಲ್ಲಿ ಷೇರಿನ ದರಗಳು ಬಲೂನಿನಂತೆ ಊದಿಕೊಂಡಿದ್ದಂತಹ ಭಾವನೆ ಬರುವುದು ಸಹಜ. ಷೇರು ಪೇಟೆಯ ಏರಿಳಿತದ ಹರಿತ ಹೇಗಿದೆ ಎಂದರೆ ಅರವಿಂದೊ ಫಾರ್ಮ ಕಳೆದ ಒಂದು ವಾರದಲ್ಲಿ ್ಙ 232 ರಿಂದ ್ಙ 156ರ ಕನಿಷ್ಠ ಮಟ್ಟಕ್ಕೆ ಕುಸಿಯಿತು. ಈ ಕಂಪೆನಿಯು ‘ಎ’ ಗುಂಪಿನ ಫಾರ್ಮಾವಲಯದಾಗಿದ್ದು ಕಳೆದ ಡಿಸೆಂಬರ್‌ನಲ್ಲಿ ಅಮೇರಿಕಾದ ಎಫ್‌ಡಿಎ ಯಿಂದ ಪರಿಶೋದಿಸಲ್ಪಟ್ಟು ಹೈದರಾಬಾದ್‌ನ ಸೆಫಲೋ ಸ್ಪೊರಸ್ 6ನೇ ಘಟಕದ ಬಗ್ಗೆ ಆಮದು ಎಚ್ಚರಿಕೆಯನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದ್ದು ಈ ಮಾರಾಟದ ಒತ್ತಡಕ್ಕೆ ಕಾರಣವಾಯಿತು. ಕಂಪೆನಿಯು ಈ ನ್ಯೂನತೆಯನ್ನು ಸರಿಪಡಿಸುವ ಕ್ರಮ ಕೈಗೊಂಡಿದೆ. ಈ ಕಂಪೆನಿಯ ಉತ್ಪನ್ನಗಳು ಅಮೇರಿಕಾ ಮಾತ್ರವಲ್ಲದೆ ಬ್ರಿಟನ್, ಕೆನಡಾ, ವರ್ಲ್ಡ್ ಹೆಲ್ತ್ ಆರ್ಗನೈಸೇಷನ್, ಸೌತ್ ಆಫ್ರಿಕಾ, ಬ್ರೆಜಿಲ್‌ಗಳಲ್ಲೂ ಅಂಗೀಕೃತವಾಗಿದೆ. ಒಟ್ಟು 132 ಎಎನ್‌ಡಿಎ ಅಂಗೀಕೃತವಾಗಿರುವುದರಲ್ಲಿ 33 ತಾತ್ಪೂರ್ತಿಕವಾಗಿದ್ದು 99 ಪೂರ್ಣ ಅಂಗೀಕೃತವಾಗಿದೆ.

ಇಂತಹ ಸಂದರ್ಭದಲ್ಲಿ ಟ್ರೇಡಿಂಗ್ ಚಟುವಟಿಕೆಯ ಪ್ರಭಾವವೇ ಹೆಚ್ಚಾಗಿದೆ. ಸೋಜಿಗದ ಸಂಗತಿ ಎಂದರೆ ಜನವರಿ 5 ರಂದು ಷೇರಿನ ಮುಖಬೆಲೆ ಸೀಳಿಕೆಗೆ ಮುನ್ನ ವಾರ್ಷಿಕ ಗರಿಷ್ಠ ಬೆಲೆ ರೂ. 1,375 ಇದ್ದು (ಈಗಿನ ರೂ. 275ಕ್ಕೆ ಸಮನಾಗಿದೆ) ಫೆಬ್ರುವರಿ 25 ರಂದು ರೂ. 156.50ರ ಕನಿಷ್ಠ ಬೆಲೆಗೆ ಕುಸಿದಿದೆ. ಹಾಗೆಯೇ ಆಕರ್ಷಕ ಲಾಭಾಂಶ ಪ್ರಕಟಿಸಿರುವ ಕ್ಯಾಸ್ಟ್ರಾಲ್ ಇಂಡಿಯಾ ಆಕರ್ಷಣೀಯ ಫಲಿತಾಂಶದ ಬಿಜಿಆರ್ ಎನರ್ಜಿ ಆರ್ಕಿಡ್ ಕೆಮಿಕಲ್ಸ್‌ಗಳಂತಹ ಕಂಪೆನಿಗಳು ಬಹಳಷ್ಟು ಕುಸಿತದಲ್ಲಿವೆ. ಸಂದರ್ಭವನ್ನರಿತು, ತಜ್ಞರ ಸಲಹೆ ಪಡೆದು ಚಟುವಟಿಕೆ ನಿರ್ವಹಿಸಿದರೆ ಷೇರು ಪೇಟೆಯು ಅವಕಾಶಗಳ ಆಗರ. ಆಪತ್ತಿನ ಸಂಧರ್ಭಗಳು ಅವಕಾಶಗಳ ಸಾಗರ. ದುಡುಕದೆ ಅರಿತು ಹೂಡಿಕೆ ಮಾಡಿರಿ. ಅತಿಯಾಸೆಗೆ ಗುರಿಯಾಗಬೇಡಿ ಗಾಳಿ ಸುದ್ದಿಗಳಿಗೆ ಮರುಳಾಗ ಬೇಡಿರಿ. ಶುಭವಾಗಲಿ.

ಸಂಪರ್ಕ ಸಂಖ್ಯೆ: 98863-13380  (ಮಧ್ಯಾಹ್ನ 4.30ರ ನಂತರ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT