ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಷ ಜಂತುವಿಗೆ ನೀಡಿದ ಸಹಕಾರ

Last Updated 22 ಜನವರಿ 2015, 19:30 IST
ಅಕ್ಷರ ಗಾತ್ರ

ಒಮ್ಮೆ ಒಬ್ಬ ಶ್ರೀಮಂತನಿಗೆ ಜ್ಞಾನೋ­ದ­ಯವಾಯಿತು. ಈ ಹಣದ ಬೆನ್ನೆತ್ತಿ ಹೋಗುವುದು ಸಾಕೆಂದುಕೊಂಡು ಗುರು­ಗಳ ಕಡೆಗೆ ಹೋದ, ಶಾಸ್ತ್ರಗಳ ಪಾಠ ಕೇಳಿದ, ಬರೀ ಆಧ್ಯಾತ್ಮ ಚಿಂತನೆಯಲ್ಲಿ ತೊಡಗಿಕೊಂಡ. ಕೊನೆಗೆ ಈ ಸಂಸಾರವೇ ಸಾಕೆಂದು ಕಾಡಿಗೆ ಹೋಗಿ ಗುಡಿಸಲು ಕಟ್ಟಿಕೊಂಡು ಋಷಿಯೇ ಆಗಿಬಿಟ್ಟ.

ಸರ್ವ ಜೀವಿಗಳಲ್ಲಿ ಪ್ರೇಮ ತೋರುತ್ತಿದ್ದ ಈ ಋಷಿ ಕುಳಿತಲ್ಲಿಗೆ ಒಂದು ಪುಟ್ಟ ಹಾವಿನ ಮರಿ ಸರಿದು ಬಂತು. ಅದು ಆಗ ತಾನೇ ಮೊಟ್ಟೆಯೊಡೆದು ಬಂದಿರ­ಬೇಕು.  ಋಷಿಗೆ ಅದರ ಮೇಲೆ ಕರುಣೆ, ಪ್ರೇಮ ಎರಡೂ ಉಕ್ಕಿ ಬಂದವು. ಅವನ ಶಿಷ್ಯರು ಗಮನಿಸಿ ಅದು ಒಂದು ವಿಷಪೂರಿತವಾದ ಹಾವು ಎಂದು ಹೇಳಿ­ದರೂ ಪ್ರೇಮ ಪ್ರವಾಹದಲ್ಲಿ ಕೊಚ್ಚಿ­ಹೋದ ಋಷಿ ಅದನ್ನು ಒಂದು ಬಿದಿರಿನ ಕೊಳವೆಯಲ್ಲಿಟ್ಟು ಕಾಪಾಡ­ತೊಡಗಿದ.  ಅದಕ್ಕೆ ಕಾಲಕಾಲಕ್ಕೆ ಆಹಾರ ನೀಡುತ್ತ ಕಾಳಜಿ ಮಾಡಿದ.

ಸರ್ಪವೂ ಹೊರಗೆ ತಿರುಗಾಡಿ ಮತ್ತೆ ಬಿದಿರಿನಲ್ಲೇ ಬಂದು ಮಲ­ಗುತ್ತಿತ್ತು. ಆ ಹಾವಿನ ಬಗ್ಗೆ ಅವನ ಪ್ರೇಮ ಎಷ್ಟು ಹೆಚ್ಚಾಗಿತ್ತೆಂದರೆ ಕಾಡಿನ­ಲ್ಲೆಲ್ಲ ಅವನನ್ನು ಸರ್ಪಪಿತ ಎಂದೇ ಕರೆಯುತ್ತಿದ್ದರು.  ಈ ವಿಷಯ ಋಷಿಯ ಗುರುಗಳಾದ ಹಿರಿಯ ಋಷಿ­ಗಳಿಗೆ ತಿಳಿದಾಗ ಇವನನ್ನು ಕರೆದು ತಿಳಿ ಹೇಳಿದರು, ‘ನೀನು ಎರಡು ತಪ್ಪುಗಳನ್ನು ಮಾಡುತ್ತಿರುವೆ. ಅದು ಸದಾಕಾಲ ಕಾಡಿನಲ್ಲಿ ಹರಿದಾಡಿಕೊಂಡು ಸ್ವಚ್ಛಂದ­ದಿಂದ ಬದುಕುವ ಪ್ರಾಣಿ. ಅದನ್ನು ಬಂಧನದಲ್ಲಿ­ಡುವುದು ಸರಿಯಲ್ಲ.

ಅದು ವಿಷಸರ್ಪ ಬೇರೆ. ಅದು ನಿನ್ನನ್ನೇ ಕಚ್ಚಿ ಬಿಡುತ್ತದೆ.  ಅಂಥವರ ಸಹವಾಸ ಬೇಡ’. ಈತ ಅವರ ಮಾತು ಕೇಳಿ ಗೋಣು ಅಲ್ಲಾಡಿಸಿ ಮರಳಿ ತಮ್ಮ ಆಶ್ರಮಕ್ಕೆ ಬಂದ. ಗುರುಗಳು ಹೇಳಿದ್ದು ಸರಿ ಎನಿ­ಸಿದರೂ ಅಷ್ಟು ಪ್ರೀತಿಯಿಂದ ಸಲಹಿದ್ದ ಹಾವನ್ನು ಹೊರಗಟ್ಟಲು ಮನಸ್ಸು ಬರಲಿಲ್ಲ. ಇದಾದ ಒಂದು ತಿಂಗಳಿಗೆ ಗುರು­ಗಳೊಂದಿಗೆ ನಾಲ್ಕು ದಿನ ತೀರ್ಥಯಾತ್ರೆಗೆ ಹೋಗಬೇಕಾಯಿತು.

ಈ ವಿಷಸರ್ಪಕ್ಕೆ ಇದುವರೆಗೂ ಋಷಿ ಸರಿಯಾದ ಸಮಯಕ್ಕೆ ಆಹಾರ ನೀಡುತ್ತಿದ್ದುದರಿಂದ ಅದಕ್ಕೆ ತಾನೇ ಆಹಾರವನ್ನು ಹುಡುಕಿಕೊಳ್ಳುವುದು ಗೊತ್ತೇ ಇರಲಿಲ್ಲ. ಬೇಟೆ­ಯಾಡುವ ಸ್ವಭಾವವೇ  ಬಂದಿರಲಿಲ್ಲ.  ಹೀಗಾಗಿ ಋಷಿ  ತಿರುಗಿ ಬರುವವರೆಗೆ  ಅದು ಹಸಿವಿನಿಂದ ಕಂಗಾಲಾಗಿ ಕುಳಿತಿತ್ತು.  ಋಷಿ ಬಂದು ಬಹಳ ಸಂಕಟಪಟ್ಟ. ತಾನಿಲ್ಲದಾಗ ಪಾಪ! ಸರ್ಪ ಹೇಗೆ ಬದುಕಿತೋ? ಅದಕ್ಕೆ ಆಹಾರ ಕೊಡಲು ಯಾರೂ ಇರಲಿಲ್ಲವಲ್ಲವೇ?  ತಕ್ಷಣ ಒಂದಷ್ಟು ಆಹಾರವನ್ನು ತೆಗೆದುಕೊಂಡು ಸರ್ಪವಿದ್ದ ಬಿದಿರಿನ ಕೊಳವೆಯ ಬಳಿ ಹೋಗಿ ಕೊಳವೆಯೊಳಗೆ ಹಾಕಿದ.

ಕಾದುಕೊಂಡಿದ್ದ ಸರ್ಪ ಹೆಡೆಯೆತ್ತಿ ಎರಡು ಬಾರಿ ಬಲವಾಗಿ ಕಚ್ಚಿಬಿಟ್ಟಿತು. ತಾಸಿನಲ್ಲೇ ವಿಷವೇರಿ ಋಷಿ ಸತ್ತು ಹೋದ.  ಬೇಟೆಯಾಡುವುದನ್ನೇ ಕಲಿ­ಯ­ದಿದ್ದ ಹಾವೂ ಮುಂದೆ ಎರಡು ದಿನಗ­ಳಲ್ಲಿ ಉಪವಾಸದಿಂದ ಸತ್ತುಹೋ­ಯಿತು.  ನಾವು ಯಾರ ಜೊತೆಗಿರು­ತ್ತೇವೆ, ಯಾರಿಗೆ ಸಹಾಯ ಮಾಡು­ತ್ತೇವೆ ಎಂಬುದು ಬಹಳ ಮುಖ್ಯ. ನಿಮ್ಮ ಉದ್ದೇಶ ಒಳ್ಳೆಯದೇ ಇರಬಹುದು, ಕರುಣೆ ಮನ ತುಂಬಬ­ಹುದು. ಆದರೆ, ಒಬ್ಬ ದ್ರೋಹಿಗೆ, ಅನಾಚಾರಿಗೆ, ಕ್ರೂರಿಗೆ ಸಹಾಯ ಮಾಡುವುದು ಆ ಕೆಟ್ಟ ಗುಣಕ್ಕೇ ಸಹಕಾರ ನೀಡಿದಂತೆ.  ಅಷ್ಟೇ ಅಲ್ಲ, ಒಂದಲ್ಲ ಒಂದು ದಿನ ಅದು ಸಹಕಾರ ಮಾಡಿದವನ ಶ್ರೇಯಕ್ಕೇ ಎರವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT