ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೀಲು ಅದರ ಕಾಲಾ! ಭಾಷೆಯ ಹೃದಯ

Last Updated 24 ಮಾರ್ಚ್ 2012, 19:30 IST
ಅಕ್ಷರ ಗಾತ್ರ

ಸುಮಾರು ಎರಡೂವರೆ ಸಾವಿರ ವರ್ಷದ ಹಿಂದೆ ಇದ್ದನಲ್ಲ ಮಹಾ ವಿವೇಕಿ ಸಾಕ್ರಟಿಸ್, ಅವನನ್ನು ಒಂದು ಪ್ರಶ್ನೆ ಕಾಡಿತ್ತು. ನಮಗೆ ಆಗುವ ಅನುಭವಗಳೆಲ್ಲ ಇಂದ್ರಿಯಗಳ ಮೂಲಕವೇ. ಸರಿ. ಕಣ್ಣಿಗೆ ಕಂಡದ್ದಕ್ಕೆ ಹೆಸರಿಟ್ಟು ಗುರುತಿಸುವುದೂ ಸರಿ.
 
ಅದಷ್ಟನ್ನು ಇಟ್ಟುಕೊಂಡು ಕಣ್ಣಿಗೆ ಕಾಣದ ಒಳ್ಳೆಯದು, ಕೆಟ್ಟದ್ದು ಇತ್ಯಾದಿ ಗುಣಗಳನ್ನು, ಭಾವಗಳನ್ನು, ಐಡಿಯಾಗಳನ್ನು ಹೇಗೆ ಕಲಿಯುತ್ತೇವೆ? ಈ ಪ್ರಶ್ನೆಗೆ ಉತ್ತರ ಇನ್ನೂ ಸಿಕ್ಕಿಲ್ಲ. ಈ ಪ್ರಶ್ನೆ ನನಗೆ, ನಿಮಗೆ ಬಂದಿಲ್ಲದಿರಬಹುದು. ಪ್ರಶ್ನೆ ಹುಟ್ಟಿಲ್ಲವೆಂದೇ ನಾವು ಭಾಷೆಯ ಚೆಂಡಾಟ ಆಡುತ್ತೇವೆ ಬದುಕಿರುವವರೆಗೂ, ಅಥವ ಭಾಷೆಯೇ ನಮ್ಮನ್ನು ಚೆಂಡಿನ ಹಾಗೆ ಒದೆದು ಆಡಿಸುತ್ತದೆ, ನಾವು ಸಾಯುವವರೆಗೂ.

ನಮ್ಮ ಸಮರ್ಥ ನನ್ನ ತೊಡೆಯ ಮೇಲೆ ಕೂತು ರೈಲಿನ ಕಾರ್ಟೂನು ನೋಡುತ್ತಿದ್ದ. ಇದ್ದಕಿದ್ದ ಹಾಗೆ `ತಾತಾ, ವೀಲು ಕಾಲಾ?~ ಅಂತ ಕೇಳಿದ. ಏನು ಅಂದೆ. `ರೈಲಿನ ವೀಲು ಇದೆಯಲ್ಲ ಅದು ಅದರ ಕಾಲಾ?~ ಅಂತ ವಿವರವಾಗಿ ಕೇಳಿದ, ಈ ತಾತನಿಗೆ ಏನೂ ಅರ್ಥವಾಗುವುದಿಲ್ಲ ಅನ್ನುವ ಹಾಗೆ! ಅವನ ಮಾತು ಕೇಳಿ ಇತ್ತೀಚೆಗೆ ಓದುತಿದ್ದ ಭಾಷೆಯನ್ನು ಕುರಿತ ಒಂದು ವಿಚಾರಕ್ಕೆ ಜೀವಂತ ಪುರಾವೆ ಸಿಕ್ಕಿಬಿಟ್ಟಿತು. 

ಕಳೆದ ಐವತ್ತು ವರ್ಷಗಳಲ್ಲಿ ರೂಪಕವನ್ನು ಕುರಿತು ಅಗಾಧವಾದ ಚರ್ಚೆ ನಡೆದಿದೆ. ರೂಪಕ ಅನ್ನುವುದು ಕೇವಲ ಸಾಹಿತ್ಯದಲ್ಲಿ ಬಳಕೆಯಾಗುವ ಅಲಂಕಾರವಲ್ಲ; ವಿಚಾರಕ್ಕೆ ತೊಡಿಸಿದ ಭಾಷೆಯ ಅಂಗಿಯಲ್ಲ; ಕೇವಲ ಭಾಷೆಗೆ ಮಾತ್ರ ಸಂಬಂಧಿಸಿದ್ದೂ ಅಲ್ಲ; ರೂಪಕ ಅನ್ನುವುದು ಮನುಷ್ಯನ ದೇಹವನ್ನೇ ಮೂಲವಾಗಿಟ್ಟುಕೊಂಡು ಹುಟ್ಟುತ್ತದೆ; ನಾವು ಲೋಕವನ್ನು ತಿಳಿಯುವುದೇ ರೂಪಕಗಳ ಮೂಲಕ; ನೈತಿಕತೆ, ಮೌಲ್ಯಗಳು, ಸಮಾಜ ಸಂಸ್ಕೃತಿಯ ಪರಿಸರ ಎಲ್ಲವನ್ನೂ ಅರಿಯುವುದಕ್ಕೆ ಇರುವ ಭಾಷೆಯ ದಾರಿ ರೂಪಕದ್ದೇ; ಒಮ್ಮೆ ರೂಪಗೊಂಡು ಚಲಾವಣೆಗೆ ಬಂದ ರೂಪಕ ನಮ್ಮ ತಿಳಿವಳಿಕೆಯನ್ನೂ ಗೊತ್ತಿಲ್ಲದೆ ತಿದ್ದುತ್ತಾ ನಮ್ಮ ಅನುಭವವನ್ನೇ ನಿರ್ದೇಶಿಸುವಷ್ಟು ಸಶಕ್ತವೂ ಆಗುತ್ತದೆ- ಹೀಗೆ ರೂಪಕವನ್ನು ಕುರಿತು ನರಶಾಸ್ತ್ರಜ್ಞರು, ಮಿದುಳು ತಜ್ಞರು, ಮಾನವಶಾಸ್ತ್ರಜ್ಞರು ಮತ್ತು ಭಾಷೆಯ ವಿದ್ವಾಂಸರು ವಿವರಿಸುತ್ತ, ವ್ಯಾಖ್ಯಾನಿಸುತ್ತ, ಸಿದ್ಧಾಂತಗಳನ್ನು ಮಂಡಿಸುತ್ತ ಇದ್ದಾರೆ.

ನಮ್ಮ ದಿನ ನಿತ್ಯದ ನುಡಿಕೆಲಸಗಳ ಹೃದಯವೇ ಆಗಿರುವ ರೂಪಕಗಳ ಬಗ್ಗೆ ಸ್ವಲ್ಪ ವಿವರವಾಗಿ ನೋಡೋಣ. ದಯವಿಟ್ಟು ಗಮನಿಸಿ. ಇಲ್ಲಿ ಸಾಹಿತ್ಯ ಕೃತಿಗಳಲ್ಲಿ ಬಳಕೆಯಾಗುವ ರೂಪಕಗಳನ್ನು ಮಾತ್ರ ಚರ್ಚಿಸುತ್ತಿಲ್ಲ.
 
ಅದು ರೂಪಕ ಸಾಮ್ರೋಜ್ಯದ ಒಂದು ಪ್ರಾಂತ್ಯ ಅಷ್ಟೆ. ನಾವು ದಿನವು ನಿತ್ಯವು ಬಳಸುವ ಆದರೆ ಗಮನಿಸದ ರೂಪಕಗಳನ್ನು, ಅವುಗಳ ಮೂಲಕ ಲೋಕವನ್ನು ನಾವು ಹೇಗೆ ನಮ್ಮಳಗೆ ವ್ಯವಸ್ಥೆ ಮಾಡಿಕೊಂಡಿದ್ದೇವೆ ಅನ್ನುವ ಸೂಚನೆಗಳನ್ನು ಮನಸ್ಸಿಗೆ ತಂದುಕೊಳ್ಳುವುದು ಮುಖ್ಯ.

ಸರಳವಾದ ಸಂಗತಿಗಳಿಂದ ಆರಂಭ ಮಾಡೋಣ. ಸಾಕ್ರಟೀಸನ ಪ್ರಶ್ನೆಯನ್ನು ಮತ್ತೊಮ್ಮೆ ಗಮನವಿಟ್ಟು ನೋಡಿ. ಕಣ್ಣಿಗೆ ಕಾಣದ, ಕೈಯಿಂದ ಮುಟ್ಟಲಾಗದ, ವಾಸನೆ ರುಚಿಗಳೇನೂ ಇಲ್ಲದ ಐಡಿಯಾಗಳನ್ನು ಹೇಗೆ ಗ್ರಹಿಸುತ್ತೇವೆ ಅನ್ನುವುದು ಅವನ ಮುಖ್ಯ ಕುತೂಹಲ. ಮೊದಲ ಹೆಜ್ಜೆ ಎಂದರೆ ನಮಗೆ ತೀರ ಚೆನ್ನಾಗಿ ಪರಿಚಯವಿರುವ, ನಿಕಟವಾದ ಅನುಭವ ಇರುವ ದೇಹವನ್ನೇ ಆಧಾರವಾಗಿಟ್ಟುಕೊಳ್ಳುತ್ತೇವೆ.
 
ನಮ್ಮ ಶರೀರವನ್ನು ವಿವರಿಸುವ ಹೆಸರು ಪದಗಳ ಅರ್ಥವನ್ನು ಹೊರ ಲೋಕಕ್ಕೂ ವಿಸ್ತರಿಸಿ ಅರ್ಥಮಾಡಿಕೊಳ್ಳಲು ತೊಡಗುತ್ತೇವೆ. ತಿಳಿವಳಿಕೆ ಬೆಳೆಯುವ ದಾರಿ ಇದೇ ಅಲ್ಲವೇ, ಗೊತ್ತಿರುವುದರಿಂದ ಹೊರಟು ಗೊತ್ತಿಲ್ಲದ್ದನ್ನು ಅರ್ಥಮಾಡಿಕೊಳ್ಳುವುದು?
ನೋಡಿ, ನಮ್ಮ ಶರೀರದ ಅಂಗಾಂಗಗಳು ಎಷ್ಟೊಂದು ಅರ್ಥವಿಸ್ತಾರ ಸಾಧಿಸಿವೆ.

ಬೆಟ್ಟದ ಪಾದದಿಂದ ಹೊರಟು ಹತ್ತುತ್ತಾ ಬೆಟ್ಟದ ನೆತ್ತಿ ತಲುಪುತ್ತೇವೆ. ಪತ್ರಿಕೆಯಲ್ಲಿ ಸುದ್ದಿಯ `ತಲೆಬರಹ~ ಗಮನ ಸೆಳೆದರೆ ಮಾತ್ರ ಮುಂದಕ್ಕೆ ಬರೆದಿರುವುದನ್ನು ಓದುತ್ತೇವೆ. ಯಾವ ಕಾರಣವೂ ಸಿಗದಿದ್ದಾಗ ಆಗಿದ್ದಕ್ಕೆಲ್ಲ `ಹಣೆಬರಹ~ವೇ ಕಾರಣ ಅನ್ನಿಸುತ್ತದೆ. `ಕೈಕೊಡುವುದು~, `ಕೈಹಿಡಿಯುವುದು~, `ಕೈಬಿಡುವುದು~, `ಕೆಲಸಕ್ಕೆ ಕೈ ಹಾಕುವುದು~, ಮತ್ತೆ ದಾರಿ ತೋರುವ `ಕೈಮರ~, `ಕುರ್ಚಿಯ ಕೈ~, `ಮಂಚದ ಕಾಲು~ ಇವೆಲ್ಲ ಗೊತ್ತಿಲ್ಲದವರು ಯಾರು!
 
ಯಾರೋ ಗೊತ್ತಿಲ್ಲದವರು ನಮ್ಮ ಬದುಕಿನಲ್ಲಿ ಹೀಗೆ ಮಾಡು ಹಾಗೆ ಮಾಡು ಅಂದರೆ ಅವರು ಹಾಗೆ ಮೂಗು ತೂರಿಸಿದ್ದು ನಮಗೆ ಇಷ್ಟವಾಗುವುದಿಲ್ಲ. `ಹಲ್ಲು ಉದುರಿಸುವುದು~, `ಕಾಲು ಮುರಿಯುವುದು~ ಬಹಳ ಕಷ್ಟವಾದರೂ ಹಾಗನ್ನುವುದು ಕೋಪವನ್ನು ತೋರಿಸಿಕೊಳ್ಳುವ ವಿಧಾನ.
 
ಸದಾ ನಮ್ಮ ಹಿಂದೆಯೇ ಸುಳಿದಾಡುತ್ತ ಪೀಡಿಸುವವರು `ಕೈ ತೊಳಕೊಂಡು ಬೆನ್ನು ಹತ್ತಿರುತ್ತಾರೆ~. ಕಂಡಕಂಡವರೆಲ್ಲ ಮಗುವನ್ನು ಮುದ್ದು ಮಾಡಿದರೆ `ದೃಷ್ಟಿ ಆಗುತ್ತದೆ~. ಹುಡುಗಿಯರನ್ನು ಕಂಡಾಗ `ಕಣ್ಣು ಹೊಡೆಯುವುದು~ ಪೋಲಿ ಪೋಕರಿಗಳ ಕೆಲಸ. ಇನ್ನು `ಪ್ರೀತಿ ಕುರುಡು~ ಅನ್ನುವುದಂತೂ ಎಲ್ಲ ಪ್ರೇಮಿಗಳೂ ಹೇಳುವ ಸಮರ್ಥನೆ. ಕೆಲವರಂತೂ `ಕಾಲು ಕೆರೆದುಕೊಂಡು ಜಗಳಕ್ಕೆ ಬರುತ್ತಾರೆ~ ಅಲ್ಲವೇ. ಇಂಥವು ಶರೀರದ ಹೊರಚಾಚುಗಳಂತಿರುವ ರೂಪಕಗಳು. ನಮ್ಮ ಸಮರ್ಥ ರೈಲಿನ ಗಾಲಿಯನ್ನು ರೈಲಿನ ಕಾಲು ಅಂದಾಗ ಮನುಷ್ಯನ ಮನಸ್ಸು ವರ್ತಿಸುವ ಬಗೆಯ ನಿದರ್ಶನವಾಗಿತ್ತು ಅದು.

ಹಾಗೇ ನಾವು ಎಷ್ಟೋ ಭಾವನೆಗಳನ್ನು, ಕಲ್ಪನೆಗಳನ್ನು, ಕ್ರಿಯೆಗಳನ್ನು, ಗುಣಗಳನ್ನು ಸಶರೀರ ಅನ್ನುವ ಹಾಗೆಯೇ ಭಾವಿಸುತ್ತೇವೆ. ಇವು ಲೋಕ ನಮ್ಮಳಕ್ಕೆ ಚಾಚಿಕೊಳ್ಳುವ ರೀತಿ. ಅದರಲ್ಲೂ ಭಾವನೆಗಳನ್ನು ಅತ್ಯಂತ ಪ್ರಬಲ ಶಕ್ತಿಗಳು ಅನ್ನುವ ಹಾಗೆ ಅನುಭವಿಸಿ ಹೇಳುವುದೇ ಹೆಚ್ಚು. ಈ ಪ್ರಬಲ ಶಕ್ತಿಗಳಿಗೆ ನಿಸರ್ಗದ ಶಕ್ತಿಗಳ ಅನುಭವವೇ ಆಧಾರ.
 
`ಹೊಟ್ಟೆಯ ಕಿಚ್ಚು~, `ಕನ್ನಡದ ಜೀರ್ಣಾಗ್ನಿ~, `ಅವನ ಮಾತು ಅರಗಿಸಿಕೊಳ್ಳುವುದಕ್ಕೆ ಆಗಲಿಲ್ಲ~, `ಸುಖ/ದುಃಖ ಉಣ್ಣುವುದು~, `ಕೋಪದ ಬಿರುಗಾಳಿ~, `ಪ್ರೀತಿಯ ಪ್ರವಾಹ~, `ದುಃಖದ ತಾಪ~, `ನಿಮ್ಮ ಹೊಟ್ಟೆ ತಣ್ಣಗಿರಲಿ~. ಇಲ್ಲೇ ಇನ್ನೊಂದು ಸಂಗತಿ ಗಮನಿಸಿ. ಕಣ್ಣಿಗೆ ಕಾಣದ ಅಮೂರ್ತ ಸಂಗತಿಗಳನ್ನು ಶರೀರಾನುಭವಕ್ಕೆ ದಕ್ಕುವ ಮೂರ್ತ ಸಂಗತಿಗಳ ಹಾಗೆ ಕಲ್ಪಿಸಿಕೊಳ್ಳುತ್ತೇವೆ. `ಸಂಸಾರ ಸಾಗರ~, `ಲಂಚ ತಿನ್ನುವುದು~, `ಮಾತು/ದುಃಖ ನುಂಗಿಕೊಳ್ಳುವುದು~, `ಭೂಮಿಯಷ್ಟು ತಾಳ್ಮೆ~ ಇತ್ಯಾದಿ ನುಡಿಗಳನ್ನು ಗಮನಿಸಿ. ಅಷ್ಟೇ ಯಾಕೆ, ಈ ವಾರದ ಬರಹದ ಶೀರ್ಷಿಕೆಯೂ ಅಮೂರ್ತವಾದ ಭಾಷೆಯ ಮುಖ್ಯಾಂಶವನ್ನು ಶರೀರಗೊಳಿಸಿ ಹೇಳುವ ರೂಪಕವೇ ಅಲ್ಲವೇ!

ಇನ್ನೂ ಸ್ವಾರಸ್ಯದೆಂದರೆ ದೇಶಸ್ಥವಾದ ಸಂಗತಿಗಳನ್ನು, ಚಲನೆಗಳನ್ನು ಕೂಡ ನಮ್ಮ ಶರೀರವನ್ನೇ ಕೇಂದ್ರವಾಗಿಟ್ಟುಕೊಂಡು ಗ್ರಹಿಸುವುದು. ಮುಂದೆ, ಹಿಂದೆ, ಎಡ, ಬಲ, ಮೇಲೆ, ಕೆಳಗೆ, ಒಳಗೆ, ಹೊರಗೆ ಈ ಎಂಟು ದಿಕ್ಕುಗಳಿಗೂ ನಮ್ಮ ಶರೀರ ಇರುವ ತಾವೇ ಕೇಂದ್ರ. ನಾನು ಪ್ರೈಮರಿ ಶಾಲೆಯಲ್ಲಿ ಓದುತ್ತಿರುವಾಗ ಭೂಪಟದ ಮುಂದೆ ಮುಖ ಮಾಡಿ ನಿಂತರೆ ಮೇಲೆ ಉತ್ತರ, ಕೆಳಗೆ ದಕ್ಷಿಣ, ಬಲಕ್ಕೆ ಪೂರ್ವ, ಎಡಕ್ಕೆ ಪಶ್ಚಿಮ ಅನ್ನುವ ವಿವರಣೆಯೂ ಕೈ ಚಾಚಿ ನಿಂತ ಹುಡುಗನ ಚಿತ್ರವೂ ನಮ್ಮ ಪುಸ್ತಕದಲ್ಲಿತ್ತು.

`ನನ್ನ ಮುಂದೆ ನಿಂತುಕೋಬೇಡ~, `ನಮ್ಮ ಹಿಂದೆ ಏನೇನೋ ಆಡಿಕೊಳ್ಳುತ್ತಾರೆ~, `ಒಳಗಿನ ಗುಟ್ಟು~, `ಒಳ ನೋಟ~, `ಮೇಲು ನೋಟ~, `ಬಲಪಂಥೀಯರು~ ಇತ್ಯಾದಿ.
ಇಲ್ಲಿ ಕೊನೆಗೆ ಹೇಳಿರುವ ನಿದರ್ಶನ ಇನ್ನೂ ಒಂದು ಮುಖ್ಯ ಅಂಶವನ್ನು ಸೂಚಿಸುತ್ತದೆ.

ಇಂಥ ದೇಶಸ್ಥವಾದ ರೂಪಕಗಳು ನೈತಿಕತೆಯ, ಪರಿಮಾಣದ, ಮೌಲ್ಯದ ಆಯಾಮಗಳನ್ನೂ ಪಡೆದುಕೊಳ್ಳುತ್ತವೆ. ಬದುಕಿನಲ್ಲಿ ಮುಂದೆ ಬರುವುದು ಅಪೇಕ್ಷಣೀಯ, ಹಿಂದೆ ಉಳಿಯುವುದು ಅಲ್ಲ; ಜೀವನದಲ್ಲಿ ಮೇಲೆ ಏರುವುದು ಸಾಧನೆ, ಇರುವ ಸ್ಥಿತಿಯಿಂದ ಕೆಳಗೆ ಬೀಳುವುದು ಸೋಲು; ಪ್ರಗತಿ ಅಂದರೆ ಮುಂದೆ ಸಾಗುವುದು, ಇರುವುದೆಲ್ಲ ಹಾಗೇ ಇರಲಿ ಅನ್ನುವವರು ಯಥಾಸ್ಥಿತಿವಾದಿಗಳು, ಬಲಪಂಥೀಯರು ಸಂಪ್ರದಾಯ, ಪರಂಪರೆಗಳಿಗೆ ಪ್ರಾಮುಖ್ಯ ನೀಡುವವರು, ಎಡಪಂಥೀಯರು ಕ್ರಾಂತಿಯನ್ನು ಅಪೇಕ್ಷಿಸುವವರು; ಬೆಲೆಗಳು ಮೇಲೇರುವುದು ಕೆಳಗೆ ಇಳಿಯುವುದು ಅನ್ನುವುದು ಹೆಚ್ಚು ಕಡಿಮೆ ಅನ್ನುವ ಪರಿಮಾಣವನ್ನೂ ಸೂಚಿಸುತ್ತವೆ. ಜ್ವರವೂ ಏರುತ್ತದೆ, ಒಳ್ಳೆಯದಲ್ಲ; ಇಳಿಯುತ್ತದೆ, ಒಳ್ಳೆಯದು.   

ಸಾಕು ಇಷ್ಟು ಉದಾಹರಣೆಗಳು. ಎಲ್ಲ ಭಾಷೆಗಳಲ್ಲೂ ಎಲ್ಲ ಸಂಸ್ಕೃತಿಯಲ್ಲೂ ಕೆಲವು ಮುಖ್ಯ ರೂಪಕಗಳು ಇದ್ದೇ ಇರುತ್ತವೆ. ಅವು ಮನುಷ್ಯ ಸಾಧಾರಣ, ಮನುಷ್ಯರೆಲ್ಲರಿಗೂ ಸಮಾನ ಅನ್ನುವ ಹಾಗಿರುತ್ತವೆ. ಹೀಗೆಂದು ತೀರ್ಮಾನಿಸಬಹುದೇ? ಅಥವ ಭಾಷೆ, ಸಂಸ್ಕೃತಿ, ಸಮಾಜ ಒಪ್ಪಿದ ನೈತಿಕ ಮೌಲ್ಯಗಳು ಇವೆಲ್ಲದರ ಆಧಾರದ ಮೇಲೆ ರೂಪಕಗಳ ನಿರ್ಮಾಣ ಬೇರೆ ಬೇರೆ ಥರ ಆಗುತ್ತದೋ? ಒಂದೊಂದು ಭಾಷೆಯೂ ವಾಸ್ತವಕ್ಕೆ ಒಂದೊಂದು ಥರ ಚೌಕಟ್ಟನ್ನು ನಿರ್ಮಿಸಿಕೊಳ್ಳುತ್ತದೆಯೋ? ಅದರಲ್ಲಿ ರೂಪಕದ ಪಾತ್ರವಿದೆಯೋ? ಆಲೋಚನೆಯ ಕ್ರಮಗಳನ್ನು ಮೀರಲು, ಬದಲಿಸಲು ವ್ಯಕ್ತಿಗಳು ಬಳಸುವ ಉಪಾಯ ರೂಪಕವೋ? 

ಪರಿಕಲ್ಪನೆಯ ವಲಯಗಳು ಮನುಷ್ಯಾನುಭವವನ್ನು ವ್ಯವಸ್ಥಿತವಾಗಿ ಜೋಡಿಸಿಟ್ಟುಕೊಳ್ಳುವ ಒಂದು ವ್ಯವಸ್ಥೆ. ಪರಿಕಲ್ಪನೆ ಎಂದರೆ ಅಮೂರ್ತ ವಿಚಾರವನ್ನು ಸಶರೀರವಾಗಿ ಕಲ್ಪಿಸಿಕೊಳ್ಳುವ ಸಾಮರ್ಥ್ಯ.

ಎಲ್ಲ ಭಾಷೆಗಳಲ್ಲೂ ಜನ ಸುಮಾರಾಗಿ ಒಂದೇ ಥರದ ರೂಪಕಗಳನ್ನು ಬಳಸುವುದರಿಂದ ರೂಪಕಗಳು ಗ್ರಹಿಕೆಗೆ ಸಂಬಂಧಪಟ್ಟವು ಅನ್ನುವ ನಿಲುವು ಹುಟ್ಟಿದೆ. ಈ ನಿಲುವಿನ ಆಧಾರದ ಮೇಲೆ ಗ್ರಹಿಕೆಯ ವಲಯಗಳು ಮಿದುಳಿನಲ್ಲಿ ದಾಖಲಾಗುವ ಮ್ಯಾಪುಗಳು ಇದ್ದಹಾಗೆ ಅನ್ನುವ ಯೋಚನೆ ಹುಟ್ಟಿದೆ. ಈ ವಿಚಾರವನ್ನು ಇತ್ತೀಚಿನ ವರ್ಷಗಳಲ್ಲಿ ವಿವರವಾಗಿ ಪರಿಶೀಲಿಸುತ್ತಿರುವವರು ಝೊಲ್ಟಾನ್ ಕೊವಾಸೆಸ್, ಜಾರ್ಜ್ ಲಕಾಫ್. ಮತ್ತು ಮಾರ್ಕ್ ಜಾನ್ಸನ್. ಅವರು ರೂಪಕಗಳ ನಕ್ಷೆಯನ್ನು ತಯಾರಿಸಲು ಪಡುವ ಕಷ್ಟ ನೋಡಿದರೆ ಸಂಸ್ಕೃತದ ಕಾವ್ಯಮೀಮಾಂಸೆಯಲ್ಲಿ ಅಲಂಕಾರಗಳನ್ನು ಅತಿ ಅನ್ನಿಸುವಷ್ಟು ಸೂಕ್ಷ್ಮವಾಗಿ ವಿಶ್ಲೇಷಿಸಿ ವಿವರಿಸುವ ಪ್ರಯತ್ನ ನಡೆದದ್ದು ಜ್ಞಾಪಕಕ್ಕೆ ಬರುತ್ತದೆ. ಆ ವಿಶ್ಲೇಷಣೆಯನ್ನು ಭಾಷೆಯ ತಿಳಿವಳಿಕೆಗೆ ಅಳವಡಿಸಿಕೊಳ್ಳುವ ಪ್ರಯತ್ನಕ್ಕೆ ಇನ್ನೂ ಅವಕಾಶವಿದೆ ಅನ್ನಿಸುತ್ತದೆ.

ಇಂಥ ಪರಿಕಲ್ಪನೆಯ ರೂಪಕಗಳು ಸಾಮಾನ್ಯವಾಗಿ ರೂಪಕಗಳೆಂದು ನಮ್ಮ ಮನಸ್ಸಿಗೆ ಹೊಳೆಯುವುದೇ ಇಲ್ಲ. ಇವಕ್ಕೆಲ್ಲ `ಮೃತ ರೂಪಕಗಳು~ ಎಂದು ಹೆಸರಿಟ್ಟು ಮರೆತುಬಿಡುವುದು ಸಾಮಾನ್ಯ ರೂಢಿ. ಆದರೆ ಯಾವುದು ಪರಿಚಿತವೋ ಅದನ್ನು ಹೊಸತೆಂಬಂತೆ ನೋಡುವುದು, ಪಂಪ ಹೇಳಿದ ಹಾಗೆ ಅರಿವನ್ನು ಹೊಸತುಗೊಳಿಸಿಕೊಳ್ಳುವುದು ನಮ್ಮ ಬದುಕಿನ ಲವಲವಿಕೆಗೇ ಅಗತ್ಯವಾದದ್ದು.

ರಾಜಕೀಯ, ತತ್ವಶಾಸ್ತ್ರ, ವಿಜ್ಞಾನ ಇಂಥ ಬೇರೆ ಬೇರೆ ವಲಯಗಳಲ್ಲಿ ಮನುಷ್ಯನ ರೂಪಕ ಶಕ್ತಿ ಒಡ್ಡಿರುವ ಸವಾಲುಗಳನ್ನು, ತೆರೆದಿರುವ ಹೊಸ ದಾರಿಗಳನ್ನು ಮುಂದೆ ನೋಡೋಣ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT