ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವ್ಯಕ್ತಿ ದೊಡ್ಡವನಾಗುವ ಅಪಾಯಗಳು ಏನೆಂದರೆ...

Last Updated 6 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ವ್ಯಕ್ತಿ ದೊಡ್ಡವನೇ? ಸಂಸ್ಥೆ  ದೊಡ್ಡದೇ? ಇದೂ ಒಂದು ಪ್ರಶ್ನೆಯೇ? ಸಂಸ್ಥೆಗಿಂತ ಎಂದೂ ವ್ಯಕ್ತಿ ದೊಡ್ಡವನಾಗಿ ಇರಲಾರ. ದೊಡ್ಡವನಾದರೆ ಅದು ಸಂಸ್ಥೆಯ ಹಿತಕ್ಕೆ ಬಾಧಕ.ಇಂಥ ಪ್ರಾಥಮಿಕ ಸಂಗತಿ ಗೊತ್ತಿದ್ದೂ  ಸಂಸ್ಥೆಗಿಂತ ವ್ಯಕ್ತಿ ದೊಡ್ಡವನಾಗಿ ಬೆಳೆದು ಬಿಡುತ್ತಾನೆ. ತಮಿಳುನಾಡಿನಲ್ಲಿ ಇಂಥ ವಿದ್ಯಮಾನ ಮೊನ್ನೆ ಮತ್ತೆ ನಡೆದಿದೆ.

ತಮಿಳುನಾಡು ವಿಧಾನಸಭಾಧ್ಯಕ್ಷ ಪಿ.ಧನಪಾಲ್ ಜುಲೈ 25ರಂದು ವಿಚಿತ್ರ ಎನಿಸುವಂಥ ಒಂದು ಆದೇಶ ಮಾಡಿದರು. ಇದು ತಮ್ಮ ಆದೇಶ ಮತ್ತು ಅದನ್ನು ಎಲ್ಲರೂ ಪಾಲಿಸಬೇಕು ಎಂದು ಫರ್ಮಾನು ಕೂಡ ಹೊರಡಿಸಿದರು. ಅಂದು ವಿಧಾನಸಭೆಯಲ್ಲಿ ಆಡಳಿತ  ಪಕ್ಷ ಎಐಎಡಿಎಂಕೆ ಸದಸ್ಯರು ಸದನದ ಸದಸ್ಯರಲ್ಲದ ಹಾಗೂ ಡಿಎಂಕೆ ನಾಯಕರಾದ ಎಂ.ಕರುಣಾನಿಧಿ ಅವರ ಹೆಸರು ಹೇಳಿ ಅವರ ವಿರುದ್ಧ ಏನೋ ಆರೋಪ ಮಾಡಿದರು.

ಸಹಜವಾಗಿಯೇ ಡಿಎಂಕೆ ಸದಸ್ಯರು, ‘ಸದನದ ಸದಸ್ಯರಲ್ಲದ ಕರುಣಾನಿಧಿ ಹೆಸರು ಹೇಳಬಹುದೇ’ ಎಂದು ತಕರಾರು ತೆಗೆದರು. ಅದಕ್ಕೆ ಸಭಾಧ್ಯಕ್ಷರು ಸಮಾಧಾನಕರ ಉತ್ತರ ಕೊಡಬೇಕಿತ್ತು. ಸದನದ ಸತ್ಸಂಪ್ರದಾಯಗಳು ಏನು ಎಂದು ಆಡಳಿತ ಪಕ್ಷದ ಸದಸ್ಯರಿಗೆ ತಿಳಿಸಿ ಹೇಳಬೇಕಿತ್ತು.

ಸದಸ್ಯರಲ್ಲದವರ ಹೆಸರನ್ನು ಸದನದಲ್ಲಿ ಪ್ರಸ್ತಾಪಿಸಿ ಅವರ ವಿರುದ್ಧ ಆರೋಪ ಮಾಡಬಾರದು ಎಂದು ಸಂಸದೀಯ ಸತ್ಸಂಪ್ರದಾಯ ಪಾಲಿಸಿಕೊಂಡು ಬಂದಿದೆ. ಏಕೆಂದರೆ, ಸದನದ ಸದಸ್ಯರಲ್ಲದವರ ವಿರುದ್ಧ ಏನೇ ಆರೋಪ ಮಾಡಿದರೂ ತಮ್ಮನ್ನು ಸಮರ್ಥಿಸಿಕೊಳ್ಳಲು ಆ ಮನೆಯಲ್ಲಿ ಅವರು ಇರುವುದಿಲ್ಲ. ಅವರು ಇಲ್ಲದೇ ಇರುವಾಗ ಅವರ ವಿರುದ್ಧ ಆರೋಪ ಮಾಡುವುದು ಅವರ ವ್ಯಕ್ತಿತ್ವದ ಘನತೆಯ ದೃಷ್ಟಿಯಿಂದ ಒಳ್ಳೆಯದಲ್ಲ ಎಂಬುದು ಈ ಸಂಪ್ರದಾಯ ಪಾಲನೆಯ ಹಿಂದಿರುವ ಉದ್ದೇಶ.

ಸದನದ ಸದಸ್ಯರ ವಿರುದ್ಧವೂ ಏನಾದರೂ ಆರೋಪ ಮಾಡಬೇಕಿದ್ದರೆ ಅವರಿಗೆ ಸಭಾಧ್ಯಕ್ಷರ ಮೂಲಕ ಒಂದು ನೋಟಿಸ್‌ ನೀಡಿ ಅವರು ಸದನದಲ್ಲಿ ಹಾಜರು ಇರುವಾಗ ಆ ಆರೋಪ ಮಾಡುವುದು ಕೂಡ  ಸಭಾ ನಡವಳಿಕೆಯಲ್ಲಿ ಇರುವ ನಿಯಮ. ಇದೆಲ್ಲ ಈಗ ಪಾಲನೆಯಾಗುತ್ತಿದೆಯೇ ಇಲ್ಲವೇ ಎಂಬುದು ಬೇರೆ ಮಾತು.

ಹಾಗೆ ನೋಡಿದರೆ, ಸದನದ ಯಾವ ನಿಯಮ ಈಗ ಪಾಲನೆಯಾಗುತ್ತಿದೆ? ಸದನ ಸರಿಯಾಗಿ ನಡೆಯದೇ ಇರುವಾಗ ಮತ್ತು ಸದನ ಸೇರಿದ ಕೂಡಲೇ ಗಂಟಲು ಹರಿಯುವ ಹಾಗೆ ಕೂಗುತ್ತ ಸಭಾಧ್ಯಕ್ಷರ ಮುಂದಿನ ಅಂಗಳದಲ್ಲಿ ಸೇರುವುದು ಮತ್ತು ಪರಸ್ಪರರ ವಿರುದ್ಧ ಆರೋಪ ಮಾಡುವುದೇ ಈಗಿನ ಕಲಾಪ ವೈಖರಿಯಾಗಿರುವುದರಿಂದ ಅಧಿವೇಶನಕ್ಕೆ ಈಗ ಗಾಂಭೀರ್ಯವೂ ಇಲ್ಲ, ಘನತೆಯೂ ಇಲ್ಲ.

ವಿರೋಧ ಪಕ್ಷದ ಧರಣಿ, ಕೂಗಾಟಗಳಿಗೆ ವಿರುದ್ಧವಾಗಿ ಆಡಳಿತ ಪಕ್ಷದ ಸದಸ್ಯರೂ ತಮ್ಮ ತೋಳ್ಬಲ ಹಾಗೂ ಗಂಟಲುಬಲವನ್ನು ಬಳಸುತ್ತಾರೆ. ಒಂದು ಸಾರಿ ಸದನದ ಶಿಸ್ತು ಹೊರಟು ಹೋಯಿತು ಎಂದರೆ ಅಲ್ಲಿಗೆ ಎಲ್ಲರಿಗೂ ‘ಮುಕ್ತ  ಅವಕಾಶ’, ಯಾರು ಬೇಕಾದರೂ ಏನು ಬೇಕಾದರೂ ಮಾತನಾಡಬಹುದು, ಆರೋಪ–ಪ್ರತ್ಯಾರೋಪ ಮಾಡಬಹುದು. ಲೋಕಸಭೆಯಿಂದ ರಾಜ್ಯ ವಿಧಾನಸಭೆ ವರೆಗೆ ಮತ್ತು ಕೆಳಗೆ ಜಿಲ್ಲೆ, ತಾಲ್ಲೂಕು ಪಂಚಾಯ್ತಿಗಳ ಸಾಮಾನ್ಯ ಸಭೆಯವರೆಗೆ ಇದೇ ದೃಶ್ಯ ನಮಗೆ ಕಾಣುತ್ತದೆ.

ಅಧಿವೇಶನ ಎಂಬುದು ಅರ್ಥಪೂರ್ಣ ಚರ್ಚೆಗೆ, ಅದ್ಭುತ ವಾಗ್ಮಿತೆಗೆ ಹೆಸರಾಗಿದ್ದ ಕಾಲ ಯಾವಾಗಲೋ ಮುಗಿದು ಹೋಯಿತು. ಹೊಡೆದಾಟ, ಬಡಿದಾಟಕ್ಕೆ, ವಸ್ತ್ರಾಪಹರಣಕ್ಕೆ ಹೆಸರಾದ ತಮಿಳುನಾಡು ವಿಧಾನಸಭೆ ಕೂಡ  ಇದಕ್ಕೆ ಹೊರತಾಗಿರಲು ಸಾಧ್ಯವಿಲ್ಲ.

ಜುಲೈ 25ರಂದು ಡಿಎಂಕೆ ಸದಸ್ಯರು ಎತ್ತಿದ್ದ ಆಕ್ಷೇಪಕ್ಕೆ ಸಭಾಧ್ಯಕ್ಷರು, ‘ಹೌದು, ಸದನದ ಸದಸ್ಯರಲ್ಲದವರ ಹೆಸರು ಹೇಳಬಾರದು, ಅದು ಸತ್ಸಂಪ್ರದಾಯವಲ್ಲ’ ಎಂದು ಆಡಳಿತ ಪಕ್ಷದ ಸದಸ್ಯರಿಗೆ ತಾಕೀತು ಮಾಡಬೇಕಿತ್ತು. ಅದಕ್ಕೆ ವ್ಯತಿರಿಕ್ತವಾಗಿ ಅವರು ಏನು ಮಾಡಿದರು ಎಂದರೆ, ‘ಇನ್ನು ಮುಂದೆ ಸದನದಲ್ಲಿ ಯಾರೂ ಮುಖ್ಯಮಂತ್ರಿ ಜಯಲಲಿತಾ ಅವರ ಹೆಸರು ಹೇಳಬಾರದು, ಇದು ನನ್ನ ಆದೇಶ’ ಎಂದು ಫರ್ಮಾನು ಹೊರಡಿಸಿದರು.

ವಿರೋಧ ಪಕ್ಷ ಎತ್ತಿದ ಆಕ್ಷೇಪಕ್ಕೂ ಅವರು ಮಾಡಿದ ಆದೇಶಕ್ಕೂ ಅರ್ಥಾತ್‌ ಸಂಬಂಧವೇ ಇರಲಿಲ್ಲ. ಅವರು ಏನೋ ಕೇಳಿದರು, ಇವರು ಏನೋ ಹೇಳಿದರು. ಹಾಗೆ ನೋಡಿದರೆ, ಸಭಾಧ್ಯಕ್ಷರು ತಮ್ಮ ಪಕ್ಷದ ನಾಯಕಿಯನ್ನು ಸಂಪ್ರೀತಗೊಳಿಸಲು ಒಂದು ಅವಕಾಶಕ್ಕಾಗಿ ಕಾಯುತ್ತಿದ್ದರೋ ಏನೋ? ಮತ್ತೆ, ‘ನಮ್ಮ ಪಕ್ಷದ ಅಧಿನಾಯಕಿ ‘ಅಮ್ಮ’ ಜಯಲಲಿತಾ ಎಂದರೆ ಏನು? ಸದನದಲ್ಲಿ ಅವರ ಹೆಸರು ಹಿಡಿದು ಮಾತನಾಡುವುದು ಎಂದರೆ ಏನು’ ಎಂದು ಧನಪಾಲ್‌ ಅವರು ಕೇಳಬಹುದು.

ಭಟ್ಟಂಗಿತನಕ್ಕೆ ಒಂದು ಕೊನೆ ಎಂದು ಇರುತ್ತದೆಯೇ? ಅದು ನಮ್ಮನ್ನು ನಮ್ಮ ಮಂಡಿಗಳ ಮೇಲೆ ನಿಲ್ಲುವಂತೆ  ಮಾಡಿ ಬಿಡುತ್ತದೆ. ವ್ಯಕ್ತಿತ್ವದ ಘನತೆಯನ್ನು ಹಿಡಿಮುಷ್ಟಿಗೆ ತಂದು ನಿಲ್ಲಿಸುತ್ತದೆ. ಜಯಲಲಿತಾ ತಮಿಳುನಾಡಿನ ಮುಖ್ಯಮಂತ್ರಿ ಮತ್ತು ವಿಧಾನಸಭೆಯ ಹಾಲಿ ಸದಸ್ಯೆ. ಅವರು ಅಂದು ಸದನದಲ್ಲಿ ಇದ್ದರೋ ಇಲ್ಲವೋ ಸ್ಪಷ್ಟವಾಗಿಲ್ಲ.

ಅವರು ಇದ್ದರೂ ಸಭಾಧ್ಯಕ್ಷರ ಆದೇಶಕ್ಕೆ ತಲೆತೂಗುತ್ತಿದ್ದರೋ ಅಥವಾ ಇದು ಸರಿಯಲ್ಲ ಎಂದು ಹೇಳುತ್ತಿದ್ದರೋ ತಿಳಿಯದು. ಇದುವರೆಗೆ ಅವರ ಪ್ರತಿಕ್ರಿಯೆ ಏನು ಎಂದು ತಿಳಿದಿಲ್ಲ. ವಿಧಾನಸಭೆಯ ಹಾಲಿ ಸದಸ್ಯರ ಹೆಸರು ಹೇಳಲು ಅವಕಾಶ ಇಲ್ಲ ಎಂದರೆ ಅದು ಎಂಥ ಸಭಾ ನಡವಳಿಕೆ ಎಂದು ಡಿಎಂಕೆ ಸದಸ್ಯರು ಅಂದು ಸಭಾತ್ಯಾಗ ಮಾಡಿ ಹೊರನಡೆದರು.

ಸದನದ ನಡವಳಿಕೆಗಳು, ಸಂಪ್ರದಾಯಗಳು ಎಷ್ಟು ಚೆನ್ನಾಗಿ ಇವೆ ಮತ್ತು ಎಷ್ಟು ಉನ್ನತ ಮಟ್ಟದವು ಇವೆ ಎಂದರೆ ಸದನ ಸರಿಯಾಗಿ ನಡೆಯಬೇಕು ಎಂಬ ಕಾಳಜಿಯಿಂದ ಆ ಎಲ್ಲ ನಿಯಮಗಳು ರೂಪಿತವಾಗಿವೆ. ಸದನ ಏಕೆ ಸರಿಯಾಗಿ ನಡೆಯಬೇಕು ಎಂದರೆ ಎಲ್ಲರಿಗಿಂತ ಸದನ ದೊಡ್ಡದು ಮತ್ತು ಅದು ಜನರ ಹಿತಕ್ಕಾಗಿ ಇರುವ ವೇದಿಕೆ ಎಂದು ನಮ್ಮ ಹಿರಿಯರು, ಸಂಸದೀಯ ಪಟುಗಳು ದೃಢವಾಗಿ ನಂಬಿದ್ದರು.

‘ಒಬ್ಬ ಸದಸ್ಯರು ಎದ್ದು ನಿಂತು ಮಾತನಾಡುವಾಗ ಇನ್ನೊಬ್ಬ ಸದಸ್ಯರು ಎದ್ದು ನಿಲ್ಲಬಾರದು. ಅವರು ಮಾತನಾಡುವಾಗಲೇ ತಾನೂ ಮಾತನಾಡಬೇಕಿದ್ದರೆ ಮೊದಲು ಮಾತನಾಡಲು ನಿಂತವರ ಅನುಮತಿ (ಯೀಲ್ಡ್‌) ಕೇಳಬೇಕು. ಅವರು ಒಪ್ಪಿದರೆ ಮಾತ್ರ ನಿಂತು ಮಾತನಾಡಬೇಕು. ಎಲ್ಲ ಸದಸ್ಯರು ಸಭಾಧ್ಯಕರನ್ನು ಉದ್ದೇಶಿಸಿಯೇ ಮಾತನಾಡಬೇಕೇ ಹೊರತು ಪರಸ್ಪರರನ್ನು ಉದ್ದೇಶಿಸಿ ಅಲ್ಲ.

ಒಬ್ಬ ಸದಸ್ಯರು ನಿಂತು ಮಾತನಾಡುವಾಗ ಅವರ ಮತ್ತು ಸಭಾಧ್ಯಕ್ಷರ ನಡುವೆ ಯಾರೂ ಹಾಯ್ದು ಹೋಗಬಾರದು. ಒಂದು ವೇಳೆ ಹಾಗೆ  ಹಾಯ್ದು ತಮ್ಮ ಸೀಟಿಗೆ ಹೋಗಬೇಕಿದ್ದರೆ ಆ ಸದಸ್ಯರ  ಮಾತು ಮುಗಿಯುವವರೆಗೆ ಒಂದು ಕಡೆ ನಿಲ್ಲಬೇಕು.

 ಇಂಥವೆಲ್ಲ ನಮ್ಮ ಸದನ ಸರಿಯಾಗಿ ನಡೆಯಲು ಇರುವ ಸಣ್ಣ ಪುಟ್ಟ ಸಂಗತಿಗಳು. ಒಬ್ಬ ವ್ಯಕ್ತಿ ಶಾಸಕರಾಗಿ ಪ್ರಮಾಣ ವಚನ ತೆಗೆದುಕೊಳ್ಳುವ ದಿನ ಒಂದು ಬ್ರೀಫ್‌ಕೇಸಿನಲ್ಲಿ ಸದನದ ನಡವಳಿಕೆಯ ಪುಸ್ತಕವನ್ನೂ ಇಟ್ಟು ಕೊಡುವುದು ಅವರು ಅದನ್ನು ಓದಲಿ ಮತ್ತು ನಿಯಮಗಳಿಗೆ ತಕ್ಕಂತೆ ನಡೆದುಕೊಳ್ಳಲಿ ಎಂದು.

ಸಾಮಾನ್ಯವಾಗಿ ಆಡಳಿತ ಪಕ್ಷದ ಒಬ್ಬ ಹಿರಿಯ ಸಂಸದೀಯ ಪಟುವೇ ಸಭಾಧ್ಯಕ್ಷರಾಗಿ ಆಯ್ಕೆಯಾಗುತ್ತಾರೆ. ಹಾಗೆ  ಆಯ್ಕೆಯಾದ ತಕ್ಷಣವೇ ಅವರು ಪಕ್ಷಕ್ಕೆ ರಾಜೀನಾಮೆ ನೀಡುವುದು ಕೂಡ ಸಂಪ್ರದಾಯ. ಏಕೆಂದರೆ ಸಭಾಧ್ಯಕ್ಷರಾದ ನಂತರ ಅವರು ಆಡಳಿತ ಪಕ್ಷಕ್ಕೆ ಮಾತ್ರ ಸೇರಿದವರಲ್ಲ. ಅವರು  ಒಟ್ಟಾರೆ ಸದನದ ಹಿತರಕ್ಷಕ. ಅವರು ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ಸದಸ್ಯರನ್ನು ಸಮಾನ ದೃಷ್ಟಿಯಿಂದ ನೋಡಿಕೊಳ್ಳಬೇಕು. ಹಾಗೆ  ನೋಡಿದರೆ ಒಂದು ಗುಲಗಂಜಿ ತೂಕದಷ್ಟು ಹೆಚ್ಚಿನ ಒಲವನ್ನು ವಿರೋಧ ಪಕ್ಷದ ಕಡೆಗೇ ತೋರಿಸಬೇಕು...

ಇದೆಲ್ಲ ಆದರ್ಶ. ಒಂದು ರೀತಿ ಪುಸ್ತಕದ ಬದನೆಕಾಯಿ. ಏಕೆಂದರೆ ವಿಧಾನಸಭಾಧ್ಯಕ್ಷರು ಮತ್ತು ಸಚಿವ ಸ್ಥಾನಗಳು ಅದಲು ಬದಲು ಕಂಚೀಕದಲು ಎನ್ನುವ ಹಾಗೆ ಈಗ ಕಣ್ಣು ಮುಚ್ಚಿ ತೆರೆಯುವ ಒಳಗೆ ಬದಲಾಗುತ್ತಿರುವುದರಿಂದ ಸಭಾಧ್ಯಕ್ಷರಾದ ಕೂಡಲೇ ಪಕ್ಷಕ್ಕೆ ರಾಜೀನಾಮೆ ಕೊಡಬೇಕು ಮತ್ತು ಸಚಿವರಾಗಿ ಪ್ರಮಾಣ ವಚನ ತೆಗೆದುಕೊಳ್ಳುವಾಗ ಪಕ್ಷದ ಸದಸ್ಯತ್ವವನ್ನು ಮತ್ತೆ ತೆಗೆದುಕೊಳ್ಳಬೇಕು ಎನ್ನುವುದೆಲ್ಲ ಎಲ್ಲಿಯ ರಗಳೆ? ಅಥವಾ ಇಂಥ ಸಂಪ್ರದಾಯಗಳೆಲ್ಲ ಪಾಲನೆಯಾಗಬೇಕು ಎಂದು ಈಗ ಯಾರು ಕೇಳುತ್ತಾರೆ?

ಯಾರಾದರೂ ಕೇಳಬೇಕು. ಏಕೆಂದರೆ ಹೀಗೆಲ್ಲ ಮಾಡುತ್ತ ಇದ್ದರೆ ಸಂಸ್ಥೆ ದುರ್ಬಲವಾಗುತ್ತ ಹೋಗುತ್ತದೆ. ವಿಧಾನ ಮಂಡಳದ ಅಧಿವೇಶನವನ್ನು ಈಗ ಯಾರು ಗಂಭೀರವಾಗಿ ತೆಗೆದುಕೊಳ್ಳುತ್ತಾರೆ? ಒಂದು ಆತ್ಮಹತ್ಯೆ ಈಗ ಇಡೀ ಮೂರು ದಿನಗಳ ಅಧಿವೇಶನವನ್ನು ನುಂಗಿ ಹಾಕುತ್ತದೆ. ಯಾವುದೋ ಒಂದು ಮಾತು ಒಂದು ದಿನದ ಕಲಾಪವನ್ನು ಕೊಂದು ಬಿಡುತ್ತದೆ. ಅಧಿವೇಶನದಲ್ಲಿ ಕುಳಿತು ಚರ್ಚೆ ಮಾಡುವುದಕ್ಕಿಂತ ಕೂಗಾಟ, ಒದರಾಟ ಮಾಡುವುದೇ ದೊಡ್ಡದು ಎಂದು ನಮ್ಮ ಶಾಸಕರು ನಂಬಿ ಬಿಟ್ಟಿರುವಂತಿದೆ.ಬೀದಿಯಲ್ಲಿನ ಜನರ ಹಿತಕ್ಕಿಂತ ನಾಯಕರ ಪ್ರತಿಷ್ಠೆಗಳು ದೊಡ್ಡದಾಗಿ ಕಾಣುವುದು ಹೀಗೆ.

ತಮಿಳುನಾಡಿನ ವಿಧಾನಸಭಾಧ್ಯಕ್ಷ ಧನಪಾಲ್‌ ಅವರು ಜಯಲಲಿತಾ ಅವರ ಹೆಸರನ್ನು ಸದನದಲ್ಲಿ ಹೇಳಬಾರದು ಎಂದು ಆದೇಶಿಸುವ ಮೂಲಕ ಜಯಾ ಅವರು ಸಭೆಯ ನಡವಳಿಕೆಯ ನಿಯಮಗಳಿಗಿಂತ ದೊಡ್ಡವರು ಎಂದು ಹೇಳಿದಂತಾಯಿತು.

ಇದು ಜಯಲಲಿತಾ ಅವರು ತಮ್ಮ ಪಕ್ಷದ ಮೇಲೆ, ಪಕ್ಷದ ಸದಸ್ಯರ ಮೇಲೆ ಹೊಂದಿರುವ ಹಿಡಿತ ಎಂಥದು ಎಂದು ತೋರಿಸುತ್ತದೆ. ಅವರು ಈಚೆಗೆ ನಡೆದ ವಿಧಾನಸಭೆ ಚುನಾವಣೆಯಲ್ಲಿ ಮತ್ತೆ ಗೆದ್ದು ಅಧಿಕಾರಕ್ಕೆ ಬಂದಾಗ ನಾವೆಲ್ಲ ನೋಡಿದ್ದೆವು : ಈಗ ವಿಧಾನಸಭಾಧ್ಯಕ್ಷರಾಗಿರುವ ಧನಪಾಲ್‌ ಅವರೂ ಸೇರಿದಂತೆ ಎಲ್ಲ ನಾಯಕರು ಸಾಲಾಗಿ ನಿಂತು ಜಯಾ ಅವರ ಕೈಗೆ ಒಂದು ಹೂಗುಚ್ಛ ಕೊಟ್ಟು ಸಾಷ್ಟಾಂಗ ನಮಸ್ಕಾರ ಮಾಡಿದರು. ಜಯಾ ಅವರು ಸುಮ್ಮನೆ ಕೈಮುಟ್ಟಿ ಕೊಡುತ್ತಿದ್ದ ಈ ಹೂಗುಚ್ಛಗಳನ್ನು ಆಚೆ ಸಾಗಿಸಲು ಕಿಸಗಾಲು ಹಾಕಿಕೊಂಡು ನಡುಬಗ್ಗಿಸಿ ನಿಂತಿದ್ದ  ಒಬ್ಬ ಪೊಲೀಸ್‌ ಅಧಿಕಾರಿ ಜಯಾ ಅವರ ಹಿಂದೆ ನಿಂತಿದ್ದ.

ಗಂಡಸರಿಂದ ತಮಗಾದ ಎಲ್ಲ ಅವಮಾನಗಳಿಗೆ ಜಯಾ ಅವರು ಚಕ್ರಬಡ್ಡಿ ಸಮೇತ ಸೇಡು ತೀರಿಸಿಕೊಳ್ಳುತ್ತ ಇರುವಂತಿದೆ. ಇದೇ ತಮಿಳುನಾಡಿನ ವಿಧಾನಸಭೆಗೆ 1989ರಲ್ಲಿ  ನಡೆದ ಚುನಾವಣೆಯಲ್ಲಿ ಭಾರಿ ಬಹುಮತದಿಂದ ಗೆದ್ದು ಸರ್ಕಾರ ನಡೆಸುತ್ತಿದ್ದ ಡಿಎಂಕೆ ಸದಸ್ಯರು ಜಯಾ ಅವರನ್ನು ಥಳಿಸಿ, ಸೀರೆ ಹಿಡಿದು, ಹರಿದು, ಎಳೆದಾಡಿ ಅವಮಾನಿಸಿ ಹೊರಗೆ ಹಾಕಿದ್ದರು.

ಜಯಾ ಅವರು ಎಲ್ಲ ಗಂಡಸರ ವಿರುದ್ಧ ಆಗಲೇ ಹಲ್ಲು ಮಸೆಯಲು ಆರಂಭಿಸಿರಬೇಕು. ಆಗಲೇ ಅವರು ಡಿಎಂಕೆ ವಿರುದ್ಧ ಸಮರವನ್ನೂ ಸಾರಿದರು. ಅಗಲ ದಡಿಯ ಕೆಂಪು ಸೀರೆ  ಉಟ್ಟು ಮೈಮೇಲೆಲ್ಲ ಚಿನ್ನದ ಆಭರಣಗಳನ್ನು ಧರಿಸಿ ಮಹಿಷಾಸುರ ಮರ್ದನಕ್ಕೆ ಹೊರಟೇ ಬಿಟ್ಟರು. ಜಯಾ ಚಾಮುಂಡಿಯ ಭಕ್ತೆ! ಆದರೆ, ಅವರಿಗೆ ಆಗ ಅಖಿಲಾಂಡೇಶ್ವರಿ, ಆದಿ ಪರಾಶಕ್ತಿ ಎಂದು ಹೆಸರು ಬಂದಿತ್ತು. ಅವೆಲ್ಲ ಚಾಮುಂಡೇಶ್ವರಿಯ ಹೆಸರುಗಳೇ! ಜಯಲಲಿತಾ ಅವರು ಹುಟ್ಟಿದಾಗ ಅವರಿಗೆ ಇಟ್ಟ ಹೆಸರು ಏನು ಗೊತ್ತೇ? ಕೋಮಲವಲ್ಲಿ! ಎಂಥ ರೂಪಾಂತರ?

ಅವರ ಸೀರೆಗೆ ಕೈ ಹಾಕಿದ ಗಂಡಸು ಕುಲ ಈಗ ಅವರ  ವಿರುದ್ಧ ನಡುಬಗ್ಗಿಸಿ ನಿಲ್ಲುತ್ತಿದೆ. ಅವರ ಕಣ್ಣನ್ನು ಎದುರಿಸಿ ನೋಡಲು ಹೆದರುತ್ತಿದೆ. ಒಂದು ಸಚಿವ ಪದವಿಗಾಗಿ, ಎಂಜಲು ಹುದ್ದೆಗಾಗಿ ಆಕೆಯ ಪದತಲದಲ್ಲಿ ತನ್ನೆಲ್ಲ ಆತ್ಮಗೌರವವನ್ನು ಎಡೆಯ ಹಾಗೆ ಇಡುತ್ತಿದೆ. ಇದೆಲ್ಲ ಈಗಿನ ಮಾತಲ್ಲ, 1991ರಲ್ಲಿಯೇ ಗೋಪಿಚೆಟ್ಟಿಪಾಳ್ಯದ ಶಾಸಕ ಸೆಂಗೊಟ್ಟಿಯನ್‌ ಸಂಪುಟ ಸೇರಿದ ಕೂಡಲೇ ಜಯಾ ಅವರ ಕಾಲಿಗೆ ಬಿದ್ದರು.

ಸೆಂಗೊಟ್ಟಿಯನ್‌ ಅವರು ಜಯಾ ಕಾಲಿಗೆ ಬೀಳುವುದೇ ತಡ ಹಿಂದೆ ಇದ್ದ  ಎಲ್ಲ ಸಣ್ಣ ಪುಟ್ಟ ಸಚಿವರೂ ದಬದಬ ಬಂದು ಅದನ್ನೇ ಮಾಡಿದರು. ಅದಾಗಿ 25 ವರ್ಷ ಆಗಿ ಹೋಯಿತು. ಈಗ, ಜಯಾ ಎಷ್ಟು ಎತ್ತರ ಬೆಳೆದಿರಬಹುದು ಎಂದು ಊಹೆ ಮಾಡಲೂ ಸಾಧ್ಯವಿಲ್ಲ.

ಹೀಗೇ ಬೃಹದಾಕಾರವಾಗಿ ಒಬ್ಬ ವ್ಯಕ್ತಿ ಬೆಳೆಯುವುದರಿಂದ ಆಗುವ ದೊಡ್ಡ ಅಪಾಯ ಎಂದರೆ ಅವರ ಪಕ್ಷದಲ್ಲಿ ನಾಯಕತ್ವ ದುರ್ಬಲವಾಗುತ್ತ ಹೋಗುತ್ತದೆ. ಜಯಲಲಿತಾ ಅವರನ್ನು ರಾಜಕೀಯಕ್ಕೆ ತಂದ ಎಂ.ಜಿ.ರಾಮಚಂದ್ರನ್‌ ಕೂಡ ಪಕ್ಷದಲ್ಲಿ ಎರಡನೇ ಹಂತದ ನಾಯಕರು ಹೋಗಲಿ, ಮೂರು, ನಾಲ್ಕನೇ ಹಂತದ ನಾಯಕರನ್ನೂ ಬೆಳೆಯಲು ಬಿಟ್ಟಿರಲಿಲ್ಲ. ಅವರು ಬದುಕಿರುವ ವರೆಗೆ ಅವರು ತಮ್ಮ ಉತ್ತರಾಧಿಕಾರಿ ಎಂದು ಯಾರನ್ನೂ ಗುರುತಿಸಿರಲಿಲ್ಲ. ಈಗ ಜಯಾ ಕೂಡ ಹಾಗೆಯೇ ನಡೆದುಕೊಳ್ಳುತ್ತಿದ್ದಾರೆ.

ಒಮ್ಮೊಮ್ಮೆ ಹೀಗೆಯೇ ಆಗುತ್ತದೆ : ವ್ಯಕ್ತಿಗಳು ಪಕ್ಷಕ್ಕಿಂತ ದೊಡ್ಡವರಾಗಿ ಬೆಳೆದು ಬಿಡುತ್ತಾರೆ. ವಿಧಾನಸಭೆಯಂಥ ಸಂಸ್ಥೆಗಳಿಗಿಂತ ಎತ್ತರ ಬೆಳೆದು ಬಿಡುತ್ತಾರೆ. ಅದು ಪಕ್ಷಗಳಿಗೆ ಮತ್ತು ವಿಧಾನಸಭೆಯಂಥ ಸಂಸ್ಥೆಗಳಿಗೆ ಒಳ್ಳೆಯದಲ್ಲ. ಎಐಎಡಿಎಂಕೆ ಪಕ್ಷ ಜಯಾ ಅವರ ಆಸ್ತಿ. ಅದಕ್ಕೆ ಒಳ್ಳೆಯದಾದರೂ, ಕೆಟ್ಟದಾದರೂ ಅದು ಅವರ ಸಮಸ್ಯೆ. ಆದರೆ, ವಿಧಾನಸಭೆಯ ಸ್ಥಾನಮಾನ ಇಂಥ ಒಬ್ಬ ನಾಯಕಿಗಿಂತ ಕೆಳಗೆ ಇಳಿಯುವುದು ಪ್ರಜಾಪ್ರಭುತ್ವಕ್ಕೆ ಒಳಿತಲ್ಲ.

ಏಕೆಂದರೆ ಸರ್ವಾಧಿಕಾರದಲ್ಲಿ ಮಾತ್ರ ಇಂಥದೆಲ್ಲ ಸಹಜವಾಗಿ ಕಾಣಲು ಸಾಧ್ಯ. ಜಯಲಲಿತಾ ಅವರನ್ನು ಸರ್ವಾಧಿಕಾರಿ ಎಂದು ಕರೆಯುವುದೂ ಅಪಾಯಕಾರಿ. ಏಕೆಂದರೆ ಅವರು ತಮ್ಮ ವಿರುದ್ಧ ಟೀಕೆ ಮಾಡುವವರ ವಿರುದ್ಧ ಮಾನಹಾನಿ ಪ್ರಕರಣ ಜಡಿದು ಅವರನ್ನು ಜೈಲಿಗೆ ತಳ್ಳುವ ಯೋಚನೆಯಲ್ಲಿಯೇ ಇರುತ್ತಾರೆ. ಅದರಲ್ಲಿ ಅವರು ನಿಸ್ಸೀಮರು. ಪ್ರಜಾಪ್ರಭುತ್ವದಲ್ಲಿ ಟೀಕೆ, ವಿಮರ್ಶೆ ಸಹಜ. ತಮಿಳುನಾಡಿನಲ್ಲಿ ಪ್ರಜಾಪ್ರಭುತ್ವದ ಬದಲು ರಾಣಿಪ್ರಭುತ್ವ ಇರುವ ಹಾಗೆ ಕಾಣುತ್ತದೆ. ಇಂಥ ‘ಪ್ರಭುತ್ವ’ ಇರುವ ಕಡೆಗಳಲ್ಲಿ ಓಲೈಕೆ ಮಾತ್ರ ಇರುತ್ತದೆ. ಆತ್ಮಗೌರವ ತೆರೆಯ ಮರೆಗೆ ಹೋಗಿ ಅವಿತುಕೊಂಡಿರುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT