ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಬ್ದ ನಿಪುಣನ ಜೀವನ ಗಾಥೆ

Last Updated 11 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ರೆಸೂಲ್ ಪೂಕುಟ್ಟಿ ತುಂಬ ಹೆಸರು ಮಾಡಿರುವ ಸೌಂಡ್ ಡಿಸೈನರ್. ಆತನಿಗೆ ಖ್ಯಾತಿ, ಪ್ರಶಸ್ತಿ ತಂದುಕೊಟ್ಟ ಚಿತ್ರ ಸ್ಲಂ ಡಾಗ್ ಮಿಲಿಯನೇರ್. ಏಷ್ಯಾದಲ್ಲಿ ಆಸ್ಕರ್ ಪ್ರಶಸ್ತಿ ಪಡೆದ ಏಕೈಕ ಶಬ್ದ ತಂತ್ರಜ್ಞ. ಕೇರಳ ಮೂಲದ ರೆಸೂಲರ ಜೀವನ ಕಥೆ ಈಗ ಪುಸ್ತಕ ರೂಪದಲ್ಲಿ ಬಂದಿದೆ. `ಸೌಂಡಿಂಗ್ ಆಫ್' ಎಂಬ ಈ ಪುಸ್ತಕ ನನ್ನ ಕೈಯಲ್ಲಿದೆ. ಬಡ ಕುಟುಂಬದಿಂದ ಬಂದ ರೆಸೂಲರ ಬಿಚ್ಚು ಮನಸಿನ ಕಥನ ಇದು.

ಪ್ರಶಸ್ತಿ ಗೆದ್ದು ಅಕ್ಕ ತಂಗಿಯರಿಗೂ ಸಿಗದಷ್ಟು ಬಿಜಿ ಆದ ಸಂಭ್ರಮದಲ್ಲಿ, ತನ್ನ ಸ್ನೇಹಿತ, ಮ್ಯೋನೇಜರ್‌ನ ಬಗೆಗಿನ ಹುಸಿ ಮುನಿಸಿನಲ್ಲಿ, ತನ್ನನ್ನು ಬಿಟ್ಟರೆ ಯಾರೂ ಇಲ್ಲ ಎಂಬ ಜಂಭದ ಧ್ವನಿಯಲ್ಲಿ ಪುಸ್ತಕ ಶುರುವಾಗುತ್ತದೆ. ಏನಪ್ಪಾ ಕಥೆ ಹೇಳೋದು ಬಿಟ್ಟು ಹೀಗೆ ಸ್ಕೋಪ್ ತೊಗೊತ್ತಿದ್ದಾರೆ ಅನಿಸಿದರೂ ಓದುತ್ತಾ ಹೋದಂತೆ ಪುಸ್ತಕ ಇಷ್ಟವಾಯಿತು.

ರೆಸೂಲರದು ಹಳ್ಳಿ ಹುಡುಗನ ಯಶೋಗಾಥೆ. ಕಾಡಿನ ಮಧ್ಯದ ಪುಟಾಣಿ ಗ್ರಾಮದಲ್ಲಿ ಬೆಳೆದ ಆತನ ತಂದೆ ತಾಯಿ ತದ್ವಿರುದ್ಧ ಜಾಯಮಾನದವರು. ತಂದೆ ಕಮ್ಯುನಿಸ್ಟ್ ಪಕ್ಷದ ಅನುಯಾಯಿ. ಸಹಕಾರಿ ಬಸ್ ಕಂಪೆನಿಯಲ್ಲಿ ಕೆಲಸ. ನಾಸ್ತಿಕ. ಎಂದಿಗೂ ಮಸೀದಿಯಲ್ಲಿ ಕಾಲಿಟ್ಟವರಲ್ಲ. ತಾಯಿಗೆ ಕಮ್ಯುನಿಸಮ್ ಅರ್ಥವಾಗದ ವಿಷಯ. ಒಂದು ಪುಟ್ಟ ಜಾಗವನ್ನು ತಾವೇ ಕೊಂಡು ಕಷ್ಟ ಪಟ್ಟು ಮಕ್ಕಳನ್ನು ಸಾಕಿ ಸಲಹುತ್ತಾರೆ. ಇವರಿಬ್ಬರ ಜೀವನದ ಸೂಕ್ಷ್ಮಗಳನ್ನು ರೆಸೂಲ್ ಚೆನ್ನಾಗಿ ಹಿಡಿಯುತ್ತಾರೆ.

ರೆಸೂಲನ ಬಾಲ್ಯದ ವಿವರಗಳು ಬಷೀರ್, ದೇವನೂರ ಮಹಾದೇವರ ಕಥೆಗಳಲ್ಲಿ ಬರುವ ವಿವರಗಳ ರೀತಿ ಇವೆ. ರೆಸೂಲ್ ತಮ್ಮ ತಂದೆಯನ್ನು ಬಷೀರರಿಗೆ ಹೋಲಿಸುತ್ತಾರೆ. ಮಹಾನ್ ಮಲಯಾಳಂ ಲೇಖಕ ಬಷೀರರಿಗೆ ಕೆಲವು ದಿನ ಹುಚ್ಚು ಹಿಡಿದಿತ್ತು. ಆದರೆ ಹುಚ್ಚುತನ ಎಂದು ತೋರುವ ಅವರ ಕೆಲವು ನಡವಳಿಕೆ ಖಂಡಿತ ಹುಚ್ಚಲ್ಲ ಎಂದು ರೆಸೂಲ್ ನಿರೂಪಿಸುತ್ತಾರೆ. ಪ್ರಾಣಿಗಳ ಜೊತೆ ಮಾತಾಡುವುದು, ಹಾವಿನ ಜೊತೆ ಗೌರವದ ಸಂಬಂಧ ಇಟ್ಟುಕೊಳ್ಳುವುದು...

ಇಂಥ ಬಷೀರ್ ನಡವಳಿಕೆಗಳು ರೆಸೂಲರಿಗೆ ಹುಚ್ಚಿನಂತೆ ಕಾಣುವುದಿಲ್ಲ. (ಒಮ್ಮೆ ಸಹ ಲೇಖಕ ಎಂ.ಟಿ. ವಾಸುದೇವನ್ ನಾಯರ್ ಮನೆಗೆ ಬಂದಾಗ ಕಾಣಿಸಿಕೊಂಡ ನಾಗರ ಹಾವನ್ನು ಬಷೀರ್ ಬಯ್ದರಂತೆ: `ಇಂಥ ದೊಡ್ಡ ಮನುಷ್ಯ ಬರೋ ದಿವಸ ಏನು ನಿನ್ನ ಉಪಟಳ?' ಇದನ್ನು ಕೇಳಿದ ಹಾವು ಕೂಡಲೇ ಸರಿದು ಹೋಯಿತಂತೆ!) ಚಿಕ್ಕಂದಿನಲ್ಲಿ ಪ್ರಾಣಿಗಳ ಜೊತೆಗಿನ ತಮ್ಮ ಒಡನಾಟವನ್ನು ರೆಸೂಲ್ ಪ್ರೀತಿಯಿಂದ ನೆನೆಯುತ್ತಾರೆ.

ಬಾಲ್ಯ ಹೀಗಾದರೆ, ಹಿಂದಿ ಬಾರದ ರೆಸೂಲ್ ಯೌವ್ವನದಲ್ಲಿ ಪುಣೆಯ ಫಿಲಂ ಇನ್‌ಸ್ಟಿಟ್ಯೂಟ್‌ನಲ್ಲಿ ಕಲಿತು, ನಂತರ ಮುಂಬೈ ಸೇರುತ್ತಾರೆ. ಅಲ್ಲಿಂದ ಕಥೆ ಬೇರೆ ಮೆರುಗು ಪಡೆಯುತ್ತದೆ. ಅಮಿತಾಭ್ ಬಚನ್ ಮೊದಲ್ಗೊಂಡು ಹಲವು ದೊಡ್ಡ ನಟರ, ನಿರ್ದೇಶಕರ ಜೊತೆ ಕೆಲಸ ಮಾಡುವ ಅವಕಾಶ ರೆಸೂಲರಿಗೆ ದೊರೆಯುತ್ತದೆ.

`ಸೌಂಡಿಂಗ್ ಆಫ್' ಇಂಥ ಅನುಭವಗಳನ್ನೂ ಚಿತ್ರವತ್ತಾಗಿ ದಾಖಲಿಸುತ್ತದೆ. ಶಾಸ್ತ್ರೀಯ ಸಂಗೀತಗಾರರು ಅಂತರ್ಮುಖಿಯಾಗಿ, ಏಕಾಂತದಲ್ಲಿ ಸಾಧನೆ ಮಾಡಿದರೆ, ರೆಸೂಲರಂಥ ಸಿನಿಮಾ ತಂತ್ರ ನಿಪುಣರು ಎಲ್ಲ ಬಗೆಯ ಅಪರಿಚಿತರ ಜೊತೆ ಒಡನಾಡಿ, ಅನಿಶ್ಚಿತತೆಯಲ್ಲಿ ಸಾಗುತ್ತಲೇ ತಮ್ಮ ವಿದ್ಯೆಯನ್ನು ಕರಗತ ಮಾಡಿಕೊಳ್ಳುತ್ತಾರೆ.

`ಸ್ಲಂ ಡಾಗ್ ಮಿಲಿಯನೇರ್' ಚಿತ್ರದ ಬ್ರಿಟಿಷ್ ನಿರ್ದೇಶಕ ಡ್ಯಾನಿ ಬಾಯ್ಲ ತನ್ನ ನಟರ, ತಂತ್ರಜ್ಞರ ಜೊತೆಗೆ ಮುಕ್ತವಾಗಿ, ಕಪಟವಿಲ್ಲದೆ ನಡೆದುಕೊಳ್ಳುವುದನ್ನು ಕಂಡು ರೆಸೂಲ್ ಹಿಗ್ಗುತ್ತಾರೆ. ಮುಂಬೈ ಚಿತ್ರರಂಗದ ಗುಟ್ಟು ವ್ಯವಹಾರಗಳ ಬಗ್ಗೆ ಅಸಹನೆ, ತಮಾಷೆಯಿಂದ ಬರೆಯುತ್ತಾರೆ. ತಮ್ಮ ಕಲೆಯ ಬಗ್ಗೆ, ತಮ್ಮ ಕಾರ್ಯವಿಧಾನದ ಬಗ್ಗೆ ಆತ್ಮ ವಿಶ್ವಾಸದಿಂದ ಮಾತಾಡುತ್ತಾರೆ.

ಭಾರತೀಯ ಸಿನಿಮಾದಲ್ಲಿ ಶಬ್ದ ವಿನ್ಯಾಸಕ್ಕೆ ಒಂದಷ್ಟು ಗಮನ, ಪ್ರಾಶಸ್ತ್ಯ ಸಿಗುತ್ತಿರುವುದು ಇತ್ತೀಚಿನ ವರ್ಷಗಳಲ್ಲಿಯೇ. ನಮ್ಮ ಸಿನಿಮಾ ಉದ್ಯಮಗಳಲ್ಲಿ ಅತಿ ಹೆಚ್ಚು ದುಡ್ಡು ಖರ್ಚಾಗುವುದು ನಟರ ಮೇಲೆ. ಪತ್ರಿಕೆಗಳು, ಟಿ.ವಿ. ಚಾನೆಲ್‌ಗಳು ನಟ ನಟಿಯರ ಬಗ್ಗೆಯೇ ಗಮನ ಹರಿಸುವುದು. ಎಷ್ಟೋ ಕಡೆ ಸಿನಿಮಾ ಜರ್ನಲಿಸಂ ಅಂದರೆ ಲೈಫ್‌ಸ್ಟೈಲ್ ಜರ್ನಲಿಸಂ ಆಗಿಬಿಟ್ಟಿದೆ. ಐಡಿಯಾಗಳ ಬಗ್ಗೆ, ಸಿನಿಮಾ ತಂತ್ರ-ವಿಧಾನಗಳ ಬಗ್ಗೆ ಜನಪ್ರಿಯ ಮಾಧ್ಯಮಗಳು ಬರೆಯುವುದು ವಿರಳ.

ಹಲವು ಕಷ್ಟದ ಕಸುಬುಗಳು ಸೇರಿ ಸಿನಿಮಾ ಆಗುತ್ತದೆ. ಸೌಂಡ್ ಡಿಸೈನ್ ಅಂಥ ಕಸುಬುಗಳಲ್ಲಿ ಒಂದು. ರೆಸೂಲರಂಥ ಹಲವರು ತಮ್ಮ ಕೆಲಸದ ಬಗ್ಗೆ ಉತ್ಕಟ ಪ್ರೀತಿ ಹೊಂದಿರುತ್ತಾರೆ. ತೆರೆ ಮರೆಯಲ್ಲಿ ದುಡಿಯುತ್ತಿರುತ್ತಾರೆ. ಅಂಥವರ ಬಗ್ಗೆ ಸಾಮಾನ್ಯ ಸಿನಿಮಾ ಪ್ರೇಮಿಗೆ ಯಾವುದೇ ಮಾಹಿತಿ ಇರುವುದಿಲ್ಲ. `ಸೌಂಡಿಂಗ್ ಆಫ್' ನಂಥ ಪುಸ್ತಕಗಳು ಈ ಕಾರಣಕ್ಕೆ ಸ್ವಾಗತಾರ್ಹ.

ರೆಸೂಲರಿಗೆ ಈಗ ಕೇವಲ 43 ವರ್ಷ. ಇಷ್ಟು ಬೇಗ ಆತ್ಮ ಕಥೆ ಬರೆಯಬೇಕಿತ್ತೆ ಎಂದು ನೀವು ಕೇಳಬಹುದು. ರೆಸೂಲ್ ಕಥೆ ಮೊದಲು ಮಲಯಾಳಂ ಪತ್ರಿಕೆಯೊಂದರಲ್ಲಿ ಪ್ರಕಟವಾಯಿತು. ಹಾಗಾಗಿ ಇದಕ್ಕೆ ಒಂದು ರೀತಿಯ ಪತ್ರಿಕೋದ್ಯಮದ ಸ್ಪರ್ಶ ದೊರೆತಿದೆ. ಮಲಯಾಳಂ ಕಥನವನ್ನು ಇಂಗ್ಲಿಷ್‌ಗೆ ಅನುವಾದ ಮಾಡಿರುವವರು ಬೈಜು ನಟರಾಜನ್. ರೆಸೂಲರಿಗೆ ಸಿಕ್ಕ ಆಸ್ಕರ್ ಪ್ರಶಸ್ತಿ ಪೆಂಗ್ವಿನ್ ಪ್ರಕಾಶಕರನ್ನು ಈ ಪುಸ್ತಕ ಹೊರತರಲು ಹುರಿದುಂಬಿಸಿದೆ. `ಸೌಂಡಿಂಗ್ ಆಫ್' ಪುಸ್ತಕದ ಬೆಲೆ ್ಙ 399. ಸಿನಿಮಾ ವಿದ್ಯಾರ್ಥಿಗಳಲ್ಲದೆ ಇತರರಲ್ಲೂ ಕುತೂಹಲವನ್ನು ಈ ಕೃತಿ ಕೆರಳಿಸುತ್ತದೆ.

ಕಿ.ರಂ. ನಾಗರಾಜರ ನೆನಪು

ಸಾಹಿತ್ಯ ಲೋಕದ ಮಹಾನ್ ಪ್ರೇರಕ ಕಿ.ರಂ. ನಾಗರಾಜ ತೀರಿಕೊಂಡು ಒಂದು ವರ್ಷ ಸಂದಿದೆ. ಅವರ ನೆನಪಲ್ಲಿ ಬೆಂಗಳೂರಿನಲ್ಲಿ ನಡೆದ ಎರಡು ಕಾರ್ಯಕ್ರಮಗಳಿಗೂ ಜನ ಕಿಕ್ಕಿರಿದಿದ್ದನ್ನು ಕಂಡ ಸ್ನೇಹಿತರಿಗೆ, ಶಿಷ್ಯರಿಗೆ ಹೆಮ್ಮೆ ಮತ್ತು ಬೆರಗು. ಸಾಹಿತಿಗಳು, ಕಲಾವಿದರು, ಸಂಗೀತಗಾರರು, ಸಾಹಿತ್ಯ ಪ್ರೇಮಿಗಳಿಗೆ ಎಲ್ಲರೂ ಏಕೆ ಕಿ.ರಂ. ಅವರನ್ನು ಅಷ್ಟು ಹಚ್ಚಿಕೊಂಡಿದ್ದರು ಎಂದು ಕೇಳಿ ನೋಡಿ. ಒಬ್ಬೊಬ್ಬರದೊಂದು ಕೌತುಕ ಕಥೆ ಇರುತ್ತದೆ.

ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಕಲಿಸಿದ ಕಿ.ರಂ. ಅವರಿಗೆ ರಾಜ್ಯದ ಮೂಲೆ ಮೂಲೆಯಲ್ಲಿ ಶಿಷ್ಯರಿದ್ದಾರೆ. ಬೆಂಗಳೂರಿನ ಐಟಿ ಭಾಷೆಯಲ್ಲಿ ಹೇಳಬೇಕೆಂದರೆ, ಕಿ.ರಂ. ಸೃಜನಾತ್ಮಕ ಜಗತ್ತಿನ ಏಂಜಲ್ ಇನ್ವೆಸ್ಟರ್! ಬರೀ ಕಲ್ಪನೆಯ ರೂಪದಲ್ಲಿರುವ, ಮುಂದೆಂದೋ ಹೆಮ್ಮರವಾಗಿ ಬೆಳೆಯಬಹುದಾದ ಯೋಜನೆಯಗಳನ್ನು ಗುರುತಿಸಿ, ಪೋಷಿಸುವವರೇ ಏಂಜಲ್ ಇನ್ವೆಸ್ಟರ್ಸ್. ಕಿ.ರಂ. ಅವರು ಕವಿ, ಕಥೆಗಾರ, ಸಂಗೀತಗಾರರ ಕನಸುಗಳನ್ನು ಪ್ರೋತ್ಸಾಹಿಸುತ್ತಿದ್ದರು.

ಸೃಜನಾತ್ಮಕ ಅಳುಕು, ಅನುಮಾನದಲ್ಲಿರುವವರಿಗೆ ಧೈರ್ಯ ತುಂಬುತ್ತಿದ್ದರು. ಅವರ ಬಗೆಗಿನ ನನ್ನದೂ ಒಂದು ಕಥೆ ಇದೆ! ವಚನಗಳನ್ನು ಇಟ್ಟುಕೊಂಡು ನಾನು ಮಾಡುತ್ತಿದ್ದ ಸಂಗೀತದ ಪ್ರಯೋಗವೊಂದರ ಬಗ್ಗೆ ನನಗೇ ಇದ್ದ ಶಂಕೆಯನ್ನು ಹೋಗಲಾಡಿಸಿ ಸಾರ್ವಜನಿಕ ಕಾರ್ಯಕ್ರಮವನ್ನು ಕಿ.ರಂ. ಆಯೋಜಿಸಿದರು.

ಪ್ರಯೋಗದ ಪರವಾಗಿ ನಿಂತರು, ಮಾತಾಡಿದರು, ವಾದಿಸಿದರು. ಏಂಜಲ್ ಇನ್ವೆಸ್ಟರ್‌ಗಳು ತಮ್ಮ ಸಮಯ, ಹಣ ಹೂಡಿಕೆಗೆ ಎಂದೋ ಲಾಭ ಆಗಬಹುದು ಎಂದು ಎಣಿಸಿರುತ್ತಾರೆ. ನಿಸ್ವಾರ್ಥ ಏಂಜಲ್ ಇನ್ವೆಸ್ಟರ್ ಅಂದರೆ ಕಿ.ರಂ. ಇರಬೇಕು!   
     
ಕ್ರೆಡಿಟ್ ಕಾರ್ಡ್ ಮಂದಿಗೆ ತಿರುಮಂತ್ರ
ಈಚೆಗೆ ಟೆಲಿ ಮಾರ್ಕೆಟಿಂಗ್ ಕರೆಗಳು ಕಡಿಮೆಯಾಗಿವೆ, ನಿಜ. ಲೋನ್ ಬೇಕೇ, ಕ್ರೆಡಿಟ್ ಕಾರ್ಡ್ ಬೇಕೇ ಎಂದು ಫೋನ್ ಬಂದಾಗ ನೀವು ಹೇಗೆ ರಿಯಾಕ್ಟ್ ಮಾಡುತ್ತಿದ್ದಿರಿ? ಹೆಸರಾಂತ ಛಾಯಾಗ್ರಾಹಕ, ಸೈಕಾಲಜಿ ತಜ್ಞ ಎಂ. ಶ್ರೀಧರ್ ಮೂರ್ತಿ ಅವರದೊಂದು ವಿಧಾನವಿತ್ತು.
ಕಾಲರ್: ಸರ್ ನಿಮಗೆ ಪರ್ಸನಲ್ ಲೋನ್ ಬೇಕೇ?
ಇವರು: ಬೇಡ.
ಕಾಲರ್: ಯಾಕೆ ಸರ್ ಬೇಡ ಅಂತೀರಿ?
ಇವರು: ನಾನೇ ಮನಿ ಲೆಂಡರ್. ನಿಮಗೇನಾದರೂ ಸಾಲ ಬೇಕಾದರೆ ಹೇಳಿ!
ಇದೇ ಥರ ಮತ್ತೊಬ್ಬ ಬ್ಯಾಂಕಿನವರಿಗೆ ತಿರುಮಂತ್ರ ಹಾಕಿದ್ದಾನೆ. ರಷ್ಯಾದಲ್ಲಿ ಕ್ರೆಡಿಟ್‌ಕಾರ್ಡ್ ಕಂಪೆನಿ ಫೋನ್ ಮಾಡಿ ಕಳಿಸಿದ ನಿಯಮಗಳನ್ನು ಬದಲಾಯಿಸಿ ಅದೇ ಥರ ಕಾಣುವಂತೆ ಸ್ಕ್ಯಾನ್ ಮಾಡಿ ಕಳಿಸಿದ್ದಾನೆ.

ಅವನು ಹಾಕಿದ ಷರತ್ತುಗಳು: ಬಡ್ಡಿ ಇಲ್ಲದೆ ಸಾಲ ಕೊಡಬೇಕು, ಲೇಟ್ ಫೀಸ್ ವಿಧಿಸಬಾರದು, ಕೇಳಿದಷ್ಟು ಸಾಲ ಕೊಡಬೇಕು, ಇತ್ಯಾದಿ. ಬ್ಯಾಂಕಿನವರು ಅದ್ಯಾವುದನ್ನೂ ಓದದೆ ಸಹಿ ಮಾಡಿ ಕಾರ್ಡ್ ಕಳಿಸಿದ್ದಾರೆ. ಈಗ ಅದೊಂದು ತಕರಾರಾಗಿದೆ.

ಕ್ರೆಡಿಟ್ ಕಾರ್ಡ್ ವಿಷಯದಲ್ಲಿ ಬ್ಯಾಂಕಿಗೆ ಸಲ್ಲಬೇಕಾದ ದುಡ್ಡನ್ನು ಮಾತ್ರ ಹಿಂತಿರುಗಿಸಬೇಕು, ಬಡ್ಡಿ ಹಾಕಬಾರದು ಎಂದು ನ್ಯಾಯಾಲಯ ತೀರ್ಪು ಕೊಟ್ಟಿದೆ. ಅವನು ಕೊಡಬೇಕಾಗಿರುವುದು ಸಣ್ಣ ಮೊತ್ತ. ಈಗ ಇವನು ಬ್ಯಾಂಕ್ ಮೇಲೆ ಮತ್ತೊಂದು ಕೇಸ್ ಹಾಕಿದ್ದಾನೆ. ಒಪ್ಪಿಗೆ ಪತ್ರವನ್ನು ಉಲ್ಲಂಘಿಸಿದ್ದಕ್ಕೆ 7.27 ಲಕ್ಷ ಡಾಲರ್ ಕೊಡಬೇಕು ಎಂದು ಈ 42 ವರ್ಷದ ಗಿರಾಕಿ ನ್ಯಾಯಾಲಯದಲ್ಲಿ ಕೇಳುತ್ತಿದ್ದಾನೆ.

ಬ್ಯಾಂಕಿನವರ ಬೊಬ್ಬೆ: ನಾವು ಒಪ್ಪಿಗೆ ಪತ್ರ ಓದಿರಲಿಲ್ಲ! ಸಣ್ಣ ಪ್ರಿಂಟ್ ಇರುವ, ಯಾರೂ ಓದಲಾರದ ಒಂದು ರಾಶಿ ಪತ್ರಗಳಿಗೆ ಸಹಿ ಹಾಕಿಸಿಕೊಳ್ಳುವ ಬ್ಯಾಂಕ್ ಮಂದಿಗೆ ಗ್ರಾಹಕರು ಪಡುವ ಪಾಡಿನ ಬಗ್ಗೆ ಈ ಪ್ರಕರಣ ಏನಾದರೂ ಕಲಿಸೀತೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT