ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಚಿನ್ ರಾಜಕೀಯದಾಟ ಖಾಲಿ ಅಧ್ಯಾಯವಾಗಬಾರದು

Last Updated 6 ಮೇ 2012, 19:30 IST
ಅಕ್ಷರ ಗಾತ್ರ

ನನ್ನ ಸ್ನೇಹಿತನೊಬ್ಬ ಸಚಿನ್ ತೆಂಡೂಲ್ಕರನ ಕಟ್ಟಾ ಅಭಿಮಾನಿ. ತನ್ನ ಮಗನಿಗೂ ಸಚಿನ್ ಎಂದೇ ಹೆಸರಿಟ್ಟಿದ್ದಾನೆ. ಎರಡು ದಶಕಗಳಿಂದ ಸಚಿನ್ ಆಡಿರುವ ಪಂದ್ಯಗಳನ್ನು ದೇಶದ ಎಲ್ಲ ಪ್ರಮುಖ ಕ್ರೀಡಾಂಗಣಗಳಲ್ಲಿ ಹಾಗೂ ಟಿ.ವಿಯಲ್ಲಿ ತಪ್ಪದೇ ನೋಡಿದ್ದಾನೆ. ಕಳೆದ ವರ್ಷ ಸಚಿನ್ ತಮ್ಮ ನೂರನೇ ಶತಕ ಗಳಿಸಲು ಪರದಾಡುತ್ತಿದ್ದಾಗ ದೇವರಿಗೆ ಹರಕೆ ಹೊತ್ತವನೂ ಇವನೇ. ಬಹುಶಃ ಇನ್ನೂ ಎಷ್ಟೋ ವರ್ಷ ಬೇರೆ ಯಾರೂ ಮುರಿಯಲಾಗದ ಈ ಅಭೂತಪೂರ್ವ ದಾಖಲೆಯನ್ನು ಸಚಿನ್ ಆಸ್ಟ್ರೇಲಿಯ ವಿರುದ್ಧವೋ ಅಥವಾ ಮತ್ತೊಂದು ಪ್ರಬಲ ತಂಡದ ವಿರುದ್ಧವೋ ಗಳಿಸಿದ್ದರೆ ನನ್ನ ಸ್ನೇಹಿತ ಊರೆಲ್ಲ ಫೇಡೆ ಹಂಚಿಬಿಡುತ್ತಿದ್ದ. ಆದರೆ ಬಾಂಗ್ಲಾದೇಶ ವಿರುದ್ಧ ಬಂದ ಆ `ನೂರನೇ ನೂರು~ ನನ್ನ ಗೆಳೆಯನಿಗೆ ನೂರಕ್ಕೆ ನೂರರಷ್ಟು ಖುಷಿ ಕೊಡಲಿಲ್ಲ. ಆದರೂ ಆತ ತನ್ನ ಮಗ ಕ್ರಿಕೆಟ್ ಬಿಟ್ಟು ಬ್ಯಾಸ್ಕೆಟ್‌ಬಾಲ್ ಆಡುವುದನ್ನು ಇಷ್ಟಪಡುವುದಿಲ್ಲ. ಕ್ರಿಕೆಟ್ ಆಡಿದರೇ ಭವಿಷ್ಯ ಎಂದು ಹೇಳುತ್ತಾನೆ. ಮೊನ್ನೆ ಸಚಿನ್ ರಾಜ್ಯಸಭೆಗೆ ನಾಮಕರಣಗೊಂಡಾಗ, `ಇವನಿಗ್ಯಾಗೆ ಬೇಕಿತ್ತು ರಾಜಕೀಯ ಉಸಾಬರಿ~ ಎಂದು ಆತನ ಮನಸ್ಸು ಹೇಳಿದರೂ, `ಕ್ರಿಕೆಟ್‌ನಂತೆಯೇ ರಾಜಕೀಯವೂ ಒಂದು ಲಾಭದಾಯಕ ಉದ್ಯಮ ಅಲ್ಲವೇ~ ಎಂದು ಆತನ ತಲೆ ಯೋಚಿಸಿತ್ತು. ಹಾಗೆಯೇ ಆತ ವಾದಿಸಿದ್ದ.

ಸಚಿನ್ ನೇರವಾಗೇನೂ ರಾಜಕೀಯ ಸೇರಿಲ್ಲ. ರಾಜ್ಯಸಭೆಗೆ ನಾಮಕರಣಗೊಳ್ಳಲು ಅವರು ಪ್ರಯತ್ನವನ್ನೂ ಮಾಡಿರಲಿಕ್ಕಿಲ್ಲ. ಆದರೆ ಇವರಿಂದ ಲಾಭ ಪಡೆಯುವ ಉದ್ದೇಶದಿಂದ ಒತ್ತಾಯ ಮಾಡಿದವರ ದಾಕ್ಷಿಣ್ಯಕ್ಕೆ ಒಳಗಾದರು ಎಂದೂ ಹೇಳಲಾಗದು. ಸಚಿನ್ ಹೆಚ್ಚು ಓದಿರಲಿಕ್ಕಿಲ್ಲ ಅಥವಾ ಬುದ್ಧಿವಂತರ ಸಾಲಿನಲ್ಲಿ ನಿಲ್ಲುವಂಥ ವ್ಯಕ್ತಿಯೂ ಅಲ್ಲ. ಆದರೆ ಅವರು ದೇಶ ಸುತ್ತಿದ್ದಾರೆ. ಕ್ರಿಕೆಟ್ ಅವರಿಗೆ ಬದುಕಿನ ರುಚಿಯನ್ನು ತೋರಿಸಿಕೊಟ್ಟಿದೆ. ಪಂಡಿತೋತ್ತಮರ ಮನೆಯೆನಿಸಿಕೊಂಡ ರಾಜ್ಯಸಭೆಯಲ್ಲಿ ಕುಳಿತುಕೊಳ್ಳುವುದರಿಂದ ಮರ್ಯಾದೆ ಹೆಚ್ಚುವುದೆಂಬ ತಿಳಿವಳಿಕೆ ಅವರಿಗಿದೆ. ಅಥವಾ ಅವರ ಸಲಹಾಗಾರರು ರಾಜಕೀಯದ ಇನಿಂಗ್ಸ್‌ನಲ್ಲಿ ಸೊನ್ನೆ ಎಂಬುದೇ ಇಲ್ಲ ಎಂದು ಪುಸಲಾಯಿಸಿರಬಹುದು. ಸೋನಿಯಾ        ಗಾಂಧೀಯವರನ್ನು ಭೇಟಿ ಮಾಡಿದ ಮೇಲೆ ರಾಜಕೀಯದ ಇನಿಂಗ್ಸ್ ಆರಂಭಿಸಲು ಸಿದ್ಧರಾಗೇಬಿಟ್ಟರು! ಇದರಲ್ಲಿ ಯಾರಿಂದ ಯಾರಿಗೆ ಲಾಭ ಎಂಬುದನ್ನು ಕಾಲವೇ ಹೇಳಬೇಕು.

ಸಚಿನ್ ರಾಜ್ಯಸಭೆಗೆ ಹೋಗುವುದನ್ನು ರಾಜಕೀಯ ವಿಶ್ಲೇಷಕರಷ್ಟೇ ಅಲ್ಲ, ಹಲವು ಮಂದಿ ಕ್ರೀಡಾಪಟುಗಳೂ ಟೀಕಿಸಿದ್ದಾರೆ. ಸಚಿನ್ ಅವರಂಥ ಒಬ್ಬ ಸಜ್ಜನ ಕ್ರಿಕೆಟ್ ಆಟಗಾರ, ವಿಶ್ವ ದಾಖಲೆ ವೀರ, ದೇಶದ ಹುಚ್ಚು ಕ್ರಿಕೆಟ್‌ಪ್ರೇಮಿಗಳ `ದೇವರು~ ರಾಜಕೀಯದ ಕೆಸರಿನಲ್ಲಿ ಸಿಕ್ಕಿಕೊಳ್ಳಬಾರದಿತ್ತು ಎಂಬ ಅಭಿಪ್ರಾಯ ಸಾರ್ವತ್ರಿಕವಾಗಿತ್ತು. ಅವರು ಕ್ರಿಕೆಟ್ ಮೈದಾನ ಬಿಟ್ಟು ಬೇರೆ ಅಂಕಣಕ್ಕಿಳಿಯಬಾರದು ಎಂಬ ಅಭಿಪ್ರಾಯ ಸರಿಯಾಗಿಯೇ ಇದೆ. ಯಾಕೆಂದರೆ ಜನರಿಗೆ ಸಚಿನ್ ಮೇಲೆ ಇರುವ ಅಭಿಮಾನ ಆತನ ಆಟ ಮತ್ತು ಸಾಧನೆಯ ಆಧಾರದಿಂದ ಬಂದಿದ್ದು. ರಾಜಕೀಯದಿಂದ ಅವರು ಅದನ್ನು ಕಳೆದುಕೊಳ್ಳಬಾರದು ಎಂಬ ಪ್ರೀತಿಯಿಂದಲೇ ಎಲ್ಲರೂ ಟೀಕಿಸಿದ್ದು. ಅದಕ್ಕಿಂತ ಹೆಚ್ಚಾಗಿ ಅವರು ರಾಜ್ಯಸಭೆಯಲ್ಲಿ ಏನು ಮಾಡುತ್ತಾರೆ? ಏನಾದರೂ ಮಾಡಲು ಸಾಧ್ಯವೇ? ಕ್ರೀಡಾಪಟುಗಳ ಪರವಾಗಿ ಅವರು ಅಲ್ಲಿ ಧ್ವನಿ ಎತ್ತುವರೇ? ಸಚಿನ್ ಈಗ ತಮ್ಮ ಹೇರ್‌ಸ್ಟೈಲ್ ಬದಲಿಸಿಕೊಂಡು ಇನ್ನೂ ಸ್ವಲ್ಪ `ಯಂಗ್~ ಆಗಿ ಕಂಡಂತೆ, ರಾಜಕೀಯ ವ್ಯವಸ್ಥೆಯಲ್ಲಿ ಹೊಸ ರಕ್ತ ತುಂಬಲು ಸಾಧ್ಯವಾಗುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸತ್ಯ. ಅಜರುದ್ದೀನ್ ತಾವು ಬಿದ್ದಿದ್ದ ಮೋಸದಾಟದ ಗುಂಡಿಯಿಂದ ಮೇಲೆ ಬರಲು ರಾಜಕೀಯ ಸೇರಿದರು. ಲೋಕಸಭಾ ಸದಸ್ಯರಾಗಿ ಆರಿಸಿಬಂದರು. ಇದಕ್ಕೆ ಅವರ ಕ್ರಿಕೆಟ್ ಖ್ಯಾತಿಯೂ ಕಾರಣವಾಗಿತ್ತು. ಸಚಿನ್ ಅವರ ಕ್ರಿಕೆಟ್ ಜೀವನದಲ್ಲಿ ಅಂಥ ಯಾವ ಕಪ್ಪು ಚುಕ್ಕೆಯೂ ಇಲ್ಲ. ಇನ್ನೂ ಕೆಲವು ಕ್ರೀಡಾಪಟುಗಳು ರಾಜಕೀಯ ಸೇರಿದ್ದಾರೆ. ನವಜೋತ್ ಸಿಂಗ್ ಸಿಧು ಟಿ.ವಿ ಮೇಲೆ ಅಬ್ಬರಿಸುವಂತೆ ಲೋಕಸಭೆಯಲ್ಲಿ ಅಬ್ಬರಿಸುವುದಿಲ್ಲ. ತಂದೆಯ ಬೆಂಬಲದಿಂದ ರಾಜಕೀಯಕ್ಕಿಳಿದ ಕೀರ್ತಿ ಆಜಾದ್, ಕಾಮನ್‌ವೆಲ್ತ್ ಕ್ರೀಡಾಕೂಟದ ಹಗರಣದ ನಂತರ ಒಂದೆರಡು ಪ್ರಶ್ನೆಗಳನ್ನು ಕೇಳಿದ್ದನ್ನು ಬಿಟ್ಟರೆ ಆರಾಮವಾಗಿ ಇದ್ದದ್ದೇ ಹೆಚ್ಚು. ಅಸ್ಲಂ ಶೇರ್‌ಖಾನ್ ಹಾಕಿ ರಂಗಕ್ಕೆ ಏನೂ ಮಾಡಲು ಸಾಧ್ಯವಾಗಿಲ್ಲ. ಕ್ರೀಡಾಪಟುಗಳ ರಾಜಕೀಯ ದಾಖಲೆ ಹೀಗಿರುವಾಗ ಸಚಿನ್ ಅವರಿಂದ ಏನು ನಿರೀಕ್ಷಿಸಲು ಸಾಧ್ಯ ಎಂಬ ಪ್ರಶ್ನೆ ಉದ್ಭವಿಸುವುದು ಸಹಜ.

ಸಚಿನ್ ಹತ್ತರ ಜೊತೆ ಹನ್ನೊಂದನೆಯವರಾಗುತ್ತಾರೆ ಎಂಬ ಉತ್ತರವೂ ಸಹಜವಾಗಿಯೇ ಬರುತ್ತದೆ. ಆದರೆ, ನನ್ನ ಸ್ನೇಹಿತ, ಸಚಿನ್ ಅವರ ರಾಜಕೀಯದಾಟವನ್ನೂ ನೋಡಲು ಕಾತರದಿಂದ ಕಾಯುತ್ತಿದ್ದಾನೆ. ಸಚಿನ್ ದೈಹಿಕವಾಗಿ ಕುಳ್ಳನಾದರೂ ಸಾಧನೆಯಲ್ಲಿ ಎಲ್ಲರಿಗಿಂತ ಬಹಳ ಎತ್ತರದಲ್ಲಿರುವ ಆಟಗಾರ. ಅವರು ಹಾಗೆಯೇ ರಾಜ್ಯಸಭೆಯಲ್ಲೂ ಮಿಂಚಬಹುದಲ್ಲ? ಕ್ರಿಕೆಟ್ ಆಗಲೀ ಅಥವಾ ಬೇರೆ ಯಾವುದೇ ಕ್ರೀಡೆಯಾಗಿರಲಿ ಕ್ರೀಡಾಪಟುವಿನ ಸಾಮರ್ಥ್ಯ ಗೊತ್ತಾಗುವುದು ಆತ ಆಡಿದ ಮೇಲೆಯೇ. ಕ್ರೀಡಾಪಟುವಿಗೆ ಆತನ ದೈಹಿಕ ಸಾಮರ್ಥ್ಯ, ಆಟದ ಕೌಶಲ ಹಾಗೂ ಯಶಸ್ವಿಯಾಗಬೇಕೆಂಬ ಮನೋಬಲ ಆಯ್ಕೆಗೆ ಮಾನದಂಡ. ಆದರೆ ಇಲ್ಲೂ ರಾಜಕೀಯ, ಪಕ್ಷಪಾತತನ ಹಾಗೂ ಭ್ರಷ್ಟಾಚಾರ ಅಡ್ಡಿಯಾಗುತ್ತಲೇ ಇರುತ್ತವೆ. ಸಚಿನ್ ಅವರಿಗೆ ಇವುಗಳ ಅನುಭವ ಇದ್ದೇ ಇದೆ. ಕ್ರಿಕೆಟ್‌ನಲ್ಲಿ ತುಂಬಿರುವ ಹೊಲಸನ್ನು ತೊಳೆಯುವ ಯತ್ನವನ್ನು ಅವರೆಂದೂ ಮಾಡಿದವರಲ್ಲ. ಅದರ ಅಗತ್ಯವೂ ಅವರಿಗೆ ಬಿದ್ದಿಲ್ಲ. ಯಾಕೆಂದರೆ ಸಚಿನ್ ತಂಡದಿಂದ ಹೊರಹಾಕಿಸಿಕೊಳ್ಳುವ ಯಾವ ಕೆಲಸವನ್ನೂ ಮಾಡಿಲ್ಲ. ಕಳೆದ ವರ್ಷ ವಿಶ್ವ ಕಪ್ ನಂತರವಷ್ಟೇ ಸಚಿನ್ ನಿವೃತ್ತಿಯಾಗುವ ದಿನಗಳು ಸಮೀಪಿಸಿವೆ ಎಂಬ ಯೋಚನೆ ಮೂಡಿತ್ತು. ಆದರೆ ಅವರು ಎಷ್ಟು ದೊಡ್ಡ ಆಟಗಾರನೆಂದರೆ ಕ್ರಿಕೆಟ್ ಮಂಡಳಿಯಲ್ಲಿ ಯಾರಿಗೂ ಅವರನ್ನು ತೆಗೆಯಬೇಕು ಎಂದು ಬಹಿರಂಗವಾಗಿ ಹೇಳುವ ಧೈರ್ಯ ಇರಲಿಲ್ಲ. ಸಚಿನ್ ಈಗ ನಿಗದಿಯ ಓವರುಗಳ ಪಂದ್ಯಗಳಿಂದ ದೂರ ಉಳಿದರೂ ಟೆಸ್ಟ್ ಕ್ರಿಕೆಟ್‌ಗೆ ವಿದಾಯ ಹೇಳಿಲ್ಲ. ರಾಜ್ಯಸಭೆಗೆ ನಾಮಕರಣಗೊಂಡ ಮೇಲೂ ಅವರು  `ಈಗಲೂ ನನ್ನ ಮೊದಲ ಆದ್ಯತೆ ಕ್ರಿಕೆಟ್~ ಎಂದೇ ಹೇಳಿದರು. ಆದರೆ ರಾಜ್ಯಸಭೆ ಕುರ್ಚಿ ತಮಗೆ ಬೇಡ ಎಂದೇನೂ ಅವರು ಹೇಳಲಿಲ್ಲ.

ನಮ್ಮ ರಾಜಕೀಯ ರಂಗದಲ್ಲಿ ಬಹಳಷ್ಟು ಭರವಸೆ ಮೂಡಿಸಿದ ರಾಜಕಾರಣಿಗಳು ನಿರಾಶೆಗೊಳಿಸಿದ್ದಾರೆ. ವಿವಿಧ ಕ್ಷೇತ್ರಗಳಲ್ಲಿ ಅದ್ಭುತ ಸಾಧನೆ ತೋರಿ ರಾಜ್ಯಸಭೆಗೆ ನಾಮಕರಣಗೊಂಡವರು ತಮ್ಮ ಹೊಸ ಜವಾಬ್ದಾರಿಯಲ್ಲಿ ವಿಫಲರಾಗಿದ್ದಾರೆ. ರಾಜಕೀಯದಲ್ಲಿ ಸಮರ್ಥರು, ಸಭ್ಯರು ಬರಬೇಕಲ್ಲವೇ? ಕ್ರಿಕೆಟ್ ಸಭ್ಯರ ಆಟವಾಗೇನೂ ಉಳಿದಿಲ್ಲ. ಆದರೆ ಯಾವತ್ತೂ ಸೊಕ್ಕಿನಿಂದ ಮೆರೆಯದ ಸಚಿನ್ ಅವರಂಥ ಶ್ರೇಷ್ಠ ಕ್ರೀಡಾಪಟು ಕ್ರೀಡಾರಂಗಕ್ಕಾದರೂ ಒಳ್ಳೆಯದನ್ನು ಮಾಡಬಹುದು ಎಂಬ ನಿರೀಕ್ಷೆ ಇಟ್ಟುಕೊಳ್ಳುವುದರಲ್ಲಿ ತಪ್ಪೇನೂ ಇಲ್ಲ. ಇವರ ಮಾತಿಗೆ ತೂಕ ಇದ್ದೇ ಇರುತ್ತದೆ. ಅದಕ್ಕೆ ಗಟ್ಟಿ ಮನಸ್ಸು ಬೇಕಷ್ಟೇ. ರಾಜಕೀಯದಂತೆಯೇ ಕ್ರೀಡಾರಂಗದಲ್ಲೂ ಕೆಸರೇ ಹೆಚ್ಚು ತುಂಬಿದೆ ಎಂಬುದಕ್ಕೆ ಕಾಮನ್‌ವೆಲ್ತ್ ಕ್ರೀಡೆಗಳ ನಂತರ ಬೆಳಕಿಗೆ ಬಂದ ಹಗರಣವೇ ಉದಾಹರಣೆ. ಇದು ಒಲಿಂಪಿಕ್ ವರ್ಷ. ಜುಲೈ 27 ರಂದು ಲಂಡನ್‌ನಲ್ಲಿ ಒಲಿಂಪಿಕ್ ಕ್ರೀಡೆಗಳು ಆರಂಭ. ಭಾರತದ ಕ್ರೀಡಾಪಟುಗಳು ಪದಕ ಗೆಲ್ಲದಿದ್ದರೆ ಅಥವಾ ಭಾರತ ಹಾಕಿ ತಂಡ ಪದಕದ ಸಮೀಪವೂ ಬರದಿದ್ದರೆ ಅದಕ್ಕೆ ಕ್ರೀಡಾಪಟುಗಳಿಗಿಂತ ಹೆಚ್ಚಾಗಿ ಹದಗೆಟ್ಟಿರುವ ಕ್ರೀಡಾ ವ್ಯವಸ್ಥೆಯೇ ಕಾರಣವಾಗಿರುತ್ತದೆ. ಇಂಥ ಪರಿಸ್ಥಿತಿಯಲ್ಲಿ ಕ್ರೀಡಾರಂಗಕ್ಕೆ ಕಾಯಕಲ್ಪ ನೀಡುವ ನಾಯಕನೊಬ್ಬ ಬೇಕು. ಇದು ವೇಗದ ದಾಳಿಯೆದುರು ಹೆಲ್ಮೆಟ್ ಇಲ್ಲದೆಯೇ ಬ್ಯಾಟಿಂಗ್ ಮಾಡಲು ಹೋಗುವಷ್ಟು ಅಪಾಯಕಾರಿಯಾಗಿರುವುದರಿಂದ ಸಚಿನ್ ಆ ಧೈರ್ಯ ತೋರಿಸುವ ಸಾಧ್ಯತೆ ಕಡಿಮೆ. ಆದರೆ ಆರು ವರ್ಷಗಳ ಅವಧಿಯಲ್ಲಿ ಅವರಿಗೆ ಕೆಲವೊಂದಾದರೂ ಒಳ್ಳೆಯ ಕೆಲಸ ಮಾಡುವ ಅವಕಾಶ ಇದೆ. ಅವರಿಗೆ ಮಾತನಾಡಲು ಸಿಗುವ ಅಲ್ಪ ಅವಧಿಯಲ್ಲಾದರೂ ಪರಿಣಾಮಕಾರಿಯಾಗಿ ಮಾತನಾಡಬೇಕು. ಬ್ಯಾಟಿಂಗ್ ಗೊತ್ತಿರುವವನಿಗೆ ಯಾವ ಅಂಕಣವಾದರೇನು? ಆಡಬೇಕಷ್ಟೇ. ಕ್ರಿಕೆಟ್‌ನಲ್ಲಿ ಅವರು ಸಾಕಷ್ಟು ಹಣ ಗಳಿಸಿದ್ದಾರೆ. ರಾಜಕೀಯದಲ್ಲಿ ಒಳ್ಳೆಯ ಹೆಸರು ಗಳಿಸುವುದು ಮುಖ್ಯ. ಇಲ್ಲದಿದ್ದರೆ ಸಚಿನ್ ತೆಂಡೂಲ್ಕರ್ ಅವರ ಯಶೋಗಾಥೆಯ ಒಂದು ಅಧ್ಯಾಯ ಖಾಲಿ ಹಾಳೆಗಳಿಂದ ತುಂಬುತ್ತದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT