ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ತ ಮೇಲೆ ಸ್ವರ್ಗ ಉಂಟು ಎಂಬುವರ ಬಾಲಭಾಷೆ ಕೇಳಲಾಗದು

Last Updated 1 ಮಾರ್ಚ್ 2012, 19:30 IST
ಅಕ್ಷರ ಗಾತ್ರ

ಕಾರ್ಲ್ ಮಾರ್ಕ್ಸ್ ತನ್ನ ಅತ್ಯಂತ ಮಹತ್ವಪೂರ್ಣ ಪುಸ್ತಕಗಳಲ್ಲಿ ಒಂದಾದ `ಎಕನಾಮಿಕ್ ಅಂಡ್ ಫಿಲಸಾಫಿಕಲ್ ಮ್ಯಾನು ಸ್ಕ್ರಿಪ್ಟ್~ನಲ್ಲಿ ಮೊಟ್ಟಮೊದಲಿಗೆ ಮಾನವ ಸಮಾಜವನ್ನು ಆವರಿಸುತ್ತಿರುವ ಪರಕೀಯತೆಯ ವಿಶ್ಲೇಷಣೆ ಮಾಡಿದ.

ಬಂಡವಾಳಶಾಹಿ ಜಗತ್ತಿನಲ್ಲಿ ಮಾನವ ತಾನೇ ಕಟ್ಟಿದ ಜಗತ್ತನ್ನು ಯಾವುದೋ ಅಗೋಚರ ಶಕ್ತಿಯೊಂದು ನಿರ್ಮಿಸಿದ ಸೆರೆಮನೆ ಅನ್ನುವ ರೀತಿಯಲ್ಲಿ ಅನುಭವಿಸುತ್ತಾನೆ.

ಉತ್ಪಾದನಾ ಶಕ್ತಿಗಳ ಮತ್ತು ಉತ್ಪಾದನಾ ಸಾಧನಗಳ ಅಂತರ್ ವಿರೋಧದ ಚೌಕಟ್ಟಿನಲ್ಲಿ ಅವನು ಸೃಷ್ಟಿಸಿದ ವಸ್ತುಸಾಮ್ರಾಜ್ಯ ಅವನನ್ನೇ ನಿರಾಕರಿಸುತ್ತಿರುತ್ತದೆ -ಇದು ಅವನ ವಾದದ ಹುರುಳು.

ಪರಕೀಯತೆಯ ಪೀಡೆ ಬಂಡವಾಳಶಾಹಿ ಸಮಾಜದಲ್ಲಿ ಅತ್ಯಂತ ತೀವ್ರವಾದದ್ದು ನಿಜ. ಆದರೆ, ಅದರ ಪೂರ್ವಮಾದರಿಗಳು ಹಿಂದಿನ ಸಮಾಜಗಳಲ್ಲಿಯೂ ಇದ್ದವು. ತನ್ನ ನಿರ್ಮಿತಿಯಿಂದ ತನ್ನನ್ನೇ ವಂಚಿತನನ್ನಾಗಿಸಿದ ಅಸಹಾಯಕ ಪರಿಸ್ಥಿತಿ ಅರ್ಥಹೀನತೆಗೊಂದು ಕಾಲ್ಪನಿಕ ಅರ್ಥ ಒದಗಿಸಲು ಹೃದಯಹೀನ ಜಗತ್ತಿನ ಹೃದಯವಾದ ದೇವರು-ಧರ್ಮವನ್ನು ಮನುಕುಲ ಕಟ್ಟಿಕೊಂಡಿತು.
 
ಹೀಗೆ ತಥ್ಯಗಳನ್ನು ಮರೆಮಾಚುವ ತಥ್ಯಗಳ ನಕಲುಗಳಿಂದ ಬಿಡುಗಡೆ ಪಡೆಯಬೇಕೆಂದರೆ ಬಂಡವಾಳಶಾಹಿ ಯುಗದ ಅಂತರ್‌ವಿರೋಧಗಳ ಅತ್ಯಂತ ದುರ್ಬಲ ಕೊಂಡಿಗಳನ್ನು ಹುಡುಕಿ ತೆಗೆದು, ಮುರಿದು ಕಾರ್ಮಿಕ ವರ್ಗ ಭೌತಿಕ ಪ್ರಪಂಚದ ದಿಟದ ತಳಹದಿಯ ಮೇಲೆ ಸಮಾನತೆಯ, ಸಮೃದ್ಧಿಯ ಪರಿಸ್ಥಿತಿಯನ್ನು ಮುಂಬರುವ ಸಮಯದಲ್ಲಿ ನಿರ್ಮಿಸುವ ಸಾಧ್ಯತೆ ಮತ್ತು ಅಗತ್ಯಗಳನ್ನು ಆತ ಪ್ರತಿಪಾದಿಸಿದ. ತನ್ನ ಸಮಾಜವಾದ ಮಾತ್ರ ವೈಜ್ಞಾನಿಕವೆಂದೂ ಇತರ ಚಿಂತಕರ ಸಮಾಜವಾದದ ಸಿದ್ಧಾಂತಗಳು ಕೇವಲ ಸ್ವಕಪೋಲ ಕಲ್ಪಿತವೆಂದೂ ವಾದಿಸಿದ.

ಕಾರ್ಲ್ ಮಾರ್ಕ್ಸ್ ವೈಜ್ಞಾನಿಕ ಸಮಾಜವಾದದ ಪ್ರಣಾಳಿಕೆಯನ್ನು ಒಪ್ಪದ ಪ್ರಬಲ ಚಿಂತಕರೂ ಮುಂದೆ ಬಂದರು. ಅಂಥವರಲ್ಲಿ ಬಕುನಿನ್ ದೊಡ್ಡ ಹೆಸರು. ಆತ ಕಾರ್ಲ್ ಮಾರ್ಕ್ಸ್ ಸೂಚಿಸಿದ ಕಾರ್ಮಿಕ ವರ್ಗದ ಸರ್ವಾಧಿಕಾರದ ಅಗತ್ಯವನ್ನು ನಿರಾಕರಿಸಿದ. ಬಂಡವಾಳ ವ್ಯವಸ್ಥೆಯನ್ನು ಕೆಡವಿದ ತತ್‌ಕ್ಷಣ ಎಲ್ಲ ರೀತಿಯ ಪ್ರಭುತ್ವಗಳನ್ನು ಕೊನೆಗೊಳಿಸಿ ಕಾರ್ಮಿಕರ ಸಹಕಾರ ಸಂಘಗಳು ಸಮಾಜವನ್ನು ಮುನ್ನಡೆಸಬೇಕೆಂದು ಸಾರಿದ.
 
ಯಾಕೆಂದರೆ ಅವನ ಪ್ರಕಾರ, ಕಾರ್ಮಿಕರ ಸರ್ವಾಧಿಕಾರವೂ ಇನ್ನೊಂದು ಬಗೆಯ ದಬ್ಬಾಳಿಕೆಯಾಗಿ ಪರ್ಯವಸಾನವಾಗುತ್ತದೆ. ಬಕುನಿನ್‌ನ ಭೀತಿ ಸಮಾಜವಾದಿ ಕ್ರಾಂತಿಯನ್ನು ಸಾಧಿಸಿದ ಸಮಾಜಗಳಲ್ಲಿ ನಿಜವಾಯಿತು. ಹೀಗಾಗಿ ವೈಜ್ಞಾನಿಕ ಸಮಾಜವಾದವೂ ಒಂದು ಮೋಹಕವಾದ ಅಡಗೂಲಜ್ಜಿಯ ಕತೆಯಾಗಿ ಕಾಣತೊಡಗಿತು.

ಆದರೆ, ಬಕುನಿನ್ ಹೇಳಿದ ಸಮಾಜವಾದವೂ ಚರಿತ್ರೆಯಲ್ಲಿ ಅವತರಿಸಲಿಲ್ಲ.
ಸಮಾಜವಾದಿ ದೃಷ್ಟಿಗೆ ಅವಳಿ ಜವಳಿಯ ಹಾಗೆ ಬೆಳೆದ ಬಂಡವಾಳ ವಾದವೂ ಮನುಕುಲಕ್ಕೆ ಆದರ್ಶ ಪರಿಸ್ಥಿತಿಯ, ಸುಖೀರಾಜ್ಯದ ಆಶ್ವಾಸನೆಯನ್ನು ನೀಡಿತು.

ಸಮಾಜವಾದಿ ವ್ಯವಸ್ಥೆಗಳ ಕುಸಿತದ ನಂತರದ ಇಂದಿನ ಜಗತ್ತಿನಲ್ಲಿ ಅನಿಯಂತ್ರಿತ ಮಾರುಕಟ್ಟೆಯ ಅಸ್ತಿವಾರದ ಮೇಲೆ ಪ್ರವರ್ಧಮಾನಗೊಳ್ಳುತ್ತಿರುವ ನವ ಬಂಡವಾಳಶಾಹಿ ವ್ಯವಸ್ಥೆಯ ಮುಖವಾಣಿಯಾದ ಗೋಳೀಕರಣ ಮತ್ತೆ ಸುಖೀರಾಜ್ಯದ ಸ್ವಪ್ನದರ್ಶನ ಮಾಡಿಸುತ್ತಿದೆ.
 
ಮಾಧ್ಯಮಗಳ ಮೂಲಕ, ಮನರಂಜನೆಯ ಸಾಧನಗಳ ಮೂಲಕ, ಜಾಹೀರಾತುಗಳ ಮೂಲಕ ಇದನ್ನು ಬಿಟ್ಟರೆ ಇನ್ನಿಲ್ಲವೆಂಬ ಭ್ರಮೆಯನ್ನು ನಮ್ಮಲ್ಲಿ ಹುಟ್ಟಿಸುತ್ತಿದೆ. ಈ ಹೊಸ ಅಡಗೂಲಜ್ಜಿಯ ಕತೆಯೇ ವಾಸ್ತವವೆಂದು ನಮ್ಮಲ್ಲಿ ಹಲವರು ನಂಬಿಕೆ ಇಡುತ್ತಿದ್ದೇವೆ.

ಭವಿಷ್ಯದ ಆದರ್ಶರಾಜ್ಯ ಸ್ಥಾಪನೆಗಾಗಿ ವರ್ತಮಾನವನ್ನು ಅಸಹನೀಯಗೊಳಿಸಿದ ಸಮಾಜವಾದಿ ಮತ್ತು ಬಂಡವಾಳವಾದಿ ಸಿದ್ಧಾಂತಗಳಿಗೆ ಆಧುನಿಕ ಯುಗದಲ್ಲಿ ಹೊಯ್‌ಕೈಯಾಗಿ ನಿಂತದ್ದು ಫ್ಯಾಸಿಸಂ. ಫ್ಯಾಸಿಸಂನ ಸ್ವರ್ಗವಿರುವುದು ಭವಿಷ್ಯದಲ್ಲಲ್ಲ, ಗತದಲ್ಲಿ. ತನ್ನ ಕಲ್ಪನೆಯ ಗತದ ಆದರ್ಶ ಸಮಾಜದ ನಿರ್ಮಿತಿಗಾಗಿ ಅಮಾನವೀಯ ಹಿಂಸೆ, ರಕ್ತಪಾತಗಳು ಫ್ಯಾಸಿಸ್ಟ್ ದೃಷ್ಟಿಯಲ್ಲಿ ಅತ್ಯಂತ ಸಮರ್ಥನೀಯ.

ಸ್ವರ್ಗವನ್ನು ಭವಿಷ್ಯಕ್ಕೆ ಠಾಣಾಂತರಗೊಳಿಸುವ ಸಮಾಜವಾದ, ಬಂಡವಾಳವಾದಗಳ ಮತ್ತು ಸ್ವರ್ಗವನ್ನು ಗತದಲ್ಲಿ ಕಲ್ಪಿಸಿಕೊಳ್ಳುವ ಫ್ಯಾಸಿಸಂಗಳ ನಡುವೆ ಅನೇಕ ವ್ಯತ್ಯಾಸಗಳಿರುವುದು ನಿಜವಾದರೂ ವರ್ತಮಾನದ ನಿರಾಕರಣೆ ಅವೆರಡಕ್ಕೂ ಸಮಾನ ಎಂದು ವಾದಿಸುತ್ತಾನೆ ಲ್ಯಾಟಿನ್ ಅಮೆರಿಕದ ಪ್ರಸಿದ್ಧ ಕವಿ ಮತ್ತು ಚಿಂತಕ ಅಕ್ತೇವಿಯೋ ಪಾ್.

ಆಧುನಿಕಪೂರ್ವ ಸಮಾಜಗಳಲ್ಲಿ ಧರ್ಮಗಳೂ ಇದೇ ಕೆಲಸವನ್ನು ಇನ್ನೊಂದು ಬಗೆಯಲ್ಲಿ ಮಾಡಿದ್ದವು. ಅವು ಸುಖೀ ವ್ಯವಸ್ಥೆಯನ್ನು ಪರಲೋಕಕ್ಕೆ ಠಾಣಾಂತರಗೊಳಿಸಿದವು. `ಸತ್ತ ಮೇಲೆ ಸ್ವರ್ಗ ಉಂಟು ಎಂಬುವರ ಬಾಲಭಾಷೆಯನ್ನು ಕೇಳಲಾಗದು~ ಅನ್ನುತ್ತಾನೆ ಅನುಪಮ ಜ್ಞಾನಿ ಅಲ್ಲಮ.
 
ಆದರೆ ಈ ಬಾಲಭಾಷೆಯನ್ನು ನಂಬಿ ಬದುಕನ್ನು ಬದುಕದೆ ಹೋದವರು ಕೋಟಿ ಕೋಟಿ. ಹಾಗೆ ನಂಬಿದವರೂ ಅನುಭವಿಸದೆ ಸತ್ತರು. ನಂಬಿಸಿದವರು ಮಜಾ ಮಾಡಿ ಸತ್ತರು. ಧರ್ಮ ದುರಂತವನ್ನು ವಿಖ್ಯಾತ ಸರ್ಬಿಯನ್ ಕವಿ ವಾಸ್ಕೋ ಪೋಪಾ ಹೀಗೆ ವಿಡಂಬಿಸುತ್ತಾನೆ:

ಉರಿಯುವ ಡ್ರೇಗನ್‌ನೊಳಗೊಂದು ಗರ್ಭವಿದ್ದಿತ್ತು
ಆ ಗರ್ಭದೊಳಗೊಂದು ಬೆಳ್ಳನೆ ಹೋತವಿದ್ದಿತ್ತು
ಆ ಹೋತದೊಳಗೊಂದು ತಾತರಾಯನ ಕಾಲದ ಸ್ವರ್ಗವಿದ್ದಿತ್ತು
ನಾವು ಆ ಡ್ರೇಗನ್‌ಗೆ ನಮ್ಮ ಮಣ್ಣಿನ ಅಡುಗೆ ಉಣ್ಣಿಸಿದೆವು
ಅದನ್ನು ವಶ ಮಾಡಿಕೊಂಡು
ತಾತರಾಯನಕಾಲದ ಸ್ವರ್ಗವನ್ನು 
ಕದಿಯಬಹುದೆಂದುಕೊಂಡಿದ್ದೆವು
ನಮಗೆ ನೆಲವೂ ಸಿಕ್ಕಲಿಲ್ಲ
ಮುಂದೆ ಎಲ್ಲಿ ಹೋಗಬೇಕೆಂಬುದೂ ತಿಳಿಯಲಿಲ್ಲ
ಡ್ರೇಗನ್‌ನ ಬಾಲದ ಮೇಲೆ ಹತ್ತಿಕೊಂಡೆವು
ಡ್ರೇಗನ್ ನಮ್ಮನ್ನು ರುದ್ರ ಕೋಪದಿಂದ ನೋಡಿತು
ಅದರ ಕಣ್ಣಲ್ಲಿ ಕಂಡ ನಮ್ಮ ಮುಖ ನೋಡಿ ನಮಗೂ ಭಯವಾಯಿತು
ಹೆದರಿ ನಾವು ಡ್ರೇಗನ್‌ನ ಬಾಯೊಳಗೆ ಬಿದ್ದೆವು
ಅದರ ಹಲ್ಲುಗಳ ಹಿಂದೆ ಬಚ್ಚಿಟ್ಟುಕೊಂಡೆವು
ಬೆಂಕಿ ನಮ್ಮನ್ನು ಕಾಪಾಡೀತು ಎಂದು ಕಾಯತೊಡಗಿದೆವು...

ಅಕ್ತೇವಿಯೋ ಪಾ್ ಹೇಳುವ ಪ್ರಕಾರ ಆಧುನಿಕಪೂರ್ವ ಮತ್ತು ಆಧುನಿಕ ಸಮಾಜಗಳ ಅಂತರವಿರುವುದು ಅವುಗಳ ಕಾಲದ ಕಲ್ಪನೆಯಲ್ಲಿ. ಅವನ ಪ್ರಕಾರ ಆಧುನಿಕತೆಯ ವಿಕಾರ ಶುರುವಾಗಿದ್ದು ಕಾಲವನ್ನು ಒಂದು ಸರಳರೇಖೆಯನ್ನಾಗಿ ನೋಡುವ ಯಹೂದಿ- ಕ್ರೈಸ್ತ ಪರಂಪರೆಯಲ್ಲಿ.
 
ಇದಕ್ಕೆ ಹೊರತಾದ ಏಷಿಯಾ, ಆಫ್ರಿಕಾ ಮತ್ತು ಲ್ಯಾಟಿನ್ ಅಮೆರಿಕ ಸಮಾಜಗಳು ಯಹೂದಿ- ಕ್ರೈಸ್ತಪೂರ್ವ ಯೂರೋಪಿಯನ್ ಸಮಾಜಗಳಂತೆ ಕಾಲವನ್ನು ಚಕ್ರವನ್ನಾಗಿ ಗ್ರಹಿಸಿದ್ದವು. ಆಧುನಿಕ ಸಮಾಜಗಳು ನಮ್ಮನ್ನು ಭವಿಷ್ಯದ ಹೆಸರಿನಲ್ಲಿ ಬೋಳಿಸಿದರೆ ಆಧುನಿಕಪೂರ್ವ ಸಮಾಜಗಳು ನಮ್ಮನ್ನು ಗತದ ಹೆಸರಿನಲ್ಲಿ ಬೋಳಿಸಿದವು.

ಪಾ್ನ ಪ್ರಕಾರ ಆದರ್ಶ ರಾಜ್ಯದ ಕಲ್ಪನೆಯೇ ಒಂದು ಮಾಯೆ, ಒಂದು ಖಾಯಿಲೆ. ಇದಕ್ಕೆ ಮದ್ದೆಂದರೆ ವರ್ತಮಾನಕ್ಕೆ ವರ್ತಮಾನವನ್ನು ಮರಳಿಸುವುದು. ಆಗ ಮಾತ್ರ ಬಿಸಿಲು ನಿಜವಾಗಿಯೂ ಬಿಸಿಲಾಗುತ್ತದೆ, ಸೇಬು ನಿಜವಾಗಿಯೂ ಸೇಬಾಗುತ್ತದೆ, ಕಾಮ ನಿಜವಾಗಿಯೂ ಕಾಮವಾಗುತ್ತದೆ. ಆದರ್ಶ ಲೋಕದ ಕಲ್ಪನೆಗೆ ಮಾರು ಹೋದವರ ಕಣ್ಣಲ್ಲಿ ಬಿಸಿಲು ಕೇವಲ ಬಿಸಿಲಿನ ನೆರಳಾಗಿರುತ್ತದೆ.
 
ವರ್ತಮಾನ ಗತದ ಅಥವ ಭವಿಷ್ಯದ ಕೆಟ್ಟ ನಕಲಾಗಿರುತ್ತದೆ. ಆದ್ದರಿಂದಲೇ ಅವನಿಗೆ ಹಿಂದಣ ಅನಂತವನ್ನು ಮುಂದಣ ಅನಂತವನ್ನು ಇಂದಿನ ಒಂದು ಚಣದೊಳಗೆ ಕಾಣುವ, ಕಾಣಿಸುವ ಮಹಾಯಾನವಾದಿ ಲೋಕದೃಷ್ಟಿ ಪ್ರಿಯವಾಗಿ ಕಂಡಿತು.

ಇಂಗ್ಲೆಂಡಿನ ಕವಿ-ದಾರ್ಶನಿಕ ವಿಲ್ಯಂ ಬ್ಲೇಕ್ ಆದರ್ಶವನ್ನು ಚರಿತ್ರೆಯಲ್ಲಿ ಸಾಕ್ಷಾತ್ಕರಿಸಿಕೊಳ್ಳಬಹುದೆಂದು ಮೊದಲು ಭಾವಿಸಿದ್ದ. ಫ್ರಾನ್ಸಿನ ಮಹಾಕ್ರಾಂತಿ ಮುಗಿದ ಕೂಡಲೇ ಆದರ್ಶ ನಿಜದಲ್ಲಿ ಅವತರಿಸುತ್ತದೆ ಎಂದುಕೊಂಡಿದ್ದ.

ತಾ ನನ್ನ ಉರಿವ ಹೊನ್ನಿನ ಬಿಲ್ಲ
ಅಭಿಲಾಷೆಯಿಂದಾದ ಬಾಣಗಳನು
ತಾ ನನ್ನ ಆ ಖಡ್ಗವನು
ಕರೆ ನನ್ನ ಚಿನ್ನದ ರಥವನು
ದಾರಿ ಬಿಡಿ ಮೋಡಗಳೆ
ಮನದ ಕದನಗಳಿಂದ ಹಿಂದೆಗೆಯೆ ನಾನೆಂದೂ
ಖಡ್ಗ ಬೀಳದು ನನ್ನ ಕರಗಳಿಂದ
ನಾವು ಕಟ್ಟುವವರೆಗೆ ಆ ಜೆರುಸಲೆಮ್ ಅನ್ನು
ಇಂಗ್ಲೆಂಡಿನ ಈ ಹಸಿರು ನೆಲೆಗಳಲ್ಲಿ..
 - ಹೀಗೆಂದು ಹಾಡಿದ್ದ.

ಆದರೆ ಆ ಕ್ರಾಂತಿಯ ಕನಸು ಕುರುಡು ಹಿಂಸೆ, ರಕ್ತಪಾತದಲ್ಲಿ ಪರ್ಯವಸಾನಗೊಂಡಾಗ ಇತಿಹಾಸದಲ್ಲಿ ಆದರ್ಶವನ್ನು ಹುಡುಕುವ ಪ್ರಯತ್ನವನ್ನೇ ಕೈಬಿಟ್ಟ. ತಾನು ಜರುಸಲೆಮ್ ಎಂದು ಕರೆದ ಆ ಆದರ್ಶ ರಾಜ್ಯವನ್ನು ಮಾನವದೇಹದಲ್ಲಿ ಸಾಕ್ಷಾತ್ಕರಿಸಿಕೊಳ್ಳಲಾಗದು, ಪ್ರತಿಭೆಯಲ್ಲಿ ಮಾತ್ರ ಸಾಕ್ಷಾತ್ಕರಿಸಿಕೊಳ್ಳಬಹುದೆಂಬ ತೀರ್ಮಾನಕ್ಕೆ ಬಂದ. ಮುಂದೆ ತಮ್ಮ ಆದರ್ಶಗಳನ್ನು ರಷ್ಯನ್ ಕ್ರಾಂತಿಯಲ್ಲಿ ಮುಂದಾಗಿ ಕಂಡಿದ್ದವರೂ ಇದೇ ರೀತಿಯ ತೀರ್ಮಾನಕ್ಕೆ ಬಂದರು.

ಇತಿಹಾಸದಿಂದ ವಂಚಿತರಾದ ಕವಿ-ಕಲಾವಿದರು ಆದರ್ಶವನ್ನು ತಮ್ಮ ಪ್ರತಿಭೆಯ ಬಿಂಬಗಳಾದ ಕಲಾಕೃತಿಗಳಲ್ಲಿ ಕಾಣಿಸುತ್ತಾರೆ. `ಹಿಂದಣ ಅನಂತವನು, ಮುಂದಣ ಅನಂತವನು ಒಂದು ದಿನದಲ್ಲಿ ಒಳಕೊಳ್ಳುವ ಅನುಭಾವಿ~ಗಳೂ ಮಹಾಂತರೂ ತಮ್ಮ ಅತ್ಯಂತ ವ್ಯಕ್ತಿನಿಷ್ಠವಾದ ಸ್ವಾನುಭವದಲ್ಲಿ ಕಂಡುಕೊಳ್ಳುತ್ತಾರೆ.

ಹೀಗೆ ಅನುಭವದಲ್ಲಿ ಅಥವಾ ಕಲೆಯಲ್ಲಿ ಆದರ್ಶವನ್ನು ಸಾಕ್ಷಾತ್ಕರಿಸಿಕೊಳ್ಳುವ ಕಠಿಣ ಮಾರ್ಗಕ್ಕೆ ಎಲ್ಲರೂ ತಯಾರಾಗಿರುವುದಿಲ್ಲ. ಈ ಕಾರಣಗಳಿಂದಲೇ ಅನುಭವನಿಷ್ಠವಲ್ಲದ ಧರ್ಮಗಳು, ನಂಬಿಕೆಗಳು ಆಚಂದ್ರಾರ್ಕಸ್ಥಾಯಿಯಾಗಿರುವುದು. ಬದುಕಿನ ಅಸಂಗತಗಳನ್ನು ಕಣ್ಣಲ್ಲಿ ಕಣ್ಣಿಟ್ಟು ನೋಡುವ ಧೈರ್ಯ ನಮ್ಮ ಪ್ರಜಾತಂತ್ರದ ಯುಗದಲ್ಲೂ ಎಲ್ಲರಿಗೂ ಇರುವುದಿಲ್ಲ. ಆದ್ದರಿಂದಲೇ ಹಿಂದಿ ಕವಿ ಧೂಮಿಲ್ ಹೇಳುತ್ತಾರೆ:

ಇಲ್ಲಿ ಪ್ರಜೆಗಳೂ ಇಲ್ಲ
ಇಲ್ಲಿ ತಂತ್ರವೂ ಇಲ್ಲ
ಇಲ್ಲಿವೆ -
ಮನುಷ್ಯನ ವಿರುದ್ಧ
ಮನುಷ್ಯನನ್ನು ಎತ್ತಿಕಟ್ಟುವ
ಕುತಂತ್ರ ಮಾತ್ರ
ಈ ಮಾತುಗಳು ಸಿನಿಕತನದಿಂದ ಕೂಡಿರುವಂತೆ ಕಂಡರೂ ಸತ್ಯ. ತಾವು ತಮ್ಮ ಬದುಕಿನಲ್ಲಿ ಪೂರೈಸಿಕೊಳ್ಳದ ಸಂಪೂರ್ಣ ಅನುಭವದ ತೀವ್ರತೆಯನ್ನು ಸಿನಿಮಾಗಳಲ್ಲಿ, ಫ್ಯಾಂಟಸಿಗಳಲ್ಲಿ, ಹಗಲುಗನಸುಗಳಲ್ಲಿ ನೀಗಿಸಿಕೊಳ್ಳುವವರ ಸಂಖ್ಯೆಗೆ ಲೆಕ್ಕವಿಲ್ಲ.

ನಮ್ಮ ಯುಗದಲ್ಲಿ ಜನತೆಯ ಅಫೀಮೆಂದರೆ ಧರ್ಮವೊಂದೇ ಅಲ್ಲ, ತನಗೇನಾಗುತ್ತಿದೆ, ಏನನಿಸುತ್ತಿದೆ ಎಂಬುದರ ಅರಿವು ಕಿಂಚಿತ್ತೂ ಆಗದಂತೆ ನೋಡಿಕೊಳ್ಳುವುದರ ಮೂಲಕ ಈ ಎಲ್ಲ ಅಫೀಮುಗಳೂ ಶ್ರೀಸಾಮಾನ್ಯನ ಬದುಕಿನ ಅಸಹನೀಯತೆಯನ್ನು ಸಹನೀಯವನ್ನಾಗಿ ಮಾಡುತ್ತವೆ. ಈ ಮೂಲಕ ಭ್ರಮೆಯನ್ನು ನಿಜವೆಂದು ನಂಬಿಸಿ ನಿಜವನ್ನು ಗೌಣಗೊಳಿಸುತ್ತವೆ.
 
ಎಲ್ಲ ನಿಜಗಳೂ ಮನೋ ನಿರ್ಮಿತಿಗಳೆಂದು ವಾದಿಸುವ ಉತ್ತರಾಧುನಿಕ ಮಾಯಾವಾದವೂ ಈ ಪ್ರಕ್ರಿಯೆಗೆ ಇಂಬುಗೊಡುತ್ತಿದೆ. ಯೂ-ಟ್ಯೂಬ್, ಇಂಟರ್‌ನೆಟ್‌ಗಳ ಮೂಲಕ ಅಮರತ್ವದ ಸಂದೇಶ ತಲುಪಿಸುತ್ತಿರುವ ಗಣಕಯುಗದ ಋಷಿವರ್ಯರೂ ಇದರಲ್ಲಿ ಶಾಮೀಲಾಗಿದ್ದಾರೆ.

(ನಿಮ್ಮ ಅನಿಸಿಕೆ ತಿಳಿಸಿ: editpagefeedback@ prajavani.co.in)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT