ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ತೋರ್ ಯಾರೇ ಆದ್ರೂ ಹೆದರೋದು ನಾವೇ...

Last Updated 10 ಆಗಸ್ಟ್ 2016, 19:30 IST
ಅಕ್ಷರ ಗಾತ್ರ

ಆವತ್ತು ರಾತ್ರಿ ಪಕ್ಕದ ರೂಮಿನಿಂದ ಸದ್ದು ಅಡಗಲೇ ಇಲ್ಲ. ವಿಜಿಗೇ ನಿದ್ದೆ ಬಂತೋ ಅಥವಾ ಸದ್ದು ಕಡಿಮೆ ಆಯಿತೋ ಗೊತ್ತಾಗದೇ ಇರುವಂಥ ಸ್ವಪ್ನ ಸ್ಥಿತಿಯಲ್ಲಿ ಮತ್ತೆ ಎಲ್ಲರೂ ನಿದ್ರಾಲೋಕಕ್ಕೆ ಹೋಗಿದ್ದರು. ಬೆಳಿಗ್ಗೆ ಬೇಗನೆ ಏಳುವ ಹೊತ್ತಿಗಾಗಲೇ ಜಯಸುಧಾ ಎಲ್ಲರಿಗೂ ಚಹಾ ಮಾಡುತ್ತಿದ್ದಳು.

ರಾತ್ರಿ ಕೇಳಿಸಿದ ಸದ್ದುಗಳು ನಿಜವಾಗಿಯೂ ಇದೇ ಮನೆಯಲ್ಲೇ ಹುಟ್ಟಿದವೋ ಅಥವಾ ಅದನ್ನೆಲ್ಲಾ ತಾವೇ ಊಹಿಸಿಕೊಂಡೆವೋ ಎನ್ನುವ ಇಬ್ಬಂದಿಯಲ್ಲೇ ವಿಜಿ ಮತ್ತು ಸರಳಾ ಮಕ್-ಮಕ ನೋಡಿಕೊಂಡರು.

ಜಯಾ ‘ಗುಡ್ ಮಾರ್ನಿಂಗ್’ ಎಂದು ಬಹಳ ಚಿಯರ್ ಫುಲ್ಲಾಗಿ ಹೇಳುತ್ತಾ ಗಟ್ಟಿ ಹಾಲಿಗೆ ಏಲಕ್ಕಿ, ಚಹಾ ಪುಡಿ, ಸಕ್ಕರೆ ಹಾಕಿ ಚೆನ್ನಾಗಿ ಕುದಿಸಿ ಮಾಡಿದ ನೊರೆ ನೊರೆ ಚಹಾವನ್ನು ತಂದು ಟೇಬಲ್ಲಿನ ಮೇಲೆ ಇಟ್ಟಳು. ರಾತ್ರಿಯ ಚಟುವಟಿಕೆಗಳೇನಾದರೂ ಅವಳ ಕಣ್ಣಿನಲ್ಲಿ ಸುಸ್ತಿನ ರೂಪದಲ್ಲಿ ಕಾಣಬಹುದಾ ಅಂತ ಸರಳಾ ಮತ್ತೆ ಮತ್ತೆ ಜಯಳನ್ನೇ ದಿಟ್ಟಿಸಿ ನೋಡಿದರು. ಇಲ್ಲವೇ ಇಲ್ಲ. ಊಹೂಂ! ಜಯ ಕಣ್ಣುಗಳು ದೊಡ್ಡ ದೊಡ್ಡ ಸರ್ಕಲ್ಲುಗಳಲ್ಲಿ ಹಾಕಿರುವ ಹೈ ಮಾಸ್ಟ್ ದೀಪದಂತೆ ಜಾಜ್ವಲ್ಯಮಾನವಾಗಿ ಬೆಳಗುತ್ತಿದ್ದವು.

ಸರಳಾ ದಿಟ್ಟಿಸಿ ನೋಡುವುದನ್ನು ಜಯಾ ಗಮನಿಸಿ ತುಂಟತನದಿಂದ ಕಣ್ಣು ಹೊಡೆದಳು. ‘ಏನು?’ ಎನ್ನುವಂತೆ ತಲೆ ಏರಿಸಿದಳು. ಸರಳಾಗೆ ಹೇಗೆ ತನ್ನ ಮನಸ್ಸಿನಲ್ಲಿರುವ ಅನುಮಾನಕ್ಕೆ ಪದಗಳ ಜೋಡಣೆ ಮಾಡುವುದೆಂದು ತಿಳಿಯದೆ ಸುಮ್ಮನಾಗಿ ಕೂತರು.

ಚಹಾದ ಪರಿಮಳ ಏರುತ್ತಿತ್ತು. ಮಳೆಗಾಲ ಮುಗಿದು ಇನ್ನೇನು ಚಳಿಗಾಲ ಶುರುವಾಗಬೇಕು ಎನ್ನುವಂತಿದ್ದ ದಿನಗಳವು. ಬಿಸಿಬಿಸಿ ಚಹಾ ತಣ್ಣಗಾದ ಮೇಲೆ ಕುಡಿದರೆ ಇಡೀ ದಿನ ಖರಾಬಾಗಿಬಿಡುತ್ತದೆ ಅಂತ ಸರಳಾ ಬೇಗ ಬೇಗ ಚಹಾ ಕುಡಿದು ಮುಗಿಸಿದರು. ಜಯಸುಧಾ ತನ್ನ ಪಾಡಿಗೆ ತಾನು ಮಗನ ಬ್ಯಾಗು ರೆಡಿ ಮಾಡಿ ಸ್ಕೂಲಿಗೆ ಕಳಿಸುವಲ್ಲಿ ಬಿಜಿಯಾದಳು. ಸರಳಾ ತಲೆಯಿಂದ ಈ ವಿಚಾರ ಹೋಗಲೇ ಇಲ್ಲ.

‘ಅಲ್ಲಾ! ಬಿಡ್ರೀ ಅತ್ಲಾಗೆ!! ಅವ್ರ್ ವ್ಯವಹಾರ ಅವ್ರಿಗೆ. ನಮಗ್ಯಾಕೆ ಆ ಸುದ್ದಿ? ಯಾವನೋ ಇದ್ರೆ ಇದ್ದ. ನಮಗೆ ತೊಂದರೆ ಆಗದಿದ್ರೆ ಸಾಕು ತಾನೆ?’ ಅಂತ ಸಾರಾಸಗಟಾಗಿ ಪ್ರಶ್ನೆ ಕೇಳುವ ಅವಶ್ಯಕತೆಯನ್ನೇ ತಳ್ಳಿ ಹಾಕುತ್ತಾ ವಿಜಿ ಸರಳಾರನ್ನು ಕೇಳಿದಳು. ಸೂಸನ್ ಮತ್ತು ಚಿತ್ರಾಗೆ ವಿಷಯ ಇನ್ನೂ ಹೇಳಿರಲಿಲ್ಲ. ಅದನ್ನು ಹೇಳಬೇಕಾ ಬೇಡವಾ ಎನ್ನುವ ತಾರ್ಕಿಕ ಸಂದಿಗ್ಧಕ್ಕೆ ಇನ್ನೂ ಉತ್ತರ ಸಿಕ್ಕಿರಲಿಲ್ಲ. ಹಾಗಾಗಿ ವಿಷಯ ಇವರಿಬ್ಬರ ನಡುವೆ ಮಾತ್ರ ಚರ್ಚೆಯಾಗುತ್ತಿತ್ತು.

‘ಅಲ್ಲಾ ಕಣೆ. ನಾವೂ ಇದೇ ಮನೇಲಿ ಇದೀವಿ. ಅವನೇನಾದರೂ ಹೊಲಸು ಸಹವಾಸದವನಾದರೆ?  ಯಾರ್‌ಯಾರನ್ನೋ ಕರಕೊಂಡು ಬಂದು ತೊಂದರೆ ಮಾಡಿದ್ರೆ?’

‘ಸರಳಕ್ಕಾ ಸುಮ್ನೆ ಲೂಸ್ ಲೂಸಾಗಿ ಮಾತಾಡ್ತಾ ಇದೀರಾ. ರಿ... ಇದು ಫ್ಲ್ಯಾಟು ಅಲ್ವಾ? ಅತ್ತ ಇತ್ತ ಮನೆಗಳೂ ಇವೆ ಕಣ್ರೀ. ಅವ್ನು ಬಂದು ತೊಂದರೆ ಕೊಡೋದು ಅಷ್ಟು ಸುಲಭದ ಮಾತಾ?’

‘ಅಯ್ಯೋ ನೀನು ಹಂಗೆ ಅನ್ಕೊಂಡಿದೀಯಾ ಅಷ್ಟೇ. ಫ್ಲ್ಯಾಟಾದರೇನು ಇನ್ನೊಂದಾದರೇನು? ಕಾಮಾತುರಾಣಾಂ ನ ಭಯಂ ನ ಲಜ್ಜಾ ಅಂತ ಕೇಳಿಲ್ವಾ?’
‘ಈಗ ನೀವು ಹೇಳಿದ್ದು ಸರಿ ಅಂತಲೇ ಇಟ್ಟುಕೊಂಡ್ರೂ, ಕಾಮಾತುರನಿಗೆ ಇಲ್ಲಿ ಆಗಲೇ ಸೂಕ್ತ ಅರೇಂಜ್ ಮೆಂಟ್ ಇದೆ. ಹಾಗಿದ್ದಾಗ ಸುಮ್ ಸುಮ್ನೆ ನಮ್ಮ ಮೇಲೆ ಯಾಕೆ ಬೀಳ್ತಾನೆ?’
‘ಹಾಗಂದ್ರೆ ಇಲ್ಲಿ ಅದೇ ನಡೀತಾ ಇರೋದು ಅಂತೀಯಾ?’

‘ಸರಳಕ್ಕಾ, ಜೀವನದಲ್ಲಿ ಏನೇನೋ ಕಂಡಿದ್ದೀನಿ ಅಂತೀರಾ...ಇದು ಯಾವ್ ಕೇಸು ಅಂತ ಗೊತ್ತಾಗಲ್ವೇನ್ರೀ ನಿಮಗೆ? ಸುಮ್ನೆ ಅನುಮಾನ ಪಡ್ತಿದೀರಾ ನೀವು...’
‘ಯಾವ್ ಕೇಸು? ನೀನೇ ಹೇಳು’

‘ನಿಜ ಹೇಳಬೇಕಂದ್ರೆ, ನಮಗ್ಯಾವ ವಿಷಯವೂ ಗೊತ್ತಿಲ್ಲ. ಸುಮ್ಮನೆ ಸದ್ದಿನ ವಾಸನೆ ಹಿಡುಕೊಂಡು ಹೆದ್ರಿಕೋತಾ ಇದೀವಿ. ಒಂಥರಾ ಹಾರರ್ ಫಿಲಂ ನೋಡಿ ರಾತ್ರಿ ಎಲ್ಲಾ ನಡುಗ್ತಾ ಸಾಯ್ತಾರಲ್ಲ ಜನ, ಆ ಥರ’
‘ಮತ್ತೇನ್ಮಾಡೂಂತೀ?’

‘ಏನೂ ಬೇಡ. ಯಾವ ವಿಷಯವೇ ಆಗಲಿ ನಮಗೆ ಸ್ಪಷ್ಟವಾಗಿ ಗೊತ್ತಾಗುವ ತನಕ ಸುಮ್ಮನೆ ಇರಿ’.
‘ಸರಿ ಬಿಡು. ಇನ್ನೇನೇ ಆದ್ರೂ ನಾನು ತಲೆನೇ ಕೆಡಿಸಿಕೊಳ್ಳಲ್ಲ ಮತ್ತೆ’

ಇವರಿಬ್ಬರೂ ಹೀಗನ್ನುವುದಕ್ಕೂ, ಕೋಟಿ ಇವರ ರೂಮಿನ ಹತ್ತಿರ ಬರುವುದಕ್ಕೂ ಸರಿ ಹೋಯಿತು. ಅವನೆಲ್ಲಿ ಕೇಳಿಸಿಕೊಂಡಾನೋ ಅಂತ ಹೆದರಿ ನೀರಾದವರು, ನಂತರ ಇವನಿಗೆ ಕನ್ನಡ ಬರುವುದಿಲ್ಲ ಅಂತ ನೆನಪಾಗಿ ಸಮಾಧಾನ ಹೊಂದಿದರು. ಕೋಟಿ ಬಂದದ್ದು, ಇಬ್ಬರು ಹೊಸ ಕೆಲಸದ ಹುಡುಗೀರು ಬಂದಿದ್ದಾರೆ, ಅವರ ಹತ್ರ ಮಾತಾಡಬನ್ನಿ ಅಂತ ಹೇಳುವುದಕ್ಕೆ.

‘ನುವ್ವೇ ಮಾಟ್ಲಾಡ್ರಾ’ (ನೀನೇ ಮಾತಾಡೋ) ಅಂತ ವಿಜಿ ಹೇಳಿದಳು. ಕೋಟಿಯ ಮುಖದಿಂದ ನಾಚಿಕೆ ಸುರಿದು ಸುರಿದು ಹೋಗುತ್ತಿತ್ತು. ಅದ್ಯಾಕೆ ಹಾಗೆ ನಾಚಿಕೊಂಡನೋ ದೇವರೇ ಬಲ್ಲ.

‘ನಡಿಯೇ ಅತ್ಲಾಗಿ. ನಾವೇ ಹೋಗಿ ನೋಡನ’ ಅಂತ ಸರಳಾ ವಿಜಿಯನ್ನು ತಳ್ಳಿಕೊಂಡೇ ಹೋದರು.
ಹೊರಗೆ ಹೋಗಿ ನೋಡಿದರೆ ಅಲ್ಲಿ ಏನಿತ್ತು! ಸಾಕ್ಷಾತ್ ದೇವಲೋಕದ ಅಪ್ಸರೆಯರೇ ಧರೆಗಿಳಿದು ಬಂದಂತಿತ್ತು.

ರಂಭೆ ಮೇನಕೆಯರ ಪ್ರತಿರೂಪದಂತಿದ್ದ ಇಬ್ಬರು ಹುಡುಗಿಯರು ಮನೆ ಕೆಲಸಕ್ಕೆ ಅಂತ ಬಂದಿದ್ದರು. ‘ಮನೆ ಕೆಲಸಕ್ಕಾ? ಯಾರ್ ಹೇಳಿದ್ದು?’ ಅಂತ ಬಹಳ ಸಾರಿ ಕೇಳಿ ಖಾತ್ರಿ ಪಡಿಸಿಕೊಂಡಳು ವಿಜಿ.

ಹೂಂ ಹೂಂ ಎನ್ನುತ್ತಲೇ ರಂಭೆ ಮೇನಕೆಯರು ನಿಂತಲ್ಲಿಂದಲೇ ಮನೆ ಪರಿಶೀಲನೆ ಮಾಡಲು ಶುರು ಮಾಡಿದ್ದರು. ಅದರ ಅಂದಾಜಿನ ಮೇಲೆ ಸಂಬಳ ಎಷ್ಟು ಕೇಳಬೇಕು ಎನ್ನುವ ಲೆಕ್ಕಾಚಾರವೋ ಏನೋ. ಜಯಸುಧಾ ಮಗನನ್ನು ಸ್ಕೂಲ್ ವ್ಯಾನ್ ಹತ್ತಿಸಲು ಹೊರಗೆ ಗೇಟಿನ ಹತ್ತಿರ ನಿಂತಿದ್ದರು.

ಹಾಗಾಗಿ ಸದ್ಯದ ನೆಗೋಷಿಯೇಶನ್ ಅನ್ನು ಮನೆಯಲ್ಲಿರುವವರೇ ಮಾಡಬೇಕಿತ್ತು. ಎಲ್ಲಾ ಬಿಟ್ಟು ಇಷ್ಟು ಚಂದದ ಹುಡುಗಿಯರನ್ನು ಮನೆ ಕೆಲಸಕ್ಕೆ ಇಟ್ಟುಕೊಳ್ಳುವ ಪ್ರಮೇಯವಾದರೂ ಏನು ಎಂಬುದು ಅರ್ಥವಾಗಲಿಲ್ಲ. ಮಧ್ಯ ವಯಸ್ಸಿನ ಹೆಣ್ಣು ಮಕ್ಕಳಾದರೆ ಜಾಸ್ತಿ ನಖರಾ ಮಾಡದೆ ಕೆಲಸ ಮಾಡಿ ಹೋಗುತ್ತಾರೆ ಅಂತ ಜಯಾಗೆ ಹೇಳಬೇಕೆಂದುಕೊಂಡರು ಸರಳಾ.

ಮಗನನ್ನು ವ್ಯಾನಿಗೆ ಹತ್ತಿಸಿ ಜಯಾ ಒಳಗೆ ಬಂದರು. ಆ ಹುಡುಗಿಯರಿಗೆ ತಮಿಳು, ಕನ್ನಡ ಬರುತ್ತಿತ್ತು. ಜಯಾ ಹರುಕು ಮುರುಕು ತಮಿಳಿನಲ್ಲಿ ಮಾತನಾಡಿ ನಾಳೆಯಿಂದ ಕೆಲಸಕ್ಕೆ ಬನ್ನಿ ಅಂತ ಹೇಳಿ ಕಳಿಸಿದರು. ಸರಳಾ ಕೇಳಿದ್ದಕ್ಕೆ ಜಯಾ ‘ಈ ಹುಡುಗಿಯರನ್ನ ಕೆಲಸಕ್ಕೆ ನಾನಲ್ಲ ಇಟ್ಟಿರೋದು.

ಮುನಿರಾಜು ಸರ್ ಕರ್ಕೊಂಡು ಬಂದಿದಾರೆ. ಏನ್ ಕೆಲಸ ಹೇಳಿದ್ರೂ ಮಾಡ್ತಾರಂತೆ. ಅಡುಗೆ, ಬಟ್ಟೆ, ಮನೆ ಕೆಲಸ, ಪಾತ್ರೆ ತೊಳಿಯೋದು ಎಲ್ಲಾ ಮಾಡ್ತಾರಾಂತೆ’ ಅಂತ ಬಹಳ ಖುಷಿಯಿಂದಲೇ ಹೇಳಿದರಂತೆ.

‘ಇದೇನೇ, ಮನೆಗೆ ಕೆಲಸದೋರನ್ನ ಇಡೋಕೂ ಅವನೇ ಬೇಕಾ?’ ಅಂತ ಸರಳಾ ವಿಜಿಯನ್ನು ಪಿಸುಮಾತಿನಲ್ಲಿ ಕೇಳಿದರು. ‘ರೀ ಸರಳಕ್ಕಾ, ಬೆಳಿಗ್ಗೆ ಎದ್ರೆ ಬಿಸಿ ಬಿಸಿ ಕಾಫೀನೋ, ಟೀನೋ ಸಿಗುತ್ತೆ. ಹೊತ್ತು ಹೊತ್ತಿಗೆ ಊಟ ತಿಂಡಿ ಸಿಗುತ್ತೆ. ಕೆಲಸಕ್ಕೆ ಯಾರ್ ಯಾರನ್ನ ಇಟ್ರೆ ನಿಮಗ್ಯಾಕ್ರೀ?’ ಅಂತ ಸಲ್ಲದ ವಿಚಾರದಲ್ಲಿ ಮೂಗು ತೂರಿಸಲು ಅನಾಸಕ್ತಿ ತೋರಿದಳು ವಿಜಿ. ಆದರೆ ಸರಳಾ ಬಡಪೆಟ್ಟಿಗೆ ಬಗ್ಗುವವರಲ್ಲ. ‘ಅವರಿಂದ ಏನೋ ಕಾದಿದೆ ಅನ್ಸುತ್ತೆ ನನಗೆ. ಈ ಮುನಿರಾಜು ಮೇಲೆ ಸ್ವಲ್ಪವೂ ನಂಬಿಕೆ ಇಲ್ಲ. ನಂಬಲಿಕ್ಕೆ ಯೋಗ್ಯನಲ್ಲದ ಮನುಷ್ಯ ಅವನು’ ಅಂತ ಬಡಬಡಿಸಹತ್ತಿದರು.

ವಿಜಿಗೆ ಅವರನ್ನು ನೋಡಿ ಪಾಪ ಅನ್ನಿಸಿತು. ತಮ್ಮ ಜೀವನದ ಫಲವಾಗಿ, ತಮ್ಮ ದುರಂತ ಬಾಲ್ಯದ ಕುರುಹಾಗಿ ಅವರಿಗೆ ಯಾರ ಮೇಲೂ ನಂಬಿಕೆಯೇ ಉಳಿದಿರಲಿಲ್ಲ. ಹಾಗಾಗಿ ಕೆಲಸ ಮಾಡಲು ಬಂದ ಹುಡುಗೀರನ್ನೂ ಅನುಮಾನದಿಂದ ನೋಡುವುದು ಸಹಜವೇ ಎಂದುಕೊಂಡು ವಿಜಿ ಸುಮ್ಮನೆ ತನ್ನ ಪಾಡಿಗೆ ತಾನು ಕೆಲಸಕ್ಕೆ ಹೋದಳು.

ವಿಜಿಗೆ ಅಡುಗೆ ಮಾಡುವವರು ಬರುತ್ತಾರೆ ಎನ್ನುವುದು ಸಂತಸದ  ವಿಷಯವೇ ಆಗಿತ್ತು. ಅವರು ಸ್ಲಮ್ಮಿನಿಂದಾದರೂ ಬರಲಿ, ಬಂಗ್ಲೆಯಿಂದಾದರೂ ಬರಲಿ – ಒಟ್ಟಿನಲ್ಲಿ ಇಲ್ಲಿಗೆ ಬರಲಿ ಎನ್ನುವುದು ಅವಳ ಇರಾದೆಯಾಗಿತ್ತು.

ಏಕೆಂದರೆ ಅಡುಗೆ ಮಾಡಿಕೊಳ್ಳುವ ಸ್ವಾತಂತ್ರ್ಯವಿದ್ದರೂ ಮಾಡಿಕೊಳ್ಳಲು ಇವರು ಯಾರ ಕೈಲೂ ಆಗುತ್ತಿರಲಿಲ್ಲ. ಸುಮ್ಮನೆ ದಿನಾ ಕಿಚನ್ನಿಗೆ ಹೋಗೋದು, ಯಾವ್ಯಾವ ಸಾಮಾನು ಇಲ್ಲ ಅನ್ನೋದು ನೋಡಿಕೊಂಡು ಹ್ಯಾಪು ಮೋರೆ ಹಾಕಿಕೊಂಡು ಜಯಸುಧಾ ಮಾಡಿಟ್ಟ ತಂಗಳನ್ನು ಕಂಠಮಟ್ಟ ತಿಂದು ಸುಮ್ಮನೆ ಟೀವಿ ನೋಡೋದು.

ಜಯಸುಧಾನೂ ಏನಂಥಾ ಮೃಷ್ಟಾನ್ನ ಭೋಜನ ಕುದಿಸಿ ಇಳಿಸುತ್ತಿರಲಿಲ್ಲ. ಒಂದು ದಬರಿ ದೋಸೆ ಹಿಟ್ಟು ಮತ್ತೆ ಇನ್ನೊಂದು ದಬರಿ ಇಡ್ಲಿ ಹಿಟ್ಟು ತಯಾರು ಮಾಡಿ ಇಟ್ಟಿರುತ್ತಿದ್ದಳು. ಜೊತೆಗೆ ಮತ್ತೊಂದು ದೊಡ್ಡ ದಬರಿಯ ತುಂಬಾ ನೀರು ತಿಳಿಸಾರು.

ಆ ನೀರು ತಿಳಿಸಾರಿಗೆ ಸದಾ ತನ್ನ ಅಸ್ಮಿತೆಯ ಹುಡುಕಾಟವಿದ್ದಂತಿತ್ತು. ಇತ್ತ ನೀರಿಗೆ ನೀರೂ ಅಲ್ಲದ, ಸಾರಿಗೆ ಸಾರೂ ಅಲ್ಲದ ತಿಳಿಸಾರು ತೆಳುಗೆಂಪು ಬಣ್ಣ ಹೊತ್ತು, ಕೆಲ ಕೊಚ್ಚಿಸಿಕೊಂಡ ಬೆಂದ ಟೊಮಾಟೊ ತುಂಡುಗಳನ್ನು ಅನಾಥ ಶವದಂತೆ ತೇಲಿಸುತ್ತ, ಯಾವುದೋ ಕೊಳಕಾದ, ಆದರೂ ಪವಿತ್ರವಾದ ನದಿಯ ಮೇಲ್ಮೈಯಂತೆ ಕಾಣಿಸುತ್ತಿತ್ತು.

ದೋಸೆಗೂ ಅದೇ, ಇಡ್ಲಿಗೂ ಅದೇ ಕಡೆಗೆ ಅನ್ನಕ್ಕೂ ಅದೇ ಕಾಂಬಿನೇಷನ್ನು. ನೋ ಚಟ್ನಿ, ನೋ ಸಾಂಬರ್, ನಥಿಂಗ್!. ಚಪಾತಿ ಮಾತಂತೂ ಇಲ್ಲವೇ ಇಲ್ಲ. ಅನ್ನ ಬೆಂದು ದಿನಗಟ್ಟಲೆ ಫ್ರಿಜ್ಜಿನಲ್ಲಿ ಕೂತಿರುತ್ತಿತ್ತು. ಮೈಕ್ರೋವೇವ್ ಇನ್ನೂ ಕಾಲಿಟ್ಟಿರಲಿಲ್ಲ. ಹಾಗಾಗಿ ಬಿಸಿ ನೀರಿನಲ್ಲಿ ಅನ್ನ ಹಾಕಿಕೊಂಡು ಬಿಸಿ ಮಾಡಿ, ನೀರು ಸೋಸಿ ತೆಗೆದು ಊಟ ಮಾಡುತ್ತಿದ್ದರು.

ಪರಿಸ್ಥಿತಿಯ ದಾರುಣತೆ ಏರುತ್ತಿರುವಾಗಲೇ ಈ ಇಬ್ಬರು ಸುಂದರಿಯರ ಆಗಮನ ಜಯಾ ಮನೆಯಲ್ಲಿ ಸಂಚಲನ ಉಂಟು ಮಾಡಿತು. ಇಬ್ಬರೂ ಅಡುಗೆ ಮನೆ ಸೇರುವುದೇ ತಡ, ಕೋಟಿ ವಿನಾಕಾರಣ ಸಿಕ್ಕ ಸಿಕ್ಕ ತರಕಾರಿಯನ್ನೆಲ್ಲಾ ತಂದು ಹಾಕಲು ಶುರು ಮಾಡಿದ. ಮುನಿರಾಜು ಯಾವ್ಯಾವುದೋ ನೆಪದಲ್ಲಿ ಮನೆಗೆ ಹೆಚ್ಚು ಸಾರಿ ಬಂದು ಹೋಗುತ್ತಿದ್ದ.

ಕೆಲಸಕ್ಕೆಂದು ಬರುತ್ತಿದ್ದ ಆ ಹುಡುಗಿಯರು ಹಾಕುತ್ತಿದ್ದ ಮೇಕಪ್ ನೋಡಿದ್ದರೆ ಸ್ವತಃ ಸಿನಿಮಾ ಸ್ಟಾರುಗಳೇ ದಂಗಾಗಿಬಿಡುತ್ತಿದ್ದರು. ಕಣ್ಣಿನ ಕಾಡಿಗೆ, ಸಿನಿಮಾ ನಾಯಕಿಯ ಥರ ಹಚ್ಚುತ್ತಿದ್ದ ಐಲೈನರ್ರು, ತೆಳು ಲಿಪ್ ಸ್ಟಿಕ್ಕು, ಪಫ್ ಮಾಡಿದ ಹೇರ್ ಸ್ಟೈಲು, ಪರ್ಫೆಕ್ಟಾಗಿ ಮೈ ತೋರುತ್ತಿದ್ದ ಚೂಡಿದಾರಗಳು. ತಮಾಷೆಯಲ್ಲ, ಅವರ ಮುಂದೆ ಎಂಥಾ ಹೀರೋಯಿನ್ನೂ ಮಂಕು ಬಡಿದವಳ ಹಾಗೆ ಕಾಣುತ್ತಿದ್ದಳು.

ನಾಲ್ಕೈದು ದಿನಗಳ ಮಾತುಕತೆಯಲ್ಲಿ ಗೊತ್ತಾಗಿದ್ದು: ಅವರಿಬ್ಬರೂ ಸಿನಿಮಾ ಜ್ಯೂನಿಯರ್ಸ್ ಅಂತೆ. ಬೆಳ್ಬೆಳಿಗ್ಗೆನೇ ಇಲ್ಲಿ ಮನೆ ಕೆಲಸ ಮುಗಿಸಿಕೊಂಡು ಹೋಗಿ ಯಾವುದೋ ಸಿನಿಮಾ ನಿರ್ದೇಶಕರ ಮನೆಯಲ್ಲಿ ಇಡೀ ದಿನ ಇರುತ್ತಾರಂತೆ. ಇವರ ಪರಿಚಯ ಮುನಿರಾಜುವಿಗೂ ಆಗಿದ್ದು ಆ ಸಿನಿಮಾದೋರ ಮನೆಯಲ್ಲೇ.

‘ಇಲ್ಲಿ ಕೆಲಸಕ್ಕೆ ಬಂದ್ರೆ ಬಹಳ ಅನುಕೂಲ ಮಾಡಿಕೊಡ್ತೀನಿ ಅಂದಿರಬೇಕು, ಅದಕ್ಕೇ ಬಂದಿದಾರೆ’ ಅಂತ ವಿಜಿ ಊಹಿಸಿದಳು. ಆ ಹುಡುಗಿಯರು ಬಾಯೇ ಬಿಡುತ್ತಿರಲಿಲ್ಲ. ಜಯಸುಧಾ ಅದ್ ಹೇಗೆ ಇವರನ್ನ ನಂಬಿದಳೋ ಗೊತ್ತಿಲ್ಲ. ಅವರ ಕೈಗೆ ಮನೆ ಬೀಗವನ್ನೇ ಕೊಟ್ಟುಬಿಟ್ಟಿದ್ದಳು. ತಾನಿಲ್ಲದಾಗ ಬಂದ್ರೆ ಕೆಲಸ ಮಾಡಿ ಹೋಗ್ಲೀ ಅಂತ.

‘ರಿಸ್ಕಿ ಅನಿಸಲ್ವಾ ಜಯಾ ದೀದಿ? ಯಾಕೋ ಈ ಹುಡುಗೀರನ್ನ ನೋಡಿದರೆ ನಮ್ಮ ರೂಮ್ ಲಾಕ್ ಮಾಡಿಕೊಂಡು ಹೋಗೋದು ಒಳ್ಳೇದು ಅನ್ಸುತ್ತೆ’ ಅಂತ ಒಮ್ಮೆ ಸೂಸನ್ ಜಯಸುಧಾಳನ್ನು ಕೇಳಿ ಬಿಟ್ಟಳು.

‘ಹೇ! ಆ ಹುಡುಗೀರು ನೋಡೋಕೆ ಮಾತ್ರ ಹಂಗೆ ಕಾಣ್ತಾರೆ. ವಯಸ್ಸಿನ ಹುಡುಗೀರಲ್ವಾ? ಮೇಕಪ್ ಎಲ್ಲಾ ಇಷ್ಟ ಅಂತೆ. ಅದಕ್ಕೆ ಹಾಗೆ ಬರ್ತಾರೆ. ಕೆಲಸದ ಹುಡುಗೀರಾದ್ರೆ ಏನು? ಮೇಕಪ್ ಮಾಡ್ಕೋಬಾರದು ಅಂತ ಏನಾದ್ರೂ ಇದೆಯಾ? ನೀನೂ ಮೇಕಪ್ ಮಾಡಿಕೊಳ್ಳಲ್ವಾ? ಹಾಗೇ ಅವರೂ...’ ಅಂತ ಸಾಮಾಜಿಕ ಪೂರ್ವಗ್ರಹಗಳ ಬಗ್ಗೆ ಜಯಾ ಸೂಸನ್‌ಗೆ ಭಾಷಣವನ್ನೇ ಮಾಡಿಬಿಟ್ಟಳು.

ಸೂಸನ್ ಈ ವಿಷಯವನ್ನು ಎಲ್ಲರ ಹತ್ತಿರ ಪ್ರಸ್ತಾಪ ಮಾಡಿದಳು. ಮತ್ತೆ ಬಹುಮತದಂತೆ ಎಲ್ಲರೂ ಬಾಯಿಮುಚ್ಚಿಕೊಂಡಿರುವುದೆಂದು ಸಾಬೀತಾಯ್ತು.
ಆ ಹುಡುಗಿಯರು ಕೆಲಸಕ್ಕೆ ಸೇರಿ ವಾರ ಆಗಿತ್ತೇನೋ, ಇದ್ದಕ್ಕಿದ್ದ ಹಾಗೆ ಬರುವುದು ನಿಲ್ಲಿಸಿಬಿಟ್ಟರು. ಮೂರು, ನಾಲ್ಕು ಎಷ್ಟು ದಿನ ಆದರೂ ಅವರ ಸುಳಿವಿಲ್ಲ. ಕೋಟಿಯಂತೂ ಮಂಕು ಬಡಿದು ಹೋದ. ಎಲ್ಲಿ ಹುಡುಕಿದರೂ ಅವರ ಸುಳಿವೇ ಇಲ್ಲ. ಇತ್ತ ಮುನಿರಾಜುವೂ ಬರುವುದು ನಿಲ್ಲಿಸಿಬಿಟ್ಟ.

ಒಂದು ದಿನ ಆಫೀಸಿನಲ್ಲಿ ಕನ್ನಡ ಟ್ಯಾಬ್ಲಾಯಿಡ್ ಒಂದನ್ನು ಓದುತ್ತಿದ್ದ ವಿಜಿಗೆ ಒಂದು ಸುದ್ದಿ ಕಣ್ಣಿಗೆ ಬಿತ್ತು. ಹುಡುಗಿಯರಿಬ್ಬರು ಸಂಜೆ ಹೊತ್ತು ದುಬಾರಿ ಕಾರುಗಳಿಗೆ ಕೈ ಮಾಡಿ ನಿಲ್ಲಿಸಿ, ಸ್ವಲ್ಪ ದೂರ ಹೋಗಿ ಒಳಗಿದ್ದವರನ್ನು ದೋಚುತ್ತಿದ್ದ ವಿಷಯ. ಈ ಕೆಲಸ ಮಾಡುತ್ತಿದ್ದವರ ಫೋಟೊ ಕೂಡ ಹಾಕಿದ್ದರು.

ಅದನ್ನು ನೋಡಿದರೆ ಮನೆಗೆ ಅಡುಗೆ ಕೆಲಸಕ್ಕೆಂದು ಬರುತ್ತಿದ್ದ ಸೈಡ್ ಹೀರೋಯಿನ್ನುಗಳೇ! ಈ ಅಪರಾಧ ಮಾಡಿಸುತ್ತಿದ್ದವರನ್ನೂ ಅರೆಸ್ಟ್ ಮಾಡಿದ್ದರು. ಅದರಲ್ಲಿ ಸಿನಿಮಾ ನಿರ್ದೇಶಕ ಮತ್ತು ಮುನಿರಾಜು ಕೂಡ ಸೇರಿದ್ದರು.

ವಿಜಿಗೆ ಮೈ ಝುಂ ಅಂತು. ಆ ಪೇಪರನ್ನು ತೆಗೆದುಕೊಂಡು ಮನೆಗೆ ಬಂದು ಆ ಸುದ್ದಿ ತನ್ನ ಭ್ರಮೆಯೇನೋ ಎನ್ನುವಂತೆ ಮತ್ತೊಮ್ಮೆ ಓದಿದಳು. ಊಹೂಂ. ಅನುಮಾನವೇ ಬೇಡ. ಆ ಸುದ್ದಿ ನೂರಕ್ಕೆ ನೂರು ಸತ್ಯ. ‘ಹೊಸ ಸಿನಿಮಾಕ್ಕೆ ದುಡ್ಡು ಹೊಂಚಲು ಈ ಹುಡುಗಿಯರನ್ನು ಬಳಸಿಕೊಂಡು ಮುನಿರಾಜು ಮತ್ತು ಆ ನಿರ್ದೇಶಕ ಈ ಕೆಲಸ ಮಾಡುತ್ತಿದ್ದರು’ ಅಂತ ಪೊಲೀಸ್ ಆಫೀಸರ್ ಹೇಳಿಕೆ ಕೊಟ್ಟಿದ್ದರು.

ಮನೆಗೆ ತಂದು ಅದನ್ನು ಓದಿ ಜಯಾಗೆ ಹೇಳಿದಳು. ಜಯಾಗೆ ಅತಿ ದುಃಖವಾಯಿತು. ತಾನೆಷ್ಟು ತಪ್ಪು ಮಾಡುತ್ತಿದ್ದೆ, ಸದ್ಯ ತನ್ನನ್ನು ದೇವರು ರಕ್ಷಿಸಿದ ಅಂತೇನೋ ಬಡಬಡಿಸಿ ಸುಮ್ಮನಾದಳು. ಆವತ್ತು ನಡುರಾತ್ರಿ ಮತ್ತೆ ಮನೆಯಲ್ಲಿ ಸದ್ದು. ಈ ಸಾರಿ ಧಡಭಡ ಇಲ್ಲ. ಬಹಳ ಸಾಫ್ಟ್‌ ಆಗಿ. ಯಾರೋ ಓಡಾಡಿದಂತೆ, ಯಾರೋ ಸಾಮಾನುಗಳನ್ನು ಸರಿಸಿದಂತೆ ಹೀಗೇ. ಮತ್ತೆ ಎಚ್ಚರವಾದ ವಿಜಿ ಜಯಾ ರೂಮಿನ ಹತ್ತಿರ ಹೋಗಿ ನೋಡಿದಳು. ಲೈಟು ಆರಿಸಿತ್ತು. ಸದ್ದು ಇಲ್ಲಿಂದ ಬರಲು ಸಾಧ್ಯವೇ ಇರಲಿಲ್ಲ.

‘ಸಾಯ್ಲಿ ಅತ್ಲಾಗೆ’ ಅಂತ ಯೋಚಿಸಿ ಮಲಗಲಿಕ್ಕೆ ಅಂತ ವಾಪಸು ಹೋದರೆ, ಕಿಟಕಿಗೆ ಹೊಂದಿಕೊಂಡಿದ್ದ ಪರದೆ ಸರಿದಿತ್ತು. ಮೊದಲೆಲ್ಲ ಮಂಚದ ಪಕ್ಕವೇ ಇದ್ದ ಕಿಟಕಿಗೆ ಬೀದಿ ದೀಪದ ಬೆಳಕು ಧಾರಾಳವಾಗಿ ಬೀಳುತ್ತಿತ್ತು. ಆದರೆ ಎರಡು ಮೂರು ದಿನದಿಂದ ದೀಪ ಕೆಟ್ಟಿದ್ದರಿಂದ ಕತ್ತಲೆ ಆವರಿಸಿತ್ತು.

ಮಲಗಲಿಕ್ಕೆ ಅಂತ ಮಂಚದ ಮೇಲೆ ಕೂತು ಹೊದಿಕೆಯನ್ನು ಕಾಲ ಮೇಲೆಳೆದುಕೊಳ್ಳುತ್ತಿರುವ ವಿಜಿಗೆ ಕಿಟಕಿಯ ಪಕ್ಕ ಯಾರೋ ಓಡಾಡುತ್ತಿರುವಂತೆ ಕಂಡಿತು. ಸ್ವಲ್ಪ ದಿಟ್ಟಿಸಿ ನೋಡಿದಳು. ಕಿರುಗಣ್ಣಾಗಿ, ಬಿಡುಗಣ್ಣಾಗಿ ಎಲ್ಲಾ ಮಾಡಿ ನೋಡಿದಳು.

ಕಿಟಕಿಯ ಪಕ್ಕ ಹೆಣ ನೇತಾಡುತ್ತಿತ್ತು. ಯಾರೋ ಮೇಲಿನ ಫ್ಲ್ಯಾಟಿನ ಬಾಲ್ಕನಿಯ ಗ್ರಿಲ್ಲಿನ ಕೆಳಭಾಗಕ್ಕೆ ನೇಣು ಹಾಕಿಕೊಂಡಿದ್ದರು. ಹೆಣ, ಕೆಳಗಿದ್ದ ಇವರ ಕಿಟಕಿಯವರೆಗೆ ಅನಾಮತ್ತಾಗಿ ಇಳಿ ಬಿದ್ದಿತ್ತು.

ವಿಜಿ ಕೂಗಿಕೊಳ್ಳಬೇಕೆಂದರೆ ಧ್ವನಿ ಎಲ್ಲೋ ಗಂಟಲಿನಾಳದಲ್ಲಿ ಸತ್ತೇ ಹೋಗಿತ್ತು. ಹೆಣ ರಪ್ ಎಂದು ಇವಳ ಕಿಟಕಿಯ ಗಾಜಿಗೆ ಅಂಟಿಕೊಂಡಿತು. ವಿಜಿ ಚೀರಿಕೊಂಡದ್ದು ಕೇಳಿ ಎಲ್ಲರೂ ಕುಮಟಿ ಬಿದ್ದರು. ಲೈಟು ಹಾಕಿ ನೋಡಿದರೆ ಕಿಟಕಿಯ ಹೊರಗೆ ನೇಣು ಬಿಗಿದುಕೊಂಡಿದ್ದ ಹೆಣ ಅತ್ತಿಂದಿತ್ತ, ಇತ್ತಿಂದತ್ತ ಪೆಂಡುಲಮ್ ಥರ ಆಡುತ್ತಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT