ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸತ್ಯೋತ್ತರ ಕಾಲಘಟ್ಟದ ಸುಳ್ಳು ಪತ್ತೆ ಯಂತ್ರ

Last Updated 17 ಜನವರಿ 2017, 19:30 IST
ಅಕ್ಷರ ಗಾತ್ರ

ಪೋಸ್ಟ್ ಟ್ರುತ್ ಅನ್ನು ‘ಸತ್ಯೋತ್ತರ’ ಎಂದು ಕನ್ನಡಕ್ಕೆ ಅನುವಾದಿಸಬಹುದಾದ ಪದವನ್ನು  '2016ರ ಪದ' ಎಂದು ಆಕ್ಸ್‌ಫರ್ಡ್ ಇಂಗ್ಲಿಷ್ ನಿಘಂಟು ಗುರುತಿಸಿತು. ‘ಪೋಸ್ಟ್’ ಎಂಬ ಪೂರ್ವಪ್ರತ್ಯಯವೊಂದು ಸೇರಿಕೊಂಡರೆ ‘ಟ್ರುತ್’ ಎಂಬ ಸತ್ಯಕ್ಕೆ ದೊರೆಯುವ ಅರ್ಥವೇ ಬೇರೆ. ಅದನ್ನು ಸತ್ಯದ ನಂತರದ್ದು ಎಂದು ನಾವು ವಿವರಿಸಿಕೊಳ್ಳಬಹುದು.

‘ಸತ್ಯೋತ್ತರ’ವಾದದು ಎಂದರೆ ಅದು ಸುಳ್ಳೇ. ಅಥವಾ  ಅದು ಸತ್ಯವೆಂದು ಒಪ್ಪಲಾಗದ, ಸುಳ್ಳೆಂದು ಒಪ್ಪಿಸಲಾಗದ ಇನ್ಯಾವುದೋ ಒಂದು ಆಗಿರಬಹುದೇ? ಇಂಟರ್ನೆಟ್ ತಂತ್ರಜ್ಞಾನ ನಮ್ಮೆದುರು ತೆರೆದಿಟ್ಟಿರುವ ಅಸಂಖ್ಯ ಮಾಧ್ಯಮ ಸಾಧ್ಯತೆಗಳ ಪರಿಣಾಮವಾಗಿ ಉದ್ಭವಿಸಿರುವ ಪರಿಸ್ಥಿತಿಯೊಂದನ್ನು ವಿವರಿಸುವ ಪದವಿದು. ಈ ಪದ ಮೊದಲು ಬಳಕೆಯಾದದ್ದು 2010ರ ಏಪ್ರಿಲ್ ಒಂದರಂದು. ಇದನ್ನು ಬಳಸಿದ್ದು ‘ಗ್ರಿಸ್ಟ್’ ಎಂಬ ಅಂತರ್ಜಾಲ ನಿಯತಕಾಲಿಕದ ಅಂಕಣಕಾರ ಡೇವಿಡ್ ರಾಬರ್ಟ್ಸ್.

ಹೊಸ ಕಾಲದ ರಾಜಕೀಯವನ್ನು ವಿವರಿಸುವುದಕ್ಕಾಗಿ ಈತ ‘ಪೋಸ್ಟ್ ಟ್ರುತ್ ಪಾಲಿಟಿಕ್ಸ್’ ಎಂಬ ಪದಪುಂಜವನ್ನು ಬಳಸಿದ. ಮುಂದಿನ ದಿನಗಳಲ್ಲಿ ಅನೇಕ ವಿದ್ವಾಂಸರು ಮತ್ತು ವಿಶ್ಲೇಷಕರು ಈ ಪದವನ್ನು ಬಳಸುತ್ತಾ ಹೋದರು. 2016ರ ಅಮೆರಿಕದ ಚುನಾವಣೆ, ಬ್ರೆಕ್ಸಿಟ್ ಇತ್ಯಾದಿ ಸಂದರ್ಭಗಳಲ್ಲಿ ಇದು ಹೇರಳವಾಗಿ ಬಳಕೆಯಾಯಿತು. ಪರಿಣಾಮವಾಗಿ ಆಕ್ಸ್‌ಫರ್ಡ್ ಇಂಗ್ಲಿಷ್ ನಿಘಂಟು ಈ ಪದವನ್ನು ‘ವರ್ಷದ ಪದ’ ಎಂದು ಗುರುತಿಸಿತು.

ಏನಿದು ‘ಸತ್ಯೋತ್ತರ ರಾಜಕಾರಣ’. ಯೂರೋಪ್ ಇದನ್ನು ಬ್ರೆಕ್ಸಿಟ್ ಕಾಲದಲ್ಲಿ ಕಂಡುಕೊಂಡಿತು. ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಚುನಾಯಿತರಾದಾಗ ಅಮೆರಿಕ ಇದೇನು ಎಂದು ಅರ್ಥ ಮಾಡಿಕೊಂಡಿತು. ಇದು ಸಂಭವಿಸುವುದಕ್ಕೆ ಮುನ್ನವೇ ಭಾರತಕ್ಕೆ ಇದೇನು ಎಂದು ಅರಿವಾಗಿತ್ತು. 2014ರ ಲೋಕಸಭಾ ಚುನಾವಣೆಗಳಿಗೆ ಮುನ್ನವೇ ‘ಸತ್ಯೋತ್ತರ ರಾಜಕಾರಣ’ವೊಂದು ಭಾರತದಲ್ಲಿ ಆರಂಭವಾಗಿಬಿಟ್ಟಿತ್ತು. ಅದು ಈಗಲೂ ಮುಂದುವರಿಯುತ್ತಿದೆ.

ಪ್ರಜಾಪ್ರಭುತ್ವ ದೇಶವೊಂದರಲ್ಲಿ ಮತದಾರರನ್ನು ರಾಜಕೀಯ ಪಕ್ಷಗಳು ತಲುಪುವುದಕ್ಕೆ ತಮ್ಮದೇ ಆದ ಸಂವಹನ ವಿಧಾನವೊಂದನ್ನು ಈ ತನಕ ಬಳಸಿಕೊಳ್ಳುತ್ತಿದ್ದವು.

ಇದರಲ್ಲಿ ಬಹುಮುಖ್ಯವಾದುದು ಸಮೂಹ ಮಾಧ್ಯಮಗಳ ಮೂಲಕ ಜನರನ್ನು ತಲುಪುವುದು. ಮತ್ತೊಂದು ಮತದಾರರನ್ನು ನೇರವಾಗಿ ಸಂಪರ್ಕಿಸಲು ಬೇಕಿರುವ ಮಾರ್ಗಗಳನ್ನು ಅನುಸರಿಸುವುದು. ಇದರಲ್ಲಿ ಬೃಹತ್ ಪ್ರಚಾರ ಸಭೆಗಳಿಂದ ಆರಂಭಿಸಿ ವಠಾರಗಳು ಮತ್ತು ಬೀದಿಗಳಲ್ಲಿ ನಡೆಸುವ ಸಣ್ಣ ಸಭೆಗಳ ತನಕದ ಎಲ್ಲವೂ ಒಳಗೊಂಡಿವೆ.

ಈ ಎಲ್ಲಾ ಸಂದರ್ಭಗಳಲ್ಲಿ ಆಡಳಿತಾರೂಢರು ತಮ್ಮ ಆಡಳಿತಾವಧಿಯಲ್ಲಿ ತಾವು ಮಾಡಿರುವ ಸಾಧನೆಗಳನ್ನು ಮುಂದಿಡುತ್ತಿದ್ದರು. ವಿರೋಧ ಪಕ್ಷದಲ್ಲಿದ್ದವರು ಆಡಳಿತ ಪಕ್ಷ ಹೇಗೆಲ್ಲಾ ನೀತಿ ನಿರೂಪಣೆಯಲ್ಲಿ ಸೋತಿದೆ ಎಂಬುದನ್ನು ವಿವರಿಸಲು ಪ್ರಯತ್ನಿಸುತ್ತಿದ್ದರು. ಎಲ್ಲಾ ಪಕ್ಷಗಳವರೂ ತಾವು ಆಡಳಿತಕ್ಕೆ ಬಂದರೆ ಏನೇನು ಮಾಡುತ್ತೇವೆ ಎಂದು ಹೇಳುವುದು ಈ ರಾಜಕೀಯ ಸಂವಹನ ಪ್ರಕ್ರಿಯೆಯ ಪ್ರಮುಖ ಭಾಗವಾಗಿತ್ತು.

ಇಂಟರ್ನೆಟ್ ಆಧಾರಿತ ಸಾಮಾಜಿಕ ಮಾಧ್ಯಮಗಳು ವ್ಯಾಪಕವಾದ ಮೇಲೆ ಇಡೀ ಪ್ರಕ್ರಿಯೆಯಲ್ಲಿ ಒಂದು ದೊಡ್ಡ ಮಾರ್ಪಾಡು ಸಂಭವಿಸಿತು. ಆಡಳಿತ ನೀತಿಯ ಸುತ್ತ ನಡೆಯುತ್ತಿದ್ದ ಚರ್ಚೆಗಳಿಗಿಂತ ಹೆಚ್ಚಾಗಿ ಭಾವುಕ ವಿಚಾರಗಳನ್ನು ಆಧಾರವಾಗಿಟ್ಟಕೊಂಡ ಪ್ರಚಾರ ತಂತ್ರವೊಂದನ್ನು ರೂಢಿಸಿಕೊಳ್ಳಲಾಯಿತು. ಇಲ್ಲಿ ತರ್ಕಕ್ಕೆ ಯಾವುದೇ ಬೆಲೆಯಿಲ್ಲ. ತಕ್ಷಣಕ್ಕೆ ನಿಜವೆಂಬಂತೆ ಕಾಣುವ ಒಂದಷ್ಟು ಸಂಗತಿಗಳನ್ನು ಭಾವುಕವಾಗಿ ಮುಂದಿಟ್ಟರೆ ಸಾಕಾಗುತ್ತದೆ. 2014ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಈ ಬಗೆಯ ಅನೇಕ ಅಂಕಿ-ಅಂಶಗಳು ಬಳಕೆಯಾದವು.

ಎರಡನೇ ತಲೆಮಾರಿನ ತರಂಗಗಳ ಹಂಚಿಕೆಯಲ್ಲಿ ನಡೆದ ಭ್ರಷ್ಟಾಚಾರದಿಂದ ನಿಜಕ್ಕೂ ಆದ ನಷ್ಟವೆಷ್ಟು? ಈ ಕುರಿತಂತೆ ಪತ್ರಕರ್ತ ಶೇಖರ್ ಗುಪ್ತ ಆ ಕಾಲದಲ್ಲಿಯೇ ಚರ್ಚಿಸಿದ್ದರು. ಮಹಾಲೇಖಪಾಲರು ಈ ಹಗರಣದಿಂದ 57,000 ಕೋಟಿ ರೂಪಾಯಿಗಳಿಂದ 1.74 ಲಕ್ಷ ಕೋಟಿ ರೂಪಾಯಿಗಳೆಂದು ಅಂದಾಜಿಸಿದ್ದರು.

ಎಲ್ಲರೂ 1.74 ಲಕ್ಷ ಕೋಟಿ ರೂಪಾಯಿಗಳಿಗೇ ಅಂಟಿಕೊಂಡರು. ಆದರೆ ಈ ಮೊತ್ತ ಎಷ್ಟು ದೊಡ್ಡದು ಎಂದು ಯಾರೂ ವಿವರಿಸಲಿಲ್ಲ. ಶೇಖರ್ ಗುಪ್ತ ಇದನ್ನು ಹೀಗೆ ವಿವರಿಸುತ್ತಾರೆ: ‘ಇದು 2007ರಲ್ಲಿ ಭಾರತದ ಒಟ್ಟು ರಾಷ್ಟ್ರೀಯ ಉತ್ಪನ್ನದ ಶೇಕಡಾ 4.4ರಷ್ಟಾಗುತ್ತದೆ. ಆ ವರ್ಷದ ಮುಂಗಡ ಪತ್ರದಲ್ಲಿ ರಕ್ಷಣಾ ಖಾತೆಗೆಂದು ಮೀಸಲಿರಿಸಿದ್ದ ಹಣಕ್ಕಿಂತಲೂ ಇದು ಹಲವು ನೂರು ಕೋಟಿ ರೂಪಾಯಿಗಳಷ್ಟು ಹೆಚ್ಚು.

ನಮ್ಮ ರಕ್ಷಣಾ ಪಡೆಗಳು ತಮ್ಮ ವಶದಲ್ಲಿರುವ ಕೆಲವು ತರಂಗಗುಚ್ಛಗಳನ್ನು ಮಾರಾಟ ಮಾಡಿಯೇ ತಮ್ಮ ಖರ್ಚು ವೆಚ್ಚವನ್ನು ನಿಭಾಯಿಸಿಕೊಳ್ಳಬಹುದಿತ್ತಲ್ಲವೇ?’ ಶೇಖರ್ ಗುಪ್ತ ಕೇಳಿದ ತಾರ್ಕಿಕ ಪ್ರಶ್ನೆಯನ್ನು ಯಾರೂ ಗಂಭೀರವಾಗಿ ಪರಿಗಣಿಸಲೇ ಇಲ್ಲ. ಅಷ್ಟೇಕೆ ಇದನ್ನು ತನ್ನ ಸಮರ್ಥನೆಗೆ ಬಳಸಿಕೊಳ್ಳಬಹುದು ಎಂದು ಸ್ವತಃ ಯುಪಿಎ ನೇತೃತ್ವ ವಹಿಸಿದ್ದ ಕಾಂಗ್ರೆಸ್‌ಗೂ ಅನ್ನಿಸಲಿಲ್ಲ. 2014ರ ಲೋಕಸಭಾ ಚುನಾವಣೆಯನ್ನಿಡೀ 2 ಜಿ ಹಗರಣದ 1.74 ಲಕ್ಷ ಕೋಟಿ ರೂಪಾಯಿಗಳೇ ಆವರಿಸಿಕೊಂಡುಬಿಟ್ಟಿತ್ತು.

ಇದು ಭ್ರಷ್ಟಾಚಾರಕ್ಕೆ ಸಂಬಂಧಿಸಿದ ವಿಚಾರವಾದುದರಿಂದ ಹೀಗಾಯಿತು, ಚುನಾವಣಾ ಕಾಲದಲ್ಲಿ ಎಲ್ಲಾ ರಾಜಕೀಯ ಪಕ್ಷಗಳು ತಮಗೆ ಬೇಕಿರುವ ವಿಚಾರಗಳನ್ನು ಹೀಗೆಲ್ಲಾ ಬಳಸಿಕೊಳ್ಳುವುದು ಸಹಜ ಎನ್ನಬಹುದು.

‘ಜನ್ ಧನ್’ ಖಾತೆಗಳನ್ನು ತೆರೆಯುವ ಆಂದೋಲನ ಆರಂಭವಾದಾಗಲೂ ಇದು ಸಂಭವಿಸಿತು. ಇಂಥದ್ದೊಂದು ಖಾತೆ ತೆರೆದರೆ ವಿದೇಶದಿಂದ ತರಲಾಗುವ ಕಪ್ಪು ಹಣದಲ್ಲಿ ಒಂದು ಪಾಲನ್ನು ಸರ್ಕಾರ ಈ ಖಾತೆಗಳಿಗೆ ಹಾಕುತ್ತದೆ ಎಂಬ ವದಂತಿಯನ್ನು ವ್ಯವಸ್ಥಿತವಾಗಿ ಹರಡಲಾಯಿತು. 2000 ರೂಪಾಯಿಯ ಹೊಸ ನೋಟು ಬಂದಾಗ ಅದರಲ್ಲಿರುವ ಎಲೆಕ್ಟ್ರಾನಿಕ್ ಚಿಪ್ ನೂರಾರು ಅಡಿ ಆಳದಲ್ಲಿ ನೋಟುಗಳನ್ನು ಹೂತಿಟ್ಟಿದ್ದರೂ ಪತ್ತೆ ಹಚ್ಚುತ್ತದೆ ಎಂಬ ವದಂತಿ ಹರಡಿತು. ಇದನ್ನು ನಿಜವೆಂಬಂತೆ ಮುಖ್ಯವಾಹಿನಿಯ ಮಾಧ್ಯಮಗಳೂ ಪ್ರಸಾರ ಮಾಡಿಬಿಟ್ಟವು.

2 ಜಿ ಹಗರಣಕ್ಕೆ ಸಂಬಂಧಿಸಿದ ಅತಿರಂಜಿತ ಅಂಕಿ–ಅಂಶಗಳಿಂದ ತೊಡಗಿ 2000 ರೂಪಾಯಿ ನೋಟಿನ ಎಲೆಕ್ಟ್ರಾನಿಕ್ ಚಿಪ್‌ನ ತನಕದ ಎಲ್ಲವನ್ನೂ ತರ್ಕದ ನಿಕಷಕ್ಕೆ ಒಡ್ಡಿದ್ದರೆ ನಿಜವೇನೆಂದು ಅರ್ಥವಾಗುತ್ತಿತ್ತು. ಆದರೆ ಅದನ್ನು ಯಾರೂ ಮಾಡಲು ಮುಂದಾಗಲಿಲ್ಲ. ಕೆಲವರು ಮುಂದಾದರೂ ಅವರ ಮಾತಿಗೆ ಯಾವ ಬೆಲೆಯೂ ಸಿಗಲಿಲ್ಲ.ಇಂಥದ್ದೊಂದು ಕಾಲಘಟ್ಟದ ರಾಜಕಾರಣವನ್ನು ‘ಸತ್ಯೋತ್ತರ ರಾಜಕಾರಣ’ ಎಂದು ಡೇವಿಡ್ ರಾಬರ್ಟ್ಸ್ ವಿವರಿಸಿದ್ದು.

ಈ ‘ಸತ್ಯೋತ್ತರ’ ರಾಜಕಾರಣದ ಮಾಧ್ಯಮವಾಗಿರುವ ಸಾಮಾಜಿಕ ಮಾಧ್ಯಮಗಳ ಮೇಲೆ ಈಗ ವಿಶ್ವದ ಎಲ್ಲ ದೊಡ್ಡಣ್ಣಂದಿರ ಕಣ್ಣು ಬಿದ್ದಿದೆ. ಬ್ರೆಕ್ಸಿಟ್‌ಗೆ ಕಾರಣವಾದದ್ದು ಸಾಮಾಜಿಕ ಮಾಧ್ಯಮಗಳಲ್ಲಿ ಸತತವಾಗಿ ಹರಡಿದ ಸುಳ್ಳು ಸುದ್ದಿಗಳು ಎಂದು ಈಗ ಬ್ರಿಟನ್‌ಗೆ ಅರಿವಾಗಿದೆ.

ಅಮೆರಿಕದಲ್ಲಿ ಡೆಮೋಕ್ರಾಟರಂತೂ ಫೇಸ್‌ಬುಕ್‌ನ ಮೇಲೆ ಮುಗಿಬಿದ್ದಿದ್ದಾರೆ. ಇಟಲಿ ಸರ್ಕಾರವಂತೂ ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹರಡುವುದಕ್ಕೆ ಸಂಬಂಧಿಸಿದಂತೆ ಕಾನೂನು ತರುವುದಕ್ಕೆ ಮುಂದಾಗಿದೆ. ಜರ್ಮನಿಯ ಚುನಾವಣೆಯಲ್ಲಿಯೂ ಸುಳ್ಳು ಸುದ್ದಿಗಳನ್ನು ಹರಡುವುದಕ್ಕೆ ಫೇಸ್‌ಬುಕ್ ಬಳಕೆಯಾಗುತ್ತಿದೆ ಎಂಬುದು ವರದಿಯಾಗುತ್ತಿದ್ದಂತೆಯೇ ಸ್ವತಃ ಮಾರ್ಕ್ ಝಕರ್‌ಬರ್ಗ್ ಎಚ್ಚೆತ್ತುಕೊಂಡು ಸುಳ್ಳು ಸುದ್ದಿಗಳನ್ನು ನಿಯಂತ್ರಣದ ಪ್ರಯೋಗವನ್ನು ಜರ್ಮನಿಗೂ ವಿಸ್ತರಿಸಿದ್ದಾರೆ.

ಈ ಬೆಳವಣಿಗೆಗಳು ಮತ್ತೊಂದು ಬಗೆಯ ಸಮಸ್ಯೆಯನ್ನು ಸೃಷ್ಟಿಸುವ ಸಾಧ್ಯತೆ ಇದೆ. ಸುಳ್ಳನ್ನು ಪತ್ತೆ ಹಚ್ಚುವ ಕೆಲಸವನ್ನು ಸಾಫ್ಟ್‌ವೇರ್‌ಗಳಿಗೆ ನೀಡುವ ಯೋಜನೆ ಸಿಲಿಕಾನ್ ವ್ಯಾಲಿಯ ಬುದ್ಧಿವಂತರದ್ದು. ಈವರೆಗಿನ ಅನುಭವವನ್ನು ಇಟ್ಟುಕೊಂಡು ನೋಡಿದರೆ ಈ ಸಾಫ್ಟ್‌ವೇರ್ ಪೊಲೀಸ್‌ಗಿರಿಯಿಂದ ಅನಾಹುತಗಳಾಗುವುದೇ ಹೆಚ್ಚು.

ಅಸ್ಸಾಮ್‌ನಲ್ಲಿರುವ ‘ಚುತಿಯಾ’ ಎಂಬ ಸಮುದಾಯವನ್ನೇ ಫೇಸ್‌ಬುಕ್‌ ‘ಅಶ್ಲೀಲ’ ಎಂದು ಹೇಳಿತ್ತು. ನಮ್ಮ ಮಹಾಕಾವ್ಯಗಳಲ್ಲಿರುವ ಪವಾಡಗಳ ವರ್ಣನೆಯನ್ನೆಲ್ಲಾ ಸಾಫ್ಟ್‌ವೇರ್‌ಗಳು ‘ಸುಳ್ಳು ಸುದ್ದಿ’ಯ ಪಟ್ಟಿಗೆ ಸೇರಿಸಿದರೂ ಆಶ್ಚರ್ಯ ಪಡಬೇಕಾಗಿಲ್ಲ. ಇದಕ್ಕಿಂತ ಹೆಚ್ಚಾಗಿ ಭಯಪಡಬೇಕಾದ ಮತ್ತೊಂದು ಸಂಗತಿ ಇದೆ.

ಸುದ್ದಿಯ ವಿಶ್ವಾಸಾರ್ಹತೆಯನ್ನು ನಿಗದಿ ಪಡಿಸಲು ಈ ಬಗೆಯ ಸಾಫ್ಟ್‌ವೇರ್‌ಗಳು ಬಳಸುವುದು ‘ಸುದ್ದಿಮೂಲ’ಗಳನ್ನು.  ಈ ವಿಶ್ವಾಸಾರ್ಹ ಸುದ್ದಿಮೂಲಗಳನ್ನು ಹೇಗೆ ನಿಗದಿ ಪಡಿಸಲಾಗುತ್ತದೆ? ಈ ನಿರ್ಧಾರ ಕೈಗೊಳ್ಳುವುದಕ್ಕೆ ಸಾಮಾಜಿಕ ಜಾಲತಾಣಗಳು ಬಳಸುವ ಮಾನದಂಡವೇನು ಎಂಬ ಪ್ರಶ್ನೆಗಳಿಗೆ ಇನ್ನೂ ಉತ್ತರ ದೊರೆತಿಲ್ಲ. ಸುದ್ದಿಯ ಕ್ಷೇತ್ರವನ್ನು ಆಳುತ್ತಿರುವ ಕೆಲವೇ ಕೆಲವು ಜಾಗತಿಕ ದೈತ್ಯರಷ್ಟೇ ‘ನಿಜ ಸುದ್ದಿ’ಯನ್ನು ಕೊಡುವವರಾಗಿಬಿಟ್ಟರೆ ಬಡವಾಗುವುದು ತೃತೀಯ ಜಗತ್ತಿನ ಸುದ್ದಿಮೂಲಗಳು.

ಇಂಟರ್ನೆಟ್ ದೈತ್ಯರೆಂದು ಗುರುತಿಸುವ ಕಂಪೆನಿಗಳು ತಮಗಿಷ್ಟವಾಗುವ ರಾಜಕೀಯ ಸಿದ್ಧಾಂತಕ್ಕೆ ಅನುಗುಣವಾಗಿ ಸುದ್ದಿಯ ನೈಜತೆಯನ್ನು ನಿರ್ಧರಿಸಿದರಂತೂ ಸತ್ಯೋತ್ತರ ಕಾಲಘಟ್ಟದ ಸಮಸ್ಯೆಗಳು ಮತ್ತಷ್ಟು ಸಂಕೀರ್ಣವಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT