ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಸಂಸ್ಥೆ: ಸಾಧನೆಯ ಮಾಪನಕ್ಕೆ ಬೇಡ ಚಿಂತೆ

Last Updated 17 ಸೆಪ್ಟೆಂಬರ್ 2012, 19:30 IST
ಅಕ್ಷರ ಗಾತ್ರ

ಸಾಧನೆ ಎಂದರೆ ಎಷ್ಟು ಯಶಸ್ವಿಯಾಗಿ ಕಾರ್ಯರೂಪಕ್ಕೆ ಬಂದಿದೆ ಎಂಬುದನ್ನು ಆಧರಿಸಿ `ಅದೊಂದು ಕ್ರಿಯೆ, ಕಾರ್ಯಭಾರ ಅಥವಾ ಕಾರ್ಯಾಚರಣೆ~ ಎಂದು ಪದಕೋಶ ವಿವರಿಸುತ್ತದೆ.

ಇತ್ತೀಚೆಗೆ ರಾಜ್ಯದ ಮಾಜಿ ಮುಖ್ಯಮಂತ್ರಿಯೊಬ್ಬರು, ಇನ್ನು ಮುಂದೆ ತಾವು ನಿಯಮಿತವಾಗಿ ವಿವಿಧ ಜಿಲ್ಲೆಗಳು ಮತ್ತು ರಾಜ್ಯದ ಸಾಧನೆಯ ಮೌಲ್ಯಮಾಪನ ಮಾಡುವುದಾಗಿ ಪ್ರಕಟಿಸಿದರು. ಸರ್ಕಾರಿ ಸಂಸ್ಥೆಗಳ ಸಾಧನೆಯ ಬಗ್ಗೆ ಆಸಕ್ತಿ ಉಳ್ಳವನಾಗಿ ಮತ್ತು ಆ ವಿಷಯದಲ್ಲಿ ಕೊಂಚ ಪರಿಣತಿ ಹೊಂದಿದವನಾಗಿ ಅವರ ಈ ತೀರ್ಮಾನ ನನಗೆ ಸ್ವಾಗತಾರ್ಹ ಬೆಳವಣಿಗೆಯಾಗಿ ಕಂಡಿತು.
 
ಆದರೆ ದುರದೃಷ್ಟವಶಾತ್ ಈ ವಿಷಯದಲ್ಲಿ ನಿರಾಸೆ ಕಾದಿತ್ತು. ಮೈಸೂರಿಗೆ ಭೇಟಿ ನೀಡಿದ್ದ ಅವರು ಕೇವಲ ಒಂದು ಗಂಟೆಗಿಂತಲೂ ಕಡಿಮೆ ಅವಧಿಯಲ್ಲಿ ಜಿಲ್ಲೆಯ ಎಲ್ಲ ಇಲಾಖೆಗಳ ಮೌಲ್ಯಮಾಪನ ಕಾರ್ಯವನ್ನು ಪೂರೈಸಿದ್ದರು. ಇದು ಹೇಗೆ ಸಾಧ್ಯ ಎಂದು ನನಗೆ ಅಚ್ಚರಿಯಾಯಿತು. ಬಳಿಕ ಇಲ್ಲಿ ನಿಜವಾದ ಪರಿಶೀಲನೆಗಿಂತ ಪ್ರಚಾರದ ಉದ್ದೇಶವೇ ಹೆಚ್ಚಾಗಿದೆ ಎಂಬುದು ಅರಿವಾಯಿತು.

ಕಾಕತಾಳೀಯ ಎಂಬಂತೆ, ರಾಜ್ಯ ಸರ್ಕಾರ ಸಹ ತನ್ನ ಪ್ರಮುಖ ಸಚಿವಾಲಯಗಳ ಸಾಧನೆಯನ್ನು ಒರೆಗೆ ಹಚ್ಚಲು `ಫಲಿತಾಂಶ ಚೌಕಟ್ಟಿನ ದಾಖಲೆ~ ಸಿದ್ಧಪಡಿಸುವ ಕಾರ್ಯವನ್ನು ಆರಂಭಿಸಿದೆ. ಈ ಪ್ರಕ್ರಿಯೆಯಲ್ಲಿ ನಾನು ಸಹ ಗುರುತಿಸಿಕೊಂಡಿರುವುದರಿಂದ ಸರ್ಕಾರದ ಈ ಉದ್ದೇಶ ಮತ್ತು ಸ್ವತಃ ನೇತೃತ್ವ ವಹಿಸಿರುವ ಸಚಿವಾಲಯಗಳ ಪ್ರಗತಿ ಮಾಪನ ಮಾಡುವ ಅಧಿಕಾರಶಾಹಿಯ ನಿರ್ಧಾರದಿಂದ ನಾನು ಪ್ರಭಾವಿತನಾದೆ.
 
ಆದರೆ ಇದರ ಜೊತೆಗೆ, ಬಹಳಷ್ಟು ಸರ್ಕಾರಿ ನೌಕರರಿಗೆ ಸಾಧನೆ ಮತ್ತು ಅದನ್ನು ಅಳೆಯುವ ವಿಧಾನದ ಬಗ್ಗೆ ಅರೆಬರೆ ಜ್ಞಾನ ಇರುವುದು  ಮಾತುಕತೆಯ ಸಂದರ್ಭದಲ್ಲಿ ನನಗೆ ಮನದಟ್ಟಾಯಿತು.

ಬಹುತೇಕರಿಗೆ ಸಾಧನೆಯ ಬಗ್ಗೆ ಅವ್ಯಕ್ತವಾದ ಅರಿವಿರುತ್ತದೆ. ಆಗಬೇಕಾದ್ದು ಏನೋ ಆಗುತ್ತಿದೆ ಎಂಬುದನ್ನು ನಾವು  ಅರ್ಥ ಮಾಡಿಕೊಳ್ಳುತ್ತೇವೆ. ಅತ್ಯಂತ ಸಣ್ಣ ವಯಸ್ಸಿನಿಂದಲೇ ಸಾಧನೆ ಹಾಗೂ ಗುಣಮಟ್ಟವನ್ನು ಶ್ಲಾಘಿಸುವುದನ್ನು ನಾವು ಕಲಿಯುತ್ತೇವೆ. ಹೀಗೆ ಅವ್ಯಕ್ತವಾಗಿ ನಾವು ಅರ್ಥ ಮಾಡಿಕೊಂಡದ್ದನ್ನು ರಚನಾತ್ಮಕವಾಗಿ ಹೇಗೆ ಅಳೆಯಬಹುದು?, ಸರ್ಕಾರಿ ವಲಯದಲ್ಲಿ ಯಾರಾದರೂ ನಿಜವಾಗಲೂ ಸಾಧನೆಯನ್ನು ಅಳೆಯಲು ಸಾಧ್ಯವೇ?

ವ್ಯಕ್ತಿಗಳು, ತಂಡಗಳು ಅಷ್ಟೇಕೆ ಒಂದಿಡೀ ಸಂಘಟನೆಯ ಸಾಧನೆಯನ್ನು ಅಳೆಯುವುದರಲ್ಲಿ ಮುಂಚೂಣಿಯಲ್ಲಿರುವ ಖಾಸಗಿ ವಲಯದಿಂದ ನಾವು ಸಾಕಷ್ಟು ಕಲಿಯಬಹುದು. ಆದರೆ ಸರ್ಕಾರಿ ವಲಯದ ಕಾರ್ಯನಿರ್ವಹಣೆ  ಭಿನ್ನವಾಗಿದ್ದು ಅದು ಹೆಚ್ಚಾಗಿ ಸಮಾನತೆಯನ್ನು ಪ್ರತಿಪಾದಿಸಬೇಕಾಗುತ್ತದೆ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು. ಪವಿತ್ರ ಸರ್ಕಾರಿ ವಲಯವಾಗಿರುವ ಕಾರಣದಿಂದಲೇ ಅದು ಹೆಚ್ಚು ಹೊಣೆಗಾರಿಕೆ ಮತ್ತು ಪಾರದರ್ಶಕವಾಗಿ ಇರಬೇಕಾಗುತ್ತದೆ.

ವಿರೋಧಾಭಾಸದ ಸಂಗತಿಯೆಂದರೆ ಇವು ಸಾಧನೆಯ ಪ್ರೇರಕ ಅಂಶಗಳಾಗಿ ನಮಗೆ ಕಂಡುಬರುತ್ತಿಲ್ಲ. ತನ್ನ ವ್ಯವಸ್ಥೆಯಲ್ಲಿ ಮಿತಿಯಿಲ್ಲದ ಮೂಲಗಳನ್ನು ಹೊಂದಿರುವ ಕಾರಣದಿಂದಲೇ ಸರ್ಕಾರಿ ವಲಯ ಆಗಿಂದಾಗ್ಗೆ ಅಸಮರ್ಥ ಹಾಗೂ ಅಪಾರದರ್ಶಕವಾದ ಮಾರ್ಗವನ್ನು ಹಿಡಿಯುತ್ತದೆ.
 
ಇಂತಹ ಸಂಕೀರ್ಣ ಪರಿಸ್ಥಿತಿಯಲ್ಲಿ ಸಾಧನೆಯನ್ನು ಅಳೆಯುವವರು ಆ ಕಾರ್ಯಕ್ರಮದ ಬಗ್ಗೆ ಸಾಕಷ್ಟು ಜ್ಞಾನ ಹೊಂದಿರಲೇಬೇಕಾಗುತ್ತದೆ, ದಕ್ಷರಾಗಿರ ಬೇಕಾಗುತ್ತದೆ, ನಿಯೋಜಿತ ಪರಿಕರಗಳ ಬಗ್ಗೆ ಅವರಿಗೆ ಮಾಹಿತಿ ಇರಬೇಕಾಗುತ್ತದೆ,  ಇಂತಹ ಕಾರ್ಯಕ್ಕೆ ಪೂರಕವಾಗುವ ಸರಳವಾದ ಐದು ಹಂತಗಳನ್ನು ಅನುಕ್ರಮವಾಗಿ ನಾನಿಲ್ಲಿ ವಿವರಿಸಿದ್ದೇನೆ.

1. ಸಾಧನೆಯ ಅರ್ಥ ಗ್ರಹಿಕೆ:
ಇದೊಂದು ಅತ್ಯಂತ ನಿರ್ಣಾಯಕವಾದ ಹಂತ ಎಂದು ನಾನು ಪರಿಗಣಿಸುತ್ತೇನೆ. ವ್ಯಕ್ತಿಗಳಾಗಿ, ತಂಡಗಳಾಗಿ ಮತ್ತು ಒಂದು ಸಂಘಟನೆಯಾಗಿ ಸಾಧನೆ ಎಂದರೇನು ಎಂಬುದನ್ನು  ಅರ್ಥ ಮಾಡಿಕೊಂಡ ನಂತರವಷ್ಟೇ ಅದರ ಮಾಪನ ಕಾರ್ಯ ಸಾಧ್ಯ.
 
ಈ ಅರ್ಥವು ನಿರ್ದಿಷ್ಟವಾದ ಪರಿಸ್ಥಿತಿಗೆ ಅನುಗುಣವಾಗಿ ಇರಬೇಕು ಮತ್ತು ಸಂಘಟನೆಯ ಧ್ಯೇಯ ಹಾಗೂ ಪ್ರಮುಖ ಉದ್ದೇಶಗಳನ್ನು ಧ್ವನಿಸಬೇಕು. ಬಹುತೇಕ ಸಂಸ್ಥೆಗಳು ತಾವು ಮಾಪನ ಮಾಡಿಕೊಂಡದ್ದನ್ನಷ್ಟೇ ನಿರ್ವಹಿಸುತ್ತವೆ. ಸಾಧನೆಗೆ  ಸೂಕ್ತವಾದ ಅರ್ಥ ಕಂಡುಕೊಂಡಾಗ ಆ ಸಂಸ್ಥೆಯಿಂದ ಉತ್ತಮ ಹಾಗೂ ಹೆಚ್ಚು ಸಂವೇದನಾಶೀಲ ನಿರ್ವಹಣೆ ಸಾಧ್ಯವಾಗುತ್ತದೆ.

ಸಾಧನೆ ಎಂಬುದು ಒಬ್ಬೊಬ್ಬರಿಗೆ ಒಂದೊಂದು ಅರ್ಥಗಳನ್ನು ಕೊಡಬಹುದು. ಒಳಗೊಂಡ ವಿಷಯ, ಪ್ರಕ್ರಿಯೆ, ಚಟುವಟಿಕೆ ಅಥವಾ ಉತ್ಪಾದನೆಯಂತಹ ಯಾವ ದೃಷ್ಟಿಕೋನದಿಂದ ವ್ಯವಸ್ಥೆಯನ್ನು ನೋಡಲಾಗುತ್ತಿದೆ ಎಂಬುದರ ಮೇಲೆಯೂ ಸಾಧನೆಯ ಅರ್ಥ ಬದಲಾಗುತ್ತಾ ಹೋಗುತ್ತದೆ. ಜನ ಫಲಿತಾಂಶದ ಮಟ್ಟ ಆಧರಿಸಿ ಸಾಧನೆಯನ್ನು ನೋಡಲು ಮುಂದಾಗುತ್ತಾರೆ.

ಇದು ನಿಶ್ಚಿತವಾಗಿಯೂ ಪರಿಣಾಮದ ಮೌಲ್ಯಮಾಪನಕ್ಕೆ ನೆರವಾಗಬಹುದು. ಆದರೆ ವ್ಯವಸ್ಥೆಯ ಸಾಮರ್ಥ್ಯವನ್ನು ಒರೆಗೆ ಹಚ್ಚಲು ಅಥವಾ ಅದರ ಚಾಲನಾ ಪ್ರಕ್ರಿಯೆಯನ್ನು ಸೆರೆಹಿಡಿಯಲು ಅದರಿಂದ ಸಾಧ್ಯವಾಗದು. ಸಾಧನೆಗೆ ಒಳ್ಳೆಯ ಅರ್ಥ ಕಂಡುಕೊಂಡಾಗ ವ್ಯವಸ್ಥೆಯಲ್ಲಿ ಪಾಲ್ಗೊಂಡಿರುವ ಎಲ್ಲರನ್ನೂ ಒಳಗೊಂಡ ಕಾಯಸೂರ್ಚಿ ರೂಪಿಸಲು ಸಾಧ್ಯವಾಗುತ್ತದೆ.

ಬಳಿಕ ಅದನ್ನು ಒಂದು ಸಲಕರಣೆಯ ರೀತಿಯಲ್ಲಿ ಮೇಲ್ವಿಚಾರಣೆ ಮತ್ತು ಮೌಲ್ಯಮಾಪನ ಮಾಡಲು, ಭವಿಷ್ಯದ ಯೋಜನೆಗಳನ್ನು ರೂಪಿಸಲು ಬಳಸಿಕೊಳ್ಳಬಹುದು. ಸರ್ಕಾರಿ ಸಂಸ್ಥೆಗಳಿಗೆ ಇರುವ  ಪ್ರಮುಖ ಸವಾಲೆಂದರೆ ನಾಗರಿಕರಿಗೆ ಅದು ಒದಗಿಸುವ ಸೇವೆಯ ಮಾನದಂಡದ ನಿರ್ಧಾರ.
 
ತಮ್ಮ ಸರ್ಕಾರಗಳು ಹೇಗಿರಬೇಕು ಎಂಬ ಬಗ್ಗೆ ನಾಗರಿಕರು ತಮ್ಮದೇ ದೃಷ್ಟಿಕೋನವನ್ನು ಹೊಂದಿರುತ್ತಾರೆ. ನಾಗರಿಕರ ಪಾಲ್ಗೊಳ್ಳುವಿಕೆಯ ಪ್ರಮಾಣ ಮತ್ತು ಅವರಿಗಿರುವ ಅಧಿಕಾರ ವ್ಯಾಪ್ತಿಯು ಉತ್ತಮ ಸಾಧನಾ ವ್ಯವಸ್ಥೆ ರೂಪಿಸಲು ನೆರವಾಗುತ್ತದೆ. ಹಲವು ಸರ್ಕಾರಿ ಸಂಸ್ಥೆಗಳು ತಮ್ಮ ಸಾಧನೆಯ ಅರ್ಥಕ್ಕೆ ತಕ್ಕಂತೆ ರೂಪಿಸಿರುವ ನಾಗರಿಕ ಸನ್ನದನ್ನು ಈಗ ಪ್ರಕಟಿಸುತ್ತಿವೆ.

2. ಮಾಪನದ ನಿರ್ಧಾರ: ಸಾಧನೆಯನ್ನು ಅಳತೆ ಮಾಡುವ ಪ್ರಶ್ನೆ ಬಂದಾಗ ಅದರ ಅರ್ಥ ವಿವರಣೆ ಇನ್ನಷ್ಟು ನಿರ್ಣಾಯಕವಾಗುತ್ತದೆ. ನಿರೀಕ್ಷೆಯಂತೆ,  ಸಾಧನೆಯ ಅರ್ಥ ಮತ್ತು ಆ ಸಂಸ್ಥೆಯಲ್ಲಿ ಮುಖ್ಯವಾಗಿ ಏನನ್ನು ಒರೆಗೆ ಹಚ್ಚಬೇಕು ಎಂಬುದನ್ನು ಆಧರಿಸಿ ಮಾಪನವೂ ಬದಲಾಗುತ್ತದೆ. ಸಾಧನೆಯ ಅಳತೆಗೋಲು ಪರಿಸ್ಥಿತಿಗೆ ಅನುಗುಣವಾಗಿ ಇರಬೇಕು ಮತ್ತು ಬಳಕೆದಾರರ ಸಾಮರ್ಥ್ಯವನ್ನು ಗಣನೆಗೆ ತೆಗೆದುಕೊಂಡಿರಬೇಕು.

ಅಳತೆಗೋಲುಗಳನ್ನು ಅಭಿವೃದ್ಧಿಪಡಿಸಿಕೊಂಡ ಬಳಿಕ ಅದರ ಸತತ ಮೌಲ್ಯಮಾಪನದ ಅಗತ್ಯವನ್ನು ಮನಗಾಣದೆ ಬಹುತೇಕ ಸಂಸ್ಥೆಗಳು ನಿಷ್ಕ್ರಿಯವಾಗಿ ಬಿಡುತ್ತವೆ. ಸಂಸ್ಥೆಯ ಲಕ್ಷ್ಯ ಮತ್ತು ಪರಿಸ್ಥಿತಿ ಬದಲಾದಂತೆ ಅಳತೆಗೋಲು ಸಹ ವಿಕಸನಗೊಳ್ಳುತ್ತಾ, ಬದಲಾಗುತ್ತಾ, ಸಂಸ್ಕರಣೆಗೊಳ್ಳುತ್ತಾ ಹೋಗುತ್ತದೆ.

ಸಂಸ್ಥೆ ಬೆಳೆದಂತೆಲ್ಲಾ, ಸಿಬ್ಬಂದಿ ಪ್ರಬುದ್ಧರಾದಂತೆಲ್ಲಾ ಸರಳವಾದ ಅಳತೆಗೋಲುಗಳಿಂದ ಆರಂಭಿಸಿ ಅದನ್ನು ವಿಸ್ತರಿಸಿಕೊಳ್ಳುತ್ತಾ ಹೋಗುವುದು ಒಳ್ಳೆಯದು. ಬಹುತೇಕ ಸಾಧನಾ ಪ್ರಕ್ರಿಯೆ ವಿಫಲವಾಗುವುದು ಅಳತೆಗೋಲು ಉತ್ತಮವಾಗಿಲ್ಲ ಅಥವಾ ಈ ಪ್ರಕ್ರಿಯೆ ಚುರುಕಾಗಿಲ್ಲ ಎಂಬ ಕಾರಣಕ್ಕಲ್ಲ, ಮಾಪನ ಕಾರ್ಯದಲ್ಲಿನ ಸಂಕೀರ್ಣತೆಯಿಂದ, ಸರಳವಾಗಿ ಅದನ್ನು ಅಳವಡಿಸಿಕೊಳ್ಳುವಲ್ಲಿ ಇರುವ ತೊಡಕುಗಳಿಂದ ಮತ್ತು ಈ ಕಾರ್ಯ ಕೈಗೊಳ್ಳುವವರ ಅದಕ್ಷತೆಯಿಂದ.

3. ಮಾಪನ ಕಾರ್ಯ ಮಾಡುವ ವ್ಯಕ್ತಿಗಳು ಮತ್ತು ಸಮಯದ ನಿರ್ಧಾರ: ಬಹುತೇಕ ಸಂಸ್ಥೆಗಳು ಸಾಧನೆಯ ಮಾಪನ ಪ್ರಕ್ರಿಯೆಯ ಮೇಲ್ವಿಚಾರಣೆಗೆ ಅಗತ್ಯವಾದ ಸಮರ್ಪಣಾ ಮನೋಭಾವದ ವ್ಯಕ್ತಿಗಳು ಅಥವಾ ತಂಡದ ಕೊರತೆಯನ್ನು ಎದುರಿಸುತ್ತಿರುತ್ತವೆ.

ಮಾಪನ ಕಾರ್ಯದ ಮೇಲ್ವಿಚಾರಣೆ ಮೇಲ್‌ಸ್ತರದಿಂದಲೇ ಆಗಬೇಕು. ಇದು ಯಾವುದೋ ಖಯಾಲಿಗಾಗಿ ಜಾರಿಗೆ ತಂದಿರುವ ಕಾಯಕ್ರಮವಲ್ಲ, ತನ್ನನ್ನು ತಾನು ಉತ್ತಮಪಡಿಸಿಕೊಳ್ಳುವ ಗಂಭೀರವಾದ ಪ್ರಕ್ರಿಯೆ ಎಂಬುದನ್ನು ಇಡೀ ಸಂಸ್ಥೆ ಅರಿತುಕೊಳ್ಳಬೇಕು.

ಉತ್ತಮ ಫಲಿತಾಂಶ ಸಿಗಬೇಕಾದರೆ ಸಚಿವಾಲಯದ ಪ್ರಧಾನ ಕಾರ್ಯದರ್ಶಿಯೇ ಈ ಹೊಣೆ ಹೊತ್ತುಕೊಳ್ಳಬೇಕು ಎಂಬ ನಿರೀಕ್ಷೆ ಇರುತ್ತದೆ. ಎಲ್ಲ ಲೆಕ್ಕಪರಿಶೋಧನೆ ಮತ್ತು ಮಾಹಿತಿ ಪ್ರಕ್ರಿಯೆಯು ಯಾವುದೇ ಹಸ್ತಕ್ಷೇಪ ಇಲ್ಲದಂತೆ ನಿರಂತರವಾಗಿ ಅವರಿಗೆ ವಿಷಯಗಳನ್ನು, ವಿಶ್ಲೇಷಣೆಯನ್ನು ನೇರವಾಗಿ ತಲುಪಿಸಬೇಕು. ಸಂಸ್ಥೆಯು ಎಚ್ಚರಿಕೆಯಿಂದ ಇರಬೇಕಾದ ಮತ್ತೊಂದು ಅಪಾಯವೆಂದರೆ ಇಂತಹ ಮಾಪನಗಳನ್ನು ಕೈಗೊಳ್ಳಬೇಕಾದ ಕಾಲಾವಧಿ.

ಕೆಲ ನಿರ್ಣಾಯಕ ಪ್ರಕ್ರಿಯೆಗಳಿಗೆ ನಿರಂತರವಾದ ಮೇಲ್ವಿಚಾರಣೆ ಬೇಕಾಗುತ್ತದೆ. ವೆಚ್ಚವು ನಿಗದಿತ ಮಿತಿ ಮೀರಿದಾಗಷ್ಟೇ ಸಂಸ್ಥೆ ಒಳಗೊಳ್ಳುವ ವಿಷಯಗಳ ಮಾಪನ ಮಾಡಬೇಕಾಗಬಹುದು. ಫಲಿತಾಂಶವು ಸಮಯ ಆಧಾರಿತ ಆಗಿರಬಹುದು. ಆದರೆ ಎರಡು ಮಾಪನಗಳ ನಡುವೆ ಸಾಧನೆಗೆ ಅಗತ್ಯವಾದಷ್ಟು ಸಮಯ ನೀಡಲಾಗಿದೆ ಎಂಬುದು ಖಚಿತವಾದ ಬಳಿಕವಷ್ಟೇ ಕೆಲ ವರ್ಷಗಳಿಗೆ ಒಂದಾವರ್ತಿ ಮಾಪನ ಮಾಡಬೇಕಾಗುತ್ತದೆ.
 
ಕಾಲಾವಧಿಯನ್ನು ನಿರ್ಣಯಿಸುವಾಗ ವೆಚ್ಚಕ್ಕೆ ಸಂಬಂಧಿಸಿದ ವಿಷಯಗಳನ್ನು ಸಹ ಗಣನೆಗೆ ತೆಗೆದುಕೊಳ್ಳಬೇಕಾಗುತ್ತದೆ. ಯೋಜಿಸಿದ್ದಕ್ಕಿಂತ ಹೆಚ್ಚಾದ ವೆಚ್ಚದ ಕಾರಣದಿಂದ ಸಾಧನೆಯ ಪ್ರಕ್ರಿಯೆ ಕೊನೆಗಾಣುವಂತೆ ಆಗಬಾರದು.

4. ಪರಾಮರ್ಶೆ ಪ್ರಕ್ರಿಯೆ: ವ್ಯಕ್ತಿಯ ಅಥವಾ ಸಂಸ್ಥೆಯ ಸಾಧನೆಯ ಬೇಡಿಕೆಯು ಅತ್ಯಂತ ನಿಖರವಾದ ಪ್ರಕ್ರಿಯೆಯಾಗಿದ್ದು ಅದು ಕಾರ್ಯರೂಪಕ್ಕೆ ಬರಲು ಬರೀ ನಿರ್ವಹಣಾ ಜ್ಞಾನ ಇದ್ದರಷ್ಟೇ ಸಾಲದು. ಶಿಸ್ತು, ಬದ್ಧತೆ, ಬಲವಾದ ರಾಜಕೀಯ ಇಚ್ಛಾಶಕ್ತಿ ಬೇಕಾಗುತ್ತದೆ.

ಅದಕ್ಕೆ ಎಲ್ಲ ಕಾಲಕ್ಕೂ ನಿರಂತರವಾಗಿ ಮೌಲ್ಯಮಾಪನಕ್ಕೆ ಒಳಪಡಿಸುವ, ಸಂಸ್ಕರಿಸುವ ಹಾಗೂ ಪ್ರಗತಿಗೆ ಪೂರಕವಾಗುವ ದಾರ್ಶನಿಕ ನಾಯಕತ್ವ ಅಗತ್ಯ. ಸಾಮಾನ್ಯವಾಗಿ ಶಿಸ್ತು ಮತ್ತು ತೀವ್ರತೆ ಕ್ಷೀಣಿಸುವುದರಿಂದ ಸಾಧನಾ ಪ್ರಕ್ರಿಯೆ ವಿಫಲವಾಗುತ್ತದೆ. ವ್ಯವಸ್ಥೆ ಫಲಿತಾಂಶ ಕೊಡಲು ಸಮರ್ಥವಾಗುವವರೆಗೆ ಕಾಯುವಷ್ಟು ತಾಳ್ಮೆ ಮತ್ತು ಅವಿರತ ಪ್ರಯತ್ನ ನಮಗೆ ಇರಲೇಬೇಕಾಗುತ್ತದೆ.

ಸಾಧನೆಯ ಮಾಪನವೆಂದರೆ ತಕ್ಷಣವೇ ಸಿದ್ಧಗೊಂಡು ದಿಢೀರ್ ತೃಪ್ತಿ ತಂದುಕೊಡುವ `ಇನ್‌ಸ್ಟೆಂಟ್ ಕಾಫಿ~ಯಂತಲ್ಲ. ಕಾರ್ಯಾರಂಭ ಮಾಡಲು, ಅಭಿವೃದ್ಧಿ ಹೊಂದಲು, ಪ್ರಬುದ್ಧವಾಗಲು ಮತ್ತು ಸಂಘಟಿತ ಸಂಸ್ಕೃತಿಯಾಗಿ ಹೊರಹೊಮ್ಮಲು ಅದು ಸಮಯ ತೆಗೆದುಕೊಳ್ಳುತ್ತದೆ. ಇಡೀ ಪ್ರಕ್ರಿಯೆ ಬೇರು ಬಿಡುವವರೆಗೂ ನಿರಂತರ, ಸಮಂಜಸ ಹಾಗೂ ಗಂಭೀರವಾದ ನಾಯಕತ್ವ ಬೇಕಾಗುತ್ತದೆ.
 
ಬರೀ ಪರಾಮರ್ಶೆ ಪ್ರಕ್ರಿಯೆಯನ್ನು ರೂಪಿಸುವುದಷ್ಟೇ ಅಲ್ಲ ಆರಂಭಿಕ ಹಂತಗಳಲ್ಲಿ ಅದರ ಜಾರಿಗೆ ಸಹಕರಿಸುವ ತಜ್ಞರ ಸಲಹೆಯೂ ಇರಬೇಕಾಗುತ್ತದೆ. ನಾಯಕ ಪಡೆ ಇದನ್ನೊಂದು ಪವಿತ್ರ ಹೊಣೆಗಾರಿಕೆ ಎಂದು ಭಾವಿಸಬೇಕು. ಸಾಧನೆಯೇ ಆಗಿರಲಿ ಅಥವಾ ವ್ಯತ್ಯಾಸಗಳೇ ಇರಲಿ ಅದನ್ನು ಸಾರ್ವಜನಿಕವಾಗಿ ಬಹಿರಂಗಪಡಿಸುವ ಇಚ್ಛಾಶಕ್ತಿ ಹೊಂದಿರಬೇಕಾಗುತ್ತದೆ. ಆಗಿಂದಾಗ್ಗೆ ಆಗುವ ವ್ಯತ್ಯಾಸಗಳನ್ನು ಯಶಸ್ಸು ಅಥವಾ ವೈಫಲ್ಯ ಎಂದು ಪರಿಗಣಿಸಬಾರದು. ಬಹುತೇಕ ಸಂದರ್ಭಗಳಲ್ಲಿ ಅದನ್ನು `ಪ್ರಗತಿಯಲ್ಲಿರುವ ಕಾರ್ಯ~ ಎಂದೇ ಪರಿಗಣಿಸಬೇಕು.

5. ಮಾಪನ ಕಾರ್ಯದ ಅನುಸರಣೆ: ಪ್ರತಿಫಲ ಮತ್ತು ಶಿಕ್ಷೆಯು ಸಾಧನೆಯಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಸರ್ಕಾರಿ ಕೆಲಸ ಶಾಶ್ವತವಾದುದಾಗಿದ್ದು ತಮ್ಮ ವೃತ್ತಿ ಬೆಳವಣಿಗೆಯು ಅದರ ಸಾಧನೆಯನ್ನು ಅವಲಂಬಿಸಿರುವುದಿಲ್ಲ ಎಂಬ ಭಾವನೆ ಜನರಲ್ಲಿ ಇದೆ. `ಸಾಧಾರಣ ದರ್ಜೆ~ ಎಂಬುದು ಸರ್ಕಾರಿ ಸಂಸ್ಥೆಗೆ ಪರ್ಯಾಯವಾದ ಪದವಾಗಿ ಇರಬೇಕಾದ ಅಗತ್ಯವಿಲ್ಲ ಎಂಬುದನ್ನು ಅವರಿಗೆ ಮನದಟ್ಟು ಮಾಡಿಕೊಡಬೇಕು ಮತ್ತು ಸಾಧನೆಯ ಮೌಲ್ಯಮಾಪನ ಮಾಡುವ ಸಂಸ್ಕೃತಿಯನ್ನು ಸೃಷ್ಟಿಸಬೇಕು.

ಒಳ್ಳೆಯ ಸಾಧನೆಗೆ ಪ್ರತಿಫಲ ನೀಡಿ, ಕಳಪೆ ಕಾರ್ಯಕ್ಕೆ ಶಿಕ್ಷೆ ಆಗುವಂತಾದಾಗ ಮಾತ್ರ ಇದು ಸಾಧ್ಯವಾಗುತ್ತದೆ. ಇದನ್ನು ಆರಂಭಿಸಲು ಅಗತ್ಯವಾದ ಸರಳೋಪಾಯವೆಂದರೆ ಉತ್ತಮ ಮತ್ತು ಕೆಟ್ಟ ಕಾರ್ಯಗಳೆರಡನ್ನೂ ಬಹಿರಂಗಪಡಿಸುವುದು.

ಸಾಧನೆಯನ್ನು ಸಾಮಾನ್ಯವಾಗಿ ಮತ್ತೊಂದು ನಿರ್ವಹಣಾ ಪ್ರಕ್ರಿಯೆ ಮತ್ತು ಹೊಸ ಭ್ರಾಂತಿ ಎಂಬಂತೆ ನೋಡಲಾಗುತ್ತದೆ. ಅದು ಅಧಿಕಾರ ಸ್ಥಾಪನೆ ಹಾಗೂ  ನಿಯಂತ್ರಣದ ಭಾಗವಲ್ಲ; ಇದನ್ನೂ ಮೀರಿ ಮಾನವನ ಸಾಧ್ಯತೆಗಳನ್ನು ಉದ್ದೀಪಿಸುವ, ಚಾಲನೆ ನೀಡುವ ಮತ್ತು ಉನ್ನತಿಗೆ ಕೊಂಡೊಯ್ಯುವ ದೃಢವಾದ ಸಾಮರ್ಥ್ಯ ಎಂದು ಪರಿಗಣಿಸಬೇಕು.

ನಿಮ್ಮ ಅನಿಸಿಕೆ ತಿಳಿಸಿ:
editpagefeedback@prajavani.co.in

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT