ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಿವಿಲ್ ವಂಚಕರ ನಮೂನೆಗಳು...

Last Updated 9 ಜುಲೈ 2011, 19:30 IST
ಅಕ್ಷರ ಗಾತ್ರ

ಶಿಶುಕವಿಯೂ ಕಲೆಗಾರರೂ ಆಗಿದ್ದ ಒಬ್ಬರಿದ್ದರು. ನಾಟಕ ಹಾಗೂ ಕಲಾಕ್ಷೇತ್ರದ ಕೆಲವು ಗೆಳೆಯರು ಅವರದ್ದೊಂದು ಸಮಸ್ಯೆ ಇದೆ ಎಂದು ಪ್ರಸ್ತಾಪಿಸಿದರು.

ಅದು 1994-95ನೇ ಇಸವಿಯ ಕಾಲ. ಪದ್ಮನಾಭ ನಗರದಲ್ಲಿ ಆ ಕವಿ ನಿವೇಶನವೊಂದನ್ನು ಖರೀದಿಸಿ ಮನೆ ಕಟ್ಟತೊಡಗಿದ್ದರು. ಅದೇ ತಾನೆ ತಾರಸಿಗೆಂದು ಸಿಮೆಂಟ್ ಕಾಂಕ್ರೀಟ್ ಹಾಕಲಾಗಿತ್ತು. ಆ ಸಂದರ್ಭದಲ್ಲಿ ಕೆಲವರು ಬಂದು ಆ ಜಾಗ ತಮ್ಮದೆಂದು ವಾದಿಸಿದರು.

ಆತಂಕ ಗೊಂಡ ಕವಿ ಪೊಲೀಸ್ ಠಾಣೆಗೆ ಹೋದರು. ಅಲ್ಲಿಗೆ ಬಂದಿದ್ದ ಗುಂಪಿನವರೂ ಅವರ ಜೊತೆ ಇದ್ದರು. ಇಬ್ಬರ ಬಳಿಯೂ ಒಂದೇ ನಿವೇಶನದ ದಾಖಲೆಗಳಿದ್ದವು. ಸಿವಿಲ್ ಕೇಸ್ ಆದ್ದರಿಂದ ಪೊಲೀಸರು ತಂತಾವೇ ಬಗೆಹರಿಸಿಕೊಳ್ಳುವಂತೆ ಹೇಳಿ ಅವರನ್ನು ಸಾಗ ಹಾಕಿದ್ದರು. ಆ ಕವಿ ನ್ಯಾಯ ಕೊಡಿಸುವಂತೆ ಭೂಗತ ಲೋಕದ ಕೆಲವು ಬುದ್ಧಿಜೀವಿಗಳ ಬಳಿಗೂ ಹೋದರು. ಅವರು ಹೇಳಿದ ರಾಜಿ ಸಂಧಾನ ನ್ಯಾಯಯುತ ವಾಗಿರಲಿಲ್ಲ. ಜಾಗಕ್ಕೆ ತೆತ್ತ ಬೆಲೆಯ ಮೂರನೇ ಒಂದು ಭಾಗ ಹಣವನ್ನು ಪಡೆದುಕೊಂಡು ಸುಮ್ಮನಾಗಿ ಎಂದು ಅವರು ಹೇಳಿದಾಗ ಆಘಾತವಾಯಿತು. ಮನೆ ಕಟ್ಟಿಸ ಲೆಂದೇ ಬ್ಯಾಂಕು ಮತ್ತಿತರ ಕಡೆ ಲಕ್ಷಾಂತರ ರೂಪಾಯಿ ಸಾಲ ಮಾಡಿಕೊಂಡಿದ್ದ ಆ ಕವಿ ಹಾಗೂ ಅವರ ಪತ್ನಿ ಕುಸಿದುಹೋದರು. ವಿರುದ್ಧ ಇದ್ದ ಗುಂಪು ಬಲಾಢ್ಯ ವಾಗಿತ್ತು. ವಕೀಲರನ್ನು ಕಳಿಸಿ ನ್ಯಾಯಾಲಯದಲ್ಲೇ ಸಮಸ್ಯೆಯನ್ನು ಬಗೆಹರಿಸಿಕೊಳ್ಳುವಂತೆ ಧಮಕಿ ಕೂಡ ಹಾಕಿತ್ತು.

ಈ ಪ್ರಕರಣವನ್ನು ಗೆಳೆಯರು ನನ್ನ ಗಮನಕ್ಕೆ ತಂದರು. ನನ್ನ ವ್ಯಾಪ್ತಿಗೆ ಬರದೇ ಇದ್ದರೂ ಮಾನವೀಯತೆ ದೃಷ್ಟಿಯಿಂದ ನಾನು ದಾಖಲೆಗಳನ್ನು ತರಿಸಿ ಕೂಲಂಕಷವಾಗಿ ಗಮನಿಸಿದೆ. ಕವಿ ನಿಜಕ್ಕೂ ಮೋಸಹೋಗಿದ್ದರು. ಇದ್ದಬದ್ದ ಉಳಿತಾಯದ ಹಣವನ್ನೆಲ್ಲಾ ನಿವೇಶನ, ಮನೆಯ ಮೇಲೇ ಹಾಕಿದ್ದ ಅವರು ಈ ಜಾಗ ಕೈಬಿಟ್ಟರೆ ಬದುಕುವುದೇ ಕಷ್ಟವೆಂದು ಅಲವತ್ತುಕೊಂಡರು. ವಕೀಲರನ್ನು ನೇಮಿಸಿಕೊಳ್ಳಲು ಕೂಡ ಅವರ ಬಳಿ ಹಣವಿರಲಿಲ್ಲ. ಖ್ಯಾತ ವಕೀಲರಾದ ಸಿ.ವಿ. ಸುಧೀಂದ್ರ ಅವರಿಗೆ ಈ ಘಟನೆಯನ್ನು ವಿವರಿಸಿದೆ.

ಹೇಗಾದರೂ ಮಾಡಿ ಆ ಕುಟುಂಬಕ್ಕೆ ನ್ಯಾಯ  ಕೊಡಿಸುವಂತೆ ವಿನಂತಿಸಿಕೊಂಡಾಗ ಅವರೂ ಇಲ್ಲ ಎನ್ನಲಿಲ್ಲ. ಸಾಕಷ್ಟು ಮುತುವರ್ಜಿ ವಹಿಸಿ ಕೇಸನ್ನು ನಡೆಸಿಕೊಡಲು ಮುಂದಾದರು. ಇದನ್ನು ಎದುರಾಳಿ ಗುಂಪು ಗಮನಿಸಿತು. ನಾನು, ಸುಧೀಂದ್ರ ಈ ಪ್ರಕರಣದಲ್ಲಿ ತಲೆ ತೂರಿಸಿರುವುದು ಗೊತ್ತಾದ ನಂತರ ಆ ಗುಂಪಿನವರೆಲ್ಲಾ ರಾಜಿಗೆ ಮುಂದಾದರು.

ಕೆಲವು ಜಾಗಗಳನ್ನು ಅನೇಕರಿಗೆ ಮಾರುವ ದಂಧೆಕೋರರು ಬೆಂಗಳೂರಿನಲ್ಲಿ ಬಹಳ ಹಿಂದಿ ನಿಂದಲೂ ಇದ್ದಾರೆ. ಕವಿಯ ವಿರುದ್ಧ ನಿಂತ ಗುಂಪೂ ಅಂಥವರಿಂದ ಮೋಸಹೋಗಿತ್ತು. ಬೇಕೋ, ಬೇಡವೋ ಭೂಗತಲೋಕದವರ ಸಂಪರ್ಕಕ್ಕೆ ಹೀಗೆ ಬಂದು, ಆಮೇಲೆ ಅಮಾಯಕರಿಗೆ ತೊಂದರೆ ಕೊಡುವ ಅನಿವಾರ್ಯತೆ ಆ ಗುಂಪಿಗೆ ಬಂದಿತ್ತು. ಎಲ್ಲಾ ಉಳಿತಾಯದ ಹಣವನ್ನು ಮನೆ ಮೇಲೆ ಚೆಲ್ಲಿಕೂತ ಕವಿ ದಂಪತಿ ಬದುಕೇ ಮುಗಿಯಿತು ಎಂದುಕೊಂಡಿರುವ ಸ್ಥಿತಿ ಯನ್ನು ಅವರಿಗೆ ಬಿಡಿಸಿ ಹೇಳಿದೆ. ಅಮಾಯಕರಿಗೆ ಮೋಸ ಮಾಡುವುದು ಸರಿಯಲ್ಲ ಎಂದು ಅವರಿಗೆ ಮನದಟ್ಟು ಮಾಡಿಸಿದ ನಂತರ ಮನೆಯ ಜಾಗವನ್ನು ಬಿಟ್ಟುಕೊಟ್ಟರು. ಈಗ ಆ ಕವಿ ಮನೆಯನ್ನು ಪೂರ್ತಿ ಕಟ್ಟಿ, ಗೃಹಪ್ರವೇಶ ಮಾಡಿ, ಅಲ್ಲಿಯೇ ವಾಸ ಮಾಡುತ್ತಿದ್ದಾರೆ.
* * *
ಇಂಥದ್ದೇ ಇನ್ನೊಂದು ಘಟನೆ. ಪರಿಸ್ಥಿತಿ ಮಾತ್ರ ಭಿನ್ನ. ನಾನೊಮ್ಮೆ ನಿಮಿಷಾಂಬ ದೇವಸ್ಥಾನಕ್ಕೆ ಹೋದೆ. ನನ್ನನ್ನು ಗುರುತು ಹಿಡಿದ ದೇವಸ್ಥಾನದ ಅಧಿಕಾರಿ ಯೊಬ್ಬರು ದೇವರ ದರ್ಶನ ಮಾಡಿಸಿ, ತಮ್ಮ ಮನೆಗೆ ಕರೆದುಕೊಂಡು ಹೋದರು. ಅವರ ಸಂಬಂಧಿಯೊಬ್ಬರು ಅಂಗವಿಕಲರಾಗಿದ್ದು, ನಿವೇಶನದ ಸಮಸ್ಯೆಯಲ್ಲಿ ಸಿಲುಕಿರುವುದನ್ನು ಹೇಳಿದರು. ಅವರಿಗೆ ನ್ಯಾಯ ಕೊಡಿಸಬೇಕೆಂಬ ಮನವಿಯನ್ನು ಮುಂದಿಟ್ಟರು.

ಅವರ ಸಂಬಂಧಿ ಮೂಕ ಮಹಿಳೆ. ಕಿವಿ ಕೂಡ ಕೇಳಿಸುತ್ತಿರಲಿಲ್ಲ. ಅಂಥವರಿಗೆ ಅನ್ಯಾಯವಾಗಿದೆ ಎಂದರೆ ಅದು ಅಮಾನವೀಯ. ಮಾಗಡಿ ರಸ್ತೆಯಲ್ಲಿ ನಿವೇಶನ ಕೊಂಡಿದ್ದ ಅವರು ದೂರು ದಾಖಲಿಸಿದರು. ಅವರ ಜಾಗಕ್ಕೆ ಬೇರೆ ಯಾರೋ ಬೇಲಿ ಹಾಕಿಕೊಂಡು, ಅಲ್ಲಿಗೆ ಹೋದರೆ ಹೆದರಿಸುತ್ತಿದ್ದರು. ಕೊಟ್ಟಷ್ಟು ಹಣ ಪಡೆದುಕೊಂಡು ಸುಮ್ಮನೆ ತಮ್ಮ ಹೆಸರಿಗೆ ರಿಜಿಸ್ಟರ್ ಮಾಡಿಕೊಡುವಂತೆ ಪೀಡಿಸುತ್ತಿದ್ದರು. ಡಿಸಿಪಿ ರವಿಕಾಂತೇ ಗೌಡರು ತನಿಖೆ ಮಾಡಿ, ಕ್ರಮ ಕೈಗೊಳ್ಳುವಂತೆ ನನಗೆ ಆದೇಶಿಸಿದರು. ಆ ಮಹಿಳೆಗೆ ನಿವೇಶನ ಒಂದು ದುಃಸ್ವಪ್ನ ದಂತಾಗಿತ್ತು. ಆ ಕಾಲಘಟ್ಟದಲ್ಲಿ ಇದ್ದ ಮಾರುಕಟ್ಟೆ ಬೆಲೆ ಸಿಕ್ಕಿದರೆ ಅದನ್ನು ಮಾರಿ, ನೆಮ್ಮದಿಯಿಂದ ಇರುವುದು ಅವರ ಬಯಕೆಯಾಗಿತ್ತು.

ಆ ಮಹಿಳೆಯನ್ನು ಹೆದರಿಸಿದ್ದವನು ಎಂಜಿನಿಯರಿಂಗ್ ಪದವೀಧರ. ಇದನ್ನು ಕೇಳಿ ನನಗೆ ಆಶ್ಚರ್ಯವಾಯಿತು. ಅವನ ಬಾಯಿ ಬಿಡಿಸಿದೆ. ಬೆದರಿಕೆ ಒಡ್ಡಿದ್ದ ತಂಡದಲ್ಲಿ ರೌಡಿಗಳಿರುವುದು ಸ್ಪಷ್ಟವಾಯಿತು. ಅವರನ್ನು ಕರೆದು, ದಬಾಯಿಸಿದೆ. ಬೇರೆ ಪ್ರಕರಣಗಳಲ್ಲಿ ಗುರುತಾದವರು ಆ ತಂಡದಲ್ಲಿ ಇದ್ದದ್ದರಿಂದ ನನ್ನನ್ನು ಎದುರು ಹಾಕಿಕೊಳ್ಳುವುದು ಸುಲಭವಾಗಿರಲಿಲ್ಲ. ಮಾರುಕಟ್ಟೆ ದರ ಏನಿದೆಯೋ ಆ ಬೆಲೆಗೆ ಆ ನಿವೇಶನವನ್ನು ಮಾರಲು ಅವರಿಗೆ ಬೇಕಾದ ನೆರವು ಕೊಟ್ಟೆ. ಮೊದಲು ಕೊಸರಾಡಿದ ದಂಧೆಕೋರರು ಆಮೇಲೆ ನನ್ನ ಒತ್ತಾಯಕ್ಕೆ ಮಣಿದರು. ಕಡೆಗೂ ನಿವೇಶನವನ್ನು ಮಾರಿಸಿದ್ದಾಯಿತು. ಹೆದರಿಸುತ್ತಿದ್ದ ಯಾರೂ ಅಡ್ಡ ಬರಲು ನಾನು ಅವಕಾಶ ಕೊಡಲಿಲ್ಲ. ಇಕ್ಕಟ್ಟಿನಿಂದ ಬಿಡಿಸಿಕೊಂಡ ಭಾವದಲ್ಲಿ ಆ ಮಹಿಳೆ ನಿರಾಳರಾದರು. ಡಿಸಿಪಿ ರವಿಕಾಂತೇಗೌಡರ ಮುತುವರ್ಜಿ ಹಾಗೂ ಭೂಗತಲೋಕದ ಕುರಿತು ನನಗಿದ್ದ ಅರಿವು ಈ ಪ್ರಕರಣ ಬಗೆಹರಿಸಲು ಕಾರಣವಾಯಿತು.
* * *
ಕನಕಪುರದ ಬಳಿ ಲಂಬಾಣಿ ಕುಟುಂಬಕ್ಕೆ ಪಿತ್ರಾರ್ಜಿತ ಆಸ್ತಿ ಇತ್ತು. ತಂದೆ-ತಾಯಿಯ ಜಮೀನನ್ನು ಮಗ, ಮಗಳು ಮಾರಲು ನಿರ್ಧರಿಸಿದರು. ಆಸ್ತಿಯ ಮೋಹ ದಿಂದಾಗಿ ಕುಟುಂಬದಲ್ಲೇ ಒಳಜಗಳವಿತ್ತು.  ಎಕರೆಗೆ ಐದು ಲಕ್ಷದಂತೆ ಎರಡು ಮೂರು ಎಕರೆ ಜಾಗವನ್ನು ಮಾರಾಟಕ್ಕಿಟ್ಟರು. ಮೀಟರ್ ಬಡ್ಡಿ ವ್ಯವಹಾರ ಮಾಡುತ್ತಿದ್ದ ಬೆಂಗಳೂರಿನ ದಂಧೆಕೋರನೊಬ್ಬ ಜಮೀನು ಖರೀದಿಸಲು ಮುಂದಾದ. ಐದು ಲಕ್ಷವನ್ನು ಮುಂಗಡ ಹಣವೆಂದು ಕೊಟ್ಟ. ಒಪ್ಪಂದವನ್ನು ರಿಜಿಸ್ಟರ್ ಮಾಡಿಸಲೆಂದು ದಿನ ಗೊತ್ತುಪಡಿಸಿದ. ಉಳಿದ ಹಣವನ್ನು ಇಂತಿಂಥ ದಿನ ಕೊಡುತ್ತೇನೆಂದು ಚೀಟಿಯೊಂದರಲ್ಲಿ ಬರೆದುಕೊಟ್ಟು, ಆ ಲಂಬಾಣಿ ಯುವಕ, ಯುವತಿಯನ್ನು ನಂಬಿಸಿದ.

ಒಪ್ಪಂದವನ್ನು ನೋಂದಾಯಿಸಿದ್ದೂ ಆಯಿತು. ಚೀಟಿಯಲ್ಲಿ ಬರೆದುಕೊಟ್ಟ ದಿನಾಂಕವನ್ನೇ ಎದುರು ನೋಡುತ್ತಿದ್ದ ಆ ಕುಟುಂಬದವರು ವಾಯ್ದೆ ಮುಗಿದ ತಕ್ಷಣ ಬಾಕಿ ಹಣ ಕೊಡುವಂತೆ ಮೀಟರ್ ಬಡ್ಡಿಯವನನ್ನು ಕೇಳಿದರು. ಅವನು `ಯಾವ ಹಣ?~ ಎಂದು ನೇರವಾಗಿ ಪ್ರಶ್ನಿಸಿದ. `ಇಡೀ ಜಮೀನನ್ನು ಕೊಂಡಿದ್ದು ಆಗಿದೆ. ಬೇಕಾದರೆ ರಿಜಿಸ್ಟರ್ ಮಾಡಿಸಿದ ದಾಖಲೆಯ ಪ್ರತಿಯನ್ನು ಇನ್ನೊಮ್ಮೆ ನೋಡಿ~ ಎಂದ. ಆಗ ಆ ಯುವಕ, ಯುವತಿ ತಬ್ಬಿಬ್ಬಾದರು. ಒಪ್ಪಂದ ವೆಂದುಕೊಂಡು ತಪ್ಪು ತಿಳಿದುಕೊಂಡು ಅವರು ಇಡೀ ಜಮೀನನ್ನು ನೋಂದಾಯಿಸಿಕೊಟ್ಟಿದ್ದರು. ಆಸ್ತಿಯ ಮೋಹದಲ್ಲಿ ಒಪ್ಪಂದದಲ್ಲಿದ್ದ ಅಂಶಗಳನ್ನು ಓದಿಯೇ ಇರಲಿಲ್ಲ.

ಈ ಪ್ರಕರಣದ ಕುರಿತೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಯಿತು. ಸಂಬಂಧಿಯೊಬ್ಬರು ಡಿಸಿಪಿ ರವಿಕಾಂತೇಗೌಡರಲ್ಲಿ ಈ ಸಮಸ್ಯೆ ಪ್ರಸ್ತಾಪಿಸಿ, ಬಗೆಹರಿಸಿ ಕೊಡುವಂತೆ ವಿನಂತಿಸಿಕೊಂಡರು. ಮತ್ತೆ ನನಗೇ ಈ ಸಮಸ್ಯೆಗೆ ಪರಿಹಾರ ಹುಡುಕುವ ಕೆಲಸ ಬಂತು. ಜಮೀನನ್ನು ಕೊಂಡವನು ಬೆಂಗಳೂರಿನ ಸುಬ್ರಹ್ಮಣ್ಯ ನಗರದವನು. ಅವನು ಭೂಗತಲೋಕಕ್ಕೆ ಹತ್ತಿರದವನಾಗಿದ್ದ. ಮೀಟರ್ ಬಡ್ಡಿ ವ್ಯವಹಾರಸ್ಥ ನಾದ್ದರಿಂದ ಹೇಗೆಲ್ಲಾ ಮೋಸ ಮಾಡಬಹುದು ಎಂಬುದು ಅವನಿಗೆ ಕರಗತವಾಗಿತ್ತು.

ಅವನನ್ನು ಕರೆಸಿ ಮಾತಾಡಿದಾಗ, ಕಾನೂನು ಬದ್ಧವಾಗಿಯೇ ತರ್ಕ ಹೇಳಿದ. ಜಮೀನು ಅವನ ಹೆಸರಿಗೆ ನೋಂದಾವಣೆಯಾಗಿದ್ದರಿಂದ ಅವನಿಗೆ ಧೈರ್ಯ. ಮಾತಿಗೆ ಮುಂಚೆ ಅದನ್ನು ತೋರಿಸುತ್ತಿದ್ದ. ಅವನ ಕೆಲವು ದಂಧೆಗಳಲ್ಲಿ ಇದ್ದ ಹುಳುಕುಗಳು ನನಗೆ ಗೊತ್ತಿದ್ದವು. ಅವುಗಳ ಪ್ರಸ್ತಾಪ ಮಾಡಿದಾಗ ಸ್ವಲ್ಪ ತಣ್ಣಗಾದ. ಲಂಬಾಣಿ ಕುಟುಂಬದವರನ್ನೂ ಕರೆಸಿ, ಅವನೊಟ್ಟಿಗೆ ರಾಜಿ ಮಾಡಿಸಲು ಯತ್ನಿಸಿದೆ. ಆ ಕುಟುಂಬದವರು ಆಣೆ ಪ್ರಮಾಣ ಮಾಡಿದರು. ಬಹುಶಃ ಆ ಮೀಟರ್ ಬಡ್ಡಿ ವ್ಯವಹಾರಸ್ಥ ದೈವಭಕ್ತನಾಗಿದ್ದ. ಹಾಗಾಗಿ ಆಣೆ ಪ್ರಮಾಣಕ್ಕೆ ಅವನು ಹೆದರಿದ. ದೇವರನ್ನು ಮಧ್ಯೆ ತರುವುದು ಬೇಡವೆಂದೂ, ತಾನೇ ಏನಾದರೂ ಪರಿಹಾರ ನೀಡುವುದಾಗಿಯೂ ಅವನು ಮಾತು ಬದಲಿಸಿದ.

ಅವನು ಕೊಟ್ಟಿದ್ದ ಐದು ಲಕ್ಷವನ್ನು ವಾಪಸ್ ಮಾಡುವಂತೆ ಆ ಕುಟುಂಬದವರಿಗೆ ಹೇಳಿದೆ. ಅದನ್ನು ಪಡೆದು, ಅವನು ಮತ್ತೆ ಜಾರಿಕೊಳ್ಳುವ ಸಾಧ್ಯತೆ ಇತ್ತು. ಹಾಗಾಗಿ `ಆಗಿದ್ದ ರಿಜಿಸ್ಟ್ರೇಷನ್ ರದ್ದಾಗಬೇಕು~ ಎಂದು ಪಟ್ಟುಹಿಡಿದೆ. ಪೊಲೀಸರ ಬಗ್ಗೆ ಇದ್ದ ಭಯದ ಕಾರಣಕ್ಕೆ ಅವನು `ರಿಜಿಸ್ಟ್ರೇಷನ್ ಕ್ಯಾನ್ಸಲ್~ ಮಾಡಿದ. ದಲಿತ ಕುಟುಂಬವೊಂದು ದೊಡ್ಡ ಮೋಸಕ್ಕೆ ಬಲಿಯಾಗುವುದು ತಪ್ಪಿತು.

ಈ ಉದಾಹರಣೆಗಳಿಂದ ಜನ ಪಾಠ ಕಲಿಯಬೇಕು. ನಿವೇಶನ, ಜಮೀನು, ಸಾಲದ ವ್ಯವಹಾರದಲ್ಲಿ ಮೈಯೆಲ್ಲಾ ಕಣ್ಣಾಗಿರಬೇಕು. ಎಷ್ಟೋ ಸಲ `ಕಲರ್ ಜೆರಾಕ್ಸ್~ ಮಾಡಿಸಿದ ದಾಖಲೆಗಳನ್ನು ತೋರಿಸಿ ನಿವೇಶನ ಮಾರಾಟ ಮಾಡಿರುವವರೂ ಉಂಟು. ಒಂದೇ ಜಾಗವನ್ನು ಅನೇಕರಿಗೆ ಮಾರುವ ಇಂಥ ಅಡ್ಡದಾರಿಗಳು ಅನೇಕ. ಅವುಗಳ ಅರಿವು ಜಾಗ ಕೊಂಡುಕೊಳ್ಳಲು ಹೋಗುವ ಅಥವಾ ಮಾರಲು ನಿರ್ಧರಿಸುವ ಜನರಿಗೆ ಇರಬೇಕು.

ಆತುರದ ಬುದ್ಧಿ ಯಿಂದಲೋ, ಆಸ್ತಿಯ ಮೇಲಿನ ಅತಿಮೋಹ ದಿಂದಲೋ ದೊಡ್ಡ ಟೋಪಿ ಹಾಕಿಸಿಕೊಳ್ಳುವ ಸಾಧ್ಯತೆ ಇದೆ ಎಂಬುದು ಸದಾ ಮನಸ್ಸಿನಲ್ಲಿರಲಿ. ಸಿವಿಲ್ ಪ್ರಕರಣಗಳಲ್ಲಿ ಸಿಕ್ಕಿಕೊಂಡರೆ ಕಾನೂನಿನ ಚೌಕಟ್ಟಿನಲ್ಲಿ ಪೊಲೀಸರು ಏನೂ ಮಾಡುವ ಹಾಗಿಲ್ಲ. ವರ್ಷಗಟ್ಟಲೆ ಕೋರ್ಟು ಅಲೆಯಬೇಕಾಗುತ್ತದೆ. ಆಸ್ತಿಯನ್ನು ಮರಳಿ ಪಡೆಯುವಷ್ಟರಲ್ಲಿ ಉತ್ಸಾಹವೇ ಇಲ್ಲದಂತಾದ ಅನೇಕರು ನಮ್ಮ ನಡುವೆ ಇದ್ದಾರೆ. ಅಂಥವರಲ್ಲಿ ನೀವೂ ಒಬ್ಬರಾಗದಿರಿ.
ಮುಂದಿನ ವಾರ: ಪೊಲೀಸ್ ಇಲಾಖೆಯ ಶಸ್ತ್ರಾಸ್ತ್ರ ವಂಚಕರು!
ಶಿವರಾಂ ಅವರ ಮೊಬೈಲ್ ನಂಬರ್; 94483 13066

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT