ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಯಂಚಾಲಿತ ಫೋನ್ ಸಂದೇಶಗಳು

Last Updated 15 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಇತ್ತೀಚಿಗೆ ನಾನೊಂದು ವಿಚಿತ್ರವಾದ ಲೇಖನ ಓದಿದೆ. ಅದನ್ನು ಅಮೆರಿಕೆಯ ಕ್ಯಾಲಿಫೋರ್ನಿಯಾ ಪ್ರಾಂತ್ಯದ ಶಾಲೆಯೊಂದು ಪ್ರಕಟಿಸಿದ್ದು ಅದರ ಬಗ್ಗೆ ಬಹಳ ಮೆಚ್ಚುಗೆಯ ಹಾಗೂ ವಿರೋಧದ ಮಾತುಗಳು ಬಂದಿವೆ. ಶಾಲೆಯ ಪ್ರಕಾರ ಈಗ ಪಾಲಕರ ತಕರಾರುಗಳು ತುಂಬ ಹೆಚ್ಚಾಗುತ್ತಿವೆ. ಪ್ರತಿಯೊಂದಕ್ಕೂ ಅಧಿಕಾರದ ಮಾತನ್ನು ಹೇಳುತ್ತ, ಪ್ರತಿಯೊಂದರಲ್ಲೂ ತಮ್ಮ ಮಾತು ನಡೆಯಬೇಕು ಎಂಬ ಧೋರಣೆ­ಯಿಂದ ಶಾಲೆಯ ಕೆಲಸದಲ್ಲಿ ಅವರು ತಲೆ ಹಾಕುವುದು ಬಹಳವಾಗಿದೆ.

ಬೆಳಗಾದೊಡನೆ ಪ್ರಿನ್ಸಿಪಾಲರ ಮುಖ್ಯ ಕೆಲಸವೆಂದರೆ ಪಾಲಕರನ್ನು ಭೆಟ್ಟಿಯಾ­ಗು­ವುದು ಮತ್ತು ಅವರ ಇ-ಮೇಲ್‌ಗಳಿಗೆ ಉತ್ತರಿಸುವುದು. ತಮ್ಮ ಜವಾಬ್ದಾರಿಯನ್ನು ಅರಿತುಕೊಳ್ಳದೇ ಪಾಲಕರು ಪ್ರತಿಯೊಂದಕ್ಕೂ ಶಾಲೆ­ಯನ್ನು ಗುರಿ ಮಾಡುತ್ತಿದ್ದಾರೆ. ಹೀಗಾಗಿ ಶೈಕ್ಷಣಿಕ ಹಾಗೂ ಆಡಳಿತದ ಕೆಲಸಗಳನ್ನು ಮಾಡುವುದಕ್ಕೆ ಅವಕಾಶವೇ ಇಲ್ಲದಂತಾಗಿದೆ ಎಂಬುದು ಪ್ರಾಂಶುಪಾಲರ ಗೋಳು. ದಿನಕ್ಕೆ ನೂರು ಫೋನ್ ಕರೆಗಳು ಬರುತ್ತವೆ. ಉತ್ತರಿಸದಿದ್ದರೆ ಅಹಂಕಾರಿಗಳು ಎಂಬ ಪಟ್ಟಿ. ಉತ್ತರಿಸುತ್ತ ಕುಳಿತರೆ ಉಳಿದ ಯಾವ ಕೆಲಸಕ್ಕೂ ಸಮಯವಿಲ್ಲ. ಅದಕ್ಕಾಗಿ ಈ ತಮಾಷೆಯಂತೆ ತೋರುವ ಲೇಖನವನ್ನು ಬರೆದಿದ್ದಾರೆ. ಇದರ ಮೂಲಕ ಪಾಲಕರ ಜವಾ­ಬ್ದಾರಿ ತಿಳಿಸಲು ಯತ್ನಿಸಿದ್ದಾರೆ.

ಸಾಮಾನ್ಯವಾಗಿ ಯಾವುದೇ ದೊಡ್ಡ ಕಂಪನಿಗೆ ಅಥವಾ ಸರ್ಕಾರಿ ಇಲಾಖೆಗೆ ಫೋನ್ ಮಾಡಿದರೆ ಒಂದು ಕಂಪ್ಯೂಟರ್ ಅದನ್ನು ಸ್ವೀಕರಿಸಿ ನಿಮಗೆ ಯಾರು ಬೇಕೋ ಅವರ ವಿಶೇಷ ನಂಬರನ್ನು ಒತ್ತಿದ್ದರೆ ಅವರಿಗೆ ಜೋಡಿಸುತ್ತದೆ. ಉದಾಹರಣೆಗೆ ರೈಲ್ವೆಗೆ ಫೋನ್ ಮಾಡಿದರೆ ಅಲ್ಲಿಂದ ಮೊದಲೇ ಮುದ್ರಿತ ಧ್ವನಿ ಹೇಳುತ್ತದೆ  –ರಿಸರ್ವೇಷನ್ ವಿಷಯ ಬೇಕಾದರೆ ಒಂದನ್ನು ಒತ್ತಿ, ರಿಸರ್ವೇಷನ್ ರದ್ದು ಮಾಡಬೇಕಾದರೆ ಎರಡನ್ನು ಒತ್ತಿ, ರೈಲ್ವೆ ಸಂಚಾರದ ಟೈಂ ಟೇಬಲ್‌ಗಾಗಿ ಮೂರನ್ನು ಒತ್ತಿ. ನಿಮಗೆ ಬೇಕಾದ ನಂಬರ ಒತ್ತಿದರೆ ಆ ವಿಭಾಗಕ್ಕೆ ಮಾರ್ಗ ದೊರೆಯುತ್ತದೆ. ಇದೇ ರೀತಿ ಈ ಶಾಲೆಯವರೂ ಕಂಪ್ಯೂಟರ್ ನಿಯಮಿಸಿ­ದಂತೆ ಭಾವಿಸಿ ಲೇಖನ ಬರೆದಿದ್ದಾರೆ ಅದು ಹೀಗಿದೆ.

‘ಹಲೋ, ನೀವೀಗ ನಮ್ಮ ಶಾಲೆಯ ಸ್ವಯಂಚಾಲಿತ ಫೋನ್ ಸೇವೆಯನ್ನು ತಲುಪಿದ್ದೀರಿ. ನಿಮಗೆ ಸ್ವಾಗತ. ನಿಮಗೆ ಬೇಕಾದವರನ್ನು ತಲುಪಿಸಲು ನಮ್ಮ ಸೇವೆ ಸಿದ್ಧವಾಗಿದೆ. ದಯವಿಟ್ಟು ನಾವು ಹೇಳುವುದನ್ನೆಲ್ಲ ಪೂರ್ತಿ ಕೇಳಿಸಿಕೊಂಡು ನಿಮಗೆ ಯಾವ ಸೇವೆ ಬೇಕೋ ಆ ನಂಬರನ್ನು ಒತ್ತಿದರೆ ಸಾಕು. ನಿಮ್ಮ ಮಗು ಶಾಲೆಗೆ ಯಾವ ಕಾರಣಕ್ಕೆ ಬರಲಿಲ್ಲ ಎಂದು ಸುಳ್ಳು ಹೇಳುವುದಕ್ಕೆ  ಒಂದನ್ನು ಒತ್ತಿ.  - ನಿಮ್ಮ ಮಗು ಯಾವ ಕಾರಣಕ್ಕೆ ಶಾಲೆಯಲ್ಲಿ ಕೊಟ್ಟ ಹೋಂ ವರ್ಕ್‌ ಅಥವಾ ಮನೆಗೆಲಸ  ಮಾಡಿಲ್ಲ ಎಂಬ ನೆವ ಹೇಳುವುದಕ್ಕೆ  ಎರಡನ್ನು ಒತ್ತಿ.  ನಿಮ್ಮ ಶಾಲೆಯ ಬಗ್ಗೆ ದೂರು ಹೇಳುವುದಕ್ಕೆ  ಮೂರನ್ನು ಒತ್ತಿ. ನಮ್ಮ ಶಿಕ್ಷಕರನ್ನು ಬಯ್ಯುವ ವಿಚಾರವಿದ್ದರೆ - ನಾಲ್ಕನ್ನು ಒತ್ತಿ.

ಈಗಾಗಲೇ ನಮ್ಮ ಶಾಲೆಯ ಪತ್ರಿಕೆಯಲ್ಲಿ ತಿಳಿಸಿದ್ದ ಹಾಗೂ ನಿಮಗೆ ಪತ್ರ ಮುಖೇನ, ಇ–-ಮೇಲ್ ಮುಖೇನ ಕಳುಹಿಸಿದ ವಿಷಯಗಳನ್ನು ಓದಲಾ­ಗದೇ, ನಮಗೆ ಯಾಕೆ ವಿಷಯ ತಿಳಿಸಿಲ್ಲ ಎಂದು ದೂರುವುದಾದರೆ ಐದನ್ನು ಒತ್ತಿ.  ನಿಮ್ಮ ಮಗುವನ್ನು ಎಲ್ಲ ರೀತಿಯಲ್ಲಿ ನಾವೇ ಬೆಳೆಸಬೇಕೆಂಬ ಇಚ್ಛೆ ಇದ್ದರೆ  ಆರನ್ನು ಒತ್ತಿ. - ನಿಮಗೆ ವಿಪರೀತ ಕೋಪ ಬಂದಿದ್ದು ಯಾರನ್ನಾ­ದರೂ ಹೊಡೆಯ­ಬೇಕೆನ್ನಿಸಿದ್ದರೆ  ಏಳನ್ನು ಒತ್ತಿ. ಇದೇ ವರ್ಷದಲ್ಲಿ ನಿಮ್ಮ ಮಗುವಿಗೆ ಮೂರನೇ ಬಾರಿಗೆ ಶಿಕ್ಷಕರನ್ನು ಬದಲಾಯಿಸಬೇಕು ಎಂಬ ಕೋರಿಕೆ ಇದ್ದರೆ  ಎಂಟನ್ನು ಒತ್ತಿ.

ಶಾಲೆಯ ಬಸ್ ವ್ಯವಸ್ಥೆಯ ಬಗ್ಗೆ ತಕರಾರಿದ್ದರೆ ಒಂಬತ್ತನ್ನು ಒತ್ತಿ. - ಶಾಲೆಯಲ್ಲಿ ನೀಡುವ ಊಟದ ವ್ಯವಸ್ಥೆಯ ಬಗ್ಗೆ ದೂರು ನೀಡಲು - ಸೊನ್ನೆಯನ್ನು ಒತ್ತಿ.- ಇದೊಂದು ಕಥೆಯಲ್ಲ, ನಿಜವಾದ ಜೀವನದ ಪ್ರಶ್ನೆ. ಈ ಪ್ರಪಂಚದಲ್ಲಿ ನಿಮ್ಮ ಮಗು ಜವಾಬ್ದಾರಿಯಿಂದ ಬೆಳೆದು ತನ್ನ ನಡತೆ ತಿದ್ದಿಕೊಂಡು, ತನ್ನ ಕೆಲಸವನ್ನು ತಾನೇ ಮಾಡಿಕೊಳ್ಳುತ್ತ ನಡೆದುಕೊಳ್ಳ­ಬೇಕು, ಅವನ ಬೇಜವಾಬ್ದಾರಿಗೆ ಕುಮ್ಮಕ್ಕು ನೀಡದೆ ಅವನ ವೈಫಲ್ಯಗಳಿಗೆ ಸದಾ ಶಿಕ್ಷಕರನ್ನೇ ಗುರಿಮಾಡುವುದು ಸರಿಯಲ್ಲ ಎಂಬುದು ನಿಮ್ಮ ತಿಳುವಳಿಕೆ­ಯಾಗಿದ್ದರೆ ಫೋನ್‌ನ್ನು ತೂಗು ಹಾಕಿ ಚೆನ್ನಾಗಿ ನಿದ್ರೆ ಮಾಡಿ. ಮಗುವಿನ ಶೈಕ್ಷಣಿಕ ಜವಾಬ್ದಾರಿಯನ್ನು ನಮಗೆ ಬಿಡಿ, ಅವನ ನಡತೆಯ ವಿಚಾರವನ್ನು ಮನೆಯಲ್ಲಿ ಗಮನಿಸಿ. ನಿಮಗೆ ಶುಭವಾಗಲಿ. ಈ ಫೋನ್ ಸಂದೇಶಗಳು ನಮಗೂ ಪ್ರಯೋಜನಕಾರಿ­ಯಾಗ­ಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT